ನನ್ನ ಪ್ರೇರಕ ಶಕ್ತಿ ಅಜ್ಜ

– ಚಂದ್ರಗೌಡ ಕುಲಕರ‍್ಣಿ.

07_Dosti

ಅಮ್ಮ, ಗಾಡ ನಿದ್ದೆಯಲ್ಲಿದ್ದ ನನ್ನನ್ನು ಎಬ್ಬಿಸಿ ಕಯ್ಹಿಡಿದು ಜಗ್ಗಿ ಎಳೆದುಕೊಂಡು ತಲಬಾಗಿಲತ್ತ ಅವಸರವಸರ ಹೆಜ್ಜೆ ಇಟ್ಟಳು. ಗಡಿಬಿಡಿಯಿಂದ ಅಗಳಿ ತೆಗೆದು ಕತ್ತಲಲ್ಲಿ ಮುಂದುವರೆದಳು. “ ಏ, ಸಿದ್ದನಗವ್ಡ .. ಏ ಸಿದ್ದನಗವ್ಡ.. ಲಗೂ ಏಳು, ಬಾಗಿಲ ತಗಿ..” ಕೂಗನ್ನು ಕೇಳಿ ಅಡಬರಿಸಿ ಬಂದು ಬಾಗಿಲ ತೆಗೆದ ಸಿದ್ದನಗವ್ಡ ಮಾವನಿಗೆ “ನಿಮ್ಮ ಕಾಕಾ ರಕ್ತ ವಾಂತಿ ಮಾಡಿಕೊಂಡಾನ..ಬಾಳ ತ್ರಾಸ ಮಾಡಿಕೊಳ್ಳಾಕ ಹತ್ಯಾನ “ ಎಂದವಳೇ ಮನೆಯತ್ತ ಹೆಜ್ಜೆ ಹಾಕಿದಳು. ಮಾವ ಅಮ್ಮನಿಗಿಂತ ಮುಂದೆಯೇ ನಡೆದ ಹಿಂದೆ ಅಮ್ಮ ನಾನು ಕತ್ತಲಲ್ಲಿ ಮನೆ ಸೇರಿದೆವು. ನಡುರಾತ್ರಿಯಲ್ಲಿ  ಅಜ್ಜನ ಸ್ತಿತಿಯನ್ನು ಕಂಡು ಸಿದ್ದನಗವ್ಡ ಮಾವನಿಗೂ ಗಾಬರಿಯಾಯಿತು. ವಾಂತಿ ಮಾಡಿಕೊಂಡು ಸುಸ್ತಾಗಿದ್ದ ಅಜ್ಜ ಹಾಸಿಗೆಯಲ್ಲಿ ಅಸ್ತವ್ಯಸ್ತವಾಗಿ ಮಲಗಿದ್ದ. ಉಸಿರಾಟ ಬಿಟ್ಟರೆ ಯಾವ ಚಲನವಲನವೂ ಇರಲಿಲ್ಲ. ಅಮ್ಮ , ವಾಂತಿ   ಮಾಡಿಕೊಂಡದ್ದನ್ನು ತೋರಿಸಿದಳು. ಪುಟ್ಟಿಯಲ್ಲಿದ್ದ ಆ ಹೊಲಸನ್ನು ತಿಪ್ಪಿಗೆ ಚಲ್ಲಲು ಹೊರಟಳು. ಮಾವ ತಾನೇ ಚಲ್ಲಿ ಬಂದ.

ದೀಪದ ಬೆಳಕಿನಲ್ಲಿ ಅಜ್ಜ, ವಾಂತಿ, ಹಾಸಿಗೆ ಅಸ್ಪಶ್ಟವಾಗಿ ಕಂಡವು. ರಾತ್ರಿ ಎರಡು ಗಂಟೆ ಮೀರಿರಬಹುದು. ಬರಪೂರ ನಿದ್ದೆ ಸಮಯ, ಮಾವ ವಾಂತಿ ಚಲ್ಲಿ ಬರುವಶ್ಟರಲ್ಲಿ  ನನಗೆ ಮಂಪರು ಕವಿದಿತ್ತು. ಅಜ್ಜನ ದೋತರ ಹೊಲಸಾಗಿತ್ತು. ಅಜ್ಜನೆ ದೋತರ ಬದಲಾಯಿಸಲು ಹೇಳಿದನೊ ಅಮ್ಮ – ಮಾವ ಬದಲಾಯಿಸಬೇಕೆಂದು ನಿರ್‍ದರಿಸಿದರೊ ಗೊತ್ತಿಲ್ಲ. ಅಜ್ಜ ದನದ ಮನೆಯ  ಪಡಸಾಲೆಯಲ್ಲಿ, ಹಾಸಿದ ಹಾಸಿಗೆಯ ಮೇಲೆ ಅಮ್ಮನ ಆಸರೆ ಹಿಡಿದು  ಎದ್ದು ನಿಂತಿದ್ದ. ಮಾವ ಅಜ್ಜನಿಗೆ ದೋತರ ಉಡಿಸುತ್ತಿದ್ದ. ಸೊರಗಿ ಹೋದ ಅಜ್ಜನ ಶರೀರ ಅಲ್ಪ ಸ್ವಲ್ಪ ಕಂಡತಾಯ್ತು. ಮುಂದೇನಾಯ್ತು ಗೊತ್ತಿಲ್ಲ.

ಮರುದಿನ ಮುಂಜಾನೆ ಬನಹಟ್ಟಿಯ ತಮ್ಮನಗವ್ಡ ಡಾಕ್ಟರ್ ಮನೆಗೆ ಬಂದಂತೆ, ಹೊಯ್ದಾಡೊ  ಬಿಸಿನೀರಲ್ಲಿ ಸಿರೀಂಜ ಅದ್ದಿ, ಬಾಟಲಿಯಲ್ಲಿಯ ಅವ್ಶದ ಹೀರಿ ಅಜ್ಜನಿಗೆ ಇಂಜಕ್ಶನ್ ಮಾಡಿದಂತೆ ನೆನಪು. ಅದೇ ದಿನವೋ ಮತ್ತೊಂದು ದಿನವೋ ನಾಟಿ ವಯ್ದ್ಯ ಮಾಡುತ್ತಿದ್ದ, ಮೂರ್‍ತಿ ಶಿಲ್ಪಿಯೂ ಆಗಿದ್ದ ಬನಹಟ್ಟಿಯ ದ್ಯಾವನಗವ್ಡ ಅಜ್ಜನೂ ಬಂದಂತೆ ಅಸ್ಪಶ್ಟ ನೆನಪು.

ಅವ್ವ ಸತ್ತ ಮೇಲೆ ಪ್ರತಿದಿನ ಅಮ್ಮನ ಹತ್ತಿರವೇ ಮಲಗುತ್ತಿದ್ದ ನಾನು ಅಜ್ಜ ರಕ್ತ ವಾಂತಿ ಮಾಡಿಕೊಂಡ ದಿನದ ಅನಂತರ ಅಮ್ಮನ ಹತ್ತಿರ ಮಲಗಿದೆನೋ ಇಲ್ಲವೋ ಗೊತ್ತಿಲ್ಲ. ಅಜ್ಜನಿಗೆ ಮತ್ಯಾವ ರೀತಿಯಲ್ಲಿ ಉಪಚರಿಸಿದರೆಂಬುದೂ ನೆನಪಿಲ್ಲ.

“ಅಜ್ಜಾ, ಇನ್ನ ನಮ್ಮನ್ಯಾರ ಜ್ವಾಪಾನ ಮಾಡಾವ್ರು.. ನೀ  ಬಿಟ್ಟ ಹ್ವಾದೆಲ್ಲಾ..” ಎಂದು ಶಾಂತಕ್ಕ ಅತ್ತದ್ದು, ಅಮ್ಮ ಅಳುವ ಅಕ್ಕನಿಗೆ ತೆಕ್ಕೆ ಬಿದ್ದು – “ನಾನು ಜ್ವಾಪಾನ ಮಾಡತೀನಿ ” ..ಅಂದದ್ದು,  ಸೋದರ ಮಾವ ಶಂಕರಗವ್ಡ ಗೋಳಾಡಿ ಅಳುತ್ತ ಅಜ್ಜನ ಹೆಣದ ಮೇಲೆ ಬೀಳಲು ಬರುತ್ತಿದ್ದದ್ದು, ಕಲ್ಲಕ್ಕ- ಗಂಗಕ್ಕ ಇಬ್ಬರೂ ಅಳಲು ದ್ವನಿ ಬರದೆ  ಪರಿತಪಿಸುತ್ತಿದ್ದದ್ದು, ಒಳಗಿನಿಂದ ಅಜ್ಜನ ಹೆಣವನ್ನು ಎತ್ತಿಕೊಂಡು ಬಂದು ವಿಮಾನದಲ್ಲಿಟ್ಟದ್ದು…ಈ ಎಲ್ಲ ದ್ರುಶ್ಯ ಮಾತು ಗದ್ದಲ ಇದೇ ಈಗ ನಡೆದಶ್ಟು ಸ್ಪುಟವಾಗಿ ಚಿತ್ರಿತವಾಗಿದೆ.

“ಹುಲ್ಲೂರ ಮಂದಿ ಬಂದ್ರು”, “ಗದಗದವ್ರು ಬಂದ್ರು” “ಎಲ್ಲಾರೂ ಬಂದಂಗಾತು ಊರ ದಯ್ವದ ಪೂಜೆ ಮಾಡರಿ”… ಎಂದು ಊರವರು ಆಡುತ್ತಿದ್ದ ಮಾತುಗಳು ಬಾರಿಸುತ್ತಿದ್ದ ಹಲಗೆ, ಕಣಿ, ಬಜನಾ ಪದ ಈಗಲೂ ಕಿವಿಯಲ್ಲಿ ಗುಂಯ್ ಗುಡುತ್ತವೆ. ಕಣ್ಮುಂದೆ ಅಂದಿನ ಜೀವಂತ ದ್ರುಶ್ಯವನ್ನು ತಂದು ನಿಲ್ಲಿಸುತ್ತವೆ. ಕಯ್ಯಲ್ಲಿ ಹತಿಯಾರ ಹಿಡಿದು ಬರುತ್ತಿರುವ ಹಳಬರು, ಹೂಹಾರ  ಕಾಯಿ ಬಜನಾ ಮೇಳ ಸಹಿತ ಬಂದ ಬಂದುಬಾಂದವರು, ಒತ್ತರಿಸಿ ಬಂದ ದುಕ್ಕವನ್ನು ತಡೆ ಹಿಡಿದು ಅವಸರದ ಹೆಜ್ಜೆ ಹಾಕುವ ಹೆಣ್ಣು ಮಕ್ಕಳು, ಕಲ್ಮೇಶ್ವರ ಗುಡಿಮುಂದಿನಿಂದ ಮನೆವರೆಗಿನ ಈ ಚಿತ್ರಗಳು ಮತ್ತೆ ಮತ್ತೆ ಮೂಡಿಬಂದು  ಮನದಲ್ಲಿ ಅಜ್ಜನ ನೆನಪನ್ನು ಚಿರಸ್ತಾಯಿಗೊಳಿಸಿವೆ.  ನಾನು ಮೂರ್‍ನಾಲ್ಕು ವರ್‍ಶದವನಿದ್ದಾಗ ಮೂಡಿದ ಈ ದ್ರುಶ್ಯಾವಳಿ ಇಂದಿಗೂ ಮಾಸಿಲ್ಲ.

ನನ್ನ ನೆನಪಿನ ಕೋಶದಲ್ಲಿರುವ ಅಜ್ಜನ ಚಿತ್ರಗಳು ಕೆಲವೇ ಕೆಲವು. ಆದರೆ ಅವು ನನ್ನ ಬದುಕಿನುದ್ದಕ್ಕೂ ನನ್ನೊಂದಿಗಿರುವ ನಿದಿಗಳಾಗಿವೆ. ಅವ್ವ ಸತ್ತಾಗ ನಾನು ಈ ಅಜ್ಜನ ತೊಡೆಯ ಮೇಲೆ ಕುಳಿತು ಸುರಕ್ಶಿತ ಬಾವವನ್ನು ಅನುಬವಿಸಿದ್ದೆ. ಪಡಸಾಲೆಯಲ್ಲಿ ಕೂಡ್ರಿಸಿದ ಅವ್ವನ ಶವದ ಮುಂದೆ ಅಮ್ಮ, ಕಲ್ಲಕ್ಕ, ಗಂಗಕ್ಕ ಅಳುತ್ತಿದ್ದುದನ್ನು ನೋಡಿ ಕಂಗಾಲಾದ ನಾನು ಈ ಅಜ್ಜನ ತೊಡೆಯ ಮೇಲೆ ಕುಳಿತು ಬೆಚ್ಚಗಾಗಿದ್ದೆ.

ಹನಮಂತ ದೇವರ ಗುಡಿಯಲ್ಲಿ ಪಗಡಿಯಾಡುತ್ತಿದ್ದಾಗ, ಅಜ್ಜನಿಗೆ ಕವಡಿಹಾಕುವ ಸರತಿ ಬಂದಾಗ ಅವನ ಬದಲಾಗಿ ಹಟ ಮಾಡಿ ನಾನೆ ಕವಡಿ ಹಾಕಿದ್ದು ನೆನೆಪಿದೆ. ಆಟದ ಕವಡಿಯನ್ನು ಬಿಟ್ಟು ಬೇರೆ ಕವಡಿಯನ್ನು ನನಗೆ ಆಡಲು ಕೊಟ್ಟಿದ್ದರೂ ಅವುಗಳನ್ನು ತೆಗೆದುಕೊಂಡು ಆಡದೆ ಅಜ್ಜನನ್ನು ಕಾಡುತ್ತ ಕವಡಿಯನ್ನು ನಾನೇ ಹಾಕುತ್ತಿದ್ದೆ. ನಾನು ಕವಡಿ ಹಾಕಿದ್ದನ್ನು ಆಟಕ್ಕೆ ಪರಿಗಣಿಸುತ್ತಿದ್ದರೊ ಇಲ್ಲವೊ ಗೊತ್ತಾಗುತ್ತಿರಲಿಲ್ಲ. ನಾನಂತೂ ಕವಡಿ ಹಾಕಿ ಸಂತೋಶಪಡುತ್ತಿದ್ದೆ.

ಗುಡಿ ಮದ್ಯದ ಅಂಕಣದಲ್ಲಿ ಹಾಸಂಗಿ ಹಾಸಿ  ನಡುವೆ ಬೆಳಕಿಗಾಗಿ ಲ್ಯಾಂಪಿಟ್ಟು- ಎರಡು ಕಡೆ ಕಾಯಿಗಳನ್ನು ಹಚ್ಚಿ , ದಸ್ಯಾ, ಪಂಸವೀಸ್, ದೋನಿ ,ಚಾರಿ… ಎಂದು  ಎಣಿಸುತ್ತ- ದೋ ದಸ್ಯಾನ ಕಟ್ಟಿ,..ಹಣಗಟ್ಟಿಗಳಿಗೆ ಕಾಯಿ ನಡೆಸುತ್ತಿದ್ದುದನ್ನು ನೋಡ ನೋಡುತ್ತಿದ್ದಂತೆಯೆ ನಿದ್ದೆಗೆ ಜಾರುತ್ತಿದ್ದೆ. ದೀಪಾವಳಿ ಸಮಯದ ಆ ಚಳಿಯಲ್ಲಿ ಕೆಳಗೆ ಹಾಸಿದ ಕಂಬಳಿ ಕಾವು, ಅಜ್ಜನ ಬೆಚ್ಚನೆಯ ತೊಡೆ ಆಶ್ರಯ ಗೊತ್ತಿಲ್ಲದೆಯೆ ನಿದ್ದೆ ತರಿಸುತ್ತಿದ್ದವು. ಪಗಡಿ ಆಡಿದ ಗುಂಗಿನಲ್ಲಿಯೇ ಮಲಗುತ್ತಿದ್ದರಿಂದ ನಿದ್ದೆ ತುಂಬ ಪಗಡೆಕಾಯಿ, ಹಣತ,ಕಡತ … ಇವೆ ಓಡಾಡುತ್ತಿದ್ದವು.

ಗಂಡಗಚ್ಚಿ ಹಾಕಿ ಮಯ್ಮೇಲಿನ ಬೆವರನ್ನು ಲೆಕ್ಕಿಸದೇ ಹುರುಪಿನಿಂದ ಕಡಿದು ಹಾಕಿದ ಮಣ್ಣನ್ನು ಬುಟ್ಟಿಯಲ್ಲಿ  ತುಂಬುವ ಇಪ್ಪತ್ತು ಮೊವತ್ತು ಜನರ ಗುಂಪು, ತುಂಬಿದ ಬುಟ್ಟಿಯನ್ನು ಹೊತ್ತು ಏರಿ ಹತ್ತಿ  ಇನ್ನೊಬ್ಬರ ತಲೆಗೆ ಚಕ್ಕನೆ ವರ್‍ಗಾಯಿಸಿ ಮುಂದಿನ ಬುಟ್ಟಿಗಾಗಿ ಕಾಯುವ ಹೆಣ್ಣುಮಕ್ಕಳು, ತಾಸು ತಾಸಿಗೆ ಗುಡ್ಡದಂತೆ ಎತ್ತರವಾಗುತ್ತಿದ್ದ  ಕೆರೆಯ ಒಡ್ಡು, ತಿರುಗಾಡುತ್ತ “ಈ ಪಡ ಮುಗಸ್ರಿ”, “ಮಣ್ಣ ಇನ್ನೊಂದ ಸ್ವಲ್ಪ ಒತ್ತಿ ತುಂಬರಿ”…ಎಂದು ಸಲಹೆ ನೀಡುತ್ತಿದ್ದ ಅಜ್ಜ , ಅವನ ಜೊತೆಗೆ ಇರುತ್ತಿದ್ದ ಸಂಗಪ್ಪಜ್ಜ…. ಎಲ್ಲ ಚಿತ್ರಗಳೂ ಮಾಸದೆ ಉಳಿದಿವೆ- ಚಿತ್ತಪಟದಲ್ಲಿ. ಕೆರೆ ಒಂಡಿ ಏರಿ , ಅಜ್ಜನ ಜೊತೆ  ತಿರುಗಾಡುತ್ತ ಬಿಸಿಲು ಹೆಚ್ಚಾದಾಗ ಮರದ ನೆರಳಿಗೆ ಕೂತು ಕೊಡ ಬಾಗಿಸಿ ಯಾರೊ ತುಂಬಿಕೊಟ್ಟ ನೀರು ಕುಡಿದು ಅಜ್ಜನ ಹಿಂದೆಯೆ ಮನೆಗೆ  ಬಂದದ್ದು ನೆನೆಪಿದೆ.

ನಮ್ಮೂರ ಕೆರೆ ಕಡಿಸುವ ಸಂದರ್‍ಬದಲ್ಲಿ ಈಗಿನಂತೆ, ಟ್ರ್ಯಾಕ್ಟರ್, ಜೆಸಿಬಿ ಇಲ್ಲದ ಕಾಲದಲ್ಲಿ , ಬರಗಾಲ ಕಾಮಗಿರಿಯೆಂದು ನಡೆದ ಅಂದಿನ ಕೆಲಸವನ್ನು ಬೇರೆ ಬೇರೆ ಊರುಗಳಿಂದ ಬಂದು ಹುರುಪಿನಿಂದ ಕೆರೆ ಕಡಿದ ಕೆಲಸಗಾರರನ್ನು, ನಮ್ಮೂರಿನ ಕೆಲ ಪರಿಚಿತ ಗಂಡಸರು ಮತ್ತು ಹೆಣ್ಣುಮಕ್ಕಳ ಮುಕವನ್ನು ಇಂದಿಗೂ ಮರೆಯಲಾಗಿಲ್ಲ.

ಬಾಲ್ಯದಲ್ಲಿ ಬಹಳ ಹಟಮಾರಿಯಾಗಿದ್ದ ನಾನು ದಿನಕ್ಕೊಮ್ಮೆಯಾದರೂ ಸೆಟಗೊಂಡು ಅಮ್ಮನನ್ನು ಕಾಡುತ್ತಿದ್ದೆ. ಒಮ್ಮೆ ಸೆಟಗೊಂಡ ಸಂದರ್‍ಬದಲ್ಲಿ ಅಜ್ಜ ಕೊಟ್ಟ ಅಯ್ದರ ನೋಟನ್ನೆ ಹರಿದು ಹಾಕಿದ್ದೆ. ಅಜ್ಜ ಬಯ್ಯಲಿಲ್ಲ. ಹೊಡಿಯಲಿಲ್ಲ, ಸುಮ್ಮನೆ ನಕ್ಕುಬಿಟ್ಟ. ಅಮ್ಮ ಈ ಗಟನೆಯನ್ನು ಆಗಾಗ ನೆನೆಪಿಸುತ್ತಿದ್ದಳು. “ಅಯ್ದರ ನೋಟ ಹರಿದು ಹಾಕಿದ ಬಾಳ ಶ್ಯಾಣ್ಯಾ ಹುಡುಗ ಇವ” ಎಂದು  ಅಕ್ಕ ರುದ್ರಕ್ಕ ನನ್ನ ಅಜ್ನಾನದ ಕೆಲಸವನ್ನು ಹಾಸ್ಯಮಾಡಿ ನಗುತ್ತಿದ್ದಳು. ಗೆಳೆಯರ ಎದುರಿಗೆ ಅಪಮಾನ ಮಾಡುತ್ತಿದ್ದಳು.

ಇಂತಹದೇ ಇನ್ನೊಂದು ಸಂದರ್‍ಬ: ಸಾಯಂಕಾಲದ ಸಮಯ, ಯತಾರೀತಿ ಊಟಕ್ಕೊ ತಿನಿಸಿಗೊ ತಕರಾರು ತೆಗೆದು ಹೊರಗೆ ಬಂದೆ. ಕಯ್ಯಲ್ಲಿ ಬ್ಲೇಡ್ ಇತ್ತು. ಅಜ್ಜ ಕೆಲವೇ ದಿನದ ಹಿಂದೆ ಹೆಣೆಸಿದ ಹೊರಸದು. ಮನೆ ಗೋಡೆಗೆ ಹೊಂದಿಸಿ ನಿಲ್ಲಿಸಿದ್ದರು. ನಿಲ್ಲಿಸಿದ ಹೊರಸನ್ನು  ದಿನವೂ ಹಾಕಿಕೊಂಡು ಕೂಡ್ರುವಂತೆ ಕೂತೆ. ಕುತೂಹಲದಿಂದ ಮೂಲೆಯಿಂದ ಮೂಲೆಗೆ ಇರುವ ಹುರಿಗಳನ್ನು (ದಾರ) ಎಣಿಸಿದೆ, ಒಂದು ಕಡೆ ಹನ್ನೊಂದು ಇನ್ನೊಂದು ಕಡೆ ಏಳು ದಾರಗಳಿದ್ದವು. (ಈ ರೀತಿ ಏಳು ಹತ್ತು ಹೆಣಿಗೆಯ ಅಗತ್ಯಕ್ಕೆ ಬರುತ್ತವೆಯೊ ಇಲ್ಲವೆ ಯಾವುದಾದರೂ ಆಚರಣೆಯ ಸಂಕೇತವಾಗಿ ಬರುತ್ತವೆಯೊ ಗೊತ್ತಿಲ್ಲ. ಪಾಂಡವ ಕವ್ರವರ ಅಕ್ಶೋಹಿಣಿ ಸಯ್ನ್ಯದ ಪ್ರತೀಕವಿರಬಹುದೆ ಎಂಬುದು ನನ್ನ ಈಗಿನ ಅನುಮಾನ ) ಹೊರಸಿನ ಉಳಿದ ಬಾಗದಲ್ಲಿ ಮೂರು ಮೂರು ಎಳೆಯ ಚಿಕ್ಕ ಚಿಕ್ಕ ವಜ್ರಾಕ್ರುತಿಗಳಿದ್ದವು.ಎಣಿಸುವ ಆಟ ಆಡುತ್ತ ಆಡುತ್ತ ಆ ದಾರದ ಎಳೆಗಳ ಮೇಲೆ ಕಯ್ ಎಳೆದೆ. ಕಯ್ಯಲ್ಲಿಯ ಬ್ಲೇಡ್ ನಾಲ್ಕು ಎಳೆಗಳನ್ನು ಕತ್ತರಿಸಿಬಿಟ್ಟಿತ್ತು. ಒಮ್ಮೆಲೆ ಗಾಬರಿಯಾದೆ. ಹೆದರಿಕೆ ಬಂತು. ಅದೇ ಹೊತ್ತಿಗೆ ನನ್ನ ನ್ಯಾಯಕ್ಕೆ ಕಾರಣವಾಗಿದ್ದ ರುದ್ರಕ್ಕ ಹೂರಗೆ ಬಂದು ಹೊರಸಿನ ತುದಿಗೆ ಕೂತಳು.ಹರಿದ ಎಳೆಗಳ ಮೇಲೆ ಕೂತು ಮುಚ್ಚಲು ಪ್ರಯತ್ನಿಸಿದೆ. ಅಶ್ಟೊತ್ತಿಗೆ ಮಾವನೂ ಹೊರಗೆ ಬಂದ. ಎಳೆ ತುಂಡಾಗಿ ಜೋತು ಬಿದ್ದದ್ದನ್ನು ನೋಡಿ ಒಳಗೆ ಹೊಗಿ ಅಜ್ಜನಿಗೆ ಹೇಳಿದ. ಅಮ್ಮನೂ ಬಂದು ನೋಡಿದಳು. ಅಜ್ಜನೂ ನೋಡಿದ. ಮತ್ತೆ ನಕ್ಕು ಒಳಗೆ ಹೋದ.

ನಾ ಮಾಡಿದ ತಪ್ಪಿನಿಂದಾಗಿ ಅಪಮಾನವೆನಿಸಿತು.  ಮಾವ ಅಕ್ಕಂದಿರ ಎದುರು ಹೀಗೆ ಮಾಡಿದ್ದಕ್ಕೆ ನಾಚಿಕೆಯಾಯಿತು. ಹಟವನ್ನು ಮುಂದುವರೆಸಿ ಅಳುತ್ತ ಕುಳಿತೆ. ಚಿಗವ್ವ ಗಂಗಕ್ಕ ಬಂದು ರಮಿಸಿದರೂ ಹಟ ಬಿಡದೆ ಅಲ್ಲಿಯೇ ಕೂತೆ. ಅಮ್ಮನೇ ಬಂದು ರಮಿಸಿ ಎತಗೊಂಡು ಒಳಗೆ ನಡೆದಳು. ಅಶ್ಟೊತ್ತಿಗೆ ಅಪ್ಪನೂ ಮನೆಗೆ ಬಂದ. ಅಜ್ಜ ಅಪ್ಪ ಹೊರಗೆ ಏನೇನೊ ಮಾತಾಡುತ್ತಿದ್ದರು. ನಾನು ಹಟ ಬಿಟ್ಟು ಅಮ್ಮ ಹಿಡಿದಿದ್ದ ಗಂಗಾಳದಲ್ಲಿಯ ಬಿಸಿ ಬಿಸಿ ಚಹಾನ ಊದಿ ಊದಿ ಕುಡಿಯುವುದರಲ್ಲಿ ಮಗ್ನನಾಗಿದ್ದೆ.

ಹೀಗೆ ಹರಿದು ಹಾಳು ಮಾಡಬೇಕೆನ್ನುವ ಉದ್ದೇಶಕ್ಕಿಂತ ಪ್ರಯೋಗ ಮಾಡುವ ಕುತೂಹಲ ನನ್ನಲ್ಲಿದ್ದುದರಿಂದ ಮತ್ತೂ ಒಮ್ಮೆ ಇಂತಹ ತಪ್ಪು ನಡೆದುಹೋಯಿತು. ಆಟ ಆಡುತ್ತ ಹೊಸ ತೆಕ್ಕೆ (ಲೋಡು) ಗಳ ಮೇಲೆ ಬ್ಲೇಡ್ ಆಡಿಸಿಬಿಟ್ಟೆ. ಹರಿದ ಬಾಗವನ್ನು ಕೆಳಕ್ಕೆ ಮುಕಮಾಡಿಟ್ಟು ಅಲ್ಲಿಂದ ಕಾಲ್ಕಿತ್ತೆ.

ಆಟ ಆಡಿ ಮನೆಗೆ ಬರುವ ಹೊತ್ತಿಗೆ ತೆಕ್ಕೆ ಹರಿದದ್ದು ಗೊತ್ತಾಗಿತ್ತು. ನಾ ಬ್ಲೇಡ ಹಿಡಿದಿದ್ದನ್ನು ಮಾವ ನೋಡಿದ್ದ. ಅದು ನನ್ನದೆ ಕ್ರುತ್ಯ ಎಂದು ಗೊತ್ತಾಗಿತ್ತು. ಅಜ್ಜ ಈ ಸಾರೆಯೂ ಬಯ್ಯಲಿಲ್ಲ. ಹೀಗೆ ಮಾಡಬಾರದೆಂದರೂ ಕಯ್ಮೀರಿ ಈ ತಪ್ಪು ನಡೀತಲ್ಲ ಅಂತ ನನ್ನ ಮೇಲೆ ನನಗೆ ಸಿಟ್ಟು ಬಂತು.ಅಪರಾದದ ಬಾವನೆ ಹಾಗೆಯೇ ಉಳಿಯಿತು. ಈಗಲೂ ಉಳಿದಿದೆ. ಗಟನೆ ನೆನಪಾದ ತಕ್ಶಣ ಮನಸ್ಸು ಮುದುಡುತ್ತದೆ.ಇಂತಹ ಸಂದರ್‍ಬದಲ್ಲಿ ಅಜ್ಜ ನನ್ನ ಮನಸ್ಸನ್ನು ಅರ್‍ತ ಮಾಡಿಕೊಂಡ ರೀತಿ ಅಚ್ಚರಿಯುಂಟು ಮಾಡುತ್ತದೆ.

ಅವ್ವ ಸತ್ತ ಎರಡು ಮೂರು ದಿನಕ್ಕೆ ಸತ್ತ ತಮ್ಮನ ಶವವನ್ನು ಹಿತ್ತಲಕ್ಕೆ ಒಯ್ಯುವ ಮುಂದ ಅಜ್ಜನೂ ಇದ್ದ. ಸಣ್ಣ ಹುಡುಗರು ನೋಡಬಾರದು ಅಂತನಮ್ಮನ್ನ ಚಾವನಿ ಮಗ್ಗಲಿದ್ದ ಕೋಣ್ಯಾಗ ಕೂಡಿಸಿದ್ರು. ಅರ್‍ದ ಕುತೂಹಲ ಅರ್‍ದ ಹೆದರಿಕೆ ಇದ್ದ ನಾನು ಕಿಡಕ್ಯಾಗಿಂದ ನೋಡಿಬಿಟ್ಟೆ. ಅಂದಿನ ಆ ದ್ರುಶ್ಯ ಇನ್ನೂ ಮಾಸಿಲ್ಲ.

ಒಂದಿನ ಹೊರಗಿಂದ ಮನೆಗೆ ಬಂದು “ಯಮ್ಮಾ, ಅಜ್ಜ ಎಲ್ಲಿ ಹೋಗ್ಯಾಣ ” ಎಂದು ಕೇಳಿದೆ.”ಗವ್ರಿ ಸರುವಿಗೆ ಗುಂಡ ತಗಸಲಿಕ್ಕೆ ಹೋಗ್ಯಾಣ” ಎಂದು ಹೇಳುವುದಶ್ಟೇ ತಡ ಹಳ್ಳದ ದಾರಿ ಹಿಡಿದ ಗವ್ರಿ ಸರುವಿಗೆ ಒಂದೇ ನೆಗೆತಕ್ಕೆ ಓಡಿ ಬಂದಿದ್ದೆ. ಗುಂಡ ತೋಡುವುದನ್ನು ನೋಡ್ತ ನಿಂತುಬಿಟ್ಟಿದ್ದೆ- ಕೆಲಸ ಮುಗಿಯುವವರೆಗೆ, ಹಸಿವಿನ ಪರಿವೆ ಇಲ್ಲದೆ.

ಗವ್ರಿ ಸರುವಿನಲ್ಲಿ ಒಂದಾಳ ಕೆಳಗ ಇಬ್ರು, ನಡುವೆ ಮೆಟಗಟ್ಟಿ ಮಾಡುವಲ್ಲಿ ಇಬ್ರು ,ಉಸಗ ಮಣ್ಣ ಎತ್ತಿಕೊಡಾವ್ರು ಇಬ್ರು ದೂರತ ಚೆಲ್ಲಿ ಬರಾವ್ರು ಇಬ್ರು- ಹೀಂಗ ಓಡಾಡಿ ಕೆಲಸ ಮಾಡಿ ಮದ್ಯಾಹ್ನಕ್ಕ ಗುಂಡ ತಾಯಾರ ಮಾಡಿಬಿಟ್ರು. ಅಜ್ಜ, ಸಂಗಪ್ಪಜ್ಜ, ಸಣ್ಣ ರುದ್ರಗವ್ಡ ಮಾವ ಮತ್ತ ಇನ್ನ್ಯಾರೊ ಇದ್ದರು. ನೋಡ್ ನೋಡ್ತ ನೀರು ತುಂಬಿತು. ರಾಡಿ ಇದ್ದದ್ದಕ್ಕ ಒಂದ ಸಲ ಎತ್ತಿ ಚೆಲ್ಲಿದರು. ತಿಳಿ ಬಂದ ಕೂಡಲೇ ಕುಡದ ನೋಡಿದರು. ಬೇಸಿ ಅದಾವು ಅಂದರು. ಅಯ್ದ ಕೊಡ ತುಂಬಿ ದೇವರ ಗುಡಿಗೆ ಕಳಿಸಿದರು. ಹಿರಿಯಾರೆಲ್ಲ ಮಾತಾಡತ ಜಾಲಿಗಿಡದ ನೆಳ್ಳಿಗೆ ಕೂತರು. ಅಶ್ಟೊತ್ತಿಗೆ ಊರನ್ನ ಮಂದಿ ಹಳ್ಳಕ್ಕ ಮನಿಗೆ ಇರುವಿ ಸಾಲಿನಂಗ ಹರಿದಾಡತೊಡಗಿದರು. ನೀರಿಲ್ಲದ ಕಂಗಾಲಾದ ಮಂದಿಗೆ ನಿದಿ ಸಿಕ್ಕಂಗಾತು.

ಮುಂಗಾರಿನ ಹಂಗಾಮು ಮುಗಿಯಾಕ ಬಂದ್ರೂ ಇನ್ನೂ ಮಳೆ ಸುಳಿವೇ ಇರಲಿಲ್ಲ. ಕೆರೆ ಬತ್ತಿ ಹೋಗಿತ್ತು. ಹಳ್ಳದಾಗುನೂ ಬಸಿ ಬಸಿ ನೀರಿದ್ವು. ಆದರ ಬಳಸಾಕ ಕುಡಿಯಾಕ ನೀರಿಗೆ ಬರ ಬಂದಿತ್ತು. ಆವಾಗ ಬೆಣ್ಣಿಹಳ್ಳದ ಮಗ್ಗುಲಲ್ಲಿ ನಮ್ಮ ಹೊಲದಲ್ಲಿ ಹರಿದಿರುವ ಗವ್ರಿ ಸರುವಿನಲ್ಲಿ ನೀರಿನ ಗುಂಡ ತೋಡಿಸಿದ್ದ ಅಜ್ಜ. ಅರು ಆರು ಅಡಿ ಅಗಲ ಎಂಟಹತ್ತಡಿ ಆಳದ ದೊಡ್ಡ ವರತಿಗೆ ಗುಂಡ ಎಂದು ಕರೆಯುತ್ತಾರೆ, ಹಳ್ಳಿಯಲ್ಲಿ. ಅಜ್ಜ ಕೆರೆ ಕಡಿಸುವಾಗ ಎಶ್ಟು ಮುತುವರ್‍ಜಿ ವಹಿಸಿದ್ದನೊ ಈಗಲೂ ಮುಂದ ನಿಂತು ತನ್ನ ಹೊಲದಾಗ ಗುಂಡ ತೆಗೆಸಿದ.

ಬಾಲ್ಯದ ನನ್ನ ತಿಳುವಳಿಕೆಗೆ ನಿಲುಕಿದ ಅಜ್ಜನ ಚಿತ್ರ ಇಶ್ಟು ಮಾತ್ರ. ಆದರೆ ಅದರ ಪರಿಣಾಮ ಮಾತ್ರ ಅನನ್ಯ.

ತಂದೆ ತಾಯಿ ಕಳೆದು ಕೊಂಡು ಅನಾತನಾದ  ಅಪ್ಪನ ಬಗೆಗೆ ಕೇಳಿ ಅವನನ್ನು ಚಿಕ್ಕತಡಸಿಯಿಂದ ಕಡದಳ್ಳಿಗೆ ಕರೆದು ಕೊಂಡು ಬರುವ ಸಾಹಸಕ್ಕೆ ಕಯ್ಹಾಕಿದ ಅಜ್ಜನ ಬಗ್ಗೆ ಹೆಮ್ಮೆ ಅನಿಸುತ್ತದೆ. ಸಿಟ್ಟಿನ ಸ್ವಬಾವದ ಮುಗ್ದ-ಯತಾರ್‍ತ ಅಪ್ಪನನ್ನು ಬೆಳೆಸಿದ್ದು ನಿಜಕ್ಕೂ ದೊಡ್ಡ ಸವಾಲು. ಅಪ್ಪನ ಮೊದಲ ಹೆಂಡತಿ ದೊಡ್ಡವ್ವ ಅಕಾಲಿಕ ಮರಣವನ್ನಪ್ಪಿದಾಗ ತನ್ನ ಮಗಳನ್ನೇ (ಅವ್ವ) ಕೊಟ್ಟು ಮದುವೆ ಮಾಡಿ  ಅಮಾಯಕ ಅಪ್ಪನಿಗೆ ಹೊಸ ಬದುಕು ಕಟ್ಟಿಕೊಟ್ಟ ಅಜ್ಜನ ವ್ಯಕ್ತಿತ್ವಕ್ಕೆ ಏನೆನ್ನಬೇಕು ತಿಳಿಯದು! ಅವ್ವನ ದಾಂಪತ್ಯ ನಾಲ್ಕು ಮಕ್ಕಳನ್ನು ಪಡೆದು ಇನ್ನೇನು ಸಂತ್ರುಪ್ತ ವಾಗಿದೆ ಎನ್ನುವಶ್ಟರಲ್ಲಿ ಗಟಿಸಿದ ಅವ್ವನ ಸಾವು ಅಜ್ಜನ ಮೇಲೆ ಎಂತಹ ಪರಿಣಾಮ ಬೀರಿರಬಹುದು? ಹಸುಳೆಗಳಾದ ನಾಲ್ಕು ಮೊಮ್ಮಕ್ಕಳನ್ನು ಬೆಳೆಸುವ, ಯತಾರ್‍ತ ಕಾಯಕ ಜೀವಿ ಆಪ್ಪನನ್ನು ಸಂಬಾಳಿಸುವ  ಹೊಣೆಗಾರಿಕೆ ಮತ್ತೆ ಸವಾಲಾಗಿ ಕಾಡಿರಬಹುದು! ಎಲ್ಲವನ್ನೂ ಮಯ್ಮೇಲೆ ಹೊತ್ತುಕೊಂಡು ನಮ್ಮನ್ನೆಲ್ಲ ದಡಸೇರಿಸುವ ಉತ್ಸಾಹದಲ್ಲಿದ್ದ ಅಜ್ಜ ಅವ್ವ ಸತ್ತ ಎರಡೇ ವರ್‍ಶಗಳಲ್ಲಿ ನಮ್ಮನ್ನಗಲಿದ್ದು ನನ್ನ ಜೀವನದ ದೊಡ್ಡ ದುರಂತ.

ನನ್ನ ಬದುಕಿನ ಪವಿತ್ರ ನೆನಪಾಗಿ, ಪ್ರತಿ ಕ್ಶಣದಲ್ಲೂ ನನ್ನ ಕಯ್ಹಿಡಿದು ನಡೆಸುವ ಪ್ರೇರಕ ಶಕ್ತಿಯಾಗಿರುವ ಅಜ್ಜ ಅಪಾರ ಗವ್ರವದ ಮೂರ್‍ತಿಯಾಗಿದ್ದಾನೆ, ನನ್ನೊಳಗೆ ಲೀನವಾಗಿದ್ದಾನೆ, ನನ್ನ ಪ್ರತಿ ನಡೆನುಡಿಯ ಅಬಿವ್ಯಕ್ತಿಯಾಗಿದ್ದಾನೆ.

(ಚಿತ್ರ: http://kanaja.in )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: