ಕುರುಡರನ್ನು ಮರೆತ ಸರಕಾರದ ಮೆದುಜಾಣಗಳು!

ಶ್ರೀನಿವಾಸಮೂರ‍್ತಿ ಬಿ.ಜಿ.

blind

ಸ್ರ್ಕೀನ್ ರೀಡರ್‍ (screen reader), ಟೆಕ್ಸ್-ಟು-ಸ್ಪೀಚ್ (text-to-speech), ಟಯ್ಪಿಂಗ್ ಟೂಲ್ (typing-tool), ಓ.ಸಿ.ಅರ್‍ (OCR) ಹಾಗೂ ವರ‍್ಡ್ ಪ್ರೊಸೆಸ್ (word-process) ಮುಂತಾದ ಮೆದುಜಾಣಗಳು (software) ಕುರುಡರಿಗೆ ಪೂರಕವಾಗಿದ್ದಶ್ಟೂ ಕುರುಡರು ಜಗತ್ತಿನ ಅರಿವನ್ನು ಹೊಂದಲು ಹಾಗೂ ತಮಗನಿಸಿದ್ದನ್ನು ಬ್ರಯ್ಲ್ (Braille) ಲಿಪಿಯನ್ನು ಬಳಸದೆ ತಿಳಿಸಬಲ್ಲರು.

ಈ ಮೆದುಜಾಣಗಳು ನೆಲದವ್ವಳಿಂದ ಆಗಿರುವ ತೊಡಕನ್ನು ಆದಶ್ಟು ಕಡಿಮೆ ಮಾಡುತ್ತವೆ. ಮದ್ದರಿಗರಿಂದಲೂ ಕುರುಡರಿಗೆ ನೋಟವನ್ನು ದೊರಕಿಸಲಾಗದಿದ್ದರೂ ಮೆದುಜಾಣಗಳ ಬಿನಿಗೆಯವರು ನೋಟವನ್ನು ದೊರಕಿಸಬಲ್ಲರು. ಕುರುಡರಿಗೆ ಓ.ಸಿ.ಅರ್‍ (OCR) ಎಡಗಣ್ಣಾಗಿದ್ದರೆ, ಬಲಗಣ್ಣು ಸ್ರ್ಕೀನ್ ರೀಡರ್‍ (screen reader) ಹಾಗೂ ಟೆಕ್ಸ್ ಟು ಸ್ಪೀಚ್ (text-to-speech) ಆಗಿವೆ!

ನಿಮಗೂ ತಿಳಿದಿರುವಂತೆ, ಕನ್ನಡ ಮತ್ತು ಸಂಸ್ಕ್ರುತಿ ಇಲಾಕೆಯವರು ಮಾರುತಿ ತಂತ್ರಾಂಶ ಅಬಿವ್ರುದ್ದಿಗಾರರಿಂದ ಹೊರ ಗುತ್ತಿಗೆಯ ಮೂಲಕ ಒಂದಶ್ಟು ಮೆದುಜಾಣಗಳನ್ನು ಅಣಿಗೊಳಿಸಿದ್ದಾರೆ. ಇವುಗಳಲ್ಲಿ ಕುರುಡರಿಗೆಂದು ಕನ್ನಡ ಬ್ರಯ್ಲ್ ಮೆದುಜಾಣವನ್ನು ಅಣಿಗೊಳಿಸಿದ್ದಾರೆ. ಉಳಿದಂತೆ ASCII ಯಿಂದ ಯುನಿಕೋಡ್ (unicode)ಗೆ ಬದಲಿಸಬಲ್ಲ ಮೆದುಜಾಣ, ಕ್ಶೇಮ ಕನ್ನಡ ಕೀಬೋರ‍್ಡ್ (Kshema Kannada Keyboard) ಹಾಗೂ ಅಂಡ್ರಾಯ್ಡ್ ಮೊಬಯ್ಲ್ ಮೂಲಕ ಕನ್ನಡದಲ್ಲಿ ಸಂದೇಶವನ್ನು ಕಳುಹಿಸುವ ಮೆದುಜಾಣಗಳು ಸೇರಿವೆ. ಇವುಗಳನ್ನು ಕುರುಡರು ಬಳಸಲಾಗುವುದಿಲ್ಲ. ಜಾಗತಿಕ ಮೆದುಜಾಣದ ನಿಯಮಗಳನ್ನು ಪಾಲಿಸದಿರುವುದು ಹಾಗೂ ಕುರುಡರ ತಾಂತ್ರಿಕ ಸಮಸ್ಯೆಗಳನ್ನು ಅರಿತುಕೊಳ್ಳದೆ ಮೆದುಜಾಣಗಳನ್ನು ಅಣಿಗೊಳಿಸಿರುವುದೇ ಆಗಿದೆ.

ಈಗ ಅಂಡ್ರಾಯ್ಡ್ ಮೊಬಯ್ಲ್ ಹೆಚ್ಚೆಚ್ಚು ಮುಟ್ಟು-ತೆರೆಗಳಿಂದ (touch screen) ಕೂಡಿವೆಯಾದರೂ ಕುರುಡರು ಟಾಕ್-ಬ್ಯಾಕ್ (Talk-back) ಎಂಬ ಮೆದುಜಾಣದ ಮೂಲಕ ನೋಟವಿರುವವರಂತೆಯೇ ತುಸು ತೊಡಕುಗಳ ನಡುವೆಯೂ ಬಳಸುತ್ತಿದ್ದಾರೆ. ಇನ್ನು JAWS ಹಾಗೂ NVDA ಪರದೆ-ಓದುಗಗಳೊಂದಿಗೆ ಟೆಕ್ಸ್-ಟು-ಸ್ಪೀಚ್ (Text-to-speech) ಮೆದುಜಾಣಗಳನ್ನು ಹೊಂದಿಸಿಕೊಂಡು ಎಣ್ಣುಕಗಳನ್ನು ಅಗತ್ಯಕ್ಕನುಸಾರ ಬಳಸುತ್ತಿದ್ದಾರೆ. ಇವುಗಳ ಅರಿವನ್ನೂ ಹೊಂದದೆ ಈಗ ಕನ್ನಡ ಬ್ರಯ್ಲ್ ಮೆದುಜಾಣವನ್ನು ಅಣಿಗೊಳಿಸಿರುವುದು ತಪ್ಪಿನ ನಡೆತವಾಗಿದೆ.

ಈಗ ಕನ್ನಡದಲ್ಲಿ ಮೆದುಜಾಣವನ್ನು ಅಣಿಗೊಳಿಸುತ್ತಿರುವವರಲ್ಲಿ ಅತಿ ಹೆಚ್ಚು ಕನ್ನಡ ಪರವಾಗಿ ಕೆಲಸಮಾಡಿರುವವರೆಂದರೆ ದುಡ್ಡಿಗಲ್ಲದೆ ಸೇವೆಯ ನಿಟ್ಟಿನಲ್ಲಿ ಬಿಡುವಿದ್ದಾಗ ಮೆದುಜಾಣಗಳನ್ನು ಅಣಿಗೊಳಿಸುತ್ತಿದ್ದಾರಲ್ಲಾ ಅವರು ಮಾತ್ರ. ಬೇಕಾದರೆ ನೀವೇನೆ ಈ ನಿಟ್ಟಿನಲ್ಲಿ ಗಮನಿಸಿ.

ಬರಹ ಮೆದುಜಾಣ ಬ್ರಯ್ಲ್ ಲಿಪಿಯ ಹೊತ್ತಗೆಗಳನ್ನು ಅಣಿಗೊಳಿಸುವ ಸವಲತ್ತನ್ನು ಹೊಂದಿರುವಾಗ ಮಾರುತಿ ತಂತ್ರಾಂಶ ಅಬಿವ್ರುದ್ದಿಗಾರರು ಅಣಿಗೊಳಿಸಿರುವ ಈ ಮೆದುಜಾಣ ಬೇಕೆ ಎಂಬುವುದರ ಕುರಿತು ಸರ‍್ಕಾರ ಯೋಚಿಸಬೇಕಿದೆ. ಬರಹ ಮೆದುಜಾಣದಲ್ಲಿ ಬ್ರಯ್ಲ್ ಗೆ ಸಂಬಂದಿಸಿದಂತೆ ಡಕ್ಸ್ಬರಿ ಎಂಬ ಮೆದುಜಾಣದಲ್ಲಿರುವ ಸವಲತ್ತುಗಳನ್ನು ಸೇರಿಸಿದರೆ ಇರುವ ಒಂದು ತೊಡಕು ಇಲ್ಲವಾಗುತ್ತದೆ. ಈ ಡಕ್ಸ್ಬರಿ ಮೆದುಜಾಣವು ಒಂದುರೀತಿಯಲ್ಲಿ ಮುದ್ರಿತ ಅಕ್ಶರಗಳನ್ನು ಬ್ರಯ್ಲ್ಗೆ ಬದಲಿಸಿ ಎಂಬೋಸರ್‍ ಎಂಬ ಯಂತ್ರಕ್ಕೆ ಸಂದೇಶ ನೀಡುವ ಮೆದುಜಾಣವಾಗಿದೆ. ಪ್ರಿಂಟರ್‍ ಡ್ರಾಯವರ್‍ ಸಾಪ್ಟ್‍ವೇರ್‍ (printer driver software) ಎಂದು ಹೇಳುತ್ತೇವಲ್ಲಾ ಹಾಗೆಯೇ ಈ ಮೆದುಜಾಣ.

ಕನ್ನಡದಲ್ಲಿ ಸುದ್ದಿ ಮೆದುಜಾಣಗಳು ಅಂಡ್ರಾಯ್ಡ್‍ಗಳಲ್ಲಿ ದೊರಕುತ್ತವೆ. ಇವುಗಳಲ್ಲಿ ಬಹಳಶ್ಟು ಕುರುಡರು ಬಳಸಲಾಗದ ಮೆದುಜಾಣಗಳೇ ಆಗಿವೆ. ಈ ನಡುವೆಯೂ ಕುರುಡರು ಕೂಡ ಬಳಸುವ ಒಂದಶ್ಟು ಕನ್ನಡದಲ್ಲಿಯೇ ಮೆದುಜಾಣಗಳಿವೆ. ಎತ್ತುಗೆಗೆ: 1. ಕನ್ನಡಪ್ರಬ ಸುದ್ದಿ ಮೆದುಜಾಣ, 2. ಕನ್ನಡವಚನಗಳ ಮೆದುಜಾಣ ಹಾಗೂ 3. ಕನ್ನಡ-English ಪದನೆರಕೆ. ಇನ್ನೂ ಹಲವು ಇವೆ ಅವುಗಳನ್ನು ಒಟ್ಟು ಸೇರಿಸಿ ಅಂಡ್ರಾಯ್ಡ್ ಬಳಸುವ ಎಲ್ಲಾ ತರಹದ ಕನ್ನಡಿಗರಿಗೂ ದೊರಕುವಂತೆ ಮಾಡಬೇಕಾಗಿದೆ.

ಮಾರುತಿ ತಂತ್ರಾಂಶ ಅಬಿವ್ರುದ್ದಿಗಾರರು ಅಣಿಗೊಳಿಸಿರುವ ಕನ್ನಡದಲ್ಲೇ ಸಂದೇಶವನ್ನು ಕಳುಹಿಸುವ ಮೆದುಜಾಣವೂ ಕೂಡ ಕುರುಡರು ಬಳಸುವ ಟಾಕ್-ಬ್ಯಾಕ್ (Talk-back) ಎಂಬ ಮೆದುಜಾಣದೊಡನೆ ಕೆಲಸಮಾಡುವಂತೆ ಆಗಬೇಕು.

ಗೂಗಲ್ ತಂಡವು ಎಲ್ಲಾ ತರಹದ ಅಂಗವಿಕಲರನ್ನು ಗಮನದಲ್ಲಿಟ್ಟುಕೊಂಡು ಅಂಗವಿಕಲರೂ ಕೂಡ ಮೆದುಜಾಣಗಳನ್ನು ಬಳಸಲಾಗುವಂತೆ ಮಾಡಲು ತೊಡಕು ನಿವಾರಣಾ ತಂಡವನ್ನು ಏರ‍್ಪಾಟು ಮಾಡಿಕೊಂಡಿದೆ. ಈ ನಿಟ್ಟಿನಲ್ಲಿಯೂ ನಮ್ಮ ಸರ‍್ಕಾರ ಈ ತರಹದ ಮೆದುಜಾಣಗಳನ್ನು ಅಣಿಗೊಳಿಸುವಾಗ ಇವನ್ನೆಲ್ಲಾ ಗಮನಿಸಬೇಕು. ಆದರೆ ಆ ತರಹದ ಕೆಲಸಗಳು ಆಗುವವೇ?

ಕನ್ನಡ ಮೆದುಜಾಣಗಳ ಅಬಿವ್ರುದ್ದಿ ಸಮಿತಿಯಲ್ಲಿ ಪವನಜರವರು ಇದ್ದಾರೆ . ಅವರಿಗೆ ಕುರುಡರು ಬಳಸುವ ಮೆದುಜಾಣಗಳ ಅರಿವಿದೆ. ಆ ಕುರಿತು ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡಿಗರ ಸಮ್ಮೇಳನದಲ್ಲಿ ಮಂದಿಗಳಿಗೆ ತಿಳಿಸಿದ್ದರು. ಈ ಬ್ರಯ್ಲ್ ಮೆದುಜಾಣವನ್ನು ಅಣಿಗೊಳಿಸಿದ ಬಳಿಕ ಅವರು ಪರೀಕ್ಶಿಸಿದರೆ? ಉಹುಮ್ ತಿಳಿದಿಲ್ಲ. ಮುಂದಿನ ದಿನಗಳಲ್ಲಿ ಇವರು ಈಗ ಮಾಡಿರುವ ತಪ್ಪನ್ನು ಇಲ್ಲವಾಗಿಸುವರೆ ನೋಡುವ!

ಒಟ್ಟಿನಲ್ಲಿ ಮೆದುಜಾಣಗಳನ್ನು ಬಳಸುವ ಕುರುಡರ ಹಕ್ಕನ್ನು ಕಿತ್ತುಕೊಂಡಿದೆ ಎಂಬ ಬೇಸರವೊಂತೂ ಕಂಡಿತವಾಗಿಯೂ ಇದೆ.

ನೀವು ಕುರುಡರಲ್ಲದಿದ್ದರೂ
http://karnataka.gov.in/kcit/pages/downloads.aspx

ಈ ತಾಣದಿಂದ ಕನ್ನಡ ಮತ್ತು ಸಂಸ್ಕ್ರುತಿ ಇಲಾಕೆಯವರು ಬಿಡುಗಡೆಗೊಳಿಸಿರುವ ಮೆದುಜಾಣಗಳನ್ನು ಇಳಿಸಿಕೊಂಡು, ಬಳಸಿದ ಬಳಿಕ ಮೆದುಜಾಣಗಳಲ್ಲಿನ ತಪ್ಪುಗಳನ್ನು ಹುಡುಕಿ ಪಟ್ಟಿ ಮಾಡಿ

[email protected] ಹಾಗೂ [email protected]

ಈ ಮಿಂಚೆಗಳಿಗೆ ಅನಿಸಿಕೆಗಳನ್ನು 15 ದಿನಗಳೊಳಗಾಗಿ ಬರೆದು ತಿಳಿಸುವ ಮೂಲಕ ಮೆದುಜಾಣಗಳನ್ನು ಸರಿಪಡಿಸುವಂತೆ ಒತ್ತಾಯಿಸಿ, ಸರಿಪಡಿಸಿದ ಆವ್ರುತ್ತಿಗಳನ್ನು 2/3 ತಿಂಗಳೊಳಗೆ ಪಡೆದುಕೊಳ್ಳುವ ಮೂಲಕ ಪಾವತಿಸಿರುವ ತೆರಿಗೆಯನ್ನು ಮತ್ತೊಂದು ರೂಪದಲ್ಲಿ ಮರಳಿ ಪಡೆಯಬೇಕು. ಹೀಗೆ ಮಾಡುವುದು ಎಲ್ಲರ ಕೆಲಸ ಮತ್ತು ಪಡೆದುಕೊಳ್ಳುವುದು ಎಲ್ಲರ ಹಕ್ಕು ಎಂದು ಸರ‍್ಕಾರಕ್ಕೂ ತಿಳಿಯುವಂತೆ ಮಾಡೋಣ.

(ತಿಟ್ಟಸೆಲೆ: www.boston.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: