ಏನು ಆಗಬಾರದಾಗಿತ್ತೋ, ಅದೇ ಆಗೋದು!

ಪ್ರಶಾಂತ ಸೊರಟೂರ.

ಈ ಕೆಳಗಿನ ಅನುಬವಗಳು ನಿಮಗಾಗಿವೆಯೇ ?

  1. ಹೀಗೊಂದು ದಿನ ಹೊಸದಾದ ಬಿಳಿ ಉಡುಪು ಹಾಕಿಕೊಂಡು ಹೋಗುತ್ತಿರುವಾಗಲೇ ಮೇಲಿಂದ ಕಾಗೆಯ ’ಕಕ್ಕಾ’ ಬೀಳುವುದು!
  2. ಬಿರುಸಿನ ಕ್ರಿಕೆಟ್ ಸೆಣಸಾಟ, ಕೊನೆಯ ಚೆಂಡೆಸತ ಏನು ಆಗುತ್ತದೆಯೋ ಎಂದು ಕಾಯುತ್ತಿರುವಾಗಲೇ ಸರಕ್ಕನೇ ಮಿಂಚು (ಕರೆಂಟ್) ಮರೆಯಾಗುವುದು!
  3. ಕೆಲಸಕ್ಕೆ ಪ್ರತಿದಿನ ಬೇಗನೇ ಹೋದರೂ ಕಾಣದಿರುವ ಮೇಲುಗ (boss) ನಾವು ತಡವಾಗಿ ಹೋದ ದಿನವೇ ಅದೆಲ್ಲಿಂದಲೂ ನುಸುಳಿ ನಮ್ಮ ಮುಂದೆಯೇ ಬಂದು ನಿಲ್ಲುವ ಆಗುಹ!
  4. ನಾವು ಸಾಗುವ ದಾರಿ ಯಾವಾಗಲೂ ದಟ್ಟಣೆಯಿಂದ ಕೂಡಿದ್ದು ನಮ್ಮ ಎದುರಿನ ಸಾಲಿನಲ್ಲಿ ಯಾವಾಗಲೂ ಮಂದಿ ಸುಲಬವಾಗಿ ಗಾಡಿ ಓಡಿಸುತ್ತಿರುವ ನೋಟ!
  5. ಬಗೆಹರಿಸಲಾಗದಂತಹ ತುಂಬಾ ಸಿಕ್ಕಲಾದ ಲೆಕ್ಕಗಳು ಕೇಳ್ವಿಹಾಳೆಯಲ್ಲಿ (question paper) ಕಾಣದಿರಲಿ ಅಂದುಕೊಳ್ಳುತ್ತಿರುವಾಗಲೇ ಅಂತಹ ಹಲವಾರು ಲೆಕ್ಕಗಳು ಕೇಳ್ವಿಹಾಳೆ ತುಂಬಿ ಕುಳಿತಿರುವುದು!

ಆಗಿವೆಯೇ, ಹಾಗಾದರೆ ನೀವು ಮರ‍್ಪಿಯವರ ಕಟ್ಟಲೆಯ (Murphy’s law) ಗಾಳಕ್ಕೆ ಸಿಲುಕಿಕೊಂಡಿದ್ದೀರಿ ಅಂತಾನೇ ಹೇಳಬಹುದು.

Anything that can go wrong — will go wrong

ಇದೇ ಮರ‍್ಪಿಯವರ ಕಟ್ಟಲೆ. ಈ ಸಾಲನ್ನು ಹೀಗೆ ಕನ್ನಡಿಸಬಹುದು,

ಏನೆಲ್ಲಾ ಕೆಡುಕು ಆಗಬಾರದಾಗಿತ್ತೋ, ಅದೇ ಆಗೋದು

ಅಮೇರಿಕಾದ ಬಾನಪಡೆಯಲ್ಲಿ (air force) ಕೆಲಸ ಮಾಡುತ್ತಿದ್ದ ಮುಂದುಗ ಎಡ್ವರ‍್ಡ್ ಎ. ಮರ‍್ಪಿ (Captain Edward A. Murphy) ಬಾನೋಡಗಳನ್ನು ಒರೆಗೆಹಚ್ಚುವುದರಲ್ಲಿ ನುರಿತರಾಗಿದ್ದವರು. ವರುಶ 1949, ಬಾನೋಡ ಓಡಿಸುಗನ್ನೊಬ್ಬ ತಡೆದುಕೊಳ್ಳಬಹುದಾದ ಎಲ್ಲಕ್ಕಿಂತ ಹೆಚ್ಚಿನ ‘ಹಿರಿಸೆಳೆತದ ಕಸುವು’ (force of gravity-Gs) ಎಶ್ಟೆಂದು ಕಂಡುಕೊಳ್ಳುವ ಹಮ್ಮುಗೆಯನ್ನು ಮರ‍್ಪಿಯವರ ತಂಡಕ್ಕೆ ಒಪ್ಪಿಸಲಾಗಿತ್ತು. MX981 ಎಂಬ ಹೆಸರಿನ ಈ ಹಮ್ಮುಗೆಯಿಂದ ಹೊಮ್ಮುವ ವಿಶಯಗಳನ್ನು, ಮುಂದಿನ ವರುಶಗಳಲ್ಲಿ ಬಾನೋಡಗಳ ಕಟ್ಟುವಿಕೆಯಲ್ಲಿ ಬಳಸಿಕೊಳ್ಳಲು ಅಮೇರಿಕಾ ಪಡೆ ತೀರ‍್ಪಾನಿಸಿತ್ತು. ಹಾಗಾಗಿ ಈ ಹಮ್ಮುಗೆ ಬಾನಪಡೆಗೆ ತುಂಬಾ ಅರಿದಾಗಿತ್ತು.

ಮೊದಲ ಹಂತದಲ್ಲಿ, ಮರ‍್ಪಿಯವರ ತಂಡ ಹಿರಿಸೆಳೆತದ ಕಸುವು ತಿಳಿದುಕೊಳ್ಳಲು ಓಡಿಸುಗನಿಲ್ಲದ ಬಾನೋಡವನ್ನು ಕುಸಿತಕ್ಕೆ ಒಳಪಡಿಸುವ ಹಲವು ಒರೆತಗಳನ್ನು (tests) ನಡೆಸಿತು. ಆದರೆ ಆ ಒರೆತಗಳಿಂದ ಹೊಮ್ಮಿದ ತಿಳಿಹಗಳನ್ನು (data) ನೆಚ್ಚಿಕೊಳ್ಳಲು ಮರ‍್ಪಿಯವರು ಯಾಕೋ ಸಿದ್ದರಾಗಿರಲಿಲ್ಲ. ತಾವು ನಡೆಸುತ್ತಿದ್ದ ಹಮ್ಮುಗೆ ಸರಿಯಾದ ತಿಳಿಹಗಳನ್ನು ಹೊಮ್ಮಿಸಬೇಕಾದರೆ ನಿಜವಾದ ಓಡಿಸುಗನೊಬ್ಬ ಬಾನೋಡ ಕುಸಿತದ ಒರೆತದಲ್ಲಿ (crash test) ಪಾಲ್ಗೊಳ್ಳಬೇಕು ಎಂಬುದು ಅವರ ನಿಲುವಾಗಿತ್ತು. ಆದರೆ ತುಂಬಾ ಅಪಾಯಕಾರಿಯಾದ ಅಂತಹ ಒರೆತಕ್ಕೆ ಒಳಪಡಲು ಮುಂದೆ ಬರುವವರಾದರೂ ಯಾರು?

ಮುಂಬಿಗ ಜಾನ್ ಪಾಲ್ ಸ್ಟ್ಯಾಪ್ (Colonel John Paul Stapp), ಅರಿಮೆಯ ಒಳಿತಿಗಾಗಿ ಈ ಕುತ್ತದ ಒರೆತದಲ್ಲಿ ಪಾಲ್ಗೊಳ್ಳುವುದಾಗಿ ಮುಂದೆ ಬಂದರು. ಮುಂಬಿಗ ಸ್ಟ್ಯಾಪ್ ಅವರು ತೊಟ್ಟ ಉಡುಪಿಗೆ ಹಲವಾರು ತಿಳಿಕಗಳನ್ನು (sensors)  ಅಳವಡಿಸಿ ಬಾನೋಡ ಕುಸಿತದ ಒರೆತಕ್ಕೆ ಒಳಪಡಿಸಲಾಯಿತು. ಆದರೆ ಅಂದು ಏನಾಯಿತೋ ಗೊತ್ತಿಲ್ಲ, ಒರೆತದಲ್ಲಿ ಸ್ಟ್ಯಾಪ್ ಅವರನ್ನು ಹೊತ್ತ ಬಾನೋಡ ಸಿಕ್ಕಾಪಟ್ಟೆ ಬಿರುಸಿನಿಂದ ಓಡಾಡಿ ಒಮ್ಮೆಲೇ ಕೆಳಗೆ ಎರಗಿತು.

murphys-law_John-stapp

 (ಕುಸಿತದ ಒರೆತದಲ್ಲಿ ಜಾನ್ ಪಾಲ್ ಸ್ಟ್ಯಾಪ್)

ಸ್ಟ್ಯಾಪ್ ಅವರ ಜೀವಕ್ಕೆ ತೊಂದರೆಯಾಗದಿದ್ದರೂ ಅವರ ಮಯ್ಯಿಯ ಹಲವು ಎಲುಬುಗಳು ಮುರಿದಿದ್ದವು. ಮರ‍್ಪಿಯವರ ತಂಡಕ್ಕೆ ಈ ಒರೆತದಲ್ಲಿ ಸ್ಟ್ಯಾಪ್ ಅವರಿಗೆ ಆದ ತೊಂದರೆಯಿಂದ ನೋವಾಗಿತ್ತಾದರೂ, ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಬಿರುಸಿನಿಂದ ಓಡಿದ ಬಾನೋಡ ಒಳ್ಳೆಯ ತಿಳಿಹಗಳನ್ನು ಒದಗಿಸಲಿದೆ ಅನ್ನುವಂತ ಅನಿಸಿಕೆಯೂ ಒಳಗೊಳಗೆ ಇತ್ತು.

ಆದರೆ ಅಂದು ನಡೆದದ್ದೇ ಬೇರೆ, ಸ್ಟ್ಯಾಪ್ ಅವರ ಉಡುಪಿಗೆ ಅಳವಡಿಸಿದ್ದ ತಿಳಿಕಗಳು (sensos) ಒರೆತದ ಯಾವುದೇ ತಿಳಿಹಗಳನ್ನು ಕೂಡಿಡುವಲ್ಲಿ ಸೋತಿದ್ದವು. ಅದಕ್ಕೆ ಕಾರಣವೇನೆಂದು ನೋಡಿದಾಗ ತಿಳಿಕಗಳ ತಂತಿಗಳನ್ನು ತಪ್ಪಾಗಿ ಜೋಡಿಸಲಾಗಿತ್ತು. ಪ್ರತಿಯೊಂದು ತಿಳಿಕದಲ್ಲಿ ಎರಡು ತಂತಿಗಳಿದ್ದು ಅದು ತಪ್ಪಾಗಿ ಕೆಲಸ ಮಾಡುವ ಬಗೆಯಲ್ಲಿಯೇ ಎಲ್ಲ ತಿಳಿಕಗಳ ತಂತಿಗಳನ್ನು ಜೋಡಿಸಲಾಗಿತ್ತು!.

ಒಂದೆಡೆ ಸ್ಟ್ಯಾಪ್ ಅವರಿಗಾದ ತೊಂದರೆ ಇನ್ನೊಂದೆಡೆ ತಿಳಿಕಗಳನ್ನು ತಪ್ಪಾಗಿ ಜೋಡಿಸಿದ್ದು, ಮರ‍್ಪಿಯವರ ಸಿಟ್ಟನ್ನು ನೆತ್ತಿಗೇರಿಸಿತು. ತಿಳಿಕಗಳನ್ನು ಜೋಡಿಸಿದ ಪಡೆಯಾಳನ್ನು ಕರೆಯಿಸಿ ಹಿಗ್ಗಾ ಮುಗ್ಗಾ ಬಯ್ದರು. ಆಗ ಅವರ ಬಾಯಿಂದ ಹೊರಟಿದ್ದ ಸಾಲುಗಳಿವು,

ಯಾವುದಾದರೂ ಕೆಲಸಕ್ಕೆ ಎರಡು ದಾರಿಗಳಿದ್ದು ಅವುಗಳಲ್ಲಿ ಒಂದು ಕುತ್ತ ತರುವ, ತಪ್ಪಾದ ದಾರಿಯಾಗಿದ್ದರೆ ಎಲ್ಲರೂ ಆ ದಾರಿಯನ್ನೇ ಆಯ್ದುಕೊಳ್ಳುತ್ತಾರೆ.

ಸಿಟ್ಟಿನಲ್ಲಿ ಸಾಮಾನ್ಯವೆನ್ನುವಂತೆ ಹೊಮ್ಮಿದ್ದ ಮರ‍್ಪಿಯವರ ಮಾತುಗಳು ಮುಂದೊಮ್ಮೆ ಜಗತ್ತಿನೆಲ್ಲೆಡೆ ಪಸರಿಸಲಿವೆ ಅಂತಾ ಯಾರೂ ಎಣಿಸಲಿರಲಿಲ್ಲ. ಆದರೆ ಹಾಗೆ ಆಯಿತು, ಮರ‍್ಪಿಯವರು ಅಂದು ಆಡಿದ ಮಾತುಗಳು ಬೇರೆ ಬೇರೆ ರೂಪಗಳನ್ನು ಪಡೆದುಕೊಂಡು, ಈ ಬರಹದ ಮೊದಲ ಬಾಗದಲ್ಲಿ ಬರೆದ ಸಾಲುಗಳಾಗಿ ಎಲ್ಲೆಡೆ ಹೆಸರುವಾಸಿಯಾದವು. ಏನು ಆಗಬಾರದಾಗಿತ್ತೋ, ಅದೇ ಆಗೋದು!

ಹಾಗೇ ನೋಡಿದರೆ, ಮರ‍್ಪಿಯವರ ’ಕಟ್ಟಲೆ’ ಎಂದು ಹೆಸರುವಾಸಿಯಾಗಿರುವುದು ಅಶ್ಟೆನೂ ಅರಿಮೆಯ ಒರೆತದಿಂದ ಹುಟ್ಟಿರುವಂತದಲ್ಲ. ಆದರೆ ಇದರಿಂದಾಗಿ ಅರಿಮೆಯ ಹಲವಾರು ಸಲಕರಣೆಗಳ ಕಟ್ಟುವಿಕೆಗೆ ನೆರವಾಗಿದೆ. ಸಲಕರಣೆಯೊಂದು ಸೋಲದಂತಾಗಲು ಅದರಲ್ಲಿ ಹಲವಾರು ಗಟ್ಟಿಯಾದ ಚಳಕಗಳಿರಬೇಕೆಂದು, ಮರ‍್ಪಿಯವರ ಕಟ್ಟಲೆ ಬಾರಿಸುವ ’ಎಚ್ಚರಿಕೆಯ ಗಂಟೆ’ ಸಲಕರಣೆಗಳನ್ನು ಕಟ್ಟುವವರ ತಲೆಯಲ್ಲಿ ಯಾವಾಗಲೂ ಮೊಳಗುತ್ತಿರುತ್ತದೆ.

ಈ ತಿಳುವಳಿಕೆಗೆ ಅರಿಮೆಯ ಅಡಿಪಾಯ ಹಾಕುವಲ್ಲಿ, ಬ್ರಿಟಿಶ್ ಕೋಲಂಬಿಯಾ ಕಲಿಕೆವೀಡಿನ ಜಾನ್ ಪೆಲ್ (Joel Pel), ಮರ‍್ಪಿಯ ಕಟ್ಟಲೆಗೆ ಎಣಿಕೆಯರಿಮೆ ನಂಟನ್ನೂ ಕೂಡ ಮುಂದಿಟ್ಟಿದ್ದಾರೆ. ಅವರ ಪ್ರಕಾರ ಮರ‍್ಪಿಯ ಕಟ್ಟಲೆಯಂತೆ ಆಗುಹವೊಂದು ಕೆಡಕಿನೆಡೆಗೆ ಸಾಗುವುದು ಈ ಕೆಳಗಿನಂತೆ,

murphys_law_Joel_Pel_relation

ಇಲ್ಲಿ,
Pm = ಮರ‍್ಪಿಯವರ ಆಗಬಹುದಿಕೆ (Murphy’s probability), Km= ಮರ‍್ಪಿಯವರ ಮಾರ‍್ಪಡದೆಣಿ (constant), Fm= ಮರ‍್ಪಿಯವರ ಪಟ್ಟುಕ (factor=0.01), I = ಆಗುಹವು ಎಶ್ಟು ಮುಕ್ಯ, C= ಏರ‍್ಪಾಡು ಎಶ್ಟು ತೊಡಕಾಗಿದೆ, U= ಕೆಲಸ ಎಶ್ಟು ತುರ‍್ತಾಗಿ ಆಗಬೇಕು, F= ಆಗುಹ ಎಶ್ಟು ಸಲ ನಡೆಯುತ್ತದೆ.

ಮರ‍್ಪಿಯವರ ಕಟ್ಟಲೆ ಬರೀ ಅರಿಮೆಗೆ ಅಂಟಿಕೊಂಡಿರದೇ ಅದರ ಜಗದೆಡೆಯ ಗುಣಗಳನ್ನು ಬಳಸಿಕೊಂಡು ಹಲವು ಮಂದಿ ತಮಗೆ ಬೇಕಾದ ಹಲವಾರು ಮರಿ-ಕಟ್ಟಲೆಗಳನ್ನು, ಹೇಳಿಕೆಗಳನ್ನು ಕಟ್ಟಿದ್ದಾರೆ. ಅದರಲ್ಲಿ ಕೆಲವಂತು ತುಂಬಾ ಮಜವಾಗಿವೆ.

  • ನಿಮ್ಮ ಕಯ್ಯಿಗೆ ಜಿಡ್ಡು ಹತ್ತಿದಾಗಲೇ ನಿಮ್ಮ ಮೂಗಿನಲ್ಲಿ ತುರಿಕೆ ಉಂಟಾಗುತ್ತದೆ.
  • ಕಯ್ಯಿಂದ ಜಾರಿದ ವಸ್ತುವೊಂದು, ಯಾವಾಗಲೂ ಕಯ್ಯಿಗೆ ಎಟುಕದ ಜಾಗದಲ್ಲಿಯೇ ಹೋಗಿ ಬೀಳುತ್ತದೆ.
  • ನೀವು ತಪ್ಪಾದ ನಂಬರಿಗೆ ಕರೆಮಾಡಿದಾಗ ಯಾವಾತ್ತೂ ಅದು ತೊಡಗಿರುವುದಿಲ್ಲ (busy), ಆ ಕಡೆಯಿಂದ ಉತ್ತರ ಬಂದೇ ಬರುತ್ತದೆ.
  • ಯಾವಾಗಲೂ ಬಚ್ಚಲು ಮನೆಯಲ್ಲಿರುವಾಗಲೇ ಟೆಲಿಪೋನ್ ಕರೆಗಳು ಬರುತ್ತವೆ.
  • ನಾವು ಕಂಡ ಚಂದದ ಹುಡುಗಿ/ಹುಡುಗನಿಗೆ ನಮಗಿಂತ ಮೊದಲೇ ಬೇರೆಯವರು ಮೆಚ್ಚುಗೆಯಾಗಿರುತ್ತಾರೆ.

ಮರ‍್ಪಿಯವರ ಕಟ್ಟಲೆಯನ್ನು ಇನ್ನೊಂದು ಬಗೆಯಲ್ಲಿ ನೋಡಿದರೆ, ಬರೀ ಕೆಟ್ಟ ಆಗುಹಗಳನ್ನೇ ನೆನಪಿನಲ್ಲಿಡುವ ಮನುಶ್ಯರ ಎಂದಿನ ನಡವಳಿಕೆಯನ್ನು ಎತ್ತಿ ತೋರುತ್ತದೆ. ಸಾವಿರಾರು ಬಾರಿ ಅದೇ ದಾರಿಯಲ್ಲಿ ಏನು ತೊಂದರೆಯಾಗದೇ ಸಾಗಿಬಂದಿರುವುದು ನಮಗೆ ನೆನಪಿರುವುದಿಲ್ಲ ಆದರೆ ಕೆಲವು ಬಾರಿ ಆದ ತೊಡಕುಗಳು ನಮ್ಮ ತಲೆಯೊಳಗೆ ಮನೆ ಮಾಡಿಬಿಡುತ್ತವೆ. ಕೆಟ್ಟದ್ದನ್ನು ನೆನಪಿಡುವುದು, ಒಳ್ಳೆಯದನ್ನು ಮರೆತುಬಿಡುವುದು ನಮ್ಮ ಚಾಳಿ ಅಲ್ಲವೇ 🙂

(ತಿಳಿವಿನ ಮತ್ತು ತಿಟ್ಟ ಸೆಲೆಗಳು: howstuffworks.comsawmillcreek.org)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. ನ್ಯೂಟನ್ ಸಾಹೇಬ್ರು ಗುರುತ್ವಾಕರ್ಷಣೆ ಬಗ್ಗೆ ಯೋಳವ್ರೆ, ಅದ್ರೆ ರೊಟ್ಟಿ ಜಾರಿ ತುಪ್ಪದಲ್ಲಿ ಬೀಳೋ ಬಗ್ಗೆ ಯೋನೂ ಯೋಳಿಲ್ಲ. ಅಲ್ಲ ಆ ವಯ್ಯನಿಗೆ ಅದು ಗೊತ್ತಿತ್ತೋ ಇಲ್ವೋ, ಮೊನ್ನೆ ಇಂಗೇ ಬ್ರೆಡ್ಗೆ ಬೆಣ್ಣೆ ಹಚ್ತಾ ಇದ್ನಾ? ಕೈತಪ್ಪಿ ಅದು ಕೆಳೀಕ್ ಬಿದ್ಬಿಡಾದಾ? ಯಾವ್ ಕಡೀಕ್ ಬೆಣ್ಣೆ ಅಚ್ತಿದ್ನೋ ಅದೇ ಕಡೀಕ್ ಬಿದ್ದು ಮಣ್ಣಾಗೋದೂ ಅಂದ್ರೇನು? ಅದ್ನೇ ರೊಟ್ಟಿಬೆಣ್ಣೆ ನಿಯಮ ಅಂತಾರಂತೆ. ನ್ಯೂಟನ್ ನಿಯಮದ ಪ್ರಕಾರ ಕೈತಪ್ಪಿದ್ದೆಲ್ಲ ಕೆಳೀಕ್ ಬೀಳ್ಲೇಬೇಕು. ಅದರೆ ಅದು ತುಪ್ಪದಲ್ಲಿ ಬೀಳ್ತದೋ ಮಣ್ನಲ್ಲಿ ಬೀಳ್ತದೋ ಅದು ಅವನವ್ನ ನಸೀಬು. ಮಿಶಿನ್ ರಿಪೇರಿ ಮಾಡೋವಾಗ ಸ್ಪ್ಯಾನರ್ ನಿಮ್ಮ ಕೈತಪ್ಪಿ ಕೆಳೀಕ್ ಬೀಳ್ತದೆ. ಕಾಣಬಾರದ ಸಂದೀಗೇ ಓಗಿ ಅದು ಸೇರ್ಕಂಡಿರ್ತದೆ, ಅದೇ ಸ್ಪ್ಯಾನರ್ ನಿಯಮ. ಆವಯ್ಯ ನ್ಯೂಟನ್ನಿಗೆ ಇವೆಲ್ಲ ಗೊತ್ತಿಲ್ಲ. ಪೆದ್ನನ್ಮಗ ಅವ್ನು.

    ಗರತಿ ನಿಯಮ ಅಂದ್ರೇನೂ ಅನ್ತ ಎಲ್ರಿಗೂ ಗೊತ್ತದೆ ಬುಡಿ. ಅದರೆ ಸರತಿ ನಿಯಮ ಅಂದ್ರೇನ್ ಗೊತ್ತಾ? ಅದೇ ಸಾ, ನೀವು ಟಿಕೀಟ್ ತಗಳ್ಳಾಕೆ ಅನ್ತ ಕ್ಯೂನಲ್ಲಿ ನಿಂತ್ಕಂಡಿರ್ತೀರಾ ಅನ್ಕಳಿ. ಪಕ್ಕದ್ ಕ್ಯೂನಲ್ಲಿ ಜನ ಕಮ್ಮಿ ಇರ್ತಾರೆ ಅನ್ತ ನಿಮಗನ್ನಿಸ್ತದೆ. ವೋಗಿ ಅದರಾಗೆ ಸೇರ್ಕಂತೀರಿ. ಆದರೆ ಆ ಕ್ಯೂ ಮುಂದೇನೇ ಓಗಾಕಿಲ್ಲ. ನೀವ್ ಬುಟ್ ಬಂದ ಕ್ಯೂ ಅದೆಷ್ಟ್ ಬೇಗ ಕರಗ್ತದೆ ಅನ್ತೀರಾ? ಸರತಿ ನಿಯಮ ಅಂದ್ರೆ ಅದೇನೇಯ.

    ನೀವ್ ಯಾವ್ದೇ ರಾಂಗ್ ನಂಬರಿಗೆ ಫೋನ್ ಮಾಡಿ, ಅದು ಎಂಗೇಜ್ ಆಗಿರೋದೇ ಇಲ್ಲ. ಆ ಕಡೆ ಇರೋ ನನ್ಮಗ ಫೋನ್ ಎತ್ಕೊಂಡು ರಾಂಗ್ ನಂಬರ್ ಅನ್ತ ಕುಕ್ತಾನೆ. ಅದೇ ಫೋನ್ ನಿಯಮ.

    ನೀವು ಯಾವ್ದೋ ಮಿಶಿನ್ನಾಗೆ ಎಣ್ಣೆ ಒರಸ್ತಾ ಇರ್ತೀರಾ ಅತ್ವಾ ಗಿರೀಸ್ ಅಚ್ತಾ ಇರ್ತೀರ, ಆವಾಗ್ಲೇ ನಿಮ್ ಮೂಗತ್ರಾನೋ ಕಿವಿ ಹತ್ರಾನೋ ಸೊಳ್ಳೆ ಬಂದು ಕುಂತ್ಕತ್ತದೆ. ಅದ್ಕೆ ಯೋಳಾದು ಸೊಳ್ಳೆ ನಿಯಮ ಅನ್ತ.

    ಯಾಕಪ್ಪ ಲೇಟು ಅನ್ತ ನಿಮ್ಮಮ್ಮ ಕೇಳಿದ್ರೆ ಟೈರ್ ಪಂಚರ್ ಆಗೋಯ್ತು ಅನ್ತ ರೀಲ್ ಬಿಡ್ತೀರಾ? ಮಾರ್ನೆ ದಿವ್ಸ ನಿಮ್ ಗರ್ಲ್ ಫ್ರೆಂಡ್ ತಾವ ವೋಗೋವಾಗ ನಿಜ್ವಾಗ್ಲೂ ಟೈರ್ ಪಂಚರ್ ಆಗೋಯ್ತದೆ ಸಿವಾ, ಅದ್ಕೇನಂತೀರಾ?

    ಇಂಥಾವ್ರ ಕುಟೆ ಇರೋ ವೊತ್ನಾಗೆ ಇಂಥಿಂಥಾವ್ರು ನೋಡಬ್ಯಾಡದು ಅನ್ತ ಅನ್ಕೊಂಡಿರೋವ್ನಾಗ ಆ ಇಂಥಿಂಥಾವ್ರ ಕೈಗೇ ಸಿಕ್ಕಾಕ್ಕೊಂತೀವಲ್ಲ ಸಿವಾ, ಅದ್ಕಿಂತ ಎನ್ಕೌಂಟರು ಇನ್ಯಾವುದಿದ್ದೀತು ಅಲ್ಲವ್ರಾ?

    ಮಿಶಿನ್ ಕೆಟ್ಟೋಗದೆ ಇನ್ ಕ್ಯಲ್ಸ ಮಾಡಾಕಿಲ್ಲ ನೀವೇ ಬಂದ್ ನೋಡಿ ಬೇಕಾದ್ರೆ ಅನ್ತ ನಿಮ್ ಬಾಸ್ ಅತ್ರ ರಾಜಾರೋಷವಾಗಿ ಯೋಳಿರ್ತೀರಾ. ಬಾಸ್ ಮುಂದೆ ಆ ಐನಾತಿ ಮಿಶಿನ್ನು ಸರಿಯಾಗೇ ಓಡ್ತದೆ. ತಲೆ ಚಚ್ಕತೀರಾ?

    ಕಡಿತ ಇದ್ಕಡೆ ಕೆರಕೊಳ್ಳೋದು ಇದ್ದೇ ಇರ್ತದೆ ಅನ್ನೋದು ದಿಟವೇ. ಕೆರಕೊಳ್ಳೋಕೆ ವೋದಷ್ಟೂ ಕಡಿತ ಇನ್ನಷ್ಟು ಆಳಕ್ಕಿಳೀತದೆ ಅನ್ನೋ ಬಯೋಮೆಟ್ರಿಕ್ ನಿಯಮ ಮಾತ್ರ ಯಾರ್ಗೂ ಅರ್ತವಾಗವೊಲ್ಲದು. ಯಾಪಾಟಿ ಮಿತ್ರದ್ರೋಹ ಅಲ್ವ ಸಿವಾ?

    ಅಲ್ಲ ನ್ಯೂಟನ್ ಮಹಾಸಯನಿಗೆ ಇವೆಲ್ಲ ಗೊತ್ತಾ? ಇವುಗೋಳ ಮುಂದೆ ನ್ಯೂಟನ್ ನಿಯಮ ಏನೂ ಅಲ್ಲ ಬುಡಿ.

  1. 11/03/2014

    […] ನಿಮ್ಮ ಚೂಟಿಯುಲಿ ರಿಂಗಣಿಸುತ್ತದೆ (ಮರ‍್ಪಿರವರ ಕಟ್ಟಲೆ ನೆನಪಿಸಿಕೊಳ್ಳಬಹುದು). ಎಶ್ಟೋ ಸಲ ಹಲವು […]

ಅನಿಸಿಕೆ ಬರೆಯಿರಿ:

%d bloggers like this: