ಹುತ್ತರಿಯ ಮುಂದೆ ಕಾಲು – ಹುಮುಂಕಾ (LBW)

– ಹರ‍್ಶಿತ್ ಮಂಜುನಾತ್.

ದಾಂಡಾಟ (ಕ್ರಿಕೆಟ್)! ಈ ಆಟ ಯಾರಿಗೆ ಗೊತ್ತಿಲ್ಲ ಹೇಳಿ? ಹದಿನೆಂಟನೇ ನೂರೇಡಿನಲ್ಲಿ ಇಂಗ್ಲೀಶರ ನಾಡಿನಲ್ಲಿ ಹುಟ್ಟಿದ ಈ ಆಟ, ಇಂದು ವಿಶ್ವದ ಹಲವೆಡೆ ತನ್ನ ಅಚ್ಚೊತ್ತಿ, ರಾರಾಜಿಸುತ್ತಿರುವುದು ನಮಗೆಲ್ಲರಿಗೂ ತಿಳಿದ ವಿಚಾರ. ಹೊರಾಂಗಣ ಆಟಕ್ಕೆ ಒಂದು ಉದಾಹರಣೆಯಾಗಿರುವ ದಾಂಡಾಟವು, ಪ್ರತಿ ತಂಡದಿಂದ ಹನ್ನೊಂದು ಆಟಗಾರರು ಇರುವಂತೆ ಎರಡು ತಂಡಗಳ ಮುಕಾಮುಕಿಯಲ್ಲಿ ಮೊದಲ್ಗೊಂಡು, ಸಾಗುತ್ತ ಸಾಗುತ್ತ ಅತ್ಯಂತ ರೋಚಕತೆಯಿಂದ ನೋಡುಗರನ್ನು ಸೆಳೆಯುವುದು ಈ ಆಟದ ಹಿರಿಮೆ. ಏಕೆಂದರೆ ಆಟ ಸಾಗಿದಂತೆ ಎಸೆತಗಾರನು ಪ್ರತಿ ಎಸೆತದಲ್ಲೂ ದಾಂಡಿಗನ (Batsman) ಹುತ್ತರಿಯ ಪಡೆಯುವ ಪ್ರಯತ್ನ ನಡೆಸಿದರೆ, ದಾಂಡಿಗನು ಪ್ರತಿ ಎಸೆತದಲ್ಲೂ ಓಟ ಗಳಿಸಲು ಎದುರು ನೋಡುತ್ತಿರುತ್ತಾನೆ.

ಇಂತಹ ಹೋರಾಟಗಳ ನಡುವೆ ದಾಂಡಾಟದ ರೋಚಕತೆಗಳಲ್ಲಿ ಹುತ್ತರಿಯನ್ನು ಕಳೆದುಕೊಳ್ಳುವುದೂ ಒಂದು. ಈ ಆಟದಲ್ಲಿ ಎರಡೂ ತಂಡಗಳ ಆಟಗಾರರು ಒಟ್ಟು ಹನ್ನೊಂದು ಬಗೆಯ ಸಾದ್ಯತೆಗಳಲ್ಲಿ ಹುತ್ತರಿ(Wicket)ಗಳನ್ನು ಕಳೆದುಕೊಳ್ಳುಬಹುದು. ಉದಾಹರಣೆಗೆ ಚೆಂಡಿಡಿತ(Caught), ಬಡಿದಗೂಟ(Bowled), ಹುತ್ತರಿಯ ಮುಂದೆ ಕಾಲು- ಹುಮುಂಕಾ (LBW- Leg Before Wicket), ಓಟದಿ ಹುತ್ತರಿಕಳೆತ(Run out), ಗೂಟಹೊಡೆತ (Stumped), ಗೂಟಕ್ಕೆ ಬಡಿತ(Hit wicket), ಚೆಂಡು ತಡೆತ(Handled the ball), ಮರು ಚೆಂಡೊಡೆತ (Hit the ball twice), ಬಯಲಿಗೆ ತೊಡಕು(Obstructing the field), ಕಾಲ ಕಳೆತ(Timed out), ಗಾಯಾಳಾಗು(Retired hurt). ಆದರೆ ಇವುಗಳಲ್ಲಿ ಹುತ್ತರಿಯ ಮುಂದೆ ಕಾಲು ಇಲ್ಲವೇ ಚಿಕ್ಕದಾಗಿ ’ಹುಮುಂಕಾ’ದ ಮೂಲಕ ಆಟಗಾರ ತನ್ನ ಹುತ್ತರಿ ಕಳೆದುಕೊಳ್ಳುವಲ್ಲಿ ತೀರ್‍ಪುಗಾರ(Umpire)ರ ಪಾತ್ರ ಹೆಚ್ಚಿನದ್ದಾಗಿರುತ್ತದೆ. ಏಕೆಂದರೆ ಇಲ್ಲಿ ಎಸೆತಗಾರ(Bowler)ನು ದಾಂಡಿಗ(Batsman)ನನ್ನು ಕಟ್ಟಿಹಾಕುವಲ್ಲಿ ತೋರಬೇಕಾದ ಚಳಕದಶ್ಟೇ ಮುಕ್ಯ ತೀರ್‍ಪುಗಾರನ ಬುದ್ದಿವಂತಿಕೆ ಕೂಡ. ಹಾಗಾಗಿ ಹುಮುಂಕಾ ತೀರ್‍ಪುಗಾರನ ಬುದ್ದಿವಂತಿಕೆಗೆ ಹಿಡಿದ ಕನ್ನಡಿಯಾಗಿರುತ್ತದೆ.

LBW1

ಸಾಮಾನ್ಯವಾಗಿ ದಾಂಡಿಗ ತನ್ನ ಹುತ್ತರಿಯನ್ನು ಕಳೆದುಕೊಳ್ಳುವುದನ್ನು ತಪ್ಪಿಸಲು ಹತ್ತು ಹಲವು ತರದ ದಾರಿಯನ್ನು ಹಿಡಿಯುತ್ತಾನೆ. ದಾಂಡಾಟ ಹುಟ್ಟಿದ ಮೊದಲಿಗೆ ದಾಂಡಿಗ ಹುತ್ತರಿಯ ಕಡೆಗೆ ಬರುವ ಚೆಂಡನ್ನು ತಡೆಯಲು ನಾನಾ ಕಸರತ್ತುಗಳನ್ನು ಶುರುವಿಟ್ಟನು. ಅದರಲ್ಲಿ ಒಂದು, ಹುತ್ತರಿಯ ಕಡೆಗೆ ಬರುವ ಚೆಂಡನ್ನು ತಡೆಯಲು ದಾಂಡಿಗ ತನ್ನ ಕಾಲುಗಳನ್ನು ಬಳಸುವುದು. ಇದರಿಂದ ಎಸೆತಗಾರರ ಮೇಲೆ ದಾಂಡಿಗರ ಮೇಲಾಟ ಪ್ರಾರಂಬವಾಯಿತು. ಇದರಿಂದ ಎಸೆತಗಾರರು ಹುತ್ತರಿಯನ್ನು ಪಡೆಯುವುದು ಸವಾಲಾಗಿ ಪರಿಣಮಿಸಿದ್ದರಿಂದ ಎಸೆತಗಾರರು ಪರದಾಡುವಂತಾಯಿತು. ಇದು ಹುಮುಂಕಾ (LBW) ಎಂಬ ನಿಯಮದ ಹುಟ್ಟಿಗೆ ಕಾರಣವಾಯಿತು.

ಹುಮುಂಕಾ ನಿಯಮವನ್ನು ಮೊಟ್ಟ ಮೊದಲ ಬಾರಿಗೆ 1774ರಲ್ಲಿ ಜಾರಿಗೆ ತರಲಾಯಿತು. ಮುಂದೆ 1935ರಲ್ಲಿ ಈ ನಿಯಮದಲ್ಲಿ ಕೊಂಚ ಬದಲಾವಣೆಗಳನ್ನು ತರಲಾಯಿತು. ಅದರಂತೆ ಬಲಹುತ್ತರಿ(Off stump)ಯ ಗೆರೆಯ ಆಚೆ ಬಿದ್ದು ಹುದ್ದರಿಯ ಕಡೆ ಬರುವ ಚೆಂಡುಗಳಿಗೆ ಕೂಡ ಹುತ್ತರಿಕಳೆತ(Out) ಎಂದು ಗೋಶಿಸಲಾಯಿತು. ಇದು ದಾಂಡಿಗನನ್ನು ಗೊಂದಲಕ್ಕೀಡು ಮಾಡಿದರೆ, ಈ ನಿಯಮದ ಲಾಬವನ್ನು ಎಡ ತಿರುಗಿಸುಗ(Leg spinner)ರು ಬಳಸಲಾರಂಬಿಸಿದರು. ಇದು 1972ರ ಕೆಲವು ನಿರ್‍ಣಾಯಕ ಚರ್‍ಚೆಗಳು ಮತ್ತು ಅರಕೆಗಳಿಗೆ ಕಾರಣವಾಯಿತು.

ಆದರೆ ಮುಂದೆ 1990 ರಲ್ಲಿ ಕೆಲವು ಪರಿಣಾಮಕಾರಿ ಚಳಕದ ಸಹಾಯದಿಂದ ತರಲಾದ ನಿಯಮದಲ್ಲಿನ ಕೆಲವು ಬದಲವಣೆಗಳು, ಕ್ರಿಕೆಟ್ ನ ಎಲ್ಲಾ ವಿಬಾಗಗಳಲ್ಲೂ ತ್ರುಪ್ತಿದಾಯಕವಾಗಿ ಗೋಚರಿಸಿತು. ಹೆಚ್ಚಾಗಿ ದಾಂಡಿಗ ಚೆಂಡನ್ನು ಕಾಪೊಡೆತ (Defence), ಬಾಚೊಡೆತ (Sweep shot), ತಿರು ಬಾಚೊಡೆತ (Reverse Sweep), ತಿರುಹೊಡೆತ(Switch hit), ತೋಡೊಡೆತ(Scoop Shot) ಬೀಸುವ ಹೊತ್ತಲ್ಲಿ ದಾಂಡಿಗ ಚೆಂಡನ್ನು ಕೆಣಕುವಲ್ಲಿ ವಿಪಲವಾದಾಗ, ಚೆಂಡು ದಾಂಡಿಗನ ಕಾಲಿಗೆ ಬಡಿದರೆ ಹುಮುಂಕಾ ನಿಯಮಗಳನ್ನು ತೀರ‍್ಪುಗಾರರು ಬಳಸಿಕೊಳ್ಳುತ್ತಾರೆ. ಅದರಂತೆ ಹುಮುಂಕಾದ ನಿಯಮಗಳು ಹೀಗಿವೆ.

  • ಎಸೆತಗಾರ ಎಸೆದ ಚೆಂಡು ಒಂದು ವೇಳೆ ದಾಂಡಿಗನ ಕಾಲಿಗೆ ಬಡಿದರೆ ಬಯಲಿಕೆಯ (fielding) ತಂಡ ತೀರ್‍ಪುಗಾರರಲ್ಲಿ ಕಡ್ಡಾಯವಾಗಿ ಮನವಿ ಸಲ್ಲಿಸಬೇಕು.
  • ಎಸೆತಗಾರ ಎಸೆದ ಚೆಂಡು ದಾಂಡುಗಾರನ ಕಾಲಿಗೆ ಬಡಿಯುವ ಮುನ್ನ ಯಾವುದೇ ಕಾರಣಕ್ಕೂ ದಾಂಡಿಗೆ(Bat) ತಗುಲಿರಬಾರದು. (ಕೆಳಗೆ ನೀಡಿರುವ ಚಿತ್ರ ನೋಡಿ)

LBW2

  • ಎಸೆತಗಾರ ಎಸೆದ ಚೆಂಡು ಎರಡೂ ಬದಿಯ ಹುತ್ತರಿಯ ನಡುವೆ ಎಳೆದ ಕಾಲ್ಪನಿಕ ಗೆರೆಯ ನಡುವೆ ಕಾಲಿಗೆ ತಾಕಿ, ಹುತ್ತರಿಗೆ ಬಡಿಯುವಂತಿರಬೇಕು. (ಕೆಳಗೆ ನೀಡಿರುವ ಚಿತ್ರ ನೋಡಿ)

LBW3

  • ಕೆಲವೊಮ್ಮೆ ಚೆಂಡು ಕಾಲ್ಪನಿಕ ಗೆರೆಯ ನಡುವೆ ಕಾಲಿಗೆ ಬಡಿದರೂ ಕೂಡ ಹುತ್ತರಿಯ ಮೇಲಿನಿಂದ ಹೋಗುವಂತ್ತಿದ್ದರೆ ಅದು ಹುಮುಂಕಾ ಆಗಿರುವುದಿಲ್ಲ.
  • ಕೆಲವೊಮ್ಮೆ ಎಸೆತಗಾರನ ತೇಲುವ ಎಸೆತ(Swinging ball)ಗಳಿಂದ ತಪ್ಪಿಸಿಕೊಳ್ಳಲು, ದಾಂಡಿಗ ಗಡಿಗೆರೆ(Crease)ಗಿಂತ ಕೊಂಚ ಮುಂದೆ ಬಂದು ದಾಂಡು ಬೀಸಲು ಪ್ರಯತ್ನಿಸುತ್ತಾನೆ. ಅಂತಹ ಸಂದರ್‍ಬದಲ್ಲಿ ಚೆಂಡು ದಾಂಡಿಗನ ಕಾಲಿಗೆ ಬಡಿದರೆ, ಚೆಂಡು ಕಾಲಿಗೆ ಬಡಿಯುವಾಗ ದಾಂಡಿಗನು ಹುತ್ತರಿಯಿಂದ ಎಶ್ಟು ದೂರದಲ್ಲಿದ್ದಾನೆ ? ಎಂಬುದು ಕೂಡ ತೀರ್‍ಪಿನಲ್ಲಿ ಮುಕ್ಯ ಪಾತ್ರ ವಹಿಸುತ್ತದೆ. (ಕೆಳಗೆ ನೀಡಿರುವ ಚಿತ್ರ ನೋಡಿ)

LBW4

 

  • ಇದಲ್ಲದೇ, ತೀರ‍್ಪುಗಾರರು ಚೆಂಡಿನ ತಿರುಗುವಿಕೆ (Spin) ಹಾಗು ಚೆಂಡು ದಾಂಡಿಗನ ಹತ್ತಿರ ಹೋಗುವಾಗ ಯಾವ ಕಡೆ ವಾಲುತ್ತಿದೆ ಎಂಬುದನ್ನು ಗಮನದಲ್ಲಿರಿಸಿಕೊಂಡು ತೀರ‍್ಪನ್ನು ನೀಡುತ್ತಾರೆ.

ಹೀಗೆ ಒಂದು ಹುಮುಂಕಾದ ತೀರ‍್ಪಿನ ಹಿಂದೆ ತೀರ‍್ಪುಗಾರರು ಕೆಲವೇ ಸೆಕೆಂಡುಗಳಲ್ಲಿ ಹಲವು ನಿಯಮಗಳನ್ನು ಪರಿಶೀಲಿಸಿ ಒಂದು ತೀರ‍್ಪನ್ನು ನೀಡಬೇಕಾಗುತ್ತದೆ. ಹಲವು ಸಂದರ‍್ಬಗಳಲ್ಲಿ ತೀರ‍್ಪುಗಾರರಿಗೆ ಇದು ದೊಡ್ಡ ಸವಾಲಾಗಿರುತ್ತದೆ.

(ಮಾಹಿತಿ ಸೆಲೆ: wikipedia)
(ಚಿತ್ರ ಸೆಲೆ: news.bbc.co)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: