ಮಂದಿಯ ಹಕ್ಕುಗಳಿಗೆ ಒಗ್ಗದ ‘ಮಂದಿಯಾಳ್ವಿಕೆ’ಯ ಸಂವಿದಾನ

ಸಂದೀಪ್ ಕಂಬಿ.

High_Court_of_Karnataka,_Bangalore_MMK

ಅಂಗಡಿ ಮುಂಗಟ್ಟುಗಳ ಹೆಸರುಹಲಗೆಗಳಲ್ಲಿ ಕಡ್ಡಾಯವಾಗಿ ಕನ್ನಡವಿರಬೇಕೆಂಬ ಕರ್‍ನಾಟಕ ಸರಕಾರದ ಕಟ್ಟಲೆಯ ಕುರಿತಾಗಿ ಮೊನ್ನೆ ಕರ್‍ನಾಟಕದ ಮೇಲು ತೀರ್‍ಪುಮನೆಯು ಅದು ಸಂವಿದಾನಕ್ಕೆ ಒಗ್ಗುವುದಿಲ್ಲ ಎಂಬ ತೀರ್‍ಪನ್ನಿತ್ತಿದೆ. ತೀರ್‍ಪುಮನೆಯ ಪ್ರಕಾರ ಇಲ್ಲಿ ಸರಕಾರವು ಸಂವಿದಾನದ 19(1)ನೇ ಕಟ್ಟಲೆಯನ್ನು ಮೀರಿದೆ. ಹಾಗಾಗಿ ಸರಕಾರದ ಈ ಕಟ್ಟಲೆಯು ಸಲ್ಲುವುದಿಲ್ಲ. ತಮ್ಮ ಅಂಗಡಿಯ ಹೆಸರುಹಲಗೆಗಳು ಈಗಾಗಲೇ ಇಂಗ್ಲೀಶಿನಲ್ಲಿದ್ದು, ಕರ್‍ನಾಟಕ ಸರಕಾರದ ಅಪ್ಪಣೆಯಂತೆ ಅವನ್ನೆಲ್ಲ ಕನ್ನಡಕ್ಕೆ ತರಲು ಕೋಟಿಗಟ್ಟಲೆ ಹಣ ಸವೆಯುವುದೆಂದು, ಸರಕಾರದ ಎದುರು ಕೇಸ್ ಹಾಕಿದ್ದ ವೋಡಾಪೋನ್ ಕಂಪನಿಗೆ ಗೆಲುವು ದಕ್ಕಿದೆ. ಅಲ್ಲದೆ ಈ ಕಟ್ಟಲೆಯೇ ಸಲ್ಲುವುದಿಲ್ಲ ಎಂಬ ತೀರ್‍ಪು ಬಂದಿರುವುದರಿಂದ ಇನ್ನು ಮುಂದೆ ಕರ್‍ನಾಟಕದಲ್ಲಿರುವ ಯಾವುದೇ ಅಂಗಡಿಗಳಿಗೆ ಕನ್ನಡದ ಹೆಸರುಹಲಗೆಗಳನ್ನು ಹಾಕುವ ಕಟ್ಟುಪಾಡು ಇರುವುದಿಲ್ಲ.

ಈ ಕಟ್ಟಲೆಯು ಕರ್‍ನಾಟಕದ ಮಂದಿಯ ಅನುಕೂಲಕ್ಕಾಗಿ ಇರುವುದಲ್ಲದೆ, ಇದು ಅವರ ನುಡಿಹಕ್ಕು ಕೂಡ. ಹಾಗಿದ್ದಲ್ಲಿ ಸಂವಿದಾನಕ್ಕೆ ಏಕೆ ಒಗ್ಗುವುದಿಲ್ಲ ಎಂಬ ಗೊಂದಲ ಹುಟ್ಟುವುದು ಸಹಜ. ಆದುದರಿಂದ ಸಂವಿದಾನದ 19(1)ನೇ ಕಟ್ಟಲೆಯನ್ನು ಒಮ್ಮೆ ನೋಡೋಣ. ಈ ಕಟ್ಟಲೆಯ ಪ್ರಕಾರ ಯಾವುದೇ ಬಾರತೀಯನಿಗೆ ಈ ಕೆಳಕಂಡ ಹಕ್ಕುಗಳಿರುತ್ತವೆ.

(i) ಮಾತು ಮತ್ತು ಹೇಳಿಕೊಳ್ಳುವ ಬಿಡುತೆ
(ii) ಕಯ್ದುಗಳಿಲ್ಲದೆ ಶಾಂತಿಯಿಂದ ಒಂದೆಡೆ ಸೇರುವ ಹಕ್ಕು
(iii) ಒಕ್ಕೂಟಗಳನ್ನು ಮತ್ತು ಗುಂಪುಗಳನ್ನು ಮಾಡಿಕೊಳ್ಳುವ ಹಕ್ಕು
(iv) ಯಾವುದೇ ಅಡ್ಡಿಗಳಿಲ್ಲದೆ ಬಾರತದಲ್ಲಿ ಎಲ್ಲೆಡೆ ಓಡಾಡುವ ಹಕ್ಕು
(v) ಬಾರತದ ಯಾವುದೇ ಬಾಗದಲ್ಲಿ ನೆಲೆಸುವ ಹಕ್ಕು
(vi) ಯಾವುದೇ ಬಗೆಯ ಕೆಲಸ ಇಲ್ಲವೇ ವ್ಯಾಪಾರ ಮಾಡುವ ಹಕ್ಕು

ಅಂಗಡಿಯ ಹೆಸರನ್ನು ಕನ್ನಡದಲ್ಲಿ ತೋರಿಸುವುದರಿಂದ ಈ ಮೇಲಿನ ಯಾವ ಕಟ್ಟಲೆಯನ್ನು ಮುರಿದಂತಾಗುತ್ತದೆ ಎಂಬುದು ತಿಳಿಯಾಗದ ವಿಶಯ. ಕನ್ನಡ ಕಡ್ಡಾಯವಾಗಿದ್ದರೂ ಬೇರೆ ನುಡಿಗಳ ಬಳಕೆಗೆ ತಡೆಯೇನೂ ಇಲ್ಲ. ಹಾಗಾಗಿ, ಕನ್ನಡದಲ್ಲಿ ಹೆಸರುಹಲಗೆಗಳನ್ನು ತೋರಿಸುವುದರಿಂದ, ಬೇರೆ ನಾಡಿನ ಬಾರತೀಯನೊಬ್ಬ ಇಲ್ಲಿಗೆ ಬರುವುದಕ್ಕಾಗಲಿ, ಇಲ್ಲಿಗೆ ಬಂದು ನೆಲೆಸುವುದಕ್ಕಾಗಲಿ, ಇಲ್ಲವೇ ಯಾವುದೇ ಕೆಲಸ/ ವ್ಯಾಪದರದಲ್ಲಿ ತೊಡಗುವುದಕ್ಕಾಗಲಿ ಅಡ್ಡಿಗಳು ಆಗುವುದಿಲ್ಲ.

ಇರಲಿ, ತೀರ್‍ಪಿಗೆ ಗವ್ರವವನ್ನಿತ್ತು, ಇದು ಸಂವಿದಾನಕ್ಕೆ ಒಗ್ಗದ ಕಟ್ಟಲೆ ಎಂದಿಟ್ಟುಕೊಳ್ಳೋಣ. ಆದರೆ ಒಂದು ನಿಜವಾದ ಮಂದಿಯಾಳ್ವಿಕೆಯ ಏರ್‍ಪಾಟಿನಲ್ಲಿ ಮಂದಿಯ ಹಕ್ಕುಗಳು, ಅದರಲ್ಲೂ ನುಡಿ ಹಕ್ಕುಗಳನ್ನು ಗಮನಕ್ಕೆ ತೆಗೆದುಕೊಂಡರೆ, ಸಂವಿದಾನದ ಇಂತಹ ಕಟ್ಟಲೆ ಎಶ್ಟರ ಮಟ್ಟಿಗೆ ಸರಿ ಎಂಬ ಕೇಳ್ವಿ ಏಳುತ್ತದೆ. ಹಾಗಾಗಿ ಇದರ ಕುರಿತಾಗಿ ಬಾರ್‍ಸಿಲೋನಾದ ನುಡಿ ಹಕ್ಕುಗಳ ಹೇಳಿಕೆ (Universal Declaration of Linguistic Rights) ಏನು ಹೇಳುತ್ತದೆ ಎಂಬುದನ್ನು ನೋಡೋಣ

50(1) All language communities have the right for their language to occupy a pre-eminent place in advertising, signs, external signposting, and in the image of the country as a whole.

ಅಂದರೆ ಬಯಲರಿಕೆಗಳಲ್ಲಿ, ಹೆಸರುಹಲಗೆಗಳಲ್ಲಿ ಮತ್ತು ಇಡೀ ನಾಡಿನ ಗುರುತನ್ನು ತೋರಿಸುವಲ್ಲಿ ಎಲ್ಲೆಡೆ ತಮ್ಮ ನುಡಿಯು ಮೇಲುಗಾರಿಕೆಯನ್ನು ಹೊಂದಿರುವಂತೆ ಇರಿಸಲು ಎಲ್ಲ ನುಡಿ ಸಮುದಾಯಗಳಿಗೂ ಹಕ್ಕಿರುತ್ತದೆ ಎಂದು ಈ ಕಟ್ಟಲೆ ಹೇಳುತ್ತದೆ. ಆದ್ದರಿಂದ, ವ್ಯಾಪಾರ ನಡೆಸುವ ಅಂಗಡಿಗಳ ಹೆಸರುಹಲಗೆಗಳಲ್ಲಿ ಕನ್ನಡಕ್ಕೆ ಮೇಲುಗಾರಿಕೆ ಸಿಗಬೇಕೆಂಬ ಕರ್‍ನಾಟಕ ಸರಕಾರದ ಕಟ್ಟಲೆಯಲ್ಲಿ ಯಾವುದೇ ತಪ್ಪಿಲ್ಲ. ಇದು ಕನ್ನಡ ನಾಡಿನಲ್ಲಿ ಕನ್ನಡಿಗರ ತಳಮಟ್ಟದ ನುಡಿ ಹಕ್ಕೊಂದನ್ನು ಎತ್ತಿ ಹಿಡಿಯುತ್ತದೆ.

ಹಾಗಾದರೆ ನಮ್ಮ ಸಂವಿದಾನದಲ್ಲಿ ಇಂತಹ ಒಂದು ತಳಮಟ್ಟದ ಹಕ್ಕನ್ನು ಎತ್ತಿ ಹಿಡಿಯುವ ಅವಕಾಶವಿಲ್ಲವೇ? ಇಂತಹ ತೊಡಕುಗಳಿಗೆ ಬಗೆಹರಿಕೆ ಏನು?

ಸಂವಿದಾನದ 8ನೇ ಶೇಡ್ಯೂಲ್ ನಲ್ಲಿ 23 ನುಡಿಗಳನ್ನು ಗುರುತಿಸಲಾಗಿದೆಯಾದರೂ ಮಂದಿಯ ನುಡಿಹಕ್ಕುಗಳನ್ನು ಸಂವಿದಾನವು ಎತ್ತಿ ಹಿಡಿಯುವುದಿಲ್ಲ ಎಂಬುದನ್ನು ಇಲ್ಲಿ ಗಮನಿಸ ಬೇಕಾದ ವಿಶಯ. 343ನೇ ಕಟ್ಟಲೆಯಲ್ಲಿ ರಾಜ ನುಡಿ ಎಂದು ಹಿಂದಿ ನುಡಿಯನ್ನು ವಿಶೇಶ ನೆಲೆಯಲ್ಲಿ ಗುರುತಿಸಲಾಗಿದೆ. ಇದೇ ಕಟ್ಟಲೆಯ ನೆಲೆಯಲ್ಲಿ ಮುಂದೆ 1976ರಲ್ಲಿ ಜಾರಿಯಾದ ರಾಜ ನುಡಿ ಕಟ್ಟಲೆಗಳು ಹಿಂದಿಯ ಈ ಮೇಲುಗಾರಿಕೆಯನ್ನು ಬಾರತ ಒಕ್ಕೂಟದೆಲ್ಲೆಡೆ ಬಳಕೆಗೆ ತರುವ ಇಂಗಿತವನ್ನು ನೆರವೇರಿಸಿದವು. ಒಂದು ನುಡಿಯನ್ನು ಮೇಲೆತ್ತಿ ಮೆರೆಸಲಾಗಿದೆ ಆದರೆ ಬೇರೆ ಯಾವ ನುಡಿಗೂ ಇಂತಹ ಮೇಲುಗಾರಿಕೆ ಇಲ್ಲವೇ ಸಮಾನತೆ ಸಿಕ್ಕಿಲ್ಲ. ಆದುದರಿಂದ, ಮೊದಲನೇ ಹೆಜ್ಜೆಯಾಗಿ, ಒಂದನ್ನು ಬಿಟ್ಟು ಎಲ್ಲ ನುಡಿಗಳನ್ನೂಬದಿಗೊತ್ತುವ ಇಂತಹ ಕಟ್ಟಲೆಗಳಿಗೆ ಸಂವಿದಾನದಲ್ಲಿ ತಿದ್ದುಪಡಿ ತರಬೇಕಾಗಿದೆ.

ಅಲ್ಲದೆ ಇನ್ನೊಂದು ಗಮನಿಸಬೇಕಾದ ವಿಚಾರವೆಂದರೆ ತೀರ್‍ಪಿನ ಪ್ರಕಾರ, ಕರ್‍ನಾಟಕ ಸರಕಾರವು ತನಗೆ ನೀಡಿರುವ ಕಟ್ಟಲೆ ಮಾಡುವ ಹಕ್ಕಿನ ಎಲ್ಲೆಯನ್ನು ಮುರಿದ್ದು, ಹೀಗೆ ಕೊಡಲಾಗಿರುವ ಹಕ್ಕನ್ನು ಅದು ಮೀರುವಂತಿಲ್ಲ. ಇದು ಇಂದು ಬಾರತ ಒಕ್ಕೂಟದಲ್ಲಿ ರಾಜ್ಯಗಳಿಗೆ ಇರುವ ಹಕ್ಕುಗಳನ್ನು ಎತ್ತಿ ತೋರಿಸುತ್ತದೆ. ಒಕ್ಕೂಟದಲ್ಲೇ ಹೆಚ್ಚಿನ ಅದಿಕಾರವಿದ್ದು, ರಾಜ್ಯ ಸರಕಾರಗಳು ಬರಿಯ ಒಕ್ಕೂಟದ ಕಟ್ಟಲೆಗಳನ್ನು, ಹಮ್ಮುಗೆಗಳನ್ನು ನೆರವೇರಿಸುವ ಎಸಗುಸಲಕರಣೆಗಳಾಗಿ ಉಳಿದುಕೊಂಡಿವೆ. ಹೀಗೆ ಒಕ್ಕೂಟದ ನಡುವಲ್ಲಿ ಕೂಡಿಕೊಂಡಿರುವ ಹೆಚ್ಚಿನ ಅದಿಕಾರಗಳು ರಾಜ್ಯಗಳೆಡೆಗೆ ವಾಲಬೇಕಿದೆ. ಹೀಗೆ ಮಾಡುವುದರಿಂದ ಮಂದಿಯ ನುಡಿಹಕ್ಕುಗಳನ್ನು ಕಾಯ್ದಂತಾಗುತ್ತದಲ್ಲದೆ, ಮಂದಿಗೆ ಹೆಚ್ಚು ಹತ್ತಿರವಾಗಿರುವ ರಾಜ್ಯ ಸರಕಾರಗಳು ಕಟ್ಟಲೆಗಳನ್ನು ಮಾಡುವುದರಿಂದ ಮಂದಿಗೆ ಹೆಚ್ಚು ಅನುಕೂಲಕರವಾಗಿರುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: