ದೇವರ ಶಿಲುಬೆ ಮನೆಗೆ ಬಂದದ್ದು – ಸಣ್ಣ ಕತೆ

ಬರಹಗಾರರು – ನಾ.ಡಿಸೋಜ
ಚಿಕ್ಕದಾಗಿಸಿದವರು – ಸಿ. ಮರಿಜೋಸೆಪ್

regcross-910x1024

ಅದೊಂದು ಪುಟ್ಟ ಊರು. ಬರೀ ಕ್ರಿಸ್ತುವರೇ ವಾಸಿಸುತ್ತಿದ್ದ ಊರದು. ಕ್ರಿಸ್ತೀಯ ಜೀವನವೆಂದರೆ ಒಬ್ಬರಿಗೊಬ್ಬರು ಹೆಗಲು ಕೊಡುವವರಾಗಬೇಕು, ಯಾರೂ ಯಾರೊಂದಿಗೂ ಅಂತರವನ್ನು ಕಾಯಬಾರದು. ಆ ಊರಿನಲ್ಲಿ ಅದಿಲ್ಲವೆಂದು ಹೊಸದಾಗಿ ಬಂದ ಪಾದರಿಗೆ ಅನ್ನಿಸಿತೇನೋ, ಆಯಿತವಾರ ಗುಡಿಯಲ್ಲಿ ಪ್ರಸಂಗ ಹೇಳುತ್ತಾ ದೇವರನ್ನು ಮನೆಗೆ ಬರಮಾಡಿಕೊಳ್ಳಿ, ಮನಸು ಚೊಕ್ಕಟ ಮಾಡಿಕೊಳ್ಳಿ ಎಂದು ಹೇಳಿದರು.
ಅದನ್ನು ಕೇಳಿದ್ದೇ ಅವಳ ಕಿವಿಗೆ ಏನೋ ಆನಂದವಾಯಿತು. ಪಾದರಿ ಹೇಳಿದ್ದನ್ನು ಕಿವಿದೆರೆದು ಕೇಳಿದಳು. ಮತ್ತೊಮ್ಮೆ ತಾನೂ ಹೇಳಿಕೊಂಡಳು. ’ದೇವರ ಶಿಲುಬೆಯನ್ನು ಬರಮಾಡಿಕೊಳ್ಳಿ, ಎಲ್ಲ ಒಟ್ಟುಸೇರಿ ಜಪ ಮಾಡಿರಿ, ಹಿಂದಿನ ದಿನ ದೇವರು ಬಂದ ನಿಮ್ಮ ನೆರೆಮನೆಗೆ ಹೋಗಿ ಕರೆತನ್ನಿ, ಹಾಗೆಯೇ ಮರುದಿನ ಇನ್ನೊಂದು ನೆರೆಮನೆಗೆ ಕರೆದೊಯ್ದು ಬಿಟ್ಟುಬನ್ನಿ, ಹೀಗೆ ನೆರೆಹೊರೆಯಲ್ಲಿ ಗೆಳೆಯರಾಗಿರಿ, ನಿಮ್ಮ ಅಂತಸ್ತನ್ನು ಅದುಮಿಡಿ, ಕೋಪವನ್ನು ತೊರೆದುಬಿಡಿ, ಎಲ್ಲರನ್ನೂ ನಿಮ್ಮಂತೆಯೇ ಕಾಣಿರಿ.’
ತಂಪು ತಂಗಾಳಿ ಸುಳಿದಂತೆ. ನೀರೆರೆಯುತ್ತಿದ್ದ ಹಾಗೇ ಎಲ್ಲ ಕಸವೂ ತೊಳೆದುಹೋದಂತೆ, ಎಲ್ಲವೂ ಬೆಳ್ಳಗಾದಂತೆ ಅನ್ನಿಸಿತು. ಮನೆಗೆ ಬಂದವಳೇ ಅವಳು ಮಕ್ಕಳೆಡೆ ಮುಗುಳುನಗುತ್ತಾ ’ಮಗಾ, ಪಾದರಿ ಯೋಳಿದ್ದೇನಂತ ಕೇಳಿದೆಯೇನಲಾ? ಯಾವೊತ್ತಪ್ಪಾ ನಮ್ಮ ಮನೆಗೆ ದ್ಯಾವರು ಬರೋದು?’ ಎನ್ನುತ್ತಿದ್ದಂತೆ ಮಕ್ಕಳು ಮೊದಲನೇ ಬೀದಿ, ಎರಡನೇ ಬೀದಿ, ತಮ್ಮ ಬೀದಿಯಲ್ಲಿನ ಮನೆಗಳ ಎಣಿಕೆ ಮಾಡಿ ಕೂಡಿ ಕಳೆದು ಮುಂದಿನ ತಿಂಗಳು ಇಶ್ಟನೇ ದಿನ ಎಂದು ಗುರುತು ಹಾಕಿಕೊಂಡರು. ಅಶ್ಟರಲ್ಲಿ ಒಂದಿಶ್ಟು ಸುಣ್ಣಬಣ್ಣ ಮಾಡಬೇಕು, ಸಂತೆಯಿಂದ ಚಾಪೆ ತರಬೇಕು, ಒಂದಿಶ್ಟು ಕಾಪಿಪುಡಿಯನ್ನೂ ಸಕ್ಕರೆಯನ್ನೂ ತರಬೇಕು, ಹೊಳೆಗೆ ಹೋಗಿ ಪಾತ್ರೆಗಳನ್ನೆಲ್ಲ ಬೆಳಗಿಕೊಂಡು ಬರಬೇಕು ಎಂದೆಲ್ಲ ಅವಳು ಗುಣಾಕಾರ ಹಾಕಿದಳು.
ಅವಳು ಇಶ್ಟೆಲ್ಲ ಯೋಚಿಸುವುದಕ್ಕೆ ಕಾರಣವಿತ್ತು. ಅವಳ ಗಂಡನಿಗೆ ಒಂದು ಕೆಟ್ಟ ಕಾಯಿಲೆಯಿತ್ತು. ಯಾವುದೇ ವಸ್ತು ಒಡವೆ ಏನಾದರೂ ಸರಿಯೇ ಎದುರಿಗಿದ್ದವರ ಮುಂದೆಯೇ ಮಟಾಮಾಯ ಮಾಡಿಬಿಡುತ್ತಿದ್ದ. ಅವನೆಂದೂ ಕನ್ನ ಹಾಕಿ ಕದ್ದವನಲ್ಲ, ಪೊಲೀಸು, ಪಂಚಾಯ್ತಿ ಎಂದು ಅಲೆದವನಲ್ಲ, ಅವನೇ ಕದ್ದನೆಂದು ಹೇಳಲು ಯಾವುದೇ ಸಾಕ್ಶಿಯೂ ಇರುತ್ತಿರಲಿಲ್ಲ, ಆದರೆ ಕದ್ದವನು ಅವನೇ ಎಂದು ಎಲ್ಲರಿಗೂ ಗೊತ್ತಿತ್ತು. ಎಲ್ಲೋ ಏನೋ ಕಾಣೆಯಾಯಿತೆಂದರೆ ಕಳ್ಳಂತಪ್ಪ ಬಂದಿದ್ದನಾ ಎಂದು ಕೇಳುವಶ್ಟು ಅವನು ಹೆಸರುವಾಸಿಯಾಗಿಬಿಟ್ಟಿದ್ದ. ಕಳ್ಳ ಎನ್ನುವ ಮಾತು ಕೇಳಿಸಿದರೂ ಅದನ್ನು ಅವನು ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ.
ಹೀಗೆ ಎಂದು ಮೊದಲೇ ಗೊತ್ತಿದ್ದರೆ ಅವಳು ಮದುವೆಯಾಗಿ ಈ ಊರಿಗೆ ಬರುತ್ತಿದ್ದಳೇ? ಅವಳು ಕಾಲುಗೆಜ್ಜೆ ಗಲಗಲ ಅನ್ನಿಸಿಕೊಂಡು ಹೊಳೆಯ ಕಡೆ ಹೋದಾಗ ಯಾರು ಮದುವಣಗಿತ್ತಿ ಎಂಬ ಯಾರದೋ ಕೇಳ್ವಿಗೆ ಅದೇ ಕಳ್ಳಂತಪ್ಪನ ಹೆಂಡತಿ ಎಂಬ ಉತ್ತರ ಕೇಳಿಬಂತು. ಅಂತಪ್ಪ ತನ್ನ ಗಂಡನೇ ಹವ್ದು, ಅಂದರೆ ತನ್ನ ಗಂಡ ಕಳ್ಳನೇ?
ನೀರಿಗೋದಾಗ ಇಂಗಂದ್ರು ಅಂತ ಗಂಡನಿಗೇಳಿದ್ರೆ, ಯೋಳಿದ್ರೆ ಯೋಳ್ಕೊಳ್ಳಿ ಬುಡು, ನಾನ್ ಕ್ಯಾರೇ ಅನ್ನಲ್ಲ ಅಂದವನೇ ತಲೆ ಮೇಲಿನ ಒಂದು ಕೂದಲು ಕಿತ್ತು ಊದಿ ಊದಿ ಗಾಳಿಗೆ ತೂರಿದ. ಕುಡುಕನ್ನ ಕಟ್ಕೊಂಡು…ಹೀಗೇ ಒಂದಿನ ಕಳ್ಳಂತಪ್ಪ ಸತ್ತೋದ. ಬಂದವರೆಲ್ಲ ಸಮಾದಾನ ಹೇಳಿ ಅವರವರ ದಾರಿ ಹಿಡಿದರು. ಮಕ್ಕಳನ್ನು ಚೆನ್ನಾಗಿ ಓದಿಸಬೇಕು, ಮನೆಗೆ ಅಂಟಿದ ಕೊಳೆ ತೊಳೀಬೇಕು ಅಂದುಕೊಂಡು ಅಕ್ಕಪಕ್ಕದ ಮನೆಯ ಬಾಣಂತೀರಿಗೆ ನೀರಾಕಲು, ಕೊಟ್ಟಿಗೆ ಸಾರಿಸಲು, ಕಸಮುಸುರೆ ತೊಳೆಯಲು ಹೋದಾಗೆಲ್ಲ, ದಾರೀಲಿ ಹೋಗೋವ್ರು, ಕಳ್ಳಂತಪ್ಪನೆಂಡ್ರುನ ಕೆಲಸಕ್ಕಿಟ್ಟುಕೊಂಡಿದೀರಾ? ಯಾವುದಕ್ಕೂ ವಸಿ ಜೋಪಾನ ಎಂದು ಹೇಳ್ಕೊಂಡು ಹೋಗುವಾಗೆಲ್ಲ ಹೊಟ್ಟೇಲಿ ಸಂಕಟ ಆಗೋದು. ಎಶ್ಟು ದಿನ ಹೀಗೇ ಮಾತಾಡ್ಕಂಡಾರು, ಮಕ್ಕಳು ಬೆಳೆದು ನಿಯತ್ತಿನಿಂದ ಬದುಕು ಮಾಡಿದರೆ ಎಲ್ಲ ಸರೋಗುತ್ತೆ ಎಂದು ಸಮಾದಾನ ಪಟ್ಟುಕೊಳ್ಳುವಳು.
ಈ ನಡುವೆಯೇ ಅವಳು ಊರಿನಲ್ಲಿ ಒಳ್ಳೆ ಸೂಲಗಿತ್ತಿಯೆಂಬ ಹೆಸರು ಪಡೆದಳು. ಆದರೂ ಕಳ್ಳಂತಪ್ಪನ ಹೆಂಡತಿ, ಕಳ್ಳಂತಪ್ಪನ ಮಕ್ಕಳು ಎಂದು ಜನ ಆಡಿಕೊಳ್ಳುತ್ತಿದ್ದರೆ ಮನಸಿಗೆ ಗಾಸಿಯಾಗುತ್ತಿತ್ತು. ಗಂಡ, ನನ್ ಕುಂಕುಮ ಅಳಿಸಿದ, ಹೂವು ಕಿತ್ಕೊಂಡ, ಬಳೆ ಕಿತ್ಕೊಂಡ, ಎಲ್ಲಾ ಕೊಂಡೋದವನು ಹಾಳಾದ ಹೆಸರು ಮಾತ್ರ ಬಿಟ್ಟೋದ ಎಂದು ಬೋರಾಡ್ಕಂಡು ಅತ್ತಳು. ಮನೆಗೆ ಸುಣ್ಣ ಬಣ್ಣ ಆಯಿತು, ಈಗ ದೇವರ ಶಿಲುಬೆ ಮನೆಗೆ ಬರುವ ಗಳಿಗೆ ಬಂದೊದಗಿದೆ. ಇವೊತ್ತು ಬೆಳಗ್ಗೆ ಏಳುವಾಗಲೇ ಎನೋ ಸಡಗರ. ಮನಸಿಗೆ ಏನೋ ಆನಂದ. ಕೆಲಸ ಮುಗಿಸಿ ಸಂಜೆ ಮನೆಗೆ ಬಂದವಳೇ, ಕಯ್ಕಾಲುಮಕ ತೊಳಕೊಂಡಳು. ಒಗೆದ ಬಟ್ಟೆ ಉಟ್ಟು ನಿಂತಿದ್ದ ಮಕ್ಕಳು ನೆರೆಮನೆಗೆ ಹೋಗಿ ಜಪ ಮಾಡಿ ದೇವರ ಶಿಲುಬೆಯನ್ನು ಹೊತ್ತು ತಂದರು. ಉಳಿದ ಮನೆಗಳವರೂ ಹಾಡು ಹಾಡುತ್ತಾ ಹಿಂಬಾಲಿಸಿದರು. ಇದು ಸಮಾದಾನದ ದೇವರ ಶಿಲುಬೆ, ನೆರೆಹೊರೆಯವರನ್ನು ಪ್ರೀತಿಯಿಂದ ಬೆಸೆಯುವ ಶಿಲುಬೆ, ಇನ್ನು ಮುಂದೆ ಎಲ್ಲರೂ ಅಣ್ಣತಮ್ಮಂದಿರು. ಊದುಕಡ್ಡಿ ಮೇಣದಬತ್ತಿ ಹಚ್ಚಿ ಬಾಗಿಲ ಬಳಿ ನಿಂತು ಇವಳು ದೇವರನ್ನು ಎದುರುಗೊಳ್ಳಲು ಕಾದಿದ್ದಳು. ಎಲ್ಲರ ಮನೆಗಳನ್ನೂ ಹರಸಿದ ದೇವರು ನಮ್ಮ ಮನೆಗೂ ಬರುತ್ತಿದ್ದಾನೆ, ಇನ್ನು ಮುಂದೆ ನಡೆಯುವುದೆಲ್ಲಾ ಒಳ್ಳೆಯದೇ, ಎದೆ ತುಂಬಿ ಕಣ್ಣಾಲಿಗಳು ತುಂಬಿದವು. ತಲೆ ತುಂಬ ಸೆರಗ ಹೊದ್ದು ಕಯ್ಜೋಡಿಸಿ ನಿಂತಳು.
ಜನ ಬಂದರು, ಮೊಣಕಾಲೂರಿದರು, ಮಕ್ಕಳಿಬ್ಬರೂ ಶಿಲುಬೆಯನ್ನು ಎರಡೂ ಕಡೆ ಹಿಡಿದು ಅಡಿಯ ಮೇಲೆ ಅಡಿಯನಿಕ್ಕುತ ಒಳ ಬಂದು ಬಟ್ಟೆ ಹೊದಿಸಿದ ಮೇಜಿನ ಮೇಲಿರಿಸಿ ಕಯ್ ಮುಗಿದರು. ಜಪ ಶುರುವಾಯಿತು. ಮೇಣದ ಬತ್ತಿಯ ಸೊಂಪಾದ ಬೆಳಕಿನಲ್ಲಿ ಶಿಲುಬೆಯ ಮೇಲಿನ ಯೇಸುಕ್ರಿಸ್ತ ನಸುನಗು ನಗುತ್ತಿದ್ದಾನೆ. ಅವನ ಪಾದದಡಿ ಎಲ್ಲ ರೀತಿಯ ಹೂಗಳು ಕಂಗೊಳಿಸುತ್ತಿವೆ. ಆದರೆ ಏನೋ ಒಂದು ಕೊರತೆಯಿದೆ.
ಶಾಂತಪ್ಪನ ಮನೆಯಲ್ಲಿ ಶಿಲುಬೆಯ ಬದಿ ಹುಂಡಿಪೆಟ್ಟಿಗೆ ಇತ್ತು, ಚಿನ್ನಪ್ಪನ ಮನೆಯಲ್ಲೂ ಹುಂಡಿಪೆಟ್ಟಿಗೆ ಇತ್ತು. ರಾಯಪ್ಪನ ಮನೆ, ಅರುಳಪ್ಪನ ಮನೆ, ಜೋಜಪ್ಪನ ಮನೆಯಲ್ಲೂ ಅದು ಇತ್ತು. ಈ ಮನೆಯೊಳಗೆ ದೇವರೊಬ್ಬನೇ ಬಂದ, ಹುಂಡಿಪೆಟ್ಟಿಗೆ ಹೊರಗೇ ಉಳಿಯಿತು. ಅವಳು ಸೆರಗಿನ ಮರೆಯಲ್ಲಿ ಸಣ್ಣಗೆ ನರಳಿದಳು. ಯಾಕೋ ಶಿಲುಬೆಯ ಮೇಲಿನ ಯೇಸುವಿನ ಮಕ ಮಂಕಾದಂತೆ ತೋರಿತು.

(ಚಿತ್ರ: www.holycrossstore.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: