ಕಾಲು ಡಾಲರ್ ನಾಣ್ಯದೊಳು ಕಂಡ ಹಲತನ

– ರತೀಶ ರತ್ನಾಕರ.

50-state-quarters_large

ಸಾಮಾನ್ಯವಾಗಿ ಅಯ್ವತ್ತು ಪಯ್ಸೆ, ಒಂದು ರೂಪಾಯಿ ಇಲ್ಲವೇ ಅಯ್ದು ರೂಪಾಯಿ ನಾಣ್ಯಗಳು ಒಂದೇ ಬಗೆಯಲ್ಲಿ ಇರುವುದನ್ನು ನೋಡಿರುತ್ತೇವೆ. ಒಂದು ರೂಪಾಯಿಯ ನಾಣ್ಯವನ್ನು ತೆಗೆದುಕೊಂಡರೆ ಎಲ್ಲಾ ಒಂದು ರೂಪಾಯಿ ನಾಣ್ಯದ ಎರೆಡು ಬದಿಗಳು ಒಂದೇ ರೀತಿಯಲ್ಲಿ ಇರುತ್ತದೆ. ಜೋಳದ ತೆನೆಯ ನಡುವೆ 1 ನ್ನು ಬರೆದು ಹಿಂದಿ ಮತ್ತು ಇಂಗ್ಲೀಶಿನಲ್ಲಿ ‘ರುಪಾಯಿ/ರುಪಿ’ ಎಂದು ಬರೆದದ್ದು ಒಂದು ಬದಿಯಾದರೆ, ನಾಲ್ಕು ಸಿಂಹಗಳ ಅಶೋಕ ಲಾಂಚನ ಅದರ ಸುತ್ತ ಬಾರತ/ಇಂಡಿಯಾ ಎಂದು ಹಿಂದಿ ಮತ್ತು ಇಂಗ್ಲೀಶಿನಲ್ಲಿ ಬರೆದದ್ದು ಇನ್ನೊಂದು ಬದಿಯಾಗಿರುತ್ತದೆ. ಬೇರೆಯ ನಾಣ್ಯಗಳಲ್ಲೂ ನಾವು ಇದನ್ನು ಕಾಣಬಹುದು.

ಇದರ ಬಗ್ಗೆ ಗಮನಹರಿಸುವ ಮನಸಾಗಿದ್ದು ಕಾಲು ಡಾಲರ್(Quarter Dollar) ನಾಣ್ಯಗಳನ್ನು ಕಂಡಮೇಲೆ. ಒಂದು ಬಗೆಯ ನಾಣ್ಯದಲ್ಲಿ ಒಂದೇ ರೀತಿಯ ವಿನ್ಯಾಸವನ್ನು ಕಂಡ ನನಗೆ ಕಾಲು ಡಾಲರ್ ನಲ್ಲಿರುವ ಬೇರೆ ಬೇರೆ ವಿನ್ಯಾಸಗಳು ಗಮನವನ್ನು ಸೆಳೆಯಿತು. ಬೇರೆ ಬೇರೆ ವಿನ್ಯಾಸವಿರುವ ಕಾಲುಡಾಲರ್ ಹುಟ್ಟಿನ ಹಿನ್ನಲೆ ಏನು ಎಂದು ಹುಡುಕುತ್ತಾ ಹೊರಟಾಗ ಹಲವು ವಿಶಯಗಳು ದೊರೆತವು.

’50 ನಾಡುಗಳ ಕಾಲುಡಾಲರ್ ನಾಣ್ಯ’ ಎಂಬ ಯೋಜನೆ ಮೂಲಕ ಬೇರೆ ಬೇರೆ ವಿನ್ಯಾಸದ ಕಾಲು ಡಾಲರ್ ಗಳನ್ನು ಹೊರತರುವ ಹಮ್ಮುಗೆಯನ್ನು ಅಮೇರಿಕಾದ ಒಕ್ಕೂಟ ಸರಕಾರವು 1999 ರಲ್ಲಿ ಕಯ್ಗೆತ್ತಿಕೊಂಡಿತು. ಪ್ರತಿ ನಾಡಿನಿಂದ ಒಂದು ಕಾಲು ಡಾಲರ್ ನಾಣ್ಯವನ್ನು ಹೊರತರುವ ಕೆಲಸವನ್ನು ಹಲವು ಹಂತಗಳಲ್ಲಿ ನೆರವೇರಿಸಿತು. ನಾಣ್ಯದ ಒಂದು ಬದಿಯಲ್ಲಿ ‘ಜಾರ್‍ಜ್ ವಾಶಿಂಗ್ಟನ್‘ ಅವರ ಮುಕಚಿತ್ರ, ಯುನಯ್ಟೆಡ್ ಸ್ಟೇಟ್ಸ್ ಆಪ್ ಅಮೇರಿಕಾ, ಲಿಬರ್‍ಟಿ, ಇನ್ ಗಾಡ್ ವಿ ಟ್ರಸ್ಟ್ (ದೇವರಲ್ಲಿ ನಮ್ಮ ನಂಬಿಕೆ) ಎಂಬ ಬರಹ ಅಚ್ಚಾಗಿರುತ್ತದೆ. ನಾಣ್ಯದ ಇನ್ನೊಂದು ಬದಿಯಲ್ಲಿ ಆಯಾ ನಾಡಿಗೆ ಸಂಬಂದಿಸಿದ ಗುರುತನ್ನು ಅಚ್ಚು ಹಾಕಲಾಗಿದೆ.

609px-2006_Quarter_Proof

ಪ್ರತಿಯೊಂದು ನಾಡಿನ ಗುರುತನ್ನು ಆಯಾ ನಾಡಿನ ಗವರ್‍ನರ್ ನಿಂದ ಪಡೆಯಲಾಗಿತ್ತು. ಪ್ರತಿ ನಾಡಿನ ಗವರ್‍ನರ್ ಕೂಡ ತನ್ನ ನಾಡಿನ ಮಂದಿಯಿಂದ ಬಗೆ ಬಗೆಯ ವಿನ್ಯಾಸಗಳನ್ನು ಪಡೆದು ಅದರಲ್ಲಿ ಬೇಕಾದ ವಿನ್ಯಾಸವನ್ನು ಆರಿಸಿ ಒಕ್ಕೂಟ ಸರಕಾರಕ್ಕೆ ಕಳುಹಿಸಿಕೊಟ್ಟಿದೆ. ಪ್ರತಿಯೊಂದು ನಾಡಿನ ವಿನ್ಯಾಸಗಳು ಅಲ್ಲಿನ ಮಂದಿಯ ಆಯ್ಕೆಯಂತೆ ಬೇರೆ ಬೇರೆಯಾಗಿವೆ. ಎತ್ತುಗೆಗೆ ನ್ಯೂಯಾರ್‍ಕ್ ನ ನಾಣ್ಯದಲ್ಲಿ ‘ಸ್ಟಾಚ್ಯು ಆಪ್ ಲಿಬರ್‍ಟಿ’, ನಾರ್‍ತ್ ಕೆರೋಲಿನಾ ದಲ್ಲಿ ‘ಮೊದಲ ಬಾನೋಡ (first flight), ಇಲ್ಲವೇ ಕೊಲರಾಡೋ ವಿನ್ಯಾಸದಲ್ಲಿ ಬೆಟ್ಟಗಳ ಸಾಲು ಇದೆ. ಈ ಪ್ರತಿ ವಿನ್ಯಾಸಗಳು ಆ ನಾಡಿನ ಕುರಿತ ಹಿರಿಮೆಯನ್ನು ಹೇಳುತ್ತದೆ. ಆಯಾ ನಾಡಿನ ವಿನ್ಯಾಸಗಳನ್ನು ಆರಿಸುವುದರಲ್ಲಿ ಒಕ್ಕೂಟ ಸರಕಾರವು ತನ್ನ ಮೂಗನ್ನು ತೂರಿಸಿಲ್ಲ. ಅಶ್ಟೇ ಅಲ್ಲದೇ ನಾಡಿನ ಮಂದಿಯೂ ತಮ್ಮ ನಾಡಿನ ನಾಣ್ಯದ ವಿನ್ಯಾಸದಲ್ಲಿ ಹುರುಪಿನಿಂದ ಪಾಲ್ಗೊಂಡಿದ್ದಾರೆ.

1999ರಲ್ಲಿ ಮೊದಲ ಅಯ್ದು ನಾಡಿನ ಕಾಲುಡಾಲರ್ ನಾಣ್ಯವನ್ನು ಅಮೇರಿಕಾದ ಹಣಕಾಸು ಇಲಾಕೆ ಹೊರತಂದಿತು. ವರುಶಕ್ಕೆ ಅಯ್ದು ನಾಡುಗಳ ನಾಣ್ಯವನ್ನು ಹೊರತಂದು 2008 ರ ಹೊತ್ತಿಗೆ ಒಕ್ಕೂಟದಡಿಯಲ್ಲಿರುವ ಅಯ್ವತ್ತು ನಾಡುಗಳ ನಾಣ್ಯವನ್ನು ಹೊರತಂದಿತು. ಇದಲ್ಲದೇ ಒಕ್ಕೂಟದಡಿಯಲ್ಲಿ ಬರುವ ಅಯ್ದು ಒಕೂಡಳಿತ ನಾಡು ಮತ್ತು ಡಿಸ್ಟ್ರಿಕ್ ಆಪ್ ಕೊಲಂಬಿಯ ನಾಡಿನ ನಾಣ್ಯಗಳನ್ನು ಸೇರಿಸಿ ಒಟ್ಟು 56 ಕಾಲುಡಾಲರ್ ನಾಣ್ಯಗಳನ್ನು ಬೇರೆ ಬೇರೆ ವಿನ್ಯಾಸದಲ್ಲಿ ಹೊರತಂದಿತು.

ಮೊದಲೇ ತಿಳಿಸಿದಂತೆ ವಾಶಿಂಗ್ಟನ್ ಮುಕಚಿತ್ರವಿರುವ ನಾಣ್ಯದ ಒಂದು ಬದಿಯು ಎಲ್ಲಾ ನಾಡುಗಳ ನಾಣ್ಯದಲ್ಲಿ ಒಂದೇ ಬಗೆಯದ್ದಾಗಿತ್ತು, ನಾಣ್ಯದ ಇನ್ನೊಂದು ಬದಿ ಆಯಾ ನಾಡುಗಳ ಹಿರಿಮೆ, ಹಳಮೆ ಮತ್ತು ಹಲತನವನ್ನು ಸಾರುವಂತಿತ್ತು. ಈ ಯೋಜನೆಯು ಅಮೇರಿಕಾದ ಮಂದಿಯನ್ನು ಹೆಚ್ಚಾಗಿ ಸೆಳೆಯಿತು, ಎಲ್ಲಾ ನಾಡುಗಳನ್ನು ಗುರುತಿಸುವ ಈ 56 ನಾಣ್ಯಗಳನ್ನು ಹಲವು ಮಂದಿ ಕೂಡಿಟ್ಟುಕೊಂಡರು. ಅಮೇರಿಕಾದಲೆಲ್ಲಾ ಈ ನಾಣ್ಯಗಳಿಗೆ ಬೇಡಿಕೆ ಹೆಚ್ಚಿತು. ಸುಮಾರು 147 ಮಿಲಿಯನ್ ಮಂದಿ ಈ ನಾಣ್ಯವನ್ನು ಕೂಡಿಟ್ಟು ಕೊಂಡಿದ್ದರು ಎಂದು ಹಣಕಾಸು ಇಲಾಕೆ ತಿಳಿಸಿದೆ. ಅಲ್ಲದೇ ಈ ನಾಣ್ಯಗಳು ಎಂದಿನ ಹಣಕಾಸು ವ್ಯವಹಾರದಲ್ಲೂ ಬಳಕೆಯಾಗುತ್ತಿದೆ.

ಇದಲ್ಲದೇ ಹಣಕಾಸು ಇಲಾಕೆಯು ಅಮೇರಿಕಾದ ಒಕ್ಕೂಟದಡಿಯಲ್ಲಿ ಬರುವ ನಾಡುಗಳ ಹಳಮೆ ಮತ್ತು ಹಿರಿಮೆಯನ್ನು ತಿಳಿಸುವ ಕಡತಗಳನ್ನು ಬಿಟ್ಟಿಯಾಗಿ ಕೊಡತೊಡಗಿತು. ನಾಣ್ಯಗಳ ಜೊತೆಗೆ ಹಲವಾರು ಮಂದಿ ಬೇರೆ ಬೇರೆ ನಾಡುಗಳ ಹಳಮೆ ಮತ್ತು ಹಿರಿಮೆ ಅರಿಯ ತೊಡಗಿದರು. ಸುಮಾರು 6 ಮಿಲಿಯನ್ ಬಳಕೆದಾರರು ಈ ಕಡತಗಳನ್ನು ಅಮೇರಿಕಾದ ಟಂಕಸಾಲೆ (mint) ಮಿಂದಾಣದಿಂದ ಪಡೆದುಕೊಂಡಿದ್ದಾರೆ.

ಈ ಯೋಜನೆಯು “ಅಮೇರಿಕಾದ ಒಕ್ಕೂಟ ಸರಕಾರವು ಒಕ್ಕೂಟದಡಿಯಲ್ಲಿ ಬರುವ ಪ್ರತಿಯೊಂದು ನಾಡನ್ನು ಗುರುತಿಸಿ ಗವ್ರವಿಸಿದ ಬಗೆ. ನಾಡುಗಳಲ್ಲಿರುವ ಹಲತನಕ್ಕೆ ಸಂದ ಹೆಚ್ಚುಗಾರಿಕೆಯೂ ಹವ್ದು”. ತನ್ನ ನಾಡಿನ ಬಗ್ಗೆ ತನಗೆ ಹೆಮ್ಮೆ ಅನಿಸುವುದರ ಜೊತೆಗೆ ಬೇರೆ ಬೇರೆ ನಾಡಿನ ಹಿರಿಮೆ ಮತ್ತು ಹಳಮೆಯನ್ನು ಅರಿತು ಅದನ್ನೂ ಗವ್ರವಿಸುವಂತೆ ಆಯಿತು. ಈ ಯೋಜನೆಯು ಅಮೇರಿಕಾದ ಒಟ್ಟು ನಾಡುಗಳ ಹಳಮೆ ಮತ್ತು ನೆಲದರಿಮೆ(geography)ಯನ್ನು ನಾಡಿನ ಮಂದಿಗೆ ತಿಳಿಸಲು ನೆರವಾಯಿತು. ನಾಡು-ನಾಡುಗಳ ನಡುವೆ ಈ ರೀತಿ ನಾಣ್ಯಗಳು ಹಂಚಿಕೆಯಾಗಿ ಒಬ್ಬರ ಹಲತನ ಮತ್ತು ಹಿರಿಮೆಯನ್ನು ಇನ್ನೊಬ್ಬರು ಗುರುತಿಸಿ ಗವ್ರವಿಸುವಂತಾಗಿ, ಹಳಮೆಯ ಅರಿವಾಗಿ ಮಂದಿಯ ನಡುವೆ ಒಗ್ಗಟ್ಟು ಮೂಡುವಲ್ಲಿ ಈ ಬಗೆಯ ಕೆಲಸಗಳು ನೆರವನ್ನು ಕೊಟ್ಟಿದೆ.

ಹಲತನದ ಮಟ್ಟಿಗೆ ಹೇಳುವುದಾದರೆ ಇಂಡಿಯಾವು ಕೂಡ ಹಲತನದ ನಾಡು. ಆದರೆ ಇಲ್ಲಿನ ಒಕ್ಕೂಟ ಸರಕಾರದಿಂದ ಹಲತನವನ್ನು ಗವ್ರವಿಸುವ ನೀತಿಯನ್ನು ಕಾಣುವುದು ಕಡಿಮೆ. ರೂಪಾಯಿಯ ನೋಟುಗಳಲ್ಲಿ ಹಿಂದಿ ಮತ್ತು ಇಂಗ್ಲೀಶಿಗೆ ಎಲ್ಲಿಲ್ಲದ ಮನ್ನಣೆ ಕೊಡಲಾಗಿದೆ (ಕಾಟಾಚಾರಕ್ಕೆಂದು 14 ನುಡಿಗಳನ್ನು ಚಿಕ್ಕದಾಗಿ ಕೊಡಲಾಗಿದೆ). ಮತ್ತೊಂದು ವಿಪರ್‍ಯಾಸ ಎಂದರೆ ರುಪಾಯಿ ನೋಟುಗಳಲ್ಲಿ ರಿಸರ್‍ವ್ ಬ್ಯಾಂಕಿನ ಗವರ್‍ನರ್ ನ ಸಹಿ ಹಿಂದಿ ಮತ್ತು ಇಂಗ್ಲೀಶಿನಲ್ಲಿ ಬೇರೆ ಬೇರೆಯಾಗಿ ಇರುತ್ತದೆ! ಇದಲ್ಲದೇ ಯಾವುದೇ ನಾಡಿನ ಹಿರಿಮೆ ಮತ್ತು ಹಳಮೆಯನ್ನು ಗುರುತಿಸಿ ಅದಕ್ಕೆ ಸಮಾನ ಸ್ತಾನಮಾನ ನೀಡುವ ಕೆಲಸ ಕಡಿಮೆ ಇದೆ. ಬೇರೆ ಎಲ್ಲ ವಲಯಗಳಲ್ಲಿ ಹಲತನವನ್ನು ಬದಿಗೊತ್ತಿರುವಂತೆ, ನಾಣ್ಯಗಳಲ್ಲೂ, ನೋಟುಗಳಲ್ಲೂ ಏನೂ ವಿಶೇಶ ಮನ್ನಣೆ ಕೊಡಲಾಗಿಲ್ಲ.

ಹಲತನವನ್ನು ಮೆರೆಸುವಲ್ಲಿ ಒಂದು ನಾಣ್ಯವನ್ನು ಬಳಸಿಕೊಂಡು ಹೇಗೆ ಒಗ್ಗಟ್ಟನ್ನು ಗಟ್ಟಿಗೊಳಿಸುವ ಪ್ರಯತ್ನ ಮಾಡಬಹದು ಎಂಬುದಕ್ಕೆ ಕಾಲು ಡಾಲರ್ ನ ಯೋಜನೆ ಒಂದು ಎತ್ತುಗೆಯಾಗಿದೆ. ಇದರಂತೆ, ಇಂಡಿಯಾದ ಒಕ್ಕೂಟ ಸರಕಾರವು ಎಲ್ಲಾ ನಾಡುಗಳ ನುಡಿ, ಹಳಮೆ ಮತ್ತು ಹಿರಿಮೆಯನ್ನು ಒಂದೇ ರೀತಿಯಲ್ಲಿ ಕಂಡು, ಅದಕ್ಕೆ ಪೂರಕವಾದ ಯೋಜನೆಗಳನ್ನು ರೂಪಿಸಲಿ.

(ಮಾಹಿತಿ ಸೆಲೆ: statequaterguide)

(ಚಿತ್ರ ಸೆಲೆ: en.wikipedia, metroedge)Categories: ನಾಡು

ಟ್ಯಾಗ್ ಗಳು:, , , , , , , , , , , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s