ಬೂತಕೋಲ: ಕರಾವಳಿಯ ವಿಶಿಶ್ಟ ನಡೆ-ನುಡಿ

– ಹರ‍್ಶಿತ್ ಮಂಜುನಾತ್.

hqdefault

ನಮ್ಮ ನಾಡು ಬಹುಬಗೆಯ ನಂಬಿಕೆಯ ತವರು. ಪ್ರತಿ ನಂಬಿಕೆಯು ಅದರದ್ದೇ ಆದ ಹಿರಿತನವನ್ನು ಹೊಂದಿರುತ್ತದೆ. ಅಂತೆಯೇ ಕರ‍್ನಾಟಕದ ಕರಾವಳಿ ನಗರಗಳಾದ ಮಂಗಳೂರು, ಉಡುಪಿ ಸುತ್ತಮುತ್ತ ಸೇರಿದಂತೆ ಕೇರಳದ ಗಡಿಬಾಗಗಳ ವರೆಗೂ ವಿಸ್ತಾರವಾಗಿ ಹರಡಿರುವ ಬೂತಾರಾದನೆ ಎಂಬ ಪುರಾತನವಾದ ದಯ್ವೀಕ ನಂಬಿಕೆ, ಕರ‍್ನಾಟಕದ ಸಂಸ್ಕ್ರುತಿಕ ಸೊಗಡುಗಳಲ್ಲೊಂದು. ನನ್ನ ಎಳವೆಯ ಬಹು ಪಾಲು ಕರ್‍ನಾಟಕದ ಕರಾವಳಿ ತೀರದಲ್ಲಿಯೇ ಕಳೆದದ್ದರಿಂದ, ಇಲ್ಲಿನ ಸಾಂಸ್ಕ್ರುತಿಕ ಶ್ರೀಮಂತಿಕೆಯ ಕುರಿತು ಅರಿತುಕೊಂಡಿದ್ದೇನೆ. ಅಂತೆಯೇ ಈ ಕೋಲ ನೇಮವೆಂಬ ನಂಬಿಕೆಯ ಕುರಿತೂ ಕೂಡ.

ನೇಮ, ಕೋಲ ಎಂಬೆಲ್ಲಾ ಹೆಸರುಗಳ ಮೂಲಕ ಚಾಲ್ತಿಯಲ್ಲಿರುವ ಈ ನಂಬಿಕೆ ಬೂತಾರಾದನೆಯ ಪ್ರಕ್ರಿಯೆಯಶ್ಟೆ. ನಮ್ಮಲ್ಲಿ ಈ ‘ಬೂತ’ ಎಂಬ ಪದ ತುಸು ರುಣಾತ್ಮಕ ಯೋಚನೆಗಳನ್ನು ಕೊಡುತ್ತದೆ. ಆದರೆ ನಂಬುವವರು ಮಾತ್ರ ಇದನ್ನು ಬೂತ ಎಂಬುವುದರ ಬದಲು ‘ದಯ್ವ’(ದಯ್ವ ಎಂದು ತುಳುವಿನಲ್ಲಿ ಕರೆಯುತ್ತಿದ್ದು, ಇದರ ಕನ್ನಡದ ಹುರುಳು ‘ಬೂತ’ ಎಂದು) ಎಂದೇ ಕರೆಯುವುದು. ಅಲ್ಲದೇ ದಯ್ವ ಎಂಬುವುದು ಇಲ್ಲಿ ದೇವರ ಸಮಾನ. ಕಾರಣ ದಯ್ವಗಳು ಹಿಂದೆ ಶಿವನ ದೇವಗಣದಲ್ಲಿದ್ದವರು ಎಂಬ ನಂಬಿಕೆ ಇವರದು.

ಇವರ ಪ್ರಕಾರ ಸಾವಿರದ ಒಂದು ಬೂತಗಳು ಅಸ್ತಿತ್ವದಲ್ಲಿದೆ ಎಂಬುದು ನಂಬಿಕೆ. ಅವುಗಳಲ್ಲಿ ಕೆಲವು ದಯ್ವಗಳು ಮಾತ್ರ ಹೆಚ್ಚು ಹೆಸರವಾಸಿಯಾಗಿದ್ದು, ಬಹುಮಂದಿಯಿಂದ ಪೂಜಿಸಲ್ಪಡುತ್ತವೆ. ಉದಾಹರಣೆಗೆ ಶ್ರೀ ಕೊಡಮನಿತ್ತಾಯ, ಅಣ್ಣಪ್ಪ ಪಂಜುರ‍್ಲಿ, ಶ್ರೀ ಕಾಂತೇರಿ ಜುಮಾದಿ, ಶ್ರೀ ಸರಳ ಜುಮಾದಿ, ಶ್ರೀ ಕಲ್ಕುಡ ಕರ‍್ಲುಟ್ಟಿ, ಶ್ರೀ ಮಂತ್ರ ದೇವತೆ, ಸ್ವಾಮಿ ಕೊರಗಜ್ಜ, ಸ್ವಾಮಿ ಜಾರಾಂದೇಯ, ಪಿಲಿ ಚಾಮುಂಡಿ, ಶ್ರೀ ಮಹಿಶಾಂತಾಯ, ರಾಹು ಗುಳಿಗಾ, ಸತ್ಯ ದೇವತೆ, ವರ‍್ತೆ ಪಂಜುರ‍್ಲಿ, ಬಬ್ಬರ‍್ಯ, ಶ್ರೀ ದೂಮಾವತಿ, ಸರಳ ದೂಮಾವತಿ, ಮಲರಾಯ, ತೂಕತ್ತೇರಿ ಮೊದಾಲಾದವುಗಳು.

ವಿಶೇಶವೆಂದರೆ ಈ ದಯ್ವಗಳನ್ನು ಎಲ್ಲಾ ಜನಾಂಗದವರೂ ನಂಬುತ್ತಾರೆ. ಹಾಗಾಗಿ ಇಂತಹ ದಯ್ವಗಳು ಕೂಡು ಕುಟುಂಬಗಳಿಂದ ಪೂಜಿಸಲ್ಪಡುತ್ತವೆ. ಆದರೆ ಈ ಎಲ್ಲಾ ದಯ್ವಗಳನ್ನು ಎಲ್ಲಾ ಕುಟುಂಬದವರು ನಂಬಬೇಕು ಅತವಾ ಪೂಜಿಸಬೇಕೆಂದಿಲ್ಲ. ಬದಲಾಗಿ ಹಿರಿಯರು ನಂಬಿಕೊಂಡು ಬಂದ ಕೆಲವು ದಯ್ವಗಳನ್ನು ಆ ಕುಟುಂಬದ ಮುಂದಿನ ಸದಸ್ಯರು ಪಾಲಿಸುತ್ತಾ ಹೋಗುತ್ತಾರಶ್ಟೆ. ಇದರ ಸಲುವಾಗಿ ವರುಶಕ್ಕೊಮ್ಮೆ ಕುಟುಂಬಸ್ತರೆಲ್ಲ ಸೇರಿ ಅವರವರ ದಯ್ವಗಳಿಗೆ ಸಂಬಂದಪಟ್ಟಂತೆ ಪೂಜಾ ವಿದಿವಿದಾನಗಳನ್ನು ಪೂರಯ್ಸುತ್ತಾರೆ. ಮತ್ತೆ ಕೆಲವರು ಇಂತಿಶ್ಟು ವರುಶಗಳಿಗೊಮ್ಮೆ ಅತವಾ ಹರಕೆಗಳ ಆದಾರಾದ ಮೇಲೆ ನೇಮ ಕೋಲಾಗಳನ್ನು ನಡೆಸಿಕೊಡುವ ಮೂಲಕ ಬೂತಾರಾದನೆಯನ್ನು ಕಯ್ಗೊಳ್ಳುವುದೂ ಉಂಟು.

ಹಾಗೆಯೇ ಇಂತಿಶ್ಟು ಗ್ರಾಮಗಳಿಗೆ ಸಂಬಂದಿಸಿದಂತೆ ಕೆಲವು ದಯ್ವಗಳಿಗೆ ಗುಡಿಗಳನ್ನು ಕಟ್ಟಿಸಲಾಗುತ್ತದೆ. ಅವುಗಳನ್ನು ಹತ್ತುಮಾಗನೆಯ ದಯ್ವಗಳೆನ್ನುವರು. ಅಂದರೆ ಇಲ್ಲಿ ಊರಿನ ಹತ್ತು ಸಮಸ್ತರ ಕೂಡುಕುಳ್ಳುವಿಕೆಯಲ್ಲಿ, ಊರಿನ ಮಂದಿಯ ಸಮ್ಮುಕದಲ್ಲಿ ಕೋಲ ನೇಮಗಳು ಕಾಲ ಕಾಲಕ್ಕೆ ನೆರವೇರುತ್ತದೆ. ಕೆಲವು ಊರಿನಲ್ಲಿ ವರುಶಕ್ಕೊಮ್ಮೆ ಕೋಲ ನಡೆಯುತ್ತದೆ ಇದನ್ನು ’ಕಲ ಇಳಿಯುವುದು’ ಎನ್ನುತ್ತಾರೆ (ತುಳುವಿನಲ್ಲಿ ‘ಕಲಜಪ್ಪುನು’ ಎಂದು. ಕಲ ಎಂಬುದು ಕನ್ನಡದ ‘ಕಳ’ ಎಂಬ ಪದದಿಂದ ಬಂದಿದೆ. ಕಳ ಎಂದರೆ ಜಾಗ ಎಂದು). ಅಂದರೆ ಹತ್ತು ಸಮಸ್ತರು ಮತ್ತು ಮಂದಿಯ ಸಮ್ಮುಕದಲ್ಲಿ, ಹಿಮ್ಮೇಳಗಳ ಜೊತೆ, ಬೂತ ಕಟ್ಟುವಾತ ಬೂತವನ್ನು ಮಯ್ ಮೇಲೆ ಆಹ್ವಾನಿಸಿಕೊಂಡು ದಯ್ವಸ್ತಾನದಿಂದ ಊರಿನ ಗಡಿವರೆಗೆ ಸಂಚರಿಸುತ್ತವೆ. ಏಕಂದರೆ ಆ ಊರಿನ ಗಡಿಬಾಗದ ವರೆಗೆ ಆ ಊರಿನ ದಯ್ವದ ರಕ್ಶಣೆಗೆ ಒಳಪಟ್ಟಿದ್ದು, ಊರಿನ ಸಮಸ್ತರಿಗೆ ಕಣ್ಗಾವಲಾಗಿರುತ್ತವೆ ಎಂಬುದು ಮಂದಿಯ ನಂಬಿಕೆ.

ಕಲ ಇಳಿಯುವುದರ ಮುಂದಿನ ವರುಶ ಆ ಸ್ತಾನದ ಕೋಲ ನೇಮಗಳು ನೇರವೇರುತ್ತವೆ. ಅಲ್ಲದೇ ಪ್ರತಿದಿನದ ಪೂಜೆ ಮತ್ತು ಸಂಕ್ರಾಂತಿಯಂತಹ ವಿಶೇಶ ದಿನಗಳಲ್ಲೂ ಇಲ್ಲಿ ಪೂಜೆಗಳು ನಡೆಯುತ್ತವೆ. ಆ ಪೂಜೆಗಳನ್ನು ನೆರವೇರಿಸಿಕೊಡಲು ಊರಿನವರೆಲ್ಲ ಸೇರಿ ತಮ್ಮೊಳಗೊಬ್ಬನನ್ನು ಪೂಜೆ ಮಾಡಲು ನೇಮಿಸಿರುತ್ತಾರೆ.

ಬಾಳೆಗೊನೆ ಕಡಿಯುವುದರ ಮೂಲಕ ಮೊದಲ್ಗೊಂಡು, ಕೊನೆಯಲ್ಲಿ ಪ್ರಸಾದ ವಿತರಣೆವರೆಗೆ, ಒಟ್ಟು ಹದಿನಾರು ಬಗೆಯ ವಿದಿವಿದಾನಗಳನ್ನು ಒಳಗೊಂಡು ಸಾಗುವ ಈ ಕೋಲ ಎಂಬ ಸಾಂಸ್ಕ್ರುತಿಕ ಆಚರಣೆಯು, ಕೊನೆ ಕ್ಶಣದವರೆಗೂ ನೋಡುಗರನ್ನು ತನ್ನಲ್ಲಿಯೇ ಹಿಡಿದಿಟ್ಟುಕೊಳ್ಳುವುದು ಇದರ ಹಿರಿಮೆ. ಕೋಲ ಶುರುವಾಗುವ ಮೊದಲು ದಯ್ವದ ಬಂಡಾರಕ್ಕೆ ಪೂಜೆ ಮಾಡುವವರಿಂದ ಪೂಜೆ ಮಾಡಿಸಲಾಗುತ್ತದೆ. ಈ ಕೋಲಗಳ ಪ್ರಕ್ರಿಯೆಗಳಲ್ಲಿ ಬಂಡಾರದ ಪೂಜೆಯೂ ಒಂದು. ಬಂಡಾರ ಎಂದರೆ ಬೂತ ಕೋಲದ ಹೊತ್ತಲ್ಲಿ ದರಿಸುವ ಚಿನ್ನ, ಬೆಳ್ಳಿಯಂತಹ ಆಬರಣಗಳು, ಮಣಿಗಂಟೆ, ಕಡ್ಸಲೆ, ಮುಕವಾಡ ಮತ್ತು ದಯ್ವಕ್ಕೆ ಸಂಬಂದಪಟ್ಟ ಕೆಲವು ವಸ್ತುಗಳು. ಇವುಗಳನ್ನು ಇಡಲು ಸ್ತಾನದಲ್ಲಿಯೇ ಒಂದು ಕೋಣೆಯನ್ನು ಮಾಡಿರುತ್ತಾರೆ. ಅದನ್ನು ಬಂಡಾರ ಕೋಣೆ ಎನ್ನುವರು.

ಬಂಡಾರ ಪೂಜೆ ಮುಗಿದ ಕೂಡಲೆ ತಾಸೆ, ಕೊಂಬುಗಳು ಸದ್ದಿಡುತ್ತವೆ. ಮೊದಲು ಪೂಜೆ ಮಾಡುವವರು ಬೂತವನ್ನು ಆಹ್ವಾನಿಸಿಕೊಂಡು, ಬೂತದ ಮುಕವಾಡ ಹಿಡಿದು ಹೊರಬರುತ್ತಾನೆ. ಸ್ತಾನದ ಎದುರು ತಾತ್ಕಾಲಿಕವಾಗಿ ತೆಂಗಿನಮರದ ತುದಿಯ ಗರಿಗರಿಗಳಿಂದ ಚಪ್ಪರವನ್ನು ಮಾಡಲಾಗಿರುತ್ತದೆ. ಹೀಗೆ ಪೂಜೆ ಮಾಡುವವರು ಬಂಡಾರದಿಂದ ತಂದ ಮುಕವಾಡವನ್ನು ಆ ಚಪ್ಪರದಡಿ ಇಟ್ಟು ಅದಕ್ಕೆ ಕೆಲವು ಪೂಜೆಯ ವಿದಿವಿದಾನಗಳನ್ನು ಮಾಡುತ್ತಾರೆ. ಬಳಿಕ ಬೂತದ ವೇಶ ಹಾಕುವವನಿಗೆ ಎಣ್ಣೆ, ವೀಳ್ಯ ನೀಡಿ ಆ ಗುತ್ತಿನ ಯಜಮಾನನು ಅಪ್ಪಣೆಯನ್ನು ಕೊಡುತ್ತಾನೆ. ಇಲ್ಲಿಂದ ಬೂತ ಪಾತ್ರದಾರಿಯ ಮುಕ್ಯ ಬೂಮಿಕೆಯಲ್ಲಿ ಕೋಲದ ಮುಂದಿನ ಪ್ರಕ್ರಿಯೆಗಳು ಕಯ್ಗೊಳ್ಳುತ್ತದೆ.

kola1ಈ ಕೋಲದ ಮುಕ್ಯ ಆಕರ‍್ಶಣೆ ಬೂತದ ವೇಶ. ಮುಕದ ತುಂಬೆಲ್ಲ ಬಣ್ಣ ಬಳಿದುಕೊಂಡು, ತಲೆಗೆ ಅಣಿ ಕಟ್ಟಿ, ಕಾಲಿಗೆ ಗಗ್ಗರ ಕಟ್ಟಿ, ಸೊಂಟಕ್ಕೆ ಜಕ್ಕಲಣಿಯಂತಹ ಅಲಂಕಾರಿಕ ವಸ್ತುಗಳನ್ನು ಬಳಸಿಕೊಂಡು, ಒಂದು ಕಯ್ಯಲ್ಲಿ ಕಡ್ಗ, ಕತ್ತಿಯಂತಹ ಆಯುದಗಳನ್ನು ಹಿಡಿದುಕೊಂಡು, ಮತ್ತೊಂದು ಕಯ್ಯಲ್ಲಿ ಗಂಟೆಯನ್ನು ಹಿಡಿದುಕೊಂಡು, ಚಿನ್ನ ಬೆಳ್ಳಿಯಂತಹ ಆಬರಣಗಳನ್ನು ದರಿಸಿಕೊಂದು, ಮುಕವಾಡವನ್ನು ಹಾಕಿಕೊಂಡು, ವೇಶದಾರಿಗಳು ದಯ್ವವನ್ನು ಮಯ್ ಮೇಲೆ ಆಹ್ವಾಹಿಸಿಕೊಂಡು ಆವೇಶಬರಿತವಾಗಿ ಕುಣಿಯುವುದೇ ಒಂದು ಸೊಗಸು.

ಆ ಕುಣಿತಕ್ಕೆ ಮತ್ತಶ್ಟು ಆವೇಶ ಒದಗಿಸುವುದು ಕುಣಿತಕ್ಕೆ ತಕ್ಕಂತೆ ತಾಳ ಒದಗಿಸುವ ತಾಸೆ, ಡೋಲು, ಕೊಂಬು, ನಾದಸ್ವರದಂತಹ ಹಿಮ್ಮೇಳಗಳು. ಹಿಮ್ಮೇಳ ಮತ್ತು ಗಗ್ಗರದ ಸದ್ದು, ದಯ್ವದ ರೋಶಬರಿತ ಕೂಗುಗಳಂತಹ ಒಂದು ಪ್ರಕ್ರಿಯೆ ಒಂದು ಹೊಸ ವಾತಾವರಣವನ್ನು ಹುಟ್ಟುಹಾಕುವುದಲ್ಲದೇ, ನೋಡುಗರನ್ನು ಬಾವುಕರನ್ನಾಗಿಸುವುದರ ಜೊತೆ ಕೊಂಚ ಬಯವನ್ನೂ ಹುಟ್ಟಿಸುತ್ತದೆ. ಏಕೆಂದರೆ ಕೆಲವು ದಯ್ವಗಳು ಹಸಿ ಕೋಳಿಗಳನ್ನು ಪುರಿಯನ್ನು ತಿನ್ನುವುದು, ಮತ್ತು ಮಂದಿಯ ಕಡೆಗೆ ಆವೇಶವಾಗಿ ಓಡಿ ಬರುವುದೆಲ್ಲಾ ನಡೆದಾಗ ಸಹಜವಾಗಿಯೇ ಮಂದಿ ಹೆದರುತ್ತಾರೆ.

ಸುಮಾರು ತಡರಾತ್ರಿಯ ಹೊತ್ತಿನಲ್ಲಿ ಶುರುವಾಗುವ ಕೋಲವು, ಮರುದಿನ ಬೆಳಗ್ಗೆ ಅತವಾ ಮದ್ಯಾಹ್ನದ ವರೆಗೂ ಸಾಗುವುದುಂಟು. ಅಂದ ಮಾತ್ರಕ್ಕೆ ಇದು ಅಂದುಕೊಡಶ್ಟು ಸುಲಬವಲ್ಲ. ಏಕೆಂದರೆ ಬಾರಿ ಕೂಗಿಟ್ಟುಕೊಂಡು ಗಂಟೆಗಟ್ಟಲೆ ಕುಣಿಯುವುದೆಂದರೆ ಅದು ಸಾಮಾನ್ಯ ವಿಶಯವಲ್ಲ. ಅದರಲ್ಲೂ ವೇಶದಾರಿಯ ತಾಳ್ಮೆ, ಹುರುಪು ಮತ್ತು ಕಲೆಗೆ ಹಿಡಿದ ಕನ್ನಡಿಯಾಗಿರುತ್ತದೆ. ತಡರಾತ್ರಿಯಿಂದ ಬೆಳಗಿನವರೆಗೆ ಮೂರರಿಂದ ನಾಲ್ಕು ದಯ್ವಗಳು ಬೂತದ ವೇಶ ಹಾಕಿದವರ ಮೇಲೆ ಆಹ್ವಾನವಾಗುತ್ತದೆ.

ವಿಶೇಶವೆಂದರೆ ಕೆಲವೊಮ್ಮೆ ಒಂದು ದಯ್ವಕ್ಕೆ ವೇಶಹಾಕುವವರು ಇನ್ನೊಂದು ದಯ್ವಕ್ಕೂ ಬೂತ ಕಟ್ಟುವುದುಂಟು. ಮತ್ತೆ ಕೆಲವೊಮ್ಮೆ ಬೇರೆ ಬೇರೆ ದಯ್ವಕ್ಕೆ ಬೇರೆ ಬೇರೆಯವರು ವೇಶ ಹಾಕುವುದೂ ಉಂಟು. ಆದರೆ ಇದು ಕೇವಲ ಆವೇಶದ ಕುಣಿತಕ್ಕೆ ಮೀಸಲಾಗದೆ, ಬೆಳಗಾಗುತ್ತಿದ್ದಂತೆ ಊರಿನಲ್ಲಿ ಯಾವುದೇ ವಿಶಯಕ್ಕೆ ವಿವಾದಗಳಿದ್ದಲ್ಲಿ, ಎರಡೂ ಕಡೆಯವರನ್ನು ಕರೆಸಿ ವಿವಾದವನ್ನು ಇತ್ಯರ‍್ತ ಮಾಡುವುದು, ಊರಿನ ಮಂದಿಯಲ್ಲಿ ಯಾವುದೇ ಸಂಕಶ್ಟ ಅತವಾ ಗೊಂದಲಗಳಿದ್ದಲ್ಲಿ ಪರಿಹಾರ ನೀಡುವುದು, ಮತ್ತು ಕೆಲವು ವಿಶಯಕ್ಕೆ ಸಂಬಂದಪಟ್ಟಂತೆ ನ್ಯಾಯ ತೀರ‍್ಮಾನಗಳನ್ನು ಬೂತ ವೇಶದಾರಿಯಿಂದ ಮಾಡಿಸಲಾಗುತ್ತದೆ. ಇಂತಹ ವಿಚಾರಣೆಗಳನ್ನು ಹೆಚ್ಚಾಗಿ ಆ ಕುಟುಂಬದ ಅತವಾ ಆ ಊರಿನ ಮುಕ್ಯ ದಯ್ವವನ್ನು ಆಹ್ವಾಹಿಸಿ ಕೊಂಡವನಿಂದಲೇ ಮಾಡಿಸಲಾಗುತ್ತದೆ.

ಜೊತೆಗೆ ಊರಿನ ಮಂದಿ ಹರಕೆಯ ಹೆಸರಿನಲ್ಲಿ ಕೊಡುವ ಕೋಳಿಗಳನ್ನು, ಎಳನೀರುಗಳನ್ನು, ಸೀರೆ ಪಂಚೆಗಳಂತಹ ಬಟ್ಟೆಗಳನ್ನು, ಚಿನ್ನ ಬೆಳ್ಳಿಯಂತಹ ಆಬರಣಗಳನ್ನು ಪಡೆದುಕೊಂಡು, ಊರಿನ ಎಲ್ಲಾ ಮಂದಿಗೆ ಅಬಯ ನೀಡಿ ಹರಸುವ ಮೂಲಕ ಕೋಲವು ಕೊನೆಯ ಹಂತ ತಲುಪುತ್ತದೆ. ಹೀಗೆ ಎಲ್ಲಾ ವಿದಿವಿದಾನಗಳು ಮುಗಿದ ಬಳಿಕ ಮುಕಂಡರ ಸಮ್ಮುಕದಲ್ಲಿ, ಅವರ ಅಪ್ಪಣೆಯಂತೆ ದಯ್ವವು ಬೂತದ ವೇಶ ಹಾಕಿದವರ ಮಯ್ ಬಿಟ್ಟು ಮತ್ತೆ ತನ್ನ ಸ್ತಾನಕ್ಕೆ ಹಿಂದಿರುಗುವ ಮೂಲಕ ಕೋಲವೆಂಬ ವಿಶಿಶ್ಟ ಸಂಸ್ಕ್ರುತಿಗೆ ತೆರೆಬೀಳುತ್ತದೆ.

(ಚಿತ್ರ ಸೆಲೆ:  youtube, flickr)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: