ಲೆಗೊ ಕಾರು

– ಜಯತೀರ‍್ತ ನಾಡಗವ್ಡ.

Lego car1

ಲೆಗೊ ಎಲ್ಲರಿಗೂ ತಮ್ಮ ಚಿಕ್ಕಂದಿನ ನೆನಪು ತರಿಸುವ ಹೆಸರು. ಪುಟಾಣಿ ಮಕ್ಕಳ ಬೊಂಬೆ ತಯಾರಿಸುವ ಡೆನ್ಮಾರ‍್ಕ್ ದೇಶದ ದೊಡ್ಡ ಕೂಟ ಲೆಗೊ. ಬಗೆ ಬಗೆಯಲ್ಲಿ ಜೋಡಿಸಿದ ಮನೆ, ಆಟದ ಬಂಡಿ, ಹಲ ಮಹಡಿ ಕಟ್ಟಡಗಳಾಗಿ ಆಟವಾಡುವ ಪ್ಲ್ಯಾಸ್ಟಿಕ್ ಇಟ್ಟಿಗೆಯಂತಿರುವ ಲೆಗೊಗಳು ಎಂದರೆ ಪುಟಾಣಿಗಳಿಗೆ ಅಚ್ಚುಮೆಚ್ಚು. ಪುಟಾಣಿಗಳು ಈ ನೆಚ್ಚಿನ ಲೆಗೊಗಳನ್ನು ಬಳಸಿ ಕಾರ‍್ಬಂಡಿ ತಯಾರಿಸಿದ್ದನ್ನು ನೀವು ನೋಡಿರಬಹುದು.

ಇವೇ ಲೆಗೊಗಳನ್ನು ಬಳಸಿ ದೊಡ್ಡ ಮಂದಿ ಕುಳಿತು ಓಡಾಡುವ ಕಾರು ತಯಾರಿಸಿದ್ದು ಇದೀಗ ಎಲ್ಲೆಡೆ ಸುದ್ದಿಯಾಗಿದೆ. ನಂಬಲು ಕಶ್ಟವಾದರೂ ಇದು ದಿಟ. ಆಸ್ಟ್ರೇಲಿಯಾ ನಾಡಿನ ಸ್ಟೀವ್ ಸಮ್ಮರ‍್ಟಿನೊ (Steve Sammartino) ಇವರ ಕನಸಿನ ಹಮ್ಮುಗೆಯನ್ನು ರೋಮೆನಿಯಾದ 20ರ ಹಯ್ದ ರವ್ಲ್ ಒಯ್ಡಾ (Raul Oaida) ನನಸಾಗಿಸಿ ಮುಂದಿರಿಸಿದ್ದಾರೆ.

5,00,000 ಹೆಚ್ಚು ಲೆಗೊಗಳನ್ನು ಬಳಸಿ ಈ ಕಾರು ಕಟ್ಟಲಾಗಿದೆ. ಈ ಕಾರಿಗೆ ಕುಗ್ಗಿದ ಗಾಳಿಯೇ ಕಸುವಿನ ಸೆಲೆಯಾಗಿದ್ದು ಮತ್ತೊಂದು ವಿಶೇಶ. ಇಬ್ಬರು ಕುಳಿತುಕೊಳ್ಳಲು ಅನುವಾಗಿರುವ ಕಾರು, ಗಂಟೆಗೆ 30 ಕಿ.ಮೀ ವೇಗದಲ್ಲಿ ಸಾಗಬಲ್ಲದು. ಮಂದಿ ಕೊಡುಗೆಯಿಂದ (crowd funded) ಕೂಡಿಸಿದ 22 ಸಾವಿರ ಡಾಲರ್ ಬಳಸಿ ಇಪ್ಪತ್ತು ತಿಂಗಳಲ್ಲಿ ಈ ಹಮ್ಮುಗೆಯನ್ನು ಪೂರ‍್ತಿಗೊಳಿಸಲಾಗಿದೆ. ಚಿಕ್ಕ ಲೆಗೊಗಳನ್ನ ಬಳಸಿ ಬಾರಿ ತೂಕದ ಮತ್ತು ಬಾರ ಹೊರುವ ಗಾಲಿ, ಟಾಯರ್ ಇತರೆ ಬಿಡಿಬಾಗಗಳನ್ನು ಮಾಡಿರುವುದು ಸುಲಬದ ಮಾತಲ್ಲ.

Lego car3(ಲೆಗೊ ಕಾರಿನ ಒಳನೋಟ) 

ಕುಗ್ಗಿದ ಗಾಳಿ ಉರುವಲಿನ (Compressed air fuel) ಈ ಕಾರು 4 ’ಆರ‍್ಬಿಟಲ್’ ಬಿಣಿಗೆಗಳನ್ನು (orbital engine) ಹೊಂದಿದೆಯಂತೆ ಅರಕೆಗಾರರು ಹೇಳಿಕೊಂಡಿದ್ದಾರೆ. ಆರ‍್ಬಿಟಲ್ ಬಿಣಿಗೆಗಳನ್ನು 1972 ರಲ್ಲಿ ಆಸ್ಟ್ರೇಲಿಯಾದ ಬಿಣಿಗೆಯರಿಗ ರಾಲ್ಪ್ ಸರಿಚ್(Ralph Sarich) ಎಂಬುವರು ಕಂಡು ಹಿಡಿದಿದ್ದರು. ವ್ಯಾಂಕೆಲ್ ಬಿಣಿಗೆಯನ್ನೇ (Wankel Engine) ಹೋಲುವ ಆರ‍್ಬಿಟಲ್ ಬಿಣಿಗೆಯಲ್ಲಿ ಚಳಕದ ಕುಂದು ಕೊರತೆಗಳಿದ್ದುದರಿಂದ ಮಾರುಕಟ್ಟೆಯಲ್ಲಿ ಬಿಡುಗಡೆಗೊಳ್ಳಲಿಲ್ಲ.

Lego car2(ಲೆಗೊ ಕಾರಿನ ಬಿಣಿಗೆ) 

ಈ ಲೆಗೊ ಕಾರಿನ ಬಿಣಿಗೆಯನ್ನು ಆರ‍್ಬಿಟಲ್ ತರಹದ್ದು ಎಂದಿದ್ದಕ್ಕೆ ಹಲವೆಡೆ ಒಪ್ಪಿಗೆ ಕಂಡುಬಂದಿಲ್ಲ. ಇದರ ಬದಲಾಗಿ ಬೀರುಗೆರೆಯ ಬಿಣಿಗೆ (Radial Engine) ಹೆಸರು ತಕ್ಕುದಾಗಿದೆ ಎಂಬುದು ಹಲವರ ಅನಿಸಿಕೆ. ಬೀರುಗೆರೆಯ ಬಿಣಿಗೆಯಲ್ಲಿ ಸುತ್ತಲೂ ಆಡುಬೆಣೆಗಳಿದ್ದು ಒಂದೇ ತಿರುಗುಣಿಗೆ (Crankshaft) ಬೇರೆ ಕೂಡುಸಳಿಯಿಂದ (connecting rod) ಜೋಡಿಸಲ್ಪಟ್ಟಿರುತ್ತವೆ.

ರವ್ಲ್ ಒಯ್ಡಾ ತಯಾರಿಸಿರುವ ಒಂದು ಬಿಣಿಗೆಯಲ್ಲಿ 64 ಆಡುಬೆಣೆಗಳು (pistons) ಮತ್ತು ಉರುಳೆಗಳಿವೆ (cylinders). 256 ಉರುಳೆಗಳ ಈ ಬಂಡಿಯನ್ನು ಕಡಿಮೆ ರಬಸದಲ್ಲೇ ಓಡಿಸಿ ಒರೆಗೆಹಚ್ಚಲಾಗುತ್ತಿದೆ, ಹೆಚ್ಚಿನ ವೇಗದಿಂದ ಲೆಗೊಗಳು ಬೇರೆ ಬೇರೆಗೊಂಡು ಕಾರು ಮುರಿದುಬೀಳುವ ಸಾದ್ಯತೆ ಹೆಚ್ಚು.

Radial engine

ಸ್ಟೀವ್ ಸಮ್ಮರ‍್ಟಿನೊ ಒಬ್ಬ ಹೆಸರುವಾಸಿ ಮಾರಾಳಿಗ. ತನ್ನ ಕೆಲಸದ ಅನುಬವ ಚೆನ್ನಾಗಿ ಬಳಸಿ ಈ ಹಮ್ಮುಗೆಗೆಂದೇ 40 ಜನ ಹಣನೆರವು ನೀಡುವವರನ್ನು ಒಗ್ಗೂಡಿಸಿದ್ದಾರೆ. ಅಂದ ಹಾಗೆ ಈ ಕಾರಿನ ಹಮ್ಮುಗೆಯನ್ನು ‘ಸೂಪರ್ ಆಸಮ್ ಮಯ್ಕ್ರೋ ಪ್ರೊಜೆಕ್ಟ್’ (Super Awesome Micro Project) ಎಂದು ಸ್ಟೀವ್ ಸಮ್ಮರ‍್ಟಿನೊ ಹೇಳಿಕೊಂಡಿದ್ದಾರೆ.

ರವ್ಲ್ ಒಯ್ಡಾ ಈ ಹಿಂದೆ ಲೆಗೊವಿನಿಂದ ಬಾನಬಂಡಿ (space shuttle) ತಯಾರಿಸಿ ನೆಲದಿಂದ 35 ಸಾವಿರ ಅಡಿ ಎತ್ತರಕೆ ಹಾರಿಸಿದ್ದು ಇಲ್ಲಿ ನೆನೆಪಿಸಿಕೊಳ್ಳಬಹುದು. ಲೆಗೊ ಕಾರು ಅದೆಶ್ಟು ಮಟ್ಟಿಗೆ ಮಂದಿ ಬಳಕೆಗೆ ನೆರವಾಗಲಿದೆ ಮತ್ತು ಮಾರಾಟಕ್ಕೆ ಅಣಿಗೊಳ್ಳಲಿದೆ ಎಂಬುದರ ಬಗ್ಗೆ ಇನ್ನೂ ಹೆಚ್ಚಿನ ಸುದ್ದಿಗಳು ತಿಳಿದು ಬಂದಿಲ್ಲ.

(ಸುದ್ದಿ ಮತ್ತು ತಿಟ್ಟ ಸೆಲೆ: digg.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: