ಇದರ ಕಯ್ಗಳು ಏಕೆ ಅಂಟಿಕೊಳ್ಳುವುದಿಲ್ಲ?

 ವಿವೇಕ್ ಶಂಕರ್.

ಎಂಟು ಕಯ್ಗಳಿರುವ ಹಾಗೂ ಕಡಲುಗಳಲ್ಲಿ ನೆಲೆಸಿರುವ ಹಲವು ಉಸುರಿಗಳಲ್ಲಿ ಎಂಟುತೋಳ(octopus) ಒಂದು. ಈ ಎಂಟುತೋಳದ ಕಯ್ಯಿಯ ನಡವಳಿಕೆಯು ಅರಿಮೆಯ ಜಗತ್ತಿಗೆ ಒಂದು ಬೆರಗು, ಈ ನಡುವಳಿಕೆಯನ್ನು ಅರಿಯಲು ಹಲವು ಅರಕೆಗಳು ನಡೆಯುತ್ತಿವೆ. ಅದರಲ್ಲೂ ಎಂಟುತೋಳದ ಎರಡು ಕಯ್ಗಳು ಎಂದೆಂದಿಗೂ ಅಂಟಿಕೊಳ್ಳದೇ ಬೇರೆ ಬೇರೆ ಇರುವುದು! ಇದರ ಮಿದುಳಿನ ಜೊತೆ ಇದರ ಕಯ್ಗಳು ಅರಹು ಮಾಡುವುದಿಲ್ಲ, ಹಾಗಾದರೆ ತನ್ನ ಕಯ್ ಎಲ್ಲಿದೆಯೆಂದು ತಿಳಿಯದೆ ಮತ್ತೊಂದು ಕಯ್ಗೆ ಅಂಟಿಕೊಳ್ಳುವುದಿರುವುದು ಹೇಗೆ ಎಂದು ಹಲವು ಅರಕೆಗಾರರಲ್ಲಿ ತುಂಬಾ ಬೆರಗು ಉಂಟು ಮಾಡಿದೆ. ಇದಕ್ಕೆ ಏನು ದೂಸರು ಎನ್ನುವುದೂ ಕೂಡ ಇವರಲ್ಲಿರುವ ಒಂದು ಕೇಳ್ವಿ.

octopus_arm

ಆದರೆ ಇತ್ತೀಚಿನ ಅರಕೆಯ ಪ್ರಕಾರ ಈ ನಡವಳಿಕೆಗೆ ಕಾರಣ ಇರ‍್ಪರಿಮೆ (chemistry)  ಇರಬೇಕೆಂದು ತಿಳಿದು ಬಂದಿದೆ. ಈ ಆರಯ್ಕೆಗಳು ಹೇಳುವುದೇನೆಂದರೆ ಎಂಟುತೋಳದ ಕಯ್ಯಿಯ ತೊಗಲಿನಲ್ಲಿ ಹಲವು ಸೀರಕೂಟಗಳು(molecules) ಉಂಟಾಗುತ್ತವೆ, ಈ ಸೀರಕೂಟಗಳು ತಮ್ಮ ಕಯ್ಗಳನ್ನು ಅಂಟಿಕೊಳ್ಳದ ಹಾಗೆ ಕೆಲಸ ಮಾಡುತ್ತವೆ. ಒಂದು ಕಯ್‍ನಲ್ಲಿ ಈ ಸೀರಕೂಟದ ಮಾಳ್ಕೆ(production) ನಿಂತರೆ ಆ ಕಯ್ಯನ್ನು ಎಳ್ದೋಳದ ಇನ್ನೊಂದು ಕಯ್ ಹಿಡಿಯಬೇಕು, ಆದರೆ ಈ ನಡವಳಿಕೆಯೂ ನೆರೆಯಾಗಿ ಯಾವಾಗಲೂ ಕಾಣಿಸುತ್ತಿಲ್ಲ. ಈ ನಡವಳಿಕೆಯನ್ನು ಇನ್ನೂ ತಿಳಿಯಲು ಎಂಟುತೋಳದ ಕಯ್ಯನ್ನು ಕತ್ತರಿಸಿ ಅದನ್ನು ಇನ್ನೊಂದು ಎಂಟುತೋಳಕ್ಕೆ ನೀಡಿದಾಗ ಒಮ್ಮೊಮ್ಮೆ ಅದು ಹಿಡಿಯುತ್ತಿತ್ತು. ಆದರೆ ಯಾವಾಗಲೂ ಹಿಡಿಯುತ್ತಿರಲಿಲ್ಲ. ಇದಕ್ಕೆ ಕಾರಣ ಇದರ ನರ ಎರ‍್ಪಾಟು. ಮಿದುಳಿನ ಜೊತೆ ಕಯ್ಗಳಲ್ಲಿ ಕೂಡ ನಡುವಣವಿಲ್ಲದ ನರ ಏರ‍್ಪಾಟು (decentralised nervous system) ಈ ಉಸುರಿಗಳಲ್ಲಿ ಇವೆ. ಹಾಗಾಗಿ ಮಿದುಳು ಮತ್ತು ಕಯ್ ನಡುವೆ ಗೊಂದಲಗಳು ಉಂಟಾಗುತ್ತವೆ.

ಇದನ್ನು ತಿಳಿಯಲು ಮತ್ತಶ್ಟು ಕೆಲವು ಆರಯ್ಕೆಗಳನ್ನು ಮಾಡಲಾಯಿತು, ಅದರಲ್ಲಿ ಕತ್ತರಿಸಿರುವ ಎಂಟುತೋಳದ ಕಯ್ಗಳು ಹಲವು ವಸ್ತುಗಳನ್ನು ಹೇಗೆ ಹಿಡಿಯುತ್ತವೆ ಎಂದು ತಿಳಿಯುವ ಪ್ರಯತ್ನ ಮಾಡಲಾಯಿತು. ಕತ್ತರಿಸುವ ಕಯ್ಯು ಸುಮಾರು ಅರೆ ಗಂಟೆ ಕೆಲಸ ಮಾಡುತ್ತದೆ ಆದರೆ ಇದೂ ಕೂಡ ಎಂಟುತೋಳದ ತೊಗಲನ್ನು ಹಿಡಿಯುತ್ತಿರಲಿಲ್ಲ, ಹಾಗಾಗಿ ಈ ನಡವಳಿಕೆಗೆ ಮಿಂಚಿನ ಕಾರಣ ಎಂಬ ವಾದವನ್ನು ಅರಕೆಗಾರರು ಕಯ್ಬಿಡ ಬೇಕಾಯಿತು. ಹಾಗದರೆ ಇದಕ್ಕೆ ಒಂದೇ ಕಾರಣ, ಇರ‍್ಪರಿಮೆಯೇ. ಆದರೆ ಇದಕ್ಕೆ ಕಾರಣವಾಗಿರುವ ಸೀರಕೂಟಗಳು ಯಾವವು ಎಂದು ಇನ್ನೂ ತಿಳಿದಿಲ್ಲ. ತೊಗಲಿನಲ್ಲಿ ಈ ಸೀರಕೂಟಗಳು ಇದ್ದರೆ ಅಂಟಿಕೊಳ್ಳುವುದನ್ನು ಇದು ತಡೆಯುತ್ತದೆ. ಇದನ್ನು ಮಿದುಳು ಕೂಡ ತಡೆಯುವುದಕ್ಕೆ ಆಗುವುದಿಲ್ಲ. ಅರಕೆಗಾರರು ಹೇಳುವಂತೆ ಈ ಸೀರಕೂಟದಲ್ಲಿ ಉಂಟಾಗುವ ನಡವಳಿಕೆಯನ್ನು ಮಿದುಳು ತಡೆಯಬಹುದು, ಆದರೆ ಹಲವು ಸಲ ಮಿದುಳಿನ ಅರಹುವನ್ನು ಕಯ್ ಕೇಳುವುದಿಲ್ಲವೆಂದು ತಿಳಿಯುತ್ತದೆ. ಇದರಿಂದ ಹಲವು ಗೊಂದಲಗಳು ಉಂಟಾಗುತ್ತವೆ.

ಆದರೆ ಈ ಉಸುರಿಯ ಈ ನಡವಳಿಕೆಯನ್ನು ಉಕ್ಕಾಳು(robots)ಗಳಲ್ಲೂ ಮಾಡಬಹುದೆಂದು ಹಲವು ಅರಕೆಗಾರರು ನಂಬಿದ್ದಾರೆ. ಎಂಟುತೋಳವು ಯಾವ ವಸ್ತುಗಳನ್ನು ಹಿಡಿಯುವುದಿಲ್ಲ, ಯಾವುದನ್ನು ಹಿಡಿಯುತ್ತವೆ ಎಂಬ ಈ ನಡತೆಯನ್ನು ಉಕ್ಕಾಳುಗಳನ್ನು ಬಳಸಿ ಪತ್ತೆ ಮಾಡಬಹುದೆಂಬ ಯೋಚನೆ ನಡೆಸಿದ್ದಾರೆ. ಇದಕ್ಕಾಗಿ ಹೊಸ ಬಗೆಯ ಉಕ್ಕಾಳುಗಳನ್ನು ಹುಟ್ಟುಹಾಕುವ ಯೋಚನೆಗಳಿವೆ. ಆದರೆ ಇದು ಇನ್ನು ಎಳೆತನದಲ್ಲಿದೆ, ಈ ಬಗೆಯ ಉಕ್ಕಾಳು ಇನ್ನೂ ದೂರದ ಕನಸು ಯಾಕೆಂದರೆ ಎಂಟುತೋಳದಲ್ಲಿ ಯಾವ ಸೀರಕೂಟಗಳು ಕಯ್ಗಳನ್ನು ಅಂಟಿಕೊಳ್ಳದ ಹಾಗೆ ನೋಡಿಕೊಳ್ಳುತ್ತದೊ, ಅದನ್ನು ಇನ್ನೂ ತಿಳಿಯುವ ಹಂತದಲ್ಲಿ ಅರಕೆಗಾರರು ಇದ್ದಾರೆ. ಇದರ ಜೊತೆ ಇದು ಬೇರೆ ಉಸುರಿಗಳಲ್ಲೂ ಇವೆಯೇ ಎನ್ನುವುದರ ಅರಕೆಯಲ್ಲಿ ತೊಡಗಿದ್ದಾರೆ. ಆದರೆ ಎಂಟುತೋಳದ ಈ ನಡತೆಯನ್ನು ಗಮನಿಸಿದರೆ ಇದೊಂದು ಸಿಕ್ಕಲಾದ ಉಸುರಿಯೆಂದು ಒಪ್ಪಬಹುದು ಅಲ್ವೇ ?

(ಮಾಹಿತಿ ಸೆಲೆ: theverge.com)

(ಚಿತ್ರ ಸೆಲೆ: scientificamerican.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: