ಒಂದಾಗಿರಬೇಕು ಒಡೆದು ಹೋಳಾಗದೆ

– ಜಯತೀರ‍್ತ ನಾಡಗವ್ಡ.

  unione_rid-582067_xs

ಒಡೆದು ಆಳುವ ನೀತಿ ಇಂದು ನಿನ್ನೆಯದಲ್ಲ. ಬ್ರಿಟಿಶರ ಕಾಲದಿಂದಲೂ ನಡೆದು ಬಂದ ಕೆಟ್ಟ ಚಾಳಿ. ಒಂದಾಗಿರುವ ನಾಡುಗಳನ್ನ ಅರಸು ಮನೆತನಗಳನ್ನು ತಮ್ಮ ಆಳ್ವಿಕೆಗೆ ಅನುಕೂಲವಾಗುವ ರೀತಿಯಲ್ಲಿ ಹೋಳಾಗಿಸಿ ಒಂದೇ ನಾಡು ನುಡಿಯ ವೇಶ ಬಾಶೆಯ ಜನರನ್ನು ಒಬ್ಬರ ವಿರುದ್ದ ಇನ್ನೊಬ್ಬರನ್ನ ಎತ್ತಿಕಟ್ಟಿ ದುರಾಡಳಿತ ನಡೆಸಿದ ಹಲವಾರು ಎತ್ತುಗೆಗೆಗಳು ನಮ್ಮ ಕಣ್ಣ ಮುಂದಿವೆ. ಇತ್ತಿಚೀಗೆ ತೆಲಗಾಂಣ ವಿಶಯದಲ್ಲೂ ತೆಲುಗು ನುಡಿಯಾಡುವ ಮಂದಿಯನ್ನು ಬೇರ‍್ಪಡಿಸಿದ್ದು ಇದೇ ತೆರನಾಗಿ. ಇಂತ ಕೆಟ್ಟ ಬುದ್ದಿಗಳ ಕೆಂಗಣ್ಣು ಇದೀಗ ನಮ್ಮ ಕರುನಾಡಿನ ಮೇಲೆ ಬಿದ್ದಿರುವುದು ಎಚ್ಚರಿಕೆಯ ಕರೆಗಂಟೆ.

ನಾಡು ಒಡೆದು ಚಿಕ್ಕ ಚಿಕ್ಕದಾಗಿಸಿ ತಮ್ಮ ಹಿಡಿತದಲ್ಲಿಡಲು ಸುಲಬ ಹಾಗೂ ಸರಳವಾಗಿರುತ್ತದೆ ಎಂಬುದು ಕೇಂದ್ರದಲ್ಲಿ ಆಳುವ ಸರ‍್ಕಾರಗಳ ಹುನ್ನಾರ. ಮೆಲ್ನೋಟದಲ್ಲಿ ಕರುನಾಡಿನ ಉತ್ತರ ಮತ್ತು ದಕ್ಶಿಣ ಬಾಗಗಳನ್ನು ಬೇರೆ ಮಾಡಬೇಕು ಎನ್ನುವ ವಾದ ಮುಂದಿದೆ. ಯಾಕೆ ಈ ಹೋಳು, ಇಬ್ಬಾಗ ಎಂದಾಗ ಸರಳವಾಗಿ ನಮ್ಮ ಮುಂದಿಡುವ ವಾದ ಬೆಳವಣಿಗೆ, ಅಬಿವ್ರುದ್ದಿ ಎಂಬ ನಿಲುಕದ ಚುಕ್ಕೆಗಳು. ಬೆಳವಣಿಗೆ ಹೇಗೆ ಎತ್ತ ಎನ್ನುವುದರ ಬಗ್ಗೆ ನಮ್ಮ ಮಂದಿ ಇಂದು ಆಳವಾಗಿ ನೋಡಬೇಕಿದೆ.

ಉತ್ತರ ಕರ‍್ನಾಟಕ ಮುಂಚೆಯಿಂದಲೂ ಹಿಂದುಳಿದಿರುವ ಬಾಗ ಇದಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂಬ ಕೂಗು ಹಲವು ವರುಶಗಳಿಂದ ಬೇಡಿಕೆಯಾಗಿದೆ. ಈ ಹಿಂದುಳಿಯುವಿಕೆಗೆ ಕರ‍್ನಾಟಕವನ್ನು ಇಬ್ಬಾಗಿಸಿ ಎನ್ನುವುದು ತಪ್ಪು. ನಾಡಿನ ಈ ಅಸಮಾನತೆಯನ್ನು ಸರಿದೂಗಿಸಲು ಡಾ. ನಂಜುಡಪ್ಪ ವರದಿಯನ್ನು ಹಿಂದಿನ ಕರ‍್ನಾಟಕ ಸರ‍್ಕಾರ ಹೊರತಂದಿತ್ತು. ಇದರಲ್ಲಿ ತಿಳಿಸಿರುವಂತೆ ಉತ್ತರ ಕರ‍್ನಾಟಕದ 59 ತಾಲೂಕುಗಳು ಹಿಂದುಳಿದಿವೆ ಎಂಬುದು ನಮ್ಮೆಲ್ಲರಲ್ಲಿ ಹಲವರಿಗೆ ತಿಳಿದಿದೆ. ಆದರೆ ದಕ್ಶಿಣ ಬಾಗದ 54 ತಾಲೂಕುಗಳು ಕೂಡ ಹಿಂದುಳಿದಿವೆ ಎಂಬುದನ್ನು ಇದೇ ವರದಿ ಹೇಳುತ್ತದೆ. ಉತ್ತರದ ಕಲ್ಬುರ‍್ಗಿ, ಯಾದಗಿರಿ, ರಾಯಚೂರು, ಗದಗ ಮತ್ತು ಕೊಪ್ಪಳ ಜಿಲ್ಲೆ ಹಿಂದುಳಿದಿವೆ ಎನ್ನುವುದಾದರೆ ದಕ್ಶಿಣದಲ್ಲಿ ಕೊಡಗು, ಚಾಮರಾಜನಗರ, ಚಿತ್ರದುರ‍್ಗ, ಚಿಕ್ಕಮಗಳೂರು, ಕೋಲಾರಗಳು ಎಶ್ಟು ಮುಂದುವರೆದಿವೆ ನಮ್ಮ ಮಂದಿಗೆ ಅರ‍್ತವಾದಂತಿಲ್ಲ. ನಾಡಿನ ನೆಲೆವೀಡು ಬೆಂಗಳೂರು ಅಕ್ಕ ಪಕ್ಕದಲ್ಲಿರುವ ಕಾರಣ ಮಯ್ಸೂರು, ತುಮಕೂರು, ರಾಮನಗರ ಜಿಲ್ಲೆಗಳು ಚಿಕ್ಕಪುಟ್ಟದಾಗಿ ಬೆಳವಣಿಗೆ ಕಂಡರೂ ಆಗಬೇಕಿರುವ ಬೆಳವಣಿಗೆಗಳು ಅದೆಶ್ಟೋ ಇವೆ.

ಉತ್ತರದ ಬೆಳವಣಿಗೆಗೆ ನಾಡನ್ನು ಇಬ್ಬಾಗಿಸಿವುದು ಪರಿಹಾರವೆಂದರೆ ಮದ್ಯಪ್ರದೇಶ, ಉತ್ತರಪ್ರದೇಶ ಮತ್ತು ಬಿಹಾರದಿಂದ ಬೇರ‍್ಪಟ್ಟ ಚತ್ತೀಸ್ಗಡ್, ಉತ್ತರಾಂಚಲ ಹಾಗೂ ಜಾರ‍್ಕಂಡ್ ನಾಡುಗಳು ಯಾವ ರೀತಿಯಲ್ಲಿ ಬೆಳವಣಿಗೆ ಕಂಡಿವೆ? ಚತ್ತೀಸ್ಗಡ್, ಜಾರ‍್ಕಂಡ್ ಗಳಲ್ಲಿ ನಕ್ಸಲ್ ಹಾವಳಿ ಇನ್ನೂ ಕಡಿಮೆಯಾಗಿಲ್ಲ. ಮೇಲಿಂದ ಮೇಲೆ ಸರ‍್ಕಾರಗಳು ಬದಲಾದವು ಆದರೆ ಇಲ್ಲಿನ ಜನರ ಕಲಿಕೆ, ದುಡಿಮೆ, ಏಳಿಗೆ ಬಗ್ಗೆ ಮಾತ್ರ ಯಾರು ತಲೆಕೆಡಿಸಿಕೊಂಡಿಲ್ಲ. ದೆಹಲಿಯನ್ನು ತಮ್ಮ ಆಳ್ವಿಕೆಯ ನೆಲೆಯಾಗಿಸಿರುವ ಈ ಸರ‍್ಕಾರಗಳು ತಮ್ಮ ಬೆಳವಣಿಗೆಗೆ ಒತ್ತುಕೊಟ್ಟವೇ ಹೊರತು ಈ ಚಿಕ್ಕನಾಡುಗಳ ಮಂದಿಯ ಸಮಸ್ಯೆಗಳ ಬಗ್ಗೆ ದಿಟವಾದ ನಿರ‍್ದಾರ ತಳೆಯಲೇ ಇಲ್ಲ. ಇನ್ನೂ ಹೆಚ್ಚಿನ ಸಂಕ್ಯೆಯ ಆಳ್ವಿಗರನ್ನು ಆರಿಸಿ ಕಳಿಸುವ ಮದ್ಯಪ್ರದೇಶ, ಉತ್ತರಪ್ರದೇಶ ಮತ್ತು ಬಿಹಾರಗಳು ತಮ್ಮ ಆಳ್ವಿಗರ ಮೇಲೆ ಒತ್ತಡ ತಂದು ಹೆಚ್ಚಿನ ಕೆಲಸ ಮಾಡಿಸಿಕೊಂಡಿವೆ. ರಯ್ಲು, ಹೆದ್ದಾರಿ ಮತ್ತು ಇತರೆ ಹಣಕಾಸಿನ ಹಮ್ಮುಗೆಯಲ್ಲಿ ಹೆಚ್ಚು ಆಳ್ವಿಗರನ್ನು ಹೊಂದಿರುವ ನಾಡುಗಳು ಸಿಂಹಪಾಲು ಪಡೆದಿವೆ. ಒಂದು ಎರಡು ಸಂಸದರನ್ನು ಹೊಂದಿರುವ ಮೂಳ್ವಡದ ಅಸ್ಸಾಂ, ಮೀಜೊರಾಮ್, ನಾಗಾಲ್ಯಾಂಡ್, ತ್ರಿಪುರಾ ಮುಂತಾದ ನಾಡುಗಳ ಅಬಿವ್ರುದ್ದಿಯಂತೂ ಅಶ್ಟಕಶ್ಟೇ. ಹೆಚ್ಚು ಆಳ್ವಿಗರನ್ನು ಹೊಂದಿರದ ಈ ನಾಡುಗಳಲ್ಲಿ ಹೊಸ ಹಮ್ಮುಗೆಗಳು ಬರುವ ಹೊತ್ತಿಗೆ ದೊಡ್ಡದಾದ ಉತ್ತರಪ್ರದೇಶ, ಮಹಾರಾಶ್ಟ್ರ, ಮದ್ಯಪ್ರದೇಶ, ತಮಿಳುನಾಡುಗಳು ಅವುಗಳಿಗಿಂತ ನೂರುಪಟ್ಟು ಮುಂದುವರೆದಿರುತ್ತವೆ.

ಕರ‍್ನಾಟಕದ ವಿಶಯಕ್ಕೆ ಬಂದರೆ ಇದೇ ತೆರನಾದ ಅನ್ಯಾಯವಾಗಿದೆ. ಕನ್ನಡಿಗರು 28 ಆಳ್ವಿಗರನ್ನು ಆರಿಸಿ ಲೋಕಸಬೆಗೆ ಕಳಿಸಿದರೆ, ನೆರೆಯ ಆಂದ್ರ, ತಮಿಳುನಾಡು ಮತ್ತು ಮಹಾರಾಶ್ಟ್ರಗಳು 40ಕ್ಕೂ ಹೆಚ್ಚು ಸಂಸದರನ್ನು ಆರಿಸಿ ಕಳಿಸುತ್ತವೆ. ಇದರಿಂದಾಗಿ ಒಪ್ಪುಕೂಟದ ಸರ‍್ಕಾರದಲ್ಲಿ ಆಂದ್ರ, ತಮಿಳು, ಮಹಾರಾಶ್ಟ್ರದ ಆಳ್ವಿಗರು ಪ್ರಮುಕ ಪಾತ್ರವಹಿಸುತ್ತಾರೆ. ತಮ್ಮ ನಾಡಪರದ ಕೆಲಸಗಳನ್ನು, ಹಮ್ಮುಗೆಗಳನ್ನು ಪಡೆಯಲು ಲಾಬಿ ಮಾಡಿ ತಮ್ಮ ತೋಳ್ಬಲ ತೋರಿಸುತ್ತ ಬಂದಿದ್ದಾರೆ. ಅದು ಕಾವೇರಿ, ಕ್ರಶ್ಣಾ, ಮಹದಾಯಿ ಹೊಳೆ ನೀರಿನ ವಿಶಯವಾಗಿರಲಿ ಇಲ್ಲವೇ ಬೆಳಗಾವಿಯ ಗಡಿ ತಂಟೆಯ ವಿಶಯವಾಗಿರಲಿ ನ್ಯಾಯ ನಮ್ಮಪರವಿದ್ದರೂ ನೆರೆನಾಡಿಗೆ ಒಪ್ಪುಕೂಟ ಸರ‍್ಕಾರ ಜಯ್ ಎಂದಿದ್ದು ಕನ್ನಡಿಗರು ಮರೆತಿಲ್ಲ.

ಇನ್ನೂ ಕರ‍್ನಾಟಕ ಹೋಳುಗೊಂಡರೆ ಈಗಾಗಲೇ ನೆನೆಗುದಿಗೆ ಬಿದ್ದಿರುವ ನಮ್ಮ ಅಕಂಡ ಕರ‍್ನಾಟಕದ ತಂಟೆ ತಕರಾರುಗಳು ಇನ್ನಶ್ಟೂ ಹೆಚ್ಚುಗೊಳ್ಳುತ್ತವೆ. ಹೊಳೆ ನೀರು, ಗಡಿ ವಿಶಯವಾಗಿ ಒಂದೇ ನುಡಿಗರ ಮದ್ಯೆ ಕಿತ್ತಾಟಗಳು ಹೆಚ್ಚುತ್ತವೆ. ಕೋರ‍್ಟ್ ಮೆಟ್ಟಿಲೇರುತ್ತ ಹಲವಾರು ವರುಶಗಳು ಕಳೆದರೂ ಸಮಸ್ಯೆಗಳು ಪರಿಹಾರಗೊಳ್ಳುವುದೇ ಇಲ್ಲ. ಇಬ್ಬರ ನಡುವೆ ಮೂರನೇಯವನಿಗೆ ಲಾಬ ಎಂಬಂತೆ ಕಿತ್ತಾಡುವ ಎರಡು ನಾಡುಗಳ ಮದ್ಯೆ ಒಪ್ಪುಕೂಟದ ಆಳ್ವಿಗರು ತಮ್ಮ ದೆಹಲಿ ದೊರೆಗಳ ಆದೇಶ ಪಾಲಿಸುತ್ತ ಮಂದಿ ಸಮಸ್ಯೆಗಳತ್ತ ಕಿವಿಗೊಡುವುದೇ ಇಲ್ಲ. ಇನ್ನೂ ಉತ್ತರದ ಹಿಂದುಳಿಯುವಿಕೆಗೆ ಯಾರು ಹೊಣೆಯೆಂದು ನಾವು ಬೂತಗನ್ನಡಿ ಹಿಡಿದು ನೋಡಿದಾಗ ಕಂಡುಬರುವುದು ನಾವು ಆಯ್ಕೆ ಮಾಡಿದ ಆಳ್ವಿಗರು ಮತ್ತವರ ಸರ‍್ಕಾರಗಳು. ನಮ್ಮನ್ನಾಳುವವರು ನಮ್ಮ ಮಂದಿಯನ್ನು ಬೆಳವಣಿಗೆಯ ದಾರಿಯತ್ತ ಕೊಂಡೊಯ್ಯುವ ಬದಲು ತಮ್ಮ ಸ್ವಂತ ಬೆಳೆವಣಿಗೆಗೆ ಹೆಚ್ಚುಗಾರಿಕೆ ನೀಡಿದ್ದು ಉತ್ತರ, ದಕ್ಶಿಣ, ಕರಾವಳಿ, ಕೊಡಗು ಹೀಗೆ ಅಕಂಡ ಕರುನಾಡಿನ ಏಳಿಗೆಗೆ ಅಡ್ಡಗಾಲಾಗಿದ್ದಾರೆ.

ಉತ್ತರ ಕರ‍್ನಾಟಕದ ಹಲವು ಆಳ್ವಿಗರು ವಿದಾನಸವ್ದದ ಮೆಟ್ಟಿಲು ಹತ್ತಿ ವಿವಿದ ಮಂತ್ರಿ ಹುದ್ದೆಗಳನ್ನು ಅನುಬವಿಸಿದ್ದಾರೆ. ಇವರಲ್ಲಿ ಹಲವರು ಮುಕ್ಯಮಂತ್ರಿಗಳಾಗಿದ್ದು ಇದೆ. ಇವರ ಅದಿಕಾರ ಅವದಿಯಲ್ಲಿ ಉತ್ತರ ಕರ‍್ನಾಟಕಕ್ಕೆ ಯಾವ ಕೊಡುಗೆ ನೀಡಿದ್ದಾರೆ ನಮಗೆಲ್ಲ ತಿಳಿದಿದೆ. ಕೇಂದ್ರ ಸರ‍್ಕಾರದಲ್ಲೂ ಉತ್ತರ ಕರ‍್ನಾಟಕದವರು ವಿವಿದ ಹುದ್ದೆಗಳನ್ನು ಪಡೆದು ತಮ್ಮ ಸ್ವಂತ ಬೆಳವಣಿಗೆ ಮಾಡಿಕೊಂಡದ್ದು ಬಿಟ್ಟು ನೆನಪಿನಲ್ಲಿಡುವ ಯಾವ ಅಬಿವ್ರುದ್ದಿ ಕೆಲಸಗಳನ್ನು ಮಾಡಿಲ್ಲ.

ಉತ್ತರ ಕರ‍್ನಾಟಕ ಹೊಸ ನಾಡು ಮಾಡಬೇಕು ಎಂದು ಪದೇ ಪದೇ ಒತ್ತಾಯಿಸುತ್ತಿರುವವರು ಉತ್ತರ ಕರ‍್ನಾಟಕದ ಪ್ರಮುಕ ಊರು ಹುಬ್ಬಳ್ಳಿಯಲ್ಲಿ ನೆಲೆಗೊಂಡಿರುವ ನಯ್ರುತ್ಯ ರಯ್ಲಿನಲ್ಲಿ ಎಶ್ಟು ಶೇಕಡಾ ಕನ್ನಡಿಗರಿಗೆ ಕೆಲಸ ಸಿಕ್ಕಿದೆಯೆಂದು ತಮ್ಮ ಆಳ್ವಿಗರಿಗೆ ಕೇಳಬೇಕಿದೆ? ರಾಯಚೂರಿನ ಶಕ್ತಿನಗರದಲ್ಲಿ ತಯಾರುಗೊಳ್ಳುವ ಮಿಂಚಿನಲ್ಲಿ ಬಡಗಣ ಕರ‍್ನಾಟಕದ ಪಾಲೆಶ್ಟು? ಕಾರವಾರದ ಕಯ್ಗಾ ಅಣುಸ್ತಾವರದಲ್ಲಿ ಕೆಲಸಮಾಡುವ ಕನ್ನಡಿಗರೆಶ್ಟು? ಹೀಗೆ ನಮ್ಮ ಊರಿಗೆ ಬರುವ ಹೊಸ ಕಯ್ಗಾರಿಕೆಗಳಲ್ಲಿ ಸ್ತಳೀಯರ ಬೆಳವಣಿಗೆಗೆಂದು ಎಶ್ಟು ಕೆಲಸದ ಅವಕಾಶಗಳನ್ನು ನೀಡಲಾಗಿದೆ ಎಂಬುದರತ್ತ ನಮ್ಮ ಅರಿವು ಬೆಳೆಸಿಕೊಳ್ಳಬೇಕು. ಅಂದಾಗಲೇ ನಾವು ಮುಂದೆ ಸಾಗಲು ಸಾದ್ಯ. ಬೀದರ ಇರಲಿ ಹಾಸನ ಇರಲಿ ನಮ್ಮ ಮಂದಿಯ ಬೆಳವಣಿಗೆಗೆ ಒಂದೇ ನುಡಿಯಾಡುವ ಎಲ್ಲ ಕನ್ನಡಿಗರು ಒಟ್ಟಾಗಿ ದುಡಿದರೆ ನಾವು ಬೆಳವಣಿಗೆ ಹೊಂದಬಹುದು. ಇದಕ್ಕೆ ಜೀವಂತ ಎತ್ತುಗೆಗಳೆಂದರೆ ಮುಂದುವರೆದ ಜಪಾನ್, ಚೀನಾ, ಜರ‍್ಮನಿ, ಪ್ರಾನ್ಸ್, ತೆಂಕಣ ಕೊರಿಯಾ, ಇಸ್ರೇಲ್ ಹೀಗೆ ಹತ್ತಾರು ನಾಡುಗಳು. ಕನ್ನಡ ನುಡಿಯುವ ಕನ್ನಡಿಗರು ಒಂದಾಗಿದ್ದರೆ ಹಲವು ವಿಚಾರಗಳು ಪರಸ್ಪರವಾಗಿ ಹಂಚಿಕೆಗೊಂಡು ನಮ್ಮ ನಾಡಿನ ಸಮಸ್ಯೆಗಳಿಗೆ ನಾವು ದಾರಿ ಕಂಡುಹಿಡಿಯಲು ಬಲು ಸುಲಬ.

ಒಂದೇ ನುಡಿಯಾಡುವರನ್ನು ಒಗ್ಗಟ್ಟಾಗಿಸಿ ಬಾಶಾವಾರು ನಾಡುಗಳನ್ನು ಕಟ್ಟಲಾಗಿದೆ. ಉತ್ತರ ಕರ‍್ನಾಟಕವನ್ನು ಈಗಿನ ಕರ‍್ನಾಟಕದಿಂದ ಬೇರೆಯಾಗಿಸಿಬೇಕು ಎನ್ನುವ ವಾದಕ್ಕೆ ಸೊಪ್ಪು ಹಾಕುವರು ದಾರವಾಡದ ಆಲೂರು ವೆಂಕಟರಾಯರೇ ಕರ‍್ನಾಟಕ ಒಂದಾಗಿಸಲು ಮುಂದಾಳಾಗಿ ಹೋರಾಡಿದ್ದರು ಎನ್ನುವುದು ಮರೆತಿದ್ದಾರೆ. ಅಂದಿನ ಬಾಂಬೆ, ಮದ್ರಾಸ್ ಮತ್ತು ಹಯ್ದ್ರಾಬಾದ್ ಬಾಗಗಳಲ್ಲಿ ಸೇರಿಹೋಗಿದ್ದ ಅತಂತ್ರ ಕನ್ನಡಿಗರನ್ನು ಒಂದಾಗಿಸಲು ಉತ್ತರ, ಮೂಳ್ವಡ ಬಾಗದ ಹಲವಾರು ಪ್ರಮುಕರು ತಮ್ಮ ಜೀವ ಪಣವಾಗಿಟ್ಟಿದ್ದು ಇಲ್ಲಿ ನೆನಪಿಸಿಕೊಳ್ಳಬಹುದು. ನಮ್ಮ ನುಡಿಯಲ್ಲಿ ಸೇವೆ ಕೊಡದೇ ಎರಡನೇ ದರ‍್ಜೆ ಪ್ರಜೆಗಳಂತೆ ನಡೆಸಿಕೊಂಡ ಬಾಂಬೆ, ಮದ್ರಾಸ್ ಮತ್ತು ಹಯ್ದ್ರಾಬಾದ್ ವಿಬಾಗಗಳ ವಿರುದ್ದ ಸಿಡಿದೆದ್ದ ಕನ್ನಡಿಗರ ಪರಿಣಾಮ ಇಂದಿನ ಅಕಂಡ ಕರ‍್ನಾಟಕ. ಇದನ್ನು ಮತ್ತೆ ವಿಬಜಿಸಿದರೆ ನಾವು ನಮ್ಮಲ್ಲೇ ಎರಡನೇ ದರ‍್ಜೆಯ ಪ್ರಜೆಗಳಾಗುವುದರಲ್ಲಿ ಎರಡು ಮಾತಿಲ್ಲ.

ಇಂದು ಕೆಲಸಕ್ಕಾಗಿ ಉತ್ತರದ ಹಲವು ಮಂದಿ ಅರಸಿಕೊಂಡು ಬಂದು ನೆಲೆಸಿರುವುದು ನಮ್ಮ ಕರ‍್ನಾಟಕದ ನೆಲೆವೀಡು ಬೆಂಗಳೂರಿಗೆ. ನೆನಪಿರಲಿ ಮುಂಬಾಯ್, ಚೆನ್ನಯ್, ಪುಣೆ, ಹಯ್ದ್ರಾಬಾದ್ ಊರುಗಳಿಗೆ ಕೆಲಸ ಅರಸಿಕೊಂಡು ಹೋದ ನಾವು ಎಂದಿಗೂ ಹೊರಗಿನವರಾಗಿ ಇರುತ್ತೇವೆ. ಅಲ್ಲಿನ ಸ್ತಳೀಯರಿಗೆ ಸಿಗುವ ಸವಲತ್ತುಗಳು ನಮಗೆ ಸಿಗುವುದು ಕಶ್ಟ. ಬೆಂಗಳೂರು ಮಾತ್ರ ಇಂದು ಎಲ್ಲ ಬಾಗದ ಕನ್ನಡಿಗರಿಗೆ ರತ್ನಗಂಬಳಿಯ ನಲ್ಬರುವು ನೀಡಿದೆ. ಉಡುಪಿಯ ಹೋಟೆಲ್ಗಳು, ಉತ್ತರ ಕರ‍್ನಾಟಕದ ರೊಟ್ಟಿ ಊಟದ ಅಂಗಡಿಗಳು, ಮಂಡ್ಯ ಮಯ್ಸೂರು ಬಾಗದ ಮುದ್ದೆ ಸಾರು ಮೆಸ್ಸುಗಳು ಬೆಂಗಳೂರಿನ ಓಣಿ ಓಣಿಗಳಲ್ಲಿ ತಲೆ ಎತ್ತಿರುವುದು ಇದಕ್ಕೆ ಸಾಕ್ಶಿ.ಯಾವುದೋ ಕುರುಡು ಕಾರಣಗಳ ಹಿಂದೆಬಿದ್ದು ಕನ್ನಡಿಗರು ಬೇರ‍್ಪಟ್ಟರೆ ಬೆಂಗಳೂರು, ಮಯ್ಸೂರು, ಮಂಗಳೂರುಗಳಲ್ಲೂ ನಾವು ಹೊರಗಿನವರಾಗೇ ಉಳಿಯುವುದು ಕಂಡಿತ.

1956ರ ಕನ್ನಡ ನುಡಿಗರ ಒಂದಾಗುವಿಕೆಗೆ ಉತ್ತರ ಕರ‍್ನಾಟಕದ ಗುದ್ಲೆಪ್ಪ ಹುಲಿಕೇರಿ, ಸಿದ್ದಪ್ಪ ಕಾಂಬ್ಳಿ, ವಿ.ಕ್ರು.ಗೋಕಾಕ್, ದ.ರಾ.ಬೇಂದ್ರೆ, ಹುಯಿಲಗೋಳ ನಾರಾಯಣರಾಯರು ಹಾಗೂ ದಕ್ಶಿಣದ ಶಿವರಾಮ ಕಾರಂತ, ಅನಕ್ರು, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಗೋವಿಂದ ಪಯ್ ಮುಂತಾದವರೆಲ್ಲ ಒಡಗೂಡಿ ಬಲತುಂಬಿದ್ದು ಬೇರೆ ಬೇರೆ ಬಾಗದ ಕನ್ನಡಿಗರ ನಡುವೆಯಿದ್ದ ಒಗ್ಗಟ್ಟನ್ನು ತೋರಿಸಿತ್ತು. ಇಂದಿಗೂ ಕನ್ನಡ ಪರ ಹೋರಾಟಗಳು ಯಾವುದೇ ಬಾಗದ್ದಾಗಿರಲಿ ವಿದಾನಸವ್ದದ ಮುಂದುಗಡೆ ನಿಂತು ಹೋರಾಡಲು ಬೆಂಗಳೂರು ಸೇರಿದಂತೆ ಎಲ್ಲೆಡೆ ಮಂದಿ,ಕನ್ನಡಪರ ಸಂಗಟನೆಗಳು ಒಗ್ಗಟ್ಟನ್ನು ಮೆರೆದಿದ್ದಾರೆ.

28 ಆಳ್ವಿಗರು ನಮ್ಮ ನಾಡನ್ನು ಒಪ್ಪುಕೂಟ ಸರ‍್ಕಾರದಲ್ಲಿ ಪ್ರತಿನಿದಿಸುತ್ತಿದ್ದರೂ ಕನ್ನಡಿಗರಿಗೆ ದಕ್ಕಬೇಕಾದ ಹಣಕಾಸಿನ ನೆರವು, ಹೊಸ ಹಮ್ಮುಗೆಗಳು ಇಲ್ಲಿಗೆ ಬರಲು ಹತ್ತಾರು ವರುಶಗಳೇ ಸಂದಿವೆ. ದೊಡ್ಡ ನಾಡುಗಳಿಗೆ ಹೋಲಿಸಿದರೆ ಇದು ಅತಿ ಕಡಿಮೆ. ಇನ್ನೂ 12-15 ಆಳ್ವಿಗರನ್ನು ಇಟ್ಟುಕೊಂಡು ಬಲಿಶ್ಟ 40-50 ಆಳ್ವಿಗರನ್ನು ಹೊಂದಿರುವ ನಾಡುಗಳ ಪಯ್ಪೋಟಿ ಎದುರಿಸಿ ಹಣಕಾಸಿನ ನೆರವುಗಳಾಗಲಿ ಇಲ್ಲವೇ ವಿಶೇಶ ಹಮ್ಮುಗೆಗಳಾಗಲಿ ಪಡೆಯುವುದು ಕನಸಿನ ಮಾತೇ ಸರಿ.

ಎಲ್ಲ ಕನ್ನಡಿಗರ ಏಳಿಗೆಗೆ ಇರುವ ದಾರಿಯೆಂದರೆ ಸರೊಜಿನಿ ಮಹಿಶಿ, ಡಾ.ನಂಜುಡಪ್ಪ ವರದಿಗಳನ್ನು ಜಾರಿಯಲ್ಲಿ ತರುವಂತೆ ನಮ್ಮ ಮಂದಿ ಸರ‍್ಕಾರಗಳ ಮೇಲೆ ಬೇಡಿಕೆ ಇಡಬೇಕು. ಗುಜರಾತ್, ಮಹಾರಾಶ್ಟ್ರ, ತಮಿಳುನಾಡುಗಳಲ್ಲಿ ಇರುವಂತೆ ಸ್ತಳೀಯರಿಗೆ ಹೆಚ್ಚಿನ ಕೆಲಸ ಸಿಗುವಂತೆ ಏರ‍್ಪಾಟುಗಳನ್ನು ಮಾಡಿಸಬೇಕು. ಸ್ತಳೀಯ ಕಟ್ಟಳೆ, ಕಟ್ಟುಪಾಡುಗಳು ಇಲ್ಲಿನ ಮಂದಿಗೆ ತಕ್ಕುದುದಾಗಿರುವಂತೆ ಮಾಡುವ ಆಳ್ವಿಗರನ್ನೇ ಆರಿಸಿಬೇಕಾದ ರಾಜಕೀಯ ತಿಳುವಳಿಕೆ ಕನ್ನಡಿಗರು ಮೂಡಿಸಿಕೊಳ್ಳಬೇಕು. ನಮ್ಮ ಹಕ್ಕಿಗಾಗಿ ನಾವು ಒಟ್ಟಾಗಿ ಬೀದಿಗಿಳಿಯಲು ಟೊಂಕ ಕಟ್ಟಿ ನಿಲ್ಲಲೇಬೇಕು. ದುಡಿಮೆ,ಕಲಿಕೆಗಳ ವಿಶಯಗಳಿಗೆ ಬಂದಾಗ ನಾವು ಸಾಕಶ್ಟು ದೂರ ಸಾಗಿದ್ದರೂ ಜಗತ್ತಿನ ಇತರೆ ನಾಡುಗಳ ಹೋಲಿಕೆಯಲ್ಲಿ ತುಂಬಾ ಹಿಂದುಳಿರುವುದು ಅಚ್ಚರಿಯ ಸಂಗತಿ. ದುಡಿಮೆ, ಕಲಿಕೆ ವಿಚಾರವಾಗಿ ಕನ್ನಡಿಗರು ಹೊಸ ಮಾರ‍್ಪಾಡುಗಳನ್ನು ಮಾಡಿಕೊಂಡರೆ ಜಗತ್ತಿನ ಮುಂದುವರೆದ ನಾಡುಗಳ ಪಟ್ಟಿಯಲ್ಲಿ ಕರ‍್ನಾಟಕ ಸೇರುವುದು ಕಂಡಿತ. ಈಗಿರುವ ಕನ್ನಡಿಗರನ್ನು ಹೋಳಾಗಿಸಿದರೆ ಗೋಳೇ ಹೆಚ್ಚು. ಒಂದಾಗಿ ಎಲ್ಲರೂ ಮೇಲೆ ಬರುವ ಯತ್ನವ ಮಾಡೋಣ.

(ಚಿತ್ರ ಸೆಲೆ: ofelon)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: