ತೆರೆದಕುಣಿಕೆಯ ಅಂಕೆಯೇರ‍್ಪಾಟು

ಗಿರೀಶ ವೆಂಕಟಸುಬ್ಬರಾವ್.

ಹಿಂದಿನ ಬರಹದಲ್ಲಿ ಅಂಕೆಯರಿಮೆಯ ಮೊದಲ ಮೆಟ್ಟಿಲನ್ನು ಏರಿದ್ದೆವು, ಅಲ್ಲಿ ಬಂಡಿಯೊಳಗಿನ ಬಿಸುಪು ಹಾಗು ಬಂಡಿಯ ಉರುಬನ್ನು ಅಂಕೆಯಲ್ಲಿಡುವ ಬಗೆಯಿಂದ ಅಂಕೆಯೇರ‍್ಪಾಟಿನ ಬಗ್ಗೆ ಕೊಂಚ ಅರಿತೆವು. ಆ ಬರಹದಲ್ಲಿ ಓದಿದ ಮತ್ತಶ್ಟು ತಿಳಿವುಗಳನ್ನು ಒಮ್ಮೆ ಮೆಲಕು ಹಾಕೋಣ:

• ಅಂಕೆಯೇರ‍್ಪಾಟಿನ ಪರಿಚಯ, ಬಳಕೆಯ ಪದಗಳು ಹಾಗು ಹುರುಳುಗಳು
• ಅಂಕೆಯೇರ‍್ಪಾಟಿನಲ್ಲಿ ಅಳಕಗಳ ಪಾತ್ರ
• ಅಂಕೆಯಲ್ಲಿಟ್ಟ ಹಾಗೂ ಇಡದ ಹೊಲಬಿನ ನಡುವಳಿಕೆ
• ಅಂಕೆಯೇರ‍್ಪಾಟಿನ ಮತ್ತಶ್ಟು ಹೊಣೆಗಾರಿಕೆಗಳು
• ಅಳಕ ಅಳವಡಿಕೆ ಹಾಗು ಅಂಕೆಯರಿಮೆಯ ಪರಿಚಯ

ಈ ಬರಹದಲ್ಲಿ ಅಂಕೆಯೇರ‍್ಪಾಟುಗಳಲ್ಲಿರುವ ಬಗೆಗಳ ಬಗ್ಗೆ ತುಸು ತಿಳಿದುಕೊಳ್ಳೋಣ. ಅಂಕೆಯೇರ‍್ಪಾಟನ್ನು ನಡೆಸುವವನ (Operator) ಹೊಣೆಯ ಮೇಲೆ ಎರಡು ಬಗೆಗಳನ್ನು ಕಾಣಬಹುದು:

1. ತೆರೆದಕುಣಿಕೆಯ ಅಂಕೆಯೇರ‍್ಪಾಟು (Open Loop Control System) ಹಾಗೂ
2. ಮುಚ್ಚಿದ ಕುಣಿಕೆಯ ಅಂಕೆಯೇರ‍್ಪಾಟು (Close Loop Control System).

ತೆರೆದಕುಣಿಕೆಯ ಅಂಕೆಯೇರ‍್ಪಾಟು:

ಇದನ್ನು ಸರಾಗವಾಗಿ ಅರಿಯಲು, ಮೊದಲು ಒಂದು ಹಳೆಯಕಾಲದ ಬಟ್ಟೆ ಒಣಗಿಸುವ ಯಂತ್ರವನ್ನು (Drying Machine) ನೆನೆಯೋಣ, ಅದರಲ್ಲಿ ಬಳಸುವವರು(User/Operator) ಮೊದಲು ಅದಕ್ಕೆ ಒಗೆದ ಒದ್ದೆ ಬಟ್ಟೆಗಳನ್ನು ತುಂಬಿ, ಬಟ್ಟೆಗಳಿಗೆ ತಕ್ಕಂತೆ ಒಣಗುವಿಕೆಗೆ ಬೇಕಶ್ಟು ಹೊತ್ತನ್ನು ಇಟ್ಟು ನಡೆಯಲು ಅನುಮತಿಯನ್ನು ಕೊಡುತ್ತಾರೆ. ಯಂತ್ರದಲ್ಲಿರುವ ಅಂಕೆಯೇರ‍್ಪಾಟು ಅಶ್ಟು ಹೊತ್ತು ಮಾತ್ರ ಒಣಗಿಸುವಿಕೆಯ ನಡೆಸಿ ನಿಲ್ಲಿಸುತ್ತದೆ. ಬಳಿಕ ಬಳಸುವವರು ಬಟ್ಟೆಯಲ್ಲಿನ ತೇವವನ್ನು (ಅಂಕೆಯಲ್ಲಿಟ್ಟ ಮಾರ‍್ಪುಕ) ನೋಡುತ್ತಾರೆ, ತೇವ ಆರದಿದ್ದರೆ ಮತ್ತಶ್ಟು ಹೊತ್ತನ್ನು ಯಂತ್ರಕ್ಕೆ ನೀಡಿ ಅದನ್ನು ಮತ್ತೆ ನಡೆಸುವರು.

ಇಲ್ಲಿರುವ ಅಂಕೆಯೇರ‍್ಪಾಟಿಗೆ ಬಟ್ಟೆಯಲ್ಲಿರುವ ತೇವದ ಮಟ್ಟ ಅರಿಯಲು ಬಾರದು ಹಾಗೆಯೆ ಒಳಗೆ ತುಂಬಿದ ಬಟ್ಟೆಗಳು ಒಣಗಬೇಕಾಗುವಶ್ಟು ಹೊತ್ತನ್ನು ತನ್ನಶ್ಟಕ್ಕೆ ತಾನು ತೀರ‍್ಮಾನಿಸಲೂ ಬಾರದು. ತನಗೆ ನೀಡಿದ ಹೊತ್ತಿಗನುಸಾರವಾಗಿ ಯಂತ್ರವನ್ನು ನಡೆಸುವುದಶ್ಟೆ ಅದರ ಹೊಣೆ. ಯಾವ ಅಂಕೆಯೇರ‍್ಪಾಟಿಗೆ ತಾನು ಅಂಕೆಯಲ್ಲಿಟ್ಟ ಮಾರ‍್ಪುಕದ ಅರಿವು ತನಗೇ ಇರುದಿಲ್ಲವೋ ಹಾಗೂ ತನ್ನ ನಡೆಯಮಟ್ಟವನ್ನು ತೀರ‍್ಮಾನಿಸಲು ಮನುಶ್ಯನರು ಇರಲೇಬೇಕೋ ಅಂತದಕ್ಕೆ ತೆರೆದಕುಣಿಕೆಯ ಅಂಕೆಯೇರ‍್ಪಾಟು (open looop control system) ಎನ್ನುವರು.

ಇನ್ನಶ್ಟು ಹುರುಳನ್ನು ಅರಿಯಲು ನಮ್ಮ ಮೊದಲ ಬರಹದಲ್ಲಿ ಓದಿದ ಬಂಡಿಯ ಉರುಬಿನ ಅಂಕೆಯೇರ‍್‌ಪಾಟನ್ನು (Speed Control System) ಮತ್ತೆ ನೋಡೋಣ. ಇದೂ ಕೂಡ ತೆರೆದಕುಣಿಕೆಯ ಅಂಕೆಯೇರ‍್‌ಪಾಟು. ಇಲ್ಲಿ ಬಂಡಿಯ ನಡೆಸುಗೆ (Driving) ಒಂದು ಹೊಲಬು(Process), ತೋರುಹಲಗೆಯಲ್ಲಿರುವ ಉರುಬಿನತೋರಳಕ (Speedometer) ಬಂಡಿ ನಡೆಸುವವರಿಗೆ ಉರುಬಿನ ಅಳೆತಯನ್ನು(Measured Value) ತೋರಿಸುತ್ತಿರುತ್ತದೆ. ಅವರ ಮನದಲ್ಲಿರುವ ಇಟ್ಟಮಟ್ಟಕ್ಕಿಂತ (Set Point) ಉರುಬು ಹೆಚ್ಚು-ಕಡಿಮೆಯಾದಾಗ ಅಂಕೆಯು ತಪ್ಪುತ್ತದೆ (Control Error). ಅಂಕೆಯತಪ್ಪಿಗೆ ತಕ್ಕಂತೆ, ನಡೆಸುವವರು ತನ್ನ ಕಾಲಿನಿಂದ ಉರುಬುಹೆಚ್ಚುಕವನ್ನು(Accelerator) ತುಳಿಯುತ್ತಾರೆ.

ಉರುಬುಹೆಚ್ಚುಕದ ತುಳಿತವನ್ನು ಉರುಬಿನ ಅಂಕೆಗಾರ (Controller) ಅರಿತು, ಕೊನೆಯ ಅಂಕೆಯಚೂಟಿ(Final Control Element) ಆಗಿರುವ ಉರುವಲಿನ ಅಂಕೆಯತೆರಪನ್ನು(Control Valve) ಬೇಕಶ್ಟು ತೆರೆದು(Opening) ಉರುವಲಿನ ಹರಿವನ್ನು ಏರಿಳಿಸುವಂತೆ ಮಾಡಿ, ಬಂಡಿಯ ಉರುಬನ್ನು ಅಂಕೆಗೆ ತರುವಂತೆ ಮಾಡುವುದು. ಬಂಡಿಯಲ್ಲಿರುವ ಉರುಬಿನ ಅಂಕೆಗಾರಕ್ಕೆ ಉರುಬಿನ ಮಟ್ಟ ಹಾಗೂ ಅಂಕೆಯ ತೆರಪಿನ ತೆರವು ತನ್ನಶ್ಟಕ್ಕೆ ತಾನೇ ತಿಳಿಯದು, ಉರುಬಿನ ಮಟ್ಟ ಗಮನಿಸಿ ಉರುಬುಹೆಚ್ಚುಕದಿಂದ ನಡೆಸುವ ಉರುಬಿನ ಅಂಕೆಯೇರ‍್‌ಪಾಟನ್ನು ನಡೆಸುವ ಹೊಣೆ ಬಂಡಿ ನಡೆಸುಗರದು.

open-loop-control

ತೆರೆದಕುಣಿಕೆಯ ಅಂಕೆಯೇರ‍್ಪಾಟಿನ ಬಗೆಗೆ ನೆನಪುಗೆಗಳು:

• ಉರುಬುತೋರಳಕದಿಂದ ಉರುವಲಿನ ಹರಿವಿನವರೆಗೂ ಇರುವ ಅಂಕೆಯ ನಡೆತದಹಾದಿಯನ್ನು ಉರುಬಿನ ಅಂಕೆಯಕುಣಿಕೆ(Control Loop) ಎನ್ನುತ್ತಾರೆ. ಇಲ್ಲಿ ಗಮನಿಸಿದರೆ ಈ ಅಂಕೆಯಕುಣಿಕೆಯ ನಡುವೆ ನಡೆಸುವ ಮನುಶ್ಯನಿರಲೇಬೇಕು. ಹಾಗಾಗಿಯೇ ಇದನ್ನು ತೆರೆದಕುಣಿಕೆಯ ಅಂಕೆಯೇರ‍್ಪಾಟು (Open Loop Control System) ಎಂದು ಕರೆಯುತ್ತಾರೆ.

• ತೆರೆದ ಕುಣಿಕೆಯ ಅಂಕೆಯೇರ‍್‌ಪಾಟಿನಲ್ಲಿ ಹೊಲಬು ನಡೆಸುವವರ ಗಮನ ತುಂಬಾ ಮುಕ್ಯ. ಇಟ್ಟಮಟ್ಟಕ್ಕೆ ತರುವಶ್ಟು ನೀಡಿಕೆ (Input) ಉರುಬು ಹೆಚ್ಚುಕದಿಂದ ಅಂಕೆಗಾರಕ್ಕೆ ನೀಡುತ್ತಿತ್ತಾರೆ.ಈ ನೀಡಿಕೆಯನ್ನು ಅಂಕೆಗಾರ ಅರಿತು, ಕೊನೆಯ ಅಂಕೆಯಚೂಟಿಯನ್ನು ತೆರೆಯುವಶ್ಟು ಅಂಕೆಯ ಹೊಮ್ಮಿಕೆಯನ್ನು (Controller Output) ನೀಡುತ್ತದೆ. ಆದುದರಿಂದ ಈ ಹಮ್ಮುಗೆಯಲ್ಲಿ ಹೊಲಬು ನಡೆಸುವವರು ಯಾವಾಗಲೂ ತೋರಳಕದ ಮೇಲೆ ತನ್ನ ಗಮನವನ್ನು ಹೊಲಬು ನಡೆಯುವಶ್ಟು ಹೊತ್ತೂ ನೀಡುತ್ತಿರಬೇಕು.

• ಹೊಲಬಿನಲ್ಲಿ ಗೊಂದಲವುಂಟಾದಾಗ [ಎತ್ತುಗೆಗೆ: ಏರುಬೀದಿ ಎದುರಾದಾಗ ಉರುಬು ಇಳಿದು ಗೊಂದಲವುಂಟಾಗುತ್ತದೆ], ತೋರಳಕದ ಬೆಲೆ ಏರಿಳಿಯುವುದು. ಅದರಿಂದ ಅಂಕೆಯ ತಪ್ಪು (Control Error) ಉಂಟಾಗುತ್ತದೆ.

• ಒಟ್ಟಿನಲ್ಲಿ ಈ ಅಂಕೆಯೇರ‍್ಪಾಟು ಕಯ್ ನಡಿಕೆಯಿಂದ (Manual) ನಡೆಯುವುದು, ತನ್ನಡೆತ (Automatic) ಇಡಿಯಾಗಿ ಇಲ್ಲದ್ದು, ಯಾವಾಗಲೂ ಕಯ್ ನಡಿಕೆಯಿಂದ(Manual) ನಡೆಯುವುದರಿಂದ ಕಡಿಮೆ ಕಟ್ಟುನಿಟ್ಟಿನದು (Accuracy)

• ಆದರೆ ಅತಿ ಸುಲಬದ ಅಳವಡಿಕೆಯ ಹಿರಿಮೆ ಈ ಅಂಕೆಯೇರ‍್ಪಾಟಿನದು ಹಾಗೂ ಇದನ್ನು ಕಟ್ಟಲು ಬೇಕಾಗುವ ವಸ್ತುಗಳು ಕಡಿಮೆ ಮೊತ್ತದವು.

ಮುಂದಿನ ಬರಹದಲ್ಲಿ ಮುಚ್ಚಿದ ಕುಣಿಕೆಯ ಅಂಕೆಯೇರ‍್ಪಾಟು (Close Loop Control System) ಹೇಗೆ ಹೊಲಬಿನ ಅಂಕೆಯನ್ನು ತನ್ನಡೆತಕ್ಕೆ (Automatic) ತರಬಹುದೆಂದು ಅರಿಯುವತ್ತ ಸಾಗೋಣ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: