ವಿಶ್ವಕಾರ‍್ಮಿಕರ ದಿನಾಚರಣೆಯ ಹಳಮೆಯತ್ತ ಒಂದು ಇಣುಕುನೋಟ

– ಹರ‍್ಶಿತ್ ಮಂಜುನಾತ್.

thumb

ಪ್ರತಿ ವರುಶದ ಮೇ 1 ರಂದು ವಿಶ್ವಕಾರ‍್ಮಿಕರ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತದೆ. 2014 ನೇ ವರುಶಕ್ಕೆ “ವಿಶ್ವಕಾರ‍್ಮಿಕರ ದಿನಾಚರಣೆ”ಯು ಪ್ರಾರಂಬವಾಗಿ 128 ವರುಶಗಳು ಕಳೆದಿವೆ. ಈ ದಿನಾಚರಣೆಯ ಹುಟ್ಟಿಗೆ ಕಾರಣ, ಇದರ ಹಳಮೆ ಹಾಗೂ ಇದರ ಸಂದೇಶದ ಸುತ್ತಲಿನ ಒಂದು ಇಣುಕುನೋಟವೇ ಈ ಕಿರುಬರಹ.

ವಿಶ್ವಕಾರ‍್ಮಿಕರ ದಿನಾಚರಣೆಯ ಹುಟ್ಟಿನತ್ತ ಇಣುಕುನೋಟ:
18ನೇ ಶತಮಾನದಲ್ಲಿ ಉಂಟಾದ ಉದ್ಯೋಗದ ಕ್ರಾಂತಿಯ ಪರಿಣಾಮವಾಗಿ ಪ್ರಪಂಚದೆಲ್ಲೆಡೆ ಅದ್ಬುತವಾದ ಪರಿವರ‍್ತನೆ ಉಂಟಾಯಿತು. ಇಡೀ ವಿಶ್ವವೇ ವಿಸ್ಮಯಕಾರಿಯಾಗಿ ನೋಡಿದಂತಹ ಉದ್ಯೋಗದ ಕ್ರಾಂತಿಗೆ ಕಾರಣನಾದವರು, ಸಮಾಜವಾದ ಮತ್ತು ಸಮತಾವಾದದ ಪ್ರವರ‍್ತಕರಾಗಿದ್ದ ಕಾರ‍್ಲ್ ಮಾರ‍್ಕ್ಸ್ ಮತ್ತು ಪ್ರೆಡ್ರಿಕ್ ಎಂಗೆಲ್ಸ್. ಇವರು ಎಂಟು ಗಂಟೆಗಳ ಕೆಲಸದ ದಿನ ಜಾರಿಗೆ ಬರಬೇಕು ಎಂದು ಅನೇಕ ಬರಹಗಳಲ್ಲಿ ತಮ್ಮ ನಿಲುವನ್ನು ತಿಳಿಸಿದ್ದರು. ಈ ನಿಲುವನ್ನು ಬೆಂಬಲಿಸಿದ್ದ ಬಹಳಶ್ಟು ಕಾರ‍್ಮಿಕರು ಮಹತ್ವದ ಬೆಳವಣಿಗೆಯೊಂದರಲ್ಲಿ 1866ರ ಆಗಸ್ಟ್ ನಲ್ಲಿ ಜೆನೀವಾದಲ್ಲಿ ನಡೆದ ಮೊದಲನೆ ಸಬೆಯಲ್ಲಿ ಈ ಕುರಿತು ತೀರ‍್ಮಾನವನ್ನು ಕೂಡ ಕಯ್ಗೊಳ್ಳಲಾಗಿತ್ತು. ವಿಶೇಶವೆಂದರೆ ಅಮೆರಿಕಾದ 60 ಸಂಗಟನೆಗಳಿಗೆ ಸೇರಿದ ಲಕ್ಶಕ್ಕೂ ಅದಿಕ ಕಾರ‍್ಮಿಕರು ಈ ಸಬೆಯಲ್ಲಿ ಬಾಗವಹಿಸಿದ್ದರು. ಹೀಗಾಗಿ ಎಂಟು ಗಂಟೆಗಳ ದಿನದ ಕೆಲಸದ ಬೇಡಿಕೆ ವಿಶ್ವದ ಎಲ್ಲ ಕಾರ‍್ಮಿಕರ ಬೇಡಿಕೆಯಾಗಿ ಬದಲಾಯಿತು.

ಆದರೆ, ಈ ಬೇಡಿಕೆಯನ್ನು ಈಡೇರಿಸಿಕೊಳ್ಳುವುದು ಸುಲಬದ ಮಾತಾಗಿರಲಿಲ್ಲ. ಇದರ ಪಲವಾಗಿ ಅಮೆರಿಕಾದ ಚಿಕಾಗೋ ನಗರದ ಹೇಮಾರ‍್ಕೆಟ್ ಸ್ಕ್ವಯರ್ ನಲ್ಲಿ ನಡೆದ ಹೋರಾಟ, ಜಾಗತಿಕ ಕಾರ‍್ಮಿಕ ಹೋರಾಟಗಳ ಹಳಮೆಯಲ್ಲಿ ಕೆಂಪು ಅಕ್ಶರ ದಿನವಾಗಿ ಬದಲಾಯಿತು. 1886 ಮೇ 1, ಕಾರ‍್ಮಿಕ ಹೋರಾಟಗಳ ಹಳಮೆಯಲ್ಲಿ ಒಂದು ಹೆಚ್ಚುಗಾರಿಕೆಯ ದಿನ. ಅಂದು ಅಮೆರಿಕಾದಲ್ಲಿ ಸುಮಾರು 5 ಲಕ್ಶ ಜನ, 8 ಗಂಟೆಯ ಕೆಲಸದ ದಿನಕ್ಕಾಗಿ ಪ್ರದರ‍್ಶನವನ್ನು ನಡೆಸಿದ್ದರು. ಇವರಲ್ಲಿ ಸುಮಾರು ಎರಡು ಲಕ್ಶ ಜನ ಚಳುವಳಿಯನ್ನು ಹೂಡಿದ್ದರು. ಅಲ್ಲದೇ ಅಂದು ಚಿಕಾಗೋ ನಗರದಲ್ಲೇ 80 ಸಾವಿರ ಕಾರ‍್ಮಿಕರು ಚಳುವಳಿಯನ್ನು ಹೂಡಿದ್ದದ್ದು ಅಲ್ಲಿನ ಸರಕಾರಕ್ಕೆ ಬಹುದೊಡ್ಡ ತೊಂದರೆಯಾಗಿ ಗೋಚರಿಸಿತು. ಚಳವಳಿಯನ್ನು ನಿಲ್ಲಿಸುವ ಸಲುವಾಗಿ ಪ್ರತ್ಯೇಕವಾಗಿ ಕಾಸಗಿ ಗೂಂಡಾ ಕಂಪೆನಿಗಳು ಕಾರ‍್ಮಿಕರ ಮೇಲೆ ದವ್ರ್ಜನ್ಯವನ್ನೂ ನಡೆಸಿದ್ದವು. ಆದರೆ ಇಂತಹ ಬಂಡವಾಳಶಾಹಿಗಳ ದವ್ರ್ಜನ್ಯಕ್ಕೆ ಎದೆಗುಂದದೆ, ಸವಾಲನ್ನು ಎದುರಿಸಿ ಅಮೆರಿಕಾದ ಕಾರ‍್ಮಿಕ ವರ್‍ಗ ಹೋರಾಟಕ್ಕೆ ದುಮುಕಿತ್ತು.

ಹೀಗೆ ಮೇ 1ರಂದು ಪ್ರಾರಂಬಮಾಡಿದ್ದ ಈ ದೊಡ್ಡ ಚಳವಳಿಯನ್ನು ಹತ್ತಿಕ್ಕಲು ಬಂಡವಾಳಶಾಹಿಗಳ ವರ್‍ಗ ಹಾಗೂ ಅಮೆರಿಕಾದ ಸರಕಾರ ಜೊತೆ ಸೇರಿಕೊಂಡಿತು. ಪರಿಣಾಮವಾಗಿ ಮೇ 3ರಂದು ಬಂಡವಾಳಶಾಹಿಗಳು ಈ ಚಳುವಳಿಯನ್ನು ದಾರಿತಪ್ಪಿಸುವ ಉಪಾಯ ಮಾಡಿ, ಚಳುವಳಿಯಲ್ಲಿ ಬಾಗವಹಿಸಿದ್ದ ಒಂದು ಗುಂಪನ್ನು ಇನ್ನಿತರರ ಮೇಲೆ ಸಮರ ಮಾಡಲು ಪ್ರೇರೇಪಿಸಿದ್ದರು. ಈ ಗಲಾಟೆಯನ್ನು ನಿಲ್ಲಿಸುವ ನೆಪಮಾಡಿ, ಪೊಲೀಸರು 6 ಕಾರ‍್ಮಿಕರನ್ನು ಗುಂಡಿಕ್ಕಿ ಕೊಂದಿದ್ದರು.

ಪೊಲೀಸರ ಇಂತಹ ಅಮಾನವೀಯ ದವ್ರ್ಜನ್ಯವನ್ನು ವಿರೋದಿಸುವ ಸಲುವಾಗಿ ಚಿಕಾಗೋ ನಗರದ ಹೇಮಾರ‍್ಕೆಟ್ ಸ್ಕ್ವಯರ್‍‌ನಲ್ಲಿ ದೊಡ್ಡ ಮತಪ್ರದರ‍್ಶನವನ್ನು ನಡೆಸಲಾಗಿತ್ತು. ಈ ಸಬೆಯು ರಾತ್ರಿ 10 ಗಂಟೆಗೆ ಮುಗಿಯುತ್ತಿದ್ದಂತೆ ಹಿಂದಿನಿಂದ ಪೊಲೀಸೊಬ್ಬನು ಕಾರ‍್ಮಿಕರ ಮೇಲೊಂದು ಸಿಡಿಗುಂಡು ಎಸೆದಿದ್ದನು. ಇದನ್ನೇ ಮತ್ತೆ ನೆಪಮಾಡಿಕೊಂಡ ಪೊಲೀಸರು ಕತ್ತಲಲ್ಲಿ ಸಿಕ್ಕ ಸಿಕ್ಕವರಿಗೆ ಗುಂಡು ಹಾರಿಸಿದರು. ಇದರಿಂದಾಗಿ 8 ಮಂದಿ ಕಾರ‍್ಮಿಕರು ಸ್ತಳದಲ್ಲೇ ಪ್ರಾಣಬಿಟ್ಟಿದ್ದರು. ಅಲ್ಲದೇ 30ಕ್ಕೂ ಹೆಚ್ಚು ಮಂದಿ ಕಾರ‍್ಮಿಕರು ಗಾಯಗೊಂಡಿದ್ದರು. ಇದರಿಂದ ತಾಳ್ಮೆ ಕಳೆದುಕೊಂಡ ಕಾರ‍್ಮಿಕರು ಪ್ರತಿದಾಳಿಗೆ ಇಳಿದರು. ಪರಿಣಾಮವಾಗಿ ಒಬ್ಬ ಪೊಲೀಸ್ ಸ್ತಳದಲ್ಲೇ ಕೊನೆಯುಸಿರೆಳೆದರೆ, ತೀವ್ರವಾಗಿ ಗಾಯಗೊಂಡಿದ್ದ 8 ಮಂದಿ ಪೊಲೀಸರು ಕೆಲದಿನಗಳ ಬಳಿಕ ಸಾವನ್ನಪ್ಪಿದ್ದರು.

ಆದರೆ ಅಮೆರಿಕಾದ ಸರಕಾರ ಈ ಗಲಬೆಯನ್ನೇ ಮುಂದಿಟ್ಟುಕೊಂಡು 8 ಮಂದಿ ಕಾರ‍್ಮಿಕ ನಾಯಕರ ಮೇಲೆ ಮೊಕದ್ದಮೆ ದಾಕಲಿಸಿತು. ವಿಚಾರಣೆ ನಡೆಸಿದ ನ್ಯಾಯಾಲಯ ಇವರಲ್ಲಿ 7 ಮಂದಿಗೆ ಗಲ್ಲುಶಿಕ್ಶೆ ನೀಡಿದರೆ, ಇನ್ನೊಬ್ಬನಿಗೆ 15 ವರುಶಗಳ ಸೆರೆವಾಸವನ್ನು ನೀಡಲಾಯಿತು. ಈ 7 ಮಂದಿ ನಾಯಕರನ್ನು ಗಲ್ಲಿಗೇರಿಸಲು ನಿಗದಿಪಡಿಸಿದ್ದ ಮುನ್ನಾದಿನ ನ್ಯೂಯಾರ‍್ಕ್ ನಗರದಲ್ಲಿ 7 ಸಾವಿರ ಕಾರ‍್ಮಿಕರು ಪ್ರತಿಬಟನಾ ಮೆರವಣಿಗೆಯನ್ನು ಮಾಡಿ, “ನ್ಯಾಯಾಲಯ ಮಾಡುತ್ತಿರುವ ಈ ಕೊಲೆಯನ್ನು ನಾವು ಪ್ರತಿಬಟಿಸುತ್ತೇವೆ” ಎಂದು ಗೋಶಣೆ ಕೂಗಿತು.

ಆದರೆ ಆ ದಿನವೇ ಗಲ್ಲುಶಿಕ್ಶೆಯನ್ನು ಎದುರಿಸಬೇಕಾಗಿದ್ದ ಒಬ್ಬ ಕಾರ‍್ಮಿಕ ನಾಯಕ ಗಲ್ಲಿಗೇರಿಸುವ ಮೊದಲೇ ಸೆರೆಮನೆಯಲ್ಲೇ ಅಸುನೀಗಿದ್ದ. ಅಚ್ಚರಿಯೆಂಬಂತೆ ಉಳಿದ 6 ಮಂದಿ ಕಾರ‍್ಮಿಕ ನಾಯಕರಲ್ಲಿ 2 ಮಂದಿಗೆ ಗಲ್ಲುಶಿಕ್ಶೆಯನ್ನು ಜೀವಾವದಿ ಶಿಕ್ಶೆಯನ್ನಾಗಿ ಬದಲಾಯಿಸುವಂತೆ ಅದಿಕ್ರುತ ಆದೇಶವೊಂದನ್ನು ಅಲ್ಲಿನ ಗವರ‍್ನರ್ ಅವರು ಹೊರಡಿಸಿದ್ದರಿಂದ, ಉಳಿದ 4 ಮಂದಿಯನ್ನು 11-11-1887ರಂದು ನೇಣುಕಂಬಕ್ಕೆ ಏರಿಸಲಾಯಿತು. ಈ ಎಲ್ಲ ಕಾರ‍್ಮಿಕ ನಾಯಕರ ತ್ಯಾಗ, ಬಲಿದಾನದ ರೋಮಾಂಚನಕಾರಿ ಜಾಗತಿಕ ಕಾರ‍್ಮಿಕ ಹೋರಾಟ ಹಳಮೆಯ ಪುಟಗಳಲ್ಲಿ ಅಮರವಾಯಿತು. ಅಲ್ಲದೇ ಮುಂದೆ ವಿಶ್ವದ ಎಲ್ಲಾ ಕಾರ‍್ಮಿಕರಿಗೆ ನಿರಂತರ ಚಯ್ತನ್ಯದ ಚಲುಮೆಯಾಯಿತು. ಹೀಗೆ ಕಾರ‍್ಮಿಕರ ತ್ಯಾಗ ಬಲಿದಾನದ ಪರಿಣಾಮವಾಗಿ ವಿಶ್ವದೆಲ್ಲೆಡೆ ಉಂಟಾದ ಉದ್ಯೋಗದ ಕ್ರಾಂತಿಯನ್ನು ನೆನೆಪಿಸುವ ಸಲುವಾಗಿ, ಮೊಟ್ಟ ಮೊದಲು 1886 ರ ಮೇ 1 ರಂದು ಕಾರ‍್ಮಿಕರ ಹೋರಾಟ ಶುರುವಿಟ್ಟ ಈ ದಿನವನ್ನು ಮುಂದೆ ಕಾರ‍್ಮಿಕರ ದಿನವನ್ನಾಗಿ ಆಚರಿಸಿಕೊಂಡು ಬರಲಾಯಿತು.

“ವಿಶ್ವದ ಕಾರ‍್ಮಿಕರೇ ಒಂದಾಗಿರಿ, ಒಂದಾಗಿರಿ” ಇದು ವಿಶ್ವಕಾರ‍್ಮಿಕ ದಿನಾಚರಣೆಯ ಗುರಿ. ಆ ಮೂಲಕ ವಿಶ್ವದ ಕಾರ‍್ಮಿಕರಿಗೆ ಕೂಡಣದಲ್ಲಿ ಒಂದು ಎಂಬ ಬಾವನೆ ಮೂಡಿಸಿ, ಶೋಶಿತ ಕಾರ‍್ಮಿಕರು ಒಗ್ಗೂಡಿ, ಹೋರಾಟಕ್ಕೆ ಮುಂದಾಗಿ, ಸಮಾಜವಾದಿ ಸಮಾಜ ಸ್ತಾಪನೆಗೆ ಒಂದಾಗಬೇಕು ಎಂಬುದು ಈ ದಿನಾಚರಣೆಯ ಸಂದೇಶ.

(ಮಾಹಿತಿ ಸೆಲೆ: wikipedia)

(ಚಿತ್ರ ಸೆಲೆ: labor4)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks