ಬಸವಣ್ಣನ ದಾರಿ

ಸಿ.ಪಿ.ನಾಗರಾಜ

jelly_kattu_festival

ಇಂದಿಗೆ ಹತ್ತು ವರುಶಗಳ ಹಿಂದೆ ಹಳ್ಳಿಯೊಂದರಲ್ಲಿ ನಡೆದ ಪ್ರಸಂಗವಿದು. ಊರಿನ ಒಳಗೆ ಮಾರಿ ಗುಡಿಯಿದೆ. ಊರ ಹೊರಗೆ ಹರಿಯುತ್ತಿರುವ ಹೊಳೆಯ ತೀರದಲ್ಲಿ ಈಶ್ವರನ ದೇಗುಲವಿದೆ. ವರುಶಕ್ಕೊಮ್ಮೆ ಊರ ಹಬ್ಬ ನಡೆಯುವಾಗ, ಈಶ್ವರನ ತೇರನ್ನು ದೇಗುಲದಿಂದ ಮಾರಿಗುಡಿಯ ಬಳಿಗೆ ಎಳೆದು ತಂದು, ಮತ್ತೆ ದೇಗುಲದ ಬಳಿಗೆ ಎಳೆದುಕೊಂಡು ಹೋಗುವ ಆಚರಣೆಯು ದೇವರನ್ನು ಪೂಜಿಸುವ ಸಾವಿರಾರು ಮಂದಿಗೆ ಅಪಾರವಾದ ಆನಂದವನ್ನು ನೀಡುತ್ತಿತ್ತು.
ಆರ‍್ಸಿಯಿಂದಲೂ ಹೆಚ್ಚಿನ ಸಡಗರದಿಂದ ನಡೆದುಕೊಂಡು ಬರುತ್ತಿದ್ದ ಹಬ್ಬದ ಆಚರಣೆಯಲ್ಲಿ, ಈ ವರುಶ ಹೊಸ ಬೇಡಿಕೆಯೊಂದನ್ನು ದಲಿತರು ಊರಿನ ಹಿರಿಯರ ಮುಂದಿಟ್ಟರು. ಅದೇನೆಂದರೆ
“ಈಶ್ವರನ ತೇರು ತಮ್ಮ ಕೇರಿಯಲ್ಲೂ ಹಾದು ಹೋಗಬೇಕು…..ನಾವು ಕೂಡ ಈಶ್ವರನ ಒಕ್ಕಲು…..ನಮ್ಮ ಕುಲದೇವರನ್ನು ಹತ್ತಿರದಿಂದ ಕಣ್ತುಂಬ ನೋಡಿ, ಹಣ್ಣುಕಾಯಿ ಮಾಡಿಸಿ, ನಾವು ಕಯ್ ಮುಗಿಯಬೇಕು”

ಒಕ್ಕಲಿಗರ ಕುಟುಂಬಗಳು ಹೆಚ್ಚಾಗಿರುವ ಈ ಊರಿನಲ್ಲಿ ಒಂದೆರಡು ಬ್ರಾಹ್ಮಣರ ಕುಟುಂಬಗಳು ಸೇರಿದಂತೆ ಲಿಂಗಾಯತರ, ಗಂಗಾಮತಸ್ತರ, ಗಾಣಿಗರ ಮತ್ತು ದಲಿತರ ನೂರಾರು ಕುಟುಂಬಗಳಿದ್ದವು. ಇವರೆಲ್ಲಾ ವಾಸಿಸುತ್ತಿದ್ದ ಮೇಗಲಕೇರಿ, ಕೆಳಗಲಕೇರಿಗಳಲ್ಲಿ ಹಾದು ಬರುತ್ತಿದ್ದ ಈಶ್ವರನ ತೇರು, ದಲಿತರ ಕೇರಿಗೆ ಮಾತ್ರ ಬರದೆ, ದಲಿತರ ಕೇರಿಯ ಹಿಂದಿನ ದಾರಿಯಲ್ಲಿ ಸಾಗುತ್ತಿತ್ತು. ಆ ದಾರಿ ಕಿರಿದಾಗಿ ಮಾತ್ರವಲ್ಲ, ತುಂಬಾ ಗಲೀಜಾಗಿಯೂ ಇತ್ತು.
ಈಗ ದಲಿತರು ಮಂಡಿಸಿದ್ದ ಬೇಡಿಕೆಯು ದೇವರನ್ನು ಹತ್ತಿರದಿಂದ ಪೂಜಿಸಬೇಕೆಂಬ ಸಹಜವಾದ ಆಸೆಯಿಂದ ಕೂಡಿತ್ತು. ಆದರೆ ಜಾತಿಗಳಲ್ಲಿ ಮೇಲು-ಕೀಳೆಂಬ ಮೆಟ್ಟಿಲುಗಳಲ್ಲೇ ನಿಂತಿರುವ ಜನ ಸಮುದಾಯದಲ್ಲಿ ಮೇಲು ಜಾತಿಯವರಲ್ಲಿ ಹೆಚ್ಚಿನ ಮಂದಿಗೆ ದಲಿತರ ಬೇಡಿಕೆಯು ತೀರಾ ಕುತಂತ್ರ, ಅಹಂಕಾರ ಮತ್ತು ದುರುದ್ದೇಶದಿಂದ ಕೂಡಿರುವಂತೆ ಕಂಡುಬಂದಿತು.
ಹಬ್ಬ ನಡೆಯುವ ಇಪ್ಪತ್ತು ದಿನಗಳ ಮೊದಲೇ ಕೇಳಿ ಬಂದ ಈ ಬೇಡಿಕೆಗೆ ಏನಾದರೊಂದು ಮಾರ‍್ಗೋಪಾಯವನ್ನು ಕಂಡು ಹಿಡಿಯಲೆಂದು, ಒಂದು ದಿನ ಬೆಳಗ್ಗೆ ಮಾರಿಗುಡಿಯ ಮುಂದೆ ಊರಿನ ಎಲ್ಲಾ ಜಾತಿಯ ಹಿರಿಯರು ಸೇರಿದರು. ಊರಿನಲ್ಲಿ ನಾನಾ ಬಗೆಯ ಒಕ್ಕೂಟಗಳನ್ನು ಕಟ್ಟಿಕೊಂಡು ಆಗಾಗ್ಗೆ ಆಟೋಟ, ಮನರಂಜನೆ ಮತ್ತು ಸಾಹಿತ್ಯದ ವಿಚಾರಗಳನ್ನು ಜನರಿಗೆ ತಿಳಿಸುವ ಕಾರ‍್ಯಕ್ರಮಗಳನ್ನು ನಡೆಸುತ್ತಿದ್ದ ಯುವಕರ ಪಡೆಯು ಅಲ್ಲಿ ಹಾಜರಿತ್ತು. ಬೆಳಗ್ಗೆ ಹತ್ತು ಗಂಟೆಗೆ ಶುರುವಾಗಿದ್ದ ನ್ಯಾಯಪಂಚಾಯ್ತಿಯು ನಡು ಮದ್ದೀನ ದಾಟಿ ಎರಡು ಗಂಟೆಯಾದರೂ ಮುಗಿದಿರಲಿಲ್ಲ.

“ಹಿಂದಿನಿಂದ ಯಾವತ್ತೂ ದಲಿತರ ಕೇರಿಯ ಒಳಕ್ಕೆ ತೇರು ಹೋಗಿಲ್ಲ. ಇವತ್ತು ಅಲ್ಲಿಗೆ ಬರ‍್ಲಿ ಅಂದ್ರೆ, ಅದೆಂಗೆ ಒಪ್ಪುಕಾದದು ” ಎಂಬುದು ಮೇಲುಜಾತಿಯ ಹಿರಿಯರೆಲ್ಲರ ವಾದದ ತಿರುಳಾಗಿತ್ತು.

“ಆಗ ದಲಿತರ ಹಳೆಯ ಕೇರಿಯು ಊರಿನ ಒಂದು ಮೂಲೆಯಲ್ಲಿತ್ತು. ಒಂದರ ಮಗ್ಗುಲಲ್ಲಿ ಮತ್ತೊಂದು ಗುಡಿಸಲು ಸೇರ‍್ಕೊಂಡು ಯಾವ ದಾರಿಯು ಇರಲಿಲ್ಲ. ಈಗಾದ್ರೆ, ಸರ‍್ಕಾರದೋರು ಕೊಟ್ಟಿರುವ ಹೊಲಮಾಳದಲ್ಲಿ ಅಗಲವಾಗಿ ರಸ್ತೆ ಬಿಟ್ಟುಕೊಂಡು, ಮನೆಗಳನ್ನು ಕಟ್ಕೊಂಡಿದ್ದೀವಿ. ದಲಿತರ ಹೊಸಕೇರಿಯು ಊರಿನ ಎಲ್ಲಾ ಕೇರಿಗಳಂತೆ ಅಚ್ಚುಕಟ್ಟಾಗಿದೆ. ಅದು ಅಲ್ಲದೆ ದೇಗುಲಕ್ಕೆ ಹೋಗುವ ದಾರಿಯಲ್ಲೇ ಇದೆ. ಅದಕ್ಕೆ ದೇವರ ತೇರು ನಮ್ಮ ಕೇರಿ ಒಳಕ್ಕೂ ಬಂದು ಹೋಗ್ಲಿ ಅನ್ನೋದು ನಮ್ಮೆಲ್ಲರ ಆಸೆ ” ಎಂಬುದು ದಲಿತ ಹಿರಿಯರ, ಅದರಲ್ಲಿಯೂ ಹೊಸ ತಲೆಮಾರಿನ ದಲಿತ ಹುಡುಗರ ಪ್ರತಿವಾದವಾಗಿತ್ತು.

ಇತ್ತ ಮೇಲುಜಾತಿಯ ಹಿರಿಯರ ಮಾತನ್ನು ತೆಗೆದುಹಾಕಲಾಗದೆ, ಅತ್ತ ದಲಿತ ಯುವಕರ ಮಾತನ್ನು ಕಡೆಗಣಿಸಲಾಗದೆ ಊರಿನ ಪಟೇಲರು ಇಕ್ಕಟ್ಟಿಗೆ ಸಿಲುಕಿದರು. ತಮ್ಮ ಮಾತಿಗೆ ಎದುರಾಡದೆ, ಎಲ್ಲವನ್ನೂ ಒಪ್ಪಿಕೊಳ್ಳುತ್ತಿದ್ದ ಹಾಗೂ ಹಳೆಯ ತಲೆಮಾರಿನ ದಲಿತರಲ್ಲಿ ಹಿರಿಯನಾಗಿದ್ದ ಕಾಳದಾಸಿಯನ್ನು ಕುರಿತು ಪಟೇಲರು-

“ನೋಡು ಕಾಳದಾಸಿ, ಎಲ್ಲಾ ವಿಚಾರಗಳಲ್ಲೂ ನಮ್ಮೂರು ನಮ್ಮೆಲ್ಲರ ತಾತ-ಮುತ್ತಾತಂದಿರ ಕಾಲದಿಂದಲೂ ಒಗ್ಗಟ್ಟಾಗಿ ಇಲ್ಲಿಗಂಟ ನಡಕೊಂಡು ಬಂದಿದೆ. ಈಗ ಇದೊಂದು ವಿಚಾರದಲ್ಲಿ ಗಲಾಟೆ ಮಾಡ್ಕೊಳ್ಳೋದು ಬ್ಯಾಡ. ಹಿಂದಿನಿಂದ ತೇರು ಎಲ್ಲೆಲ್ಲಿ ಬರ‍್ತಿತ್ತೊ…ಎಲ್ಲೆಲ್ಲಿ ಹೊಯ್ತಿತ್ತೊ…ಅಲ್ಲಲ್ಲೇ ಬರ‍್ಲಿ…ಅಲ್ಲಲೇ ಹೋಗ್ಲಿ. ನಿಮ್ಮ ಹುಡುಗರಿಗೆ ನೀನೇ ಸ್ವಲ್ಪ ತಿಳುವಳಿಕೆ ಹೇಳು” ಎಂದರು.

ಕಾಳದಾಸಿಯು ಪಟೇಲರ ಮಾತಿಗೆ ಏನನ್ನಾದರೂ ಹೇಳುವುದಕ್ಕೆ ಮೊದಲೇ, ದಲಿತ ಯುವಕ ಶಿವಣ್ಣನು ನಡುವೆ ತಲೆಹಾಕಿ, ಪಟೇಲರನ್ನು ಉದ್ದೇಶಿಸಿ-

“ನೋಡಿ ಸ್ವಾಮಿ, ನಮ್ಮ ಕೇರಿಗೆ ದೇವರ ತೇರು ಬಂದು ಹೋದರೆ ನಮಗೆಲ್ಲಾ ಏನೋ ಏಳ್ಗೆ ಆಗೋಯ್ತದೆ ಅಂತ ಈ ರೀತಿ ಕೇಳ್ತಾಯಿಲ್ಲ. ನಮ್ಮೂರಲ್ಲಿ ನಾವು ಎಲ್ಲರಂಗೆ ಒಂದು ಒಕ್ಕಲಾಗಿ, ಮನುಸರಾಗಿ ಬಾಳ್ತಿದ್ದೀವಿ ಅನ್ನೋದನ್ನು ಗ್ಯಾರಂಟಿ ಮಾಡ್ಕೋಕೆ ಹಿಂಗೆ ಕೇಳ್ಕೊಳ್ತ ಇದ್ದೀವಿ. ಊರಿನ ಹಿರಿಯರಾದ ನೀವೆಲ್ಲಾ ದೊಡ್ಡ ಮನಸ್ಸು ಮಾಡಿ, ಇದಕ್ಕೆ ಒಪ್ಪಿಗೆ ಕೊಡ್ಬೇಕು ” ಎಂದು ವಿನಂತಿಸಿಕೊಂಡ.

ಎಂ.ಎ., ಪದವಿಯನ್ನು ಪಡೆದಿದ್ದ ಶಿವಣ್ಣನು, ಅಂಬೇಡ್ಕರ್ ಅವರು ಬರೆದಿದ್ದ ಹೊತ್ತಿಗೆಗಳನ್ನು ಚೆನ್ನಾಗಿ ಓದಿ, ಇಂಡಿಯಾದೇಶದ ಸಾಮಾಜಿಕ ಚರಿತ್ರೆಯನ್ನು ಅರಿತವನಾಗಿದ್ದ. ಯಾವುದೇ ವಿಚಾರವನ್ನಾಗಲಿ ನಾಲ್ಕು ಮಂದಿಯ ಮುಂದೆ ತಾಳ್ಮೆಯಿಂದ ವಿವರಿಸಿ, ಕೇಳುಗರಿಗೆ ಮನದಟ್ಟು ಮಾಡಿಕೊಡುವುದರಲ್ಲಿ ಪರಿಣಿತನಾಗಿದ್ದ. ಶಿವಣ್ಣನು ಊರಿನಲ್ಲಿ ಮಾಡುತ್ತಿದ್ದ ಸಾಮಾಜಿಕ ಚಟುವಟಿಕೆಗಳಿಗೆ ಮೇಲುಜಾತಿಯ ವಿದ್ಯಾವಂತ ಯುವಕರ ಬೆಂಬಲವಿತ್ತು.
ಮತ್ತೆ ಇನ್ನೊಂದು ಗಂಟೆ ಮಾತುಕತೆ ಮುಂದುವರಿಯಿತು. ಕಟ್ಟಕಡೆಗೊಮ್ಮೆ ಮೇಲುಜಾತಿಯ ಹಿರಿಯರೊಬ್ಬರು ಒಂದು ಸಲಹೆಯನ್ನು ನೆರೆದವರ ಮುಂದಿಡುತ್ತಾ-

“ನೋಡ್ರಪ್ಪ, ನಾವೆಲ್ಲಾ ಹೊತಾರೆಯಿಂದಲೂ ನಮ್ಮ ನಮ್ಮ ಮೂಗಿನ ನೇರಕ್ಕೆ ಮಾತಾಡ್ಕೊಳ್ತ ಇದ್ದೀವಿ. ಇನ್ನೂ ನಾಕು ದಿನ ಹಿಂಗೆ ಮಾತಾಡುದ್ರು, ಇದು ಬಗೆಹರಿಯುವಂಗೆ ಕಾಣೂದಿಲ್ಲ. ಅದಕ್ಕೆ ನಾನೊಂದು ದಾರಿ ಹೇಳ್ತೀನಿ…ನಿಗ ಇಟ್ಟು ಕೇಳಿ” ಎಂದರು.

ಪಟೇಲರು ಈಗ ಗುಂಪಿನ ಮಾತುಕತೆಯ ಸದ್ದನ್ನು ಅಡಗಿಸಿ, ಅವರ ಮಾತಿನ ಕಡೆ ಎಲ್ಲರ ಗಮನ ಹರಿಯುವಂತೆ ಮಾಡಿದರು. ಹಿರಿಯರು ತಮ್ಮ ಮಾತನ್ನು ಮುಂದುವರಿಸಿ-

“ನಮ್ಮೂರಿನ ಬಸವಣ್ಣ ದೇವರನ್ನು ಪೂಜೆ ಮಾಡಿ, ಮಾರಿಗುಡಿ ತಾವಿಂದ ಬುಟ್ಬುಡ್ಮ. ಅದ ಮುಂದೆ ಬುಟ್ಕೊಂಡು, ನಾವೆಲ್ಲಾ ಹಿಂದೆ ಹೋಗವ. ಅದು ಯಾವ ಯಾವ ಕೇರಿಗಳಲ್ಲಿ ಹಾದು, ಈಶ್ವರನ ಗುಡಿ ಹತ್ತಿರಕ್ಕೆ ಹೊಯ್ತದೋ…ಅಲ್ಲೆಲ್ಲಾ ತೇರನ್ನು ಎಳೆಯೋಣ ” ಎಂದರು.

ಊರಿನ ಎಲ್ಲರ ಜಮೀನುಗಳಲ್ಲಿ ಬಗೆಬಗೆಯ ಮೇವನ್ನು ಮೇದು, ಆಕಾರದಲ್ಲಿ ಆನೆಯಂತಿದ್ದ ಬಸವ, ಗುಣದಲ್ಲಿ ತುಂಬಾ ಸಾದುವಾಗಿತ್ತು. ಊರಿನ ಎಲ್ಲಾ ಕೇರಿಗಳಲ್ಲೂ ತಿರುಗಾಡುತ್ತಿದ್ದ ಬಸವನಿಗೆ, ಜಾತಿಮತಕುಲಗಳ ಮೇಲು-ಕೀಳಿನ ಅಂತರವಿಲ್ಲದೆ ಎಲ್ಲರೂ ಅದಕ್ಕೆ ಕಯ್ ತಿಂಡಿಯನ್ನು ನೀಡುತಿದ್ದರು. ಈ ರೀತಿ ಊರಿನವರೆಲ್ಲರ ಒಲವು-ನಲಿವಿಗೆ ಬಸವ ಪಾತ್ರವಾಗಿತ್ತು.
ಹಿರಿಯರು ಹೇಳಿದ ಮಾತಿಗೆ ಕೆಲವೇ ಗಳಿಗೆಯಲ್ಲಿ ಅಲ್ಲಿದ್ದವರಲ್ಲಿ ಹೆಚ್ಚಿನ ಮಂದಿ ತಮ್ಮ ಒಪ್ಪಿಗೆಯನ್ನು ನೀಡಿದರು. ಶಿವಣ್ಣನಂತೆ ವಿಚಾರವಂತರಾಗಿದ್ದ ಯುವಕರಿಗೆ ಈಗ ಬಾಯಿ ಕಟ್ಟಿದಂತಾಗಿತ್ತು. ಬೇರೆ ದಾರಿಯಿಲ್ಲದೆ ಹೊಸ ತಲೆಮಾರಿನ ದಲಿತ ಯುವಕರು ಬಸವಣ್ಣದೇವರ ಸೂತ್ರಕ್ಕೆ ಅನಿವಾರ‍್ಯವಾಗಿ ತಲೆಬಾಗಬೇಕಾಯಿತು. ಮಾತು ಬಲ್ಲ ಮಾನವರು ಪರಸ್ಪರ ಸರಿ-ತಪ್ಪುಗಳನ್ನು ಚರ‍್ಚಿಸಿ, ಅರಿವಿನಿಂದ ಬಗೆಹರಿಸಿಕೊಳ್ಳಬೇಕಾಗಿದ್ದ ಸಮಸ್ಯೆಗೆ, ಮಾತು ಬಾರದ ಬಸವನಿಂದ ಪರಿಹಾರವನ್ನು ಪಡೆದುಕೊಳ್ಳುವ ವಿಚಿತ್ರ ಸನ್ನಿವೇಶ ಬಂದೊದಗಿತ್ತು.
ಅಲ್ಲೇ ಸ್ವಲ್ಪ ದೂರದಲ್ಲಿ ಮೆಲುಕು ಹಾಕುತ್ತ ಕೆಡೆದುಕೊಂಡಿದ್ದ ಬಸವನನ್ನು ಮೇಲಕ್ಕೇಳಿಸಿ, ಮಾರಿಗುಡಿಯ ಮುಂದಕ್ಕೆ ಕರೆತಂದು, ತಮಡಪ್ಪನವರಿಂದ ಬಸವನ ಹಣೆಗೆ ಅರಿಸಿನ ಕುಂಕುಮವನ್ನು ಹಚ್ಚಿಸಿ, ಕೊಂಬುಗಳಿಗೆ ಹೂವನ್ನು ಮುಡಿಸಿ, ಆರತಿ ಎತ್ತಿ ಪೂಜಿಸಿದ ನಂತರ, ಬಸವನನ್ನು ಈಶ್ವರನ ಗುಡಿಯತ್ತ ಅಟ್ಟುತ್ತ, ಅಲ್ಲಿದ್ದವರೆಲ್ಲರೂ ಬಸವನ ಹಿಂದೆ ಸಾಗಿದರು.
ಮುಂದೆ ಮುಂದೆ ಬಸವ…..ಹಿಂದೆ ಹಿಂದೆ ಜನ. ಊರಿನ ಮೇಗಲಕೇರಿ…..ಕೆಳಗಲಕೇರಿಗಳಲ್ಲಿ ಹಾದು ಬಂದ ಬಸವ…..ದಲಿತರ ಕೇರಿಯ ಬಳಿಗೆ ಬಂದಾಗ, ಪಕ್ಕದಲ್ಲಿ ಕಿರಿದಾಗಿದ್ದ ದಾರಿಯತ್ತ ನುಗ್ಗದೆ, ನೇರವಾಗಿ ಅಗಲವಾಗಿದ್ದ ರಸ್ತೆಗೆ ಬಂದು, ಮದಗಜದಂತೆ ಹೆಜ್ಜೆಗಳನ್ನಿಡುತ್ತಾ ದಲಿತರ ಹೊಸಕೇರಿಯ ಮೂಲಕ ಈಶ್ವರನ ದೇಗುಲದ ಬಳಿಗೆ ಬಂತು.

(ಚಿತ್ರ: www.trekearth.com)

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: