ನಮ್ಮೂರು ‘WiFi’ ಊರು

ವಿವೇಕ್ ಶಂಕರ್.

free-wifi-250113

ಈ ಮುಂಚೆ ಮಿಂಬಲೆಯನ್ನು (internet) ಬಳಸಲು ಮಿಂಗಟ್ಟೆಗಳು (cyber cafe) ಇಲ್ಲವೇ ಮಿಂಬಲೆ ದೊರೆಯುವ ಇನ್ನಾವುದೋ ಕಡೆಗೆ ಹೋಗಬೇಕಿತ್ತು. ಈಗ ಬೆಂಗಳೂರಿನಲ್ಲಿ ಹೊಸದೊಂದು ಬೆಳವಣಿಗೆಯಿಂದ ಮಂದಿಯ ಬಳಿ ಮಿನ್ಕೆಯ ಚೂಟಿ ಇದ್ದರೆ ಸಾಕು ಮಿಂಬಲೆಯನ್ನು ಕಾಸಿಲ್ಲದೆ ಬಳಸಬಹುದು. ಬೆರಗಾಯಿತೇ?, ಹವ್ದು ಬೆಂಗಳೂರಿನ 5 ಕಡೆ ಮಿಂಬಲೆಯನ್ನು ಕಾಸಿಲ್ಲದೆ ಬಳಕೆ ಮಾಡಬಹುದೆಂಬ ಒಸಗೆ ಕೆಲವು ನಾಳುಗಳ ಹಿಂದೆ ಹೊರಬಂದಿದೆ.

ಈ ಹಮ್ಮುಗೆಗೆ ನಮ್ಮ ವಯ್-ಪಯ್ (namma wifi) ಎಂಬ ತಕ್ಕುದಾದ ಹೆಸರೂ ಇಡಲಾಗಿದೆ. ಎಂ.ಜಿ. ಬೀದಿಯಲ್ಲಿ ಮೊದಲಿಗೆ ಎಟುಕುವ ಈ ಕಾಸಿಲ್ಲದ ಮಿಂಬಲೆ, ಇಂದಿರಾನಗರದ ಸಿ.ಎಂ.ಹೆಚ್ ಬೀದಿಗಳು, ಶಾಂತಿನಗರ, ಯಶವಂತಪುರ ಹಾಗೂ ಕೋರಮಂಗಲದ ಬಸ್ಸು ನಿಲ್ದಾಣಗಳಲ್ಲೂ ದೊರೆಯುತ್ತದೆ. ಇದನ್ನು ರಾಜ್ಯದ ಇನ್ಪೋಟೆಕ್ ಕವಲು (State Infotech Department) ಮತ್ತು ಡಿ-ವೊಯ್ ಬ್ರಾಡ್-ಬಾಂಡ್ (D-Vois Broadband) ಒಟ್ಟಿಗೆ ಹೊರತಂದಿವೆ. ಈ ಮೂಲಕ ಬಾರತದ ಉಳಿದ ಊರುಗಳನ್ನು ಹಿಂದಿಕ್ಕಿ ಎಲ್ಲರಿಗಾಗಿ ತೆರೆದುಕೊಂಡ ಮೊದಲ ವಯ್-ಪಯ್ ಊರು ನಮ್ಮ ಬೆಂಗಳೂರು ಆದಂತಾಗಿದೆ.

‘ನಮ್ಮ ವಯ್-ಪಯ್’ ಬಳಸುವ ಬಗೆ:
ಬಳಕೆದಾರರು ತಮ್ಮ ಅಲೆಯುಲಿಯ (mobile phone) ಅಂಡ್ರಾಯ್ಡ್ ಬಳಕದಿಂದ (app) ಇಲ್ಲವೇ ಎಣ್ಣುಕಗಳ ತಡಕುಗೆಯಿಂದ (broswer) ವಯ್-ಪಯ್ ಬಳಕೆ ಮಾಡಬಹುದು. ವಯ್-ಪಯ್ ಬಳಸುವ ಮುನ್ನ ಬಳಕೆದಾರರಿಗೆ ಚಿಕ್ಕೋಲೆಯ(sms) ನೆರವಿನಿಂದ ಒಂದು ದಾಟುಗುರುತನ್ನು(access-code) ನೀಡಲಾಗುತ್ತದೆ. ಅದನ್ನು ಬಳಸಿ ಮಿಂಬಲೆಯನ್ನು ಬಳಸಬಹುದು. ಒಂದು ಸಲಕ್ಕೆ ಮೂವತ್ತು ನಿಮಿಶ ಮಿಂಬಲೆಯನ್ನು ಬಳಸಬಹುದು. ಈಗ ಅಣಿಗೊಂಡಿರುವ ಏರ‍್ಪಾಟಿನಲ್ಲಿ ಒಟ್ಟಿಗೆ ಸುಮಾರು ಎರಡು ಸಾವಿರ ಮಂದಿ ಮಿಂಬಲೆಯನ್ನು ಬಳಕೆ ಮಾಡಬಹುದು.

ಬೆಂಗಳೂರಿನಂತೆ ಕರ‍್ನಾಟಕದ ಇತರ ಊರುಗಳಲ್ಲೂ ‘ನಮ್ಮ ವಯ್-ಪಯ್‘ ಬೇಗನೇ ಅಣಿಗೊಳ್ಳುವಂತಾಗಲಿ, ಈ ಮೂಲಕ ನಮ್ಮ ನಾಡು ಇನ್ನಶ್ಟು ಹತ್ತಿರವಾಗಲಿ.

(ತಿಟ್ಟಸೆಲೆ: IBN Live)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks