ಹೊಳೆಕಟ್ಟಿನ ಕತೆ

ಸಿ.ಪಿ.ನಾಗರಾಜ

2011_3_20_1_survey

ಹೊಳೆಯ ದಂಡೆಯಲ್ಲಿರುವ ಒಂದು ಊರು. ಇದು ಇಡೀ ಜಿಲ್ಲೆಯಲ್ಲೇ ಹೆಸರುವಾಸಿಯಾದ ಯಾತ್ರಾಸ್ತಳ. ದಂಡೆಯ ಮೇಲಿರುವ ಇಲ್ಲಿನ ಪುರಾತನ ದೇಗುಲ ಮತ್ತು ದೇವರ ಬಗ್ಗೆ ಜನಮನದಲ್ಲಿ ಅಪಾರವಾದ ಒಲವು ಮತ್ತು ನಂಬಿಕೆಗಳಿವೆ. ವರುಶದ ಎಲ್ಲಾ ಕಾಲದಲ್ಲೂ ಜನರು ಇಲ್ಲಿಗೆ ಬರುತ್ತಾರೆಯಾದರೂ, ಶ್ರಾವಣ ಮಾಸದ ಶನಿವಾರಗಳಂದು ಮತ್ತು ಕಾರ‍್ತೀಕ ಮಾಸದ ಸೋಮವಾರಗಳಂದು ನಾಡಿನ ನಾನಾ ಕಡೆಗಳಿಂದ ಸಾವಿರಾರು ಮಂದಿ ಇಲ್ಲಿಗೆ ಬಂದು, ಹೊಳೆಯಲ್ಲಿ ಮಿಂದು ದೇಗುಲದ ಹೊರಾಂಗಣದಲ್ಲಿ ದಿಂಡುರುಳಿ, ಒಳಾಂಗಣದಲ್ಲಿರುವ ದೇವರ ದರುಶನ ಮಾಡಿ ನೆಮ್ಮದಿಯನ್ನು ಪಡೆಯಲು ಹಂಬಲಿಸುತ್ತಾರೆ.
ಈ ಊರಿನಲ್ಲಿದ್ದ ನನ್ನ ಗೆಳೆಯರನ್ನು ನೋಡುವುದಕ್ಕೆಂದು ನಾನು ಚಿಕ್ಕಂದಿನಿಂದಲೂ ಆಗಾಗ್ಗೆ ಇಲ್ಲಿಗೆ ಹೋಗಿ ಬರುತ್ತಿದ್ದೇನೆ. ಈ ಊರಿಗೆ ನಾನು ಮೊದಲ ಬಾರಿ ಹೋದಾಗ, ಸುಮಾರು ಹತ್ತು ಹನ್ನೆರಡು ವರುಶದ ಹುಡುಗನಾಗಿದ್ದೆ. ಅಂದು ನಾನು ಇಲ್ಲಿ ಕಂಡಿದ್ದ ಪ್ರಕ್ರುತಿ ಪರಿಸರದ ಅಂದಚೆಂದ… ನನ್ನ ಮನಸ್ಸಿನ ಪಟಲದ ಮೇಲೆ… ಇಂದಿಗೂ ಅಚ್ಚಳಿಯದಂತೆ ನೆಲೆಗೊಂಡಿದೆ.
ಊರು ಇನ್ನೊಂದು ಪರ‍್ಲಾಂಗ್ ದೂರವಿರುವಂತೆಯೇ, ಹೊಳೆಯ ದಂಡೆಯ ಉದ್ದಕ್ಕೂ ದಾರಿಯ ಒಂದು ಮಗ್ಗುಲಲ್ಲಿ ದಟ್ಟವಾಗಿ ಹಚ್ಚಹಸಿರಿನಿಂದ ಕಂಗೊಳಿಸುತ್ತಿರುವ ತೋಪು ಕಣ್ಣಿಗೆ ಬೀಳುತ್ತದೆ. ಎತ್ತರಕ್ಕೆ ಬೆಳೆದಿರುವ ನೇರಳೆಯ ದೊಡ್ಡದೊಡ್ಡ ಮರಗಳು… ಎಲ್ಲಾ ಕಡೆ ಹಬ್ಬಿಕೊಂಡಿರುವ ಹೊಂಗೆ ಮರಗಳು.. ತೋಪಿನ ಹಲವು ಕಡೆ ದಾಂಗುಡಿಯಿಟ್ಟು ಆವರಿಸಿರುವ ಸೀಗೆ ಮೆಳೆಗಳು.. ಇನ್ನೂ ಹತ್ತಾರು ಬಗೆಯ ಸಣ್ಣಪುಟ್ಟದೊಡ್ಡ ಮರಗಿಡಬಳ್ಳಿಗಳಿಂದ ಕಿಕ್ಕಿರಿದು ತುಂಬಿದ್ದ ಈ ತೋಪಿನಲ್ಲಿ ರವಿಯ ಕಿರಣಗಳು ನೆಲವನ್ನು ತಾಕುತ್ತಿರಲಿಲ್ಲ. ತೋಪಿನ ಪಕ್ಕದಲ್ಲಿ ಸಂಜೆಯ ವೇಳೆ ಸಾಗಿ ಹೋಗುತ್ತಿರುವಾಗ… ಸಾವಿರಾರು ಜೀರುಂಡೆಗಳ ಮೊರೆತದಿಂದ ಹೊರಹೊಮ್ಮುತ್ತಿರುವ ’ಗುಯ್’ಎಂಬ ನಾದ.. ಬೀಸುತ್ತಿರುವ ತಣ್ಣನೆಯ ಗಾಳಿ… ಗಾಳಿಯಲ್ಲಿ ತೇಲಿ ಬರುತ್ತಿರುವ ಬಹು ಬಗೆಯ ಹೂವುಗಳ ಕಂಪು… ನೂರಾರು ಹಕ್ಕಿಗಳ ಚಿಲಿಪಿಲಿ ಹಾಡು… ದಾರಿಹೋಕರ ಮಯ್‌ಮನಗಳಿಗೆ ಅಪಾರವಾದ ಆನಂದವನ್ನು ನೀಡುತ್ತಿದ್ದವು.
ಈ ತೋಪನ್ನು ಊರಿನವರು ’ಹೊಳೆಕಟ್ಟು’ಎಂದು ಕರೆಯುತ್ತಿದ್ದರು. ಮಳೆಗಾಲದಲ್ಲಿ ಹೊಳೆಯು ಮಯ್-ತುಂಬಿಕೊಂಡು ಹುಚ್ಚೆದ್ದು ಹರಿದಾಗ… ಉಕ್ಕೇಳುವ ಹೊನಲಿನ ಹೊಡೆತಕ್ಕೆ ದಡಗಳು ಕೊಚ್ಚಿಹೋಗದಂತೆ ತಡೆಗಟ್ಟಿ… ದಂಡೆಯ ಮೇಲಿದ್ದ ದೇಗುಲವನ್ನು ಮತ್ತು ಊರಿನ ಮನೆಮಟಗಳನ್ನು ಕಾಪಾಡುವುದಕ್ಕೆಂದು… ನೂರಾರು ವರುಶಗಳಿಂದಲೂ ಹಿರಿಯರು ನೆಟ್ಟಿ ಬೆಳೆಸಿ ಆರಯ್ಕೆ ಮಾಡಿಕೊಂಡು ಬಂದಿದ್ದ ಈ ತೋಪನ್ನು ಅನೇಕ ತಲೆಮಾರುಗಳಿಂದಲೂ ಊರಿನ ಜನ ಕಟ್ಟೆಚ್ಚರದಿಂದ ಕಾಪಾಡಿಕೊಂಡು ಬಂದಿದ್ದರು.
ತೋಪಿನೊಳಕ್ಕೆ ಮೇಯಲೆಂದು ದನಕರುಗಳನ್ನಾಗಲಿ ಇಲ್ಲವೇ ಆಡುಕುರಿಗಳನ್ನಾಗಲಿ ಬಿಡುತ್ತಿರಲಿಲ್ಲ. ಹೊಂಗೆಬೀಜ ಮತ್ತು ಸೀಗೆಕಾಯಿಯ ಪಸಲು ಹೆಚ್ಚಾಗಿ ಬಂದ ವರುಶಗಳಲ್ಲಿ ಪಸಲನ್ನು ಹರಾಜು ಹಾಕಿ ಬಂದ ದುಡ್ಡನ್ನು ಊರೊಟ್ಟಿನ ಕೆಲಸಗಳಿಗೆ ಬಳಸಿಕೊಳ್ಳುತ್ತಿದ್ದರು. ಕಡುಬಡವರು ಸತ್ತಾಗ, ಅವರ ಹನ್ನೊಂದನೆಯ ದಿನದ ಕಾರ‍್ಯಕ್ಕೆ ಬೇಕಾದ ಸವುದೆಗಾಗಿ, ತೋಪಿನೊಳಗೆ ಮುರಿದು ಬಿದ್ದಿರುವ ರೆಂಬೆಕೊಂಬೆಗಳನ್ನು ನೀಡುತ್ತಿದ್ದರು. ತೋಪಿನೊಳಗಿನ ಮರಗಿಡಗಳಿಗೆ ಯಾರಾದರೂ ಹಾನಿ ಮಾಡಿದರೆ, ಯಾವುದೇ ಮುಲಾಜಿಲ್ಲದೆ ತಪ್ಪನ್ನು ಮಾಡಿದವರಿಗೆ ದಂಡವನ್ನು ಹಾಕುತ್ತಿದ್ದರು.
ಈ ರೀತಿ ಊರಿನ ಹಿರಿಯರ ಸಾಮಾಜಿಕ ಎಚ್ಚರದ ನಡೆನುಡಿಯಿಂದಾಗಿ ನೂರಾರು ವರುಶಗಳಿಂದ ಉಳಿದುಕೊಂಡು ಬಂದಿದ್ದ ಹೊಳೆಕಟ್ಟು.. ಇತ್ತೀಚಿನ ಹದಿನಯ್ದು – ಇಪ್ಪತ್ತು ವರುಶಗಳಲ್ಲಿ ಈ ಊರಿನಲ್ಲಿ ನಡೆದ ವಿದ್ಯಮಾನಗಳಿಂದ ದೊಡ್ಡದೊಂದು ಗಂಡಾಂತರಕ್ಕೆ ಗುರಿಯಾಗತೊಡಗಿತು.
ಎಲ್ಲಾ ಕಡೆ ಜನಸಂಕ್ಯೆ ಹೆಚ್ಚಾದಂತೆಲ್ಲಾ.. ಬೇರೆಬೇರೆ ಊರುಗಳಿಂದ ದೇಗುಲಕ್ಕೆ ಕಾಲ್ನಡಿಗೆಯಲ್ಲಿ, ಸಯ್ಕಲ್‌ಗಳಲ್ಲಿ, ಎತ್ತಿನ ಬಂಡಿಗಳಲ್ಲಿ, ಜಟಕಾಗಾಡಿಗಳಲ್ಲಿ ಮತ್ತು ಮೋಟಾರುವಾಹನಗಳಲ್ಲಿ ದೇವರ ದರುಶನಕ್ಕೆಂದು ಬರುವವರ ಸಂಕ್ಯೆಯೂ ದಿನೇ ದಿನೇ ಹೆಚ್ಚಾಗತೊಡಗಿತು. ಇದರಿಂದ ಊರೊಳಗಿನ ಇಕ್ಕಟ್ಟಾದ ಬೀದಿಗಳಲ್ಲಿ ಸಂಚಾರದ ದಟ್ಟಣೆಯು ಹೆಚ್ಚಾಗಿ… ಪರಊರುಗಳಿಂದ ದೇವರನ್ನು ನೋಡಲು ಬರುವ ಜನರಿಗೂ ಮತ್ತು ಈ ಊರಿನ ಜನರಿಗೂ ಕಿರಿಕಿರಿಯಾಗತೊಡಗಿತು. ಈ ಸಮಸ್ಯೆಗೆ ಪರಿಹಾರವನ್ನು ಕಂಡುಹಿಡಿಯಲೆಂದು ಒಂದು ದಿನ ಊರಿನ ಕೆಲಮಂದಿ ಹಿರಿಯರು-ಕಿರಿಯರು ಒಂದೆಡೆ ಕುಳಿತು ಮಾತುಕತೆ ನಡೆಸಿದರು. ದೇಗುಲಕ್ಕೆ ಬರುವ ಪರ ಊರುಗಳ ಜನರಾಗಲೀ ಇಲ್ಲವೇ ಅವರ ವಾಹನಗಳಾಗಲೀ ಊರಿನ ಒಳಕ್ಕೆ ಬಾರದೇ… ಊರಿನ ಹೊರವಲಯದಿಂದಲೇ ನೇರವಾಗಿ ದೇಗುಲಕ್ಕೆ ಬಂದು ಹೋಗುವ ದೊಡ್ಡರಸ್ತೆಯೊಂದನ್ನು ಹೊಸದಾಗಿ ಮಾಡಲು ಯೋಜಿಸಿದರು. ಈ ರಸ್ತೆಯು ಹೊಳೆಕಟ್ಟಿನ ನಡುವೆಯೇ ಹಾದು ಬರಬೇಕಿತ್ತು. ಹಳೆಯ ತಲೆಮಾರಿನ ಒಂದಿಬ್ಬರು ಹಿರಿಯರು… ಈ ಯೋಜನೆಯನ್ನೇ ಕಯ್-ಬಿಡುವಂತೆ ಒತ್ತಾಯಿಸುತ್ತಾ-
“ಯಾರಿಗೆ ಏನೇ ತೊಂದರೆಯಾಗಲಿ… ಹೊಳೆಕಟ್ಟಿಗೆ ಮಾತ್ರ ಕಾಲಿಡುವುದು ಬ್ಯಾಡ. ಅದರೊಳಗೆ ರಸ್ತೆ ಬಂದರೆ… ಕಾಲದಿಂದಲೂ ಮಕ್ಕಳಂಗೆ ಕಾಪಾಡಿಕೊಂಡು ಬಂದಿರೂ ಮರಗಿಡಗಳು ಎಕ್ಕುಟ್ಟೋಯ್ತವೆ. ಅವು ನಮ್ಮೂರಿನ ಉಸಿರಿದ್ದಂಗೆ… ಅವ ಕಳ್ಕೊಂಡ್ ಮ್ಯಾಲೆ… ನಾವು ಇದ್ದರೂ ಒಂದೆ… ಸತ್ತರೂ ಒಂದೆ” ಎಂದು ವಾದಿಸಿದರು. ಆದರೆ ಹೊಸರಸ್ತೆಯ ಅನಿವಾರ‍್ಯತೆಯ ಬಗ್ಗೆ ಹೊಸ ತಲೆಮಾರಿನ ಮಂದಿ ಪಟ್ಟುಹಿಡಿದ ಕಾರಣದಿಂದ, ಹಿರಿಯರ ದನಿ ಉಡುಗಿಹೋಯಿತು.
ಹೊಸರಸ್ತೆಯ ನಿರ‍್ಮಾಣ ಕೆಲಸಕ್ಕೆ ಸರ‍್ಕಾರದ ಮಂಜೂರಾತಿಯು ದೊರೆಯುತ್ತಿದ್ದಂತೆಯೇ.. ರಸ್ತೆಯು ಹಾದು ಬರುವ ಎಡೆಯಲ್ಲಿನ ಮರಗಳ ಹರಾಜು ನಡೆಯಿತು. ಮರದ ರುಚಿ ಕಂಡಿದ್ದ ಮರಗಳ್ಳರು.. ಒಂದು ಮರವನ್ನು ಕಡಿಯುವ ಕಡೆ, ಹತ್ತು ಮರಗಳನ್ನು ಕಡಿದರು. ನೋಡನೋಡುತ್ತಿದ್ದಂತೆಯೇ ನೂರಾರು ಮರಗಳು ನೆಲಕ್ಕೆ ಉರುಳಿದವು. ಹೊಸರಸ್ತೆಯ ನಿರ‍್ಮಾಣ ಕಾರ‍್ಯ ಮುಗಿಯುವ ವೇಳೆಗೆ ಹೊಳೆಕಟ್ಟಿನ ಅಂದ ಹಾಳಾಗಿ, ಬೋಳುಬೋಳಾಗಿ ಕಾಣಿಸತೊಡಗಿತು. ದೇಗುಲಕ್ಕೆ ಬಾರಾಮಾರ‍್ಗವಾದ ನಂತರ ದೇವರ ದರುಶನಕ್ಕೆ ಬಂದು ಹೋಗುವ ಜನರ ಸಂಕ್ಯೆಯು ದಿನಗಳು ಉರುಳಿದಂತೆಲ್ಲಾ ಇಮ್ಮಡಿ-ಮುಮ್ಮಡಿ-ನಾಲ್ವಡಿಗೊಂಡಿದ್ದನ್ನು ಕಂಡು, ಊರಿನ ಹೊಸ ತಲೆಮಾರಿನ ತಲೆಯಾಳುಗಳು ರೋಮಾಂಚಿತರಾದರು. ತಮ್ಮೂರಿನ ದೇವರ ಕೀರ‍್ತಿಪತಾಕೆಯನ್ನು ಮತ್ತಶ್ಟು ಎತ್ತಿ ಹಿಡಿಯುವ ಕನಸುಗಳನ್ನು ಕಾಣತೊಡಗಿದರು.
ಈ ನಡುವೆ ಹೊಳೆಕಟ್ಟಿನ ಬಗ್ಗೆ ಊರಿನ ಹಿರಿಯರಿಗಿದ್ದ ಹಿಡಿತ ಸಡಿಲಗೊಂಡು, ಅದರೊಳಕ್ಕೆ ಊರಿನ ಕೆಲವರು ದನಕರು-ಆಡುಕುರಿಗಳನ್ನು ಬಿಡತೊಡಗಿದರು. ಮತ್ತೆ ಕೆಲವರು ಕಂಡು ಕಾಣದಂತೆ ಅಲ್ಲಲ್ಲಿ ಮರಗಿಡಗಳ ಕೊಂಬೆರೊಂಬೆಗಳನ್ನು ಕಡಿದು ಕೊಂಡೊಯ್ಯತೊಡಗಿದರು. ಈ ರೀತಿ ಇತ್ತೀಚಿನ ವರುಶಗಳಲ್ಲಿ ಹೊಳೆಕಟ್ಟು ಹೇಳುವವರಾಗಲಿ-ಕೇಳುವವರಾಗಲಿ ಇಲ್ಲದೆ ತಬ್ಬಲಿಯಾಯಿತು. ದೊಡ್ಡರಸ್ತೆಯಾದ ಒಂದೆರಡು ವರುಶಗಳ ನಂತರ ಮತ್ತೊಮ್ಮೆ ಊರಿನ ಹಿರಿಯರು-ಕಿರಿಯರು ಕುಳಿತು, ಹೊಳೆಕಟ್ಟಿನ ಬಗ್ಗೆ ಮಾತುಕತೆ ನಡೆಸಿದರು.
“ಏಕೋ… ಏನೋ… ಹೊಳೆಕಟ್ಟನ್ನು ನಾವು ಮೊದಲಿನಂತೆ ಉಳಿಸಿಕೊಳ್ಳುವುದಕ್ಕೆ ಆಗ್ತಾಯಿಲ್ಲ. ಈಗ ಅಲ್ಲಿ ಅಳಿದು ಉಳಿದಿರುವ ಮರಗಳಲ್ಲಿ ಕೆಲವು ನೇರಲೆಮರಗಳನ್ನು ಬಿಟ್ಟರೆ… ಮುಳ್ಳಿನಮರಗಳೇ ಹೆಚ್ಚಾಗಿವೆ. ಅವೇನು ಅಂತಾ ಬೆಲೆಬಾಳುವ ಮರಗಳಲ್ಲ. ಆದ್ದರಿಂದ ಈಗ ನಾವು ಒಂದು ತರ ಮಾಡೋಣ. ಈಗ ಇರುವ ಮರಗಿಡಗಳನ್ನೆಲ್ಲಾ ಒಮ್ಮಯ್ಯಾಗಿ ಹರಾಜ್ ಹಾಕ್ಬುಟ್ಟು… ಬಂದ ದುಡ್ಡಿನಲ್ಲಿ ತ್ಯಾಗದ ಸಸಿಗಳನ್ನ… ಒಳ್ಳೆಯ ತೆಂಗಿನ ಸಸಿಗಳನ್ನು ತಂದು ಅಚ್ಚುಕಟ್ಟಾಗಿ ನೆಡಿಸಿ, ಮೊದಲಿಗಿಂತ ಒಳ್ಳೆಯ ತೋಪನ್ನು ಬೆಳ್ಸೋಣ” ಎಂದು ಒಬ್ಬರು ತಮ್ಮ ಆಲೋಚನೆಯನ್ನು ಮುಂದಿಟ್ಟರು.
ಆಗ ಹಳೆಯ ತಲೆಮಾರಿಗೆ ಸೇರಿದ ಅಜ್ಜನೊಬ್ಬ ನಡುಗುವ ದನಿಯಲ್ಲಿ-
“ಅಲ್ಲ ಕಣ್ರಪ್ಪ… ಹುಚ್ಚುಹೊಳೆ ನುಗ್ಗಿ ಬಂದಾಗ… ಊರು ಕೊಚ್ಚಿಕೊಂಡು ಹೋಗದೇ ಇರ‍್ಲಿ ಅಂತ… ನಮ್ಮ ಹಿರೀಕರು ಕೊಟ್ಟು ಹೋಗಿರುವ ಹೊಳೆಕಟ್ಟನ್ನು ಹಿಂಗೆ ಹರಾಜು ಮಾಡೋದು ಸರಿಯೇ… ಯೋಚ್ನೆ ಮಾಡಿ ನೋಡ್ರಪ್ಪ ” ಎಂದು ಹೇಳಿದಾಗ, ಅಲ್ಲಿದ್ದ ಒಬ್ಬ ಹರೆಯದವನು ನಗುತ್ತಾ-
“ಅಲ್ಲ ಅಜ್ಜ… ಈಗ ಯಾವ ಹುಚ್ಚುಹೊಳೆ ಬಂದದು ! ಅದೆಲ್ಲಾ ನಿಮ್ಮ ಕಾಲಕ್ಕೆ ಮುಗಿದೋಯ್ತು. ಈಗ ಹುಯ್ಯು ಮಳೇಲಿ ಗುಂಚಕ್ಕಿ ಪುಕ್ಕನೂ ಒದ್ದೆಯಾಗೂದಿಲ್ಲ ” ಎಂದು ಅಣಕವಾಡಿದಾಗ… ನೆರೆದವರಲ್ಲಿ ಕೆಲವರು ಗೊಳ್ ಎಂದು ನಕ್ಕರು. ಈಗ ಒಬ್ಬ ಎದ್ದು ನಿಂತು ಗಂಬೀರವಾದ ದನಿಯಲ್ಲಿ ಮಾತನಾಡತೊಡಗಿದ.
“ನೋಡಿ… ಇದ್ದ ಮರಗಿಡಗಳನ್ನೇ ಉಳಿಸಿಕೊಳ್ಳುವುದಕ್ಕೆ ಆಗದೇ ಇರುವ ನಾವು.. ಇನ್ನು ಹೊಸದಾಗಿ ಸಸಿಗಳನ್ನು ನೆಟ್ಟು… ತೋಪು ಬೆಳಿಸ್ತೀವಿ ಅನ್ನೋದೆಲ್ಲಾ ಹೊತ್ತೋಗದ ಮಾತು. ಇನ್ನು ಹೊಳೆಕಟ್ಟಿನ ಆಸೆಯ ನಾವೆಲ್ಲಾ ಬುಟ್ಬುಡ್ಮ. ಈಗ ಎಲ್ಲಾ ಪವಿತ್ರ ತೀರ‍್ತಕ್ಶೇತ್ರಗಳಲ್ಲೂ ದೇವರುಗಳ ಮಯ್-ಮೇಲೆ ಚಿನ್ನಬೆಳ್ಳಿವಜ್ರದ ಒಡವೆಗಳನ್ನು ಮಾಡ್ಸಾಕಿ… ನೋಡೋಕೆ ಎರಡು ಕಣ್ಣು ಸಾಲ್ದಂಗೆ… ದೊಡ್ಡದಾಗಿ ಪೂಜೆ ಮಾಡಿಸ್ತಾವ್ರೆ… ಅಂತಾದ್ದರಲ್ಲಿ ಆರ‍್ಸಿಯಿಂದಲೂ ಇಶ್ಟೊಂದು ಹೆಸರುವಾಸಿಯಾಗಿರುವ ನಮ್ಮೂರ ದೇವರ ಮಯ್-ಮೇಲೆ ಮೂರ‍್ಕಾಸಿನ ಚಿನ್ನದ ಒಡವೆಯಿಲ್ಲ. ಈಗಿರೂ ಹೊಳೆಕಟ್ಟನ್ನು ಹರಾಜು ಹಾಕಿ ಬಂದ ದುಡ್ನಲ್ಲಿ ನಮ್ಮ ಅಮ್ಮನವರಿಗೆ ಒಂದು ಚಿನ್ನದ ಪದಕ ಮಾಡ್ಸಾಕಿ ಪುಣ್ಯವನ್ನಾದರೂ ಕಟ್ಟಿಕೊಳ್ಳೋಣ” ಎಂದು ಸಲಹೆ ನೀಡಿದ. ಅಲ್ಲಿದ್ದ ಜನರಲ್ಲಿ ಬಹುತೇಕ ಮಂದಿಗೆ ಇವನ ಮಾತು ಮೆಚ್ಚುಗೆಯಾಯಿತು. ಮತ್ತೆ ಹರಾಜು ನಡೆಯಿತು. ಹೊಳೆಕಟ್ಟಿನಲ್ಲಿ ಅಳಿದು ಉಳಿದಿದ್ದ ಮರಗಿಡಗಳು ಬುಡಸಮೇತ ಕಣ್ಮರೆಯಾದವು.
ಅಂದು ಹಚ್ಚಹಸಿರಿನ ಸಿರಿಯಿಂದ ಕಂಗೊಳಿಸುತ್ತಾ.. ತನ್ನ ಪರಿಸರದಲ್ಲಿದ್ದ ಸಾವಿರಾರು ಮಂದಿ ಮಾನವರಿಗೆ, ಲೆಕ್ಕವಿಲ್ಲದಶ್ಟು ಹುಳಹುಪ್ಪಟೆಗಳಿಗೆ ಮತ್ತು ಪ್ರಾಣಿಪಕ್ಶಿಗಳಿಗೆ ಜೀವದಾತುವಾಗಿದ್ದ ಹೊಳೆಕಟ್ಟಿನ ಜಾಗದಲ್ಲಿ.. ಇಂದು ಎತ್ತ ನೋಡಿದರೆ ಅತ್ತ… ಹೊಳೆಯ ಎದೆಬಗೆದು ಮರಳನ್ನು ತೋಡಿ ತೆಗೆದಿರುವ ಗುಂಡಿಗಳು ಕಾಣುತ್ತಿವೆ.

(ಚಿತ್ರ: vbnewsonline.com)Categories: ನಲ್ಬರಹ

ಟ್ಯಾಗ್ ಗಳು:, , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s