ಸಿರಿತನ ಮತ್ತು ಹಿರಿತನದ ’ಮರ‍್ಸಿಡಿಸ್ ಬೆಂಜ್’

– ಜಯತೀರ‍್ತ ನಾಡಗವ್ಡ.

mercedes-benz-three-pointed-star-illuminated

ಮರ‍್ಸಿಡಿಸ್ ಬೆಂಜ್ ಎಂದ ಕೂಡಲೇ ನಮ್ಮ ಕಣ್ಮುಂದೆ ಬರುವ ತಿಟ್ಟ ದುಬಾರಿ ಅಂದದ ಉದ್ದನೇಯ ಕಾರುಗಳು. ಬಾರತದಂತ ದೇಶಗಳಲ್ಲಿ ಮರ‍್ಸಿಡಿಸ್ ಕಾರು ಹೊಂದಿರುವುದೇ ಒಂದು ಹೆಮ್ಮೆಯ ಸಂಗತಿ. ಮರ‍್ಸಿಡಿಸ್ ಬೆಂಜ್ ಕಾರು ಕೂಟ ಹೇಗೆ ಹುಟ್ಟಿಬೆಳೆದು ಇಶ್ಟೊಂದು ಹೆಸರುವಾಸಿಯಾಗಿದೆ ಎಂಬುದರ ಬಗ್ಗೆ ಈ ಬರಹ.

ಮರ‍್ಸಿಡಿಸ್ ಬೆಂಜ್ ಇದು ಡಾಯ್ಮಲರ್‍ ಆಗೆ (Daimler AG) ಸಮೂಹ ಸಂಸ್ತೆಗಳ ಒಂದು ಬಾಗ. ಗಾಟ್ಲೀಬ್ ಡಾಯ್ಮಲರ್‍ 1901 ರಲ್ಲಿ ಕಟ್ಟಿದ ಡಾಯ್ಮಲರ್‍, ಮೋಟೋರೆನ್ ಗೆಸೆಲಶಾಪ್ಟ್ ಕೂಟದ ಪವ್ಲ್ ಡಾಯ್ಮಲರ್‍ ಮತ್ತು ಕಾರ‍್ಲ್ ಬೆಂಜ್ ರವರ ಬೆಂಜ್ ಕೂಟ ಒಟ್ಟಾಗಿ ಸೇರಿ ಜೂನ್ 28,1926 ರಲ್ಲಿ ಮರ‍್ಸಿಡಿಸ್ ಬೆಂಜ್ ಕಂಪನಿ ಹುಟ್ಟುಹಾಕಿದರು. 1888ರಲ್ಲಿ ಜಗತ್ತಿನಲ್ಲಿ ಮೊದಲ ತಾನೋಡ ತಯಾರಿಸಿದ ಹೆಗ್ಗಳಿಕೆ ಕಾರ‍್ಲ್ ಬೆಂಜ್ ರವರದು.

table2

ಚಳಕಗಳ ನಾಡು ಮತ್ತು ವಿಶ್ವದ ತಾನೋಡಗಳ ಕಣಜ ಎಂದು ಹೆಸರುಪಡೆದಿರುವ ಜರ‍್ಮನಿ ನಾಡಿನಲ್ಲೇ ಮರ‍್ಸಿಡಿಸ್ ಬೆಂಜ್ ಹುಟ್ಟು ಪಡೆದಿದ್ದು. ಜಗತ್ತಿನಲ್ಲಿ ಹೆಚ್ಚಾಗಿ ಮಾರಾಟಗೊಳ್ಳುವ ವಿಶ್ವದ 3 ಸಿರಿಮೆ ಕಾರು ಕೂಟಗಳಾದ ಅವ್ಡಿ, ಬಿ.ಎಂ.ಡಬಲ್ಯೂ ಜೊತೆ ಮರ‍್ಸಿಡಿಸ್ ಬೆಂಜ್ ಕೂಡ ಸೇರಿದೆ. ಎಲ್ಲ 3 ಕೂಟಗಳು ಜರ‍್ಮನಿ ನಾಡಿನವು ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿ.

ಜಗತ್ತಿನ ಸಿರಿಮೆಯ ಕಾರು ತಯಾರಕ ಕೂಟ ಮರ‍್ಸಿಡಿಸ್ ಜರ‍್ಮನಿಯ ಸ್ಟುಟ್ ಗಾರ‍್ಟ್ (Stuttgart) ನಲ್ಲಿ ಮೂಲನೆಲೆ ಹೊಂದಿದೆ. ಸ್ಟುಟ್ ಗಾರ‍್ಟ್ ನಲ್ಲಿಯೇ ಹೊಸ ಕಾರು, ಬಿಣಿಗೆಗಳ ದೊಡ್ಡ ಅರಕೆಮನೆಯೊಂದನ್ನು ಮರ‍್ಸಿಡಿಸ್ ಕೂಟ ಕಟ್ಟಿಕೊಂಡಿದೆ. ಜರ‍್ಮನಿ ಅಲ್ಲದೇ ಜಗತ್ತಿನ ವಿವಿದ ಕಂಡಗಳಾದ ಅಮೇರಿಕಾ, ಯೂರೋಪ್, ಏಶಿಯಾ ಮತ್ತು ಆಪ್ರಿಕಾದ ಹಲವು ನಾಡುಗಳಲ್ಲಿ ಮರ‍್ಸಿಡಿಸ್ ಬೆಂಜ್ ತನ್ನ ಕಾರ‍್ಕಾನೆಗಳನ್ನು ಹೊಂದಿದೆ. ಅರ‍್ಜೆಂಟೀನಾ, ಬ್ರೆಜಿಲ್, ತೆಂಕಣ ಆಪ್ರಿಕಾ, ಹಂಗೇರಿ, ಆಸ್ಟ್ರಿಯಾ, ಕೆನಡಾ, ಈಜಿಪ್ಟ್, ಪಿನ್ಲ್ಯಾಂಡ್, ಮಲೇಶಿಯಾ, ತಾಯ್ಲೆಂಡ್, ಚೀನಾ, ಸ್ಪೆಯ್ನ್, ಟರ‍್ಕಿ, ಮೆಕ್ಸಿಕೊ, ಬ್ರಿಟನ್, ರಶಿಯಾ, ಅಮೇರಿಕಾ ಮತ್ತು ಬಾರತ ಇವುಗಳಲ್ಲಿ ಪ್ರಮುಕವು.

ಬ್ರಿಟನ್, ಅಮೇರಿಕಾ, ಚೀನಾ ಮತ್ತು ಬಾರತದಲ್ಲಿ ಸ್ತಳೀಯ ಮಾರುಕಟ್ಟೆಗಳಿಗೆ ತಕ್ಕಂತ ಅರಕೆಮನೆಗಳನ್ನು ಕೂಡ ಕಟ್ಟಿ ಅಲ್ಲಿನ ಬೇಡಿಕೆಗಳಿಗೆ ಓಗೊಡುವತ್ತ ಮರ‍್ಸಿಡಿಸ್ ಹೆಜ್ಜೆ ಹಾಕಿದೆ. ಆಟೋಟದ ಮತ್ತು ಪಾರ‍್ಮುಲಾ-1 ಕಾರುಗಳ ಪಾಲುಗಾರಿಕೆಯ ಮರ‍್ಸಿಡಿಸ್-ಮೆಕ್ಲಾರೆನ್ (Mercedes-McLaren)ನ ಅರಕೆ ನಡೆಯುವುದು ಬ್ರಿಟನ್ ನಾಡಿನ ವೋಕಿಂಗ್ ಎಂಬಲ್ಲಿ. ಎಮ್ ಕ್ಲಾಸ್, ಆರ್‍ ಕ್ಲಾಸ್ ಮತ್ತು ಜಿಎಲ್ ಕ್ಲಾಸ್ ಎಂಬ ಆಟೋಟ ಹಲಬಳಕೆ ಮಾದರಿಗಳು ಅಮೇರಿಕಾದ ಅಲಬಾಮಾದಲ್ಲಿ ತಯಾರುಗೊಳ್ಳುತ್ತವೆ.

Large Image (optional)

 

ಮಾಡಿದರೆ ಒಳ್ಳೆಯದಶ್ಟೇ, ಇಲ್ಲದಿದ್ದರೆ ಇಲ್ಲ. (ದಿ ಬೆಸ್ಟ್ ಆರ್‍ ನತಿಂಗ್-The Best or Nothing)

ಎಂದು ಕೂಟದ ಸೆಳೆಸಾಲು ಹೇಳುತ್ತದೆ. ಒಳ್ಳೆಯ ಕಾರು ಮಾಡುತ್ತಲೇ ಜಗತ್ತಿನಲ್ಲಿ ಹೆಸರುಗಳಿಸಿರುವ ಬೆಂಜ್ ತನ್ನ ಮಾತನ್ನು ಉಳಿಸಿಕೊಳ್ಳುತ್ತಲೇ ಬಂದಿದೆ. ನೂರಾರು ವರುಶದ ಹಳಮೆ ಹೊಂದಿರುವ ಮರ‍್ಸಿಡಿಸ್ ಬೆಂಜ್ ಕೂಟ ತಯಾರಿಸಿದ ಪ್ರಮುಕ ಮಾದರಿಗಳು ಹಾಲಿವುಡ್, ಸ್ಯಾಂಡಲ್ವುಡ್ ಸೇರಿದಂತೆ ಜಗತ್ತಿನ ಪ್ರಮುಕ ಚಲನಚಿತ್ರಗಳಲ್ಲಿ ಕೂಡ ಕಾಣಿಸಿಕೊಂಡಿವೆ. 1930-40ರ ನಾಜಿ ಹೊತ್ತಿನಲ್ಲಿ ಮರ‍್ಸಿಡಿಸ್ ಬೆಂಜ್ ಕಾರುಗಳು ಜರ‍್ಮನಿಯ ಎಲ್ಲೆಡೆ ಕಂಡುಬರುತ್ತಿದ್ದವು. ಅಡಾಲ್ಪ್ ಹಿಟ್ಲರ್‍ ಕೂಡ ತನ್ನ ಸಾರಿಗೆಗೆ ಮರ‍್ಸಿಡಿಸ್ ಕಾರುಗಳನ್ನೇ ನೆಚ್ಚಿಕೊಂಡಿದ್ದನಂತೆ. ಹಿಟ್ಲರ್‍ ಸಲುವಾಗಿಯೇ ವಿಶೇಶ ಗುಂಡು ತಾಗದಂತ ಗಾಜು ಬಳಸಿ ಕಾರು ತಯಾರಿಸಿ ಕೊಡಲಾಗಿತ್ತು.

1954-55 ರ ಹೊತ್ತಿನಲ್ಲಿ ಪಾರ‍್ಮುಲಾ ಕಾರುಗಳ ಹಣಾಹಣಿಯಲ್ಲಿ ಸತತವಾಗಿ ಎರಡು ಬಾರಿ ಗೆದ್ದ ಮರ‍್ಸಿಡಿಸ್ ಮುಂದಿನ ಪಯ್ಪೋಟಿಗಳಿಂದ ಹಿಂದೆಸರಿದು ಅಚ್ಚರಿ ಮೂಡಿಸಿತ್ತು. 1990 ರ ಹೊತ್ತಿಗೆ ಮತ್ತೆ ಪಾರ‍್ಮುಲಾಗೆ ಮರಳಿದ ಮರ‍್ಸಿಡಿಸ್, 1995 ರಿಂದ ಮೆಕ್ಲಾರೆನ್ ಜಿಪಿ ತಂಡದ ಕಾರುಗಳಿಗೆ ತನ್ನ ಬಿಣಿಗೆಗಳನ್ನು ಜೋಡಿಸಿ ಪಾರ‍್ಮುಲಾ-1 ನಲ್ಲಿ ಗೆಲ್ಲುವ ಕಾರು ಆಗಿ ಮಾರ‍್ಪಡಿಸಿತು. ಅಂದಿನಿಂದ ಮೆಕ್ಲಾರೆನ್-ಮರ‍್ಸಿಡಿಸ್ ಜೊತೆಯಾಗಿ ಪಾರ‍್ಮುಲಾ-1 ತಂಡ ಕಟ್ಟಿಕೊಂಡವು. ಪಾರ‍್ಮುಲಾ-1 ಗೆ ಮಾತ್ರ ಸಿಮೀತಗೊಂಡಿದ್ದ ಮೆಕ್ಲಾರೆನ್-ಮರ‍್ಸಿಡಿಸ್ ಕಾರುಗಳನ್ನು ಆಟೋಟದ ಬಳಕೆಗಾಗಿ ಜನರ ಮುಂದಿಡುವ ಮನಸ್ಸು ಮಾಡಿತ್ತು ಮರ‍್ಸಿಡಿಸ್. ಈ ವಿಶಯದಲ್ಲಿ ಒಮ್ಮತ ಮೂಡದ ಕಾರಣ 2009-10 ರಲ್ಲಿ ಮೆಕ್ಲಾರೆನ್ ನಿಂದ ಮರ‍್ಸಿಡಿಸ್ ಬೇರ‍್ಪಟ್ಟು ಅಬುದಾಬಿಯ ಹೊಸ ಪಾಲುದಾರನೊಂದಿಗೆ ಮರ‍್ಸಿಡಿಸ್ ಜಿಪಿ ಎಂಬ ತನ್ನದೇ ಆದ ಪಾರ‍್ಮುಲಾ-1 ತಂಡ ಹುಟ್ಟುಹಾಕಿದೆ.

ವಿಶೇಶ ಮತ್ತು ಹೆಚ್ಚಿನ ಅಳವುತನದ ಕಾರುಗಳನ್ನು ಹೊರತರುವ ಸಲುವಾಗಿ ಎ.ಎಮ್.ಜಿ ಮಾದರಿ ಕಾರಿನ ತಯಾರಿಕೆ 1967 ಆರಂಬಗೊಂಡಿತು. ರೇಸ್ ಒಲವಿಗರಿಗೆ ಹೇಳಿ ಮಾಡಿಸಿದಂತವು ಎ.ಎಮ್.ಜಿ ಕಾರುಗಳು. ಅದಕ್ಕೆಂದೇ ಇತರೆ ಮರ‍್ಸಿಡಿಸ್ ಕಾರುಗಳಿಗಿಂತ ಹೆಚ್ಚು ಸಿರಿತನ, ಅಳವುತನ ನೀಡುವ ವಿಶೇಶ ಬಿಣಿಗೆ ಹೊಂದಿರುತ್ತವೆ. ಈ ಕಾರುಗಳಿಗೆ ವಿಶೇಶ ಬಾಗಿಲುಗಳು, ಮಯ್ಕಟ್ಟುಗಳನ್ನು ನೀಡಲಾಗಿರುತ್ತದೆ.

table1

ಮರ‍್ಸಿಡಿಸ್ ನ ಇತರೆ ಪ್ರಮುಕ ಕಾರುಗಳು ಮೇಬಾಕ್ (Maybach) ಮತ್ತು ಸ್ಮಾರ‍್ಟ್ (Smart). ವಿಲ್ಹೆಲ್ಮ್ ಮೇಬಾಕ್ (Wilhelm Maybach) ಅವರ ಜೊತೆಗೂಡಿ ತಯಾರಿಸಿದ ಹೆಚ್ಚಿನ ಒಯ್ಯಾರದ ಹಾಗೂ ಹಣವಂತರ ಬಳಕೆಗೆ ಮೇಬಾಕ್ ಕಾರುಗಳು ಬಿಡುಗಡೆಗೊಂಡವು. ಮಾರುಕಟ್ಟೆ ಕುಸಿದಿರುವ ಕಾರಣ 2013ರಿಂದ ಮೇಬಾಕ್ ನ ತಯಾರಿಕೆ ನಿಲ್ಲಿಸಲಾಗಿದೆ. ಸ್ಮಾರ‍್ಟ್ ಕಾರುಗಳು ಕಿರುಕಾರು ಕೊಂಡುಕೊಳ್ಳುವರ ಗಮನದಲ್ಲಿರಿಸಿ ತಯಾರಿಸಿದ ಕಾರು. ಕಡಿಮೆ ಅಳತೆಯ ಬಿಣಿಗೆ ಹೊಂದಿರುವ ಇವುಗಳು ಇಬ್ಬರು ಕುಳಿತುಕೊಂಡು ಸಾಗಲು ಮಾತ್ರ ಸಾದ್ಯ. ಡಿಸೇಲ್, ಪೆಟ್ರೋಲ್ ಜೊತೆಗೆ ಬೆರಕೆ ಕಾರಿನ ಮಾದರಿಯಲ್ಲೂ ಸ್ಮಾರ‍್ಟ್ ಕಾರುಗಳು ಕೆನಡಾ, ಅಮೇರಿಕಾ, ಚೀನಾ ಮತ್ತು ಯೂರೋಪ್ ನಲ್ಲಿ ಕಾಣಸಿಗುತ್ತವೆ.

ಡಾಯ್ಮಲರ‍್ ಆಗೆ ವಿವಿದ ಕಾರುಗಳಲ್ಲದೇ ಹಲಬಳಕೆಯ ಚಿಕ್ಕ ಟ್ರಕ್,ವ್ಯಾನ್,ಸರಕು ಸಾಗಣಿಕೆಯ ಮದ್ಯಮ ಮತ್ತು ದೊಡ್ಡ ಗಾತ್ರದ ಟ್ರಕ್ ಅಲ್ಲದೇ ಬಸ್ಸುಗಳನ್ನು ತಯಾರಿಸುತ್ತ ಬಂದಿದೆ. ಟ್ರಕ್ಕುಗಳ ವಿಶಯದಲ್ಲಿ ಡಾಯ್ಮಲರ್‍ ಕೂಟ ಜಗತ್ತಿನಲ್ಲಿಯೇ ಎರಡನೇ ಸ್ತಾನದಲ್ಲಿ ನಿಲ್ಲುತ್ತದೆ.

Daimler group

ಬಾರತದಲ್ಲಿ ಮರ‍್ಸಿಡಿಸ್-ಬೆಂಜ್ ಕೂಟ:
ಮರ‍್ಸಿಡಿಸ್ ಬೆಂಜ್ ಕಾರುಗಳು ಹಲವು ವರುಶಗಳಿಂದ ಬಾರತದಲ್ಲಿ ಮಾರಾಟಗೊಳ್ಳುತ್ತಿವೆ. ಬಾರತದ ಅತಿ ದೊಡ್ಡ ಕೂಟ ಟಾಟಾ 1954 ರ ಹೊತ್ತಿನಲ್ಲಿ ಡಾಯ್ಮಲರ್‍ ಬೆಂಜ್ ನೊಂದಿಗೆ ಪಾಲುಗಾರಿಕೆಯಲ್ಲಿ ಮೊದಲ ಬಾರಿಗೆ ಬಾರತದಲ್ಲಿ ಟ್ರಕ್ ಗಳನ್ನು ಸಿದ್ದಪಡಿಸಿತ್ತು. ಕೆಲವು ವರುಶಗಳ ನಂತರ 1969ರಲ್ಲಿ ಈ ಜೊತೆಗಾರಿಕೆಯಿಂದ ಟಾಟಾ ಮತ್ತು ಬೆಂಜ್ ಸಂಸ್ತೆಗಳು ಬೇರೆಯಾದವು.

ಇದೀಗ ಮರ‍್ಸಿಡಿಸ್ ಬೆಂಜ್ ಬಾರತದ ಎರಡು ಪ್ರಮುಕ ಊರುಗಳಲ್ಲಿ ತನ್ನದೇ ಆದ ಕಾರ‍್ಕಾನೆ ಹೊಂದಿದೆ. ತಮಿಳ್ನಾಡಿನ ಚೆನ್ನಯ್ ಬಳಿಯ ಓರಗಡಮ್ (Oragadam) ನಲ್ಲಿ ಸರಕು ಸಾಗಣಿಕೆಯ ವಿವಿದ ಬಗೆಯ ಟ್ರಕ್ ಮತ್ತು ಬಸ್ಸುಗಳ ತಯಾರಿಕೆ ನಡೆಯುತ್ತಿದೆ. ಇದಕ್ಕೆ ಬಾರತ ಬೆಂಜ್ ಎಂಬ ಹೆಸರು ನೀಡಿ ಬಾರತದ ಗ್ರಾಹಕರನ್ನು ಸೆಳೆಯುತ್ತಿದೆ. ಮಹಾರಾಶ್ಟ್ರದ ಪುಣೆ ಹತ್ತಿರದ ಚಾಕಣ್ (Chakan)ದಲ್ಲಿಯ ಕಾರ‍್ಕಾನೆಯಿಂದ ಮರ‍್ಸಿಡಿಸ್ ಬೆಂಜ್ ನ ಕಾರುಗಳು ಜೋಡಣೆಗೊಂಡು ಹೊರಬರುತ್ತವೆ. ಯೂರೋಪ ಮತ್ತು ಇತರೆ ದೇಶಗಳ ಅರಕೆಗಾರಿಕೆಯ ಕೆಲಸದ ಹೊರೆಯನ್ನು ಹೊರಲು ನಮ್ಮ ಕರ‍್ನಾಟಕದ ನೆಲೆವೀಡು ಬೆಂಗಳೂರಿನಲ್ಲಿ ಮರ‍್ಸಿಡಿಸ್ ಬೆಂಜ್ ಅರಕೆಮನೆ (Mercedes Benz Research & Development India) ಹೊಂದಿದೆ.

(ತಿಟ್ಟಸೆಲೆ: newlaunches.com, www.topgear.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: