ಎಲ್ಲರ ತಾಯಿ ಯಲ್ಲಮ್ಮ

ಜಯತೀರ‍್ತ ನಾಡಗವ್ಡ.

Temple

ಎಲ್ಲರ ತಾಯಿ ಎಂದೇ ಕ್ಯಾತಿ ಪಡೆದಿರುವ ತಾಯಿ ಸವದತ್ತಿ ರೇಣುಕಾ ಯಲ್ಲಮ್ಮ/ ಎಲ್ಲಮ್ಮನ ಬಗ್ಗೆ ಈ ಬರಹ. ಹೆಸರೇ ಹೇಳುವಂತೆ ಯಲ್ಲಮ್ಮ ತನ್ನ ಎಲ್ಲರ ಕಾಪಾಡುವ ತಾಯಿ. ಬಡಗಣ ಕರ‍್ನಾಟಕದ ಪ್ರಮುಕ ಪ್ರವಾಸಿ ತಾಣ ಸವದತ್ತಿ ಯಲ್ಲಮ್ಮ. ಬೆಳಗಾವಿ ಜಿಲ್ಲೆಯ ಸವದತ್ತಿಯ ಊರ ಹೊರಗೆ 5 ಕಿ.ಮೀ. ದೂರದ ರಾಮಲಿಂಗ ಬೆಟ್ಟಗುಡ್ಡಗಳ ನಡುವಣ ಯಲ್ಲಮ್ಮನ ನೆಲೆ. ಹಲವಾರು ಕನ್ನಡಿಗರು ರೇಣುಕಾ ಯಲ್ಲಮ್ಮನ ಬಕ್ತರು, ಯಲ್ಲಮ್ಮನೇ ಇವರ ಮನೆದೇವತೆ.

Arishina bandaara

ಗುಡ್ಡದ ತಪ್ಪಲಿನಲ್ಲಿ ಚಂದದ ಯಲ್ಲಮ್ಮನ ದೊಡ್ಡ ದೇಗುಲ, ಇದಕ್ಕೆ ಪರಶುರಾಮ, ಮಾತಂಗಿ ಗುಡಿಗಳು ಸುತ್ತುವರಿದಿವೆ. ಯಲ್ಲಮ್ಮನ ಗಂಡ ಜಮದಗ್ನಿ ಗುಡಿ ಮಾತ್ರ ಅರ‍್ದ ಕಿ.ಮೀ ದೂರದ ಇನ್ನೊಂದು ಗುಡ್ಡದಲ್ಲಿ ನೆಲೆಸಿದೆ. ಇದಕ್ಕೆ ಕಾರಣ ಜಮದಗ್ನಿ ಮುನಿಯ ಸಿಟ್ಟೇ ಇರಬೇಕು ಎಂಬುದು ಹಲವರ ಅನಿಸಿಕೆ. ಹಳದಿ ಬಣ್ಣದ ಅರಿಶಿನ ಬಂಡಾರ ಯಲ್ಲಮ್ಮನಿಗೆ ತುಂಬಾ ಒಲವಿನದು. ಇದೇ ಕಾರಣಕ್ಕೆ ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಬರುವ ಎಲ್ಲ ಬಕ್ತರು ಬಂಡಾರವನ್ನು ಹಣೆಗೆ ಬಳಿದುಕೊಂಡು ಬರುತ್ತಾರೆ. ಇದು ಪ್ರಸಾದದಂತೆ ಇಲ್ಲಿ ಬರುವ ಎಲ್ಲರಿಗೂ ನೀಡಲಾಗುತ್ತದೆ.

ಇತಿಹಾಸದ ಹಿನ್ನೆಲೆ
Renuka storyರಾಶ್ಟ್ರಕೂಟರ ಆಳ್ವಿಕೆಯಲ್ಲಿ ಸಾಮಂತರಾದ “ರಟ್ಟ”ದೊರೆಗಳು ಆಳುತ್ತಿದ್ದ ನಾಡಿನ ಒಂದು ಬಾಗವಾಗಿತ್ತು ಸವದತ್ತಿ. ಸವದತ್ತಿಯನ್ನು ತಮ್ಮ ನೆಲೆವೀಡಾಗಿ ಮಾಡಿಕೊಂಡು ರಟ್ಟರು ಸವದತ್ತಿಯಲ್ಲಿ ಯಲ್ಲಮ್ಮ ದೇವತೆಯ ಗುಡಿಯನ್ನು ಕಟ್ಟಿ ಬೆಳೆಸಿದರು ಎಂದು ಇತಿಹಾಸ ಹೇಳುತ್ತದೆ. ರಟ್ಟರ ಪ್ರಮುಕ ದೊರೆ ಬೊಮ್ಮಪ್ಪ ನಾಯಕ 1514ರಲ್ಲಿ ಯಲ್ಲಮ್ಮನ ದೇವಸ್ತಾನ ಕಟ್ಟಿದವನೆಂದು ತಿಳಿದುಬರುತ್ತದೆ. ಸವದತ್ತಿಯ ಬಳಿಯ ಪಾರಸಗಡ ಕೋಟೆ, ಬೆಳಗಾವಿ ಊರಿನ ಕೋಟೆ ರಟ್ಟರ ಆಳಿಕೆಯ ಮುಕ್ಯವಾದ ಕೊಡುಗೆಗಳು.

ರೇಣುಕಾ ಯಲ್ಲಮ್ಮ ಸಿಟ್ಟಿನ ಮುನಿ ಜಮದಗ್ನಿಯ ಹೆಂಡತಿಯಾಗಿದ್ದಳು. ಒಮ್ಮೆ ಮುನಿಯ ಸಿಟ್ಟಿಗೆ ಗುರಿಯಾಗಿದ್ದ ರೇಣುಕಾಳನ್ನು ಮುಗಿಸಬೇಕೆಂದು ತನ್ನೆಲ್ಲ ಮಕ್ಕಳಿಗೆ ಜಮದಗ್ನಿ ಕೇಳಿಕೊಂಡರು. ಇದಕ್ಕೆ ಯಾರು ಮುಂದೆ ಬರದಿದ್ದಾಗ ಕೊನೆಯ ಮಗ ಪರಶುರಾಮ ತಂದೆಯ ಮಾತನ್ನು ಚಾಚೂ ತಪ್ಪದೇ ಪಾಲಿಸಿ, ಸ್ವಂತ ತಾಯಿ ರೇಣುಕಾಳ ತಲೆಯನ್ನು ತನ್ನ ಕೊಡಲಿಯಿಂದ ಎರಡು ಹೋಳಾಗಿಸಿದ. ತನ್ನ ಮಾತನ್ನು ನಡೆಸಿಕೊಟ್ಟ ಮಗನಿಂದ ಸಂತಸಗೊಂಡ ಜಮದಗ್ನಿ ಮುನಿಗಳು ಮಗನಿಗೆ ಮೂರು ವರ ನೀಡುವುದಾಗಿ ಹೇಳಿದರು. ಇದೇ ಅವಕಾಶವನ್ನು ಬಳಸಿಕೊಂಡ ಪರಶುರಾಮ ತಾಯಿಯನ್ನು ಮರುಹುಟ್ಟಿಸಿಬೇಕು, ಸಿಟ್ಟಿಗೆ ಗುರಿಯಾಗಿ ಸುಟ್ಟು ಬಸ್ಮರಾದ ತನ್ನ ಇತರೆ ತಮ್ಮಂದಿರು ಬೇಕು ಮತ್ತು ಜಮದಗ್ನಿ ಮುನಿಗಳು ತಮ್ಮ ಕೋಪವನ್ನು ಬಿಟ್ಟುಬಿಡಬೇಕೆಂದು ಕೇಳಿಕೊಂಡಿದ್ದನಂತೆ. ಇದು ಪುರಾಣದಿಂದ ತಿಳಿದುಬರುವ ಕತೆ.

ಸವದತ್ತಿಯ ಊರ ಹೊರಗೆ 2-3 ಕಿ.ಮೀ ದೂರದಲ್ಲಿ ನಿಮಗೆ ಜೋಗುಳ ಬಾವಿ ಕಾಣಸಿಗುತ್ತದೆ. ಇಲ್ಲಿಂದಲೇ ನಿಮ್ಮ ಬೆಟ್ಟಿ ಆರಂಬಗೊಳ್ಳುತ್ತದೆ. ಯಲ್ಲಮ್ಮನ ಕಾಣಲು ಹೋಗುವ ಮೊದಲು ಜೋಗುಳ ಬಾವಿಯ ನೀರನ್ನು ತಲೆಯ ಮೇಲೆ ಸಿಂಪಡಿಸಿಕೊಂಡರೆ ಕಾಯಿಲೆ ರುಜಿನಗಳು ಯಾವುದು ಬರುವುದಿಲ್ಲವೆಂದು ಅನೇಕರ ನಂಬಿಕೆ. ಜೋಗುಳ ಬಾವಿ “ರೇಣುಕಾ ಸಾಗರ” ದಿಂದ ಉಂಟಾದ ಹೊಂಡ. ಬಡಗಣ ಕರ‍್ನಾಟಕದ ಹುಬ್ಬಳ್ಳಿ-ದಾರವಾಡ, ಬೆಳಗಾವಿ, ಗದಗ ಜಿಲ್ಲೆಗಳಿಗೆ ಪ್ರಮುಕ ನೀರಿನ ಸೆಲೆಯಾಗಿರುವ ಮಲಪ್ರಬಾ ಹೊಳೆಯ ಹಿನ್ನೀರು ಸೇರಿಕೊಂಡು “ರೇಣುಕಾ ಸಾಗರ” ಹುಟ್ಟಿಕೊಂಡಿದೆ.

jogula baavi

ಜಾತ್ರೆ

ಪ್ರತಿ ವರುಶ ಬಾರತ ಹುಣ್ಣಿಮೆಯ ದಿನದಲ್ಲಿ ಹತ್ತಾರು ದಿನಗಳ ಕಾಲ ಅಂದರೆ ಪೆಬ್ರವರಿಯ ಹೊತ್ತಿನಲ್ಲಿ ಯಲ್ಲಮ್ಮನ ಗುಡ್ಡದಲ್ಲಿ ಜಾತ್ರೆ ನಡೆಯುತ್ತದೆ. ಕರ‍್ನಾಟಕವಲ್ಲದೇ ನೆರೆಯ ಆಂದ್ರ, ಮಹಾರಾಶ್ಟ್ರ, ತಮಿಳ್ನಾಡಿನ ಹಲವಾರು ಮಂದಿ ಇಲ್ಲಿಗೆ ಬಂದು ದೇವಿಯ ದರುಶನ ಪಡೆದು ಹೋಗುತ್ತಾರೆ. ದಿನಾಲೂ ಸಾವಿರಾರು ಬಕ್ತರು ಬೇಟಿ ನೀಡುವ ಈ ತಾಣದಲ್ಲಿ ಜಾತ್ರೆಯ ಹೊತ್ತಿನಲ್ಲಂತೂ ಲಕ್ಶಾಂತರ ಜನಜಂಗುಳಿಯಿಂದ ಗಿಜಿಗಿಟ್ಟಿರುತ್ತದೆ ನೋಡಲೆರಡು ಕಣ್ಣು ಸಾಲದು. ರೇಣುಕಾ ಎಲ್ಲಮ್ಮನ ವಿಶೇಶ ಬಕ್ತರೆಂದು ಹೇಳಲ್ಪಡುವ ಜೋಗತಿಯರು ಈ ಹೊತ್ತಿನಲ್ಲಿ ಕಿಕ್ಕಿರಿದು ಸೇರಿರುತ್ತಾರೆ.

ಕೆಟ್ಟ ಪದ್ದತಿ

ದೇವದಾಸಿ ಎಂಬ ಕೆಟ್ಟ ಪದ್ದತಿ ರೇಣುಕಾ ಯಲ್ಲಮ್ಮನ ತಾಣದಲ್ಲಿ ಹಳೆಯ ಕಾಲದಿಂದ ಇತ್ತು. ಹೆಣ್ಣುಮಕ್ಕಳನ್ನು ಶೋಶಿಸಿ ದೇವರ ಹೆಸರಿನಲ್ಲಿ ಕೆಟ್ಟ ಕೆಲಸಕ್ಕೆ ದೂಡಲಾಗುತ್ತಿತ್ತು. ಮಂದಿಯ ಕಲಿಕೆ, ತಿಳುವಳಿಕೆ ಹಾಗೂ ಸರ‍್ಕಾರದ ಸತತ ಯತ್ನಗಳಿಂದ ಈ ಪದ್ದತಿಗೆ ಸಾಕಶ್ಟು ಕಡಿವಾಣ ಹಾಕಲಾಗಿದೆ. ಇಂತ ಸಾಮಾಜಿಕ ಪಿಡುಗುಗಳನ್ನ ಪೂರ‍್ತಿಯಾಗಿ ತೊಲಗಿಸುವತ್ತ ಸರ‍್ಕಾರಗಳು ಇನ್ನಶ್ಟು ಕ್ರಮಗಳನ್ನು ಕಯ್ಗೊಳ್ಳಬೇಕಿದೆ.

ಸವದತ್ತಿ ಯಲ್ಲಮ್ಮನನ್ನು ತಲುಪುವು ಬಗೆ

ರಸ್ತೆ ಸಾರಿಗೆ – ಬೆಳಗಾವಿ ಜಿಲ್ಲೆಯಲ್ಲಿ ಸವದತ್ತಿ ತಾಲೂಕಾಗಿದ್ದು, ಕರುನಾಡಿನ ಪ್ರಮುಕ ಊರುಗಳಿಂದ ಇಲ್ಲಿಗೆ ಕರ‍್ನಾಟಕ ಸಾರಿಗೆಯ ಬಸ್ಸಿನ ಏರ‍್ಪಾಟು ಇರುತ್ತದೆ. ಸವದತ್ತಿ ಊರಿನ ಬಸ್ ನಿಲ್ದಾಣದಿಂದ ಗಂಟೆಗೊಂದರಂತೆ ಬಸ್ಸುಗಳು ಯಲ್ಲಮ್ಮ ಗುಡ್ಡದತ್ತ ಬರುತ್ತವೆ. ಸವದತ್ತಿಯಿಂದ ರಾಮದುರ‍್ಗದ ಕಡೆಗೆ ತೆರಳುವ ಯಾವುದೇ ಸಾರಿಗೆ ಬಸ್ ನಲ್ಲಿ ಜೋಗುಳ ಬಾವಿಯಲ್ಲಿ ಇಳಿದರೆ, ಮುಂದೆ ಗುಡ್ಡಕ್ಕೆ ಸಾಗಲು ಸೀಟೊಂದಕ್ಕೆ 20 ರೂಪಾಯಿಯಂತೆ ಆಟೋಗಳು ದೊರಕುತ್ತವೆ.
ರಯ್ಲು ಸಾರಿಗೆ – ಹತ್ತಿರದ ರಯ್ಲು ನಿಲ್ದಾಣ ದಾರವಾಡದಲ್ಲಿದ್ದು ಇದು ಕೇವಲ 38 ಕಿ.ಮೀ. ದೂರ.
ಬಾನೋಡ – ಹತ್ತಿರದ ಬಾನೋಡ ತಾಣ ಹುಬ್ಬಳ್ಳಿ 58 ಕಿ.ಮೀ ದೂರದಲ್ಲಿದೆ. ಬೆಳಗಾವಿ ಬಾನೋಡ ತಾಣ 85 ಕಿ.ಮೀ.

ಕರ‍್ನಾಟಕ ಮುಜರಾಯಿ ಇಲಾಕೆಯು ಕೋಣೆಗಳನ್ನು ಕಟ್ಟಿಸಿ ಯಲ್ಲಮ್ಮನ ಗುಡ್ಡದಲ್ಲಿ ಉಳಿದುಕೊಳ್ಳುವರಿಗೆ ಒಳ್ಳೆಯ ಏರ‍್ಪಾಟುಗಳನ್ನು ಒದಗಿಸಿದೆ. ಸವದತ್ತಿ ಊರಿನಲ್ಲೂ ಉಳಿದುಕೊಳ್ಳಲು ಬಾಡಿಗೆ ಕೋಣೆಗಳು ಸಿಗುತ್ತವೆ.

ಸುತ್ತಲಿನ ನೋಡತಕ್ಕ ಊರುಗಳು

ಸವದತ್ತಿಯ ಕೋಟೆ
ನವಲಗುಂದದ ಶಿರಸಂಗಿ ಸಂಸ್ತಾನದ ಜಯಪ್ಪ ದೇಸಾಯಿಗಳು ಕಟ್ಟಿದ ಕಲ್ಲಿನ ಸವದತ್ತಿ ಕೋಟೆ ನೋಡಲು ಬಲು ಅಂದವಾಗಿದೆ. ಒಳಗಡೆ ಸವದತ್ತಿ ಪುರಸಬೆ ತೋಟವೊಂದನ್ನು ಬೆಳೆಸಿ ಇದರ ಅಂದ ಇಮ್ಮಡಿಗೊಳಿಸಿದೆ. ಕೋಟೆಯ ಒಳಗೆ ಹಲವು ಮೆಟ್ಟಿಲುಗಳ ಮೇಲಿರುವ ಆವೊತ್ತಿನ ಕಾಡು ಸಿದ್ದೇಶ್ವರ ಗುಡಿಯು ಕಣ್ಸೆಳೆಯುವ ಚಿತ್ತಾರಗಳಿಂದ ಕೂಡಿದೆ.

ನವಿಲುತೀರ‍್ತ
ಸವದತ್ತಿ ಯಲ್ಲಮ್ಮನ ತಾಣದಿಂದ 15 ಕಿ.ಮೀ ದೂರದಲ್ಲಿ ಮಲಪ್ರಬಾ ಹೊಳೆಗೆ ಅಡ್ಡಲಾಗಿ ಆಣೆಕಟ್ಟು ಕಟ್ಟಲಾಗಿದೆ. ಇದೇ ನವಿಲುತೀರ‍್ತ. ಸವದತ್ತಿಯಿಂದ ಮುನವಳ್ಳಿಗೆ ತೆರಳುವ ದಾರಿಯಲ್ಲಿ ಸಿಕ್ಕುತ್ತದೆ. ನವಿಲುಗಳ ಪಕ್ಶಿದಾಮ ಹೊಂದಿರುವ ನವಿಲುತೀರ‍್ತ ನೋಡುಗರ ಕಣ್ಣಿಗೆ ಹಬ್ಬವುಂಟುಮಾಡುವ ತಾಣ. ತರಹ ತರಹದ ಸುಂದರ ನವಿಲುಗಳು ಇಲ್ಲಿ ತಮ್ಮ ಗರಿಬಿಚ್ಚಿ ಕುಣಿಯುವುದನ್ನು ಕಂಡರೆ ಮಕ್ಕಳಶ್ಟೇ ಅಲ್ಲ ದೊಡ್ಡವರು ನಲಿಯುತ್ತಾರೆ. ಆಣೆಕಟ್ಟಿನ ಅಕ್ಕಪಕ್ಕದಲ್ಲಿ ಚಂದವಾಗಿ ಹೂತೋಟ ಮಾಡಿದ್ದು ಇಲ್ಲಿಗೆ ಹೆಚ್ಚುಜನರನ್ನು ಸೆಳೆಯಲು ಕಾರಣವಾಗಿದೆ. ತೋಟಗಾರಿಕೆ ಇಲಾಕೆಯವರು ಈ ಹೂತೋಟವನ್ನು ಅಂದವಾಗಿರಿಸಿದ್ದು ಮೆಚ್ಚುಗೆಯ ಕೆಲಸ.

ಸೊಗಲ್ ಜಲಪಾತ /ಪಾಲ್ಸ್
ಸೊಗಲ್ ಜಲಪಾತ ಕೂಡ ಮಲಪ್ರಬಾ ಹೊಳೆಯಿಂದಲೇ ಉಂಟಾದದ್ದು, ಇದು ಕೂಡ ಗುಡ್ಡ-ಬೆಟ್ಟಗಳಿಂದ ಸುತ್ತುವರೆದಿದೆ. ಮುನವಳ್ಳಿಯಿಂದ ಮುಂದಕ್ಕೆ ಬಯ್ಲಹೊಂಗಲ ದಾರಿಯಲ್ಲಿ ಸಾಗಿದರೆ 20 ಕಿ.ಮೀ ದೂರದಲ್ಲಿ ಸೊಗಲ್ ಕಾಣಸಿಗುತ್ತದೆ. ಸೊಗಲಿನಲ್ಲಿ ಹೆಸರುವಾಸಿ ಸೊಮೇಶ್ವರನ ಗುಡಿಯಿದೆ. ಇದು ರಾಶ್ಟ್ರಕೂಟರ ಕಾಲದಲ್ಲಿ ಕಟ್ಟಲ್ಪಟ್ಟಿದೆ. ಸೊಗಲಿನಲ್ಲಿ ಇನ್ನೊಂದೆಡೆ ಹಳೆಯಕಾಲದ ಶಿವ-ಪಾರ‍್ವತಿ ದೇವಾಲಯವೊಂದಿದೆ, ಹಿಂದೆ ಇದು ಮದುವೆ ಮಂಟಪವಾಗಿದ್ದು ಇಲ್ಲಿಯೇ ಶಿವ -ಪಾರ‍್ವತಿ ಮದುವೆ ನಡೆದಿತ್ತೆಂದು ಹೇಳಲಾಗುತ್ತದೆ. ಇದಕ್ಕೆ ಬಲನೀಡುವಂತೆ ಶಿವನ ಬಾಸಿಂಗ ತೊಟ್ಟ ಮೂರ‍್ತಿಯೊಂದು ಇಲ್ಲಿದೆ. ಇದಲ್ಲದೇ ಇಲ್ಲಿ ಗಿರಿಜೆ, ಅಜ್ಜಪ್ಪನ ಹಲವು ಚಿಕ್ಕ ಪುಟ್ಟ ಗುಡಿಗಳು ಸಿಗುತ್ತವೆ.

ಹಿಂದಿನ ಕಾಲದಲ್ಲಿ ಮುನಿಗಳೊಬ್ಬರು ಇಲ್ಲಿ ತಪಸ್ಸನ್ನು ಮಾಡಿ ಸಿದ್ದಿ ಪಡೆದಿದ್ದು ವಿಶೇಶವಾದರೆ, ಕಾಡಿನ ಹುಲಿಗಳು ಕೂಡ ಆ ಕಾಲದಲ್ಲಿ ಪ್ರವಚನ ಕೇಳಲು ಇಲ್ಲಿಗೆ ಬರುತ್ತಿದ್ದವು ಎಂಬುದು ಅಚ್ಚರಿ ಮೂಡಿಸುತ್ತದೆ. ಸೊಗಲ್ ನ ಜಲಪಾತದಲ್ಲಿ ನೀರು ಹಾಲಿನ ನೊರೆಯಂತೆ ದುಮುಕ್ಕಿ ಬಂದು 30 ಅಡಿ ಕೆಳಗೆ ಜಿಗಿದು ನೋಡುಗರಿಗೆ ಮುದನೀಡುತ್ತದೆ.

ನವಿಲುತೀರ‍್ತ, ಸೊಗಲ್ ಅಲ್ಲದೇ ಗೊಡಚಿ ವೀರಬದ್ರೇಶ್ವರ, ಗೋಕಾಕ್ ಜಲಪಾತಗಳು 60-80 ಕಿ.ಮೀ ದೂರದಲ್ಲಿದ್ದು ಆಸಕ್ತಿ ಇದ್ದವರು ಹೋಗಿ ವೀರಬದ್ರನ ದರ‍್ಶನ ಪಡೆದು ಗೋಕಾಕದ ಕರದಂಟಿನ ರುಚಿ ಸವಿಯಬಹುದು.

ಕನ್ನಡದ ಹಲವಾರು ಓಡುತಿಟ್ಟಗಳು ಸವದತ್ತಿ ಯಲ್ಲಮ್ಮನ ತಾಣದಲ್ಲಿ ಚಿತ್ರೀಕರಣಗೊಂಡಿವೆ. ಅದರಂತೆ ರೇಣುಕಾ ಯಲ್ಲಮ್ಮನ ಕತೆಯ ಹಲವು ಓಡುತಿಟ್ಟಗಳು ಕನ್ನಡದಲ್ಲಿ ಮೂಡಿಬಂದಿವೆ. ಕನ್ನಡ-ಕನ್ನಡಿಗರ ಸಂಸ್ಕ್ರುತಿಯ ಗುರುತಾಗಿರುವ ಯಲ್ಲಮ್ಮನಿಗೆ ಉಗೇ ಉಗೇ!

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. Poorti mahiti sikkatu Yellammana bagge Dhanyavadagalu Jayatheerth…

  2. ನಿಮ್ಮ ಮೆಚ್ಚುಗೆಯ ನುಡಿಗಳಿಗೆ ನನ್ನಿ/ದನ್ಯವಾದಗಳು ಸಂಜೀವ.

ಅನಿಸಿಕೆ ಬರೆಯಿರಿ:

Enable Notifications OK No thanks