ಇಂದಿನ ಸವಾಲುಗಳಿಗೆ ತಾಯ್ನುಡಿಗಳನ್ನು ಬಲಗೊಳಿಸಬೇಕಿದೆ

ಸಂದೀಪ್ ಕಂಬಿ.

02-21-2013motherlanguage

ಇಂದು ವಿಶ್ವ ತಾಯ್ನುಡಿ ದಿನ. ನುಡಿ ಎಂಬುದು ಅನಿಸಿಕೆ ಹೇಳುವ ಸಾದನ ಎಂದು ನಮಗೆಲ್ಲರಿಗೂ ತಿಳಿದೇ ಇದೆ. ಆದರೆ ಒಂದು ನುಡಿಯ ಬಳಕೆ ಇಶ್ಟಕ್ಕೇ ನಿಲ್ಲುವುದಿಲ್ಲ. ಒಂದು ಇಡೀ ನುಡಿ ಸಮುದಾಯದ ಒಡನಾಟ, ಮತ್ತು ಒಂದಾಣಿಕೆಗಳಿಗೆ ಅದರ ನುಡಿ ಒಂದು ಒಯ್ಯುಗೆಯಾಗಿ ಕೆಲಸ ಮಾಡುತ್ತದೆ. ಮತ್ತು ಮಂದಿಯೇ ಕಟ್ಟುವ ಪದ್ಯ, ಕತೆ, ಹಾಡು, ನಾಣ್ಣುಡಿ ಮುಂತಾದವುಗಳನ್ನು ಗಮನಿಸಿದರೆ ಒಂದು ನುಡಿ ಅದನ್ನು ಆಡುವವರ ಮಾಡುಗತನದ ಹಂಬಲಗಳನ್ನು ನೆರವೇರಿಸುವ ಸಾದನವಾಗುತ್ತದೆ. ಈ ಬಗೆಯಲ್ಲಿ ಹೇಳಿಕೊಳ್ಳುವಿಕೆ, ಮಾಡುಗತನ ಮತ್ತು ಒಡನಾಟದ ಒಯ್ಯುಗೆಯಾದ ನುಡಿ, ಅದನ್ನಾಡುವ ಮಂದಿಯನ್ನು ಗಟ್ಟಿಯಾಗಿ ಬೆಸೆಯುತ್ತದೆ, ಮತ್ತು ಇಂತಹ ಬೆಸುಗೆ ನೂರಾರು, ಸಾವಿರಾರು ವರುಶಗಳ ಕಾಲ ಉಂಟಾಗುವುದರಿಂದ, ಒಂದು ನುಡಿ ಮತ್ತು ನುಡಿಸಮುದಾಯದ ಸುತ್ತ ಒಂದು ಸಂಸ್ಕ್ರುತಿಯು ಬೆಳೆದು ನಿಲ್ಲುತ್ತದೆ. ಹಾಗಾಗಿ, ನುಡಿ ಎಂಬುದು ಇಂತಹ ಸಂಸ್ಕ್ರುತಿ, ತನ್ನತನದ ಹೆಮ್ಮೆಯ ಹೆಗ್ಗುರುತೂ ಆಗಿರುತ್ತದೆ. ಈ ಕಾರಣಗಳಿಗಾಗಿಯೇ ನುಡಿ ಸಮುದಾಯಗಳು ರಾಜಕೀಯವಾಗಿಯೂ ಒಂದಾಗುವ, ಒಟ್ಟುಗೂಡುವ ಒಲವು ತೋರಿಸುತ್ತವೆ.

ಹಿಂದೆ ನುಡಿಯೆಂಬುದು ಮಾತಲ್ಲಿ ಮಾತ್ರ ಬಳಕೆಯಲ್ಲಿತ್ತು. ಅದು ಬರಹಕ್ಕೆ ಇಳಿದಾಗ, ಸಮಾಜದ ಕೆಲ ಮಂದಿಯ ಬಳಕೆಗೆ ಮಾತ್ರ ಉಳಿದುಕೊಂಡಿತು, ಮತ್ತು ಅದರ ಬಳಕೆಯೂ ಹೆಚ್ಚಾಗಿ ಕತೆ, ಕಾವ್ಯ ಇಂತಹ ನಲ್ಬರಹಗಳಿಗೆ ಸೀಮಿತವಾಗಿತ್ತು. ಹಾಗಾಗಿ ಬೇರೆ ಮಂದಿಗೆ ಬರಹದ ಅಗತ್ಯ ಇರಲಿಲ್ಲ. ಆದರೆ ಇಂದಿನ ಯುಗದಲ್ಲಿ ಎಲ್ಲರೂ ಓದು ಬರಹ ಕಲಿಯುವ ಅಗತ್ಯ ಇದೆ. ಏಳಿಗೆ ಮತ್ತು ಒಳ್ಳೆಯ ಬಾಳಿಗೆ ತಿಳಿವಿನ ಅಗತ್ಯವಿದೆ. ಮತ್ತು ಈ ತಿಳಿವಿಗೆ ಓದು, ಬರಹವೇ ಮೂಲ.

ಇಂದು ಹಿಂದಿಗಿಂತ ನುಡಿಯ ಬಳಕೆಯ ಹರಹುಗಳು ಸಾವಿರಾರು ಪಟ್ಟು ಹೆಚ್ಚಿವೆ. ಹಣಮನೆ, ಆಡಳಿತ, ನ್ಯಾಯಾಂಗ, ಹಣಕಾಸಿನ ಏರ್‍ಪಾಡು, ಕಲಿಕೆ, ದುಡಿಮೆ ಮುಂತಾದವುಗಳಲ್ಲಿ ಕೂಡಣದ ಎಲ್ಲರೂ ಪಾಲ್ಗೊಳ್ಳಬೇಕಿದೆ. ಮತ್ತು ದಿನ ದಿನಕ್ಕೂ ಈ ಎಲ್ಲ ಹರಹುಗಳಲ್ಲಿಯೂ ಹೊಸ ಹೊಸ ಅರಕೆಗಳು, ಹೊಸ ಮಾರ್‍ಪುಗಳು, ಹೊಸ ಬಳಕೆಗಳು ಮೂಡುತ್ತಿವೆ. ಅರಿಮೆಯ ಹರಹಿನಲ್ಲಿ ಆಗುತ್ತಿರುವ ಏಳಿಗೆಯೂ ಸಾಮಾನ್ಯ ಮಂದಿಯನ್ನು ನೇರವಾಗಿ ಮುಟ್ಟುತ್ತಿರುವುದರಿಂದ (ನಡುಬಲೆ, ಅಲೆಯುಲಿ, ಮುಂತಾದುವು) ಬಳಕೆಗಳ ಸಾದ್ಯತೆಗಳು ಹೆಚ್ಚಾಗಿದ್ದು, ಈ ಸಾದ್ಯತೆಗಳನ್ನ ನುಡಿಯು ಎಡೆಬಿಡದೆ ನೆರವೇರಿಸುತ್ತ ಹೋಗಬೇಕಾಗುತ್ತದೆ.

ಪ್ರತಿ ದಿನ ಹೊಸ ಅರಕೆಗಳು, ಹೊಸ ಅರಿಮೆಗಳು ಮೂಡುತ್ತಿರುವ ಕಾಲದಲ್ಲಿದ್ದೇವೆ. ಈ ಹೊಸ ತಿಳಿವುಗಳನ್ನು ಹೇಳಲು ಹೊಸ ಪದಗಳು ಬೇಕು. ಹಾಗಾಗಿ ಅರಿಗರು ಹೊಸ ಪದಗಳನ್ನು ಕಟ್ಟುತ್ತಲೇ ಬಂದಿದ್ದಾರೆ. ಹೀಗೆ ಅರಿಮೆಯನ್ನು ತಿಳಿಸಲು ಸಾವಿರಾರು ಹೊಸ ಪದಗಳು ಬೇಕಾದರೆ, ಅರಿಮೆಯಲ್ಲಿ ಮತ್ತು ಚಳಕದರಿಮೆಯಲ್ಲಿ ಉಂಟಾಗಿರುವ ಏಳಿಗೆಯಿಂದ ಕೂಡಣದಲ್ಲಿ ಉಂಟಾಗುತ್ತಿರುವ ಹೊಸ ಮಾರ್‍ಪಾಟುಗಳು, ಹೊಸ ಬಗೆಯ ಒಡನಾಟಗಳ ಸಲುವಾಗಿ, ಸಾಮಾನ್ಯ ಮಂದಿಗೇ ಇವುಗಳನ್ನು ಹೇಳಲು ಸಾವಿರಾರು ಹೊಸ ಪದಗಳು ಬೇಕಾಗಿವೆ. ಈ ಕಾರಣಕ್ಕಾಗಿಯೇ ಇಂಗ್ಲೀಶ್ ನುಡಿಯಲ್ಲಿ ಇಂತಹ ಹೊಸ ಪದಗಳು, ಮತ್ತು ಹೊಸ ಬಳಕೆಗಳು ಬರುತ್ತಲೇ ಇವೆ. ಆದರೆ ಈ ಪದಗಳನ್ನು ಕಟ್ಟಿ ಬಳಕೆಗೆ ತರುತ್ತಿರುವವರು ಯಾರೋ ಕೆಲವು ಸಾಹಿತಿಗಳೋ, ನುಡಿಯರಿಗರೋ ಅಲ್ಲ. ನಮ್ಮಂತಹ ಸಾಮನ್ಯ ಮಂದಿಯೇ.

ಒಂದು ಎತ್ತುಗೆಯನ್ನು ತೆಗೆದುಕೊಳ್ಳೋಣ. ನಡುಬಲೆಯ ಬರಹಗಳಲ್ಲಿ (ಹರಟೆ, ಪೇಸ್ ಬುಕ್ ಮುಂತಾದೆಡೆಗಳಲ್ಲಿ) ಮನಿಸಿನ ಅನಿಸಿಕೆ, ಬಾವನೆಗಳನ್ನು ಮುಕದಂತೆ ಕಾಣುವ ಒಂದು ಸಣ್ಣ ಗುರುತು ತಿಟ್ಟದಿಂದ ತಿಳಿಸಬಹುದು. ಇದನ್ನೇ ಇಂಗ್ಲೀಶಿನಲ್ಲಿ Emoticon ಎಂದು ಕರೆಯುತ್ತಾರೆ. ಇತ್ತೀಚಿನ ವರುಶಗಳಲ್ಲಿ ಆಶ್ಟೇ ಬಳಕೆಗೆ ಬಂದಿರುವ ಪದ ಇದು. ಇದನ್ನು emotion ಮತ್ತು icon ಎಂಬ ಎರಡು ಪದಗಳನ್ನು ಕೂಡಿಸಿ ಮಾಡಲಾಗಿದೆ. ಒಂದು ಅಂದಾಜಿನ ಪ್ರಕಾರ ಇಂಗ್ಲೀಶ್ ನುಡಿಗೆ ಈ ಬಗೆಯಲ್ಲ್ಲಿ ದಿನಕ್ಕೆ ಸುಮಾರು 10-11 ಹೊಸ ಪದಗಳು ಸೇರುತ್ತಿವೆ.

ಆದರೆ ನಮ್ಮ ಕನ್ನಡಕ್ಕೆ ಬಂದರೆ ನಮ್ಮಲ್ಲಿ ಹೊಸ ಅರಿಮೆಗಳು ಬರುತ್ತಿಲ್ಲ. ಹೊಸ ಅರಕೆಗಳು ನಡೆಯುತ್ತಿಲ್ಲ. ಇದಕ್ಕೆ ಕಾರಣ ನಾವು ನಮ್ಮ ನುಡಿಯ ಕಸುವನ್ನು ಅರಿಮೆ, ತಿಳಿವುಗಳನ್ನು ಹೇಳುವ ಹೊಸ ಯುಗದ ಬೇಡಿಕೆಗಳಿಗೆ, ಒಗ್ಗಿಸಿಲ್ಲ, ಅಣಿ ಮಾಡಿಲ್ಲ. ಈ ಕೊರತೆ ನಮ್ಮ ಮೊದಲ ಹಂತದ ಕಲಿಕೆಯಿಂದಲೇ ಕಾಣಿಸುತ್ತದೆ. ಇನ್ನೂ ಆತಂಕಕಾರಿಯಾದ ವಿಶಯವೆಂದರೆ, ಇಂಗ್ಲೀಶಿನಲ್ಲಿ ಆಗುತ್ತಿರುವಂತೆ, ತಮ್ಮ ಸುತ್ತಲಿನ ಹೊಸ ಮಾರ್‍ಪಾಟುಗಳನ್ನು ಹೇಳಿಕೊಳ್ಳುವುದಕ್ಕೆ, ನಮ್ಮ ಸಮಾಜ ಹೊಸ ಪದಗಳನ್ನು ಕಟ್ಟುವುದಾಲ್ಲಾಗಲಿ, ಹೊಸ ಬಳಕೆಗಳನ್ನು ತರುವುದಾಲ್ಲಾಗಲಿ ಒಟ್ಟಾಗಿ ಪಾಲ್ಗೊಳ್ಳುತ್ತಿಲ್ಲ. ತಿಳಿಸುವ ಕಸುವು ಕಡಿಮೆಯಿದ್ದಲ್ಲಿ, ಇಲ್ಲವೇ ಇಲ್ಲವಾದ್ದಲ್ಲಿ, ಆ ನುಡಿ ಸೊರಗಿ ಬಳಕೆಯಿಂದ ಕಳೆದು ಹೋಗುವುದು ಕಂಡಿತ. ಕನ್ನಡವೂ ಇಂದು ಹೊಸ ಬಳಕೆಗಳ ಸವಾಲನ್ನು ಎದುರಿಸಲಾಗದೆ ಸೊರಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಹೀಗೆ, ಅರಿಮೆಯಲ್ಲಿ, ಕಲಿಕೆಯಲ್ಲಿ, ಮತ್ತು ಕೊನೆಗೆ ಸಾಮಾನ್ಯ ಬಳಕೆಯಲ್ಲೂ ಒಂದು ನುಡಿ ಸೊರಗಿದರೆ, ಆ ನುಡಿಯನ್ನು ಬಳಸುವ ಮಂದಿ ಹಣಕಾಸಿನಲ್ಲೂ, ಮತ್ತು ಎಲ್ಲ ಬಗೆಯ ಏಳಿಗೆಯಲ್ಲೂ ಹಿಂದೆ ಬೀಳುವುದು ಕಂಡಿತ.

ಇಂದು ಕನ್ನಡ ಸಮಾಜದಲ್ಲಿ ಒಂದು ಮಟ್ಟಿಗೆ ಪದಕಟ್ಟಣೆ ನಡೆಯುತ್ತಿದೆ. ಸುದ್ದಿ ಹಾಳೆಗಳಲ್ಲಿ, ಪಟ್ಯ ಪುಸ್ತಕಗಳಲ್ಲಿ ಹೊಸ ಪದ ಬಳಕೆಗಳನ್ನು ನಾವು ನೋಡಿದ್ದೇವೆ. ಆದರೆ ಇಂತಹ ಹೊಸ ಪದಗಳನ್ನು ಕಟ್ಟುವಾಗ, ಸರಳವಾಗಿ ಕನ್ನಡ ಮೂಲದಿಂದ ಕಟ್ಟದೆ, ಸಾಮಾನ್ಯವಾಗಿ ತಿಳಿಯದ ಸಂಸ್ಕ್ರುತದ ಪದಗಳನ್ನು, ಪದಕಟ್ಟುಗಳನ್ನು, ಬಳಕೆಗಳನ್ನು ಅಳವಡಿಸಿಕೊಳ್ಳುತ್ತಿದ್ದೇವೆ. ಈ ದಾರಿಯಲ್ಲಿ, ಒಂದು ಹಂತದ ವರೆಗೂ ನಾವು ಮುಂದೆ ಸಾಗಬಲ್ಲೆವೇ ಹೊರತು, ಹೊಸ ಯುಗದ ಸವಾಲುಗಳನ್ನು ಎದುರಿಸಲು ಆಗುವುದಿಲ್ಲ. ಕನ್ನಡದಲ್ಲಿ ಮೆಲ್ಮಟ್ಟದ ಅರಿಮೆಯ ಕಲಿಕೆ ಇಲ್ಲದಿರುವುದಕ್ಕೆ ಬಲವಾದ ಕಾರಣಗಳಲ್ಲಿ ಇದೂ ಒಂದು. ಹಾಗೆಯೇ, ಸಾಮಾನ್ಯ ಮಂದಿಯೂ ಕೂಡ ಹೊಸ ಪದಗಳನ್ನು ಕಟ್ಟುವುದರಲ್ಲಿ, ಬಳಸುವುದರಲ್ಲಿ ದೂರ ಉಳಿದಿದ್ದಾರೆ. ಇದು ಯಾವ ಮಟ್ಟಿಗೆ ಬಂದಿದೆ ಎಂದರೆ, ಹಲವರು ಕನ್ನಡದಲ್ಲಿ ಹೊಸ ಪದಗಳನ್ನು ಕಟ್ಟಲು ಸಾದ್ಯವೇ ಇಲ್ಲ ಎಂಬ ತೀರ್‍ಮಾನಕ್ಕೂ ಬಂದಿದ್ದಾರೆ. ಹಾಗಾಗಿ ಕನ್ನಡವು ಇಂದು ಹೊಸದನ್ನು ಕಟ್ಟುವ, ಕಟ್ಟಿ ಬಳಸುವ, ಮತ್ತು ಬಳಸಿ ಇತರರಿಗೆ ಕೊಡುವ ಕಸುವನ್ನು ಹೆಚ್ಚಾಗಿ ಬೆಳೆಸಿಕೊಂಡಿಲ್ಲ.

ಇಂತಹ ಸವಾಲುಗಳನ್ನು ಕನ್ನಡ ಮಾತ್ರವಲ್ಲ, ಎಲ್ಲ ನುಡಿ ಸಮುದಾಯಗಳೂ ಎದುರಿಸುತ್ತಿವೆ. ಹಲವು ನುಡಿಗಳು, ಬಳಕೆಗಳಲ್ಲಿ ಬೇಕಾದ ಬದಲಾವಣೆಗಳನ್ನೂ ಮಾಡಿಕೊಂಡಿವೆ, ಮತ್ತು ಅಂತಹ ಬಡಲಾವಣೆಗಳಿಂದ ಗಳಿಕೆಗಳನ್ನೂ ಕಂಡಿವೆ. ಇದೇ ಬಗೆಯಲ್ಲಿ ಕನ್ನಡ ಸಮುದಾಯವೂ, ತನ್ನ ಇಂದಿನ ಸ್ತಿತಿಯನ್ನು ಗಮನಿಸಿ, ಹೊಸ ಯುಗದ ಬೇಡಿಕೆಗಳನ್ನು ಅರಿತು, ತನ್ನ ನುಡಿಯ ಬರಹಕ್ಕೆ ಬೇಕಾದ ಮಾರ್‍ಪಾಟುಗಳನ್ನು ಮಾಡಿಕೊಳ್ಳ ಬೇಕಿದೆ. ಆ ಮೂಲಕ ಕೂಡಣದ ಎಲ್ಲರಿಗೂ ಅನುಕೂಲವಾಗುವಂತೆ, ಮತ್ತು ಎಲ್ಲರೂ ಪಾಲ್ಗೊಂಡು ಒಡನಾಡುವಂತೆ ಬದಲಾವಣೆಗಳನ್ನು ತರಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರನ್ನೂ ತಲುಪಲು, ಮತ್ತು ತೊಡಗಿಸಲು ಎಲ್ಲರಕನ್ನಡ ಗಟ್ಟಿಯಾದ ಸಾದನವಾಗಬಲ್ಲುದು. ಎಲ್ಲರಕನ್ನಡದ ಪ್ರಯೋಜನಗಳ ಬಗ್ಗೆ ಈಗಾಗಲೇ ಹೊನಲಿನಲ್ಲಿಯೇ ಹಲವು ಬರಹಗಳು ಮೂಡಿ ಬಂದಿವೆ.

ನಾಡು ಕಟ್ಟುವಲ್ಲಿ ಆ ನಾಡ ಮಂದಿಯ ತಾಯ್ನುಡಿಯ ಪಾತ್ರ ದೊಡ್ಡದು. ಹಾಗಾಗಿ ಆ ನುಡಿಯ ಕಸುವನ್ನು ಎಲ್ಲ ಹರಹುಗಳಲ್ಲಿಯೂ ಹೆಚ್ಚಿಸುವುದು ಮುಕ್ಯ ಎಂಬುದನ್ನು ನಾವು ಈಗಾಗಲೇ ನೋಡಿದ್ದೇವೆ. ವಿಶ್ವ ತಾಯ್ನುಡಿ ದಿನವಾದ ಇಂದು, ತಾಯ್ನುಡಿಯ ಬಳಕೆ ಕೇವಲ ಒಂದು ದಿನದ ತೋರಿಕೆಗೆ ಮಾತ್ರ ಸೀಮಿತಗೊಳಿಸದೆ, ಅದನ್ನು ಹೊಸ ಯುಗದ ಹೊಸ ಬೇಡಿಕೆಳನ್ನು ನೆರವೇರಿಸುವತ್ತ ಗಟ್ಟಿಗೊಳಿಸುವ ಬಗ್ಗೆ ಅರಿವು ಮೂಡಿಸಿ, ಬಾಳಿನ ಎಲ್ಲ ಹರಹುಗಳಲ್ಲಿಯೂ ಬಳಕೆಗೆ ತಂದು, ಏಳಿಗೆಯ ಹಾದಿ ಹಿಡಿಯುವತ್ತ ನುಡಿ ಸಮುದಾಯಗಳು ಚಿಂತನೆ ನಡೆಸಬೇಕಾಗಿದೆ.

(ಚಿತ್ರ ಸೆಲೆ: www.un.org)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: