ಜಪಾನಿನ ಮುಪ್ಪು ಕರ್‍ನಾಟಕಕ್ಕೂ ಬರುತ್ತದೆ!

ಚೇತನ್ ಜೀರಾಳ್.

aging society

ಹಿಂದಿನಿಂದಲೂ ಜಪಾನಿನಲ್ಲಿ ಮುಪ್ಪಾದವರನ್ನು ತಮ್ಮ ಮನೆಗಳಲ್ಲೇ ಕೊನೆಯವರೆಗೂ ನೋಡಿಕೊಳ್ಳುವುದು ಅವರ ಪದ್ದತಿ. ಆದರೆ ಇಂದು ಬದಲಾಗುತ್ತಿರುವ ಕಾಲಮಾನದಲ್ಲಿ ಮಕ್ಕಳು ದುಡಿಯುವ ಸಲುವಾಗಿ ತಮ್ಮ ತಂದೆ ತಾಯಿಗಳನ್ನು ತಮ್ಮ ಹಳ್ಳಿಗಳಲ್ಲಿ ಬಿಟ್ಟು ಪಟ್ಟಣಕ್ಕೆ ವಲಸೆ ಹೋಗುತ್ತಿರುವುದು ಹೆಚ್ಚಾಗುತ್ತಿದೆ. ಇದರಿಂದಾಗಿ ಮನೆಯಲ್ಲಿಯೇ ಉಳಿಯುವ ಮುಪ್ಪಾದವರನ್ನು ನೋಡಿಕೊಳ್ಳಲು ಈಗ ಹೊಸ ವ್ಯವಸ್ತೆಯೊಂದನ್ನು ಕಂಡುಕೊಳ್ಳಲಾಗಿದೆ. ಈ ವ್ಯವಸ್ತೆಯಲ್ಲಿ ವಯ್ದ್ಯರು ದಿನದ 24 ಗಂಟೆಗಳ ಸೇವೆಯನ್ನು ಈ ಹಿರಿಯರಿಗೆ ನೀಡುತ್ತಾರೆ. ದಿನದ ಯಾವುದೇ ಸಮಯದಲ್ಲಾದರೂ ಈ ಹಿರಿಕರು ವಯ್ದ್ಯರನ್ನು ಮನೆಗೆ ಕರೆದರೂ ಅವರು ಬಂದು ಇವರ ಯೋಗಕ್ಶೇಮ ನೋಡಿಕೊಂಡು ಹೋಗುತ್ತಾರೆ. ಇದು ಈಗ ಜಪಾನಿನಲ್ಲಿ ನಡೆಯುತ್ತಿರುವ ಕತೆ.

ಇದರಿಂದಾಗಿ ಮುಪ್ಪಾದವರಿಗೆ ಮಕ್ಕಳಿಗಿಂತ ಸರಕಾರ ನಡೆಸುವ ಮುಪ್ಪು ಕೇಂದ್ರಗಳೇ ಕೊನೆಯ ದಿನಗಳನ್ನು ಕಳೆಯುವ ತಾಣಗಳಾಗಿವೆ. ಇದನ್ನು ತಪ್ಪಿಸಲು ಕವಹಿಟೋ ಮತ್ತು ಅವರಂತಹ ಅನೇಕ ವಯ್ದ್ಯರು ಈ ಮುಪ್ಪಾದವರಿಗೆ ಅವರುಗಳ ಮನೆಯಲ್ಲೇ ಚಿಕಿತ್ಸೆ ನೀಡಿ ಕೊನೆಯ ದಿನಗಳನ್ನು ಸಂತೋಶದಿಂದ ಕಳೆಯಲು ಸಹಾಯ ಮಾಡುತ್ತಿದ್ದಾರೆ.

ಒಂದು ಸುದ್ದಿಯ ಪ್ರಕಾರ ಇಂದು ಜಪಾನಿನ ಒಟ್ಟು ಮಂದಿಯಣಿಕೆಯಲ್ಲಿ ಶೇ 25ರಶ್ಟು ಮಂದಿ 65ಕ್ಕಿಂತ ಹೆಚ್ಚಿನ ವಯಸ್ಸಿನವರು ಇದ್ದಾರೆ ಎನ್ನುವುದು ಆತಂಕದ ವಿಶಯವಾಗಿದೆ. 1950ರಲ್ಲಿ ಜಪಾನಿನ ಒಟ್ಟು ಮಂದಿಯಣಿಕೆಯ ಶೇ 5ರಶ್ಟು ಮಾತ್ರ 65 ಕ್ಕಿಂತ ಹೆಚ್ಚಿನ ವಯಸ್ಸಿನವರಿದ್ದರು. ಇವತ್ತು ಅದು ಶೇ 25 ರಶ್ಟು ಆಗಿದೆ. ಇದರಿಂದಾಗಿ ಜಪಾನಿನಲ್ಲಿ ವರ್‍ಶಕ್ಕೆ 400 ಶಾಲೆಗಳು ಮುಚ್ಚಲಾಗುತ್ತಿದೆ ಅತವಾ ಆ ಶಾಲೆಗಳನ್ನು ಮುಪ್ಪಿನವರ ಸಹಾಯ ಕೇಂದ್ರಗಳನ್ನಾಗಿ ಮಾಡಲಾಗುತ್ತಿದೆ. ಇದಕ್ಕೆಲ್ಲ ಮುಕ್ಯ ಕಾರಣ ಜಪಾನಿನಲ್ಲಿ ಕುಸಿಯುತ್ತಿರುವ ಜನಸಂಕ್ಯೆ ಮತ್ತು TFR.

ಏನಾಗಿದೆ ಜಗತ್ತಿನಲ್ಲಿ?

ಜಪಾನಿನಲ್ಲಿ ಹೀಗಾಗುತ್ತಿರುವುದಕ್ಕೆ ಮುಕ್ಯ ಕಾರಣ ನಿರಂತರವಾಗಿ ಕುಸಿಯುತ್ತಾ ಬಂದಿರುವ ಜನಸಂಕ್ಯೆ. ಇಂದು ಜಪಾನಿನ TFR 1.41 ರಶ್ಟಿದೆ. ಹಾಗಂತ ಇದು ಜಪಾನಿಗೆ ಮಾತ್ರ ಸೀಮಿತವಾಗಿಲ್ಲ, ಆದರೆ ಜಪಾನಿಗೆ ಎಲ್ಲರಿಗಿಂತ ಇದರಿಂದ ಹೆಚ್ಚು ತೊಂದರೆಗೊಳಗಾಗಿದೆ. ಜಪಾನಿನ ಜೊತೆಜೊತೆಗೆ ಚೆಕ್ ರಿಪಬ್ಲಿಕ್, ಪೋಲಾಂಡ್, ಸ್ಲೋವೇನಿಯಾ, ಬೆಲಾರುಸ್, ಬೋಸ್ನಿಯ, ತೆಂಕಣ ಕೊರಿಯಾ, ತಯ್ವಾನ್ ಮತ್ತು ಹಾಂಗ್ ಕಾಂಗ್ ದೇಶಗಳ TFR ಜಪಾನಿಗಿಂತ ಕೆಳಗಿದೆ. ಜರ್‍ಮನಿ, ಇಟಲಿ, ಗ್ರೀಸ್ ಮತ್ತು ಹಂಗೇರಿ ನಾಡುಗಳ TFR ಜಪಾನಿನಶ್ಟೇ ಇದೆ. ಇದರ ಜೊತೆಗೆ ಚೀನಾದಲ್ಲಿ TFR 1.51ರಶ್ಟಿದೆ. ಇದರಿಂದಾಗಿ ಚೀನಾ ಶ್ರೀಮಂತ ದೇಶವಾಗುವ ಮುಂಚೆಯೇ ಮುಪ್ಪಾಗಿ ಮುದುಡಿ ಹೋಗುತ್ತದೆ ಎನ್ನುತ್ತಾರೆ ಅರಿಗರು. ಸಿಂಗಾಪುರದಲ್ಲಿ TFR 0.79ರಶ್ಟಿದೆ, ಇದು ಅತಿ ಕಡಿಮೆ TFR ಹೊಂದಿರುವ ನಾಡಾಗಿದೆ.

ಕನ್ನಡಿಗರೂ ಪಾಟ ಕಲಿಯಬೇಕು

ಒಂದು ಜನಾಂಗ ಮುಂದುವರಿಯಲು ಅವರ TFR 2.1ರಶ್ಟು ಇರಬೇಕು ಎನ್ನುವುದು ಪ್ರಪಂಚದೆಲ್ಲೆಡೆಯ ಅರಿಗರು ಹೇಳುವ ಮಾತು. ಸದ್ಯಕ್ಕೆ ಕನ್ನಡಿಗರ ಜನಸಂಕ್ಯೆ ಇವತ್ತು ಈ ಸಮಸ್ಯೆಯ ಸುಳಿಗೆ ಸಿಕ್ಕಿಲ್ಲ ಆದರೆ ಕರ್‍ನಾಟಕದ TFR ಸಹ ನಿದಾನವಾಗಿ ಕುಸಿಯುತ್ತಾ ಬರುತ್ತಿದೆ ಎನ್ನುವುದು ಗೊತ್ತಾಗುತ್ತಿದೆ. 2010ರಲ್ಲಿ 1.98 ಇದ್ದದ್ದು 2013ರಕ್ಕೆ 1.79ಕ್ಕೆ ಇಳಿದಿರುವುದು ಆತಂಕದ ವಿಶಯ.

ಇಂದು ಹುಟ್ಟುತ್ತಿರುವ ಬಹುತೇಕ ಕೆಲಸಗಳು ನಗರ ಕೇಂದ್ರಿತವಾಗಿರುವುದರಿಂದ ಯುವಕರು ನಗರಗಳಿಗೆ ವಲಸೆ ಬರುತ್ತಿರುವುದು ಸಾಮಾನ್ಯ. ನಗರದಲ್ಲಿನ ತಮ್ಮ ಜೀವನವನ್ನು ಸರಿದೂಗಿಸಲು ಮಕ್ಕಳನ್ನು ತಡವಾಗಿ ಮಾಡಿಕೊಳ್ಳುವುದು ಅತವಾ ಒಂದೇ ಮಗು ಸಾಕು ಎನ್ನುವ ಯೋಜನೆಗಳಿಂದಾಗಿ ಕನ್ನಡಿಗರ ಸಂಕ್ಯೆ ಕುಸಿಯುತ್ತಾ ಹೋಗುತ್ತದೆ ಮತ್ತು ಇನ್ನೊಂದೆಡೆ ಬಹುತೇಕ ಕನ್ನಡ ಜನಾಂಗ ಮುಪ್ಪಿನ ಅಂಚಿಗೆ ನಡೆಯುತ್ತದೆ ಆಗ ನಾವು ಹೊರಗಿನವರ ಮೇಲೆ ಅವಲಂಬಿತವಾಗುವುದು ತಪ್ಪುವುದಿಲ್ಲ. ಹೆಚ್ಚುತ್ತಿರುವ ಬೇಲೆಯೇರಿಕೆಯಿಂದಾಗಿ ಜನರಿಗೆ ತಮ್ಮ ತಂದೆ ತಾಯಿಗಳನ್ನು ನಗರಕ್ಕೆ ಕರೆತರುವುದು ಕಶ್ಟದ ಕೆಲಸವಾಗುತ್ತಿದೆ. ತಂದೆ ತಾಯಿಗಳು ತಮ್ಮ ಊರುಗಳಲ್ಲೇ ಉಳಿಯಬೇಕಾದ ಪರಿಸ್ತಿತಿ. ಇನ್ನೊಂದೆಡೆ ಜಪಾನಿನಲ್ಲಿರುವಂತೆ ಸರಕಾರ ಮುಪ್ಪಾದವರನ್ನು ನೋಡಿಕೊಳ್ಳುವ ವ್ಯವಸ್ತೆಯನ್ನು ಮಾಡಿಲ್ಲ. ಇದರ ಜೊತೆಗೆ ಕುಸಿಯುತ್ತಿರುವ ಟಿ.ಎಪ್.ಆರ್.ನಿಂದಾಗಿ ಕನ್ನಡ ಜನಾಂಗವೇ ಮುಂದೊಂದು ದಿನ ನಶಿಸಿ ಹೋಗುವ ಅಪಾಯಕ್ಕೆ ಸಿಲುಕುವುದು ಸತ್ಯ.

ಕನ್ನಡ ಜನಾಂಗವನ್ನೇ ಅಳಿಸಬಲ್ಲ ಇಂತಹ ಕೆಲಸಗಳಿಂದ ಕನ್ನಡಿಗರನ್ನು ಎಚ್ಚರಿಸುವ ಕೆಲಸ ನಮ್ಮ ರಾಜ್ಯ ಸರಕಾರ ಮಾಡಬೇಕಿದೆ. ಇದರ ಜೊತೆಗೆ ಕನ್ನಡಿಗರಿಗಾಗಲಿ ಅತವಾ ಕರ್‍ನಾಟಕಕ್ಕಾಗಲಿ ಜನಸಂಕ್ಯೆ ಒಂದು ಸಮಸ್ಯೆಯಾಗಿ ಯಾವತ್ತಿಗೂ ಕಾಡಿಲ್ಲ. ಇವತ್ತಿಗೂ ನಮ್ಮ ನಾಡಿನಲ್ಲಿರುವ ಜನಸಾಂದ್ರತೆ ಬಾರತದಲ್ಲಿ ಅತ್ಯಂತೆ ಕಡಿಮೆ ಜನಸಾಂದ್ರತೆ ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ. ಹೀಗಿರುವಾಗ ಇದನ್ನು ಅರಿತು ನಮ್ಮ ಸರಕಾರ ಕನ್ನಡಿಗರ TFR 2.1ಕ್ಕಿಂತ ಕಡಿಮೆ ಕುಸಿಯದಂತೆ ನೋಡಿಕೊಳ್ಳಲು ಬೇಕಿರುವ ಕೆಲಸಗಳನ್ನು ಕಯ್ಗೆತ್ತಿಕೊಳ್ಳಬೇಕಿದೆ. ಇದರ ಜೊತೆಗೆ ಎಲ್ಲಾ ರಾಜ್ಯಗಳ ಹೊಣೆಹೊತ್ತಿರುವ ಒಕ್ಕೂಟ ಸರಕಾರ ಈಗ ನೀಡುತ್ತಿರುವ 2.1ಕ್ಕಿಂತ ಕಡಿಮೆಯ TFR ಗುರಿಯನ್ನು ವಿರೋದಿಸಿ ತನ್ನ ಜನಾಂಗದ ಏಳಿಗೆಯ ಬಗ್ಗೆ ಕಾಳಜಿ ವಹಿಸಬೇಕಿದೆ.

(ಚಿತ್ರ ಸೆಲೆ: japanfocus.org)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Mahesh Bhat says:

    ಕೆಲಸಗಾರರ ಕೊರತೆಯನ್ನು ನೀಗಿಸಬಲ್ಲ ರೋಬೋಟ್ ತಂತ್ರಜ್ಞಾನದಲ್ಲಿ ಜಪಾನ್ ಮುಂಚೂಣಿಯಲ್ಲಿದೆ.ಅದೇ ರೀತಿ ಮುಪ್ಪನ್ನು ಮುಂದೂಡುವ ಟ್ರಾನ್ಸ್ ಹ್ಯೂಮನ್ ತಂತ್ರಜ್ಞಾನವು ಜಗತ್ತಿನಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದೆ. ಮುಪ್ಪಾಗಿ ಮುದುಡಿ ಹೋಗುವುದನ್ನು ತಪ್ಪಿಸಲು ಜಗತ್ತಿನ ಅನೇಕ ದೇಶಗಳಲ್ಲಿ ತೀವ್ರಗತಿಯ ಸಂಶೋಧನೆಗಳಾಗುತ್ತಿವೆ

ಅನಿಸಿಕೆ ಬರೆಯಿರಿ: