ಕೊಂಕಣಿಯ ಮೇಲೆ ದೇವನಾಗರಿಯ ಹೊರೆ

– ರತೀಶ ರತ್ನಾಕರ.

midsize

ಹಿಂದಿನ ಕಾಲದಿಂದಲೂ ಜಗತ್ತಿನ ಹಲವಾರು ನುಡಿಗಳು ತಮ್ಮ ಬೆಳವಣಿಗೆಯಲ್ಲಿ ತೊಂದರೆಗಳನ್ನು ಎದುರಿಸಿಕೊಂಡು, ತೊಡಕುಗಳನ್ನು ಸರಿಪಡಿಸಿಕೊಂಡು, ಕಾಲಕ್ಕೆ ತಕ್ಕಂತೆ ಬದಲಾವಣೆಯನ್ನು ಹೊಂದಿ ಉಳಿದುಕೊಂಡು ಬಂದಿವೆ. ಹಿಂದೆ ಅರಸರ ಕಾಲದಲ್ಲಿ ಅರಸರ ಆಡಳಿತ ನುಡಿಯಾಗಿ ಬೆಳೆದುಕೊಂಡು ಬಂದ ನುಡಿಗಳಿಗೆ ಹೆಚ್ಚಿನ ಮನ್ನಣೆ ಸಿಕ್ಕು ಬೆಳೆಯುತ್ತಿದ್ದವು. ಆದರೆ ಈಗ ಮಂದಿಯಾಳ್ವಿಕೆಯ ಕಾಲ ಎಲ್ಲಾ ನುಡಿಗಳಿಗೂ ಒಂದೇ ಬಗೆಯ ಸ್ತಾನಮಾನ ಸಿಗಬೇಕು ಎಂಬ ನಿಯಮದ ಕಾಲ. ಈ ಹೊತ್ತಿನಲ್ಲಿಯೂ ಕೂಡ ಹೆಚ್ಚು ಮಾತನಾಡುವ ಮಂದಿಯಿರುವ ಕನ್ನಡದಂತಹ ನುಡಿಗಳು ಹಲವು ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಜೊತೆಗೆ, ಕಡಿಮೆ ಮಾತನಾಡುವ ಮಂದಿಯಿರುವ ಕೊಂಕಣಿ ಹಾಗು ತುಳುವಿನಂತಹ ನುಡಿಗಳು ಮತ್ತಶ್ಟು ಬಿಕ್ಕಟ್ಟುಗಳನ್ನು ಎದುರಿಸುತ್ತಿವೆ.

ಇತ್ತೀಚೆಗೆ ಕೊಂಕಣಿ ನುಡಿಯು ಎದುರಿಸುತ್ತಿರುವ ಬಿಕ್ಕಟ್ಟನ್ನು ನೋಡಿದರೆ ‘ಎಲ್ಲಾ ನುಡಿಗಳಿಗೂ ಒಂದೇ ಬಗೆಯ ಸ್ತಾನಮಾನ’ ಎಂದು ಹೇಳುವ ಮಂದಿಯಾಳ್ವಿಕೆಯಲ್ಲಿರುವ ಹುಳುಕು ಎದ್ದು ಕಾಣುತ್ತದೆ. ಕೊಂಕಣಿ ನುಡಿಯು ಗೋವಾದ ಆಡಳಿತ ನುಡಿಯಾಗಿದೆ, ಇದಲ್ಲದೇ ಕರ‍್ನಾಟಕದ ಕರಾವಳಿ, ಕೇರಳದ ಕೆಲವು ಬಾಗಗಳಲ್ಲಿ ಮತ್ತು ಮಹಾರಾಶ್ಟ್ರದ ಹಲವು ಬಾಗಗಳಲ್ಲಿ ಹೆಚ್ಚು ಕೊಂಕಣಿ ನುಡಿಯಾಡುವ ಮಂದಿ ಇದ್ದಾರೆ. ಕೊಂಕಣಿ ನುಡಿಯನ್ನು ಕನ್ನಡ, ರೋಮನ್, ಮಲಯಾಳ೦, ದೇವನಾಗರಿ ಮತ್ತು ಪರ‍್ಸೋಅರಾಬಿಕ್ ಲಿಪಿಗಳಲ್ಲಿ ಬರೆಯಲಾಗುತ್ತದೆ. ಕನ್ನಡ, ರೋಮನ್ ಮತ್ತು ದೇವನಾಗರಿ ಲಿಪಿಗಳಲ್ಲಿ ಹೆಚ್ಚಿನ ಕೊಂಕಣಿ ನಲ್ಬರಹದ ಹುಟ್ಟು ನಡೆಯುತ್ತಿದೆ. ಅದರಲ್ಲೂ ಕನ್ನಡ ಲಿಪಿಯಲ್ಲಿ ಅತಿ ಹೆಚ್ಚು ನಲ್ಬರಹ ಬರೆಯಲಾಗುತ್ತಿದೆ, ಎರಡನೇ ಸ್ತಾನ ರೋಮನ್ ಹಾಗು ಮೂರನೆಯ ಜಾಗ ದೇವನಾಗರಿಯ ಲಿಪಿಯದ್ದಾಗಿದೆ.

ಹೀಗಿರುವಾಗ ಕೇಂದ್ರ ಸರಕಾರವು ಕೊಂಕಣಿಗೆ ದೇವನಾಗರಿ ಲಿಪಿಯೇ ಅದಿಕ್ರುತ ಲಿಪಿ ಎಂದು ಹೇಳಿ, ಕೊಂಕಣಿ ನುಡಿಯಾಡುಗರಿಗೆ ಒತ್ತಾಯ ಮತ್ತು ಆಮಿಶಗಳಿಂದ ದೇವನಾಗರಿ ಲಿಪಿಯನ್ನು ಬಳಸುವಂತೆ ಹೇರಿಕೆ ಮಾಡಲಾಗುತ್ತಿದೆ. ಎತ್ತುಗೆಗೆ, ಯಾವುದೇ ಕೊಂಕಣಿ ನಲ್ಬರಹವು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಪರಿಗಣನೆ ಆಗಬೇಕು ಎಂದರೆ ಅದು ದೇವನಾಗರಿ ಲಿಪಿಯಲ್ಲಿಯೇ ಇರಬೇಕು. ಕನ್ನಡ, ರೋಮನ್ ಇಲ್ಲವೇ ಇತರೆ ಲಿಪಿಗಳನ್ನು ಬಳಸಿ ಬರೆದಿರುವ ಕೊಂಕಣಿ ನಲ್ಬರಹ ಅಕಾಡೆಮಿ ಪ್ರಶಸ್ತಿಗೆ ಅರ‍್ಹವಾಗಿರುವುದಿಲ್ಲ! ಹೀಗೆ, ಕೊಂಕಣಿ ನುಡಿಯಾಡುಗರ ಮೇಲೆ ದೇವನಾಗರಿ ಲಿಪಿಯ ಹೇರಿಕೆಯನ್ನು ಕೇಂದ್ರ ಸರಕಾರ ಮಾಡುತ್ತಿದೆ.

ಯಾವುದೇ ಒಂದು ನುಡಿಯ ಲಿಪಿ ಆಯ್ಕೆಯನ್ನು ಆ ನುಡಿಯಾಡುವ ಜನಾಂಗದವರು ತೀರ‍್ಮಾನಿಸಬೇಕು. ತಮಗೆ ಸರಿ ಎನಿಸಿದ ಹಾಗು ಕಯ್ಗೆಟುಕುವ ಲಿಪಿಯ ಆಯ್ಕೆಯನ್ನು ಅವರು ಮಾಡಿ ಅದರಲ್ಲಿ ನಲ್ಬರಹ ಒಂದೇ ಅಲ್ಲದೇ ಆ ನುಡಿಯಾಡುಗರ ಕೂಡಣವನ್ನು ಕಟ್ಟಿಕೊಳ್ಳುವ ತೀರ‍್ಮಾನ ಅವರ ಕಯ್ಯಲ್ಲೇ ಇರಬೇಕು. ಅದನ್ನು ಬಿಟ್ಟು ಮೂರನೆಯವರು ಬಂದು ನೀವು ದೇವನಾಗರಿ ಲಿಪಿಯನ್ನೇ ಬಳಸಬೇಕು ಎಂದು ಹೇಳುವುದು ಎಶ್ಟು ಸರಿ? ಇದು ಯಾವ ಬಗೆಯ ಮಂದಿಯಾಳ್ವಿಕೆ? ಕೊಂಕಣಿ ನುಡಿಯವರು ಕನ್ನಡ, ರೋಮನ್, ಮಲಯಾಳಂ ಇಲ್ಲವೇ ದೇವನಾಗರಿ ಯಾವುದರಲ್ಲಾದರು ಬರೆಯಲಿ, ಇಲ್ಲವೇ ಕೊಂಕಣಿಯವರೇ ಒಂದು ಹೊಸ ಲಿಪಿಯನ್ನು ಹುಟ್ಟುಹಾಕಿಕೊಳ್ಳಲಿ, ಎಲ್ಲದಕ್ಕೂ ಒಂದೇ ಬಗೆಯ ಸ್ತಾನಮಾನ ನೀಡಬೇಕು. ದೇವನಾಗರಿಯಲ್ಲಿ ಬರೆದರೆ ಮಾತ್ರ ನಿನಗೆ ಸವಲತ್ತುಗಳು ಸಿಗುವುದು ಎಂಬ ಶರತ್ತನ್ನು ಹಾಕಿ ಒಂದು ನುಡಿಯಾಡುವ ಮಂದಿಯ ಮೇಲೆ ಲಿಪಿಯ ಹೇರಿಕೆ ಮಾಡುರುವುದು ನಿಜವಾಗಿಯೂ ಮಂದಿಯಾಳ್ವಿಕೆಯೇ?

ಈಗಾಗಲೇ ಕರಾವಳಿ ಬಾಗದ ಕೆಲವು ಮಕ್ಕಳು ಕೊಂಕಣಿ ನುಡಿಯನ್ನು ಕನ್ನಡ ಲಿಪಿಯ ಮೂಲಕ ತಮ್ಮ ಕಲಿಕೆಯಲ್ಲಿ ಕಲಿಯುತ್ತಿದ್ದಾರೆ. ದೇವನಾಗರಿ ಲಿಪಿಯ ಹೇರಿಕೆ ಇವರ ಕಲಿಕೆಯ ಮೇಲೆ ನೇರ ಪರಿಣಾಮ ಬೀರಲಿದೆ. ಕೇಂದ್ರ ಸರಕಾರದ ಈ ನಡೆಯ ಮೇಲೆ ಆಗಲೇ ಸಾಕಶ್ಟು ವಿರೋದಗಳು ಬರುತ್ತಿವೆ. ಕನ್ನಡ ಲಿಪಿಯಲ್ಲಿ ಬರುವ ನಲ್ಬರಹಕ್ಕೂ ಮನ್ನಣೆ ಸಿಗಬೇಕು ಎಂದು ಹೋರಾಟಗಳು ನಡೆಯುತ್ತಿವೆ. ಹೋರಾಟದ ಮುಂದಾಳಾಗಿ ಎರಿಕ್ ಒಜಾರಿಯೋ ಅವರು ಕೆಲಸಗಳನ್ನು ಮಾಡುತ್ತಿದ್ದಾರೆ. ಮಂದಿಯಾಳ್ವಿಕೆಯ ಅಡಿಯಲ್ಲಿ ಎಲ್ಲಾ ನುಡಿಗಳಿಗೆ ಮತ್ತು ಲಿಪಿಗಳಿಗೆ ಒಂದೇ ಮನ್ನಣೆ ಸಿಗದಿದ್ದಾಗ ಅದು ಇಂತಹ ಹೋರಾಟಗಳಿಗೆ ದಾರಿಮಾಡಿಕೊಡುತ್ತದೆ. ಹಿಂದಿ ಹಾಗು ದೇವನಾಗರಿ ಲಿಪಿಯ ಹೇರಿಕೆಗಳನ್ನು ಎಡೆಬಿಡದೆ ಮಾಡುತ್ತಿರುವ ಕೇಂದ್ರ ಸರಕಾರ ಮಂದಿಯಾಳ್ವಿಕೆಯ ಹೆಸರನ್ನು ಕೆಡಿಸುತ್ತಿದೆ. ಇದನ್ನು ಕಯ್ ಬಿಟ್ಟು ಎಲ್ಲಾ ನುಡಿ ಹಾಗು ಲಿಪಿಗಳಿಗೆ ಒಂದೇ ಮನ್ನಣೆ ನೀಡಬೇಕು.

(ಚಿತ್ರ ಸೆಲೆ:vinsun)

1 ಅನಿಸಿಕೆ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.