ಶಂಕರ ಬಟ್ಟರ ವಿಚಾರಗಳು: ಕನ್ನಡ ಮತ್ತು ಕನ್ನಡಿಗರ ಏಳಿಗೆಗೆ ಮದ್ದು

– ರತೀಶ ರತ್ನಾಕರ.

Image converted using ifftoany

ಕನ್ನಡ ಮತ್ತು ಕನ್ನಡದ ಸೊಲ್ಲರಿಮೆಯ ನನ್ನ ಕಲಿಕೆ ನಡೆದದ್ದು ಪಿ. ಯು. ಸಿ ವರೆಗೆ ಮಾತ್ರ. ವರುಶಗಳುರುಳಿದವು, ಓದನ್ನು ಮುಗಿಸಿ, ಕೆಲಸಕ್ಕೆ ಹೋಗುವುದಕ್ಕೆ ಆರಂಬವಾಯಿತು. ಕನ್ನಡದ ಕಾದಂಬರಿಗಳನ್ನು ಓದುವುದು ಹವ್ಯಾಸವಾಗಿತ್ತು. ನೆನಪಾದಾಗಲೆಲ್ಲ ಸಣ್ಣ ಸಣ್ಣ ಕಟ್ಟೊರೆಗಳನ್ನು ಗೀಚಿ ಅದನ್ನು ಅಲ್ಲಿಯೇ ಬಿಡುವುದು ರೂಡಿಯಾಗಿತ್ತು. ಕನ್ನಡದ ನುಡಿಯ ಒಳಗುಟ್ಟು ಮತ್ತು ಸೊಲ್ಲರಿಮೆಯ ಹೆಚ್ಚಿನ ಕಲಿಕೆಗೆ ಅಶ್ಟೇನು ಗಮನಹರಿಸಿರಲಿಲ್ಲ, ಏಕೆಂದರೆ ನನ್ನ ಕಯ್ಗೆ ಸಿಗುತ್ತಿದ್ದ ಕನ್ನಡದ ಸೊಲ್ಲರಿಮೆಯ ಹೊತ್ತಗೆಗಳನ್ನು ಓದಿ ತಿಳಿದು ಕೊಳ್ಳುವಶ್ಟು ಸಂಸ್ಕ್ರುತ ನನಗೆ ಬರುತ್ತಿರಲಿಲ್ಲ!

ನನ್ನ ಪುಣ್ಯವೋ ಎನ್ನುವಂತೆ, ದಿನಗಳದಂತೆ ಕನ್ನಡ ನುಡಿಯ ಕುರಿತು ಚಿಂತನೆ ನಡೆಸುವವರ ಗೆಳೆತನ ಬೆಳೆಯಿತು. ಆಗ ಕನ್ನಡ ನುಡಿಯ ಕುರಿತು ಮತ್ತಶ್ಟು ಓದನ್ನು ನಡೆಸಬೇಕೆಂಬ ಬಯಕೆ ಹುಟ್ಟಿತು. ಆದರೆ ದಾರಿ ಯಾವುದು ಎಂದು ಗೊತ್ತಿರಲಿಲ್ಲ. ಆಗ ಪರಿಚಯವಾಗಿದ್ದೇ ಡಾ|| ಡಿ. ಎನ್. ಶಂಕರ ಬಟ್ಟರ ಹೊತ್ತಗೆಗಳು. ಕನ್ನಡದಿಂದ ಮಹಾಪ್ರಾಣಗಳನ್ನು ಕಯ್ ಬಿಡಬೇಕು ಎಂದು ಮೊದಲಬಾರಿ ಓದಿದಾಗ ಬೆರಗಾಗಿದ್ದೆ. ಆದರೆ ಶಂಕರ ಬಟ್ಟರು ತಿಳಿಸುವಂತೆ, ಮಹಾಪ್ರಾಣಗಳನ್ನು ಇರಿಸಿ ಬರೆಯುವ ಪದಗಳನ್ನು, ಮಾತಿನ ನಡುವೆ ಬಳಸುವಾಗ ನಾವು ಮಹಾಪ್ರಾಣಗಳನ್ನು ಉಲಿಯದೇ ಇರುವುದನ್ನು ಗಮನಿಸಿದೆ. ಒಂದೊಂದಾಗಿ ಶಂಕರ ಬಟ್ಟರು ತಿಳಿಸಿಕೊಟ್ಟ ನುಡಿಯರಿಮೆಯ ವಿಚಾರಗಳು ಕಣ್ಣೆದುರು ದಿಟವಾಗಿ ಕಾಣತೊಡಗಿತು.

ಚಿಕ್ಕಂದಿನ ಕಲಿಕೆಯಲ್ಲಿ, ಪತ್ರಿಕೆ, ಕಾದಂಬರಿಗಳ ಮತ್ತು ಯಾವುದೇ ಕನ್ನಡ ಬರವಣಿಗೆಯಲ್ಲಿ ಮಹಾಪ್ರಾಣಗಳ ಬಳಕೆಯನ್ನು ನೋಡಿ ನೋಡಿ, ಮಹಾಪ್ರಾಣಗಳು ಕನ್ನಡಕ್ಕೆ ಬೇಕೆ ಬೇಕು ಎಂಬ ನಂಬಿಕೆ ಬಲವಾಗಿ ಬೇರೂರಿತ್ತದೆ. ಹಾಗಾಗಿ, ಮೊದಲ ಬಾರಿ ಶಂಕರ ಬಟ್ಟರ ವಿಚಾರಗಳನ್ನು ಓದುವಾಗ ಆ ನಂಬಿಕೆಗಳಿಗೆ ಪೆಟ್ಟು ಬಿದ್ದಹಾಗೆ ಆಗುತ್ತದೆ. ಆದರೆ ಆ ವಿಚಾರಗಳು ದಿಟವಾಗಿವೆ. ಈ ನಿಟ್ಟಿನಲ್ಲಿ ಒಮ್ಮೆ ಮಿಂಬಲೆಯಲ್ಲಿ ಓದಿದ ಕತೆಯೊಂದನ್ನು ತಿಳಿಸ ಬಯಸುತ್ತೇನೆ.

ಸುಮಾರು ನೂರೇಡುಗಳ ಹಿಂದೆ ನೆಲವು ಚಪ್ಪಟೆಯಾಗಿದೆ ಎಂದು ಆಗಿನ ಚರ್‍ಚುಗಳು ನಂಬಿದ್ದವು ಮತ್ತು ಆ ನಂಬಿಕೆಯನ್ನು ಮಂದಿಯ ಮನಸ್ಸಿನಲ್ಲಿ ಕೂಡ ಗಟ್ಟಿಗೊಳಿಸಲಾಗಿತ್ತು. ನೆಲವು ಚಪ್ಪಟೆಯಾಗಿದೆ ಎಂಬುದು ದೇವರು ಹೇಳಿರುವ ಮಾತಾಗಿದೆ ಎಂಬ ಅನಿಸಿಕೆ ಕೊಡ ಇತ್ತು. ಆ ಹೊತ್ತಿನಲ್ಲಿ, ಕೆಲವು ಅರಿಗರು ಹಗಲಿರುಳು ದುಡಿದು ನೆಲವು ಚಪ್ಪಟೆಯಾಗಿಲ್ಲ ಬದಲಾಗಿ ಇದು ಗುಂಡಾಗಿದೆ ಎಂದು ಕಂಡುಕೊಂಡರು. ಇದನ್ನು ತಮ್ಮ ಅರಿಮೆಯ ಆದಾರದ ಮೇಲೆ ಮಂದಿಗೆ ತಿಳಿಸುವ ಪ್ರಯತ್ನ ಮಾಡಿದರು. ಆದರೆ ನಡೆದದ್ದೇ ಬೇರೆ. ಚರ್‍ಚು ಮತ್ತು ಮಂದಿ ಇವರಿಗೆ ತಿರುಗಿ ಬಿದ್ದರು. ‘ದೇವರ ಮಾತನ್ನೇ ಸುಳ್ಳು ಎನ್ನುತ್ತಿದ್ದಾರೆ, ಚರ್‍ಚಿನ ಮತ್ತು ಮಂದಿಯ ನಂಬಿಕೆಗೆ ಎದುರಾಗಿ ಹೋಗುತ್ತಿದ್ದಾರೆ, ಇವರು ದರ್‍ಮವಿರೋದಿಗಳು’ ಎಂದು ಮಂದಿಯು ಅರಿಗರನ್ನು ಜರಿದರು. ಆ ಅರಿಗರನ್ನು ಕಂಬಕ್ಕೆ ಕಟ್ಟಿ, ಕಲ್ಲಿಂದ ಹೊಡೆದು, ಸುತ್ತಲೂ ಬೆಂಕಿಹಾಕಿ ಸುಟ್ಟು ಕೊಂದರು. ಕತೆ ಇಲ್ಲಿಗೆ ಮುಗಿಯಿತು. ಆದರೆ ವರುಶಗಳು ಕಳೆದಂತೆ ನೆಲವು ಗುಂಡಾಗಿದೆ ಎಂದು ಮತ್ತಶ್ಟು ಅರಕೆಗಳು ಗಟ್ಟಿಗೊಳಿಸಿದವು ಮತ್ತು ಅದು ನಮಗಿಂದು ತಿಳಿದಿರುವ ದಿಟವಾಗಿದೆ.

ಹೀಗೆ, ಶಂಕರ ಬಟ್ಟರ ವಿಚಾರಗಳು ನೆಲವು ಚಪ್ಪಟೆಯಾಗಿದೆ ಎಂದು ನಂಬಿರುವ ಮಂದಿಯ ಎದುರು ನೆಲವು ಗುಂಡಾಗಿದೆ ಎಂದು ಅರಿಮೆಯ ತಳಹದಿಯ ಮೂಲಕ ತಿಳಿಸಿದಂತಿದೆ. ಒಂದು ಪುಣ್ಯವೆಂದರೆ, ಅವರ ವಿಚಾರಗಳನ್ನು ಸಾರಸಗಟಾಗಿ ತಳ್ಳಿಹಾಕುವ ಬದಲು ಅದನ್ನು ತಿಳಿದುಕೊಂಡು, ಬಳಕೆ ಮಾಡುವತ್ತ ಮಂದಿಯು ಕೆಲಸ ಮಾಡುತ್ತಿದ್ದಾರೆ. ಶಂಕರ ಬಟ್ಟರು ಹಲವಾರು ವರುಶಗಳಶ್ಟು ಅರಕೆಯನ್ನು ನಡೆಸಿ ಕಂತೆ ಕಂತೆ ಆದಾರವನ್ನು ಒಟ್ಟು ಮಾಡಿದ್ದಾರೆ. ಇವರ ವಿಚಾರಗಳನ್ನು ತಿಳಿಯಲು ಇವರ ಹೊತ್ತಗೆಗಳನ್ನು ಓದಲು ಆರಂಬಿಸಿದಾಗ, ಓದಿದ ಮೊದಲ ಹೊತ್ತಗೆಯಲ್ಲೇ ಹಲವಾರು ವಿಚಾರಗಳು ಒಪ್ಪಿಗೆಯಾಗುತ್ತಾ ಹೋದವು. ಮಹಾಪ್ರಾಣಗಳು ಕನ್ನಡಕ್ಕಿರುವ ಕಗ್ಗಂಟು ಎಂಬುದು ಅಂಗಯ್ ಹುಣ್ಣಿನಶ್ಟು ತಿಳಿಯಾಗಿ ಕಣ್ಣಿಗೆ ಕಂಡಿತು. ಕಾಗಕ್ಕ ಗುಬ್ಬಕ್ಕನ ಕತೆಯನ್ನು ಹೇಳದೇ, ಯಾವುದೇ ವಿಚಾರವನ್ನು ಅರಿಮೆಯ ಆದಾರದ ಮೇಲೆ ತಿಳಿಸುವ ಇವರ ಪರಿ ನನಗೆ ಹಿಡಿಸಿತು.

ಕನ್ನಡ ಮಾದ್ಯಮದಲ್ಲಿ ಓದಿದ ನನಗೆ ಸಂಸ್ಕ್ರುತದ ಅರಿಮೆಯ ಪದಗಳಾದ ನಿಮ್ನ ಮಸೂರ, ಪೀನ ಮಸೂರ, ವ್ರುತ್ಕ್ರಮ, ಸಂಕಲನ, ವ್ಯವಕಲನ, ಪತ್ರಹರಿತ್ತು ಹೀಗೆ ಹಲವಾರು ತಿಳಿಯದ ಪದಗಳನ್ನು ಬಾಯಿಪಾಟ ಮಾಡಿದ್ದು ನೆನಪಿದೆ. ಶಂಕರ ಬಟ್ಟರು ತಿಳಿಸುವಂತೆ ಕನ್ನಡದ್ದೇ ಪದಗಳನ್ನು ಬಳಸಿ ಇವೇ ಅರಿಮೆ ಪದಗಳನ್ನು ಉಬ್ಬುಗಾಜು, ತಗ್ಗುಗಾಜು, ತಲೆಕೆಳಗು, ಕೂಡುವುದು, ಕಳೆಯುವುದು ಮತ್ತು ಎಲೆಹಸಿರು ಎಂದು ಹೇಳಿಕೊಟ್ಟಿದ್ದರೆ ನಮ್ಮ ತಲೆಗೂ ಹೋಗುತ್ತಿತ್ತು ಮತ್ತು ಅರಿಮೆಯ ಕಲಿಕೆಯಮೇಲೆ ಮತ್ತಶ್ಟು ಆಸಕ್ತಿ ಹುಟ್ಟುತ್ತಿತ್ತು. ಈಗ ಕನ್ನಡ ಮಾದ್ಯಮದಲ್ಲಿರುವ ಅರಿಮೆಯ ಕಲಿಕೆಯು ಕಬ್ಬಿಣದ ಕಡಲೆಯಂತಿದೆ, ಇದನ್ನು ಸುಲಿದ ಬಾಳೆಹಣ್ಣಿನಶ್ಟು ಸುಲಬವಾಗಿಸುವುದು ಶಂಕರ ಬಟ್ಟರ ವಿಚಾರಗಳಿಂದ ಸಾದ್ಯ ಎಂಬುದೇ ನನಗೆ ಹಿಡಿಸಿದ ಮತ್ತೊಂದು ವಿಚಾರ. ಇದಲ್ಲದೇ, ಕನ್ನಡದ ಸೊಲ್ಲರಿಮೆಯ ಕುರಿತು ಇವರು ಬರೆದ ಹೊತ್ತಗೆಗಳನ್ನು ಓದಿದರೆ ಸುಮಾರು ಅಯ್ದು ವರುಶಗಳ ಕಾಲ ಕಲೆಕೆವೀಡಿನಲ್ಲಿ ಕನ್ನಡ ಕಲಿತರೂ ಕನ್ನಡದ ವ್ಯಾಕರಣ ಸರಿಯಾಗಿ ಏಕೆ ಕಲಿಯಲಾಗಲಿಲ್ಲ ಎಂಬ ಕೇಳ್ವಿಗೆ ಮರುನುಡಿ ಸಿಗುತ್ತದೆ! ಹೀಗಾಗಿ ಇವರ ಅರಕೆಗಳ ಕುರಿತು ಮತ್ತಶ್ಟು ತಿಳಿಯಬೇಕು ಎನಿಸುತ್ತದೆ.

ಕೇವಲ ಕನ್ನಡ ನುಡಿಯ ಸೊಲ್ಲರಿಮೆ ಮತ್ತು ಒಳಗುಟ್ಟನ್ನು ಅರಿಯುವ ಮಟ್ಟಿಗೆ ಶಂಕರ ಬಟ್ಟರ ಹೊತ್ತಗೆ ಮತ್ತು ವಿಚಾರಗಳಿದ್ದರೆ ನನಗೆ ಇಶ್ಟು ಇಶ್ಟ ಆಗುತ್ತಿರಲಿಲ್ಲವೇನೋ. ಅವರ ವಿಚಾರಗಳು ಕನ್ನಡ ಮತ್ತು ಕನ್ನಡಿಗನ ಏಳಿಗೆಗೆ ಪೂರಕವಾಗಿವೆ. ಈಗಿನ ಕಾಲದಲ್ಲಿ, ನಮ್ಮ ಏಳಿಗೆಗೆ ಕಲಿಕೆಯು ತೀರಾ ಅನಿವಾರ್‍ಯವಾದದ್ದು, ಇದಕ್ಕಾಗಿ ಮಕ್ಕಳ ಕಲಿಕೆಯನ್ನು ಪರಿಣಾಮಕಾರಿಯಾಗಿ ಹೇಗೆ ನಡೆಸಬೇಕು ಎಂಬುದರ ಕುರಿತೂ ಇವರು ಬೆಳಕು ಚೆಲ್ಲುತ್ತಾರೆ. ಕೂಡಣದ ಏರ್‍ಪಾಡಿನಲ್ಲಿ ಕನ್ನಡಿಗನಿಗೆ ಕನ್ನಡ ನುಡಿಯ ಮೇಲಿರುವ ಕೀಳರಿಮೆಯನ್ನು ಹೊರಹಾಕಿ ಎಲ್ಲರಂತೆ ತಾನು ಮುಂದುವರಿಯಲು ಬೇಕಾಗಿರುವ ವಿಚಾರಗಳನ್ನು ಹರಿಯಬಿಟ್ಟಿದ್ದಾರೆ. ಸಂಸ್ಕ್ರುತದ ಹಂಗಿನಲ್ಲಿ ಕನ್ನಡವಿಲ್ಲ ಎಂಬ ದಿಟವನ್ನು ಮತ್ತಶ್ಟು ಗಟ್ಟಿಗೊಳಿಸುತ್ತಾರೆ. ಇಂತಹ ವಿಚಾರಗಳು ನನಗೆ ತನ್ನಂಬುಗೆಯನ್ನು ತಂದುಕೊಡುತ್ತಿವೆ. ಒಟ್ಟಿನಲ್ಲಿ ನನ್ನ ಕಣ್ಣಿಗೆ ಶಂಕರ ಬಟ್ಟರ ವಿಚಾರಗಳು ಹೇಗಿದೆ ಎಂದರೆ ನೆಲದಿಂದ ಸುಮಾರು ಕಿಲೋಮೀಟರಿನಶ್ಟು ಬಾನೆತ್ತರಕ್ಕೆ ಕರೆದುಕೊಂಡು ಹೋಗಿ “ನೋಡು, ನೆಲ ಚಪ್ಪಟೆಯಾಗಿಲ್ಲ. ಬದಲಾಗಿ ಗುಂಡಾಗಿಯೇ ಇದೆ” ಎಂದು ದಿಟವನ್ನು ತೋರಿಸಿಕೊಟ್ಟ ಹಾಗೆ ಇದೆ.

(ಚಿತ್ರಸೆಲೆ: maryelizabethbradford.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. kannada eenu embudara arivu cigurodeyuttiruvudu bahla higgu tandikkuva sangati.
    aalavaagi beeru bittiruva arimiiyavallada vicaaragalu namma badukannu heege aaluttiruttave embudakke kaanadadalli sanskritada paatra noodidare arivaaguttade.

ಅನಿಸಿಕೆ ಬರೆಯಿರಿ: