ಕೇಳೀರ್ ಕೇಳ್ರಣ್ಣ ಕೇಳ್ರವ್ವೋ

ಶ್ರೀನಿವಾಸಮೂರ‍್ತಿ.ಬಿ.ಜಿ.

ಕೇಳೀರ್ ಕೇಳ್ರಣ್ಣ ಕೇಳ್ರವ್ವೋ
ಕೇಳೀರ್ ಕೇಳ್ರವ್ವ ಕೇಳ್ರಣ್ಣೋ
ಇರೋದನ್ ಹೇಳ್ತೀನ್ರೋ
ತಪ್ ಇದ್ರೆ ತಿದ್ ನಡ್ಸ್ರೋ |ಪ|

ಅನ್ಯಾಯವ ಮಾಡೋವ್ರತ್ರ ನ್ಯಾಯವ ಕೇಳಂಗಾಯ್ತು
ಗಾಳಿ ನೀರ್ ಬೆಳ್ಕೀಗು ಕಾಸ್ ಬಂತು |1|

ನಾಲ್ಕು ವರ‍್ಣಾಶ್ರಮ್ನ ಸಾಯ್ಸಿ ನಾಲ್ಕು ಕೆಲ್ಸುದ್ ಗುಂಪನ್ ಹುಟ್ಸುದ್ರು
ಅವ್ವವೇ ಕೆಲ್ಸ ತುಸು ಬ್ಯಾರೆ ಮಾಡಿ ಬ್ಯಾರೆ ಹೆಸ್ರುನ್ ಇಟ್ರು |2|

ವಿದ್ಯೆ ಅಕ್ಸರದಿಂದ್ ಬರುತ್ ಎಂದ್ರು
ನಮ್ ನೆಲ ಅಕ್ಸರದಿಂದ್ ದುಡ್ಡನ್ ಕೀಳೋ ಬೀಡಾಯ್ತು |3|

ಅವ್ರು ಇವ್ರುನ್ ಕೊಲ್ತಾರೆ
ಇವ್ರು ಅವ್ರುನ್ ಕೊಲ್ತಾರೆ
ಅವ್ರು ಅವ್ರನ್ನೇ ಕೊಲ್ತಾರೆ
ಇವ್ರು ಇವ್ರನ್ನೇ ಕೊಲ್ತಾರೆ
ಹುಟ್ಸೋದು ಸಾಯ್ಸೋದು ಇಲ್ಲಿ ಕಸುಬ್ ಆಗಯ್ತೆ |4|

ಜಾತಿ ದರ‍್ಮಕೂ ಕತ್ತಿ
ನುಡಿ ಗುಡಿಗೂ ಕತ್ತಿ
ಮರ ಕಡಿಲಾಕೂ ಕತ್ತಿ
ನಾಡು ನಾಡಿಯನ್ ಬ್ಯಾರೆ ಮಾಡೋಕು ಕತ್ತಿ |5|

ಬೆಳ್ಕಿಂದ್ ಕೊಳ್ಕು ಕಾಣ್ಸ್ತಾವೋ
ಕೊಳ್ಕಿಂದ್ ಕತ್ಲು ಕಾಣ್ಸ್ತಾವೋ
ಗೊತ್ತು ಗೊತ್ತಿದ್ರು ಕತ್ಲಿಗ್ ಬೀಳ್ತಾವ್ರೋ |6|

ಕಾಡು ನಾಡಿಗೆ ಪಿರಾಣ ಅಂತಾವ್ರೋ
ಪಿರಾಣವನ್ನೆ ಬರ‍್ಬಾತ್ ಮಾಡ್ತಾವ್ರೋ
ಉಸ್ರಿಗೂ ಊಸೇ ಮಾಡೋವ್ರೋ |7|

ಬಡ್ತನ ಗಿಡ್ತನ ಏನೂ ಇರಂಗಿಲ್ಲ್ ಅಂತಾರೋ
ಗೆಲ್ಸೀ ಗೆಲ್ಸಿ ಅಂತ್ ಬೇಡ್ತಾರೋ
ಯುವ್ವೇ! ಗೆದ್ ಮ್ಯಾಗೆ ಗಿಡುಗನಿಗಿಂತ್ ಅತ್ಲತ್ತಾನೋ |8|

ತಬ್ಬು ತಬ್ಬಿಗೂ ಚಿನ್ನಾ ರನ್ನಾ ಎಂದ್ ಗುನುಗುತಾರೋ
ಮೋಜಿನ ಹಣ್ಣು ಬಿಡೋ ಹೊತ್ನಾಗೆ
ಇವ್ನ್/ ಇವ್ಳ್ದೆ ತಪ್ಪೆಂದು ತಿಪ್ಪೆ ಬಳಿತಾರೋ
ಜಗಳ್ ಬಯ್ಗುಳ್ ಆಗ್ತಯ್ತ್ರೋ /
ಒಪ್ಪುದ್ರೆ ನಂಟಿನ್ ಗಂಟ್ ಕುದುರ‍್ತಯ್ತ್ರೋ /
ಇಲ್ವೆ ದುಡ್ಡಿನ್ ಗಂಟ್ ಬಿಚ್ಬೇಕ್ರೋ
ಇಲ್ಲಿ ಮೂಲ್ಮೂಲೆಗೂ ಮಾಮೂಲ್ ಆಗಯ್ತ್ರೋ |9|

ಸಮಾನತೆ ತರೋಣ್ ಬಂದ್ರೋ ಅವರ‍್ನ್ ನಂಬ್ ಬ್ಯಾಡ್ರೋ
ಯೇ ಸಮಾನತೆ ಕನ್ಸಿನ್ ಮಾತೋ ಅವರ‍್ನ್ ನಂಬ್ ಬ್ಯಾಡ್ರೋ
ಅಂತ್ ಕೂಗ್ ಕೂಗಿ ತಲೆ ಕೆಡ್ಸ್ತಾವ್ರೋ |10|

ನಿನ್ ಪಾಡ್ ನಿನ್ಗೆ
ನನ್ ಪಾಡ್ ನನ್ಗೆ
ಅಂತ್ ಗಂಡ್ಹೆಂಡೀರ್ ಕೂಸ್ನ ಬಿಕಾರಿ ಮಾಡ್ತಾವ್ರೋ |11|

ಯಾರ‍್ನ್ ನಂಬ್ ಯಾರ್ ತೆಕ್ಕೆಗ್ ಬೀಳ್ತಾವ್ರೋ
ಒಂದೂ ತಿಳಿದಂಗ್ ಆಗಯ್ತ್ರೋ
ಇವರದ್ ಮೋಸ್ದ್ ಮೋರೆ ನೋಡ್ರೋ |12|

ಇರೋದನ್ ಹಾಂಗೆ ಹೇಳೀನ್ರೋ
ತಪ್ ಇದ್ರೆ ತಿದ್ ನಡ್ಸ್ರೋ
ಅಯ್ಯಾ ಅಕ್ಕಾ
ತಪ್ ಇದ್ರೆ ತಿದ್ ನಡ್ಸ್ರೋ
ಕಲಿ ಯುಗ್ದಾಗೆ ಕಲಿಲೇಬೇಕ್ರೋ
ಇನ್ನೂ ಅದಾವ್ ಕಾಣ್ರೋ
ಕಂಡಾಗ್ ಹಾಂಗೆ ತಿಳ್ಸ್ತೀನ್ರೋ
ತಪ್ ಇದ್ರೆ ತಿದ್ ನಡ್ಸ್ರೋ |13|

(ಚಿತ್ರ: kannadajaanapada.blogspot.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: