ಅರಿಮೆಗೊಂದು ಕನ್ನಡಿಗನ ಕೊಡುಗೆ

 ಹರ‍್ಶಿತ್ ಮಂಜುನಾತ್.

IMG_555048701926478

ಇತ್ತೀಚಿನ ದಿನಗಳ ಬಹಳ ಬೇಡಿಕೆಯ ಉರುವಲು ಪೆಟ್ರೋಲ್. ಈ ಪೆಟ್ರೋಲ್ ಬೆಲೆಯಲ್ಲಿ ಹೆಚ್ಚಿನ ಬದಲಾವಣೆಗಳನ್ನು ಕಾಣುತ್ತಾ ಬಂದಿದ್ದೇವೆ. ಅದರಲ್ಲಿಯೂ ಪೆಟ್ರೋಲ್ ಬೆಲೆ ಏರಿಕೆಯ ಕಹಿ ಉಂಡಿದ್ದೇ ಹೆಚ್ಚು. ಇದು ನೇರವಾಗಿ ಪರಿಣಾಮ ಬೀರುತ್ತಿರುವುದು ಮದ್ಯಮ ವರ‍್ಗದ ಜನರ ಮೇಲೆ. ಆದರೂ ಕೂಡ ಪೆಟ್ರೋಲ್ ಕರೀದಿಸುವವರ ಸಂಕ್ಯೆ ಕಡಿಮೆಯಾಗುತ್ತಿಲ್ಲ.

ಇಶ್ಟೇ ಅಲ್ಲದೇ, ದಿನದಿಂದ ದಿನಕ್ಕೆ ನೂರಾರು ಹೊಸ ವಾಹನಗಳು ರಸ್ತೆಗಿಳಿಯುತ್ತಿವೆ. ಇದು ಸಹಜವಾಗಿ ಪೆಟ್ರೋಲ್ ಬೇಡಿಕೆಯನ್ನು ಇನ್ನೂ ಹೆಚ್ಚಿಸುತ್ತಿದೆ. ಆದರೆ ಪೆಟ್ರೋಲ್ ಉತ್ಪಾದನೆ ಕೊನೆಯವರೆಗೂ ಬರುವುದಿಲ್ಲ. ಮುಂದೊಂದು ದಿನ ಈ ಉರುವಲು ಬರಿದಾಗಿ ಹೋದರೆ ಏನು ಕತೆ ಎಂದು ಯೋಚಿಸಬೇಕಾದ ಸಮಯದಲ್ಲಿ ನಮಗೆ ಬೇರೊಂದು ಹೊಳಹು ದೊರೆತಿದೆ. ಈ ಹೊಳಹು ಮೂಡಿದ್ದು ಅಮೇರಿಕದಲ್ಲಿ ಕಳೆದ 30 ವರುಶಗಳಿಂದ ಅರಕೆಯನ್ನು ನಡೆಸುತ್ತಿರುವ ಹೆಸರಾಂತ ಅರಿಗ, ನಮ್ಮ ಹೆಮ್ಮೆಯ ಕನ್ನಡಿಗ ಪ್ರೊಪೆಸರ್‍ ಜಿ. ಕೆ. ಸೂರ‍್ಯ ಪ್ರಕಾಶ್.

ಇವರ ಈ ಅರಕೆಯನ್ನು ಬಳಸಿಕೊಂಡರೆ, ಈಗಾಗಲೇ ನಮ್ಮ ದೇಶದಲ್ಲಿ 77 ರಿಂದ 82 ರೂಪಾಯಿ ವರೆಗೆ ಮಾರಾಟವಾಗುತ್ತಿರುವ ಪೆಟ್ರೋಲ್ ಗೆ ಪರ‍್ಯಾಯವಾಗಿ ಪೆಟ್ರೋಲ್‍ನಶ್ಟೇ ಪರಿಣಾಮಕಾರಿಯಾದ ಮೆತನಾಲ್ ಉರುವಲನ್ನು ಬಳಸಿ ಗಾಡಿಗಳನ್ನು ಓಡಿಸಬಹುದು. ಅದೂ ಕೂಡಾ 18 ರೂಪಾಯಿ ವೆಚ್ಚದಲ್ಲಿ. ಈಗಾಗಲೇ ಈ ಚಳಕದರಿಮೆಯನ್ನು ಬಳಸಿಕೊಂಡು ಚೀನಾ, ಬ್ರೆಜೀಲ್ ದೇಶಗಳಲ್ಲಿ ಪರ‍್ಯಾಯ ಉರುವಲಿನಿಂದ ಗಾಡಿಗಳು ಓಡುತ್ತಿವೆ.

ಇಂತಹ ಚಳಕದರಿಮೆ ನಮ್ಮ ದೇಶಕ್ಕೂ ಬರಬೇಕು ಎಂಬುದು ಪ್ರೊಪೆಸರ್‍ ಜಿ.ಕೆ. ಸೂರಿಯ ಪ್ರಕಾಶ್‍ರವರ ಬಯಕೆ. ಇಂತಹ ಚಳಕದರಿಮೆಯಿಂದ ಪೆಟ್ರೋಲ್ ಬೆಲೆ ಕಡಿಮೆಯಾಗುವುದಲ್ಲದೇ, ಮದ್ಯಮ ವರುಗದ ಮಂದಿಯ ಹಣಕಾಸಿನ ಹೊರೆಯನ್ನೂ ಇಳಿಸಲಿದೆ. ಅಲ್ಲದೆ ಇದು ನಮ್ಮ ದೇಶದ ಹಣಕಾಸಿನ ಸಂಕಶ್ಟಕ್ಕೆ ತುಸು ಚೇತರಿಕೆಯನ್ನು ನೀಡುವುದರಲ್ಲಿ ಸಂಶಯವಿಲ್ಲ.

ಇವಿಶ್ಟೇ ಅಲ್ಲದೇ, ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ, ಕಾರ್‍ಕಾನೆಗಳು ಉಗುಳುವ ಇಂಗಾಲದ ಡಯ್ ಆಕ್ಸಯ್ಡ್, ಪ್ಲಾಸ್ಟಿಕ್, ತೆಂಗಿನ ನಾರು ಇಂತಹ ವಸ್ತುಗಳನ್ನು ಬಳಸಿ ಕಡಿಮೆ ವೆಚ್ಚದಲ್ಲಿ ಉರುವಲು ಮತ್ತು ಮಿಂಚನ್ನು ಉತ್ಪಾದಿಸಿ, ಪ್ರಪಂಚವನ್ನು ಜಾಗತಿಕ ತಾಪಮಾನದಿಂದ ಬಿಡುಗಡೆಗೊಳಿಸಬಹುದೆಂದು ಅವರು ತಿಳಿಸಿದ್ದಾರೆ. ಇಂತಹ ಹೆಚ್ಚುಗಾರಿಕೆಯ ಚಳಕದರಿಮೆಯನ್ನು ಮಾಡಿರುವ ಇವರಿಗೆ ಇಸ್ರೇಲ್ ಸರಕಾರ ಈಗಾಗಲೇ 6 ಕೋಟಿ ರೂಪಾಯಿ ಬಹುಮಾನವನ್ನು ನೀಡಿ ಸನ್ಮಾನಿಸಿದೆ.

ನಮ್ಮ ನಾಡಿನಿಂದ ದೂರದ ಊರಿಗೆ ಹೋಗಿ ಇಂತಹ ಮಹತ್ವದ ಅರಕೆಯನ್ನು ಮಾಡಿರುವುದು ಕನ್ನಡಿಗರಾದ ನಮಗೆ ಹೆಮ್ಮೆಯ ವಿಶಯ, ಹಾಗೆಯೇ ನಮ್ಮ ಸರಕಾರವು ಇವರಿಗೆ ಪೂರಕವಾದ ಸವಲತ್ತು, ಪರಿಕರದ ಜೊತೆಗೆ ಹಣಕಾಸಿನ ನೆರವನ್ನು ನೀಡಿ ಬೆನ್ನುತಟ್ಟುವುದರಿಂದ ಅವರಿಗೆ ಇನ್ನೂ ಹೆಚ್ಚಿನ ಅರಕೆಯನ್ನು ಮಾಡಲು ಉತ್ತೇಜನ ನೀಡಬೇಕಿದೆ.

1953 ರಲ್ಲಿ ಬೆಂಗಳೂರಿನ ವಸಂತ ನಗರದಲ್ಲಿ ಜನಿಸಿದ ಇವರು, ತಮ್ಮ ಮೊದಲ ಹಂತದ ಕಲಿಕೆಯನ್ನು ವಸಂತ ನಗರದ ಸರಕಾರಿ ಪ್ರಾತಮಿಕ ಶಾಲೆಯಲ್ಲಿ ಕನ್ನಡ ಮಾದ್ಯಮದಲ್ಲಿ ಮುಗಿಸಿ, ಕುಮಾರ ಪಾರ್‍ಕ್ ಬಳಿಯ ಗಾಂದಿನಗರ ಶಾಲೆಯಲ್ಲಿ ಮುಂದಿನ ಹಂತದ ಕಲಿಕೆ ಮುಂದುವರೆಸಿ, ತಮ್ಮ ಕಾಲೇಜಿನ ಕಲಿಕೆಯನ್ನು ನ್ರುಪತುಂಗ ರಸ್ತೆಯ ಸರಕಾರಿ ಕಲೆ ಮತ್ತು ವಿಗ್ನ್ಯಾನ ಕಾಲೇಜಿನಲ್ಲಿ ಮುಗಿಸಿದರು.

ಕನ್ನಡ ಮಾದ್ಯಮ ಮತ್ತು ಸರಕಾರಿ ಶಾಲೆಗಳನ್ನು ಕಂಡು ಮೂಗು ಮುರಿಯುವವರಿಗೆ ಮಾದರಿಯಾಗಿ, ತಮ್ಮ ಮೊದಲ ಹಂತದ ಕಲಿಕೆಯನ್ನು ತಾಯ್ನುಡಿಯಾದ ಕನ್ನಡ ಮಾದ್ಯಮದಲ್ಲಿ ಮಾಡುವುದರಿಂದ ತಮ್ಮ ಯೋಚನಾ ಶಕ್ತಿಯ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

(ಮಾಹಿತಿ ಮತ್ತು ತಿಟ್ಟಸೆಲೆ: ಉದಯವಾಣಿ, ವಿಕಿಪೀಡಿಯಾ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: