ಕನಕನ ಅವ್ವ

ಸಿ.ಪಿ.ನಾಗರಾಜ

ಇಂದಿಗೆ ಸುಮಾರು ನಲವತ್ತು ವರುಶಗಳ ಹಿಂದೆ ಹಳ್ಳಿಯೊಂದರಲ್ಲಿ ನಡೆದ ಪ್ರಸಂಗವಿದು.
ಊರ ಗವ್ಡರ ಮನೆಯಲ್ಲಿ ದುಡಿಯುತ್ತಿದ್ದ ನಾಲ್ಕಾರು ದಲಿತ ಜೀತದಾಳುಗಳಲ್ಲಿ ಕನಕ ಒಬ್ಬನಾಗಿದ್ದ. ಸುಮಾರು ಮೂವತ್ತರ ಹರೆಯದ ಕನಕ ಹುಟ್ಟಿನಿಂದಲೇ ತುಸು ಮಂದ ಬುದ್ದಿಯವನಾಗಿದ್ದ. ಮಾತಿನಲ್ಲಿ ತೊದಲುತ್ತಿದ್ದ ಕನಕ ದುಡಿಮೆಯಲ್ಲಿ ಮಾತ್ರ ಮೂಗೆತ್ತಿನಂತೆ ಇರುಳು-ಹಗಲೆನ್ನದೆ ದುಡಿಯುತ್ತಿದ್ದ. ಅವನು ಎಂತಹ ವಿಚಿತ್ರ ವ್ಯಕ್ತಿಯೆಂದರೆ.. ಒಬ್ಬನೇ ಏನಾದರೂ ಹೊಲಗದ್ದೆಗಳಲ್ಲಿ ಉಳುವುದಕ್ಕೆ ಹೋದರೆ.. ಹೊತ್ತು ಮುಳುಗಿದ ನಂತರವೂ ಉಳುತ್ತಲೇ ಇರುತ್ತಿದ್ದ. ಹತ್ತಿರದಲ್ಲೇ ಹೋಗುತ್ತಿದ್ದ ದಾರಿಹೋಕರಲ್ಲಿ ಯಾರಾದರೂ –
“ಇದೇನೊ ಕನಕ.. ಈ ಕತ್ತಲೆಯಲ್ಲಿ ಯಾಕೊ ಉಳ್ತಾಯಿದ್ದೀಯೆ?” ಎಂದು ಕೇಳಿದಾಗಲೇ”ಹಂಗ.. ಈಗ್ಲೇ ಬುಟ್ಟೆ ಕಣ್ಹೇಳಿ” ಎಂದು ಉಳುವುದನ್ನು ನಿಲ್ಲಿಸಿ..ದನಗಳ ಜತೆ ಮನೆಯ ಕಡೆಗೆ ಬರುತ್ತಿದ್ದ.

ಕನಕನ ಬದುಕಿನಲ್ಲಿ ನಲಿವಿಗಿಂತ ನೋವೇ ಹೆಚ್ಚಾಗಿತ್ತು. ದೊಡ್ಡಗವ್ಡರ ಕಾಲದಲ್ಲಿ ಕನಕನ ಅಪ್ಪ ಒಂದು ದಿನ ಅರೆ ಮೇಲಕ್ಕೆ ಕಲ್ಲುದಿಂಡು ತುಂಬಿಕೊಂಡು ಬರುವುದಕ್ಕೆ ಹೋಗಿದ್ದವನು, ಗಾಡಿ ಉರುಳಿಬಿದ್ದು, ದಿಂಡುಗಳ ಅಡಿಯಲ್ಲಿ ಸಿಕ್ಕಿಬಿದ್ದು ಸಾವನ್ನಪ್ಪಿದ್ದ. ಅಂದಿನಿಂದ ಅಪ್ಪನ ಸಾಲ ತೀರಿಸುವ ಜೀತದ ನೊಗಕ್ಕೆ ಕನಕ ಕೊರಳನ್ನು ಒಡ್ಡಬೇಕಾಯಿತು. ಕನಕನ ಅವ್ವ ಸಿದ್ದಮ್ಮನು ಇದ್ದ ಒಬ್ಬನೇ ಮಗನ ಮೇಲೆ ಜೀವ ಇಟ್ಟುಕೊಂಡು, ಮಗನನ್ನು ಗವ್ಡರ ಹಟ್ಟಿಯಲ್ಲಿ ಜೀತಕ್ಕಿರಿಸಿ, ತಾನು ಅಲ್ಲಿ-ಇಲ್ಲಿ ಕೂಲಿನಾಲಿ ಮಾಡುತ್ತ ಬಾಳನ್ನು ನೂಕುತ್ತಿದ್ದಳು. ಮಗ ವಯಸ್ಸಿಗೆ ಬಂದಾಗ ಮದುವೆ ಮಾಡಿದಳು. ಹೆಣ್ಣು ಮಗುವೊಂದು ಹುಟ್ಟಿದ ಒಂದೆರಡು ವರುಶಗಳಲ್ಲಿಯೇ, ಗಂಡ-ಹೆಂಡತಿಯ ನಡುವೆ ಏನು ನಡೆಯಿತೋ..ಏನು ಕತೆಯೋ..ಕನಕನ ಹೆಂಡತಿ ನೆರೆಯೂರಿನ ಕೂಲಿಯೊಬ್ಬನನ್ನು ಕಟ್ಟಿಕೊಂಡು, ಒಂದು ದಿನ ಕಣ್ಮರೆಯಾದಳು.
“ಇಂತಹ ಮೊದ್ದನ ಜೊತೆಯಲ್ಲಿ ಒಳ್ಳೇ ಕಡಸನಂಗಿದ್ದ ಅಂತಹವಳು ಹೆಂಗ್ ತಾನೆ ಇದ್ದಳು” ಎಂದು ಅಣಕವಾಡಿಕೊಂಡು ಊರಿನವರು ನಕ್ಕರು.
ಮೊದಲೇ ಮಂಕಾಗಿದ್ದ ಕನಕ.. ಇದೀಗ ಇನ್ನೂ ಕುಗ್ಗಿ ಹೋದ. ಪ್ರತಿನಿತ್ಯ ಹೊಟ್ಟೆ ತುಂಬ ಮೂರು ಹೊತ್ತು ಮುದ್ದೆ.. ಕಯ್ ತುಂಬಾ ಗೇಮೆ.. ಸೇದುವುದಕ್ಕೆ ನಾಲ್ಕಾರು ಬೀಡಿಗಳು..ಇವನ್ನು ಬಿಟ್ಟರೆ ಇನ್ನಾವುದರ ಕಡೆಗೂ ಕನಕನ ಗಮನವಿರಲಿಲ್ಲ.

ಈಗ ಕನಕನ ಅವ್ವನ ಮೇಲೆ ಮೊಮ್ಮಗಳನ್ನು ಸಾಕಿ ಬೆಳೆಸುವ ಜವಾಬ್ದಾರಿ ಬಿತ್ತು. ಮೊದಲು ಮಗನ ಒಳಿತಿಗಾಗಿ ತುಡಿಯುತ್ತಿದ್ದ ಜೀವ.. ಈಗ ಮೊಮ್ಮಗಳ ಹಿತಚಿಂತನೆಯಲ್ಲಿ ತೊಡಗಿತ್ತು. ಹತ್ತು ಹನ್ನೆರಡು ವರುಶಗಳು ಉರುಳುತ್ತಿದ್ದಂತೆ ಕನಕನ ಅವ್ವನ ಚಿಂತೆ ಇಮ್ಮಡಿಗೊಂಡಿತು. ಈಗ ಒಂದೆರಡು ತಿಂಗಳ ಹಿಂದೆ ದೊಡ್ಡವಳಾಗಿ ಮಯ್-ತುಂಬಿ ಬೆಳೆಯುತ್ತಿದ್ದ ಮೊಮ್ಮಗಳ ಮದುವೆಯ ಚಿಂತೆ ದೊಡ್ಡದಾಗಿ ಕಾಡತೊಡಗಿತು.

ಕನಕನ ಅವ್ವನಿಗೆ ಎಲ್ಲೂ ಕೂಲಿನಾಲಿ ಸಿಗದೆ ಬಿಡುವಿದ್ದಾಗ ಗವ್ಡರ ದೊಡ್ಡಮನೆಯ ಬಳಿಗೆ ಮೊಮ್ಮಗಳ ಜೊತೆಯಲ್ಲಿ ಬಂದು, ಸಣ್ಣಪುಟ್ಟ ಕೆಲಸಗಳನ್ನು ಮಾಡಿ, ಅವರ ಮನೆಯಲ್ಲಿ ಉಳಿದುಬಳಿದಿದ್ದನ್ನು ಈಸ್ಕೊಂಡು ಹೊಟ್ಟೆಹೊರೆದುಕೊಳ್ಳುವುದರ ಜೊತೆಗೆ, ಗವ್ಡರ ಮನೆಯ ಹೆಣ್ಣುಮಕ್ಕಳು ಉಟ್ಟು ಮಾಸಿದ ಹಳೆಯ ಲಂಗ-ಜಂಪರುಗಳನ್ನು, ಸೀರೆಯ ತುಂಡುಗಳನ್ನೇ ತನ್ನ ಮೊಮ್ಮಗಳಿಗೆ ಉಡಿಸುತ್ತಾ, ಕಣ್ಣಲ್ಲಿ ಕಣ್ಣಿಟ್ಟು ಮೊಮ್ಮಗಳನ್ನು ಒಲವಿನಿಂದ ಬೆಳೆಸುತ್ತಿದ್ದಳು. ದೊಡ್ಡಗವ್ಡರ ಹೆಂಡತಿ ಬೋರಮ್ಮನವರು ಕನಕನ ಅವ್ವನನ್ನು ಎಂದೂ ಬರಿಗಯ್ಯಲ್ಲಿ ಕಳುಹಿಸುತ್ತಿರಲಿಲ್ಲ, ಅವಳ ಮಡಿಲಿಗೆ ಏನನ್ನಾದರೂ ಹಾಕುತ್ತಿದ್ದರು. ಕನಕನ ಅವ್ವನಿಗೆ ತನ್ನ ನೋವುನಲಿವನ್ನು ತೋಡಿಕೊಳ್ಳುವುದಕ್ಕೆ ಬೋರಮ್ಮನವರೇ ದಿಕ್ಕುದೆಸೆಯಾಗಿದ್ದರು.

ಒಂದು ದಿನ ಸಂಜೆ ಮೊಮ್ಮಗಳೊಡನೆ ಕನಕನ ಅವ್ವ ಬೋರಮ್ಮನವರ ಬಳಿಗೆ ಬಂದಳು. ಸುಮಾರು ಎಪ್ಪತ್ತು ವರುಶದ ಬೋರಮ್ಮನವರ ಬೆನ್ನು ಬಾಗಿ, ಹಲ್ಲುಗಳೆಲ್ಲಾ ಉದುರಿ, ಬಾಯಿ ಬೋಡಾಗಿದ್ದರೂ, ಕಣ್ಣುಗಳ ದಿಟ್ಟಿ ಮಾತ್ರ ಚೆನ್ನಾಗಿತ್ತು. ದೊಡ್ಡಮನೆಯ ಹಿತ್ತಲಬಾಗಿಲಿನ ಮೆಟ್ಟಿಲುಗಳ ಮೇಲೆ ಕುಳಿತು ಕುಟ್ಟಾಣಿಯಲ್ಲಿ ಎಲೆ ಅಡಕೆಯನ್ನು ಹಾಕಿಕೊಂಡು ಕುಟ್ಟುತ್ತಿದ್ದ ಬೋರಮ್ಮನವರು.. ಕನಕನ ಮಗಳನ್ನು ದಿಟ್ಟಿಸಿ ನೋಡುತ್ತಾ-
“ಇನ್ನೇನಮ್ಮಿ ಸಿದ್ದಿ ನಿಂಗೆ ಯೋಚನೆ ? ಕಯ್ವೊತ್ತಿಗೆ ಮೊಮ್ಮಗಳು ಬಂದ್ಬುಟ್ಟಳಲ್ಲ ! ಇನ್ನೇಲೆ ದುಡಿದು ನಿನ್ನ ಚೆನ್ನಾಗಿ ನೋಡ್ಕೊತಾಳೆ ಬುಡು” ಎಂದರು.

“ಅವ್ವೋ.. ಇವತ್ತೋ-ನಾಳೆಯೋ ಸಾಯೊ ಮುದುಕಿ ನನ್ನ.. ಅವಳೇನು ನೋಡ್ಕೊಬೇಕವ್ವ.. ನಾ ಕಣ್ಮುಚ್ಚೂಕೆ ಮೊದಲು.. ಅವಳ ತಲೆ ಮ್ಯಾಲೆ ನಾಕು ಅಕ್ಕಸ್ದಕ್ಕಿ ಹಾಕಿ, ಅವಳಿಗೆ ಒಂದು ನೆಲೆ ಅಂತ ಕಾಣಿಸ್ಬೇಕು ಕಣ್ರವ್ವ” .

“ಹಂಗಾದ್ರೆ ಮದುವೆ ಮಾಡ್ಬುಡು”.

“ಬರಿಗಯ್ಯಲ್ಲಿ ಏನ್ ಮಾಡೋಕಾದದವ್ವ.. ಇಂತಾ ಅಪ್ಪ.. ಅಂತಾ ಅವ್ವನ್ನ ಪಡೆದ ಈ ಮಗೀನ ಹಣೇನಲ್ಲಿ ಏನ್ ಬರಿದಿದ್ದದೋ ನಾ ಬ್ಯಾರೆ ಕಾಣೆ” ಎನ್ನುತ್ತಿದ್ದಂತೆಯೇ.. ಸಂಕಟ ಒತ್ತರಿಸಿ ಬಂದು.. ಕನಕನ ಅವ್ವನ ಗಂಟಲು ಬಿಗಿಯಿತು.

“ಇವರವ್ವ ಈಗ ಎಲ್ಲಿದ್ದಳು ? ಮಗಳ ನೋಡೋಕೆ ಅಂತ ಏನಾರ ಬರೂಳೆ ?”

“ತೂ.. ಆ ನನ್ನ ಸವ್ತಿ ಸುದ್ದಿ ಎತ್ಬೇಡಿ. ಹಾದರ‍್ಗಿತ್ತಿ ಮುಂಡೆ.. ಬೀದಿ ಸೂಳೆ.. ಕುಲಗೆಟ್ಟ ರಂಡೆ.. ಹರೇದಲ್ಲಿ ತಾನು ಹಾಳಾದದ್ದು ಅಲ್ಲದೇ.. ಈಗ ಮಗಳ ಬಾಳ ಹಾಳು ಮಾಡೂಕೆ ಬಂದಿದ್ದಳು ಕಣ್ರವ್ವ”.

“ಮಗಳ.. ತನ್ನತಕೆ ಕರ‍್ಕೊಂಡು ಹೋಗೋಕೆ ಬಂದಿದ್ಳೆ ?”.

“ಹೂ ಕಣ್ರವ್ವ.. ಹೆತ್ತೋಳ್ ನಾ ಕಾಣ್ನೆ.. ಮಗಳಿಗೆ ಮದುವೆ ಮಾಡೂದ. ನನ್ ಜೋತೇಲಿ ಇಟ್ಕೊತಿನಿ ಅನ್ಕೊಂಡು ಇದಕೆ ಒಂದು ತಿಂಗಳಲ್ಲಿ ಬಂದಿದ್ಳು. ಇಲ್ಲಿಗಂಟ ಎಲ್ಲಿಗೋಗಿತ್ತಮ್ಮಿ ನಿನ್ ಹೆತ್ ಕಳ್ಳು.. ಈಗ ಬಂದಿದ್ದೀಯಲ್ಲ ! ಬೆಳೆದ ಮಗಳ ಕರ‍್ಕೊಂಡೋಗಿ, ಯಾರ‍್ಗಾರ ತಲೆಹಿಡ್ದು.. ದುಡ್ಡು ಸಂಪಾದ್ನೆ ಮಾಡೂಕೆ.. ಈ ಆಟ ತಕೊಂಡು ಬಂದಿದ್ದೀಯ.. ಇನ್ನೊಂದು ಗಳಿಗೆ ಇಲ್ಲಿ ನಿಂತಿದ್ರೆ.. ನೀನ್ ಉಟ್ಟಿರೂ ಸ್ಯಾಲೆಯ ಸುಲ್ದು.. ಕೆರ ತಕೊಂಡು ಬಡೀತಿನಿ ಅಂತ ಅಂದೂ-ಆಡಿ-ಉಗುದು ಓಡಿಸ್ದೆ ಕಣ್ರವ್ವ”.

“ಮಗಳು.. ಅವ್ವನ ಜೊತೇಲಿ ಹೊಯ್ತೀನಿ ಅನ್ನಲಿಲ್ವೇ ?”

“ಈ ನನ್ ಕಂದ.. ಬಂಗಾರ ಕಣವ್ವ.. ಅವರವ್ವನ ಮೊಕ ನೋಡೂಕು ಗುಡಿಸಲಿನಿಂದ ಈಚೆಗೆ ತಲೆ ಹಾಕಲಿಲ್ಲ” ಎಂದು ಮೊಮ್ಮಗಳ ಬಗ್ಗೆ ಮೆಚ್ಚುಗೆಯನ್ನು ಸೂಸುತ್ತಾ-
“ಹೋಗಮ್ಮಿ.. ಅಲ್ಲಿರೂ ಮೊಟ್ಟೆಕಡ್ಡಿ ಬರ‍್ಲು ತಕೊಂಡು, ಕೊಟ್ಟಿಗೆ ಕಸವ ಒಸಿ ಹಿಂದಕ್ಕೆ ತಳ್ಳೋಗು” ಎಂದು ಮೊಮ್ಮಗಳಿಗೆ ಸೂಚಿಸಿದಾಗ, ಆಕೆಯು ತನ್ನ ಅಜ್ಜಿ ಮತ್ತು ಬೋರಮ್ಮನವರ ಮಾತುಗಳನ್ನು ಕೇಳಿಯೂ, ಕೇಳಿಸಿಕೊಳ್ಳದವಳಂತೆ ಕಸವನ್ನು ಗುಡಿಸತೊಡಗಿದಳು.

ಬೋರಮ್ಮನವರು ಕುಟಾಣಿಯಲ್ಲಿನ ಎಲೆ-ಅಡಿಕೆಯನ್ನು ಬಾಯಿಗೆ ಹಾಕಿಕೊಂಡು ಮೆಲ್ಲುತ್ತಾ ಮಾತನ್ನು ಮುಂದುವರಿಸಿದರು.
“ಮತ್ತೆ ಹೆಂಗಾರ ಮಾಡಿ.. ಮೊಮ್ಮಗಳ ಮದುವೆ ಮಾಡ್ಬುಡು”.

“ಅವ್ವೋ.. ನೀವು ಕಂಡಂಗೆ ಕಾಲದಿಂದಲೂ ನನ್ ಗಂಡ.. ನನ್ ಮಗ.. ಎಲ್ಲಾ ಜೀತದಲ್ಲಿ ಬಂದೋರೆ. ನಮ್ ತಾವು ಏನಿದ್ದದವ್ವ.. ಮದುವೆ ಮಾಡೋಕೆ.. ಯಾವ ಗಂಟು ನನ್ತಾವು ಅದೆ ಅಂತ.. ಯಾರ‍್ತಾನೆ ಬಂದರವ್ವ?”.

“ಹಂಗಾದ್ರೆ ಈಗೇನ್ ಮಾಡೀಯಮ್ಮಿ?”

“ದಿಕ್ಕೇ ತೋಚದಂಗೆ ಆಗದೆ ಕಣ್ರವ್ವ. ಆ ಕರಿಗಟ್ಟದ ದೇವರೇ ನನ್ ಮೊಮ್ಮಗಳ ಕಾಪಾಡ್ಬೇಕು” ಎಂದು ಕಂಬನಿ ತುಂಬಿಕೊಂಡಳು.

“ಅಮ್ಮೇ.. ಸಿದ್ದಿ.. ನೀನು ಕರಿಗಟ್ಟದ ದೇವರು ಅಂತ್ಲೇ ನೆಪ್ಪಾಯ್ತು. ಒಂತರ ಮಾಡಮ್ಮಿ.. ನಿನ್ ಮೊಮ್ಮಗಳಿಗೂ ಒಳ್ಳೆದಾಯ್ತದೆ.. ನಿನ್ ಮೇಲಿರೂ ಹೊರೆಯೂ ಕಳೀತದೆ” ಎಂದು ಬೋರಮ್ಮನವರು ನುಡಿದಾಗ… ಕನಕನ ಅವ್ವನ ಮಯ್ಯೆಲ್ಲಾ ಕಿವಿಯಾಗಿ-
“ಅದೇನ್ ನೆಪ್ಪಿಗೆ ಬಂತು ಹೇಳ್ರವ್ವ.. ನೀವು ಹೇಳ್ದಂಗೆ ಮಾಡ್ತೀನಿ” ಎಂದಳು.

“ಕರಿಗಟ್ಟದ ಶ್ರೀನಿವಾಸ ದೇವರ‍್ಗೆ.. ನಿನ್ ಮೊಮ್ಮಗಳ ಬಸವಿ ಬುಟ್ಬುಡಮ್ಮಿ”.

ಬೋರಮ್ಮನವರ ನುಡಿಗಳನ್ನು ಕೇಳುತ್ತಿದ್ದಂತೆಯೇ.. ಬರಸಿಡಿಲು ಬಡಿದಾಗ ಮರ ಹತ್ತಿ ಉರಿಯುವಂತೆ.. ಕನಕನ ಅವ್ವನ ಮಯ್-ಮನಗಳು ಅಪಾರವಾದ ಸಂಕಟದಿಂದ ಬೇಯತೊಡಗಿದವು. ಏನನ್ನೂ ಮಾತನಾಡಲಾಗದೆ.. ಕನಕನ ಅವ್ವ ಬಿಕ್ಕಿ ಬಿಕ್ಕಿ ಅಳತೊಡಗಿದಳು. ಕೊಟ್ಟಿಗೆಯಲ್ಲಿ ಕಸ ತೆಗೆಯುತ್ತಿದ್ದ ಮೊಮ್ಮಗಳು ಬರಲನ್ನು ಅಲ್ಲೇ ಬಿಟ್ಟು.. ಅಜ್ಜಿಯ ಬಳಿಗೆ ಓಡಿ ಬಂದು, ಅಜ್ಜಿಯೊಡನೆ ತಾನೂ ಅಳತೊಡಗಿದಳು.

“ಇದ್ಯಾಕಮ್ಮಿ.. ಸಿದ್ದಿ.. ಹಿಂಗೆ ಅತ್ತೀಯೆ?.. ನಾವು ಕಂಡಂಗೆ ಹಿಂದಕ್ಕೆಲ್ಲಾ ನಿಮ್ಮೋರು ಬೇಕಾದಶ್ಟು ಜನ ಬಸವೀರು ಇರಲಿಲ್ವೇನಮ್ಮಿ ?.. ವರುಶಕ್ಕೊಂದು ದಪ ನಡೀತಿದ್ದ ಹಬ್ಬದಲ್ಲಿ, ನಿಮ್ಮ ಬಸವೀರು ಬಂದು ಹಗ್ಗ ಮುಟ್ಟಿದ ಮ್ಯಾಲೆ ಅಲ್ಲವೇ.. ಶ್ರೀನಿವಾಸ ದೇವರ ತೇರನ್ನ ಮುಂದಕ್ಕೆ ಎಳೀತಿದ್ದುದ್ದು.. ಅದನ್ನೆಲ್ಲಾ ನೀ ಕಾಣ ?” ಎಂದು ಹೇಳಿ, ತಾವು ನೀಡಿದ್ದ ಸಲಹೆಗೆ ಒತ್ತಾಸೆಯಾಗಿ ಹಿಂದೆ ನಡೆಯುತ್ತಿದ್ದ ಆಚರಣೆಯನ್ನು ವಿವರಿಸಿದರು.
ಆ ಸಮಯಕ್ಕೆ ಅಲ್ಲಿಗೆ ಬಂದ ಚಿಕ್ಕಗವ್ಡರು.. ಕಣ್ಣೀರು ಕರೆಯುತ್ತಿದ್ದ ಅಜ್ಜಿ-ಮೊಮ್ಮಗಳನ್ನು ಕಂಡು-
“ಇದ್ಯಾಕ್ ಸಿದ್ದಮ್ಮ ಅಳ್ತಾ ಇದ್ದೀಯೆ?.. ಕನಕನಿಗೆ ಏನಾರ ಆಯ್ತೆ ?”ಎಂದು ಆತಂಕದಿಂದ ಕೇಳಿದರು. ಕನಕನ ಅವ್ವ ಮಾತನಾಡಲಾಗದೆ, ಇನ್ನೂ ಜೋರಾಗಿ ಬಿಕ್ಕತೊಡಗಿದಳು. ಈಗ ಚಿಕ್ಕಗವ್ಡರು ತಮ್ಮ ತಾಯಿಯನ್ನು ಕುರಿತು-
“ಇದ್ಯಾಕವ್ವ ಹಿಂಗೆ ಇಬ್ಬರೂ ಅಳ್ತಾವರಲ್ಲ! ನೀನು ಏನಾದ್ರು ಅಂದ?”.

“ಏ.. ನಾನೇನು ಅಂತ ಯಾರೂ ಅನ್ನಬಾರ‍್ದೆ ಇದ್ದುದನ್ನ ಅಂದ್ಬುಟ್ಟೆ..ಮೊಮ್ಮಗಳ ಮದುವೆ ಮಾಡೂಕೆ ನನ್ನ ಕಯ್ಯಲ್ಲಿ ಹೆಂಗಾದದವ್ವ ಅಂತ ಒದ್ದಾಡ್ತಿದ್ದಳು.. ಕರಿಗಟ್ಟದ ದೇವರಿಗೆ ಬಸವಿ ಬುಟ್ಬುಡಮ್ಮಿ ಅಂದೆ.. ಹಂಗಂದೇ ಹೊತ್ತಿನಿಂದಲೂ ಹಿಂಗೆ ಅಳ್ತಾವ್ಳೆ” ಎಂದು ವಿವರಿಸಿ.. ಕುಟಾಣಿಯೊಳಗೆ ಉಳಿದಿದ್ದ ಎಲೆ-ಅಡಕೆಯನ್ನು ಜೋರಾಗಿ ಕುಟ್ಟತೊಡಗಿದರು.

ಸುಮಾರು ನಲವತ್ತರ ವಯಸ್ಸಿನ ಚಿಕ್ಕಗವ್ಡರು.. ಬಿ.ಎ.,ವರೆಗೆ ಓದಿದವರು. ದೊಡ್ಡಗವ್ಡರು ಸತ್ತಾಗ..ತಂದೆಗೆ ಒಬ್ಬನೇ ಮಗನಾದ್ದರಿಂದ, ದೊಡ್ಡ ಆಸ್ತಿಯನ್ನು ನೋಡಿಕೊಳ್ಳುವುದಕ್ಕಾಗಿ, ಕಾಲೇಜನ್ನು ಬಿಟ್ಟು ಹಳ್ಳಿಗೆ ಹಿಂತಿರುಗಿದ್ದರು. ಹಳೆಯ ತಲೆಮಾರಿನ ಜಮೀನ್ದಾರಿ ವ್ಯವಸ್ತೆಯಲ್ಲಿ ನೆಲೆಯೂರಿದ್ದರೂ, ಹೊಸ ತಲೆಮಾರಿನ ಚಿಂತನೆಗಳನ್ನು ವಿದ್ಯೆಯ ಮೂಲಕ ಅರಿತುಕೊಂಡಿದ್ದರು. ದಿನ ಪತ್ರಿಕೆಗಳನ್ನು ಓದುತ್ತಾ ಸಮಾಜದ ನಡೆನುಡಿಗಳಲ್ಲಾಗುತ್ತಿರುವ ಬದಲಾವಣೆಗಳನ್ನು ಮತ್ತು ಆಗುಹೋಗುಗಳನ್ನು ಗಮನಿಸುತ್ತಿದ್ದರು. ತಮ್ಮ ಬಳಿ ದುಡಿಯುತ್ತಿರುವ ಆಳುಕಾಳುಗಳ ನೋವು ನಲಿವುಗಳಿಗೆ ನೆರವಾಗುತ್ತಿದ್ದರು. ತಮ್ಮ ತಾಯಿಯು ಆಡಿದ ಮಾತುಗಳನ್ನು ಕೇಳಿ ತುಂಬಾ ನೊಂದುಕೊಂಡ ಚಿಕ್ಕಗವ್ಡರು-

“ಇದೇನವ್ವ.. ಇಂತಾ ಕಾಲದಲ್ಲಿ.. ಅಂತಾ ಮಾತನ್ನ ಯಾರಾದರೂ ಆಡರೇನವ್ವ !.. ಬಡವರ ಹೆಣ್ ಮಕ್ಳ ಬಸವಿಯರಾಗಿ ಬುಡೂದು.. ಅದೆಲ್ಲಾ ನಮ್ ಹಿರೀಕರ ಕಾಲಕ್ಕೆ ಮುಗುದೋಯ್ತು. ಈಗ ಎಲ್ಲಾ ಜಾತಿ ಹೆಣ್ ಮಕ್ಕಳು ಮದುವೆ ಮಾಡ್ಕೊಂಡು.. ನಾಲ್ಕು ಜನದಂಗೆ ಬಾಳ್ತಾವ್ರೆ” ಎಂದು ತಾಯಿಗೆ ಹೇಳಿ, ಇನ್ನೂ ಅಳುತ್ತಿದ್ದ ಕನಕನ ಅವ್ವನನ್ನು ಉದ್ದೇಶಿಸಿ-

“ನೋಡಮ್ಮ.. ನಿನ್ ಗಂಡನ ಕಾಲದಿಂದಲೂ.. ನಮ್ಮ ಹಟ್ಟೀಲೆ ನೀವು ಗೆಯ್ಕೊಂಡು ಬಂದಿದ್ದೀರಿ.. ನಿಮ್ಮ ಇಂತಾ ಕಾಲದಲ್ಲಿ ನಾನು ಕಯ್ ಬುಡೂದಿಲ್ಲ. ನೀನು ಎಲ್ಲಾರ ನಿಮ್ ಜನದಲ್ಲಿ ಒಂದು ಒಳ್ಳೇ ಗಂಡು ನೋಡಿ, ಮದುವೆ ಗೊತ್ತು ಮಾಡ್ಕೊಂಡು ಬಾ. ಅದೇನ್ ಕರ‍್ಚುವೆಚ್ಚ ಬತ್ತದೋ ಅದ ನಾ ಕೊಡ್ತೀನಿ. ನಾನೇ ನಿಂತ್ಕೊಂಡು ಮದುವೆ ಮಾಡಿಸ್ತೀನಿ. ನೀನ್ ಅಳ್ಬೇಡ ಸುಮ್ಮನಿರು” ಎಂದು ಸಂತಯಿಸಿ, ಕನಕನ ಮಗಳನ್ನು ನೋಡುತ್ತಾ-

“ಇನ್ನು ಮದುವೆ ಮಾಡಲಿಲ್ಲ ಅಂತ.. ಅಜ್ಜಿ ಜೊತೇಲಿ ಬಂದು ಅಳ್ತಾ ಇದ್ದಿಯೇನಮ್ಮಿ” ಎಂದು ನಗೆಚಾಟಿಕೆ ಮಾಡಿದಾಗ, ಆ ಹುಡುಗಿ ನಾಚಿಕೆಯಿಂದ ನೀರಾಗಿ ತಲೆ ತಗ್ಗಿಸಿದಳು.

ಕೆಲವೇ ತಿಂಗಳುಗಳಲ್ಲಿ ಕನಕನ ಅವ್ವ… ತಮ್ಮ ಕೇರಿಯ ನಾಲ್ಕಾರು ಮಂದಿ ಹಿರಿಯರ ನೆರವಿನಿಂದ, ತಮ್ಮ ಕೇರಿಯಲ್ಲೇ ಇದ್ದ ಹುಡುಗನೊಬ್ಬನೊಡನೆ ಮದುವೆಯನ್ನು ನಿಶ್ಚಿಯಿಸಿದಾಗ, ಚಿಕ್ಕಗವ್ಡರ ಮುಂದಾಳುತನದಲ್ಲಿ ಕರಿಗಟ್ಟದ ಶ್ರೀನಿವಾಸ ದೇವರ ಸನ್ನಿದಿಯಲ್ಲಿ ಕನಕನ ಮಗಳ ಮದುವೆ ನಡೆಯಿತು.

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. smhamaha says:

    “ಕರಿಗಟ್ಟದ ಶ್ರೀನಿವಾಸ ದೇವರ‍್ಗೆ.. ನಿನ್ ಮೊಮ್ಮಗಳ ಬಸವಿ ಬುಟ್ಬುಡಮ್ಮಿ”. ಕತೆ ನಲ್ಲಿ ಹಿಂಗೆ ಬರುತ್ತೆ ಅಂತ ಎಳ್ಳಷ್ಟು ಉಂಕಿಸಲಿಲ್ಲ … ಮೊನ್ನೆ ಮೊನ್ನೆ ಸುದ್ದಿ ಹಾಳೆಗಳಲ್ಲೂ ಇದರ ಬಗ್ಗೆ ಬಂದಿತ್ತು …. ತುಂಬಾ ಚಂದದಿಂದ ಮೂಡಿಬಂದಿದೆ ಈ ಕತೆ (especially slangu)

ಅನಿಸಿಕೆ ಬರೆಯಿರಿ:

Enable Notifications OK No thanks