ಪಿನ್‍ಲ್ಯಾಂಡಿನ ಜಾಣ್ಮೆಯ ಕೊಡಲಿ

ಪ್ರಶಾಂತ ಸೊರಟೂರ.

’ತೋಳ್ಬಲಕ್ಕಿಂತ ತಲೆ ಬಲವೇ ಮೇಲು’ ಎಂಬಂತಿದೆ ಕೊಡಲಿಯ ಈ ಬೆಳವಣಿಗೆ. ಕಟ್ಟಿಗೆ ಸೀಳಲು ತಲೆತಲಾಂತರಗಳಿಂದ ಬಳಕೆಯಾಗುತ್ತಿರುವ ಕೊಡಲಿಗೆ ಪಿನ್‍ಲ್ಯಾಂಡಿನಲ್ಲೊಬ್ಬ ಜಾಣ್ಮೆಯ ಪೆಟ್ಟು ನೀಡಿ ಅದಕ್ಕೊಂದು ಹೊಸ ರೂಪ, ಹೊಸ ಕಸುವು ಕೊಟ್ಟಿದ್ದಾರೆ.

kodali-axe-1

ಪಿನ್‍ಲ್ಯಾಂಡಿನ ಹಯ್ಕಿ ಕರ‍್ನಾ (Heikki Karna) ಅವರು ಕಾಡಿನಿಂದ ಸುತ್ತುವರೆದ ತಾಣವೊಂದರಲ್ಲಿ ತಮ್ಮ ಮನೆಯನ್ನು ಕಟ್ಟಲು ತೊಡಗಿದಾಗ ಈಗಿರುವ ಕೊಡಲಿಯ ಬಳಕೆಯಿಂದ ಆಗುತ್ತಿದ್ದ ತೊಂದರೆಗಳನ್ನು ನೀಗಿಸಲು ತೀರ‍್ಮಾನಿದರಂತೆ. ವಾಡಿಕೆಯಿಂದ ಬಂದಿರುವ ಕೊಡಲಿಯಿಂದ ಕಟ್ಟಿಗೆ ಕಡಿಯುವುದು ಕಶ್ಟವಶ್ಟೇ ಅಲ್ಲ, ಅದು ತುಂಬಾ ಅಪಾಯಕಾರಿ ಕೂಡ ಅಂತಾ ಅವರಿಗನಿಸಿತಂತೆ. ಹಲವು ತಿಂಗಳುಗಳು, ಹಲವು ಕೊಡಲಿ ವಿನ್ಯಾಸಗಳ ಬಗ್ಗೆ ಎಡೆಬಿಡದೇ ನಡೆಸಿದ ಅರಕೆಯಿಂದ ಹೊರಬಂದಿರುವುದೇ ಕರ‍್ನಾ ಅವರ ಹೊಸ ಕೊಡಲಿ ವಿಪುಕರ‍್ವಸ್ (VIPUKIRVES). ಇಂಗ್ಲಿಶನಲ್ಲಿ ಇದನ್ನು ಲಿವರ್-ಆಕ್ಸ್ (Leveraxe) ಎಂದು ಕರೆಯಲಾಗಿದೆ. ಈ ಕೊಡಲಿಯ ಹಿಂದಿರುವ ಗುಟ್ಟೇನು? ತಿಳಿಯೋಣ ಬನ್ನಿ.

ವಾಡಿಕೆಯ ಕೊಡಲಿಯಲ್ಲಿ ಹೆಚ್ಚಾಗಿ ಉದ್ದನೆಯ ಕಟ್ಟಿಗೆಗೆ ಕಬ್ಬಿಣದ ತಲೆಯೊಂದನ್ನು ’ಬೆಣೆ’ (wedge) ಆಕಾರದಲ್ಲಿ ಅಳವಡಿಸಲಾಗಿರುತ್ತದೆ. ಕೊಡಲಿಯು ಎಶ್ಟು ಆಳವಾಗಿ ತೂರಬಲ್ಲದು ಮತ್ತು ಎಶ್ಟು ಸುಲಬವಾಗಿ ಕಟ್ಟಿಗೆಯನ್ನು ತುಂಡರಿಸಬಲ್ಲದು ಎಂಬುದನ್ನು ಬೆಣೆಯ ಆಕಾರವು ತೀರ‍್ಮಾನಿಸುತ್ತದೆ. ಬೆಣೆಯ ಕೋನವನ್ನು ಚಿಕ್ಕದಾಗಿಸಿ ಚೂಪಾಗಿಸದರೆ, ಕೊಡಲಿಯು ಕಟ್ಟಿಗೆಯನ್ನು ಹೆಚ್ಚಿನ ಆಳಕ್ಕೆ ತೂರಬಲ್ಲದು ಆದರೆ ಕಟ್ಟಿಗೆಯನ್ನು ಹೊಕ್ಕ ಆಳದಿಂದ ಕಟ್ಟಿಗೆಯನ್ನು ತುಂಡರಿಸಲು ಅಂತ ಕೊಡಲಿಗೆ ಕಶ್ಟವಾಗುತ್ತದೆ. ಅದೇ ಬೆಣೆಯ ಕೋನವನ್ನು ದೊಡ್ಡದಾಗಿಸಿದರೆ, ಕಟ್ಟಿಗೆಯನ್ನೆನೋ ತುಂಡರಿಸಬಹುದು ಆದರೆ ಕೊಡಲಿಯ ಪೆಟ್ಟು ಕಟ್ಟಿಗೆಯ ಆಳಕ್ಕೆ ಕೊಂಡೊಯ್ಯಲಾರದು. ಹೀಗೆ ಇವೆರಡೂ ವಿಶಯವನ್ನು ಗಮನದಲ್ಲಿಟ್ಟುಕೊಂಡು ಕೊಡಲಿಯ ಬೆಣೆಯ ಕೋನವನ್ನು ತೀರ‍್ಮಾನಿಬೇಕಾಗುತ್ತದೆ.

ವಾಡಿಕೆಯ ಕೊಡಲಿಯಲ್ಲಿರುವ ತೊಡಕುಗಳನ್ನು ಮೀರುವಲ್ಲಿ ಕರ‍್ನಾ ಅವರು ಹೊಸದೊಂದು ವಿನ್ಯಾಸವನ್ನು ಮುಂದಿಟ್ಟಿದ್ದಾರೆ. ಇದರಲ್ಲಿ ಕೊಡಲಿಯ ಮುಂದಿರುವ ತಲೆಯ ಬಾಗವನ್ನು ಹೊಸದೊಂದು ಬಗೆಯಲ್ಲಿ ಮಾಡಲಾಗಿದೆ. ಕೊಡಲಿಯ ಮುಂತಲೆಯ ತೂಕವು ಅದರ ನಡುವಿನ ಬಾಗದಲ್ಲಿ ಇರದೇ ತುಸು ಪಕ್ಕಕ್ಕೆ ಇರುವಂತೆ ಮಾಡಿದ್ದಾರೆ. ಹೀಗೆ ಮಾಡುವುದರಿಂದ ಪೆಟ್ಟು ಕೊಟ್ಟಾಗ ಕೊಡಲಿಯು ಕಟ್ಟಿಗೆಯ ಆಳದಲ್ಲಿ ಸಿಲುಕಿಕೊಳ್ಳದೇ, ತುಸು ತಿರುಗಿ ಸುಲಬವಾಗಿ ಕಟ್ಟಿಗೆಯನ್ನು ಸೀಳಬಲ್ಲಂತಾಗಿದೆ. ವಾಡಿಕೆಯ ಕೊಡಲಿ ಮತ್ತು ಕರ‍್ನಾ ಅವರ ಹೊಸ ಕೊಡಲಿಯ ಹಿಂದಿರುವ ಚಳಕವನ್ನು ಕೆಳಗಿನ ತಿಟ್ಟದಲ್ಲಿ ತೋರಿಸಲಾಗಿದೆ.

kodali

ವಾಡಿಕೆಯ ಕೊಡಲಿಯಲ್ಲಿ ಕಟ್ಟಿಗೆ ಕಡಿಯುವವರ ಎಲ್ಲ ಕಸುವು ನೇರವಾಗಿ ಪೆಟ್ಟು ಬೀಳುವ ಜಾಗದಲ್ಲಿ ಬಿದ್ದು, ತುಂಡರಿಸಲು ಮತ್ತಶ್ಟು ಕಸುವು ಹಾಕಬೇಕಾಗುತ್ತದೆ. ಅದೇ ಹೊಸ ಕೊಡಲಿಯಲ್ಲಿ ತುಸು ಕಸುವನ್ನು ಕಟ್ಟಿಗೆಯೊಳಗೆ ತೂರಲು ಮತ್ತು ಇನ್ನಶ್ಟು ಕಸುವನ್ನು ಕಟ್ಟಿಗೆಯನ್ನು ತುಂಡರಿಸಲು ಬಳಸಿದಂತಾಗುತ್ತದೆ. ಇದರಿಂದಾಗಿ ಹೊಸ ಕೊಡಲಿಯಿಂದ ಕಟ್ಟಿಗೆ ಕಡಿಯಲು ಕಡಿಮೆ ಹೊತ್ತು ತಗುಲುವುದಲ್ಲದೇ ಒಟ್ಟಾರೆಯಾಗಿ ಬೇಕಾಗುವ ಕಸುವು ಕೂಡ ಕಡಿಮೆಯಾಗುತ್ತದೆ. ಹೊಸ ಕೊಡಲಿಯು ಕಟ್ಟಿಗೆಯನ್ನು ತುಂಡರಿಸುತ್ತಿರುವ ಚಳಕವನ್ನು ಕೆಳಗಿನ ಓಡುತಿಟ್ಟದಲ್ಲಿ ನೋಡಬಹುದು.

[youtube https://www.youtube.com/watch?v=E9_9wmjK3j8&w=560&h=315]

(ಪಿನ್‍ಲ್ಯಾಂಡ್ ಕೊಡಲಿಯ ಹೊಡೆತವನ್ನು ಮೆಲ್ಲನೆಯ ಓಟದಲ್ಲಿ ತೋರಿಸಲಾಗಿದೆ)

[youtube https://www.youtube.com/watch?v=KCJADv2shNE&w=420&h=315]

(ಪಿನ್‍ಲ್ಯಾಂಡ್ ಕೊಡಲಿಯಿಂದ ಕಟ್ಟಿಗೆ ಕಡಿಯುತ್ತಿರುವುದು)

ಹೊಸ ಕೊಡಲಿಯ ಈ ಜಾಣ್ಮೆಯನ್ನು ಕಟ್ಟಿಗೆ ಕಡಿಯುವ ಕೊಡಲಿಯಲ್ಲಶ್ಟೇ ಬಳಬೇಕಂತಿಲ್ಲ. ತೂಕವನ್ನು ವಸ್ತುವಿನ ನಡುವಿನಾಚೆಗೆ ಸರಿಸಿದಾಗ ಆಗುವ ಒಳಿತುಗಳನ್ನು ಬಳಸಿಕೊಳ್ಳವಂತ ಬೇರೊಂದು ಹೊಳಹು ತಲೆಗೆ ತೂರಿದರೆ, ವಾಡಿಕೆಯ ಹಲವು ತೊಡಕುಗಳನ್ನು ಸೀಳಬಲ್ಲೆವು.

ತಿಳಿನುಡಿ: ವಾಡಿಕೆಯಿಂದ ಬಂದಿರುವ ತೊಡಕುಗಳನ್ನು ಅರಿತು ಅವುಗಳನ್ನು ಮೀರುವ ಕೆಲಸವನ್ನು ಮತ್ತೆ-ಮತ್ತೆ ಮಾಡಿತೋರಿಸುತ್ತಿರುವುದು, ಕಲಿಕೆಯನ್ನು ತಾಯ್ನುಡಿಯಲ್ಲಿ ಅಳವಡಿಸಿಕೊಂಡಿರುವಂತ ಪಿನ್‍ಲ್ಯಾಂಡಿನಂತಹ ನಾಡುಗಳು. ನಮಗಿನ್ನು ತಾಯ್ನುಡಿಯ ಕಲಿಕೆಯಲ್ಲಿ ನಂಬಿಕೆ ಹುಟ್ಟಿಲ್ಲ, ಅದಕ್ಕೇ ನಾವಿನ್ನೂ ಹಿಂದುಳಿದಿದ್ದೇವೆ, ಆ ನಾಡುಗಳು ಮುಂದುವರೆದಿವೆ.

(ಮಾಹಿತಿಸೆಲೆ: www.vipukirves.fi)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: