ಕರ‍್ನಾಟಕದಲ್ಲಿ ಶಾತವಾಹನರು

– ಹರ‍್ಶಿತ್ ಮಂಜುನಾತ್.

Shathavahan

ದಕ್ಶಿಣ ಬಾರತದಲ್ಲಿ ಮೊಟ್ಟಮೊದಲ ಬಾರಿಗೆ ವಿಶಾಲ ಸಾಮ್ರಾಜ್ಯವೊಂದನ್ನು ಕಟ್ಟಿದ ಹಿರಿಮೆ ಶಾತವಾಹನರದು. ಮೊದಲು ಮವ್ರ್ಯರ ವಶದಲ್ಲಿದ್ದ ಶಾತವಾಹನರು ಮವ್ರ್ಯರ ಅವನತಿಯ ಬಳಿಕ ಸ್ವತಂತ್ರ ನಾಡೊಂದನ್ನು ಕಟ್ಟುವುದರ ಜೊತೆಗೆ ಉತ್ತರ ಬಾರತದಲ್ಲಿಯೂ ತಮ್ಮ ನಾಡನ್ನು ವಿಸ್ತರಿಸುವಲ್ಲಿ ಕೆಲಮಟ್ಟಿಗೆ ಯಶಸ್ವಿಯಾದರು. ಸುಮಾರು 460 ವರುಶಗಳ ಕಾಲ ಶಾತವಾಹನ ವಂಶದ ಒಟ್ಟು 30 ಮಂದಿ ಅರಸರು ನಾಡನ್ನಾಳಿದರು. ಹಳಮೆ ಎಂದ ಮೇಲೆ ಅಲ್ಲಿ ಕೆಲವು ಗಟನೆಗಳ ಕುರಿತು ಹಳಮೆಗಾರರಲ್ಲಿ ವಾದ ವಿವಾದಗಳಿರುವುದು ಸಹಜ. ಹಾಗೆಯೇ ಶಾತವಾಹನ ಎಂಬ ಪದದ ಹುರುಳು, ಶಾತವಾಹನರ ಕಾಲ, ಮೂಲ ನೆಲೆ, ಹಾಗೂ ಒಟ್ಟು ದೊರೆಗಳ ಸಂಕ್ಯೆಯ ಬಗ್ಗೆ ಕೆಲ ಹಳಮೆಗಾರರಲ್ಲಿ ಗೊಂದಲಗಳಿವೆ. ಆದರೆ ಶಾತವಾಹನರು ಕರ‍್ನಾಟಕದ ಬಳ್ಳಾರಿಯನ್ನು ಮೂಲವಾಗಿಸಿಕೊಂಡು ಕ್ರಿ. ಪೂ. 230 ರಿಂದ ಕ್ರಿ. ಶ. 220 ರ ವರೆಗೆ ಆಳ್ವಿಕೆ ನಡೆಸಿದರು ಎಂಬುದು ಹೆಚ್ಚಿನ ಹಳಮೆಗಾರರ ವಾದ. ಹಾಗಾಗಿ ಕರ‍್ನಾಟಕವನ್ನು ಆಳಿದ ಮೊಟ್ಟ ಮೊದಲ ಪ್ರಮುಕ ರಾಜರೇ ಶಾತವಾಹನರು. ಅಲ್ಲದೇ ಈವರೆಗೆ ಹಳಮೆಗಾರರಿಗೆ ಸಿಕ್ಕಿರುವ ಕೆಲವು ಕಲ್ಬರಹಗಳು, ಕಲ್ಲಿನ ಕೆತ್ತನೆಗಳು ಶಾತವಾಹನರ ಕುರಿತು ಬರಹ ರಚನೆಗೆ ಪ್ರಮುಕ ಆದಾರಗಳಾಗಿವೆ.

ಶಾತವಾಹನರ ಪ್ರಮುಕ ದೊರೆಗಳು :
ಸಿಮುಕ (ಕ್ರಿ. ಪೂ. 235 ರಿಂದ ಕ್ರಿ. ಪೂ. 212) –ಈತನು ಶಾತವಾಹನರ ಮೊದಲ ದೊರೆ. ಶ್ರೀಮುಕ ಎಂಬುದು ಸಿಮುಕನಿಗಿದ್ದ ಇನ್ನೊಂದು ಹೆಸರು. ಅಶೋಕನ ಆಡಳಿತದ ಬಳಿಕ ಮವ್ರ್ಯರ ಅವನತಿಯ ಸಮಯದಲ್ಲಿ ಸ್ವತಂತ್ರ ನಾಡೊಂದನ್ನು ಕಟ್ಟಿದ ಹಿರಿಮೆ ಸಿಮುಕನದ್ದು. ಈತನ ಸಾದನೆಗಳ ಬಗ್ಗೆ ಹೆಚ್ಚಿನ ಮಾಹಿತಿ ಇದುವರೆಗೆ ಹಳಮೆಗಾರರಿಗೆ ತಿಳಿದುಬಂದಿಲ್ಲ. ಪುಣೆ ಬಳಿಯ ನಾನಾಗಾಟ್ ನಲ್ಲಿ ಸಿಕ್ಕಿರುವ ಕಲ್ಬರದಲ್ಲಿ ಈತನನ್ನು ‘ರಾಯ ಸಿಮುಕ’ ಎಂದು ಹೊಗಳಲಾಗಿದೆ. ಸಿಮುಕನ ತರುವಾಯ ಅವನ ತಮ್ಮನಾದ ಕನ್ನರ (ಕ್ರುಶ್ಣ) ಸುಮಾರು ಹತ್ತು ವರುಶಗಳ ಕಾಲ ಆಡಳಿತ ನಡೆಸಿದನು.
ಒಂದನೆಯ ಸಾತಕರ‍್ಣಿ (ಕ್ರಿ. ಪೂ. 202 ರಿಂದ ಕ್ರಿ. ಪೂ.192): ಶಾತವಾಹನರ ಪ್ರಬಲ ದೊರೆಗಳಲ್ಲಿ ಒಂದನೆಯ ಸಾತಕರ‍್ಣಿ ಕೂಡ ಒಬ್ಬನು. ಪಯ್ಟಣ(ಪ್ರತಿಶ್ಟಾನ)ವನ್ನು ರಾಜದಾನಿಯನ್ನಾಗಿ ಮಾಡಿಕೊಂಡು ಆಡಳಿತ ನಡೆಸಿದ ಈತನ ಮುಂದಾಳತ್ವದಲ್ಲಿ ಶುಂಗರ ಆಡಳಿತದಿಂದ ಮಾಳವವನ್ನು ವಶಪಡಿಸಿಕೊಳ್ಳಲಾಯಿತು. ಈತನ ಕಾಲದಲ್ಲಿ ಶಾತವಾಹನರ ನಾಡು ಮಾಳವ, ಗೋದಾವರಿ ಕೊಳ್ಳಗಳನ್ನು ಒಳಗೊಂಡಿತ್ತು. ನಾನಾಗಾಟ್ ನಲ್ಲಿ ಸಿಕ್ಕಿರುವ ಕಲ್ಬರದಲ್ಲಿ ಈತನನ್ನು ‘ದಕ್ಶಿಣಾಪತೇಶ್ವರ’ ಎಂದು ಹೊಗಳಲಾಗಿದೆ.

ಎರಡನೆಯ ಸಾತಕರ‍್ಣಿ (ಕ್ರಿ. ಪೂ.156 ರಿಂದ ಕ್ರಿ. ಪೂ.100): ಈತನು ಶಾತವಾಹನರ ಆರನೆಯ ದೊರೆ ಜೊತೆಗೆ ಬಾರಿ ಆಡಂಬರಿ ಕೂಡ. ಈತನು ತನ್ನ ಆಡಳಿತದ ಅವದಿಯಲ್ಲಿ ಮದ್ಯಪ್ರದೇಶದ ವರೆಗೆ ತನ್ನ ಅದಿಕಾರದ ವ್ಯಾಪ್ತಿಯನ್ನು ವಿಸ್ತರಿಸಿದನು ಮತ್ತು ಕಾರವೇಲನ ಸಾವಿನ ಬಳಿಕ ಕಳಿಂಗವನ್ನು ತನ್ನ ಆಡಳಿತಕ್ಕೆ ಸೇರಿಸಿಕೊಂಡಿದ್ದನು.

ಗವ್ತಮೀಪುತ್ರ ಸಾತಕರ‍್ಣಿ (ಕ್ರಿ.ಶ.106-130): ಶಾತವಾಹನರ ಇಪ್ಪತ್ತ ಮೂರನೆಯ ದೊರೆಯಾಗಿದ್ದ ಗವ್ತಮೀಪುತ್ರ ಸಾತಕರ‍್ಣಿಯು ಶಾತವಾಹನರಲ್ಲಿಯೇ ಅತ್ಯಂತ ಉತ್ತಮನು. ಪಶ್ಚಿಮ ಇಂಡಿಯಾದಲ್ಲಿ ಶಕ್ತಿಶಾಲಿಗಳಾಗಿದ್ದ ಶಕರ ಯಶಸ್ವಿ ದಾಳಿಯಿಂದ ಸುಮಾರು ಅಯ್ವತ್ತು ವರುಶಗಳ ಕಾಲ ತಾತ್ಕಾಲಿಕ ಅವನತಿ ಹೊಂದಿದ್ದ ಶಾತವಾಹನರ ಒಡೆತನವನ್ನು ಮತ್ತೆ ಕಟ್ಟಿ, ಉತ್ತಮ ಸ್ತಿತಿಗೆ ಕೊಂಡೊಯ್ದ ಹಿರಿಮೆ ಗವ್ತಮೀಪುತ್ರ ಸಾತಕರ‍್ಣಿಗೆ ಸಲ್ಲುತ್ತದೆ. ಪುಲುಮಾಯಿಯ ನಾಶಿಕ ಕಲ್ಬರಹದಲ್ಲಿ ಗವ್ತಮೀಪುತ್ರ ಸಾತಕರ‍್ಣಿಯು, ಶಕರ ದೊರೆ ನಹಪಾಣನನ್ನು ಸೋಲಿಸಿ, ಕೊಂಕಣ, ಮಹರಾಶ್ಟ್ರ, ಸವ್ರಾಶ್ಟ್ರ ಮತ್ತು ಮಾಳವಗಳನ್ನು ತನ್ನ ಆಳ್ವಿಕೆಗೆ ಸೇರಿಸಿಕೊಂಡನು. ಬಳಿಕ ಕೋಲಾಪುರ ಮತ್ತು ಬನವಾಸಿಗಳನ್ನು ಗೆದ್ದುಕೊಂಡನು. ಈತನ ಕಾಲದಲ್ಲಿ ಶಾತವಾಹನರ ಸಾಮ್ರಾಜ್ಯವು ದಕ್ಶಿಣದ ಕಂಚಿನವರೆಗೆ ಹಬ್ಬಿತು. ಪರನಾಡಿನವರಾದ ಶಕರು ಮತ್ತು ಯವನ(ಗ್ರೀಕ್)ರನ್ನು ಸೋಲಿಸಿ ಪರಕೀಯರ ಒಡೆತನದಿಂದ ನಮ್ಮ ನಾಡನ್ನು ಕೆಲ ಸಮಯಗಳ ವರೆಗೆ ಮುಕ್ತಗೊಳಿಸಿದ ಶ್ರೇಯಸ್ಸು ಗವ್ತಮೀಪುತ್ರ ಸಾತಕರ‍್ಣಿಗೆ ಸಲ್ಲುತ್ತದೆ.

ಗವ್ತಮೀಪುತ್ರ ಸಾತಕರ‍್ಣಿಯು ಕೇವಲ ಒಬ್ಬ ವೀರ, ಶವ್ರ್ಯತೆ ತುಂಬಿದ ನಾಯಕನಾಗಿರದೆ, ಉತ್ತಮ ಆಡಾಳಿತಾದಿಕಾರಿಯೂ ಆಗಿದ್ದನು. ಈತನು ಉತ್ತಮ ಗುಣ ಹೊಂದಿದವನು, ದೀನದಲಿತರಿಗೆ ಆಶ್ರಯದಾತನೂ, ಅವರ ಕಶ್ಟನಶ್ಟಗಳ ಬಗ್ಗೆ ಅನುಕಂಪ ಹೊಂದಿದವನೂ ಆಗಿದ್ದನು. ವರ‍್ಣಬೇದವನ್ನು ತಡೆಗಟ್ಟುವಲ್ಲಿ ಹೆಚ್ಚಿನ ಕಾಳಜಿ ವಹಿಸಿದನು. ದಾನ-ದರ್‍ಮಗಳಲ್ಲಿ ಆಸಕ್ತಿ ಹೊಂದಿದ್ದನು. ಈತನು ತನ್ನ ಆಡಳೀತಾವದಿಯಲ್ಲಿನ ದಕ್ಶತೆಯಿಂದಾಗಿ ಮಂದಿಯ ಪ್ರೀತಿಗೆ ಪಾತ್ರನಾಗಿದ್ದನು. ಗವ್ತಮೀಪುತ್ರ ಸಾತಕರ‍್ಣಿಯ ಆಳ್ವಿಕೆಯು ದಕ್ಶಿಣ ಇಂಡಿಯಾದ ಹಳಮೆಯಲ್ಲಿಯೇ ಒಂದು ಪ್ರಮುಕ ಬಾಗವಾಗಿದೆ.

ಶಾತವಾಹನರ ಕೊಡುಗೆಗಳು:
ದಕ್ಶಿಣ ಇಂಡಿಯಾದ ಹಳಮೆಯಲ್ಲಿಯೇ ಮೊಟ್ಟಮೊದಲ ಬಾರಿಗೆ ಒಂದು ವಿಶಾಲ ನಾಡನ್ನು ಕಟ್ಟಿ ಬೆಳೆಸಿದ ಕೀರ‍್ತಿ ಶಾತವಾಹನರಿಗೆ ಸಲ್ಲುತ್ತದೆ. ಉತ್ತಮ ಆಡಳಿತ, ಹಣಕಾಸಿನ ಅಬಿವ್ರುದ್ದಿ, ಕಲ್ಲಿನ ಕೆತ್ತನೆಗಳು, ಕಲೆ, ನಲ್ಬರಹಗಳು, ಮಂದಿಯಲ್ಲಿ ಸಮಾನತೆ, ದಾರ‍್ಮಿಕ, ಸಾಂಸ್ಕ್ರುತಿಕ ಕೊಡುಗೆಗಳೂ ಸೇರಿದಂತೆ ಇಂಡಿಯಾದ ಹಳಮೆಯನ್ನು ಶ್ರೀಮಂತಗೊಳಿಸಿದವರಲ್ಲಿ ಶಾತವಾಹನರದೂ ಪ್ರಮುಕ ಪಾಲು.
ಪ್ರಾಮಾಣಿಕ ಆಡಳಿತ: ಶಾತವಾಹನರು ಬಹುಮಟ್ಟಿಗೆ ಮವ್ರ್ಯರ ಆಡಳಿತ ಕ್ರಮವನ್ನು ಅನುಸರಿಸಿದರು. ಶಾತವಾಹನರ ರಾಜವಂಶದಲ್ಲಿ ರಾಜಮಾತೆಯರಿಗೆ ಉನ್ನತ ಪ್ರಾಶ್ಯಸ್ತ್ಯ ನೀಡುತ್ತಿದ್ದರು. ಶಾಂತಿ ಸುವ್ಯವಸ್ತೆ, ಸಾಮಾಜಿಕ ಮತ್ತು ದಾರ್‍ಮಿಕ ಸಮಾನತೆಯಲ್ಲಿ ನಿರತರಾಗಿದ್ದರು. ತಮ್ಮ ಆಡಳಿತ ಸುಲಬವಾಗಲು ದೊರೆಯ ನೆರವಿಗೆ ಮಂತ್ರಿಮಂಡಲ ರಚಿಸಲಾಗಿತ್ತು. ನಾಡನ್ನು ಅಹರ(ಪ್ರಾಂತ), ವಿಶಯ(ಜಿಲ್ಲೆ), ನಿಗಮ(ನಗರ) ಮತ್ತು ಗ್ರಾಮಗಳಾಗಿ ವಿಂಗಡಿಸಲಾಗಿತ್ತು. ಅಮಾತ್ಯರನ್ನು ಪ್ರಾಂತದ ಮುಕ್ಯಸ್ತರನ್ನಾಗಿ ಮತ್ತು ಗ್ರಾಮದ ಮುಕ್ಯಸ್ತನನ್ನಾಗಿ ಗ್ರಾಮಣೀಯನನ್ನು ನೇಮಿಸಲಾಗಿತ್ತು. ನಿಗಮ ಸಬೆಗಳು ಪಟ್ಟಣದ ಆಡಳಿತವನ್ನು ನೋಡಿಕೊಳ್ಳುತ್ತಿದ್ದವು.
ಸಾಮಾಜಿಕ ಮತ್ತು ದಾರ್‍ಮಿಕ ಸಮಾನತೆ: ಶಾತವಾಹನರ ದೊರೆಗಳು ಕೇವಲ ಯುದ್ದ ವೀರರಶ್ಟೇ ಆಗಿರದೆ, ಸಾಮಾಜಿಕ ಮತ್ತು ದಾರ್‍ಮಿಕ ಸುದಾರಣೆಗಳ ಕಡೆಗೂ ಹೆಚ್ಚಿನ ಗಮನ ಹರಿಸಿದರು. ಸಮಾಜದಲ್ಲಿದ್ದ ಬ್ರಾಹ್ಮಣ, ಕ್ಶತ್ರಿಯ, ವಯ್ಶ್ಯ, ಮತ್ತು ಶೂದ್ರರೆಂಬ ನಾಲ್ಕೂ ವಿಬಾಗಗಳಿಗೂ ಸಮಾನತೆ ನೀಡಿದರು. ಅವಿಬಕ್ತ ಕುಟುಂಬ, ವರ‍್ಣದರ‍್ಮ ಪಾಲನೆ, ಮಹಿಳಾ ಸಮಾನತೆಗೆ ಶಾತವಾಹನರ ನಾಡಿನಲ್ಲಿ ಹೆಚ್ಚಿನ ಒತ್ತು ನೀಡಲಾಗಿತ್ತು. ಶಾತವಾಹನರು ಎಲ್ಲ ದರ‍್ಮದವರಲ್ಲಿಯೂ ಸಮಾನತೆಯನ್ನು ಬಯಸಿದ್ದರಿಂದ, ಎಲ್ಲಾ ದರ‍್ಮದವರನ್ನು ಪ್ರೋತ್ಸಾಹಿಸಿದರು. ಇದರಿಂದ ವಿವಿದ ದರ‍್ಮಾವಲಂಬಿಗಳ ಕೂಡಣದ ಬಾಳ್ವೆಗೆ ಸಹಕಾರಿಯಾಯಿತು.
ಹಣಕಾಸಿನ ಅಬಿವ್ರುದ್ದಿ: ಶಾತವಾಹನರ ನಾಡಲ್ಲಿ ಕೆಲಸಗಾರರ ವಿವಿದ ವರ‍್ಗಗಳಿತ್ತು. ಬಟ್ಟೆ ಹೊಲಿಯುವವರು, ಬಣ್ಣಕಾರರು, ಎಣ್ಣೆ ಉತ್ಪಾದಕರು, ಕುಂಬಾರರು, ಪಾತ್ರೆ ತಯಾರಕರು, ಕ್ರುಶಿಕರು ಸೇರಿದಂತೆ ವಿವಿದ ರೀತಿಯ ಕೆಲಸಗಾರರು ಸೇರಿ ಒಂದು ಸಂಗಗಳನ್ನು ಕಟ್ಟಿಕೊಳ್ಳುತ್ತಿದ್ದರು. ಆ ಸಂಗಗಳು ತಮ್ಮದೇ ಆದ ಕಟ್ಟಳೆಗಳನ್ನು ಹೊಂದಿದ್ದವು. ಈ ಸಂಗಗಳು ಗ್ರೀಸ್, ರೋಮ್ ನಂತಹ ಅಯ್ರೋಪ್ಯ ನಾಡುಗಳೊಂದಿಗೆ ಸಂಪರ್‍ಕ ಹೊಂದಿದ್ದರಿಂದ ಹೊರನಾಡಿನ ಸಂಪರ್‍ಕ ಬೆಳೆಯಿತು. ಜೊತೆಗೆ ಇವರ ಆಡಳಿತದಲ್ಲಿ ಒಳನಾಡು ಮತ್ತು ಹೊರನಾಡು ವ್ಯಾಪಾರಗಳಿಗೆ ಹೆಚ್ಚಿನ ಒಲವು ತೋರಿಸಿದ್ದರಿಂದ ವ್ಯಾಪಾರ ವ್ಯವಹಾರಗಳು ಶಾತವಾಹನರ ಹಣಕಾಸಿನ ಏಳಿಗೆಗೆ ಮುಕ್ಯ ಕಾರಣವಾಯಿತು.
ಕಲೆಗೆ ಶಾತವಾಹನರ ಕೊಡುಗೆಗಳು: ಹೆಚ್ಚಿನ ಶಾತವಾಹನರ ಅರಸರು ಕಲೆಯ ಬೆಳವಣಿಗೆಗೆ ಉದಾರ ನೆರವನ್ನು ನೀಡಿದರು. ಇವರ ಪ್ರೋತ್ಸಾಹದಿಂದ ಕಲೆಯು ಗಣನೀಯ ಪ್ರಗತಿ ಹೊಂದಿತು. ಶಾತವಾಹನರ ಕಲಾ ಬೆಳವಣಿಗೆಯನ್ನು ಕಲ್ಲಿನ ಕಟ್ಟಡಗಳು, ಕಲ್ಲಿನ ಕೆತ್ತನೆಗಳು, ಚಿತ್ರಕಲೆ ಎಂಬ ಮೂರು ವಿದದಲ್ಲಿ ನೋಡಬಹುದು. ಈ ಕಾಲದಲ್ಲಿ ಅನೇಕ ಬವ್ದರ ಕಟ್ಟಡಗಳು ಕಾರ್‍ಲೆ, ಕನ್ಹೇರಿ, ನಾಸಿಕ್, ಅಜಂತಾ ಮುಂತಾದ ಕಡೆಗಳಲ್ಲಿ ಕಟ್ಟಿಸಲಾಯಿತು. ಅಮರಾವತಿ, ನಾಗಾರ್‍ಜುನಕೊಂಡ ಜಗ್ಗಯ್ಯಪೇಟ, ಗೋಳ ಗಂಟಸಾಲ ಮುಂತಾದ ಕಡೆಗಳಲ್ಲಿ ಬವ್ದ ಸ್ತೂಪಗಳನ್ನು ಕಟ್ಟಲಾಯಿತು.

ಶಾತವಾಹನರ ಕನ್ನಡ ಮೂಲ:
ಶಾತವಾಹನರ ಮೂಲದ ಬಗ್ಗೆ ಇಂದಿಗೂ ಹಳಮೆಗಾರರಲ್ಲಿ ಕೆಲವು ಗೊಂದಲಗಳಿವೆ. ಕೆಲವರಲ್ಲಿ ಶಾತವಾಹನರು ಕನ್ನಡ ಮೂಲದವರೆಂದರೆ, ಇನ್ನು ಕೆಲವರು ಶಾತವಾಹನರು ಆಂದ್ರ ಮೂಲದವರೆಂದರೆ, ಮತ್ತೆ ಕೆಲವರು ನಾಸಿಕ್ ಮೂಲದವರೆಂದು ಹೇಳಿದ್ದಾರೆ. ಆದರೆ ಈ ಎಲ್ಲಾ ವಾದಗಳ ನಡುವೆ ಶಾತವಾಹನರು ಕನ್ನಡ ಮೂಲವೆಂಬುದಕ್ಕೆ ಇದುವರೆಗೆ ಸಿಕ್ಕಿರುವ ದಾಕಲೆಗಳು ಹೆಚ್ಚಿನ ಇಂಬು ಕೊಡುತ್ತವೆ. ಅಂತೆಯೇ ಕೆಲವು ಆದಾರಗಳು ಈ ಕೆಳಗಿನಂತಿವೆ.

  • ಶಾತವಾಹನರ ಅನೇಕ ಕಲ್ಬರಹಗಳಲ್ಲಿ ಅವರನ್ನು ‘ಕುಂತಲ ಸ್ವಾಮಿ’ಗಳೆಂದು ಹೊಗಳಲಾಗಿದೆ. ಕುಂತಳ ನಾಡೆಂದರೆ ಕರ‍್ನಾಟಕ.
  • ಕದಂಬರ ತಾಳಗುಂದ ಕಲ್ಬರವು, ತಮಗಿಂತ ಮೊದಲು ತಾಳಗುಂದದ ಪ್ರಣವೇಶ್ವರ ದೇವರನ್ನು ಶಾತವಾಹನರು ಪೂಜಿಸುತ್ತಿದ್ದರು ಎಂದು ಹೇಳುತ್ತದೆ. ತಾಳಗುಂದ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಸಮೀಪದ ಒಂದು ಹಳ್ಳಿ.
  • ಶಾತವಾಹನರ ಅನೇಕ ರಾಜರ ಮತ್ತು ರಾಣಿಯರ ಹೆಸರುಗಳು ಅಚ್ಚಕನ್ನಡದ ಪದಗಳೇ ಆಗಿವೆ. ಉದಾಹರಣೆಗೆ ಹಾಲ, ಪುಲಿಮಾಯಿ, ನಾಗನಿಕ, ಅಸಗವ್ವ.
  • ಪುರಾಣಗಳಲ್ಲಿ ಮತ್ತು ವಾತ್ಸಾಯನನ ಬರಹದಲ್ಲಿ ಕುಂತಲ ಶಾತಕರ್‍ಣಿ ಎಂದು ಬಣ್ಣಿಸಲಾಗಿದೆ.
  • ಶಾತವಾಹನರ ಹದಿನೇಳನೆ ದೊರೆ ಹಾಲನು ಒಬ್ಬ ಕವಿಯಾಗಿದ್ದು, ಆತ ತನ್ನ ಗಾತಾ ಸಪ್ತಶತಿಯಲ್ಲಿ ‘ಶ್ರೀಮತ್ಕುಂತಲ ಜನಪದೇಶ್ವರ ಸಾತವಾಹನ ನರೇಂದ್ರ’ ಎಂದು ತನ್ನನ್ನು ತಾನು ಕರೆದುಕೊಂಡಿದ್ದಾನೆ.
  • ಹಾಲ ತನ್ನ ಗಾತಾ ಸಪ್ತಶತಿಯಲ್ಲಿ ಪೊಟ್ಟಿ, ತುಪ್ಪ, ತೀರ್, ಪಿಟ್ಟು ಮೊದಲಾದ ಅನೇಕ ಕನ್ನಡ ಪದಗಳನ್ನು ಬಳಸಿದ್ದಾನೆ. ಕನ್ನಡ ಇವರ ತಾಯ್ನುಡಿಯಾಗಿತ್ತು, ಇದರಿಂದ ಹಾಲನು ನಿರಾಯಾಸವಾಗಿ ಕನ್ನಡದ ಪದಗಳನ್ನು, ದಾತುಗಳನ್ನು ಬಳಸಿಕೊಂಡಿದ್ದಾನೆ ಎಂಬುದು ಅನೇಕ ಹಳಮೆಗಾರರ ನಿಲುವು.

ಹೀಗೆ ಒಂದು ಕಾಲದಲ್ಲಿ ಕನ್ನಡಿಗರನ್ನು ಆಳಿದ್ದ ಶಾತವಾಹನರ ಕುರಿತು ನಾವು ಮತ್ತಶ್ಟು ಅರಿಯಬೇಕಿದೆ. ಕನ್ನಡ ಮೂಲದವರೇ ಆಗಿದ್ದಲ್ಲಿ ಕನ್ನಡ ನುಡಿಗೆ ಅವರ ಕೊಡುಗೆಗಳೇನು ಎಂಬುದು ಇನ್ನು ಕಂಡುಕೊಳ್ಳಬೇಕಿದೆ. ಅದಕ್ಕಾಗಿ ನಮ್ಮ ಹಳಮೆಯ ಆಳಕ್ಕೆ ನಾವು ಮತ್ತಶ್ಟು ಇಳಿಯಬೇಕಿದೆ.
(ಮಾಹಿತಿ ಮತ್ತು ಚಿತ್ರಸೆಲೆ: wikpedia)

ನಿಮಗೆ ಹಿಡಿಸಬಹುದಾದ ಬರಹಗಳು

6 Responses

  1. ಈ ಬರಹದಲ್ಲಿ ಪದಗಳ ಬಳಕೆ ಹಿಡಿಸಲಿಲ್ಲ. ಎಲ್ಲದಕನ್ನಡ ಭಾಷೆಯನ್ನು ತಿಳಿಯಾಗಿಸಬೇಕಲ್ಲವೆ? ಅಚ್ಚಕನ್ನಡದ ಪದಗೆಳನ್ನು ಬಳಸಬೇಕಲ್ಲವೆ? ದಕ್ಶಿಣ ಯಾಕೆ? ತೆಂಕಣ ಯಾಕಿಲ್ಲ?
    ಹೀಗೆ ಹಲವು ಉದಾಹರಣೆಗಳಿವೆ ನೋಡಿ
    ಪರನಾಡು->ಹೊರನಾಡು ,
    ಶವ್ರ್ಯತೆ ಆಂದರೆ ಏನು? ಶೌರ್ಯ ಬಳಸುವುದು ಸರಿಹೋಗದಿದ್ದರೆ ಶೂರತನ ಬಳಸಿ.
    ಬ್ರಾಹ್ಮಣ ಬದಲಾಗಿ ಉಚ್ಚಾರಣೆಗೆ ತಕ್ಕಂತೆ ಬ್ರಾಮ್ಮಣ ಇರಬೇಕು. ಇಲ್ಲವೆ ಅಚ್ಚಕನ್ನಡದಲ್ಲಿ “ಹಾರುವ” ಬಳಸಿ.:-)
    ಅವಿಬಕ್ತ ಕುಟುಂಬ ->ಒಟ್ಟು ಕುಟುಂಬ
    ಬಟ್ಟೆ ಹೊಲಿಯುವವರು -> ದರ್ಜಿ /ಹೊಲಿಗೆಗಾರ
    ಎಣ್ಣೆ ಉತ್ಪಾದಕರು -> ಗಾಣಿಗ
    ಕ್ರುಶಿಕ – ಬೇಸಾಯಗಾರ/ ರೈತ( ರಯ್ತ)

    ಇನ್ನೊಂದು ವಿಷಯ.
    “ವರ‍್ಣಬೇದವನ್ನು ತಡೆಗಟ್ಟುವಲ್ಲಿ ಹೆಚ್ಚಿನ ಕಾಳಜಿ ವಹಿಸಿದನು”
    “…..ವರ‍್ಣದರ‍್ಮ ಪಾಲನೆ…ಶಾತವಾಹನರ ನಾಡಿನಲ್ಲಿ ಹೆಚ್ಚಿನ ಒತ್ತು ನೀಡಲಾಗಿತ್ತು”

    ಇವೆರಡರಲ್ಲಿ ಯಾವುದು ಸರಿ? ಇಲ್ಲವೇ ವರ‍್ಣಬೇದವನ್ನು ತಡೆಯುವುದೇ ವರ‍್ಣದರ‍್ಮ ಪಾಲನೆಯೆ? 🙂
    ಮಾರ್ಕಿಸ್ಟ್ ವಿಚಾರಗಳನ್ನು ಸುಮ್ಮನೆ ಇತಿಹಾಸದಲ್ಲಿ ತುರುಕುವುದು ಬೇಡ.

    • ನಿಮ್ಮ ಹಿನ್ನುಣಿಕೆ ನನ್ನಿ, ಕನ್ನಡ ಪದಗಳ ಬಳಕೆಯ ಕುರಿತು ನೀವು ತಿಳಿಸಿದ ವಿಶಯ ಸರಿಯಾಗಿದೆ. ಈ ಕುರಿತು ಮುಂದಿನ ಬರಹಗಳಲ್ಲಿ ಎಚ್ಚರ ವಹಿಸುವೆ.

  2. ದಯವಿಟ್ಟು ಇದನ್ನು ತಿಳಿಸುವಿರಾ?
    ಶಾತವಾಹನರ ನುಡಿ ಯಾವುದಾಗಿತ್ತು ?
    ಆರ್‍ಯ ನುಡಿಯೇ ?/ ದ್ರಾವಿಡ ನುಡಿಯೇ ?
    ಹಾಗೆಯೆ ಅವರು ಬಳಸುತ್ತಿದ್ದ ಲಿಪಿ ?ತೆಂಕಣ ಬ್ರಾಹ್ಮಿಯೇ? ಬಡಗಣ ಬ್ರಾಹ್ಮಿಯೇ ?
    ಅವರ ದರ್‍ಮ ಯಾವುದಾಗಿತ್ತು ? ಬವ್ದ ? ಹಿಂದೂ ?

    • ಪ್ರಾಕ್ರುತ ಬಾಶೆಯು ಶಾತವಾಹನರ ಆಡಳಿತ ಬಾಶೆಯಾಗಿತ್ತು. ಅಲ್ಲದೆ ಇವರ ಬಹುತೇಕ ಬರಹಗಳು, ಕಲ್ಬರಹಗಳು ಪ್ರಾಕ್ರುತ ಬಾಶೆಯಲ್ಲೇ ಬರೆಯಲ್ಪಟ್ಟವು. ಉದಾಹರಣೆಗೆ ಶಾತವಾಹನರ ಹದಿನೇಳನೆ ದೊರೆ ಹಾಲನ ಗಾತಾಸಪ್ತಶತಿಯು ಪ್ರಾಕ್ರುತ ಬಾಶೆಯಲ್ಲಿದೆ.

      ಶಾತವಾಹನರ ಬಹುತೇಕ ದೊರೆಗಳು ಬವ್ದ ದರ್ಮ ಪಾಲಿಸುತ್ತಿದ್ದರು ಎಂಬುದು ಹೆಚ್ಚಿನ ಹಳಮೆಗಾರರ ವಾದ. ಏಕೆಂದರೆ ಶಾತವಾಹನರ ಕಾಲದಲ್ಲಿ ಬವ್ದ ದರ್ಮಕ್ಕೆ ಹೆಚ್ಚು ಪ್ರೋತ್ಸಾಹ ಸಿಕ್ಕಿತ್ತು. ಇವರ ಕಾಲದಲ್ಲಿ ನಾಸಿಕ್, ಅಜಂತಾ, ಅಮರಾವತಿ, ಕಾರ್ಲೆ, ನಾಗಾರ್ಜುನಕೊಂಡ, ಕನ್ಹೇರಿಗಳಲ್ಲಿ ಬವ್ದ ಸ್ತೂಪ, ವಿಹಾರಾಲಯಗಳನ್ನು ಕಟ್ಟಿಸಲಾಯಿತು. ಆದರೂ ಶಾತವಾಹನರ ದರ್ಮದ ಕುರಿತು ಹಳಮೆಗಾರರಲ್ಲಿ ಒಮ್ಮತವಿಲ್ಲ.

  3. Sandeep Kn says:

    ಶಾತವಾಹನರ ಮನೆ ಮಾತು ಕನ್ನಡವೇ ಆಗಿತ್ತು ಎಂಬುದು ಹಲವರು ಒಪ್ಪುವ ವಾದ. ಇದಕ್ಕೆ ಪೂರಕವಾಗಿ ಈ ಬರಹದಲ್ಲಿ ಹರ‍್ಶಿತ್ ಅವರು ಮಾಹಿತಿ ಒದಗಿಸಿದ್ದಾರೆ. ಹಾಗೆಯೇ ಇವರು ತೆಲುಗರೂ ಆಗಿದ್ದಿರಬಹುದೆಂಬುದು ಕೆಲವರ ವಾದ. ಒಂದು ಪುರಾಣದಲ್ಲಿ (ಯಾವುದು ಎಂದು ನೆನಪಿಗೆ ಬರುತ್ತಿಲ್ಲ) ಇವರನ್ನು ‘ಅಂದ್ರ ಬ್ರುತ್ಯ’ ಎಂದು ಕರೆದಿರುವುದುಂಟಂತೆ. ಆದರೆ ಪುರಾಣಗಳಲ್ಲಿರುವ ಮಾಹಿತಿಯನ್ನು ಕಡಾ ಕಂಡಿತವಾಗಿ ನಂಬುವಂತಿಲ್ಲ. ಸದ್ಯಕ್ಕೆ ಕನ್ನಡ, ತೆಲುಗು ಎಂಬ ಎರಡು ವಾದಗಳೂ ಇವೆ.

    ಇವರು ಆಡಳಿತದಲ್ಲಿ ಪ್ರಾಕ್ರುತವನ್ನು ಬಳಸುತ್ತಿದ್ದರು. ಮಹಾರಾಶ್ಟ್ರೀ ಪ್ರಾಕ್ರುತ ಎಂದು ಹೇಳುತ್ತಾರೆ. ಇವರ ಹೆಚ್ಚಿನ ದೊರೆಗಳು ಬವ್ದರಾಗಿದ್ದರು.

    • ಪುರಾಣಗಳಲ್ಲಿ ಆಂದ್ರಬ್ರುತ್ಯ ಎಂದು ಕರೆದಿದ್ದಾರೆ. ಬ್ರುತ್ಯ ಎಂದರೆ ಸೇವಕ.
      ಹಾಗಾಗಿ ಶಾತವಾಹನರು ಆಂದ್ರರ ಸೇವಕರು ಅತವಾ ಮಾಂಡಲಿಕರಾಗಿದ್ದಿರಬಹುದು. ಹಾಗೆಂದ ಮಾತ್ರಕ್ಕೆ ಶಾತವಾಹನರು ಆಂದ್ರಮೂಲದವರೆನ್ನುವುದು ಸತ್ಯಕ್ಕೆ ದೂರವಾದ ಮಾತೆಂಬುದು ಬಹುತೇಕ ಹಳಮೆಗಾರರ ವಾದ.

ಅನಿಸಿಕೆ ಬರೆಯಿರಿ:

%d bloggers like this: