ಅಬಯ ರಾಣಿ ಅಬ್ಬಕ್ಕ

ಶಿಲ್ಪಶಿವರಾಮು ಕೀಲಾರ.

unnamed

ಹದಿನಾಲ್ಕನೇ ನೂರೇಡಿನಲ್ಲಿ (ಶತಮಾನ) ಯುರೋಪಿನ ವಾಸ್ಕೋಡ-ಗಾಮ ಯುರೋಪಿನಿಂದ ಇಂಡಿಯಾಕ್ಕೆ ಕಡಲ ದಾರಿಯನ್ನು ಕಂಡುಕೊಂಡ ಮೇಲೆ ಪ್ರೆಂಚರು, ಡಚ್ಚರು, ಪೋರ‍್ಚುಗೀಸರು ಮತ್ತು ಇಂಗ್ಲೀಶರು ಒಬ್ಬೊಬ್ಬರಾಗಿಯೇ ಬಂದು ಹಲವು ನಾಡುಗಳನ್ನು ತಮ್ಮ ವಸಹಾತುಗಳನ್ನಾಗಿ (colonial powers) ಮಾಡಿಕೊಳ್ಳತೊಡಗಿದರು. ದೊರೆಯಾಳ್ವಿಕೆಯಿದ್ದ ಹಲವು ನಾಡುಗಳಲ್ಲಿ ಯುರೋಪಿನವರ ದಾಳಿಗೆ ಸಾಕಶ್ಟು ವಿರೋದಗಳು ಬಂದವು. ತಮ್ಮ ನಾಡಿನ ಮಂದಿಯನ್ನು ಯುರೋಪಿನವರ ಅಡಿಯಾಳುಗಳಾಗಿ ಮಾಡಬಾರದೆಂದು ಹಲವು ರಾಜ-ರಾಣಿಯರು ಹೋರಾಡಿದರು. ಹೀಗೆ ವಸಹಾತುಶಾಹಿಯ (colonial rule) ಎದುರು ಹೋರಾಡಿದ ಹೆಂಗಸರಲ್ಲಿ ಮೊದಲಿಗರು ರಾಣಿ ಅಬ್ಬಕ್ಕ.

ಇವರು ಕರ‍್ನಾಟಕದ ಕರಾವಳಿಯ ಬಾಗವನ್ನು ಆಳುತ್ತಿದ್ದರು. ಪುತ್ತಿಗೆ ಅವರ ಮುಕ್ಯ ರಾಜದಾನಿಯಗಿದ್ದರೆ ಉಲ್ಲಾಳ ಅವರ ನೆರವಿನ ರಾಜದಾನಿ (subsidiary capital). ಇವರ ಆಳ್ವಿಕೆಯಲ್ಲಿದ್ದ ಉಲ್ಲಾಳದ ಸಂಪತ್ತಿನ  ಸೆಳೆತಕ್ಕೆ ಒಳಗಾದ ಪೋರ‍್ಚುಗೀಸರು ಅದನ್ನು ಪಡೆಯಲು ತುಂಬಾ ಸಲ ಪ್ರಯತ್ನಿಸಿದರು. ಆದರವರ ಎಲ್ಲಾ ಪ್ರಯತ್ನಗಳನ್ನು 40 ವರುಶಗಳಿಗೂ ಹೆಚ್ಚಿನ ಕಾಲ ಹಿಮ್ಮೆಟಿಸಿದವರು ಅಬ್ಬಕ್ಕ. ತನ್ನ ಎದೆಗಾರಿಕೆಗೆ ಹೆಸರಾದ ಅಬ್ಬಕ್ಕ ‘ಅಬಯ ರಾಣಿ’ ಎಂದೇ ಹೆಸರುವಾಸಿಯಾಗಿದ್ದರು. ಜಯ್ನ ದಿಗಂಬರರಾದ ಚವ್ಟರು ಅಳಿಯಸಂತಾನ (matrilineal inheritance) ಪದ್ದತಿಯನ್ನು ಪಾಲಿಸುತ್ತಿದ್ದರು. ಅಬ್ಬಕ್ಕರ ಚಿಕ್ಕಪ್ಪ ತಿರುಮಲರಾಯರು, ಅಬ್ಬಕ್ಕನಿಕೆ ಕಾಳಗ ಹಾಗು ಆಳ್ವಿಕೆಗೆ ನೆರವಾಗುವ ವಿದ್ಯೆಗಳನ್ನು ಕಲಿಸಿಕೊಟ್ಟರು ಬಳಿಕ ಅವರಿಗೆ ಪಟ್ಟವನ್ನು ಕಟ್ಟಿದರು. ಮುಂದೆ ಅಬ್ಬಕ್ಕನ ಮದುವೆ ನೆರೆಯ ಮಂಗಳೂರು ರಾಜ್ಯದ ಗಟ್ಟಿಗ ರಾಜ ಲಕ್ಶ್ಮಪ್ಪನವರೊಡನೆ ನಡೆಯಿತು. ಆದರೆ ಈ ಮದುವೆ ಹೆಚ್ಚು ದಿನ ಉಳಿಯಲಿಲ್ಲ.

ಹಿನ್ನಡವಳಿ:
ಗೋವೆಯನ್ನು ಕಬಳಿಸಿದ ನಂತರ ಪೋರ‍್ಚುಗೀಸರ ಗಮನ ಹೋದದ್ದು ಕರ‍್ನಾಟಕದ ತೆಂಕಣ ಕರಾವಳಿಯತ್ತ.  1552 ರಲ್ಲಿ ಅವರು ತೆಂಕಣ ಕರ‍್ನಾಟಕದ ಮೇಲೆ ದಾಳಿ ಮಾಡುವ ಮೂಲಕ ಮಂಗಳೂರಿನ ಬಂದರನ್ನು ಹಾಳುಮಾಡಿದರು. ಆ ಗಳಿಗೆಯಲ್ಲಿ ಉಲ್ಲಾಳ ತುಂಬಾ ಸಂಪನ್ಮೂಲಯುತವಾಗಿತ್ತು. ಅರೇಬಿಯಾ ಮತ್ತು ಇತರ ಪಡುವಣ ನಾಡುಗಳಿಗೆ ಮಸಾಲೆ ಸಾಮಾನುಗಳನ್ನು ಸಾಗಿಸುವ ತಾಣವಾಗಿತ್ತು.  ಸಂಪಾದನೆಯ (profitable) ವ್ಯಾಪಾರಿ ಕೇಂದ್ರವಾದುದರಿಂದ ಇದರ ಮೇಲೆ ಹಿಡಿತ ಪಡೆಯಲು ಒಂದೆಡೆ  ಪೋರ‍್ಚುಗೀಸ್,  ಡಚ್ ಹಾಗು ಬ್ರಿಟಿಶರ ನಡುವೆ ಪಯ್ಪೋಟಿ ನಡೆದಿದ್ದರೆ, ಇನ್ನೊಂದೆಡೆ ಇದನ್ನು ತಲುಪಲು ವಿವಿದ ವ್ಯಾಪಾರ ದಾರಿಗಳ (trade routes) ಹುಡುಕಾಟ ನಡೆದಿತ್ತು.
ಆದರೆ ಸುತ್ತಮುತ್ತಲಿನ ಊರಿನವರ ಒಗ್ಗಟ್ಟಿನಿಂದಾಗಿ ಹೊರಗಿನವರ ಆಸೆ ಕಯ್ಗೂಡಲಿಲ್ಲ. ಹೊರಗಿನವರ ಎದುರು ಸೆಣಸಲು, ಊರೊಳಗಿನವರು ತಮ್ಮ ಜಾತಿ, ದರ‍್ಮಗಳ ನಿಯಮಗಳನ್ನೂ ಮಾರ‍್ಪಡಿಸಿಕೊಂಡರು. ಅಬ್ಬಕ್ಕ ಜಯ್ನ ದರ‍್ಮದವರಾಗಿದ್ದರೂ ಕೂಡ ಅವರ ಆಳ್ವಿಕೆಯಲ್ಲಿ ಹಿಂದೂ ಹಾಗು ಮುಸಲ್ಮಾನರಿಗೆ ಸಮಾನವಾಗಿ ಬಾಗವಹಿಸಲು ಅವಕಾಶ ನೀಡುತ್ತಿದ್ದರು. ಅವರ ಪಡೆ ಎಲ್ಲಾ ಜಾತಿ ದರ‍್ಮದವರನ್ನು ಒಳಗೊಂಡಿತ್ತು. ಅವರು ಕ್ಯಾಲಿಕಟ್ಟಿನ ಜ್ಯಮೊರಿನ್ ಅವರೊಡನೆ ಕೈಜೋಡಿಸುವ ಮೂಲಕ ಪೋರ‍್ಚುಗಿಸರನ್ನು ಸಮುದ್ರದಾಚೆಯೇ ತಡೆಯುವಲ್ಲಿ ಗೆಲುವುಪಡೆದರು. ಆಕೆಗೆ ಬಂಡಿಪುರದ ರಾಜ ವೆಂಕಟಪ್ಪನಾಯಕನ ನೆರವು ಸಿಕ್ಕಿದಮೆಲಂತೂ ಪೋರ‍್ಚುಗೀಸರಿಂದ ಉಳಿದಿದ್ದ ಬೀತಿಯನ್ನು ಕಡೆಗಣಿಸಲು ಸಾದ್ಯವಾಯಿತು.

ಪೋರ‍್ಚುಗೀಸರ ವಿರುದ್ದದ ಕಾಳಗಗಳು:
ಅಬ್ಬಕನರವರ ತಂತ್ರಗಳಿಂದ ಬೇಸತ್ತಿದ್ದ ಪೋರ‍್ಚುಗೀಸರು, ಅಬ್ಬಕ್ಕರವರಿಗೆ ಕಪ್ಪ ನೀಡುವಂತೆ ಬೆದರಿಕೆ ಇಟ್ಟರು. ಈ ಬೆದರಿಕೆಗೆ ಅಬ್ಬಕ್ಕ ಮಣಿಯದೆ ಹೋದಾಗ 1555 ರಲ್ಲಿ ಪೋರ‍್ಚುಗೀಸರು ಅಡ್ಮಿರಲ್ ಡಾಮ್ ಅಲ್ವರೋಡ ಸಿಲ್ವೇರಿಯರನ್ನು ಅಬ್ಬಕ್ಕರ ಎದುರು ದಾಳಿ ಮಾಡಲು ಕಳುಹಿಸಿದರು. ಈ ಕಾಳಗದಲ್ಲೂ ಅಬ್ಬಕ್ಕ ಗೆಲುವನ್ನು ಕಂಡರು. 1557 ರಲ್ಲಿ ಪೋರ‍್ಚುಗೀಸರು ಮಂಗಳೂರಿನ ಮೇಲೆ ದಾಳಿ ಮಾಡಿ ಸೋತ ನಂತರ 1568 ರಲ್ಲಿ ಅವರ ಗಮನ ಉಲ್ಲಾಳದತ್ತ ಹರಿಯಿತು. ಆದರೆ ಈ ಬಾರಿಯು ಅಬ್ಬಕ್ಕ ಇದನ್ನೂ ತಡೆದರು. ನಂತರ ಪೋರ‍್ಚುಗೀಸರ ವಯ್ಸ್ರಾಯ್ ಅಂಟೋನಿಯೋ ನೋರೊಂಹ ಕಳುಹಿಸಿದ ಜನರಲ್ ಜೋಯೋ ಪಿಕ್ಸೋಟೋರ ಮುಂದಾಳತ್ವದ ಕಾಳಗ ಪಡೆ ಉಲ್ಲಾಳವನ್ನು ಆಕ್ರಮಿಸಿತು. ಆದರೆ ಅಲ್ಲಿಂದ ಹೇಗೋ ತಪ್ಪಿಸಿಕೊಂಡ ಅಬ್ಬಕ್ಕ ಒಂದು ಮಸೀದಿಯಲ್ಲಿ ಬಚ್ಚಿಟ್ಟು ಕೊಂಡರು. ಅದೇ ರಾತ್ರಿ ಅಬ್ಬಕ್ಕ 200 ಕಾಳಗ ಪಡೆಯವರನ್ನು ಒಗ್ಗೂಡಿಸಿ ಪೋರ‍್ಚುಗೀಸರ ಮೇಲೆ ಮುತ್ತಿಗೆ ಹಾಕಿದರು. ನಡೆದ ಕಾಳಗದಲ್ಲಿ ಜನರಲ್ ಪಿಕ್ಸೋಟೋರನ್ನು ಸಾಯಿಸಲಾಯಿತು. 70 ಪೋರ‍್ಚುಗೀಸ್ ಕಾಳಗ ಪಡೆಯವರನ್ನೂ ಸೆರೆಹಿಡಿಯಲಾಯಿತು. ಮುಂದೆ ನಡೆದ ದಾಳಿಯಲ್ಲಿ  ಅಬ್ಬಕ್ಕ ಮತ್ತು ಜೊತೆಗಾರರು ಅಡ್ಮಿರಲ್ ಮಸ್ಕಾರೆನ್ಹಾಸ್ ರನ್ನು ಕೊಂದರು. ಇದೆಲ್ಲದರ ಬಳಿಕ ಪೋರ‍್ಚುಗೀಸರ ಬಳಿ ಮಂಗಳೂರಿನ ಕೋಟೆಯನ್ನು ತೊರೆದು ಹೋಗುವುದು ಬಿಟ್ಟು ಬೇರೆ ದಾರಿ ಉಳಿಯಲಿಲ್ಲ.

1569 ರಲ್ಲಿ ಪೋರ‍್ಚುಗೀಸರು ಮತ್ತೆ ಮಂಗಳೂರಿನ ಜೊತೆಯಲ್ಲಿ ಕುಂದಾಪುರವನ್ನೂ ಹಿಡಿತಕ್ಕೆ ತೆಗೆದುಕೊಂಡಿದ್ದರೂ ಅಬ್ಬಕನ ಮೇಲಿದ್ದ ಹೆದರಿಕೆ ಕಡಿಮೆಯಾಗಿರಲಿಲ್ಲ. ರಾಣಿಯಿಂದ ದೂರವಾಗಿದ್ದ ಗಂಡನ ಸಹಾಯದಿಂದ, ಪೋರ‍್ಚುಗೀಸರು ಉಲ್ಲಾಳದ ಮೇಲೆ ಮತ್ತೆ ದಂಡೆತ್ತಿ ಬಂದರು. ಬಿರುಸಾದ ಕದನಗಳ ನಡುವೆಯೂ ತನ್ನ ಹಿಡಿದ ಗುರಿಯನ್ನು ಬಿಡದ ಅಬ್ಬಕ್ಕ, ಪೋರ‍್ಚುಗೀಸ್ ವಿರೋದಿಗಳಾದ ಬಿಜಾಪುರದ ಸುಲ್ತಾನ ಮತ್ತು ಕ್ಯಾಲಿಕಟ್ಟಿನ ಜ್ಯಮೊರಿನ್ ಅವರೊಡನೆ ಕೈಜೋಡಿಸಿದರು. ಜ್ಯಮೊರಿನ್ ರ ಜನರಲ್ ಆದ ಕುಟ್ಟಿ ಪಾರ‍್ಕರ್ ಮಾರ‍್ಕರ್ ಅಬ್ಬಕರ ಬದಲಾಗಿ ಹೋರಾಡಿ ಪೋರ‍್ಚುಗೀಸರ ಮಂಗಳೂರಿನ ಕೋಟೆಯನ್ನು ಊರುಳಿಸಿದರು. ಆದರೆ ಕಾಳಗದಿಂದ ಮರಳುವಾಗ ಪೋರ‍್ಚುಗೀಸರಿಂದ ಕೊಲ್ಲಲ್ಪಟ್ಟರು. ಇವೆಲ್ಲಾ ನಶ್ಟಗಳ ಹಿಮ್ಮಡಿಯಲ್ಲಿ ತನ್ನ ಗಂಡನನ್ನು ಕಳೆದುಕೊಂಡ ಅಬ್ಬಕ್ಕ ಮುಂದಿನ ಕದನದಲ್ಲಿ ಸೋತು ಬಂದನಕ್ಕೊಳಗಾದರು. ಸೆರೆಮನೆಯಲ್ಲೂ ಹಟ ಬಿಡದೆ ಪ್ರತಿಬಟನೆ ಮಾಡಿಯೇ ತೀರಿಹೋದರು.

ಜನಪದ ಮತ್ತು ದಂತಕತೆ:
ಪುರಾತನ ನಂಬಿಕೆಗಳಂತೆ ಅಬ್ಬಕ್ಕ ತನ್ನ ಕಾಲದಲ್ಲಿ ತುಂಬಾ ಹೆಸರುವಾಸಿಯಾದ ರಾಣಿ. ಇಂದಿಗೂ ಅವರ ನೆನಪು ಜನಮನದಲ್ಲಿರುವುದೆ ಇದಕ್ಕೆ ಸಾಕ್ಶಿ. ಅಬ್ಬಕ್ಕನ ಕತೆ ಪೀಳಿಗೆಯಿಂದ ಪೀಳಿಗೆಗೆ ಜನಪದ ಹಾಡು ಹಾಗು ಯಕ್ಶಗಾನಗಳ ಮೂಲಕ ರವಾನಿಸಲಾಗುತ್ತಿದೆ. ಬೂತಕೋಲದಂತ ಕುಣಿತಗಳ ಮೂಲಕ ಇಂದಿಗೂ ಅಬ್ಬಕ್ಕನ ವ್ಯಕ್ತಿತ್ವವನ್ನು ಸಾರಿ ಹೇಳುವ ಕೆಲಸ ಎಡೆಬಿಡದೆ ನಡೆಯುತ್ತಿದೆ. ಈ ಜನಪದ ಕಲೆಗಳಲ್ಲಿ ಅಬ್ಬಕ್ಕನನ್ನು ಕಂದು ಬಣ್ಣವನ್ನು ಹೊಂದಿರುವ ಲಕ್ಶಣವಾದ, ಸರಳ ಉಡುಪು ತೊಡುವ, ತನ್ನ ನಾಡಿದ ಜನಗಳ ಕಾಳಜಿ ಮಾಡುವ, ನ್ಯಾಯಕ್ಕಾಗಿ ಹಗಲು ರಾತ್ರಿ ದುಡಿದ ಹೋರಾಟಗಾತಿ ಎಂದು ಬಿಂಬಿಸಲಾಗುತ್ತಿದೆ. ಕಾಳಗದಲ್ಲಿ ಬೆಂಕಿಯ ಬಾಣಗಳನ್ನು ಬಳಸಿದವರ ಪಯ್ಕಿ ಅಬ್ಬಕ ಕೊನೆಯವರೆಂದು ಜನಪದ ಕತೆಗಳು ಹೇಳುತ್ತವೆ. ಅಬ್ಬಕ್ಕನ ಹಿರಿಮೆಯನ್ನು ಸಾರುವ ಈ ಜನಪದ ಕತೆಗಳ ಪ್ರಕಾರ ಅಬ್ಬಕ್ಕನೊಂದಿಗೆ ಅವರ ಇಬ್ಬರು ವೀರ ಹೆಣ್ಣು ಮಕ್ಕಳೂ ಅವರ ಜೊತೆಯಲ್ಲಿ ಪೋರ‍್ಚುಗೀಸರ ವಿರುದ್ದ ಹೋರಾಡುತ್ತಿದ್ದರು ಎನ್ನಲಾಗುತ್ತದೆ.

ನೆನಪು:
ಅಬ್ಬಕ್ಕರನ್ನು ಉಲ್ಲಾಳದ ಮನ ಮನೆಯಲ್ಲೂ ಇಂದಿಗೂ ನೆನೆಯಲಾಗುತ್ತದೆ. ‘ವೀರ ರಾಣಿ ಅಬ್ಬಕ್ಕ ಉತ್ಸವ’ ವನ್ನು ವರುಶಕ್ಕೊಮ್ಮೆ ಅವರ ನೆನಪಿನಲ್ಲಿ ಆಚರಿಸಿದರೆ ‘ವೀರರಾಣಿ ಅಬ್ಬಕ್ಕ’ ಪ್ರಶಸ್ತಿಯನ್ನು ವೀರಗಾತೆ ಮೊಳಗಿದ ನಾರಿಗೆ ನೀಡಲಾಗುವುದು. ಜನವರಿ 15, 2003 ರಲ್ಲಿ ಬಾರತಿಯ ಅಂಚೆ ಇಲಾಕೆ ರಾಣಿ ಅಬ್ಬಕ್ಕರ ಹೆಸರಿನಲ್ಲಿ ಅಂಚೆ ಹೊದಿಕೆಯನ್ನು ಬಿಡುಗಡೆ ಮಾಡಿದೆ. ಬಜ್ಪೆ ಬಾನೋಡ ನಿಲ್ದಾಣವನ್ನು ಮತ್ತು ಹಡಗುಪಡೆಯಯನ್ನು ರಾಣಿ ಅಬ್ಬಕ್ಕ ನ ಹೆಸರಿಡಬೇಕೆಂಬ ಕೂಗು ಕೇಳಿಬರುತ್ತಿದೆ. ಅಬ್ಬಕ್ಕ ಕಂಚಿನ ಪ್ರತಿಮೆಗಳು ಉಲ್ಲಾಳ ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ ರಾರಜಿಸುತ್ತಿವೆ. ಈಗ ರಾಜ್ಯದ ರಾಜದಾನಿ ಬೆಂಗಳೂರಿನಲ್ಲಿರುವ ಕ್ವೀನ್ಸ್ ರಸ್ತೆಯನ್ನು ‘ರಾಣಿ ಅಬ್ಬಕ್ಕ ದೇವಿ ರಸ್ತೆ ಎಂದು ಬದಲಾಯಿಸಲು ಕರೆ ನೀಡಿಲಾಗಿದೆ. ಬಾರತದ ಮೊದಲ ಸಮುದ್ರ ತಡಿಯ ಗಸ್ತು ಪಡೆ ICGS ಅನ್ನು ರಾಣಿ ಅಬ್ಬಕ್ಕ ಎಂದು ಜನವರಿ 20, 2012 ರಂದು ವಿಶಾಕಪಟ್ಟಣದಲ್ಲಿ ಹೆಸರಿಡಲಾಯಿತು.

ಹೊರಗಿನವರ ದಾಳಿಯ ಎದುರು ಎದೆಗುಂದದೇ ಹೋರಾಡಿ, ನಲವತ್ತು ವರುಶಗಳಶ್ಟು ಕಾಲ ಕನ್ನಡಿಗರನ್ನು ಯುರೋಪಿನವರಿಂದ ಕಾಪಾಡಿದ ವೀರ ಹೆಂಗಸು, ರಾಣಿ ಅಬ್ಬಕ್ಕ ಕನ್ನಡಿಗರ ಎದೆಯಲ್ಲಿ ಎಂದೆಂದಿಗೂ ಅಚ್ಚಳಿಯದೆ ಉಳಿಯಲಿ, ಎಲ್ಲರಿಗೂ ಮಾದರಿಯಾಗಲಿ.

(ಸುದ್ದಿ ಸೆಲೆ: wikipedia )

(ಚಿತ್ರ ಸೆಲೆ: tuluabbakaani)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: