ದೇವರು ಕರುಣಿಸಿದ ಮಸಾಲೆ

ಸಿ.ಪಿ.ನಾಗರಾಜ

DSC09951

ನಾಲ್ಕನೆಯ ತರಗತಿಯಲ್ಲಿ ನಾನು ಓದುತ್ತಿದ್ದಾಗ ನಡೆದ ಪ್ರಸಂಗವಿದು. ಆಗ ನಮ್ಮ ಶಾಲೆಯಲ್ಲಿದ್ದ ನಾಲ್ಕು ಮಂದಿ ಮೇಸ್ಟರುಗಳಲ್ಲಿ ನರಸಿಂಹಯ್ಯ ಎಂಬುವರು ಮಕ್ಕಳ ಪಾಲಿಗೆ ಅಚ್ಚುಮೆಚ್ಚಿನ ಮೇಸ್ಟರಾಗಿದ್ದರು. ತುಂಬ ಚೆನ್ನಾಗಿ ಪಾಟ ಮಾಡುವುದರ ಜತೆಗೆ, ಪ್ರತಿ ನಿತ್ಯ ಸಂಜೆ ತರಗತಿಯು ಬಿಡುವ ಮುನ್ನ ಸುಮಾರು ಹತ್ತು ನಿಮಿಶಗಳ ಕಾಲ-

“ಜಯ್ ಗಣೇಶ ಜಯ್ ಗಣೇಶ ಜಯ್ ಗಣೇಶ ಪಾಹಿಮಾಮ್  ಶ್ರೀ ಗಣೇಶ ಶ್ರೀ ಗಣೇಶ ಶ್ರೀ ಗಣೇಶ ರಕ್ಶಮಾಮ್ ”

ಎಂದು ದೇವರ ನಾಮವನ್ನು ಗಟ್ಟಿಯಾಗಿ ಹೇಳಿಕೊಡುತ್ತಿದ್ದರು. ತರಗತಿಯಲ್ಲಿದ್ದ ಹುಡುಗರೆಲ್ಲಾ ಒಟ್ಟಾಗಿ ದೊಡ್ಡ ದನಿಯಲ್ಲಿ ದೇವರ ನಾಮವನ್ನು ಹೇಳಬೇಕಿತ್ತು. ಒಂದೊಂದು ದಿನ ನಾವು ನಿರುತ್ಸಾಹದಿಂದ ಸರಿಯಾಗಿ ಹೇಳದಿದ್ದಾಗ-

“ಏನ್ರೋ ನೀವು? ದೇವರ ಹೆಸರನ್ನು ಹೇಳುವುದಕ್ಕೆ ನಿಮಗೆ ಬಾಯಿಲ್ಲ. ನೋಡ್ರಯ್ಯ, ಚೆನ್ನಾಗಿ ತಿಳ್ಕೊಳಿ, ದೇವರ ಪ್ರಾರ‍್ತನೆ ಮಾಡೋದರಿಂದ ಒಳ್ಳೇ ವಿದ್ಯೆ ಹತ್ತುತ್ತೆ.. ಬುದ್ದಿ ಬರುತ್ತೆ. ನಿಮಗೆ ಇನ್ನೊಂದು ಸಂಗತಿ ಗೊತ್ತೇನ್ರಯ್ಯ ?.. ಬೀದಿಯಲ್ಲಿ ನಾಯಿಗಳು ಯಾಕೆ ಪದೇಪದೇ ಬೊಗಳ್ತ ಇರ‍್ತವೆ ಅಂತ?” ಎಂದು ಪ್ರಶ್ನಿಸಿದರು. ಆಗ ನಮ್ಮಲ್ಲಿ ಯಾರ‍್ಯಾರು, ಏನೇನು ಉತ್ತರಗಳನ್ನು ಹೇಳಿದೆವು ಎನ್ನುವುದು, ಈಗ ನನಗೆ ಮರೆತು ಹೋಗಿದೆ. ವಿದ್ಯಾರ‍್ತಿಗಳೆಲ್ಲರ ಉತ್ತರವನ್ನು ತಳ್ಳಿಹಾಕಿ, ಮೇಸ್ಟರು ನರಸಿಂಹಯ್ಯನವರು ಹೇಳಿದ ಮಾತುಗಳು ಮಾತ್ರ ನನ್ನ ನೆನಪಿನಲ್ಲಿ ಚೆನ್ನಾಗಿ ಉಳಿದಿವೆ.

“ನೋಡ್ರೋ.. ನಾಯಿಗಳಿಗೆ ದೇವರನ್ನು ಪ್ರಾರ‍್ತನೆ ಮಾಡ್ಬೇಕು ಅನ್ನಿಸಿದಾಗಲೆಲ್ಲಾ ಬೊಗಳ್ತಾ ಇರ‍್ತವೆ.. ಬವ್.. ಬವ್..ಅಂತ ಒಂದಕ್ಕಿಂತ ಮತ್ತೊಂದು ಜೋರಾಗಿ ಬೊಗಳುತ್ತಾ.. ತಂತಮ್ಮ ಮೆಚ್ಚಿನ ದೇವರುಗಳನ್ನ ನೆನಪಿಸಿಕೊಳ್ತವೆ. ಅಂತಾದ್ದರಲ್ಲಿ ಆ ನಾಯಿಗಳಿಗಿಂತ ನೀವು ಕಡೆಯಾಗ್ತೀರಾ?” ಎಂದು ಹಂಗಿಸಿದರು.

ಎಂದಿನಂತೆ ಒಂದು ದಿನ ಸಂಜೆ ನಾಲ್ಕು ಗಂಟೆಯ ಸಮಯದಲ್ಲಿ ಮೇಸ್ಟರು ನಮಗೆ ದೇವರ ಹಾಡುಗಳನ್ನು ತಮ್ಮ ಇಂಪಾದ ದನಿಯಲ್ಲಿ ತನ್ಮಯರಾಗಿ ಹೇಳಿಕೊಡುತ್ತಿದ್ದರು. ಆಗ ಹೋಟೆಲ್ಲಿನ ಮಾಣಿಯೊಬ್ಬನು ಒಂದು ಕಯ್ಯಲ್ಲಿ ಮಸಾಲೆದೋಸೆಯಿರುವ ತಟ್ಟೆಯನ್ನು.. ಮತ್ತೊಂದು ಕಯ್ಯಲ್ಲಿ ನೀರಿನ ಲೋಟವನ್ನು ಹಿಡಿದುಕೊಂಡು ತರಗತಿಯ ಒಳಕ್ಕೆ ಬಂದನು. ಪ್ರಾರ‍್ತನೆಯನ್ನು ನಿಲ್ಲಿಸಿದ ಮೇಸ್ಟರು.. ಅವನತ್ತ ಅಚ್ಚರಿಯಿಂದ ನೋಡತೊಡಗಿದರು.

“ನಿಮಗೆ ಮಸಾಲೆದೋಸೆ ಕೊಟ್ಬುಟ್ಟು ಬಾ ಅಂತ.. ಗವ್ಡರು ಕಳುಹಿಸಿದರು ಸಾರ್‍” ಎಂದ.

“ಯಾವ ಗವ್ಡರಯ್ಯ?”

“ನಗರಕೆರೆ ಗವ್ಡರು ಸಾರ್. ತಕೊಳಿ ಸಾರ್.. ಮಸಾಲೆ ತಿಂತಾಯಿರಿ.. ಹೋಗ್ಬುಟ್ಟು ಕಾಪಿ ತರ‍್ತೀನಿ” ಎನ್ನುತ್ತಾ, ತಟ್ಟೆ ಲೋಟಗಳನ್ನು ಮೇಸ್ಟರ ಕಯ್ಯಿಗೆ ನೀಡಿ, ಮಾಣಿ ಹಿಂತಿರುಗಿದ.

ಮದ್ದೂರು ಪಟ್ಟಣದ ನಡುವೆ ಹರಿಯುತ್ತಿರುವ ಕೆಮ್ಮಣ್ಣು ನಾಲೆಯ ಪಕ್ಕದಲ್ಲಿ ನಮ್ಮ ಪ್ರಾತಮಿಕ ಶಾಲೆಯಿತ್ತು. ಇದರ ಮುಂದುಗಡೆ ಇರುವ ಪೇಟೆ ಬೀದಿಯಲ್ಲಿ ಉಡುಪಿ ಬ್ರಾಹ್ಮಣರ ಒಂದೆರಡು ಹೋಟೆಲ್ಲುಗಳು ಇದ್ದವು. ಸಂಜೆ ವೇಳೆಗೆ ಅಲ್ಲಿಗೆ ಬರುತ್ತಿದ್ದ ಸುತ್ತಮುತ್ತಣ ಹಳ್ಳಿಗಳ ದೊಡ್ಡ ದೊಡ್ಡ ಜಮೀನ್ದಾರರು ತಮಗೆ ಪರಿಚಯವಿದ್ದ ಮೇಸ್ಟರುಗಳಿಗೆ ಈ ರೀತಿ ಆಗಾಗ್ಗೆ ತಿಂಡಿ ಕಾಪಿಯನ್ನು ಹೋಟೆಲ್ಲಿನಿಂದ ಕಳುಹಿಸಿಕೊಡುತ್ತಿದ್ದರು.

ಇದೀಗ ನರಸಿಂಹಯ್ಯನವರು ಮಸಾಲೆದೋಸೆಯ ತಟ್ಟೆಯನ್ನು ಹುಡುಗರೆಲ್ಲರ ಮುಂದೆ ಎತ್ತಿ ಹಿಡಿದು ತೋರಿಸುತ್ತಾ-

“ನೋಡುದ್ರೇನೋ.. ದೇವರನ್ನು ಮನತುಂಬಿ ಪ್ರಾರ‍್ತನೆ ಮಾಡಿದರೆ.. ಅವನು ಹೇಗೆ ಕರುಣಿಸ್ತಾನೆ ಅಂತ. ನೀವು ಕೂಡ ನನ್ನ ಹಾಗೆ ದೇವರ ಸ್ಮರಣೆ ಮಾಡುದ್ರೆ.. ನಿಮಗೂ ಮುಂದಕ್ಕೆ ಮಸಾಲೆದೋಸೆ ಕಾಪಿ ಎಲ್ಲಾ ಸಿಗ್ತದೆ ” ಎಂದು ಹೇಳಿ, ಅಲ್ಲೇ ಒಂದು ಪಕ್ಕದಲ್ಲಿ ತಿರುಗಿ ಕುಳಿತುಕೊಂಡು, ಆನಂದದಿಂದ ದೋಸೆಯನ್ನು ತಿನ್ನತೊಡಗಿದರು. ಕೆಲವು ಗಳಿಗೆಯಲ್ಲೆ ದೋಸೆಯನ್ನು ಮೇಸ್ಟರು ತಿಂದು ಮುಗಿಸುತ್ತಿದ್ದಂತೆಯೇ.. ಹೋಟೆಲ್ ಮಾಣಿಯು ಗಾಬರಿಯಿಂದ “ಸಾರ್.. ಸಾರ್..” ಎನ್ನುತ್ತಾ ತರಗತಿಯ ಒಳಕ್ಕೆ ನುಗ್ಗಿ ಬಂದ.

“ಏನಯ್ಯಾ?” ಎಂದರು ಮೇಸ್ಟರು.

“ದೋಸೆ ತಿಂದ್ಬುಟ್ರ ಸಾರ್‍?”

“ಇನ್ನೊಂದು ಸ್ವಲ್ಪ ಅದೆ ಕಣಯ್ಯ.. ಯಾಕೆ?”

“ಸಾರ್.. ಈ ದೋಸೆ ನಿಮಗಲ್ಲ ಸಾರ್. ಪಕ್ಕದ ರೂಮಿನಲ್ಲಿ, ಮೂರನೆಯ ಕ್ಲಾಸಿನಲ್ಲಿ ರಾಮಪ್ಪ ಅಂತ ಇದ್ದಾರಲ್ಲ.. ಆ ಮೇಸ್ಟರಿಗಂತೆ ದೋಸೆ ಕಳುಹಿಸಿದ್ದು “.

“ಈಗ ನಾನೇನಪ್ಪ ಮಾಡ್ಲಿ.. ನೀನು ತಂದು ಕೊಟ್ಟೆ.. ನಾನು ತಿಂದು ಮುಗಿಸಿದೆ. ಎಲ್ಲಾ ಆ ದೇವರ ಲೀಲೆ.. ಕಾಪಿ ಎಲ್ಲಯ್ಯ “”

“ತರಲಿಲ್ಲ ಸಾರ್.. ಗವ್ಡರು ನನ್ನನ್ನು ಚೆನ್ನಾಗಿ ಬಯ್ದು, ಕಾಪಿಯನ್ನು ಕ್ಯಾನ್ಸಲ್ ಮಾಡ್ಬುಟ್ರು ಸಾರ್ “.

ಈಗ ಮೇಸ್ಟರ ಮೊಗದಲ್ಲಿನ ಕಳೆಯು ಕುಂದಿತು. ಮಸಾಲೆಯನ್ನು ಕರುಣಿಸಿದ ದೇವರು…ಕಾಪಿಯನ್ನು ಕ್ಯಾನ್ಸಲ್ ಮಾಡಬೇಕಾದರೆ.. ನಮ್ಮ ಮೇಸ್ಟರು ಮಾಡಿದ ಪ್ರಾರ‍್ತನೆಯಲ್ಲೇ ಏನೋ ತಪ್ಪಾಗಿದೆಯೆಂದು .. ಚಿಕ್ಕ ಮಕ್ಕಳಾದ ನಾವೆಲ್ಲಾ ಅಂದು ಮಾತನಾಡಿಕೊಂಡೆವು.

(ಚಿತ್ರ: dailyrecipesofmykitchen.blogspot.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: