ನಮ್ಮ ಆಲೋಚನೆಗಳ ಮೇಲೆ ನುಡಿಯ ಪ್ರಬಾವವೇನು?

ರಗುನಂದನ್.

thinking-speaking

ನಾವು ಮಿಂಬಲೆಯಲ್ಲೋ ಇಲ್ಲಾ ಪೇಸ್ಬುಕ್ಕಿನಲ್ಲೋ ಮಾತುಕತೆ ಮಾಡುವಾಗ ಕನ್ನಡ ಇಲ್ಲದಿರುವುದರ ಬಗ್ಗೆ ಅತವಾ ಹಿಂದಿಯಲ್ಲೋ ಇಂಗ್ಲಿಶಿನಲ್ಲೋ ಮಾತ್ರ ಇರುವ ಸೇವೆಗಳನ್ನು ನಮ್ಮ ನುಡಿಯಲ್ಲಿಯೇ ಕೇಳಿದಾಗ ಸಾಮಾನ್ಯವಾಗಿ ಈ ರೀತಿಯ ಉತ್ತರ ಸಿಕ್ಕಿರುತ್ತದೆ

ಬಾಶೆಯೆಂಬುದು ಒಂದು ಸಂಪರ‍್ಕಸಾದನವಶ್ಟೆ (Language is just a way of communication), ಅದು ಯಾವ ಬಾಶೆ ಎನ್ನುವುದಕ್ಕಿಂತ ಅದರ ಸಂದೇಶ ಮುಕ್ಯ.

ಆದರೆ ದಿಟವಾಗಲೂ ನುಡಿಯೆಂಬುದು ಬರಿ ಇಬ್ಬರ ನಡುವಿನ ಕೊಂಡಿ ಮಾತ್ರವೇ? ಇಲ್ಲಾ ಬಾಶೆ ಎಂಬುದಕ್ಕೆ ಒಂದು ಸಾದನದ ಹೊರತಾಗಿ ಇನ್ನೇನಾದರೂ ಮೇಲ್ಮೆ ಇದೆಯೇ? ಒಂದು ನುಡಿ-ಗುಂಪಿನ ಮಂದಿಯ ಆಲೋಚನೆಯ/ಉನ್ನಿಕೆ (thought)ಯ ಮೇಲೆ ಅವರಾಡುವ ನುಡಿಯ ಪ್ರಬಾವ ಇರುತ್ತದೆಯೇ? ಮುಂದೆ ಓದಿರಿ.

ಬೆಂಜಮಿನ್ ಲೀ ವಾರ‍್ಪ್ (Benjamin Lee Whorf)

ಇವರು ಅಮೇರಿಕಾದ ನುಡಿಯರಿಗ. ಇವರು 1930-40 ರ ಹೊತ್ತಿನಲ್ಲಿ ಕೆಲವೊಂದು ನುಡಿಗಳ ಬಗೆ ಅರಕೆ ಮಾಡಿದ್ದರು. ಇವರ ಪ್ರಕಾರ ಎರಡು ಬೇರೆ ಬೇರೆ ನುಡಿ-ಗುಂಪುಗಳ ಮಂದಿಯ ಹೊರನೋಟಗಳು (worldviews) ಬೇರೆಯಾಗಿಯೇ ಇರುತ್ತವೆ. ಅಂದರೆ ’ಅ’ ಎಂಬ ನುಡಿಯವರು ತಮ್ಮ ಹೊರಗಿನ ಜಗತ್ತನ್ನು ನೋಡುವ ಮತ್ತು ಅರ‍್ತಯ್ಸಿಕೊಳ್ಳುವುದು ಒಂದು ಬಗೆಯಾದರೆ ’ಬ’ ಎಂಬ ನುಡಿಯವರು ತಮ್ಮ ಹೊರ ಜಗತ್ತನ್ನು ನೋಡುವ ಮತ್ತು ಅರ‍್ತಯ್ಸಿಕೊಳ್ಳುವುದು ಇನ್ನೊಂದು ಬಗೆ ಮತ್ತು ಇವರೀರ‍್ವರ ನೋಟ ಅವರವರ ನುಡಿಗಳಿಂದ ಪ್ರಬಾವಿತವಾಗಿರುತ್ತದೆ ಎಂಬುದು ವಾರ‍್ಪನ ವಾದ. ಈ ಎಣಿಕೆಗೆ ಲಿಂಗ್ವಿಸ್ಟಿಕ್ ರಿಲೇಟಿವಿಟಿ ಎಂದು ಹೆಸರಿಸಲಾಯಿತು. ಇವರ ಹೊಳಹುಬದಿ(ideology) ಹೆಚ್ಚಾಗಿ ನುಡಿ ಮತ್ತು ಅರಿವೆಚ್ಚರ/ಅರಿವೊಣರು/ಅರಿವುಬಗ್ಯೆ  (cognition) ನಡುವಿನ ನಂಟನ್ನು ತಿಳಿದುಕೊಳ್ಳುವುದಕ್ಕೆ ಮೊಗಸುತ್ತಿತ್ತು.

ಆದರೆ ಸರಿಸುಮಾರು 1960 ರ ಹೊತ್ತಿಗೆ ಹೊಸ ಅಲೆಯ ನುಡಿಯರಿಗರು ವಾರ‍್ಪನ ವಿಚಾರಗಳನ್ನು ಅಲ್ಲಗೆಳೆಯಲು ಮೊದಲು ಮಾಡಿದರು. ಅವರುಗಳ ವಾದ ಒಂದು ನುಡಿಗುಂಪಿನ ಉನ್ನಿಕೆ/ತೋಚಿಕೆ (thought/imagination) ಅವರ ನುಡಿಯಿಂದ ಪ್ರಬಾವಿತವಾಗಿರುವುದಿಲ್ಲ ಎಂದಾಗಿತ್ತು. ನುಡಿಯೆಂಬುದು ನಡೆ-ನುಡಿ(culture)ಗೆ ಹೆಚ್ಚು ಒತ್ತು ಕೊಡುವುದಕ್ಕಿಂತ ಅರಿವೆಚ್ಚರಕ್ಕೆ(cognition) ಹೆಚ್ಚು ಒತ್ತು ಕೊಡುತ್ತದೆ ಎಂದು ಹೊಸ ನುಡಿಯರಿಗರ ಸಲುವಾಗಿತ್ತು(reasoning). ಅದೇ ಹೊತ್ತಿಗೆ ಚಾಮ್ಸ್ಕಿಯವರ ಒಬ್ಬಗೆಯ ಸೊಲ್ಲರಿಮೆ(Universal Grammar) ಕೂಡ ಹೆಸರುವಾಸಿಯಾಗುತ್ತಿತ್ತು. ಹಾಗಾಗಿ ವಾರ‍್ಪಿನ ವಾದಕ್ಕೆ ಹುರುಳಿಲ್ಲ ಎಂದು ಅವರ ಹೊಳಹುಬದಿ ನೆನೆಗುದಿಗೆ ಬಿದ್ದಿತ್ತು.

ವಾರ‍್ಪಿನ ವಾದಕ್ಕೆ ಮರುವುಸಿರು

ಮತ್ತೆ 1990 ರಲ್ಲಿ ವಾರ್ಪಿನ ಲಿಂಗ್ವಿಸ್ಟಿಕ್ ರಿಲೇಟಿವಿಟಿ ಎಣಿಕೆಗೆ ಮರುಜೀವ ದೊರಕಿತು. ಜಾರ‍್ಜ್ ಲ್ಯಾಕೊಪ್, ಜಾನ್ ಗಂಪೇರ‍್ಜ್, ಸ್ಟೀಪನ್ ಲೆವಿನ್ಸನ್, ಲೇರಾ ಬೋರೋಡಿಟ್ಸ್‌ಕಿ ಹಾಗು ಡೆಡ್ರೆ ಗೆಂಟ್ನೆರ್ 1930ರಲ್ಲಿ ವಾರ‍್ಪ್ ಮುಂದಿಟ್ಟಿದ್ದ ಅರಕೆಗಳನ್ನು ಹೊಸದಾಗಿ ನೋಡಲು ಮೊದಲು ಮಾಡಿದರು. ಇವರುಗಳ ಪ್ರಕಾರ 1960ರ ನುಡಿಯರಿಗರು ಲಿಂಗ್ವಿಸ್ಟಿಕ್ ರಿಲೇಟಿವಿಟಿಯನ್ನು ಸರಿಯಾಗಿ ಹುರುಳಿಸಿಕೊಂಡಿರಲಿಲ್ಲ, ಹಾಗಾಗಿ ನುಡಿ ಮತ್ತು ಉನ್ನಿಕೆಯ ನಂಟನ್ನು ಸರಿಯಾಗಿ ಬಿಡಿಸಲಾಗಿರಲಿಲ್ಲ.

ನಾವು ಈ ಬರಹದಲ್ಲಿ ಲೇರಾ ಬೋರೋಡಿಟ್ಸ್‌ಕಿ ಅವರು ನುಡಿ ಮತ್ತು ಉನ್ನಿಕೆಯ ನಂಟಿನ ಕುರಿತಾಗಿ ಮಾಡಿರುವ ಅರಕೆಗಳನ್ನು ತಿಳಿದುಕೊಳ್ಳೋಣ. ಲೇರಾರವರು ಕ್ಯಾಲಿಪೋರ‍್ನಿಯಾ ಕಲಿಕೆವೀಡಿನಲ್ಲಿ (UCSD) ಬಗೆಯರಿಮೆಯ(Psychology) ವಿಬಾಗದಲ್ಲಿ ಒಡ-ಮೇಲ್ಕಲಿಸುಗರಾಗಿದ್ದಾರೆ(Associate Professor).

ಲೇರಾ ಬೋರೋಡಿಟ್ಸ್‌ಕಿ

ಲೇರಾರವರು 2010ರ ಕಡೆಯಲ್ಲಿ ದಿ ಎಕಾನಾಮಿಸ್ಟ್ ಮಿಂಬಲೆ ತಾಣದಲ್ಲಿ ಒಂದು ಹೊಸ ಚರ‍್ಚೆ ಹುಟ್ಟುಹಾಕಿದರು. ಇವರು ವಾರ‍್ಪಿನ ಹಾದಿಯಲ್ಲಿಯೇ “ನುಡಿಗಳು ಉನ್ನಿಕೆಯ ಮೇಲೆ ಒತ್ತು ಬೀರುತ್ತವೆ” (Language shapes thought) ಎಂಬುದಾಗಿ ವಾದ ಮೊದಲುಮಾಡಿದರು. ಇವರ ಮಾತಿಗೆ ಎದುರೊಡ್ಡಿದವರು ಪೆನ್ಸಿಲ್ವೇನಿಯಾ ಕಲಿಕೆವೀಡಿನ ನುಡಿಯರಿಮೆ ಕಲಿಸುಗರಾದ ಮಾರ್ರ‍್ಕ್ ಲಯ್ಬರ್‌ಮ್ಯಾನ್.

ಈ ಚರ‍್ಚೆಗೆ ಎಕಾನಾಮಿಸ್ಟಿನ ಮಾರ‍್ಕ್ ಗ್ರೀನ್ ಅಂಕೆಗಾರ(Moderator)ರಾಗಿದ್ದರು. ಈ ಚರ‍್ಚೆಯನ್ನು ಎಕಾನಾಮಿಸ್ಟ್ ಓದುಗರು ಕುತೂಹಲದಿಂದ ಹಿಂಬಾಲಿಸಿದರಲ್ಲದೆ ಒಕ್ಕಣೆಗಳ ಮೂಲಕ ತಮ್ಮ ಅನಿಸಿಕೆಗಳನ್ನು ಹೊರಹಾಕಿದರು. ಹತ್ತು ದಿನಗಳ ಮಾತು-ಸರಣಿಯ ಬಳಿಕ 78% ಮಂದಿ ಲೇರಾ ಕಡೆ ಮತ ಹಾಕಿದ್ದರು, ಮಿಕ್ಕ 22% ಲಯ್ಬರ್‌ಮ್ಯಾನ್ ಕಡೆ ಮತ ಹಾಕಿದ್ದರು. ಅಂದರೆ ಹೆಚ್ಚಿನ ಮಂದಿ ಲೇರಾರವರ ವಾದಕ್ಕೆ ಹೂಂಗುಟ್ಟಿದ್ದರು. ಆದರೆ ಅರಿಮೆಯ ವಿಶಯವೊಂದು ಮಂದಿಯೊಪ್ಪಿತ ಇದೆ ಎಂದ ಮಾತ್ರಕ್ಕೆ ಸರಿ ಎಂದಾಗುವುದಿಲ್ಲ. ಲೇರಾರವರ ಎಣಿಕೆಗಳು ಮತ್ತು ಎತ್ತುಗೆಗಳು ಏನೆಂಬುದನ್ನು ನೋಡೋಣ.

  1. ಒಂದು ನುಡಿ-ಗುಂಪಿನ ಹೊರನೋಟಕ್ಕೂ ಬೇರೊಂದು ನುಡಿ-ಗುಂಪಿನ ಹೊರನೋಟಕ್ಕೂ ಸಾಕಶ್ಟು ಬೇರ‍್ಮೆ ಇರುತ್ತದೆ. ಈ ಬೇರ‍್ಮೆ ಅವರ ನುಡಿಗಳಿಂದ ಪ್ರಬಾವಿತವಾಗಿರುತ್ತದೆ.
  2. ಹಾಗಾಗಿ ಬೇರೆ ಬೇರೆ ನುಡಿಗಳು ಅದನ್ನಾಡುವ ಮಂದಿಗೆ ಬೇರೆ ಬೇರೆ ಅರಿವಿನೆಚ್ಚರದ ಅಳವನ್ನು(Cognitive Ability) ಕೊಡಬಹುದೇ ಎಂಬುದು ತಿಳಿವಿಗರ ಕೇಳ್ವಿ.
  3. ಇತ್ತೀಚಿನ ಅರಕೆಗಳು ಒಬ್ಬನ ತಾಯ್ನುಡಿಯು ತನ್ನ ಹೊರನೋಟದ ಮೇಲೆ ಒತ್ತು ಬೀರುತ್ತದೆ ಎಂದು ತೋರಿಸಿಕೊಟ್ಟಿದೆ. ಇದು ತಾಣ ಮತ್ತು ಕಾಲದ (Space and Time) ವಿಶಯದಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
  4. ನುಡಿ ಮತ್ತು ಉನ್ನಿಕೆಯ ನಂಟು ತುಂಬಾ ಆಳವಾದದ್ದು ಮತ್ತು ಮುಂಚೆ ತಿಳಿದುಕೊಂಡಿದ್ದುಕ್ಕಿಂತ ಕೊಂಚ ಗೋಜಲಾಗಿಯೂ ಇದೆ.

ಲೇರಾರವರು ಕೊಡುವ ಕೆಲವು ಎತ್ತುಗೆಗಳನ್ನು ನೋಡೋಣ,

ನಾವು ಮಾಡುವ ಎಲ್ಲಾ ಕೆಲಸಗಳು(ನೋಡುವುದು/ಕೇಳುವುದು/ಮಾತಾಡುವುದು/ಮುಟ್ಟುವುದು? ಯಾವುದೋ ಒಂದು ನರದಿಂದ ಮಿದುಳಿಗೆ ಒಂದು ಸುಳಿವಾಗಿ(signal) ಹೋಗುತ್ತದೆ. ಕೂಡಲೆ ಮಿದುಳಿಗೆ ಹೋದ ಸುಳಿವು ನಾವು ನೋಡಿದ್ದು/ಕೇಳಿದ್ದು ಏನೆಂದು ಮತ್ತೊಂದು ಸುಳಿವಾಗಿ ಮಾರ‍್ಪಾಟಾಗಿ ನಮಗೆ ಅದೇನೆಂದು ಅರಿವಾಗುತ್ತದೆ. ಇದು ಎಡೆಬಿಡದೆ ಆಗುತ್ತಲೇ ಇರುತ್ತದೆ. ಅಂದರೆ ನಮ್ಮ ನೋಟ-ಸದ್ದು-ಮಾತು ತಡೆಯಿಲ್ಲದೆ ಮಿದುಳಿಗೆ ಹೋಗುತ್ತಾ ನಮ್ಮ ಅರಿವಿನ ಮೇಲೆ ಒತ್ತು ಬೀರುತ್ತಲೇ ಇರುತ್ತದೆ.

ಕೆಲವೊಂದು ನುಡಿಗಳಲ್ಲಿ ನಮ್ಮ ಅಕ್ಕ-ಪಕ್ಕದಲ್ಲಿರುವುದನ್ನು ಹೇಗೆ ನಾವು ಎಡ-ಬಲ ಎಂದು ಬೇರ‍್ಪಡಿಸುತ್ತೀವೋ ಹಾಗೆ ಆ ಮಂದಿ ಎಲ್ಲವನ್ನೂ ತೆಂಕಣ-ಬಡಗಣ-ಮೂಡಣ-ಪಡುವಣ ಎಂದೇ ಗುರುತಿಸುತ್ತಾರಂತೆ. ಹಾಗಾಗಿ ಯಾವುದೇ ದಟ್ಟ ಕಾಡಿನ ನಡುವಿಗೆ ಅವರನ್ನು ನೀವು ಕರೆದೊಯ್ದರೂ ಅವರು ತಟ್ಟನೆ ಯಾವ ದಿಕ್ಕು ಯಾವ ಕಡೆಗಿದೆ ಎಂದು ಹೇಳಬಲ್ಲರು. ನಾವು ಅದನ್ನು ಎಡ-ಬಲ-ಹಿಂದೆ-ಮುಂದೆ ಎಂದಶ್ಟೇ ಹೇಳಬಲ್ಲೆವು.

ಅಂದರೆ ಅವರಿಗೆ ತಾಣ ಎಂದಾಗ ಮಿದುಳಿಗೆ ಹೋಗುವ ಸುಳಿವೇ ಬೇರೆ ನಮ್ಮ ಮಿದುಳಿಗೆ ಹೋಗುವ ಸುಳಿವೇ ಬೇರೆ. ಹಾಗಾಗಿ ಅವರ ನುಡಿ-ಪದಗಳು ಅವರ ಉನ್ನಿಕೆಯ ಮೇಲೆ ಸಾಕಶ್ಟು ಒತ್ತು ಬೀರುತ್ತದೆ ಎಂಬುದು ಲೇರಾರವರ ವಾದ. ಅದು ನೇರವಾಗಿ ಮಿದುಳಿಗೇ ಸಂಬಂದಪಟ್ಟಿರುವುದರಿಂದ ನುಡಿ ಮತ್ತು ಅರಿವಿನೆಚ್ಚರ(Language and Cognition) ಒಂದಕ್ಕೊಂದು ಬೆಸೆದುಕೊಂಡಿದೆ ಎಂದು ಅವರು ಹೇಳುತ್ತಾರೆ.

  • ಕೆಲವೊಂದು ನುಡಿಗಳಲ್ಲಿ ಎಣಿಸುವ ಗೋಜಿಗೆ ಹೋಗುವುದಿಲ್ಲವಂತೆ. ಎಶ್ಟೇ ಸಂಕ್ಯೆಯಿದ್ದರೂ ಅದನ್ನು ಕೆಲವು ಇಲ್ಲವೇ ಹಲವು ಎಂದೇ ಬೇರ್ಪಡಿಸುತ್ತಾರೆ.
  • ರಶ್ಯನ್ ನುಡಿಯಲ್ಲಿ ನೀಲಿ ಬಣ್ಣವನ್ನು ಗುರುತಿಸುವುದು ನಾಲ್ಕಯ್ದು ಬಗೆಗಳಲ್ಲಿ ಇದೆಯಂತೆ. ಇಂಗ್ಲಿಶಿನಲ್ಲಿ ಇದು ಬರಿ ಕಡು-ನೀಲಿ ಇಲ್ಲವೇ ತಿಳಿ-ನೀಲಿ ಎಂದಶ್ಟೆ ಹೇಳಲಾಗುತ್ತದೆ.
  • ಕೆಲವು ನುಡಿಗಳಲ್ಲಿ ಬೂತಕಾಲವನ್ನು ಹೇಳಬೇಕಾದರೆ ಅದು ಎಶ್ಟು ದಿನ, ವಾರ, ತಿಂಗಳು ಹಿಂದೆ ನಡೆದಿತ್ತು ಎಂಬುದರ ಮೇಲೆ ಬೇರೆ ಬೇರೆ ಸೊಲ್ಲುಗಳು ಮಾಡಬೇಕಾಗುತ್ತದೆಯಂತೆ.

ಇಂಡಿಯಾದ ನುಡಿಗಳು

  • ಕನ್ನಡದಲ್ಲಿ ನಪುಂಸಕಲಿಂಗ ಎಂದು ಗುರುತಿಸುಕೊಳ್ಳುವವು ಸಂಸ್ಕ್ರುತದಲ್ಲಿ ಸ್ತ್ರೀಲಿಂಗ ಇಲ್ಲವೇ ಪುಲ್ಲಿಂಗ ಎಂದು ಗುರುತಿಸಿಕೊಳ್ಳುತ್ತವೆ.
  •  36 ಎಂಬ ಸಂಕ್ಯೆಯನ್ನು ಹಿಂದಿಯವರು ಚತ್ತೀಸ್ (6+30) ಎಂದು ಹೇಳಿದರೆ ಕನ್ನಡದವರು ಮೂವತ್ತಾರು (30+6) ಎಂದು ಹೇಳುತ್ತಾರೆ.
  •  ಕನ್ನಡದಲ್ಲಿ ನೀನು ಮತ್ತು ನೀವು ಎಂಬ ಬೇರ‍್ಮೆ ಇದ್ದರೆ ಇಂಗ್ಲಿಶಿನಲ್ಲಿ ಎರಡಕ್ಕೂ you ಎಂಬ ಪದ ಬಳಕೆಯಾಗುತ್ತದೆ.
  •  ನೇಶನ್ ಎಂಬ ಪದಕ್ಕೆ ಬಾರತದ ನುಡಿಗಳಲ್ಲಿ ಸಾಟಿ ಪದವಿಲ್ಲ ಎಂದು ಟ್ಯಾಗೋರ್ ಹೇಳಿದ್ದರು. ತೆಲುಗಿನಲ್ಲಿ ರಾಜ್ಯಕ್ಕೆ ರಾಶ್ಟ್ರ ಎನ್ನುತ್ತಾರೆ. (ತೆಲಂಗಾಣ ರಾಶ್ಟ್ರ ಸಮಿತಿ ನೆನಪಿಸಿಕೊಳ್ಳಿ).
  • ತಮಿಳಿನಲ್ಲಿ ತಿಂಡಿ ಆಯ್ತ ಊಟ ಆಯ್ತ ಕಾಪಿ/ಟೀ ಆಯ್ತ ಎಲ್ಲಕ್ಕೂ ಸಾಪ್ಪಡಿಯಾ ಎಂದೇ ಹೇಳುತ್ತಾರೆ.

ಲೇರಾರವರ ಎಣಿಕೆಗೆ ಎದುರುನುಡಿ
ಆದರೆ ಮೇಲಿನ ಎತ್ತುಗೆಗಳು ಲೇರಾರವರ ವಾದದ ಹಾಗೆ ನುಡಿಯು ಉನ್ನಿಕೆಯ ಮೇಲೆ ಒತ್ತು ಬೀರುತ್ತದೆ ಎಂದು ದ್ರುಡವಾದ ಅರಿಮೆಯ ನೆಲೆಗಟ್ಟಿನಿಂದ ಹೇಳುವುದಿಲ್ಲ. ಅದಕ್ಕಾಗಿಯೇ ಲೇರಾರವರ ಈ ಅರಕೆಗೆ ಎದುರುನುಡಿಗಳು ಸಾಕಶ್ಟು ಬಂದಿವೆ. ನುಡಿ ಎಂದರೆ ಏನು ಎಂಬುದೇ ನಾವು ಮೊದಲು ಹಾಕಿಕೊಳ್ಳಬೇಕಾದ ಕೇಳ್ವಿ.

ನುಡಿ ಎಂದೊಡನೆ ಬರುವ ಹೊಳಹುಗಳು ಸಾಕಶ್ಟಿವೆ – ಮಾತು, ಪದ, ಪದನೆರಕೆ, ಬರಹ, ಬರಿಗೆ, ಸೊಲ್ಲರಿಮೆ, ಸೊಲ್ಲಿಟ್ಟಳ (syntax) ಮುಂತಾದವು. ಲೇರಾರವರ ಎಣಿಕೆಗಳನ್ನು ಟೀಕೆ ಮಾಡುವವರ ಪ್ರಕಾರ ಲೇರಾರವರು ಬರಿಯ ಪದಗಳು ಮತ್ತು ಮಾತನ್ನು ಲೆಕ್ಕಕ್ಕೆ ತೆಗೆದುಕೊಂಡು ಈ ತೀರ‍್ಮಾನಕ್ಕೆ ಬಂದಿದ್ದಾರೆ. ಲೇರಾರವರು ಪದಗಳು ಮತ್ತು ಮಾತುಗಳನ್ನು ಹೆಚ್ಚಾಗಿ ತೆಗೆದುಕೊಂಡಿರುವ ಕಾರಣ ಅವುಗಳು ನಡೆ-ನುಡಿಯ ಮೇಲೆ ಒತ್ತು ಬೀರುವುದು ಏನು ಸೋಜಿಗವೆನಿಸುವುದಿಲ್ಲ.

ಎಲ್ಲಾ ನುಡಿಗಳಿಗೂ ಅದರದೇ ಆದ ಕೆಲವು ವಿಶೇಶ ಪದಗಳು ಇರುವುದು ಹೊಸ ವಿಚಾರವೇನಲ್ಲ ಎಂಬುದು ಈ ಕಡೆಯವರ ವಾದ. ಆದರೆ ದಿಟವಾಗಲೂ ಒಂದು ನುಡಿಯ ಸೊಲ್ಲರಿಮೆಯೋ ಇಲ್ಲವೇ ಸೊಲ್ಲಿಟ್ಟಳವೋ ಆ ನುಡಿ-ಗುಂಪಿನ ಮಂದಿ ತಮ್ಮ ಹೊರಗಿನ ಸುತ್ತ-ಮುತ್ತವನ್ನು ನೋಡುವ ಬಗೆಯ ಮೇಲೆಯೇ ಒತ್ತು ಬೀರುತ್ತದೆಯೇ ಎಂಬುದು ಅರಿಮೆಯ ನೆಲೆಗಟ್ಟಿನಿಂದ ಲೇರಾರವರು ತೋರಿಸಲಾಗುತ್ತಿಲ್ಲ ಎಂಬುದು ಇವರುಗಳ ಅನಿಸಿಕೆ.

ಆದರೆ ಪದಗಳು ಮತ್ತು ನುಡಿಯನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ ಹೆಚ್ಚಿನವರಿಗೆ ನುಡಿಯು ಉನ್ನಿಕೆಯ ಮೇಲೆ ಒತ್ತು ಬೀರುತ್ತದೆ ಎಂಬುದು ಕೂಡಲೆ ಸರಿ ಎನಿಸಬಹುದು. ಇನ್ನೂ ಈ ವಿಚಾರವಾಗಿ ಸಾಕಶ್ಟು ಅರಕೆ ಆಗಬೇಕಿದೆ ಎಂದಶ್ಟೇ ಹೇಳಬಹುದು. ನೀವೇನು ಹೇಳುತ್ತೀರಿ ?

ಪದಗಳು ಮತ್ತು ಅವುಗಳ ಹುರುಳು:
ಉನ್ನಿಸು – think ; ಉನ್ನಿಕೆ/ಆಲೋಚನೆ – thinking/thought; ಹೊಳಹುಬದಿ – ideology; ಹೊರನೋಟ – worldview; ಅರಿವೆಚ್ಚರ(knowledge and awareness)/ಅರಿವೊಣರು(knowledge and perception)/ಅರಿವುಬಗ್ಯೆ(knowledge and thinking) – cognition; ತೋಚಿಕೆ – imagination; ನಡೆ-ನುಡಿ – culture; ಒಬ್ಬಗೆಯ ಸೊಲ್ಲರಿಮೆ – universal grammar; ಸಲುವು – reasoning; ಹುರುಳಿಸಿಕೆ – conceptualization; ಬಗೆಯರಿಮೆ – psychology; ಒಡ-ಮೇಲ್ಕಲಿಸುಗ – associate professor; ಅಂಕೆಗಾರ – moderator; ಕಲಿಕೆವೀಡು – university; ಅರಿವಿನೆಚ್ಚರದ ಅಳವು – cognitive ability; ತಾಣ ಮತ್ತು ಕಾಲ – space and time; ಸುಳಿವು – signal; ಎಡೆಬಿಡದೆ – continuous; ಸೊಲ್ಲಿಟ್ಟಳ – syntax;

ಹೆಚ್ಚಿನ ತಿಳಿವಿಗೆ:

1. Lost in Translation by Lera Boroditsky

2. How the Languages We Speak Shape the Ways We Think by Lera Boroditsky.(Audio)

3. The Economist Language debate: Lera Boroditsky and Mark Liberman

4. How Language shapes thought by Alice Gaby and Lera Boroditsky (Audio)

5. How languages shapes thought by Lera Boroditsky; Scientific American (Cognitive Psychology); February 2011

6. Dreaming in different tongues: Languages and the way we think; UC Berkeley (Video)

7. How Language shapes thought; Open Source Temple (Video)

8. Reply to Boroditsky by Russell G. Schuh

(ತಿಟ್ಟಸೆಲೆ: huffingtonpost.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks