ಯಾಕಪ್ಪ ಅಂದ್ರೆ…..ಏನಪ್ಪ ಅಂದ್ರೆ

ಸಿ.ಪಿ.ನಾಗರಾಜ

exams-rds-copy

ಇಂದಿಗೆ ಸುಮಾರು ಇಪ್ಪತ್ತು ವರುಶಗಳ ಹಿಂದೆ ನಗರವೊಂದರ ಕಾಲೇಜಿನಲ್ಲಿ ಪದವಿ ತರಗತಿಯ ಕನ್ನಡ ಉತ್ತರ ಪತ್ರಿಕೆಗಳ ಬರಹದಲ್ಲಿನ ತಪ್ಪುಒಪ್ಪುಗಳನ್ನು ಪರಿಶೀಲಿಸಿ ಅಂಕಗಳನ್ನು ನೀಡುವ ಕೆಲಸದಲ್ಲಿ ತೊಡಗಿದ್ದಾಗ ನಡೆದ ಪ್ರಸಂಗವಿದು.

ಉತ್ತರ ಪತ್ರಿಕೆಗಳ ಬೆಲೆಕಟ್ಟುವ ಕೆಲಸದಲ್ಲಿ ಪ್ರತಿ ಅಯ್ದು ಮಂದಿ ಉಪನ್ಯಾಸಕರಿಗೆ ಒಬ್ಬರು ಮೇಲ್ವಿಚಾರಕರು ಇರುತ್ತಾರೆ. ಇವರ ಕೆಲಸವೇನೆಂದರೆ, ಉತ್ತರ ಪತ್ರಿಕೆಗಳನ್ನು ನೋಡಿ ಅಂಕ ತುಂಬಿರುವ ಪ್ರತಿ ಹದಿನಯ್ದು ಪತ್ರಿಕೆಗಳಲ್ಲಿ, ತಮಗೆ ಬೇಕಾದ ಒಂದೆರಡನ್ನು ಆಯ್ಕೆ ಮಾಡಿಕೊಂಡು, ಅವನ್ನು ಮೊದಲಿನಿಂದ ಕೊನೆಯವರೆಗೆ ನೋಡಿ, ಮತ್ತೊಮ್ಮೆ ತಾವು ಅಂಕಗಳನ್ನು ನೀಡುವುದರ ಜತೆಗೆ, ಉಪನ್ಯಾಸಕರು ಉತ್ತರಗಳನ್ನು ಸರಿಯಾಗಿ ಪರಿಶೀಲಿಸಿ ಅಂಕಗಳನ್ನು ನೀಡಿದ್ದಾರೆಯೇ?.. ಯಾವುದಾದರೂ ಉತ್ತರಗಳಿಗೆ ಅಂಕಗಳನ್ನು ನೀಡದೆ ಮರೆತಿದ್ದಾರೆಯೇ?.. ಅಂಕಗಳನ್ನು ಮೇಲುಗಡೆಯ ಪುಟದಲ್ಲಿ ಒಂದೆಡೆ ನಮೂದಿಸುವಾಗ ಮತ್ತು ಒಟ್ಟುಗೂಡಿಸಿ ಮೊತ್ತವನ್ನು ಬರೆಯುವಾಗ ಏನಾದರೂ ತಪ್ಪುಗಳನ್ನು ಮಾಡಿದ್ದಾರೆಯೇ?.. ಯಾವುದೇ ರೀತಿಯಿಂದಲೂ ವಿದ್ಯಾರ‍್ತಿಗಳ ಪರಿಶ್ರಮಕ್ಕೆ ಅನ್ಯಾಯವಾಗದಂತೆ ಅಂಕಗಳನ್ನು ನೀಡುವ ಕೆಲಸವನ್ನು ಗಮನವಿಟ್ಟು ಮಾಡುತ್ತಿದ್ದಾರೆಯೇ? – ಎಂಬ ಸಂಗತಿಗಳೆಲ್ಲವನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡಿ, ತಾವು ನೀಡಿದ ಅಂಕಗಳ ಜತೆಯಲ್ಲಿ ಅವರು ಕೊಟ್ಟಿರುವ ಅಂಕಗಳನ್ನು ಹೋಲಿಸಿ ನೋಡಿ, ಹೆಚ್ಚು ವ್ಯತ್ಯಾಸವಿಲ್ಲದಿದ್ದರೆ, ಅದನ್ನು ಸರಿಯಾದ ’ ಅಂಕನೀಡಿಕೆ ’ ಎಂದು ತೀರ‍್ಮಾನಿಸುವುದು. ಏನಾದರೂ ಅರೆಕೊರೆಗಳು ಕಂಡು ಬಂದಲ್ಲಿ, ಉಪನ್ಯಾಸಕರಿಗೆ ಮಾರ‍್ಗದರ‍್ಶನ ಮಾಡಿ, ಅಂತಹ ತಪ್ಪುಗಳು ಮರುಕಳಿಸದಂತೆ ಎಚ್ಚರದಿಂದ ಅಂಕ ನೀಡಬೇಕೆಂದು ತಿಳುವಳಿಕೆ ನೀಡುವುದು. ಈ ಪ್ರಸಂಗ ನಡೆದ ಸಮಯದಲ್ಲಿ ಅಯ್ದು ಮಂದಿ ಉಪನ್ಯಾಸಕರ ತಂಡದಲ್ಲಿ ನಾನು ಒಬ್ಬನಾಗಿದ್ದೆ. ನಮ್ಮ ತಂಡದ ಮೇಲ್ವಿಚಾರಕರು “ಉತ್ತಮ ವಿದ್ವಾಂಸರು ಹಾಗೂ ಒಳ್ಳೆಯ ಉಪನ್ಯಾಸಕರು” ಎಂದು ನಾಡಿನ ಎಲ್ಲೆಡೆ ಕೀರ‍್ತಿಯನ್ನು ಪಡೆದಿದ್ದರು. ಮಾತಿನಲ್ಲಿ ತುಂಬಾ ವಿನೋದಶೀಲರಾಗಿದ್ದ ಅವರು ನಮಗಿಂತ ಹತ್ತಾರು ವರುಶ ಹಿರಿಯರಾಗಿದ್ದರು. ಅಂಕ ನೀಡುವ ಕೆಲಸದಲ್ಲಿ ನಾವು ಮಾಡುತ್ತಿದ್ದ ಅನೇಕ ಬಗೆಯ ತಪ್ಪುಗಳನ್ನು ಕಂಡು ಹಿಡಿದಾಗ, ತಪ್ಪು ಮಾಡಿದವರಿಗೆ ಅವನ್ನು ತೋರಿಸಿ, ತುಸು ಹಾಸ್ಯ ಬೆರೆತ ವಿಡಂಬನೆಯ ನುಡಿಗಳಿಂದ ಚುಚ್ಚಿ ಎಚ್ಚರಿಸಿ, ಸೂಕ್ತವಾದ ತಿಳುವಳಿಕೆಯನ್ನು ನೀಡುತ್ತಾ, ಉತ್ತರ ಪತ್ರಿಕೆಗಳಿಗೆ ಬೆಲೆಕಟ್ಟುವ ಕೆಲಸ ಚೆನ್ನಾಗಿ ನಡೆಯುವಂತೆ ನೋಡಿಕೊಳ್ಳುವುದರಲ್ಲಿ ಪರಿಣತರಾಗಿದ್ದರು.

ನಮ್ಮ ತಂಡಕ್ಕೆ ಒಂದು ಕೊಟಡಿಯನ್ನು ನೀಡಲಾಗಿತ್ತು. ಅಂಕಗಳನ್ನು ನೀಡುವ ಕೆಲಸ ಶುರುವಾಗಿ ನಾಲ್ಕಾರು ದಿನಗಳು ಉರುಳಿದ್ದವು. ಯಾಂತ್ರಿಕವಾಗಿ ಕೆಲಸ ಸಾಗುತ್ತಿತ್ತು. ಒಂದು ದಿನ ಬೆಳಗ್ಗೆ ಹನ್ನೊಂದೂವರೆ ಗಂಟೆಯ ಸಮಯದಲ್ಲಿ.. ಉತ್ತರಪತ್ರಿಕೆಯೊಂದನ್ನು ಮರುಪರಿಶೀಲಿಸುತ್ತಿದ್ದ ನಮ್ಮ ಮೇಲ್ವಿಚಾರಕರು ಇದ್ದಕ್ಕಿದ್ದಂತೆಯೇ ಎತ್ತರದ ದನಿಯಲ್ಲಿ ಗಹಗಹಿಸಿ ನಗತೊಡಗಿದರು. ಆಗ ನಮ್ಮಲ್ಲಿ ಒಬ್ಬ ಉಪನ್ಯಾಸಕರು ಹೊರಗೆ ಹೋಗಿದ್ದರು.

ಇನ್ನುಳಿದ ನಾವು ನಾಲ್ವರು ಅಚ್ಚರಿಯಿಂದ ಮೇಲ್ವಿಚಾರಕರನ್ನು ನೋಡತೊಡಗಿದೆವು. ಒಂದರೆಡು ಗಳಿಗೆಯ ನಂತರ..ತಮ್ಮ ನಗೆಯನ್ನು ನಿಲ್ಲಿಸಿ, ಮರುಪರಿಶೀಲಿಸುತ್ತಿದ್ದ ಆ ಉತ್ತರಪತ್ರಿಕೆಯನ್ನು ಹತ್ತಿರದಲ್ಲಿ ಕುಳಿತಿದ್ದ ನನ್ನತ್ತ ಕೊಡುತ್ತಾ- “ನಾಗರಾಜ್..ಇದರಲ್ಲಿ ಅಯ್ದು ಮುಕ್ಯ ಪ್ರಶ್ನೆಗಳಿಗೆ ಉತ್ತರವನ್ನು ಬರೆಯಲಾಗಿದೆ. ಪ್ರಶ್ನಪತ್ರಿಕೆಯಲ್ಲಿರುವ ಪ್ರಶ್ನೆಯನ್ನು ಮೊದಲು ಓದಿ..ಅನಂತರ ಅದಕ್ಕೆ ಇಲ್ಲಿ ಬರೆದಿರುವ ಉತ್ತರವನ್ನು ತುಸು ಗಟ್ಟಿಯಾಗಿ ಓದಿ ” ಎಂದು ಹೇಳಿ.. ಉಳಿದವರಿಗೂ ಕೇಳಿಸಿಕೊಳ್ಳುವಂತೆ ಸೂಚಿಸಿದರು. ನಾನು ಈಗ ಓದತೊಡಗಿದೆ.

ಪ್ರಶ್ನೆ : ನಳನು ದಮಯಂತಿಯನ್ನು ಕಾಡಿನ ನಡುವೆ ತೊರೆದು ಹೋಗಲು ಕಾರಣಗಳೇನು? ವಿವರಿಸಿ.

ಉತ್ತರ : ನಳನು ದಮಯಂತಿಯನ್ನು ಯಾಕಪ್ಪ ತೊರೆದನು ಅಂದ್ರೆ ದಮಯಂತಿಯು ಏನಪ್ಪ ಅಂದ್ರೆ. ನಳನು ಯಾಕಪ್ಪ ಅಂದ್ರೆ ದಮಯಂತಿಯು ಏನಪ್ಪ ಅಂದ್ರೆ. ನಳನು ಯಾಕಪ್ಪ ಅಂದ್ರೆ ದಮಯಂತಿಯು ಏನಪ್ಪ

ಅಂದ್ರೆ….”

ಅಲ್ಲಿದ್ದವರೆಲ್ಲರೂ ಜೋರಾಗಿ ನಗತೊಡಗಿದರು. ನಾನು ಓದುವುದನ್ನು ನಿಲ್ಲಿಸಿ- “ಇದೇನ್ ಸಾರ್.. ಹೀಗೆ ಉತ್ತರವನ್ನು ಬರೆದಿದ್ದಾನೆ? ” ಎನ್ನುತ್ತ ನಗತೊಡಗಿದೆನು.

“ವಿದ್ಯಾರ‍್ತಿಯು ಬರೆದಿರುವುದು ಹೇಗಾದರೂ ಇರಲಿ..ಅಂತಾ ಉತ್ತರಕ್ಕೆ ಉಪನ್ಯಾಸಕರು ಎಶ್ಟು ನಂಬರ್ ಕೊಟ್ಟಿದ್ದಾರೆ ಅನ್ನೋದನ್ನ ನೋಡಿ ” ಎಂದರು. ಉತ್ತರಪತ್ರಿಕೆಯತ್ತ ಮತ್ತೆ ಕಣ್ಣಾಡಿಸಿದೆ. ಹತ್ತು ಅಂಕದ ಪ್ರಶ್ನೆಗೆ ಅಯ್ದು

ಅಂಕಗಳನ್ನು ನೀಡಲಾಗಿತ್ತು.

“ಇದೇನ್ ಸಾರ್.. ಇಂತಾ ವ್ಯಾಲ್ಯುಯೇಶನ್!” ಎಂದು ಗಾಬರಿಯಿಂದ ನುಡಿದೆ.

“ಮುಂದಿನ ನಾಲ್ಕು ಪ್ರಶ್ನೆಗಳನ್ನೂ.. ಅವುಗಳಿಗೆ ಬರೆದಿರುವ ಉತ್ತರಗಳನ್ನೂ ಓದಿ” ಎಂದು ಆದೇಶಿಸಿದರು. ಮತ್ತೆ ಓದತೊಡಗಿದೆ.

ಪ್ರಶ್ನೆ : ಬಸವಣ್ಣನವರು ತಮ್ಮ ವಚನಗಳಲ್ಲಿ ಸಮಾಜದ ಅಂಕುಡೊಂಕುಗಳನ್ನು ಹೇಗೆ ವಿಡಂಬನೆ ಮಾಡಿದ್ದಾರೆ ಎಂಬುದನ್ನು ವಿವರಿಸಿ.

ಉತ್ತರ : ಬಸವಣ್ಣನವರ ವಚನಗಳು ಯಾಕಪ್ಪ ಅಂದ್ರೆ ಸಮಾಜದ ಅಂಕುಡೊಂಕುಗಳು ಏನಪ್ಪ ಅಂದ್ರೆ. ಬಸವಣ್ಣನವರ ವಚನಗಳು ಯಾಕಪ್ಪ ಅಂದ್ರೆ ಸಮಾಜದ ಅಂಕುಡೊಂಕುಗಳು ಏನಪ್ಪ ಅಂದ್ರೆ. ಬಸವಣ್ಣನವರ

ವಚನಗಳು ಯಾಕಪ್ಪ ಅಂದ್ರೆ ಸಮಾಜದ ಅಂಕುಡೊಂಕುಗಳು ಏನಪ್ಪ ಅಂದ್ರೆ……”

ಅಲ್ಲಿದ್ದವರೆಲ್ಲರೂ ಈಗ ಹೊಟ್ಟೆಹುಣ್ಣಾಗುವಂತೆ ಬಿದ್ದು ಬಿದ್ದು ನಗುತ್ತಿದ್ದರು. ನಾನು ಗಟ್ಟಿಯಾಗಿ ಓದುವುದನ್ನು ನಿಲ್ಲಿಸಿ.. ಇನ್ನುಳಿದ ಮೂರು ಪ್ರಶ್ನೆಗಳಿಗೆ ಬರೆದಿದ್ದ ಉತ್ತರಗಳನ್ನು ಗಮನಿಸಿದೆ.

“ಯಾಕಪ್ಪ ಅಂದ್ರೆ.. ಏನಪ್ಪ ಅಂದ್ರೆ ” ಎಂಬ ಪದಕಂತೆಗಳನ್ನೇ ಪದೇ ಪದೇ ಬಳಸಿಕೊಂಡು, ಪ್ರತಿಯೊಂದು ಪ್ರಶ್ನೆಗೂ ಒಂದೂವರೆಯಿಂದ ಎರಡು ಪುಟಗಳಶ್ಟು ಉತ್ತರವನ್ನು ಬರೆಯಲಾಗಿತ್ತು. ಬೆಲೆಕಟ್ಟಿದ್ದ ಉಪನ್ಯಾಸಕರು

ಅವೆಲ್ಲಕ್ಕೂ ನಾಲ್ಕಾರು ಕಡೆಗಳಲ್ಲಿ ” ರಯ್‌ಟ್ ಮಾರ‍್ಕ್ ” ಹಾಕಿ, ಪ್ರತಿಯೊಂದು ಉತ್ತರಕ್ಕೂ ಅಯ್ದು ಅಂಕಗಳನ್ನು ನೀಡಿದ್ದರು.

ಕೆಲವು ಗಳಿಗೆಯ ನಂತರ ಮೇಲ್ವಿಚಾರಕರು ನಮ್ಮೆಲ್ಲರನ್ನೂ ಉದ್ದೇಶಿಸಿ- “ನೋಡಿ..ನಿಜಕ್ಕೂ ಇದು ನಗುವಂತಾದ್ದಲ್ಲ. ಆದರೆ ಏನ್ ಮಾಡೋಣ?.. ನಾವೆಲ್ಲಾ ಎಂತಾ ನೆಲೆಗೆ ಬಂದಿದ್ದೇವೆ ಎಂದರೆ ಕೋಪ ಮಾಡಿಕೊಳ್ಳಬೇಕಾದ್ದಕ್ಕೆ ನಗ್ತೀವಿ.. ನಗಬೇಕಾದ್ದಕ್ಕೆ ಕೋಪ ಮಾಡ್ಕೊಳ್ತೀವಿ” ಎಂದು

ನುಡಿದಾಗ, ನಗೆ ನಿಂತು, ಸುಮ್ಮನೆ ಒಬ್ಬರ ಮೊಗವನ್ನು ಒಬ್ಬರು ನೋಡತೊಡಗಿದೆವು.

ಆ ಸಮಯದಲ್ಲಿ ಕಾಪಿ ಕುಡಿಯಲೆಂದು ಹೊರಗೆ ಹೋಗಿದ್ದ ಉಪನ್ಯಾಸಕರು ಒಳಕ್ಕೆ ಬಂದರು. ಅವರೇ ಆ ಉತ್ತರಪತ್ರಿಕೆಯ ಬೆಲೆಕಟ್ಟಿದ್ದವರು. ಕೊಟಡಿಯೊಳಕ್ಕೆ ಕಾಲಿಡುತ್ತಿದ್ದಂತೆಯೇ, ಅವರು ಮೇಲ್ವಿಚಾರಕರನ್ನು ನೋಡುತ್ತಾ- “ನೀವೆಲ್ಲಾ ನಗ್ತಾ ಇದ್ದುದ್ದು.. ಹೊರಗಡೆ ಕ್ಯಾಂಟಿನ್‌ವರೆಗೂ ಕೇಳಿಸ್ತಿತ್ತು ಸಾರ್. ಅಂತಾ ಸ್ವಾರಸ್ಯಕರವಾದ ಸಂಗತಿ ಏನ್ ಸಾರ್? ” ಎಂದು ವಿಚಾರಿಸಿದರು.

“ಇಲ್ಲೊಂದು ಉತ್ತರಪತ್ರಿಕೆಯಿದೆ. ಇದನ್ನ ನೀವೇ ಓದಿ ನೋಡಿ ” ಎಂದು ಹೇಳಿ, ಅದನ್ನು ಅವರಿಗೆ ಕೊಡುವಂತೆ ನನಗೆ ಸೂಚಿಸಿದರು. ಅವರು ಅಲ್ಲಿನ ಉತ್ತರಗಳನ್ನು ಓದುತ್ತಿದ್ದಂತೆ.. ನಮ್ಮಂತೆಯೇ ನಗುತ್ತಾ- “ಇದ್ಯಾರ್ ಸಾರ್ ಹಿಂಗೆ ಬರೆದಿದ್ದಾರೆ? ” ಎಂದು ಅಚ್ಚರಿಯನ್ನು ವ್ಯಕ್ತಪಡಿಸಿದರು.

“ಬರೆದವರು ಯಾರಾದರೂ ಆಗಿರ‍್ಲಿ..ಅದಕ್ಕೆ ನೀವು ಎಶ್ಟು ನಂಬರನ್ನು ಕೊಟ್ಟಿದ್ದೀರಿ ಅನ್ನೋದನ್ನ ನೋಡಿ” ಎಂದು ಮೇಲ್ವಿಚಾರಕರು ಗಡಸು ದನಿಯಲ್ಲಿ ನುಡಿದರು.

ಉತ್ತರಪತ್ರಿಕೆಯಲ್ಲಿನ ಎಲ್ಲಾ ಅಯ್ದು ಪ್ರಶ್ನೋತ್ತರಗಳನ್ನು ಮತ್ತು ಅವಕ್ಕೆ ತಾವು ನೀಡಿದ್ದ ಅಂಕಗಳನ್ನೂ..ಒಂದೆರಡು ನಿಮಿಶಗಳ ಕಾಲ ಕಣ್ಣಾಡಿಸಿ ನೋಡಿ.. ಮೇಲಿನ ಪುಟದಲ್ಲಿದ್ದ ಇಪ್ಪತ್ತಯ್ದು ಅಂಕಗಳು ಮತ್ತು ಅದರ ಕೆಳಗಿದ್ದ ತಮ್ಮ ರುಜುವನ್ನು ನೋಡುತ್ತಿದ್ದಂತೆಯೇ.. ಅವರ ಮೊಗ ಕಪ್ಪಾಯಿತು.

ಈಗ ಮೇಲ್ವಿಚಾರಕರು ತುಂಬಾ ವ್ಯಂಗ್ಯದ ದನಿಯಲ್ಲಿ- “ಒಂದು ವೇಳೆ ಆ ವಿದ್ಯಾರ‍್ತಿ ಇನ್ನೆರಡು ಮುಕ್ಯ ಪ್ರಶ್ನೆಗಳಿಗೆ ಇದೇ ರೀತಿ ಉತ್ತರವನ್ನು ಬರೆದಿದ್ದಲ್ಲಿ.. ಇನ್ನೂ ಹತ್ತು ನಂಬರ್‍‌ಗಳು ಬಂದು..ಅವರು ಪಾಸಾಗುತ್ತಿದ್ದರು ಅಲ್ವೇನ್ರಿ!” ಎಂದು ಕೇಳಿದಾಗ, ಅವರು ಮರುಮಾತಾಡದೆ..ತಲೆತಗ್ಗಿಸಿಕೊಂಡು.. ಕಯ್ಯಲ್ಲಿದ್ದ ಉತ್ತರಪತ್ರಿಕೆಯನ್ನೇ ತಿರುಗಮುರುಗ ನೋಡತೊಡಗಿದರು.

ಈಗ ಇಡೀ ಕೊಟಡಿಯಲ್ಲಿ ಏನೊಂದು ಸದ್ದು ಇರಲಿಲ್ಲ. ಮೇಲ್ವಿಚಾರಕರು ಬಹಳ ಗಂಬೀರವಾದ ದನಿಯಲ್ಲಿ ಅವರನ್ನು ಕುರಿತು- “ನೋಡಿ..ಉಪನ್ಯಾಸಕರಾದ ನಾವು..ತರಗತಿಗಳಲ್ಲಿ ಪಾಟವನ್ನು ನ್ಯಾಯವಾಗಿ ಮಾಡ್ದೆ ಹೋದ್ರೆ ಹಾಳಾಗಿ ಹೋಗ್ಲಿ. ಆದರೆ ಉತ್ತರಪತ್ರಿಕೆಗಳಿಗೆ ಬೆಲೆಕಟ್ಟುವಾಗ, ವಿದ್ಯಾರ‍್ತಿಗಳ ಮುಂದಿನ ಜೀವನವನ್ನು ನಿರ‍್ಣಯಿಸುವ ಕೆಲಸದಲ್ಲಿ ತೊಡಗಿದ್ದೇವೆ ಎಂಬ ಹೊಣೆಗಾರಿಕೆಯನ್ನು ಅರಿತುಕೊಂಡು..ಪ್ರತಿಯೊಂದು ಉತ್ತರಪತ್ರಿಕೆಗಳನ್ನು ಗಮನವಿಟ್ಟು ನೋಡಬೇಕು. ಉತ್ತರಗಳಲ್ಲಿ ಕಂಡು ಬರುವ ವಿದ್ಯಾರ‍್ತಿಗಳ ಬುದ್ದಿಶಕ್ತಿ ಮತ್ತು ಪರಿಶ್ರಮಕ್ಕೆ ತಕ್ಕಂತೆ ಅಂಕಗಳನ್ನು ನೀಡಬೇಕೆ ಹೊರತು.. ಹಿಟ್ಟು-ಬೂದಿ ಎಲ್ಲವನ್ನೂ ಒಂದೇ ಮಾಡಬಾರದು. ನೋಡಿ..ಒಂದು ಮಾತನ್ನು ಚೆನ್ನಾಗಿ ನೆನಪಿಟ್ಟುಕೊಳ್ಳಿ. ಯಾವುದೇ ರಂಗದಲ್ಲಾಗಲಿ ತಮ್ಮ ಪಾಲಿನ ಕೆಲಸವನ್ನು ಯಾರು ಅತ್ಯಂತ ಪ್ರೀತಿ, ಆಸಕ್ತಿ ಮತ್ತು ಪ್ರಾಮಾಣಿಕತನದಿಂದ ಮಾಡುವುದಿಲ್ಲವೋ.. ಅಂತಾವರು ಆತ್ಮಗವುರವ ಇಲ್ಲದ ವ್ಯಕ್ತಿಗಳು. ನಾವು ಹಣವನ್ನು ಸಂಪಾದನೆ ಮಾಡುವಂತೆಯೇ.. ನಮ್ ನಮ್ಮ ಕೆಲಸದಲ್ಲಿ ಮತ್ತು ನಡೆನುಡಿಯಲ್ಲಿ ನಾಲ್ಕುಜನ ಒಪ್ಪುವಂತ ಒಳ್ಳೆಯ ವ್ಯಕ್ತಿತ್ವವನ್ನು ಸಂಪಾದಿಸಬೇಕು” ಎಂದು ಕಟುವಾಗಿ ನುಡಿದು, ಆ ಉತ್ತರಪತ್ರಿಕೆಯನ್ನು ಅವರಿಂದ ಹಿಂದಕ್ಕೆ ಪಡೆದು..ಅದಕ್ಕೆ ಸೊನ್ನೆಯನ್ನು ಸುತ್ತಿದರು.

(ಚಿತ್ರ: thejackpetcheyfoundation.wordpress.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Shivaraddi Karamalli says:

    super…

ಅನಿಸಿಕೆ ಬರೆಯಿರಿ: