ಗುರುವಿಗೆ ತಿರುಮಂತ್ರ

ಸಿ.ಪಿ.ನಾಗರಾಜ

Kabaddi

ನಾನು ಪಿ.ಯು.ಸಿ., ತರಗತಿಯಲ್ಲಿ ಓದುತ್ತಿದ್ದಾಗ ಪಿಸಿಕ್ಸ್ ಲೆಕ್ಚರರ್ ಗೋವಿಂದಪ್ಪನವರು ಎಲ್ಲರ ಅಚ್ಚುಮೆಚ್ಚಿನ ಉಪನ್ಯಾಸಕರಾಗಿದ್ದರು . ವಿಜ್ನಾನದ ಸಂಗತಿಗಳನ್ನು ಮನಮುಟ್ಟುವಂತೆ ಸರಳವಾಗಿ ಹೇಳಿಕೊಡುತ್ತಿದ್ದ ಗೋವಿಂದಪ್ಪನವರು, ತಾವು ತೆಗೆದುಕೊಳ್ಳುತ್ತಿದ್ದ ಪ್ರತಿಯೊಂದು ತರಗತಿಯಲ್ಲಿಯೂ ನಾಲ್ಕಾರು ನಿಮಿಶಗಳ ಕಾಲ ವಿದ್ಯಾರ್‍ತಿಗಳ ಮಯ್-ಮನಗಳ ಬೆಳವಣಿಗೆಗೆ ನೆರವಾಗುವ ಒಳಿತಿನ ವಿಚಾರಗಳನ್ನು ತಿಳಿಸುತ್ತಿದ್ದರು . ಅವರ ಪಾಟವನ್ನು ಕೇಳಿ, ಅಯ್ವತ್ತು ವರುಶಗಳು ಕಳೆದಿದ್ದರೂ, ತರಗತಿಯಲ್ಲಿ ಅವರು ಆಡಿದ್ದ ಹಲವಾರು ನುಡಿಗಳು ಇನ್ನೂ ನನ್ನ ಮನದಲ್ಲಿ ನೆಲೆಸಿವೆ . ಅವರ ತರಗತಿಯಲ್ಲಿ ನಡೆದಿದ್ದ ಒಂದೆರಡು ಪ್ರಸಂಗಗಳು ಈಗಲೂ ಕಣ್ಣಿಗೆ ಕಟ್ಟಿದಂತಿವೆ.

ಒಂದು ದಿನ ತರಗತಿಯೊಂದರಲ್ಲಿ ನಮ್ಮೆಲ್ಲರನ್ನೂ ಕುರಿತು-

“ಈ ರೂಮಿನ ಕಸವನ್ನು ಕಾಲೇಜಿನಲ್ಲಿರುವ ಅಟೆಂಡರ್ ದಿನಕ್ಕೆ ಎಶ್ಟು ಸಾರಿ ಗುಡಿಸಿ ತೆಗೆಯುತ್ತಾನೆ” ಎಂದು ಪ್ರಶ್ನಿಸಿದರು.

“ದಿನಕ್ಕೆ ಒಂದು ಸಾರಿ ಸಾರ್” ಎಂದು ಹಲವರು ಕಿರುಚುತ್ತಾ ಉತ್ತರಿಸಿದಾಗ, ಮತ್ತೊಂದು ಪ್ರಶ್ನೆಯನ್ನು ಹಾಕಿದರು.

“ನಿಮ್ಮ ತಾಯಿ ದಿನಕ್ಕೆ ಎಶ್ಟು ಸಾರಿ ಮನೆಯೊಳಗಿನ ಕಸವನ್ನು ಗುಡಿಸಿ ತೆಗೆಯುತ್ತಾರೆ ?”

“ಎರಡು ಸತಿ ಸಾರ್‍…… ಮೂರು ಸತಿ ಸಾರ್…ನಾಲ್ಕು ಸತಿ ಸಾರ್” ಎಂದು ವಿದ್ಯಾರ್‍ತಿಗಳಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಉತ್ತರಿಸತೊಡಗಿದರು. ಒಂದೆರಡು ನಿಮಿಶಗಳ ಕಾಲ ಎಲ್ಲರ ಮಾತನ್ನು ತಾಳ್ಮೆಯಿಂದ ಆಲಿಸುತ್ತಿದ್ದು, ಅನಂತರ “ಸಾಕು ನಿಲ್ಲಿಸಿ” ಎಂದು ಹೇಳಿ, ಎಲ್ಲರ ಸದ್ದು ನಿಂತ ಮೇಲೆ –

“ನೋಡಿ, ಪ್ರತಿಯೊಬ್ಬ ತಾಯಿಯು ತನ್ನ ಮನೆಯ ಕಸವನ್ನು ನೀವೆಲ್ಲಾ ಹೇಳಿದ ಹಾಗೆ, ದಿನಕ್ಕೆ ಎರಡು ಸಾರಿ ….. ಮೂರು ಸಾರಿ ತೆಗೆಯುವುದರ ಜತೆಗೆ, ಕಸ ಬಿದ್ದಂತೆಲ್ಲಾ ಮನೆಯಲ್ಲಿರುವವರನ್ನು ಬಯ್ಕೊಂಡೋ …..ಆಡ್ಕೊಂಡೋ ಗುಡಿಸಿ ತೆಗಿತನೇ ಇರ್‍ತರೆ ….. ಅಲ್ವೇನ್ರಿ ? “ ಎಂದರು .

“ಅಹುದು ಸಾರ್” ಎಂದು ನಾವೆಲ್ಲಾ ಒಕ್ಕೊರಳಿನಿಂದ ಕೂಗಿದೆವು.

“ಮನೆಯಲ್ಲಿ ಆಗಾಗ್ಗೆ ಬೀಳುತ್ತಿರುವ ಕಸಕಡ್ಡಿಯನ್ನು/ದುಂಬುದೂಳನ್ನು ತಾಯಿಯು ಪದೇ ಪದೇ ತೆಗೆಯುತ್ತಾ ಮನೆಯನ್ನು ಅಚ್ಚುಕಟ್ಟಾಗಿ ಇಟ್ಟಿರುವಂತೆಯೇ, ನಮ್ಮ ಮನದೊಳಗೆ ಸದಾಕಾಲ ಬೀಳುತ್ತಲೇ ಇರುವ ಸೋಂಬೇರಿತನ, ಬೇಜವಾಬ್ದಾರಿತನ ಮುಂತಾದ ನಾನಾ ಬಗೆಯ ಕೆಟ್ಟಗುಣಗಳ ದೂಳನ್ನು, ನಾವು ಪ್ರತಿನಿತ್ಯ ಆಗಾಗ್ಗೆ ವಿವೇಕವೆಂಬ ನುಡಿಗಳ ಪೊರಕೆಯಿಂದ ಗುಡಿಸಿಕೊಂಡು ಶುಚಿ ಮಾಡಿಕೊಳ್ಳುತ್ತಾ ಇರಬೇಕು” ಎಂದು ತಿಳಿಯಾದ ಮಾತುಗಳ ಮೂಲಕ ಅರಿವನ್ನು ಮೂಡಿಸುತ್ತಿದ್ದರು.

ಗೋವಿಂದಪ್ಪನವರು ಪಾಟ ಮಾಡುವುದರಲ್ಲಿ…ವಿವೇಕವನ್ನು ಹೇಳುವುದರಲ್ಲಿ ಹೇಗೆ ನಿಪುಣರಾಗಿದ್ದರೋ, ಅಂತೆಯೇ ತಿಳಿಹಾಸ್ಯದ ನುಡಿಗಳಿಂದ ಮಕ್ಕಳ ಮನವನ್ನು ಮುದಗೊಳಿಸುವುದರಲ್ಲಿಯೂ ಎತ್ತಿದ ಕಯ್. ಹಳ್ಳಿಗಳಿಂದ ಕಾಲೇಜಿಗೆ ಆಗ ಬರುತ್ತಿದ್ದ ವಿದ್ಯಾರ್‍ತಿಗಳಲ್ಲಿ ಹೆಚ್ಚಿನ ಮಂದಿ ಇಸ್ತ್ರಿಯನ್ನೇ ಕಾಣದ ಬಟ್ಟೆಯನ್ನು ಉಟ್ಟು, ಕೆದರಿದ ತಲೆಯಲ್ಲಿ ಬರುತ್ತಿದ್ದರು. ಗೋವಿಂದಪ್ಪನವರು ಇದರ ಬಗ್ಗೆಯೂ ಗಮನ ಹರಿಸಿ ಒಮ್ಮೆ –

“ನೋಡ್ರಯ್ಯ …ಬಟ್ಟೆಗಳನ್ನ ಇಸ್ತ್ರಿ ಮಾಡಿ, ನೀಟಾಗಿ ಹಾಕೊಂಡು ಬನ್ನಿ. ತಲೆಗೆ ಕೊಬ್ಬರಿ ಎಣ್ಣೆಯನ್ನೋ ಇಲ್ಲವೇ ಹರಳೆಣ್ಣೆಯನ್ನೋ ಹಾಕಿಕೊಂಡು ಬನ್ನಿ. ಒಂದು ವೇಳೆ ಹಾಕಿಕೊಳ್ಳಲು ಉತ್ತಮವಾದ ಎಣ್ಣೆ ಸಿಗದೇದ್ರೆ…ಸೀಮೆಯೆಣ್ಣೆಯನ್ನಾದರೂ ಹಾಕಿಕೊಂಡು, ತಲೆ ಕೂದಲನ್ನ ಚೆನ್ನಾಗಿ ಬಾಚ್ಕೊಂಡು ಬನ್ನಿ” ಎಂದಾಗ ವಿದ್ಯಾರ್‍ತಿಗಳು ಜೋರಾಗಿ ನಕ್ಕಿದ್ದರು. ಹಲವು ಹುಡುಗರು ಕಾಲೇಜಿಗೆ ಬರಿಗಾಲಲ್ಲೇ ಬರುತ್ತಿರುವುದನ್ನು ಗಮನಿಸಿ ಮತ್ತೊಮ್ಮೆ –

“ಏನಾದರೂ ಮಾಡಿ ಸ್ವಲ್ಪ ದುಡ್ಡನ್ನು ಹೊಂದಿಸಿಕೊಂಡು, ಒಂದು ಜೊತೆ ಚಪ್ಪಲಿಯನ್ನು ಕಡ್ಡಾಯವಾಗಿ ಪ್ರತಿಯೊಬ್ಬರು ತೆಗೆದುಕೊಳ್ರಯ್ಯ. ಒಂದು ವೇಳೆ ತಕೊಳೂಕೆ ಆಗಲಿಲ್ಲ ಅಂದ್ರೆ ….. ಯಾರದಾದರೂ ಚಪ್ಪಲಿಗಳನ್ನು ಕದ್ದಾದರೂ ಹಾಕೊಂಡು ಬನ್ರಯ್ಯ” ಎಂದಾಗ ಹುಡುಗರ ಕೇಕೆ … ತರಗತಿಯ ಮಾಳಿಗೆಯನ್ನೇ ಹಾರಿಸುವಂತಿತ್ತು.

ಒಂದು ದಿನ ತರಗತಿಗೆ ಬಂದ ಗೋವಿಂದಪ್ಪನವರು ಏಕೋ ಏನೋ ಎಂದಿನಂತೆ ಉತ್ಸಾಹದಿಂದಿರಲಿಲ್ಲ. ಅವರು ಹಾಜರಾತಿಯನ್ನು ಮಂದಗತಿಯಲ್ಲಿ ಹಾಕತೊಡಗುತ್ತಿದ್ದಂತೆಯೇ, ನನಗೆ ನೆನ್ನೆ ನಡೆದಿದ್ದ ಕಬಡಿ ಪಂದ್ಯ ನೆನಪಿಗೆ ಬಂತು. ನಮ್ಮ ಕಾಲೇಜಿನ ಉಪನ್ಯಾಸಕರು ಮತ್ತು ಕಚೇರಿಯ ಸಿಬ್ಬಂದಿ ವರ್‍ಗದವರು, ತಮ್ಮ ತಮ್ಮಲ್ಲೇ ಎರಡು ಪಂಗಡಗಳನ್ನು ಮಾಡಿಕೊಂಡು, ಕಬಡಿ ಪಂದ್ಯವೊಂದನ್ನು ಆಡಿದ್ದರು. ಕಾಲೇಜಿನ ಒಳ ಆವರಣದಲ್ಲಿ ನಡೆದ ಈ ಸ್ನೇಹಪರ ಪಂದ್ಯಕ್ಕೆ ಕಾಲೇಜಿನ ವಿದ್ಯಾರ್‍ತಿಗಳಾದ ನಾವೆಲ್ಲಾ ನೋಡುಗರಾಗಿದ್ದೆವು. ಪಂದ್ಯದಲ್ಲಿ ಗೋವಿಂದಪ್ಪನವರು ತುಂಬಾ ಚೆನ್ನಾಗಿ ಆಟವಾಡಿ, ಅನೇಕರನ್ನು ಕ್ಯಾಚ್ ಹಿಡಿದುದ್ದಲ್ಲದೇ, ರಯ್ಡಿಂಗ್ ನಲ್ಲಿಯೂ ಹಲವರನ್ನು ಅವುಟ್ ಮಾಡಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಇಂತಹ ಆಟದಿಂದ ಉಂಟಾದ ಆಯಾಸದಿಂದಾಗಿ ಮೇಸ್ಟ್ರು ಮಂಕಾಗಿರಬೇಕೆಂದು ಊಹಿಸಿಕೊಂಡೆನು. ಹಾಜರಾತಿಯನ್ನು ಹಾಕಿ ಮುಗಿಸಿದ ನಂತರ, ತುಸು ಗಡಸು ದನಿಯಲ್ಲಿ –

“ನೆನ್ನೆ ನಡೆದ ಕಬಡಿ ಮ್ಯಾಚಿಗೆ ನೀವೆಲ್ಲಾ ಬಂದಿದ್ರೇನಯ್ಯ” ಎಂದು ಕೇಳಿದರು. “ಬಂದಿದ್ದೋ ಸಾರ್” ಎಂದು ಹುಡುಗರೆಲ್ಲರೂ ಉತ್ತರಿಸುತ್ತಿದ್ದಂತೆಯೇ, ಮುಂದಿನ ಬೆಂಚಿನಲ್ಲಿ ಕುಳಿತಿದ್ದ ಒಬ್ಬ ಹುಡುಗನು

“ನೀವು ತುಂಬಾ ಚೆನ್ನಾಗಿ ಆಡುದ್ರಿ ಸಾರ್” ಎಂದು ಎಲ್ಲರ ಪರವಾಗಿ ಮೆಚ್ಚುಗೆಯನ್ನು ಸೂಚಿಸಿದ. ಇಂತಹ ಹೊಗಳಿಕೆಯಿಂದಲೂ ಕಿಂಚಿತ್ತಾದರೂ ಉಲ್ಲಾಸಗೊಳ್ಳದ ಗೋವಿಂದಪ್ಪನವರು ನಮ್ಮೆಲ್ಲರನ್ನೂ ಒಮ್ಮೆ ನೋಡಿ, ಗಂಬೀರವಾದ ದನಿಯಲ್ಲಿ –

“ನೋಡ್ರಯ್ಯ … ನೆನ್ನೆ ಕಬಡಿ ಕೋರ್‍ಟಿನ ಬವುಂಡರಿ ಗೆರೆಯ ಬಳಿ ಬಿಟ್ಟಿದ್ದ ನನ್ನ ಹೊಸ ಚಪ್ಪಲಿಗಳನ್ನು ಯಾರೋ ಮೆಟ್ಟಿಕೊಂಡು ಹೋಗಿದ್ದಾರೆ. ಅಲ್ಲಿ ಇದ್ದೋರೆಲ್ಲಾ ನಾವು ನಾವೇ ಅಲ್ವೇನ್ರಯ್ಯ” ಎಂದು ನುಡಿದರು.

ಚಪ್ಪಲಿ ಕಳವಿನ ಸುದ್ದಿಯನ್ನು ಮೇಸ್ಟರ ಬಾಯಿಂದಲೇ ಕೇಳಿ, ತರಗತಿಯು ಒಂದು ಗಳಿಗೆ ತೆಪ್ಪಗಾಯಿತು. ಒಂದೆರಡು ಗಳಿಗೆಯ ನಂತರ, ಹಿಂದಿನ ಬೆಂಚಿನಲ್ಲಿ ಕುಳಿತಿದ್ದ ಒಬ್ಬ ಹುಡುಗ-

“ನೀವೇ ಹೇಳ್ತ ಇದ್ರಲ್ಲ ಸಾರ್. ಚಪ್ಪಲಿ ತಕೊಳೂಕೆ ಆಗ್ದೇ ಇದ್ದೋರು, ಯಾರದನ್ನಾದರೂ ಕದ್ದಾದರೂ ಹಾಕೊಂಡು ಕಾಲೇಜಿಗೆ ಬನ್ನಿ ಅಂತ …ಚಪ್ಪಲಿಯಿಲ್ಲದ ಯಾರೋ ಒಬ್ಬ ಹುಡುಗ …ನಿಮ್ಮ ಮಾತನ್ನು ಪಾಲಿಸಿರಬೇಕು ಅಂತ ಕಾಣುತ್ತೆ ಸಾರ್” ಎಂದಾಗ, ಇಡೀ ತರಗತಿ ‘ಗೊಳ್‘ಎಂದು ನಕ್ಕಿತು. ಆದರೆ ಗೋವಿಂದಪ್ಪನವರು ನಗಲಿಲ್ಲ.

(ಚಿತ್ರ: agashecollege.org )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: