ಹೂವಿನ ಕರಗ: ಬೆಂಗಳೂರು ಕರಗದಲ್ಲೊಂದು ಬಾಗ

– ಅನ್ನದಾನೇಶ ಶಿ. ಸಂಕದಾಳ.

10151884_733796870004694_1892048596715077593_n

ಕರಗ: ನಮ್ಮ ಬೆಂಗಳೂರ ದೊಡ್ಡ ಹಬ್ಬ” ಬರಹದಲ್ಲಿ ಕರಗ, ಕರಗದ ಹಿನ್ನೆಲೆ, ನಡೆಯುವ ದಿನಗಳು, ಆಚರಣೆಗಳು – ಇವುಗಳ ಬಗ್ಗೆ ತಿಳಿದುಕೊಂಡೆವು. ಹಬ್ಬದ 9 ನೆ ದಿನದಂದು ನಡೆಯುವ ಹೂವಿನ ಕರಗದ ಬಗ್ಗೆ ಈಗ ತಿಳಿಯೋಣ ಬನ್ನಿ.

ಹಬ್ಬದ ಒಂಬತ್ತನೇ ದಿನ ‘ಹೂವಿನ ಕರಗ’ ಮಾಡಲಾಗುತ್ತದೆ. ಹೆಸರೇ ಹೇಳುವಂತೆ ಈ ಕರಗವನ್ನು ಹೂವಿನಿಂದ(ಮಲ್ಲಿಗೆ) ಮಾಡಲಾಗಿರುತ್ತದೆ. ಇದು ರಾತ್ರಿ ನಡೆಯುವ ಕಾರ‍್ಯಕ್ರಮ. ಮೂರುತಿಗಳನ್ನು ಮೆರವಣಿಗೆಯಲ್ಲಿ ತಂದು ಬಕ್ತರಿಗೆ ತೋರಿಸಲು, ಅಂದು ‘ತೇರುಕಟ್ಟುವ ಮನೆಯವರು’ ತೇರುಗಳನ್ನು ಬಣ್ಣ ಬಣ್ಣದ ಬಟ್ಟೆಗಳಿಂದ ಅಂದಗೊಳಿಸುತ್ತಾರೆ. ಅಂದು ಕರಗ ಹೊತ್ತು ಕೊಳ್ಳುವವರು ಹೆಣ್ಣಿನ ಹಾಗೆ ಸೀರೆಯನ್ನು ಉಟ್ಟು ಹೂವನ್ನು ಮುಡಿಯುತ್ತಾರೆ. ಹಾಗೆ ಅವರಿಗೆ ಬಳೆಯನ್ನುತೊಡಿಸಿ ಮದುಮಗಳಾಗಿ ಮಾಡುವರು. ಇದು ತಾತ್ಕಾಲಿಕವಾಗಿ ದ್ರವ್ಪದಿಯಾಗುವ ಬಗೆ ಎಂದು ಹೇಳಲಾಗುತ್ತದೆ.

ಆಮೇಲೆ ಗುಡಿಯ ಒಳಗೆ ಅರ‍್ಜುನನಿಗೂ ದ್ರವ್ಪದಿಗೂ ಮದುವೆ ಮಾಡುವರು. ಅದು ಆದಿಶಕ್ತಿಯನ್ನು ಕರಗದ ರೂಪದಲ್ಲಿ ಹೊತ್ತುಕೊಳ್ಳಲಿಕ್ಕೆ ಬಲ ನೀಡುತ್ತದೆ ಎನ್ನುವುದು ನಂಬಿಕೆ. ಅಂದು ಕೂಡ ‘ಶಕ್ತಿಪೀಟ’ದ ಬಳಿ ಅಂದರೆ ಸಂಪಂಗಿಕೆರೆಯ ಹತ್ತಿರ ಗಣಾಚಾರಿಗಳು, ಗಂಟೆ ಪೂಜಾರಿಗಳು, ವೀರಕುಮಾರರು ಮತ್ತು ಬಕ್ತರು ಸೇರುವರು. ಪೀಟದ ಹತ್ತಿರ ಮಾಟದಕೋಲು ಮತ್ತು ಬಾಕು(ಕತ್ತಿ) ಇಡಲಾಗುತ್ತದೆ ಮತ್ತು ಅವುಗಳಿಗೆ ಪೂಜೆ ಮಾಡಲಾಗುತ್ತದೆ. ಕರ‍್ಪೂರವನ್ನು ಹಚ್ಚಿ ಬೆಳಗುತ್ತಾ ದೇವತೆಯನ್ನು ಮತ್ತೊಮ್ಮೆ ನೆನೆಯುತ್ತಾ ರಾತ್ರಿ ಹತ್ತರ ಸುಮಾರಿಗೆ ಮೆರವಣಿಗೆ ಶುರು ಮಾಡುತ್ತಾರೆ.

ಅಲ್ಲಿಂದ ಶುರುವಾದ ಮೆರವಣಿಗೆ ‘ಶಕಿಸ್ತಳ'(ಏಳು ಸುತ್ತಿನ ಕೋಟೆ) ಮೂಲಕ ದರ‍್ಮರಾಯನ ಗುಡಿಯತ್ತ ಬರುತ್ತದೆ. ತಾಳ ಮೇಳಗಳ ನಡುವೆ ಮೆರವಣಿಗೆ ಸಾಗುತ್ತದೆ. ಮೆರವಣಿಗೆ ಗುಡಿ ತಲುಪಿದ ಮೇಲೆ, ಅರ್‍ಜುನ ಮತ್ತು ದ್ರವ್ಪದಿ ಮೂರುತಿಗಳನ್ನು ಗುಡಿಯಿಂದ ಹೊರತಂದು ಮುಕ್ಯ ತೇರಿನಲ್ಲಿ ಕೂರಿಸಲಾಗುತ್ತದೆ. ಆದಿಶಕ್ತಿಯನ್ನು ಕರಗದ ರೂಪದಲ್ಲಿ ಹೊತ್ತುಕೊಳ್ಳುವವರಿಗೆ ಬೇಕಾದ ಬಲವನ್ನು ಕೊಡುವಂತೆ ಮಂತ್ರಗಳನ್ನು ಹೇಳಿ ಪೂಜೆ ಮಾಡುತ್ತಾರೆ. ಅದಾದ ಮೇಲೆ ಆ ಹೂವಿನ ಕರಗವನ್ನು ಅವರ ಮೇಲೆ ಹೊರಿಸಲಾಗುತ್ತದೆ. ಉಳಿದ ಪಾಂಡವರ ಮೂರುತಿಗಳನ್ನು ಗುಡಿಯಿಂದ ಹೊರತಂದ ಮೇಲೆ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ.

ಮೆರವಣಿಗೆ ಆರಂಬವಾದೊಡನೆ ಗಟ್ಟಿಯಾದ ತಾಳಮೇಳಗಳು ಮೊಳಗುವವು ಮತ್ತು ವೀರಕುಮಾರರು ‘ಗೋವಿಂದ ಗೋವಿಂದ’ ಅಂತ ಹೇಳುತ್ತಾ ಮತ್ತೊಮ್ಮೆ ಕರ‍್ಪೂರವನ್ನು ಹಚ್ಚುವವರು. ಆಗ ಕರಗವನ್ನು ಹೊತ್ತಿರುವವರು ಗರ‍್ಬಗುಡಿಯಿಂದ ಹೊರಗೆ ಬರುತ್ತಾರೆ. ಅದು ಆದಿಶಕ್ತಿಯೇ ಮಿಂಚಿನಂತೆ ಹೊರಬಂದಂತೆ ಕಾಣುತ್ತದೆ ಎಂದು ಬಣ್ಣಿಸಲಾಗುತ್ತದೆ. ದರ‍್ಮರಾಯನ ಗುಡಿಯಿಂದ ಹೊರಬಂದ ಕರಗವು ಮುಂದುವರೆಯುವ ಮುನ್ನ ‘ಬ್ರಹ್ಮ ದೇವರ ತೇರಿಗೆ’ ಒಂದು ಸುತ್ತು ಹಾಕಲಾಗುತ್ತದೆ. ಕರಗವು ನಂತರ ಕಬ್ಬನ್ ಪೇಟೆ – ನಗರ‍್ತ ಪೇಟೆ – ಸಿದ್ದಣ್ಣ ಲಯ್ನ್ – ಗಾಣಿಗರ ಪೇಟೆ – ಚಿಕ್ಕಪೇಟೆ ಬೀದಿ – ಅವೆನ್ಯೂ ಬೀದಿ – ದೊಡ್ಡಪೇಟೆ – ರಣಸಿಂಗ ಪೇಟೆ ( ಕ್ರಿಶ್ಣ ರಾಜ ಮಾರುಕಟ್ಟೆ ಬಳಿ )-ಅಕ್ಕಿ ಪೇಟೆ-ಅರಳೆಪೇಟೆ – ಬಳೆಪೇಟೆ – ಸುಬೇದಾರ್ ಚತ್ರ ಬೀದಿ – ಕುಂಬಾರ ಪೇಟೆ – ಗೊಲ್ಲರ ಪೇಟೆ – ತಿಗಳರ ಪೇಟೆ – ಸುಣ್ಣಕಲ್ ಪೇಟೆ ಮುಕ್ಯ ಬೀದಿಗಳ ಮೂಲಕ ದರ‍್ಮರಾಯನ ಗುಡಿಗೆ ಹಿಂದಿರುಗುತ್ತದೆ.

ಹಾಗೆ ಸಾಗುತ್ತಾ ದಾರಿಯ ನಡುವೆ ಸಿಗುವ ರಾಮ ಸೇವಾ ಮಂದಿರ, ವೇಣುಗೋಪಾಲ ಸ್ವಾಮಿ ಗುಡಿ, ಬಯ್ರವೇಶ್ವರ ಗುಡಿ, ಮಕ್ಕಳ ಬಸವಣ್ಣ ಗುಡಿ, ಚನ್ನರಾಯ ಸ್ವಾಮಿ ಗುಡಿ, ಚಾಮುಂಡೇಶ್ವರಿ ಗುಡಿ, ಈಶ್ವರ ಗುಡಿ, ಕೋಟೆ ಆಂಜನೇಯನ ಗುಡಿ, ಮುರಹರಿ ಸ್ವಾಮಿ ಮಟ, ಬೀರದೇವರ ಗುಡಿ, ಅಣ್ಣಮ್ಮ ಗುಡಿ, ತುಪ್ಪದ ಆಂಜನೇಯನ ಗುಡಿ, ಚವುಡೇಶ್ವರಿ ಗುಡಿಗಳಲ್ಲಿ ಕರಗಕ್ಕೆ ಪೂಜೆ ಮಾಡಲಾಗುತ್ತದೆ. ಅರಳೆ ಪೇಟೆಯಲ್ಲಿರುವ ಹಜರತ್ ತವಕಲ್ ಮಸ್ತಾನ್ ಶಾ ದರಗಾವನ್ನು 3 ಬಾರಿ ಸುತ್ತು ಹೊಡೆಯಲಾಗುತ್ತದೆ. ಇರುಳಿಡೀ ನಡೆದ ಕರಗ ಮೆರವಣಿಗೆ ಬೆಳಿಗ್ಗೆ ದರ‍್ಮರಾಯನ ಗುಡಿಗೆ ಬಂದು, ನೆರೆದಿರುವ ಬಕ್ತರಿಗೆಲ್ಲ ದರುಶನವನ್ನು ನೀಡುವ ಮೂಲಕ ಕರಗವು ಕೊನೆಗೊಳ್ಳುತ್ತದೆ.

ಗಂಟೆ ಪೂಜಾರಿಗಳು ಗಂಟೆಯ ನಾದದಿಂದ ಕರಗ ಹೊತ್ತಿರುವವರನ್ನು ಗರ‍್ಬಗುಡಿಗೆ ಕರೆದೊಯ್ಯುವರು ಮತ್ತು ಶಾಂತಿ ಮಂತ್ರಗಳನ್ನು ಹೇಳುತ್ತಾ ಕರಗವನ್ನು ಇಳಿಸುವವರು. ಬಳಿಕ ಮಹಾಮಂಗಳಾರತಿಯನ್ನು ಮಾಡಿ ಅಂದಿಡೀ ದಿನ ಗುಡಿಗೆ ಬರುವ ಬಕ್ತರಿಗೆ ಪ್ರಸಾದ ಹಂಚುವಲ್ಲಿ ಹೂವಿನ ಕರಗವು ಮುಗಿಯುತ್ತದೆ.

(ಮಾಹಿತಿ ಸೆಲೆwikipedia, karaga.com)   

(ಚಿತ್ರ ಸೆಲೆ: mbasics)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.