ಮುಂಬಯಿಯ ಆಡುನುಡಿ ಕನ್ನಡ!

ಸಂದೀಪ್ ಕಂಬಿ.

bombay city

ಹಿಂದಿನ ಬರಹವೊಂದರಲ್ಲಿ ಕನ್ನಡ ನಾಡಿನ ಮೂಲ ಮಹಾರಾಶ್ಟ್ರದ ಬಡಗಣದಲ್ಲಿರುವ ಕಾನದೇಶ ಮತ್ತು ನಾಸಿಕ ಜಿಲ್ಲೆಗಳಲ್ಲಿ ಹುಡುಕಬಹುದು ಎಂಬುದನ್ನು ನೋಡಿರುವೆವು. ಅಲ್ಲಿನ ನಡೆ, ನುಡಿ, ಮತ್ತು ಊರ ಹೆಸರುಗಳಲ್ಲಿ ಇದರ ಕುರುಹುಗಳನ್ನು ಕಾಣಬಹುದು. ಹಾಗೆಯೇ ಮಹಾರಾಶ್ಟ್ರ ರಾಜ್ಯದ ನೆಲೆವೀಡಾದ ಮುಂಬಯಿ ಪಟ್ಟಣವೂ ಕನ್ನಡಮಯವಾಗಿತ್ತು ಎಂಬುದಕ್ಕೆ ಹಲವು ಕುರುಹುಗಳು ಸಿಗುತ್ತವೆ.

A code of laws was also published in 1670, no trace of which is now extant; it is noteworthy, however, that it was ordered to be translated into Portuguese and Kanarese. To us, the prominence given to Kanarese appears at first curious, but can be explained perhaps by the fact that the early population of these islands was to a large extent of Southern or Dravidian origin, that Parsi was hardly known in Bombay and that the bulk of our Marathi speaking inhabitants immigrated only after the tolerant character of the British rule had been more fully noised abroad.

ಮೇಲಿನ ಸಾಲುಗಳು 1902ರಲ್ಲಿ ಬೆಳಕು ಕಂಡ ಎಸ್. ಎಮ್. ಎಡ್ವರ‍್ಡ್ಸ್ ಎಂಬಾತನ “Rise of Bombay – A Retrospect” ಎಂಬ ಹೊತ್ತಗೆಯಿಂದ ತೆಗೆದುಕೊಂಡವು. 1534ರಲ್ಲಿ ಮುಂಬಯಿ ಪೋರ್‍ಚುಗೀಸರ ಕಯ್ ಸೇರಿತ್ತು. 1665ರಲ್ಲಿ ಪೋರ್‍ಚುಗೀಸರ ದೊರೆ ತನ್ನ ಅಳಿಯನಾದ ಅಂದಿನ ಇಂಗ್ಲೆಂಡಿನ ರಾಜಕುಮಾರನಿಗೆ ಅದನ್ನು ಉಡುಗೊರೆಯಾಗಿ ಕೊಟ್ಟನಂತೆ. ಮುಂದೆ 1670ರಲ್ಲಿ ಇಂಗ್ಲೀಶಿನಲ್ಲಿದ್ದ ಕಟ್ಟಲೆಗಳನ್ನು ಎರಡು ನುಡಿಗಳಿಗೆ ತರಲಾಗಿತ್ತಂತೆ, ಅವೇ ಪೋರ್‍ಚುಗೀಸ್ ಮತ್ತು ಕನ್ನಡ (Kanarese). ಇದರ ಬಗ್ಗೆಯೇ ಬರೆಯುತ್ತ ಎಡ್ವರ್‍ಡ್ಸ್, ಕನ್ನಡದಲ್ಲಿ ನುಡಿಮಾರಿಸಿದ್ದು ಸೋಜಿಗವೆನಿಸಿದರು ಅಂದು ಮುಂಬಯಿಯಲ್ಲಿ ನೆಲೆಸಿದ್ದವರು ಕನ್ನಡಿಗರೇ ಆಗಿದ್ದು ಮುಂದೆ ಬ್ರಿಟೀಶ್ ಆಡಳಿತ ನೆರೆಯಾಗಿ ಏರ್‍ಪಟ್ಟ ಬಳಿಕ ಮರಾಟಿ ಮಾತಾಡುವ ಮಂದಿ ವಲಸೆ ಬಂದರು ಎಂಬ ಕುತೂಹಲಕಾರಿಯಾದ ಮಾಹಿತಿಯನ್ನು ನೀಡುತ್ತಾನೆ.

ಇಲ್ಲಿನ ಮೂಲ ನೆಲಸುಗರು ಮೀನುಗಾರಿಕೆಯ ಕಸುಬಿನ ಕೋಳಿ ಜನಾಂಗದವರು. ಇಂದು, ನೆರೆಯಲ್ಲಿ ಬಂದು ನೆಲೆಸಿದ ನುಡಿ ಸಮುದಾಯಗಳ ಪ್ರಬಾವದ ಕಾರಣ, ಇವರು ಮರಾಟಿ ಮತ್ತು ಕೊಂಕಣಿ ಮಾತಾಡುವವರಾದರೂ ಮೊದಲು ಕನ್ನಡವೇ ಮಾತಾಡುತ್ತಿದ್ದರೆಂದು ಹಲವರ ವಾದ. ಹಾಗಾಗಿ ಇವರು ಇಂದು ಬಳಸುವ ಕೊಂಕಣಿ/ ಮರಾಟಿ ನುಡಿಗಳಲ್ಲಿ ಹಲವು ಕನ್ನಡ ಬೇರಿನ ಪದಗಳನ್ನು ಕಾಣಬಹುದು ಎಂದು ಎಂ. ಚಿದಾನಂದ ಮೂರ್‍ತಿಯವರು ವಾದಿಸುತ್ತಾರೆ.  ಇವರು ಮುಂಬಾ ದೇವಿಯನ್ನು ಪೂಜಿಸುತ್ತಾರೆ. ಇದೇ ದೇವಿಯಿಂದ ಈ ಪಟ್ಟಣಕ್ಕೆ ‘ಮುಂಬಯಿ’ ಎಂದು ಹೆಸರು ಬಂದಿತೆಂಬುದು  ಈಗ ಎಲ್ಲರಿಗೂ ತಿಳಿದಿರುವ ವಿಶಯ.

ಮಂಬಯಿಯಲ್ಲಿರುವ ಹಲವು ಹಳೆಯ ಊರು-ಪ್ರದೇಶಗಳ ಹೆಸರುಗಳು ಮೂಲವಾಗಿ ಕನ್ನಡದವು ಎಂದು ಸಾದಿಸಬಹುದು. ಮಾಹಿಮ್ ಎಂಬ ಪ್ರದೇಶಕ್ಕೆ ಇದ್ದ ಮೊದಲ ಹೆಸರು ಮಹಿಮಾವತಿ ಎಂದು. ಚಾಲುಕ್ಯ ಮನೆತನದ ಅರಸನಾದ ಬೀಮದೇವನು ಬರಡಾಗಿದ್ದ ಆ ಜಾಗದಲ್ಲಿ ಒಂದು ಪಟ್ಟಣವನ್ನು ಕಟ್ಟಿ ಅದಕ್ಕೆ ಈ ಹೆಸರನ್ನಿಟ್ಟನಂತೆ. ಆದರೆ ದೇವಗಿರಿಯ ಸೇವುಣರ (ಇವರೂ ಕನ್ನಡ ಅರಸರೇ) ಸಾಮಂತನಾಗಿದ್ದ ಇವನು ಇಲ್ಲಿಗೆ ಬರುವ ಮೊದಲು ಈ ಪ್ರದೇಶಕ್ಕೆ ಇದ್ದ ಹೆಸರು ‘ಬರಡ್ ಬೇಟ್’. ಇಲ್ಲಿ ‘ಬರಡ್’ ಎಂಬುದು ಕನ್ನಡದ ಬರಡು ಎಂಬುದು ತಿಳಿಯಾಗಿದೆ. ಹಾಗೆಯೇ ಬೇಟ್ ಎಂಬುದು ಕನ್ನಡದ ಬೆಟ್ಟವನ್ನು ನೆನಪಿಸುತ್ತದೆ. ಅವನ ಆಳ್ವಿಕೆಯಲ್ಲಿದ್ದ ಬ್ರಾಹ್ಮಣರ ಹಳ್ಳಿಗಳನ್ನು ಬಮ್ಮೋಳಿ (ಬ್ರಾಹ್ಮಣ ಹಳ್ಳಿ) ಎಂದು ಕರೆಯಲಾಗುತ್ತಿತ್ತು.

ಮಲಬಾರ್ ಹಿಲ್ಸ್ ನ ತುದಿಯಲ್ಲಿ ವಿಚಿತ್ರವಾದ ದೊಗರೆಯಿರುವ ಒಂದು ಕಲ್ಲಿದೆ. ಇದಕ್ಕೆ ‘ಶ್ರೀ ಗುಂಡಿ’ ಎಂಬ ಹೆಸರಿದೆ. ಗುಂಡಿ ಎಂಬುದು ಕನ್ನಡ ನುಡಿಯ ಪದವೇ ಎಂದು ಎಸ್. ಎಮ್. ಎಡ್ವರ್‍ಡ್ಸ್ ತಮ್ಮ ಅನಿಸಿಕೆ ತಿಳಿಸುತ್ತಾರೆ. ಅಲ್ಲದೆ ಈ ‘ಮಲಬಾರ್ ಹಿಲ್ಸ್’ ಎಂಬ ಹೆಸರೂ ಕುತೂಹಲಕಾರಿಯಾದುದೇ. ಇಂದು, ಅಲ್ಲಿ ವಲಸೆ ಬಂದು ನೆಲಸಿದ ಮಲಯಾಳಿ ಮೂಲದ ವ್ಯಾಪಾರಿ ಮನೆತನದಿಂದ ಈ ಹೆಸರು ಬಂದಿದೆ ಎಂದು ನಂಬಲಾಗಿದೆಯಾದರೂ ಚಿದಾನಂದ ಮೂರ್‍ತಿಗಳು ಇಲ್ಲಿ ಮುಂಬಯಿ ಕಟ್ಟುವ ಮೊದಲೇ ಮೂಲ ನೆಲಸಿಗರಾದ ‘ಮಲಬರ್’ (ಮಲೆಪರು/ ಮಲಬರು) ಎಂಬ ಜನಾಂಗದಿಂದ ಬಂದಿರಬಹುದು ಎಂದು ಹೇಳುತ್ತಾರೆ. ಈ ಜನಾಂಗದ ಬಗ್ಗೆ 1909ರ ಬಾಂಬೆ ಗೆಜಟಿಯರ್ ನಲ್ಲಿ ಮಾಹಿತಿಯೂ ಇದೆ. ಇವರ ಹೆಸರಿನಲ್ಲಿ ಇರುವ ‘ಮಲೆ’ಯೇ ಹೇಳುವಂತೆ ಇವರು ಗುಡ್ಡಗಾಡಿನ ಜನರಾಗಿದ್ದು ಕನ್ನಡ ಮೂಲದವರೆಂದು ಚಿದಾನಂದ ಮೂರ್‍ತಿಗಳ ವಾದ.

ಹಿಂದೆ, ಅಂದರೆ 1737ರಲ್ಲಿ, ಬ್ರಿಟೀಶರು ಕಟ್ಟಿಸಿದ ಒಂದು ಕೋಟೆಯ ವಿಚಾರವಾಗಿ ಹೆಸರಿಸಿರುವ ಒಂದು ಪದ ‘ಕೋಟೆ ಬಹರ್’ ಇಲ್ಲವೇ ‘ಬರ್ ಕೋಟೆ’. ಇಲ್ಲಿ ಕೋಟೆ ಎಂಬುದು ಕನ್ನಡ ಪದ. ಬೋರಿವಲ್ಲಿ, ಕಾಂಡಿವಲ್ಲಿ, ಡೊಂಬಿವಲ್ಲಿ, ಮುಂತಾದ ಪದಗಳಲ್ಲಿ ಹಳ್ಳಿ (ಪಳ್ಳಿ) ಎಂಬ ಹಿನ್ನೊಟ್ಟು ಇರುವುದು ತಿಳಿಯಾಗಿ ಕಾಣಿಸುತ್ತದೆ. ಕನ್ನೇರಿ, ಕಂಡೇರಿ ಎಂಬವುಗಳಲ್ಲಿ ‘ಏರಿ’ ಎನ್ನುವ ಒಟ್ಟು ಮತ್ತು ಮರೋಳ್ ಎಂಬಲ್ಲಿ ಪೋಳಲ್ (ಹೊಳಲ್/ ಹೊಳಲು) ಎಂಬ ಒಟ್ಟುಗಳಿವೆ. ಈ ಪ್ರದೇಶಗಳೆಲ್ಲ ಇರುವುದು ಹಳೆಯ ಮುಂಬಾ ದೇವಿ ಗುಡಿಯಿರುವ ಸುತ್ತ ಮುತ್ತಲಲ್ಲಿ.

ಹಿಂದೆ ಮುಂಬಯಿ ಪ್ರದೇಶವನ್ನು ಆಳಿದ ಅರಸರೆಂದರೆ ಚಾಲುಕ್ಯರು, ರಾಶ್ಟ್ರಕೂಟರು, ಶಿಲಾಹಾರರು, ಮತ್ತು ದೇವಗಿರಿಯ ಸೇವುಣರು. ಇವರೆಲ್ಲ ಕನ್ನಡ ಮೂಲದವರೇ. ಇಂತಹ ಎಲ್ಲ ಕುರುಹುಗಳನ್ನು ಗಮನಿಸಿ ಚಿದಾನಂದ ಮೂರ್‍ತಿಗಳು, ಎಶ್ಟು ಹಿಂದೆ ಎಂದು ಸರಿಯಾಗಿ ಹೇಳಲಾಗದಾದರೂ, ಹಿಂದೆ ಒಂದು ಕಾಲದಲ್ಲಿ ಕನ್ನಡವು ಮುಂಬಯಿಯ ಆಡುನುಡಿಯಾಗಿತ್ತೆಂಬುದರಲ್ಲಿ ಅನುಮಾನವಿಲ್ಲ ಎಂದು ಹೇಳುತ್ತಾರೆ.

(ಮಾಹಿತಿ ಸೆಲೆ: Rise of Bombay – A Retrospect
                          ಬಾಶಿಕ ಬ್ರುಹತ್ ಕರ್‍ನಾಟಕ – ನೀಲಗಿರಿಯಿಂದ ನಾಸಿಕ್ ವರೆಗೆ, ಡಾ. ಎಂ. ಚಿದಾನಂದ ಮೂರ್‍ತಿ)
(ಚಿತ್ರ ಸೆಲೆ: myopera.com)

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *