ನಗೆಪಾಟಲಿಗೆ ಗುರಿಯಾದ ಜನತಂತ್ರ

ಮಹದೇವ ಪ್ರಕಾಶ.

 

ಮತ್ತೆ ಸಾರ‍್ವತ್ರಿಕ ಚುನಾವಣೆ ಬಂದಿದೆ. ಇದು ಬಾರತದ ಹದಿನಾರನೇ ಲೋಕಸಬೆಗೆ ನಡೆಯುತ್ತಿರುವ ಚುನಾವಣೆ. ಜಗತ್ತಿನಲ್ಲಿಯೇ ಇಶ್ಟೊಂದ ದೊಡ್ಡ ಜನತಾಂತ್ರಿಕ ವ್ಯವಸ್ತೆ ಇನ್ನೊಂದಿಲ್ಲ. 1952ರಲ್ಲಿ ನಡೆದ ಲೋಕಸಬಾ ಚುನಾವಣೆಯಲ್ಲಿ ಬಾರತದ ಒಟ್ಟು ಮತದಾರರ ಸಂಕ್ಯೆ 17.3 ಕೋಟಿ. ಈ ಚುನಾವಣೆ ನಡೆದ ಆರು ದಶಕಗಳ ನಂತರ, ಬಾರತದ ಒಟ್ಟು ಮತದಾರರ ಸಂಕ್ಯೆ 81.5 ಕೋಟಿ. ಸಂವಿದಾನ ಗಟನೆಯ ನಂತರ ನಡೆದ ಚುನಾವಣೆಯಲ್ಲಿದ್ದ ಮತದಾರರ ಸಂಕ್ಯೆಗಿಂತ ಅಯ್ದು ಪಟ್ಟು ಅದಿಕ.

ಸದ್ಯ ಜಗತ್ತಿನ ಜನತಾಂತ್ರಿಕ ರಾಶ್ಟ್ರಗಳಾದ ಅಮೇರಿಕಾ, ರಶ್ಯಾ, ಬ್ರೆಜಿಲ್, ಬಾಂಗ್ಲಾದೇಶ ಮತ್ತು ಇಂಡೋನೇಶಿಯಾ ರಾಶ್ಟ್ರಗಳ ಒಟ್ಟು ಮತದಾರರು 74.9 ಕೋಟಿ. ಈ ಅಯ್ದು ರಾಶ್ಟ್ರಗಳ ಒಟ್ಟು ಮತದಾರರ ಸಂಕ್ಯೆಗಿಂತ ಅದಿಕ ಮತದಾರರ ಬಾಹುಳ್ಯ ಹೊಂದಿರುವುದು ಬಾರತದ ವಿಶೇಶ. ಅಮೇರಿಕಾದ 2012ರ ಅದ್ಯಕ್ಶಿಯ ಚುನಾವಣೆಯಲ್ಲಿ ಆ ದೇಶದ ಒಟ್ಟು ಮತದಾರರ ಸಂಕ್ಯೆ 21.9 ಕೋಟಿಯಶ್ಟಿತ್ತು. ಪ್ರಸಕ್ತ ಹಿನ್ನಲೆಯಲ್ಲಿ ವಿಶ್ವದ ಬೇರಾವುದೇ ರಾಶ್ಟ್ರಗಳಿಗೆ ಹೋಲಿಸಿಕೊಂಡು ನೋಡಿದಾಗ ಬಾರತದ ಸಂಸದೀಯ ಪ್ರಜಾಸತ್ತೆಯ ನಿಜಕ್ಕೂ ಅಚ್ಚರಿ ಹುಟ್ಟಿಸುವಂತಹ ಅಗಾದ ಪ್ರಕ್ರಿಯೆ. ಒಂಬತ್ತು ಹಂತಗಳಲ್ಲಿ ಸುಮಾರು ಒಂದು ತಿಂಗಳುಗಳ ಕಾಲ ನಡೆಯುವ ಚುನಾವಣೆಯನ್ನು ನಿರ‍್ವಹಿಸುವುದೇ ಒಂದು ದೊಡ್ಡ ಸವಾಲು. ಸ್ವಾತಂತ್ರ್ಯ ಸಂದ ಆರುವರೆ ದಶಕಗಳ ಅವದಿಯಲ್ಲಿ ಬಾರತದ ಮತದಾರ ಜನತಾಂತ್ರಿಕ ವ್ಯವಸ್ತೆಗೆ ಸಂಪೂರ‍್ಣ ಒಗ್ಗಿ ಹೋಗಿದ್ದಾನೆ. ಬಡತನ ಅನಕ್ಶರತೆ ನಿರುದ್ಯೋಗ ಬಾರತದ ಜನತೆಯನ್ನು ಗಂಬೀರವಾಗಿ ಕಾಡುತ್ತಿರುವ ಸಂದರ‍್ಬದಲ್ಲಿಯೂ ಬಹುಸಂಕ್ಯೆಯ ಮತದಾರರು ಜನತಾಂತ್ರಿಕ ವ್ಯವಸ್ತೆಯಲ್ಲಿ ಪರಮ ವಿಶ್ವಾಸವನ್ನು ವ್ಯಕ್ತಪಡಿಸಿರುವುದು ಗಮನಾರ‍್ಹ.

ಸಂವಿದಾನ ರಚನೆಯ ನಂತರದ ವರುಶಗಳಲ್ಲಿ ಚುನಾವಣೆಯಿಂದ ಚುನಾವಣೆಗೆ, ಚುನಾವಣೆಯ ಪ್ರಕ್ರಿಯಲ್ಲಿ ಬೇರುಬಿಟ್ಟಿರುವ ಲೋಪದೋಶಗಳು ಗಣನೀಯ ಪ್ರಮಾಣದಲ್ಲಿ ನಿವಾರಣೆಯಾಗುತ್ತಿವೆ. ಬ್ಯಾಲೆಟ್ ಪದ್ದತಿಯ ಚುನಾವಣಾ ವ್ಯವಸ್ತೆಗೆ ವಿದಾಯ ಹೇಳಿ ವಿದ್ಯುನ್ಮಾನ ಯಂತ್ರಗಳನ್ನು ಮತದಾನ ಪ್ರಕ್ರಿಯೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ಅಚ್ಚರಿಯೆಂದರೆ ವಿದ್ಯನ್ಮಾನ ಮತದಾನ ಪ್ರಕ್ರಿಯೆ ಅಮೇರಿಕಾದಂತಹ ರಾಶ್ಟ್ರದಲ್ಲಿ ಈವರೆಗೆ ಸಾಕಾರಗೊಂಡಿಲ್ಲ. ಬೋಗಸ್ ಮತದಾರರನ್ನು ನಿಯಂತ್ರಿಸುವ ದ್ರುಶ್ಟಿಯಿಂದ ಬಾರತದ ಎಂಬತ್ತು ಕೋಟಿ ಮತದಾರರಿಗೂ ಅವರ ಬಾವಚಿತ್ರವಿರುವ ಗುರುತಿನ ಚೀಟಿಯನ್ನು ನೀಡಲಾಗಿದೆ.

ಇಡೀ ಚುನಾವಣಾ ವ್ಯವಸ್ತೆಯಲ್ಲಿ ಹಣ, ಹೆಂಡ ಬಳಕೆಯ ಮೇಲೆ ನಿಯಂತ್ರಣ ಸಾದಿಸಲು ಚುನಾವಣಾ ಆಯೋಗ ಪ್ರತ್ಯೇಕ ವಿಚಕ್ಶಣ ದಳವನ್ನು ಚುನಾವಣಾ ಅಕಾಡಕ್ಕೆ ಇಳಿಸುತ್ತಿದೆ. ಹಣ, ಹೆಂಡ ಮತ್ತಿತರ ಆಮಿಶಗಳ ಮೇಲೆ ನೂರಕ್ಕೆ ನೂರರಶ್ಟು ನಿಯಂತ್ರಣ ಸಾದಿಸಲು ಸಾದ್ಯವಾಗದೇ ಹೋದರೂ, ಅದನ್ನು ನಿಯಂತ್ರಿಸುವ ಹಾದಿಯಲ್ಲಿ ಚುನಾವಣಾ ಆಯೋಗ ಸಾಕಶ್ಟು ಯಶಸ್ಸು ಸಾದಿಸಿದೆ. ಇನ್ನು ಚುನಾವಣಾ ಪ್ರಕ್ರಿಯೆಯಲ್ಲಿ ಅಪರಾದಿಗಳು ಪ್ರಬುತ್ವ ಸಾದಿಸುವುದನ್ನು ಕಟ್ಟುನಿಟ್ಟಾಗಿ ನಿಶೇದಿಸಲಾಗಿದೆ. ಎರೆಡು ವರುಶಕ್ಕಿಂತ ಹೆಚ್ಚಿನ ಶಿಕ್ಶೆಗೆ ಗುರಿಯಾದವರಿಗೆ, ಚುನಾವಣೆಯಲ್ಲಿ ಸ್ಪರ‍್ದಿಸಲು ಅವಕಾಶ ನಿರಾಕರಣೆ, ಅಬ್ಯರ‍್ತಿಗಳ ಆಸ್ತಿಪಾಸ್ತಿಯ ವಿವರ ಸಲ್ಲಿಕೆಯಂತಹ ಕಟ್ಟುನಿಟ್ಟಿನ ಕ್ರಮಗಳ ಮೂಲಕ ಚುನಾವಣಾ ಪ್ರಕ್ರಿಯೆ ಹೆಚ್ಚು ಹೆಚ್ಚು ಗುಣಾತ್ಮಕವಾಗಿಸುವ ಪ್ರಯತ್ನ ಚುನಾವಣಾ ಆಯೋಗದಿಂದ ನಿರಂತರವಾಗಿ ನಡೆದಿದೆ.

ಈ ಬಾರಿಯ ಚುನಾವಣೆಯ ಇನ್ನೊಂದು ವಿಶೇಶವೇನೆಂದರೆ None Of The Above ಸೂತ್ರವನ್ನು ಜಾರಿಗೊಳಿಸಿರುವುದು. ಚುನಾವಣಾ ಅಕಾಡದಲ್ಲಿರುವ ಅಬ್ಯರ‍್ತಿಗಳು ಮತದಾರನ ನಿರೀಕ್ಶೆಗೆ ಪೂರಕ ಅರ‍್ಹತೆ ಹೊಂದಿರದಿದ್ದರೆ, ಅಂತಹ ಅಬ್ಯರ‍್ತಿಗಳನ್ನು ತಿರಸ್ಕರಿಸೋ ಹಕ್ಕು (NOTA) ಜಾರಿಗೊಳಿಸಿರುವುದು ನಿಜಕ್ಕೂ ಮೆಚ್ಚುವ ವಿಶಯ. ಯಾವುದೇ ಒಬ್ಬ ಅಬ್ಯರ‍್ತಿ ತನ್ನ ಪ್ರತಿನಿದಿಯಾಗಲು ಅರ‍್ಹ ಅಲ್ಲ ಎಂಬ ನಿಲುವನ್ನು ಮತಪೆಟ್ಟಿಗೆಯ ಮೂಲಕ ಪ್ರದರ‍್ಶಿಸಲು ಅವಕಾಶ ನೀಡಿರುವುದು ಜನತಾಂತ್ರಿಕ ಪ್ರಕ್ರಿಯೆ ಮತ್ತಶ್ಟು ಗಟ್ಟಿಗೊಳ್ಳುವುದಕ್ಕೆ ಪೂರಕವಾಗಿದೆ ಎನ್ನುವುದು ಸ್ಪಶ್ಟ.

ಹೀಗೆ ಚುನಾವಣೆಯಿಂದ ಗಟ್ಟಿಗೊಳ್ಳುತ್ತಿರುವ ಸಂಸದೀಯ ಪ್ರಜಾಸತ್ತೆ, ಬಾರತದಲ್ಲಿ ಅದರ ನಿಜ ಅರ‍್ತದಲ್ಲಿ ಅನಾವರಣಗೊಂಡಿದೆಯೇ…? ಈ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಮಾಡಿದರೆ, ನಿಜಕ್ಕೂ ಬ್ರಮನಿರಸನವಾಗುತ್ತದೆ. ಸ್ವಾತಂತ್ರ್ಯ ಪೂರ‍್ವದಲ್ಲಿ ಬಾರತದಲ್ಲಿ ೫೪೦ಕ್ಕೂ ಹೆಚ್ಚು ದೇಶಿ ಸಂಸ್ತಾನಗಳ ರಾಜ-ಮಹಾರಾಜರು ಆಡಳಿತ ನಡೆಸುತ್ತಿದ್ದರು. ಬ್ರಿಟೀಶರ ದಾಸ್ಯಶ್ರುಂಕಲೆಯಿಂದ ಮುಕ್ತಗೊಂಡ ನಂತರ ರಾಜ-ಮಹಾರಾಜರ ಆಡಳಿತ ಕೊನೆಗೊಂಡಿತ್ತು. ಇಂತಹ ರಾಜ-ಮಹಾರಾಜರ ಆಡಳಿತಕ್ಕೆ ಪ್ರತಿಯಾಗಿ “ಜನರಿಂದ, ಜನರಿಗಾಗಿ, ಜನರಿಗೋಸ್ಕರ” ಎಂಬ ಆಶಯದೊಂದಿಗೆ, ಬಾರತದ ಶ್ರೀಸಾಮನ್ಯನೊಬ್ಬ ಮಂತ್ರಿ, ಮುಕ್ಯಮಂತ್ರಿ, ಪ್ರದಾನಮಂತ್ರಿ ಹುದ್ದೆಗೇರುವ ಅವಕಾಶ ದೊರೆತಿತ್ತು. ಆದರೆ, ಬಾರತ ಗಣರಾಜ್ಯ ಸ್ತಾಪನೆಗೊಂಡ ಆರುವರೆ ದಶಕಗಳ ಅವದಿಯಲ್ಲಿ ಬಾರತದ ಜನತಾಂತ್ರಿಕ ವ್ಯವಸ್ತೆಯಲ್ಲಿ ನವ ಮಹಾರಾಜರ ಶನಿ ಸಂತಾನ ವಿಜ್ರುಂಬಿಸಲಾರಂಬಿಸಿವೆ. ಹಿಂದಿನ ರಾಜ-ಮಹಾರಾಜರುಗಳ ಸ್ತಾನದಲ್ಲಿ ಜನತಂತ್ರದ ಹೆಸರಿನಲ್ಲಿ ಸಂತತಿಯ ಸಾರ‍್ವಬವ್ಮರು ವಿಜ್ರುಂಬಿಸಲಾರಂಬಿಸಿದ್ದಾರೆ. ಇದರ ಜೊತೆಗೆ, ಜನತಾಂತ್ರಿಕ ಪ್ರಕ್ರಿಯೆಯ ಆರಂಬದ ದಿನಗಳಲ್ಲಿ ರಿಮೋಟ್ ಕಂಟ್ರೋಲ್ ಕೆಲಸ ನಿರ‍್ವಹಿಸುತ್ತಿದ್ದ ಬಂಡವಾಳ ಶಾಹಿಗಳು, ಕಾರ‍್ಪೋರೇಟ್ ಸಾಮ್ರ್ಯಾಜ್ಯದ ಚಕ್ರಾದಿಪತಿಗಳು ಈಗ ನೇರ ಚುನಾವಣಾ ಅಕಾಡಕ್ಕಿಳಿದಿದ್ದಾರೆ.

ಇದರಿಂದಾಗಿ “ಜನರಿಂದ, ಜನರಿಗಾಗಿ, ಜನರಿಗೋಸ್ಕರ” ಎನ್ನುವ ಜನತಂತ್ರದ ಗೋಶ ವಾಕ್ಯ ಅರ‍್ತ ಕಳೆದುಕೊಂಡಿದೆ. ಈಗ ಅಸ್ತಿತ್ವದಲ್ಲಿರುವುದು “ಜನರಿಂದ ಸಂತತಿ ಆಡಳಿತದ ವಾರಸುದಾರರಿಗೆ, ಬಂಡವಾಳಶಾಹಿಗಳಿಗೆ ಮಾತ್ರ” ಜನತಂತ್ರ ಎನ್ನುವ ಪರಿಸ್ತಿತಿ. ಸದ್ಯ ರಾಶ್ಟ್ರಮಟ್ಟದಲ್ಲಿ, ರಾಜ್ಯಮಟ್ಟದಲ್ಲಿ ವಿಜ್ರುಂಬಿಸುತ್ತಿರುವ ಸಂತತಿಯ ಸಾರ‍್ವಬವ್ಮರು ಜನತಂತ್ರವನ್ನು ಕಾಲಕಸಕ್ಕಿಂತ ಕಡೆಯಾಗಿ ಕಾಣುತ್ತಿದ್ದಾರೆ. ಜನತಂತ್ರ ಸಂಪೂರ‍್ಣ ನಗೆಪಾಟಲಿಗೀಡಾಗಿದೆ.

(ಈ ಬರಹವು ‘ಬಾನುವಾರ‘ ಸುದ್ದಿಹಾಳೆಯಲ್ಲಿ ಈ ಹಿಂದೆ ಪ್ರಕಟಗೊಂಡಿದೆ)

(ಚಿತ್ರಸೆಲೆ: Hindustantimes)

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: