ನಮ್ಮ ಕೀಲುಗಳ ಬಗ್ಗೆ ತಿಳಿಯೋಣ ಬನ್ನಿ

ಯಶವನ್ತ ಬಾಣಸವಾಡಿ.

ಹುರಿಕಟ್ಟಿನ ಏರ್‍ಪಾಟು ಬಾಗ-4

ಕಾರಿನ ಬಿಡಿಬಾಗಗಳಾಗಲಿ ಇಲ್ಲವೇ ಮನೆಯ ಬಾಗಿಲನ್ನು ಚವ್ಕಟ್ಟಿಗೆ ಅಣಿಗೊಳಿಸುವುದಕ್ಕಾಗಲಿ, ನಮ್ಮ ಸುತ್ತಮುತ್ತಲಿನ ಜಗತ್ತಿನಲ್ಲಿ ಎರಡು ಇಲ್ಲವೆ ಹಲವು ಬಿಡಿಬಾಗಗಳನ್ನು ಒಂದಕ್ಕೊಂದು ಜೋಡಿಸಲು ಜಂಟಿಗಳನ್ನು (joint) ಬಳಸಲಾಗುತ್ತದೆ.

ಈ ಜಂಟಿಗಳು ಬಿಡಿಬಾಗಗಳನ್ನು ಹಿಡಿದಿಡುವುದರ ಜತೆಗೆ ಅವುಗಳು ಸುಲಬವಾಗಿ ಕದಲಲು ಕೂಡ ನೆರವಾಗುತ್ತವೆ. ನಿಮಗೆ ಗೊತ್ತೆ ನಮ್ಮ ಮಯ್ಯಿಯಲ್ಲಿ ಕೂಡ ಇಂತ ಹಲವಾರು ಬಗೆಯ ಜಂಟಿಗಳು ಅಣಿಗೊಂಡಿವೆ. ಬನ್ನಿ, ಯಾವವು ಈ ಜಂಟಿಗಳು, ಅವುಗಳ ಬಗೆಗಳೇನು ಮುಂತಾದವುಗಳನ್ನು ತಿಳಿದುಕೊಳ್ಳೋಣ.

ಎರಡು ಅತವ ಹೆಚ್ಚು ಎಲುಬುಗಳು ಒಂದಕ್ಕೊಂದು ಬೆಸೆದುಕೊಳ್ಳುವಿಕೆಯನ್ನು ಕೀಲು/ಜಂಟಿ (joint) ಎಂದು ಕರೆಯಲಾಗುತ್ತದೆ. ಜಂಟಿಗಳು ಹಾಗು ಅವುಗಳಿಗೆ ಹೊಂದಿಕೊಂಡ ಇಟ್ಟಳಗಳು ಒಟ್ಟಾಗಿ ಮಯ್ಯನ್ನು ಅಲುಗಾಡಿಸಲು (ತಲೆಬುರುಡೆ ಜಂಟಿಗಳನ್ನು ಹೊರತು ಪಡಿಸಿ) ಮತ್ತು ಕಸುವಿನ ಆಸರೆಯನ್ನು ಒದಗಿಸಲು ನೆರವಾಗುತ್ತವೆ.

ಜಂಟಿಗೆ ಹೊಂದಿಕೊಂಡಿರುವ ಮುಕ್ಯ ಇಟ್ಟಳಗಳೆಂದರೆ ಕಂಡರಗಳು (tendons), ತಂತುಗಟ್ಟುಗಳು (ligaments), ಕೀಲ್ಗೂಡುವ ಮೆಲ್ಲೆಲುಗಳು (articular cartilage), ಕೀಲ್ಗಾಪು (joint capsule) ಮತ್ತು ಕೀಲೋಳೆಯ ದಿಂಚೀಲ (synovial bursa)

titta 1

ತಂತುಗಟ್ಟುಗಳು (ligaments): ತಂತುಗಟ್ಟು (ligament), ಒಂದು ಎಲುಬನ್ನು ಮತ್ತೊಂದು ಎಲುಬಿಗೆ ಬೆಸೆಯುವ ಪಟ್ಟಿ/ಹಗ್ಗದಂತಹ ಇಟ್ಟಳ. ಈ ಇಟ್ಟಳವು ತಂತುಗೂಡುಕಟ್ಟಿನಿಂದ (fibrous tissue) ಮಾಡಲ್ಪಟ್ಟಿದೆ. ಜಂಟಿಯ ಬಾಗದಲ್ಲಿ ಮಾಡುವ ಇದರ ಕೆಲಸದಿಂದಾಗಿ ಇದನ್ನು ಕೀಲ್ಗೂಡುವ ತಂತುಗಟ್ಟು (articular ligament) ಎಂದೂ ಕರೆಯಬಹುದು. ಇದು ಮುಕ್ಯವಾಗಿ ಜಂಟಿಗಳಿಗೆ ನೆಲತೆಯನ್ನು (stability) ಒದಗಿಸುತ್ತದೆ.

ಕಂಡರಗಳು (tendons): ಕಂಡಗಳನ್ನು (muscle) ಎಲುಬುಗಳಿಗೆ ಅಂಟಿಸುವ ಬಲವಾದ ತಂತುಗೂಡುಕಟ್ಟುಗಳನ್ನು (fibrous tissue) ಕಂಡರವೆಂದು (tendons) ಗುರುತಿಸಬಹುದು. ಇದೂ ಕೂಡ ತಂತುಗಟ್ಟಿನಂತೆ ಅಂಟುವುಟ್ಟುಕದಿಂದ (collagen) ಮಾಡಲ್ಪಟ್ಟಿರುತ್ತದೆ. ಕಂಡ ಮತ್ತು ಕಂಡರಗಳು ಎಲುಬುಗಳನ್ನು ಅಲುಗಾಡಿಸಲು ಒಗ್ಗಟ್ಟಿನಿಂದ ಕೆಲಸ ಮಾಡುತ್ತವೆ.

ಕೀಲ್ಗಾಪು (joint capsule): ಕೀಲೋಳೆಯ ಜಂಟಿಯನ್ನು (synovial joint; ಮುಂದೆ ವಿವರಿಸಲಾಗಿದೆ) ಸುತ್ತುವರೆದ ಹೊದಿಕೆಯೇ ಕೀಲ್ಗಾಪು. ಇದು ಎರಡು ಪದರಗಳನ್ನು ಹೊಂದಿರುತ್ತದೆ. ಹೊರಗಿನ ಪದರವು ಬಿಳಿಯ ತಂತುಗೂಡುಕಟ್ಟಿನಿಂದ (white fibrous tissue) ಮಾಡಲ್ಪಟ್ಟಿದ್ದರೆ, ಒಳಗಿನದು ಸುರಿಗೆ ಪದರ (secretory layer). ಈ ಸುರಿಗೆ ಪದರವನ್ನು “ಕೀಲೋಳೆಯ ಪದರ” (synovial membrane) ಎಂದೂ ಕರೆಯಬಹುದು.

ಕೀಲ್ಗಾಪಿನ ಒಳಗೆ, ಕೀಲ್ಗೂಡುವ ಮೆಲ್ಲೆಲುಬುಗಳು (articular cartilage) ಎಲುಬಿನ ತುದಿಗಳಿಗೆ ಹೊದಿಸಲ್ಪಟ್ಟಿರುತ್ತವೆ. ಹೊರಗಿನ ಬಿಳಿಯ ತಂತುಗೂಡುಕಟ್ಟಿನ (white fibrous tissue) ಪದರವು, ಕೀಲ್ಗೂಡುವ ಎಲುಬಿನ ತುದಿಯ ಇಡೀ ಸುತ್ತಳತೆಗೆ (circumference) ಅಂಟಿಕೊಂಡಿರುತ್ತದೆ. ಈ ಬಗೆಯಾಗಿ ಈ ಹೊರಪದರವು ಎಲುಬುತುದಿಗಳ ಕೂಡುವಿಕೆಯ ಇಡೀ ಬಾಗವನ್ನು ಸುತ್ತುವರೆಯುತ್ತದೆ.

ಕೀಲೋಳೆಯ ದಿಂಚೀಲ (synovial bursa): ಕೀಲೋಳೆಯ ಹರಿಕ (synovial fluid) ತುಂಬಿದ ಕಿರುಚೀಲವಿದು. ಇದರಲ್ಲಿರುವ ಹರಿಕವು (liquid) ತತ್ತಿಲೋಳೆಯ (egg white) ಮಂದತೆಯನ್ನು (consistency) ಹೊಂದಿದೆ. ಈ ದಿಂಬು (bursa), ಜಂಟಿಯ ಬಾಗದಲ್ಲಿ ತಂತುಗಟ್ಟು, ಕಂಡರ, ಕಂಡ ಹಾಗು ಎಲುಬಿನ ನಡುವೆ ಉಂಟಾಗುವು ತಿಕ್ಕಾಟವನ್ನು ಇಳಿಸಲು ನೆರವಾಗುತ್ತದೆ.

ಜಂಟಿಗಳ ಬಗ್ಗೆ ಸುಳುವಾಗಿ ಅರಿಯಲು, ಅವುಗಳನ್ನು ಹಲವು ಬಗೆಯಲ್ಲಿ ಗುಂಪಿಸಲಾಗಿದೆ.

ಇಟ್ಟಳದಂತೆ ಗುಂಪಿಸುವಿಕೆ (structural classification): ಜಂಟಿಯ ಇಟ್ಟಳವನ್ನು ಮಾಡಲ್ಪಡುವ ಗೂಡುಕಟ್ಟಿನ (tissue) ಅನುಗುಣವಾಗಿ, ಜಂಟಿಯನ್ನು ಕೆಳಕಂಡಂತೆ ಗುಂಪಿಸಬಹುದಾಗಿದೆ,

titta 2

1) ತಂತುಗೂಡಿನ ಜಂಟಿ (fibrous joint): ಅಂಟುವುಟ್ಟುಕದ (collagen) ನಾರುಗಳನ್ನು ಹೆಚ್ಚಿನ ಮಟ್ಟದಲ್ಲಿ ಹೊಂದಿರುವ ಕೂಡಿಸುವ ಗೂಡುಕಟ್ಟಿನ (connective tissue) ಮೂಲಕ, ಎಲುಬುಗಳ ಜೋಡಣೆಯಾಗಿರುತ್ತದೆ.

2) ಮೆಲ್ಲೆಲು ಜಂಟಿ (cartilaginous joint): ಮೆಲ್ಲೆಲುಬಿನ ನೆರವಿನಿಂದ ಎರಡು ಎಲುಬುಗಳ ಬೆಸುಗೆಯಾದರೆ, ಅದನ್ನು ಮೆಲ್ಲೆಲು ಜಂಟಿ ಎನ್ನಬಹುದು.

3) ಕೀಲೋಳೆಯ ಜಂಟಿ (synovial joint): (ತಿಟ್ಟ 1 & 2) ಈ ಬಗೆಯ ಜಂಟಿಯಲ್ಲಿ, ಎಲುಬುಗಳು ನೇರವಾಗಿ ಒಂದಕ್ಕೊಂದು ಸೇರಿಕೊಂಡಿರುವುದಿಲ್ಲ. ಎಲುಬುಗಳ ನಡುವೆ, ಕೀಲೋಳಿನ ಗೂಡು (synovial cavity) ಇರುತ್ತದೆ.

ತಂತುಗಟ್ಟುಗಳಿಗೆ ಹೊಂದಿಕೊಂಡಿರುವ ಕೀಲ್ಗೂಡುವ (articular) ಕೀಲ್ಗಾಪನ್ನು (capsule) ಮಾಡುವ ಮಂದ ಹಾಗು ಸಮವಲ್ಲದ ಕೂಡಿಸುವ ಗೂಡುಕಟ್ಟಿನ (connective tissue) ನೆರವಿನಿಂದ ಮೂಳೆಗಳು ಬೆಸೆದುಕೊಂಡಿರುತ್ತವೆ. ಕೀಲೋಳೆಯ ಜಂಟಿಗಳನ್ನು (synovial), ಅವು ತಿರುಗುವ ದಿಕ್ಕು ಹಾಗು ತಿರುಗುವ ಪ್ರಮಾಣದ ಅನುಗುಣವಾಗಿ ಹೀಗೆ ಮರುಗುಂಪಿಸಬಹುದು:

titta 3

ಅ) ತಿರುಗಾಣಿ ಜಂಟಿ (pivot joints): ಈ ಬಗೆಯ ಜಂಟಿಗಳು ನಡುಗೆರೆಯ (axis) ಸುತ್ತಲೂ ತಿರುಗುತ್ತವೆ. ಎತ್ತುಗೆಗೆ: ಮೊದಲನೆಯ ಹಾಗು ಎರಡನೆಯ ಕೊರಳಿನ ಬೆನ್ನೆಲುಬುಗಳ ನಡುವೆ ಕಂಡು ಬರುವ ಜಂಟಿ.

ಆ) ಕೀಳಚ್ಚು ಜಂಟಿ (hinge joints): ಕೀಳಚ್ಚು ಜಂಟಿಗಳು ಬಾಗಿಲಿನಂತೆ ತೆರದುಕೊಳ್ಳುವ ಹಾಗು ಮುಚ್ಚಿಕೊಳ್ಳುವ ಗುಣವನ್ನು ಹೊಂದಿವೆ. ಎತ್ತುಗೆಗೆ: ಮೊಣಕಯ್ ಜಂಟಿ (elbow joint).

ಇ) ಜಾರುವ ಜಂಟಿ (gliding joints): ಎರಡು ಎಲುಬು ತಟ್ಟೆಗಳು ಎದುರು-ಬದುರಾಗಿ ಜಾರುವಿಕೆಯ ಹುರುಳನ್ನು ಹೊಂದಿರುವ ಜಂಟಿಗಳನ್ನು ’ಜಾರುವ ಜಂಟಿ’ ಎಂದು ಹೇಳಬಹುದು. ಮಣ್ಣಿಕಟ್ಟು (wrist) ಹಾಗು ಹಿಮ್ಮಡಿಗಂಟುಗಳಲ್ಲಿ (ankle) ಈ ಬಗೆಯ ಜಂಟಿಗಳು ಇರುತ್ತವೆ.

ಈ) ಒರಳು-ಗುಂಡಿನ ಜಂಟಿ (ball-and-socket joints): ತೊಡಕಿಲ್ಲದೆ ಹಲವು ದಿಕ್ಕಿನಲ್ಲಿ ಕದಲಿಸಬಹುದಾದ ಜಂಟಿಯ ಬಗೆಯಿದು. ತೋಳಿನ ಜಂಟಿ ಹಾಗು ಸೊಂಟ ಜಂಟಿಗಳು ಒರಲು-ಗುಂಡಿನ ಜಂಟಿ ಗುಂಪಿನಡಿ ಬರುತ್ತವೆ. ಇಲ್ಲಿ ಒಂದು ಎಲುಬಿನ ತುದಿ ಚಂಡಿನ ಇಟ್ಟಳವನ್ನು ಹೊಂದಿದ್ದರೆ, ಇದರ ಎದುರಿನ ಎಲುಬಿನ ತುದಿ, ಚಂಡಿನ ತುದಿಗೆ ಹೊಂದಿಕೊಳ್ಳಲು, ನಡುವಿನಲ್ಲಿ ಗುಳಿ ಹಾಗು ಅಂಚಿನಲ್ಲಿ ಹೊರಚಾಚಿದ ಇಟ್ಟಳವನ್ನು ಹೊಂದಿರುತ್ತದೆ.

ಉ) ಜೀನು ಜಂಟಿ (saddle joints): ಈ ಜಂಟಿಗಳು ಎರಡು ಬಗೆಯ ಅಲುಗಾಟದಲ್ಲಿ ನೆರವಾಗುತ್ತವೆ. ಎತ್ತುಗೆಗೆ: ಜೀನು ಜಂಟಿಯ ನೆರವಿನಿಂದ, ಹೆಬ್ಬೆರಳನ್ನು ತೋರುಬೆರಳಿನ ಕಡೆ ಹೊಯ್ಯಬಹುದು. ಇದೆ ಜೀನು ಜಂಟಿಯ ನೆರವಿನಿಂದ, ಹೆಬ್ಬೆರಳನ್ನು ಕಿರುಬಬೆರಳಿನೆಡೆಗೂ ಒಯ್ಯಬಹುದು.

ಊ) ಗಂಟಿನ ಜಂಟಿ (conyloid joints): ಈ ಜಂಟಿಗಳು ಸ್ವಲ್ಪ ಒರಳು-ಗುಂಡಿನ ಜಂಟಿಯನ್ನು ಹೋಲುತ್ತವೆ. ಆದರೆ, ಇವುಗಳಲ್ಲಿ ಚಂಡಿನ ಇಟ್ಟಳ ಇರುವುದಿಲ್ಲ.
ಕೆಲಸದಂತೆ ಗುಂಪಿಸುವಿಕೆ (functional classification): ಕದಲಿಕೆಗೆ ಅನುಗುಣವಾಗಿ ಜಂಟಿಗಳನ್ನು ಕೂಡುಗೀಲು (synarthrosis), ಇಗ್ಗೀಲು (amphiarthrosis) ಹಾಗು ಚಲಗೀಲು (diarthrosis) ಎಂದು ಗುಂಪಿಸಬಹುದಾಗಿದೆ.

1) ಕೂಡುಗೀಲು ಬಗೆಯ ಜಂಟಿಗಳಲ್ಲಿ, ಯಾವುದೇ ಅಲುಗಾಟವಿರುವುದಿಲ್ಲ. ಈ ಜಂಟಿಗಳು ತಂತುಗೂಡಿನ ಜಂಟಿಗಳಾಗಿರುತ್ತವೆ (fibrous joint) (ತಿಟ್ಟ 4). ಎತ್ತುಗೆಗೆ: ತಲೆಬುರುಡೆಯ ಎಲುಬುಗಳು ಒಂದಕ್ಕೊಂದು ಜೊತೆಗೂಡುವ ಬಾಗದಲ್ಲಿನ “ಬುರುಡೆ ಸೇರುವೆ” (skull suture).

titta 4

2) ಇಗ್ಗೀಲು ಜಂಟಿಗಳಲ್ಲಿ ಅಲುಗಾಟವು ತಕ್ಕ-ಮಟ್ಟಿಗೆ ಇರುತ್ತದೆ. ಇವು ಮೆಲ್ಲೆಲುಗುಣದ ಬೆಸುಗೆಗಳು (cartilaginous joints) (ತಿಟ್ಟ 5). ಎತ್ತುಗೆಗೆ: ಪಕ್ಕೆಲುಬುಗಳು (ribs) ಮೆಲ್ಲೆಲುಬುಗಳ (cartilage) ನೆರವಿನಿಂದ, ಎದೆಚಕ್ಕೆಗೆ (sternum) ಬೆಸುದುಕೊಳ್ಳುವ ಬಾಗ.

titta 5

3) ಚಲಗೀಲು ಜಂಟಿಗಳನ್ನು ತಡೆಯಿಲ್ಲದೆ ಅಲುಗಾಡಿಸಬಹುದು. ಎಲ್ಲಾ ಚಲಗೀಲುವೆ ಜಂಟಿಗಳು ಕೀಲೋಳಿನ ಜಂಟಿಗಳಾಗಿರುತ್ತವೆ (synovial joint) (ತಿಟ್ಟ 2 & 6). ಎತ್ತುಗೆಗೆ: ಸೊಂಟದ ಜಂಟಿ (hip joint), ಮಂಡಿ ಜಂಟಿ (knee joint).

titta 6

ಉಸಿರುಗಸುವಿನ ಗುಂಪಿಸುವಿಕೆ (biomechanical classification): ಜಂಟಿಗಳು ಹೊಂದಿರುವ ಕಸುವಿನ ಗುಣಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ, ಅವುಗಳನ್ನು ಈ ಬಗೆಯಾಗಿ ಗುಂಪಿಸಬಹುದು.

1) ಸುಳುವಾದ ಜಂಟಿ (simple joint): ಎರಡು ಕೀಲ್ಗೂಡುವ ಮೇಲ್ಮಯ್ಗಳನ್ನು (articular surface) ಹೊಂದಿರುತ್ತವೆ. ಎತ್ತುಗೆಗೆ: ಹೆಗಲು ಜಂಟಿ (shoulder joint), ಸೊಂಟ ಜಂಟಿ (hip joint)

2) ಕೂಡಿಕೆಯ ಜಂಟಿ (compound joint): ಮೂರು ಅತವ ಹೆಚ್ಚಿನ ಕೀಲ್ಗೂಡುವ ಮೇಲ್ಮಯ್ಗಳನ್ನು (articular surface) ಹೊಂದಿರುತ್ತವೆ. ಎತ್ತುಗೆಗೆ: ಅರೆಲುಮುಂಗಯ್ ಜಂಟಿ (radiocarpal joint).

3) ತೊಡಕಿನ ಜಂಟಿ (complex joint): ಇವು ಎರಡು ಅತವ ಹೆಚ್ಚಿನ ಕೀಲ್ಗೂಡುವ ಮೇಲ್ಮಯ್ಗಳ (articular surface) ಜೊತೆಗೆ ಕೀಲ್ಗೂಡುವ ಬಿಲ್ಲೆ (articular disc) ಅತವ ಚಂದ್ರಬಟ್ಟುಗಳನ್ನು (meniscus) ಹೊಂದಿರುತ್ತವೆ. ಎತ್ತುಗೆಗೆ: ಮಂಡಿ ಜಂಟಿ (knee joint).

ಕಳೆದ ಕೆಲವು ಕಂತುಗಳಲ್ಲಿ ಹುರಿಕಟ್ಟಿನ ಏರ್‍ಪಾಟಿನ ಬಗ್ಗೆ ತಿಳಿಯಾಗಿ ತಿಳಿಸಿಕೊಡುವ ಪ್ರಯತ್ನವನ್ನು ಮಾಡಿದ್ದೇನೆ. ಈ ಬರಹದೊಂದಿಗೆ ಕಂಡಗಳ ಇಟ್ಟಳ, ಅವುಗಳ ಉಸಿರಿಯರಿಮೆ (physiology) ಹಾಗು ಮಯ್ಯಲ್ಲಿ ಬರುವ ಮುಕ್ಯ ಕಟ್ಟಿನ ಕಂಡಗಳ ವಿವರಗಳನ್ನು ಹೊರತುಪಡಿಸಿ ಹುರಿಕಟ್ಟಿನ ಅರಿದಾದ ಬಾಗಗಳ ಬಗ್ಗೆ ತಿಳಿಸಿಕೊಟ್ಟಿದ್ದೇನೆ. ನಮ್ಮದೇ ಮಯ್ಯಲಿರುವ ಹುರಿಕಟ್ಟಿನ ಏರ‍್ಪಾಟಿನ ಬಗ್ಗೆ ನಿಮಗೆ ತಕ್ಕಮಟ್ಟಿಗಾದರೂ ಈಗ ತಿಳಿದಿರಬಹುದು.

ಡಾಕ್ಟರೊಬ್ಬರು  ’ಕಾರ‍್ಟಿಲೇಜೆನಿಯಸ್ ಬೋನ್’ ತೊಂದರೆಗೀಡಾಗಿದೆ ಅಂದಾಗ, ಮೆದುವಾದ ’ಮೆಲ್ಲೆಲುವು’ ತೊಂದರೆಗೀಡಾಗಿದೆ ಅಂತಾ ತಿಳಿದುಕೊಳ್ಳುವಶ್ಟಾದರೂ ಕನ್ನಡ ಪದಗಳು ನೆರವಾದರೆ ನನ್ನ ಬರಹದ ಹೆಚ್ಚಿನ ಗುರಿ ತಲುಪಿದಂತೆಯೇ.

ಮಯ್ಯರಿಮೆ ಈ ಸರಣಿ ಬರಹಗಳ ಮುಂದಿನ ಕಂತಿನಲ್ಲಿ ಮತ್ತೊಂದು ಏರ್‍ಪಾಟಿನ ಬಗ್ಗೆ ತಿಳಿದುಕೊಳ್ಳೋಣ.

(ತಿಳಿವಿನ ಮತ್ತು ತಿಟ್ಟ ಸೆಲೆಗಳು: 1. patienteducationcenter.org, 2. en.wikipedia.org  3. cnx.org  4. www.coa.edu, 5. www.coa.edu/stodd 
6. bahriortho.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: