ಇಬ್ಬಂದಿತನ

ಸಿ.ಪಿ.ನಾಗರಾಜ
ibbandi
ಮೊನ್ನೆ ನನ್ನ ಗೆಳೆಯರೊಬ್ಬರ ಮನೆಗೆ  ಹೋಗಿ , ಅದು-ಇದು  ಮಾತನಾಡುತ್ತಾ ಕುಳಿತಿರುವಾಗ, ಅವರು  ತಮ್ಮ  ಮೇಜಿನೊಳಗಿಂದ ಉದ್ದನೆಯ  ಹಾಳೆಯೊಂದನ್ನು  ಹೊರತೆಗೆದು –

“ಇದರಲ್ಲಿ ಒಂದು ಕವನವನ್ನು ಬರೆದಿದ್ದೇನೆ… ಓದಿ ನೋಡಿ… ನಿಮ್ಮ ಅನಿಸಿಕೆಯನ್ನು ತಿಳಿಸಿ” ಎನ್ನುತ್ತಾ, ಅದನ್ನು ನನ್ನ ಕಯ್ಗಿತ್ತರು. ಸುಮಾರು ಇಪ್ಪತು-ಇಪ್ಪತ್ತಯ್ದು ಸಾಲುಗಳಲ್ಲಿ ರಚನೆಗೊಂಡಿದ್ದ ಆ ಕವನವನ್ನು ಮೂರ‍್ನಾಕು ಸಾರಿ ಮನದಲ್ಲಿಯೇ ಮತ್ತೆ ಮತ್ತೆ ಓದಿಕೊಂಡು, ನಂತರ-

“ಎಲ್ಲಿಗೆ ಕಳಿಸ್ತೀರಿ ಇದನ್ನ ?”

“ಮುಂದಿನ ತಿಂಗಳು ನಡೆಯುವ ಗುರುಗಳೊಬ್ಬರ ಹುಟ್ಟುಹಬ್ಬದಂದು ನಡೆಯುವ ಕವಿಸಮ್ಮೇಳನದಲ್ಲಿ ಓದಲಿದ್ದೇನೆ… ಹೇಗಿದೆ ಕವನ” ಎಂದು ಕಾತರದಿಂದ ಕೇಳಿದರು.

“ಕವನ ಚೆನ್ನಾಗಿದೆ… ಆದರೆ ಇಂತಹ ಕವನವನ್ನು ಬರೆದಿರುವ ನಿಮ್ಮ ಮನೋದರ‍್ಮದ ಬಗ್ಗೆ ನನ್ನದೊಂದು ಸಣ್ಣ ತಕರಾರು” ಎಂದೆ. ಆಗ ಅವರು ಗಹಗಹಿಸಿ ನಗುತ್ತಾ-

“ಅದೇನ್ ನಿಮ್ಮ ತಕರಾರು ಹೇಳಿ” ಎಂದರು. ನಾವು ಕುಳಿತಿದ್ದ ಕೊಟಡಿಯ ಗೋಡೆಯೊಂದರ ಮೇಲೆ ರಾರಾಜಿಸುತ್ತಿದ್ದ  ದೊಡ್ಡ ಪೋಟೊ ಒಂದನ್ನು  ಅವರಿಗೆ ಬೆರಳು ಮಾಡಿ ತೋರಿಸುತ್ತಾ-

“ಅಲ್ನೋಡಿ… ಕುವೆಂಪು ಅವರ ಜತೆಯಲ್ಲಿ ನೀವು ನಿಂತ್ಕೊಂಡು ಪೋಟೊ ತೆಗಿಸಿಕೊಂಡಿದ್ದೀರಿ… ಬರೀ ಪೋಟೊ ಮಾತ್ರವಲ್ಲ…ಕುವೆಂಪು ಅವರ ಕವನ ಕತೆ ಕಾದಂಬರಿ ನಾಟಕಗಳನ್ನು ಓದಿ, ಅವರ ಪ್ರಗತಿಪರವಾದ ನಿಲುವುಗಳನ್ನು ಮೆಚ್ಚಿಕೊಂಡು… ಒಂದು ಹೊತ್ತಿಗೆಯನ್ನೂ ಬರೆದಿದ್ದೀರಿ. ಈಗ ಈ ಕವನದಲ್ಲಿ ಜಾತಿಜಗದ್ಗುರುಗಳೊಬ್ಬರ  ನಡೆನುಡಿಗಳನ್ನು ಇನ್ನಿಲ್ಲದ ರೀತಿಯಲ್ಲಿ ಹೊಗಳಿ ಗುಣಗಾನ ಮಾಡಿದ್ದೀರಿ… ಇದು ಸರಿಯೇ?” ಎಂದೆ.

“ಇದರಲ್ಲೇನ್ ತಪ್ಪು? ಹಾಗಾದ್ರೆ  ನಿಮ್ಮ ಪ್ರಕಾರ ಬರಹಗಾರನಾದವನು ಮಟಗಳನ್ನಾಗಲಿ ಇಲ್ಲವೇ ಮಟಗಳನ್ನು ನೋಡಿಕೊಳ್ಳುತ್ತಿರುವ ಗುರುಗಳನ್ನಾಗಲಿ ಹೊಗಳಿ ಏನನ್ನೂ ಬರೆಯಬಾರದೆ?”

“ಬರೆಯಬಹುದು… ಯಾವಾಗ ಅಂದ್ರೆ… ಮಟದ ಆಚಾರ-ವಿಚಾರಗಳನ್ನು… ಸಂಪ್ರದಾಯಗಳನ್ನು…ಅದರ ಉದ್ದೇಶ-ಗುರಿಗಳನ್ನು ಆ ಬರಹಗಾರನು ಒಪ್ಪಿಕೊಂಡಿದ್ದಾಗ ಮಾತ್ರ. ಆದರೆ ಈಗ ನೀವೇನಾಗಿದ್ದೀರಿ… ಅತ್ತ… ಕುವೆಂಪು ಅವರ ಜೀವನ ಸಂದೇಶದಂತಿರುವ  ಜಾತಿ-ಮತದ ಕಟ್ಟುಪಾಡುಗಳಿಗೆ ಒಳಗಾಗದ ವಿಶ್ವಮಾನವ ಪರಿಕಲ್ಪನೆಯನ್ನು ಮೆಚ್ಚಿಕೊಳ್ಳುತ್ತೀರಿ… ಇತ್ತ ಜಾತಿಗಳ ಅಡಿಪಾಯದಲ್ಲಿ ಕಟ್ಟಿರುವ ಮಟಗಳನ್ನು ಮತ್ತು ಜಾತಿಗಳಲ್ಲಿ ಕಾಲೂರಿ ಬೆಳೆದು ನಿಂತಿರುವ ಜಗದ್ಗುರುಗಳನ್ನು ಒಪ್ಪಿಕೊಳ್ತೀರಿ. ಬರಹಗಾರರಾದ ನಿಮ್ಮಲ್ಲಿ ಇಂತಹ ಇಬ್ಬಗೆಯ ನಿಲುವುಗಳು ಇರುವುದು ಸರಿಯೇ?”. ನನ್ನ ಮಾತು ಮುಗಿಯುತ್ತಿದ್ದಂತೆಯೇ ಕೆರಳಿ ಕೆಂಡವಾದ ಅವರು-

“ಎಲ್ಲೆಲ್ಲಿ ಒಳ್ಳೆಯದು ಇದೆಯೊ… ಅದೆಲ್ಲವನ್ನೂ ಗುರುತಿಸಿ ಜನರಿಗೆ ತಿಳಿಯುವಂತೆ ಬರೆಯುವುದು ಯಾವುದೇ ಒಬ್ಬ ಬರಹಗಾರನ ಹೊಣೆಗಾರಿಕೆ ಅನ್ನೋದು ನನ್ನ ನಿಲುವು. ಈಗ ನೀವೇ ಯೋಚನೆ ಮಾಡಿ ನೋಡಿ… ಹಿಂದಿನಿಂದಲೂ ನಮ್ಮ ಕರ‍್ನಾಟಕದ ಉದ್ದಗಲದಲ್ಲಿ  ಬೇರೆ ಬೇರೆ ಜಾತಿಗಳ ಮಟಗಳು ಶಿಕ್ಶಣರಂಗದಲ್ಲಿ ಮಾಡಿರುವ ಕೆಲಸ ಸಾಮಾನ್ಯವೇ?…ಬಡಬಗ್ಗರ ಮಕ್ಕಳ… ನೆಲೆಯಿಲ್ಲದ ಹೆಂಗಸರ… ಅಂಗಹೀನ ಮಕ್ಕಳ ಒಳಿತಿಗಾಗಿ ಹಾಕಿಕೊಂಡಿರುವ ಯೋಜನೆಗಳು… ಮಾಡುತ್ತಿರುವ ಒಳ್ಳೆಯ ಕೆಲಸಗಳು ನಿಮಗೆ ಕಣ್ಣಿಗೆ ಕಾಣಿಸುತ್ತಿಲ್ಲವೇ” ಎಂದು ಪ್ರಶ್ನಿಸಿ… ಆಕ್ರೋಶದ ನೋಟವನ್ನು ನನ್ನತ್ತ ಬೀರಿದರು.

“ನಿಮ್ಮ ಮಾತು ತುಸು ಮಟ್ಟಿಗೆ ನಿಜ. ಹಳ್ಳಿಗಾಡಿನಲ್ಲಿ ಹುಟ್ಟಿ ಬೆಳೆದ ಸಾವಿರಾರು ದಲಿತ ಮಕ್ಕಳಿಗೆ… ಶೂದ್ರ ಮಕ್ಕಳಿಗೆ ಮೊದಲ ಬಾರಿಗೆ ಉಣ್ಣುವುದಕ್ಕೆ ಅನ್ನ ಹಾಕಿ , ಇರುವುದಕ್ಕೆ ವಸತಿ ನೀಡಿ , ವಿದ್ಯೆಯನ್ನು ಕಲಿಯಲು ಅವಕಾಶವನ್ನು ಒದಗಿಸಿದ ಕೀರ‍್ತಿಯು ಮಟಗಳಿಗೆ ಸಲ್ಲಬೇಕು. ಆದರೆ ಸುಮಾರು ಮೂವತ್ತು-ನಲವತ್ತು ವರುಶಗಳ ಹಿಂದೆ ಇದ್ದ ಮಟಗಳ ಸ್ತಿತಿ-ಗತಿಗಳಿಗೂ… ಇವತ್ತಿನ ಮಟಗಳ ಸ್ವರೂಪದಲ್ಲೂ ಆಗಿರುವ ಬದಲಾವಣೆಗಳನ್ನು ನೀವು ಗುರುತಿಸಿದ್ದೀರಾ ?” ಎಂದು ಮರು ಪ್ರಶ್ನಿಸಿದೆ.

“ನಾನು ಗುರುತಿಸಿರುವುದೆಲ್ಲಾ ನನ್ನ ಕವನದಲ್ಲೇ ಬಂದಿದೆಯಲ್ಲ… ನೀವು ಅದೇನ್ ಗುರುತಿಸಿದ್ದೀರಿ ಅನ್ನೋದನ್ನ ಹೇಳಿ” ಎಂದು ಉದಾಸೀನತೆಯಿಂದ ಪ್ರತಿಕ್ರಿಯಿಸಿದರು.

“ಮೊದಲೆಲ್ಲಾ… ಆಯಾಯ ಜಾತಿಗಳ ಶ್ರಮಜೀವಿಗಳಾದ  ಸಾವಿರಾರು ಮಂದಿ ಬೇಸಾಯಗಾರರು  ವರುಶಕ್ಕೊಮ್ಮೆ  ನೀಡುತ್ತಿದ್ದ ಒಂದು ಪಡಿ ಅಕ್ಕಿ… ಒಂದು ಮೊರ ರಾಗಿ… ಒಂದು ಇಬ್ಬಳಿಗೆ ಬತ್ತದ ಸಂಗ್ರಹದಿಂದ ಅನ್ನದಾನಕ್ಕೆ ಬೇಕಾದ ದಿನಸಿ  ಮಟಗಳಿಗೆ ಬರ‍್ತಿತ್ತು. ದೇವರನ್ನು… ಗುರುಗಳನ್ನು ನೋಡಲು ಮಟಗಳಿಗೆ ಬರುತ್ತಿದ್ದ ಜನರು ನೀಡುತ್ತಿದ್ದ ನಾಲ್ಕಾಣೆ ಎಂಟಾಣೆಗಳ ಸಣ್ಣ ಪ್ರಮಾಣದ ಕಾಣಿಕೆಯಿಂದ ಮಟಗಳ ವ್ಯವಹಾರಗಳು ಬಹಳ ಸರಳವಾಗಿ ನಡೆಯುತ್ತಿದ್ದವು. ಗುರುಗಳ ಬಳಿ ಯಾವುದೇ ಬಗೆಯ ಬೆಲೆಬಾಳುವ ವಸ್ತು ವಾಹನಗಳಿರಲಿಲ್ಲ” ಎಂದು ನಾನು ವಿವರಿಸುತ್ತಿದ್ದಾಗ –

“ಈಗ ಗುರುಗಳು ಕಾಂಟೆಸಾ ಕಾರುಗಳಲ್ಲಿ ತಿರುಗುತ್ತಾ… ಹೆಲಿಕಾಪ್ಟರ್‍‌ಗಳಲ್ಲಿ ಹಾರಾಡ್ತರೆ ಅಂತ್ಲೋ ನಿಮ್ಮ ಆಪಾದನೆ” ಎಂದು ಅಣಕವಾಡಿದರು. ಅವರ ಅಣಕವನ್ನು ಗಮನಿಸದರೂ , ನನ್ನ ಮಾತನ್ನು ಮುಂದುವರಿಸಿದೆ

“ಈಗ ಮಟಗಳು ಏನಾಗುತ್ತಿವೆ ಅನೋದನ್ನ ನಾವೆಲ್ಲಾ ನೋಡ್ತ ಇದ್ದೀವಿ…ಪ್ರತಿಯೊಂದು ಜಾತಿಯ ಹೆಸರಿನಲ್ಲಿ ಮಟಗಳನ್ನು ಕಟ್ಟುತ್ತಾ, ಜಾತಿಜಾತಿಗಳ ನಡುವೆ ಅಪನಂಬಿಕೆ ಹಾಗೂ ಅನುಮಾನಗಳನ್ನು ಮೂಡಿಸಲಾಗುತ್ತಿದೆ.  ಇದರಿಂದ ಜನ ಸಮುದಾಯದ ಮನದಲ್ಲಿ ನಾನಾ ಬಗೆಯ ಆತಂಕವುಂಟಾಗುತ್ತಾ…ತಮ್ಮದಲ್ಲದ ಜಾತಿಮತದ ಜನರ ಬಗ್ಗೆ ತೀವ್ರವಾದ ಅಸಹನೆಯ… ಹಗೆತನದ ಕಿಡಿಗಳು ಎಲ್ಲರ ಮನದಲ್ಲೂ ಉರಿಯತೊಡಗಿವೆ. ಹಿಂದಿನ ರಾಜ ಮಹಾರಾಜರು  ಕಟ್ಟಿಸಿದ್ದ ಕಲ್ಲಿನ ಕೋಟೆಗಳು ಇವತ್ತು ಕುಸಿದಿವೆ. ಆದರೆ ಜಗದ್ಗುರುಗಳ ಮುಂದಾಳುತನದಲ್ಲಿ ಕಟ್ಟಿಕೊಳ್ಳುತ್ತಿರುವ ಜಾತಿಯೆಂಬ ಕೋಟೆಗಳು ಜನಮನದಲ್ಲಿ  ಗಟ್ಟಿಯಾಗಿ ಮೇಲೆಳುತ್ತಿವೆ. ಈ ಜಾತಿಯೆಂಬ ಕೋಟೆಗಳ ಒಳಗೆ ಆಯಾಯ ಜಾತಿಗಳಿಗೆ ಸೇರಿದ ಸಮಾಜಕಂಟಕ ವ್ಯಕ್ತಿಗಳು ಆಶ್ರಯ ಪಡೆದು ಆರಾಮವಾಗಿದ್ದಾರೆ. ಇವತ್ತು ಮಟಗಳು ಶಕ್ತಿರಾಜಕಾರಣದ ಕೇಂದ್ರಗಳಾಗಿ ರೂಪುಗೊಳ್ಳುತ್ತಿವೆ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು… ಈಗ ನೀವೆ ಹೇಳಿ… ಜಾತಿಜಗದ್ಗುರುಗಳಲ್ಲಿ ಹೆಚ್ಚಿನ ಮಂದಿ ಒಂದು ಕಯ್ಯಿಂದ ಒಳ್ಳೆಯ ಕೆಲಸಗಳನ್ನು ಮಾಡುತ್ತಾ… ಮತ್ತೊಂದು ಕಯ್ಯಿಂದ ಒಟ್ಟು ಜನ ಸಮುದಾಯದ ನೆಮ್ಮದಿಯ ಬದುಕಿಗೆ ಹಾನಿಯನ್ನುಂಟುಮಾಡುವ ಕೆಲಸಗಳನ್ನು ಮಾಡುತ್ತಿಲ್ಲವೇ?” ಎಂದು ನನ್ನ ಅನಿಸಿಕೆಯನ್ನು ಸಾಕಶ್ಟು ದೊಡ್ಡದಾಗಿಯೇ ಮಂಡಿಸಿದೆ. ಕೆಲವು ಗಳಿಗೆ ಯಾರೊಬ್ಬರೂ ಮಾತನಾಡದೆ ಸುಮ್ಮನಿದ್ದೆವು. ಅನಂತರ ಅವರು-

“ನೋಡಿ… ನೀವು ಹೇಳುವ ರೀತಿಯಲ್ಲಿ ಆಲೋಚನೆ ಮಾಡುವುದಕ್ಕೆ ಹೊರಟರೆ… ಆಗ… ಜಗತ್ತಿನಲ್ಲಿ ಮಾನವರು  ಕಟ್ಟಿಕೊಂಡಿರುವ ಸಾಮಾಜಿಕ ಒಕ್ಕೂಟಗಳಾದ ಕುಟುಂಬ-ಶಾಲೆ-ನ್ಯಾಯಾಲಯ-ಆಸ್ತಿಪಾಸ್ತಿಯ ಹಕ್ಕು-ರಾಜಕೀಯ ಆಡಳಿತ  ಇವೆಲ್ಲದರಲ್ಲಿ ಇರುವ  ಇಬ್ಬಗೆಯ ವರ‍್ತನೆಗಳನ್ನು ನಾವು ಗುರುತಿಸಬೇಕಾಗುತ್ತದೆ… ಹಾಗೆ ನೋಡಿದರೆ… ಮಾನವರೆಲ್ಲರ ಬದುಕು ಇಬ್ಬಂದಿತನದ ನಡುವೆಯೇ ನಡೀತಾಯಿದೆ. ಇಂತಹ ದ್ವಂದ್ವಗಳನ್ನೆಲ್ಲಾ ದಾಟಿ ನಾನು ಬರೆಯುತ್ತೇನೆ ಎಂದರೆ ಅದು ಆಗುತ್ತದೆಯೇ?” ಎಂದು ಪ್ರಶ್ನಿಸಿದರು.

“ದ್ವಂದ್ವಗಳನ್ನೆಲ್ಲಾ ಸಂಪೂರ‍್ಣವಾಗಿ ದಾಟುವುದಕ್ಕೆ ಆಗದೇ ಹೋದರೂ… ದ್ವಂದ್ವಗಳ ನಡುವೆ ಇರುವ… ಜನರ ಬದುಕಿಗೆ ಕೇಡನ್ನು ಉಂಟುಮಾಡುತ್ತಿರುವ  ಸಂಗತಿಗಳನ್ನು ಬರಹಗಾರರು ಗ್ರಹಿಸಿಕೊಂಡು, ಸಾಮಾಜಿಕ ಒಕ್ಕೂಟಗಳ ಒಳಿತು-ಕೆಡುಕಿನ ಆಚರಣೆಗಳನ್ನು ಬರಹದ ಮೂಲಕ ಸಮಾಜಕ್ಕೆ ಕಾಣಿಸುವಂತೆ ಮಾಡಬೇಕಲ್ಲವೇ?” ಎಂದಾಗ… ಕೊಂಕುನಗೆಯನ್ನು ನನ್ನತ್ತ ಬೀರುತ್ತಾ… ತಮ್ಮ ಕವನದ ಹಸ್ತಪ್ರತಿಯನ್ನು ನನ್ನಿಂದ ಹಿಂದಕ್ಕೆ ಪಡೆದುಕೊಂಡರು.

(ಚಿತ್ರ: www.bubblews.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: