ಆದಿಕವಿ ಪಂಪನಿಗೆ ತಲೆಬಾಗುತ್ತಾ…

– ಹರ‍್ಶಿತ್ ಮಂಜುನಾತ್.

“ಪಸರಿಪ ಕನ್ನಡಕ್ಕೊಡೆಯನೋರ‍್ವನೆ ಸತ್ಕವಿ ಪಂಪನಾವಗಂ” ಅಂದರೆ ವಿಸ್ತಾರವಾದ ಕನ್ನಡಕ್ಕೆಲ್ಲ ಎಂದೆಂದಿಗೂ ಒಬ್ಬನೇ ಒಳ್ಳೆಯ ಕವಿ ಪಂಪ. ಹವ್ದು, ಪಂಪ ಕನ್ನಡದ ಆದಿಕವಿ ಮಾತ್ರವಲ್ಲ ಮಹಾಕವಿ ಕೂಡ. ಅಲ್ಲದೇ ಮಹಾಕವಿ ಪಂಪ ರತ್ನತ್ರಯರಲ್ಲಿ ಮೊಟ್ಟಮೊದಲಿಗನು. ಅವನು ಕನ್ನಡ ಚಂಪೂ ಎಂಬ ನಲ್ಬರಹದ ಬಗೆಯ ದೊರೆ. ಅದಕ್ಕೆ ಆತ ನಾಡೋಜ.

KN0000000001027ಬ್ರಹ್ಮ-ಜಿನ ನಡೆನುಡಿ ಸಂಪನ್ನನಾದ ಪಂಪ ಕ್ರಿ.ಶ. 902ರ ದುಂದುಬಿ ಹೆಸರಿನ ವರುಶದಲ್ಲಿ ಹುಟ್ಟಿದನು. ಪಂಪನ ತಂದೆ ಅಬಿರಾಮದೇವರಾಯ (ಇವರ ಹೆಸರು ಬೀಮಪ್ಪಯ್ಯನೆಂದು ಇತ್ತೀಚಿನ ಅರಕೆಯಲ್ಲಿ ತಿಳಿದುಬಂದರೂ ಸರಿಯಾದ ಸಾಕ್ಶಿಗಳಿಲ್ಲ). ತಾಯಿ ಅಬ್ಬಣಬ್ಬೆ. ಪಂಪನ ತಾಯಿಯ ತವರು ಅಣ್ಣಿಗೆರೆ, ಹಾಗಾಗೀ ಪಂಪನೂ ಕೂಡ ಅಣ್ಣಿಗೆರೆಯಲ್ಲಿ ಹುಟ್ಟಿರಬಹುದೆಂಬ ಅಬಿಪ್ರಾಯಗಳಿವೆ. ಪಂಪನಿಗೆ ಜಿನವಲ್ಲಬ ಎಂಬ ತಮ್ಮನಿದ್ದನು. ಮಾದವ ಸೋಮಯಾಜಿ, ಅಬಿಮಾನಚಂದ್ರ, ಕೋಮರಯ್ಯ ಇವರು ಪಂಪನ ಹಿರಿಯರು. ದೇವೇಂದ್ರ ಸಯ್‍ದ್ದಾಂತಿಕ ಮುನಿಗಳು ಪಂಪನ ಗುರುಗಳು. ನೆಲದಗಲಕ್ಕೆ ದೊರೆಯಂತೆ, ಸ್ವರ‍್ಗಕ್ಕೆ ದೇವೇಂದ್ರನಂತೆ, ಪಾತಾಳಕ್ಕೆ ಆದಿಶೇಶನಂತೆ, ಆಕಾಶಕ್ಕೆ ನೇಸರನಂತೆ ನಲ್ಬರಹದಲ್ಲಿ ಪಂಪ ಹೆಸರುವಾಸಿಯಾಗಿದ್ದಾನೆ. ವೇಲುವಾಡದ ಚಾಲುಕ್ಯ ವಂಶದ ಇಮ್ಮಡಿ ಅರಿಕೇಸರಿಯ ಅರಮನೆಯಲ್ಲಿ ನೆಲೆಯನ್ನು ಪಡೆದಿದ್ದ ಪಂಪನು, ದೊರೆಯಾದ ಅರಿಕೇಸರಿಯ ಅಚ್ಚುಮೆಚ್ಚಿನ ಕವಿ, ಗೆಳೆಯ, ಸೇನಾಪತಿ, ಮಂತ್ರಿ ಎಲ್ಲಾ.

ಪಂಪನ ಕ್ರುತಿಗಳಲ್ಲಿ ಆದಿಪುರಾಣ ಮೊದಲನೆಯದು ಮತ್ತು ಕನ್ನಡದ ಮೊದಲಕಾವ್ಯ ಕೂಡ. ಈ ಕ್ರುತಿಗೆ ಆದಿತೀರ‍್ತಂಕರನಾದ ವ್ರುಶಬನಾತನ ಬದುಕಿನ ಕತೆಯನ್ನು ವಿಶಯವನ್ನಾಗಿ ಬಳಸಿಕೊಳ್ಳಲಾಗಿದೆ. ಹುಟ್ಟು ಸಾವುಗಳಿಂದ ಬಿಡುಗಡೆಗೊಂಡ ಜೀವವೊಂದು ತಾನು ಬದುಕಿದ್ದ ಕಾಲದಲ್ಲಿ ಹಲವು ಅನುಬವಗಳಿಂದ ಹದಗೊಂಡು, ಪಾಪ ಪುಣ್ಯಗಳ ಲೆಕ್ಕಾಚಾರಗಳ ಮೇಲೆ ಸ್ವರ‍್ಗ ಇಲ್ಲವೇ ನರಕದ ದಾರಿ ಹಿಡಿದು, ಮಯ್ಯ ದಾರ‍್ಮಿಕ ಸಂಸ್ಕಾರಗಳ ಬಳಿಕ, ಕ್ರಮ ಕ್ರಮವಾಗಿ ಮೇಲಕ್ಕೇರುತ್ತಾ ಹೇಗೆ ತನ್ನ ಗುರಿಮುಟ್ಟಿತೆಂಬುದನ್ನು ಆದಿಪುರಾಣ ದಾರ‍್ಮಿಕ ಕ್ರುತಿಗಳಲ್ಲಿ ತುಂಬಾ ಮನೋಹರವಾಗಿ ಚಿತ್ರಿಸಿದ್ದಾನೆ. ಬದುಕಿನ ಮವ್ಲ್ಯಗಳು, ನೀತಿ ದರ‍್ಮಗಳು ಕಾವ್ಯಪಾಕದಲ್ಲಿ ಹದಗೊಂಡು ಪರಿಣಾಮಕಾರಿಯಾಗಿ ಬರೆಯಲಾಗಿದೆ. ಆದಿಪುರಾಣದಲ್ಲಿ ಹೇಳಿರುವ ಕತೆ ಕೇವಲ ನೆಪವಾಗಿ ಮನುಶ್ಯ ತನ್ನ ಸಾದನೆಯಿಂದ ಮುಟ್ಟಬೇಕಾದ ತನ್ನೊಳಗಿನ ತಿಳಿವನ್ನು ತೋರುತ್ತದೆ.

ಹತ್ತನೇ ಶತಮಾನ ಕನ್ನಡ ನಲ್ಬರಹದ ಬಂಗಾರದ ಯುಗ. ಆ ಕಾಲದಲ್ಲಿ ಪಂಪ, ರನ್ನ, ಪೊನ್ನ, ನಾಗವರ‍್ಮರಂತಹ ಕವಿಪುಂಗವರು ಕನ್ನಡಕ್ಕೆ ಮೇಲ್ತನ ಮತ್ತು ಗವ್ರವವನ್ನು ತಂದುಕೊಟ್ಟರು. ಇವರೆಲ್ಲರಿಗೂ ಚಂಪೂ ಬಂಗಾರದಂತೆ ಸಿಕ್ಕಿತು. ಆದರೆ ಇವರೆಲ್ಲರ ನಡುವೆ ಪಂಪನು ಚಂಪೂ ನಲ್ಬರಹದ ಕವಿಸಲಗ. ಆನೆ ನಡೆದದ್ದೇ ದೊಡ್ಡ ದಾರಿಯಾಯಿತು. ಅವನು ಚಂಪೂ ಪರಂಪರೆಯನ್ನು ಕಟ್ಟಿದವನಾದ. ಚಂಪೂವು ಮಯ್ದುಂಬಿ ಬೆಳೆದು, ಬೆಳಗಿದ್ದು ಕನ್ನಡದಲ್ಲಿ ಎಂಬುದಕ್ಕೆ ಎರೆಡು ಮಾತಿಲ್ಲ. ಇದಕ್ಕೆ ಪೂರಕವೆಂಬಂತೆ ಮಹಾಕವಿ ಪಂಪ ಆರಂಬದಲ್ಲಿಯೇ ಸಿಕ್ಕಿದ್ದು ಚಂಪೂವಿನ ಅದ್ರುಶ್ಟ. ನಮಗೆ ಇಲ್ಲಿಯವರೆಗೆ ಸಿಕ್ಕಿರುವ ಹಳೆಯ ನಲ್ಬರಹಗಳನ್ನು ಗಮನಿಸಿ ಹೇಳುವುದಾದರೆ ಪಂಪನೇ ಮೊದಲ ಚಂಪೂ ಕವಿ. ಚಂಪೂ ರೂಪಕ್ಕೆ ಗವ್ರವ, ಮೇಲ್ತನ ತಂದುಕೊಟ್ಟ ಪಂಪ ಕನ್ನಡದ ಚಂಪೂ ನೇಸರ. ಪಂಪ ಕನ್ನಡದ ಚಂಪೂಕಾವ್ಯ ಪರಂಪರೆಯ ಹೆದ್ದಾರಿ ಹಾಕಿದ ಮಹಾಕವಿ ಎನಿಸಿಕೊಂಡಿದ್ದರ ಜೊತೆಗೆ ಮುಂದೆ ಕನ್ನಡದ ಜಿನಕವಿಗಳಿಗೆ ಚಂಪೂ ಪಂಪನ ವರದಾನವೆನಿಸಿತು. ಈ ಕಾರಣಕ್ಕಾಗಿಯೇ ಕನ್ನಡದಲ್ಲಿ ಈ ನಲ್ಬರಹ ಪ್ರಕಾರ ಹುಲುಸಾಗಿ ಬೆಳೆಯಿತು.

ಪಂಪನ ಚಂಪೂ ಕಾವ್ಯ ಪ್ರಕಾರಗಳಲ್ಲಿ ಆದಿಪುರಾಣ 16 ಗೀತೆಗಳ ಚಂಪೂ ಕಾವ್ಯ. ಹಾಗೆಯೇ ಪಂಪನ ಇನ್ನೊಂದು ಹೆಸರಾಂತ ಕ್ರುತಿ ವಿಕ್ರಮಾರ‍್ಜುನ ವಿಜಯ. ಇದು 14 ಗೀತೆಗಳ ಚಂಪೂ ಕಾವ್ಯ. ಪಂಪನು ಸಂಸ್ಕ್ರುತದ ವ್ಯಾಸ ಮಹಾಬಾರತದ ಕ್ರುತಿಯನ್ನಾದರಿಸಿ ವಿಕ್ರಮಾರ‍್ಜುನ ವಿಜಯ ಕಾವ್ಯವನ್ನು ಚಂಪೂ ಚಂದಸ್ಸಿನಲ್ಲಿ ಬರೆದಿದ್ದಾನೆ. ಇದು ಆತನ ಮಹಾ ಕಾವ್ಯಗಳಲ್ಲೊಂದು. ಅರಿಕೇಸರಿಯನ್ನು ಅರ‍್ಜುನನಿಗೆ ಹೋಲಿಸಿ ಕತಾನಾಯಕನನ್ನಾಗಿಸಿದ್ದಾನೆ. ಈ ಕಾರಣಕ್ಕಾಗಿಯೇ ಅರಿಕೇಸರಿಯು ಪಂಪನಿಗೆ ದರ‍್ಮಪುರವೆಂಬ ಅಗ್ರಹಾರವನ್ನು ದತ್ತು ನೀಡಿದ್ದ ಎಂಬ ವಿಶಯ ಗಂಗಾದರಂ ಕಲ್ಬರಹದಿಂದ ಸ್ಪಶ್ಟವಾಗಿದೆ. ವಸ್ತು, ಕತೆ, ಪಾತ್ರಗಳನ್ನು ಪರಿವರ‍್ತಿಸಿಕೊಂಡು ತನ್ನದೇ ಆದ ವಿಶಿಶ್ಟ ಶಯ್ಲಿಯಲ್ಲಿ ಹಳಗನ್ನಡ ಬಾಶೆಯಲ್ಲಿ ಈ ಕ್ರುತಿಯನ್ನು ಬರೆದು ಕವಿಚಕ್ರವರ‍್ತಿ ಎಂದು ಬಿರುದು ಪಡೆದಿದ್ದಾನೆ. ಅಲ್ಲದೇ ಕವಿತಾ ಗುಣಾರ‍್ಣವ, ಸಂಸಾರ ಸರೋದಯ ಎಂಬ ಬಿರುದುಗಳು ಪಂಪನಿಗೆ ಸಿಕ್ಕಿತ್ತು. ಹತ್ತನೇ ಶತಮಾನದ ಬದುಕಿನ ಮವ್ಲ್ಯಗಳಾದ ತ್ಯಾಗ ಮತ್ತು ಶವ್ರ್ಯವನ್ನು ವ್ಯಕ್ತಪಡಿಸಲು ಆತ ತನ್ನ ಕಾವ್ಯದೋರಣೆಯನ್ನು ಆಗಮಿಕ ಮತ್ತು ಲವ್ಕಿಕವೆಂದು ವಿಂಗಡಿಸಿಕೊಂಡಿದ್ದನು. ಇದರಲ್ಲಿ ಆದಿಪುರಾಣ ಪಂಪನ ಆಗಮಿಕ ಕಾವ್ಯ. ಮತ್ತು ವಿಕ್ರಮಾರ‍್ಜುನ ವಿಜಯ ಲವ್ಕಿಕ ಕಾವ್ಯ.

ಹೀಗೆ ಅಪಾರ ಕೀರ‍್ತಿ, ಸಂಪತ್ತು, ಪ್ರತಿಶ್ಟೆ, ಸನ್ಮಾನಗಳನ್ನು ಪಡೆದು ಗವ್ರವಾದರಗಳಿಂದ ಬಾಳಿ ಇಂದಿಗೂ ಹೆಸರುಳಿಸಿಕೊಂಡಿರುವ ಪಂಪನ ಬದುಕು ನಮಗೆಲ್ಲರಿಗೂ ಮಾದರಿ. ಕನ್ನಡ ನಲ್ಬರಹ ಸಂಪತ್ತನ್ನು ಚೆನ್ನಾಗಿ ಬೆಳೆಸಿ ಕನ್ನಡಿಗರ ಪಾಲಿಗೆ ವರವಾಗಿರುವ ಪಂಪನಿಗೆ ನಾವು ತಲೆಬಾಗಿ ನಮಸ್ಕರಿಸಬೇಕು.

(ಚಿತ್ರ ಸೆಲೆ: 1st-name)

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. cennaagide, harshit!
    kannadada hosa tirulgannadadalli intaa barahagalu hulusaagi heccu heccu baruvavantaagali!

    • ದನ್ಯವಾದಗಳು ಗಿರಿದರ ಅವರೆ, ಕಂಡಿತವಾಗಿ ಮುಂದೆಯು ಇಂತಾ ಬರಹಗಳನ್ನು ಬರೆಯಲು ಪ್ರಯತ್ನಿಸುತ್ತೇನೆ.

ಅನಿಸಿಕೆ ಬರೆಯಿರಿ:

%d bloggers like this: