ಕೊನೆಯಾಗಬೇಕು ಹಿಂದಿ ಹೇರಿಕೆ ನಮ್ಮ ಮೆಟ್ರೋದಲ್ಲಿ

ರತೀಶ ರತ್ನಾಕರ.

metro_809427f

ಬೆಂಗಳೂರಿನ ನಗರದೊಳಗೆ ಎರಡನೇ ಹಂತದ ಮೆಟ್ರೋ ರಯ್ಲಿನ ಓಡಾಟ ಆರಂಬವಾಗಿದೆ. ಈ ನಲಿವಿನ ಜೊತೆ ಜೊತೆಯಲ್ಲೇ ಒಂದು ನೋವಿನ ಸುದ್ದಿಯೂ ಇದೆ ಅದು ಯಾವ ಕಾರಣವು ಇಲ್ಲದೇ ಮೆಟ್ರೋ ರಯ್ಲಿನ ಜೊತೆ ಹಿಂದಿಯು ಹೇರಿಕೆಯಾಗಿ ಬಂದಿರುವುದು! ಹವ್ದು, ಬೆಂಗಳೂರಿನ ಮೆಟ್ರೋ ರಯ್ಲಿನಲ್ಲಿ ಅನವಶ್ಯಕವಾಗಿ ಹಿಂದಿಯನ್ನು ಹೇರಲಾಗುತ್ತಿದೆ. ಬೆಂಗಳೂರಿಗರ ಅನುಕೂಲಕ್ಕೆ ಕನ್ನಡದಲ್ಲಿ ಮಾಹಿತಿ ಇದೆ, ಇನ್ನು ಹೊರಗಿನಿಂದ ಬಂದವರಿಗೆ ಇಂಗ್ಲೀಶ್ ಇದೆ ಆದರೆ ಈ ಹಿಂದಿಯ ಬಳಕೆಗೆ ಕಾರಣವು ಅನುಕೂಲಕ್ಕಿಂತ ಹೆಚ್ಚಾಗಿ ಕನ್ನಡಿಗರ ಮೇಲೆ ಹಿಂದಿಯನ್ನು ಹೇರುವುದಾಗಿದೆ.

ಬೆಂಗಳೂರಿನ ಮೆಟ್ರೋದಲ್ಲಿ ಹಿಂದಿ ಹೇರಿಕೆ ಯಾಕೆ ಮಾಡುತ್ತಿದ್ದೀರಾ? ಯಾವ ಆದಾರದ ಮೇಲೆ ನುಡಿ ನೀತಿಯನ್ನು ತೀರ‍್ಮಾನಿಸಿದ್ದೀರಾ? ಎಂದು ಕೆಲವು ಕನ್ನಡಿಗರು ಮೆಟ್ರೋ ಆಡಳಿತ ಕೂಟಕ್ಕೆ ಆರ್. ಟಿ. ಅಯ್ ಹಾಕಿದಾಗ, ಉತ್ತರ ಕೊಡಲು ಆರು ತಿಂಗಳಿಗೂ ಹೆಚ್ಚು ಕಾಲ ತೆಗೆದುಕೊಂಡಿದ್ದರು. ಎಡಬಿಡದೇ ಉತ್ತರಕ್ಕಾಗಿ ಕೇಳಿದಾಗ ಮೊದಲು, ಕೇಂದ್ರ ಸರಕಾರದ ರಸ್ತೆ ನಿಯಮಗಳ ಅನ್ವಯ ಹಿಂದಿಯನ್ನು ಬಳಕೆ ಮಾಡಲಾಗಿದೆ ಎಂಬ ಉತ್ತರ ಬಂದಿತ್ತು. ಆದರೆ ನಗರದೊಳಗಿನ ಮೆಟ್ರೋಗೆ ಈ ನಿಯಮ ಅನ್ವಯ ಆಗುವುದಿಲ್ಲವಲ್ಲ ಎಂದು ತಿರುಗಿ ಕೇಳಿದಾಗ, ರಾಜ್ಯ ಸರಕಾರದ ಗೆಜೆಟ್ ನೋಟಿಪಿಕೆಶನ್ ಪ್ರಕಾರ ಹಿಂದಿಯ ಬಳಕೆ ಮಾಡಲಾಗಿದೆ ಎಂದರು. ಹಾಗದರೆ ಗೆಜೆಟ್ ನೋಟಿಪಿಕೇಶನ್ನಿನ ಪ್ರತಿಯನ್ನು ಕೊಡಿ ಎಂದು ಮತ್ತೆ ತಿರುಗಿ ಕೇಳಿದಾಗ ಉತ್ತರ ಬದಲಾಯಿಸಿ, ಇಲ್ಲ ಇದು ಮೆಟ್ರೋ ಆಡಳಿತ ಕೂಟದ ತೀರ‍್ಮಾನ ಎಂದರು!

ಮೇಟ್ರೋ ಆಡಳಿತ ಕೂಟವು ಯಾವ ಆದಾರದ ಮೇಲೆ ಹಿಂದಿಯ ಬಳಕೆಯನ್ನು ಕಯ್ಗೆತ್ತಿಕೊಂಡಿದೆ ಎಂದು ತಿಳಿದು ಬಂದಿಲ್ಲ. ಒಂದು ಸೇವೆಗೆ ನುಡಿನೀತಿಯನ್ನು ರೂಪಿಸುವಾಗ ಅಲ್ಲಿನ ಮಂದಿಯ ನುಡಿಯು ಮೊದಲಣಿತವಾಗಿ ಇರಲೇಬೇಕು. ಇನ್ನು ಬೇರೆ ನುಡಿಗಳನ್ನು ಆಯ್ದುಕೊಳ್ಳುವಾಗ ಕೆಲವಾರು ಅಂಶಗಳ ಕಡೆಗೆ ಗಮನ ಹರಿಸಬೇಕಾಗುತ್ತದೆ. ಎತ್ತುಗೆಗೆ, ಅಮೇರಿಕಾದ ಕೆಲವು ರಾಜ್ಯಗಳಲ್ಲಿ ಇಂಗ್ಲೀಶಿನ ಜೊತೆ ಸ್ಪ್ಯಾನಿಶನ್ನು ಕೂಡ ಅಲ್ಲಿನ ಮೆಟ್ರೋ, ಬಾನೋಡ ಮತ್ತು ಬಸ್ಸಿನ ಸೇವೆಗಳಲ್ಲಿ ನೋಡಬಹುದು. ಇದಕ್ಕೆ ಕಾರಣ ಸ್ಪ್ಯಾನಿಶ್ ಮಾತನಾಡುವ ಮಂದಿ ಆ ರಾಜ್ಯಗಳಲ್ಲಿ ಹೆಚ್ಚೆಣಿಕೆಯಲ್ಲಿ ಇರುವುದರಿಂದ. ಹಾಗೆಯೇ ಅಮೇರಿಕಾದ ಡೆಟ್ರಾಯಿಟ್ ಎಂಬ ಊರಿನಲ್ಲಿ ಜಪಾನೀಯರು ಹೆಚ್ಚು ಬಂದು ಹೋಗುವುದರಿಂದ, ಅಲ್ಲಿನ ಬಾನೋಡ ನಿಲ್ದಾಣದಲ್ಲಿ ಜಪಾನೀಸು ನುಡಿಯಲ್ಲಿ ಮಾಹಿತಿ ಹಾಕಲಾಗಿದೆ. ಮತ್ತೆ ಕೆಲವು ರಾಜ್ಯಗಳಲ್ಲಿ ಇಂಗ್ಲೀಶ್ ಮಾತ್ರ ಇದೆ. ಹೀಗೆ ಆಯಾ ರಾಜ್ಯದಲ್ಲಿ ಯಾವ ನುಡಿಯಾಡುವ ಮಂದಿ ಹೆಚ್ಚೆಣಿಕೆಯಲ್ಲಿ ಇದ್ದಾರೆ ಎಂದು ಅರಿತು ಅದಕ್ಕೆ ತಕ್ಕುದಾದ ನುಡಿನೀತಿಯನ್ನು ರೂಪಿಸಿಕೊಳ್ಳಲಾಗಿದೆ. ಆದರೆ ಮೆಟ್ರೋ ಆಡಳಿತ ಕೂಟ ಆಯ್ದುಕೊಂಡಿರುವ ನೀತಿ ಕೇವಲ ಹಿಂದಿಯನ್ನು ಹೇರುವುದಾಗಿದೆ. ಏಕೆಂದರೆ ಹಿಂದಿ ಮಾತನಾಡುವವರಿಗಿಂತ ಬೆಂಗಳೂರಿನಲ್ಲಿ ಉರ‍್ದು, ತೆಲುಗು ಮತ್ತು ತಮಿಳು ಮಾತನಾಡುವವರು ಹೆಚ್ಚಿದ್ದಾರೆ.

cooing gas

ಮಂದಿಯ ಅನುಕೂಲಕ್ಕಾಗಿ ಹಿಂದಿಯನ್ನು ಬಳಸಲಾಗಿದೆ ಎಂದು ಕೂಡ ಮೆಟ್ರೋ ಅದಿಕಾರಿಗಳಿಂದ ಉತ್ತರ ಬಂದಿದೆ. ಗ್ಯಾಸ್ ಸಿಲಿಂಡರಿನಲ್ಲಿ, ರಯ್ಲಿನಲ್ಲಿ, ಬಾನೋಡಗಳಲ್ಲಿ ಹೀಗೆ ಕೇಂದ್ರ ಸರಕಾರದ ಹಲವು ಸೇವೆಗಳಲ್ಲಿ ಸುರಕ್ಶೆಯ ಮಾಹಿತಿಯನ್ನು ಕರ‍್ನಾಟಕದಲ್ಲಿ ಕನ್ನಡದಲ್ಲಿ ನೀಡದವರು, ಇನ್ನು ಮೆಟ್ರೋದಲ್ಲಿ ಮಂದಿಯ ಅನುಕೂಲಕ್ಕಾಗಿ ಹಿಂದಿ ಬಳಸಿದ್ದೇವೆ ಎನ್ನುವುದು ಹಾಸ್ಯಾಸ್ಪದವಾಗಿದೆ. ಎಲ್ಲಾ ಸುರಕ್ಶತೆಯ ಮಾಹಿತಿಗಳು ಹಿಂದಿಯಲ್ಲಿ ಕಡ್ಡಾಯವಾಗಿ ಇರುವಂತೆ ನೋಡಿಕೊಳ್ಳುವ ಇವರು ಹಿಂದಿಯವರ ಅನುಕೂಲಕ್ಕಾಗಿ ಮತ್ತು ಕನ್ನಡಿಗರ ಮೇಲೆ ಹಿಂದಿಯನ್ನು ಅನಾವಶ್ಯಕವಾಗಿ ಹೇರುವುದಕ್ಕಾಗಿ ಹಿಂದಿ ಬಳಕೆಯನ್ನು ಮಾಡುತ್ತಿದ್ದಾರೆ.

ನಮ್ಮ ಮೆಟ್ರೋದ ಮೂಲಕ ಹಿಂದಿಯ ಹೇರಿಕೆಯನ್ನು ಮುಂದುವರಿಸಿರುವ ಆಡಳಿತ ಕೂಟ ಮುಂದೆ ಬಿ.ಎಮ್‍. ಟಿ. ಸಿ ಹಾಗು ಮೆಟ್ರೋವನ್ನು ಒಂದು ಮಾಡಿ ಬೆಂಗಳೂರಿನಲ್ಲಿ ಓಡಾಡುವ ಬಸ್ಸುಗಳಲ್ಲಿಯೂ ಕೂಡ ಹಿಂದಿ ಇರುವಂತೆ ಮಾಡಿಬಿಡುತ್ತಾರೆ. ಇದು ಇಲ್ಲಿಯೇ ನಿಲ್ಲಬೇಕು, ಮೆಟ್ರೋದಲ್ಲಿ ಹಿಂದಿಯ ಹೇರಿಕೆ ಕೊನೆಯಾಗಬೇಕು.

(ಚಿತ್ರ ಸೆಲೆ: Indiaoutside)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: