ಹಳಮೆಯ ಪಾಟಗಳನ್ನು ಆರಿಸಿಕೊಳ್ಳುವುದರ ಬಗೆಗಿನ ಚರ‍್ಚೆ

– ಪ್ರಿಯಾಂಕ್ ಕತ್ತಲಗಿರಿ.

Ajanta-Höhlen-UNESCO

ಹೊಸತಾದ ಒಕ್ಕೂಟ ಸರಕಾರ ಆಡಳಿತದ ಚುಕ್ಕಾಣಿ ಹಿಡಿದ ಮೇಲೆ, ಹಳಮೆಯ (history) ಹಲವಾರು ಪಾಟಗಳನ್ನು ಪಟ್ಯಕ್ರಮಕ್ಕೆ ಸೇರಿಸಲಾಗುವುದು ಎಂಬ ಸುದ್ದಿಯಿದೆ. ಒಂದೊಂದು ಸರಕಾರವೂ ತನ್ನದೇ ಆದ ನಂಬಿಕೆ, ಸಿದ್ದಾಂತಗಳನ್ನು ಹೊಂದಿರುತ್ತದೆ ಮತ್ತು ತಾನು ನಂಬಿದ ಸಿದ್ದಾಂತಗಳತ್ತಲೇ ಮಕ್ಕಳನ್ನು ಹೊರಳಿಸಲು ಪಟ್ಯಕ್ರಮಗಳನ್ನು ಬಳಸಿಕೊಳ್ಳುತ್ತದೆ. ಇದು ಇಂಡಿಯಾಗೆ ಮಾತ್ರ ಸೀಮಿತವಾಗಿರುವ ವಾಡಿಕೆಯಲ್ಲ. ಜಗತ್ತಲ್ಲಿ ಎಲ್ಲೆಡೆಯೂ ಹಳಮೆಯ ಪಟ್ಯಕ್ರಮಗಳನ್ನು ಆಡಳಿತದವರು ತಮಗೆ ಬೇಕಾದಂತೆ ಬರೆಯುವ ಕೆಲಸ ನಡೆಯುತ್ತಲೇ ಇದೆ. ಮತ್ತು, ಪಾಟಗಳಲ್ಲಿ ಕಲಿಸುವ ವಿಶಯಗಳು ತಮ್ಮ ಮುಂದಿನ ದಿನಗಳ ಮೇಲೆ ಹೇಗೆ ಪರಿಣಾಮ ಬೀರಬಲ್ಲುದು ಎಂಬುದನ್ನರಿತ ಜನಾಂಗಗಳು, ಈ ಬಗ್ಗೆ ಚರ‍್ಚೆ ಕಾಪಾಡಿಕೊಂಡಿರುತ್ತಾರೆ.

ಜಪಾನು, ಚೀನಾ ಮತ್ತು ತಯ್ವಾನಿನಲ್ಲಿ ಹಳಮೆ ಕಲಿಸುವಿಕೆ:
ಎರಡನೇ ಜಗ-ಕಾಳಗದಲ್ಲಿ ಜಪಾನು ಜಗಳಗಂಟನಾಗಿತ್ತು. ಎಲ್ಲ ನಾಡುಗಳ ಮೇಲೆ ಕಾಲ್ಕೆರೆದು ಜಗಳಕ್ಕೆ ಬರುತ್ತಿದ್ದ ಜಪಾನು, ಕಾಳಗದಲ್ಲಿ ಸೋತಮೇಲೆ ತನ್ನ ಜನರಿಂದಾದ ತಪ್ಪುಗಳನ್ನರಿತು ಅದನ್ನು ಸರಿಪಡಿಸಿಕೊಳ್ಳುವತ್ತ ಹೆಜ್ಜೆ ಹಾಕಿತು. ಈ ನಿಟ್ಟಿನಲ್ಲಿ ಜಪಾನು ಇಟ್ಟ ಹೆಜ್ಜೆಗಳಲ್ಲೊಂದು, ಮಕ್ಕಳಿಗೆ ಜಪಾನು ಮಾಡಿದ ತಪ್ಪುಗಳನ್ನು ತಿಳಿಯಪಡಿಸುವುದು. ಆದರೆ, “ಜಪಾನಿನ ಹಳಮೆಯ ಪಾಟಗಳು ತನ್ನನ್ನೇ ತಾನು ಇರಿದುಕೊಳ್ಳುವಂತಿದೆ” ಎಂಬ ಅಸಮಾದಾನದ ಹೊಗೆ ಇತ್ತೀಚೆಗೆ ಜಪಾನಿನಲ್ಲಿ ಆಡುತ್ತಿತ್ತು. ಇದನ್ನು ಸರಿಪಡಿಸಬೇಕು ಎಂದು ಹೊರಟಿರುವ ಶಿಂಜೋ ಅಬೆ ಅವರ ಸರಕಾರ, ಹಳಮೆಯ ಪಾಟಗಳನ್ನು ಬದಲಾಯಿಸುತ್ತಿದೆ. ಬದಲಾವಣೆಗೆ ಮುಂಚೂಣಿ ಕಾರಣವು ಪಟ್ಯಕ್ರಮಗಳನ್ನು ಎಡಪಂತದವರ ಕಯ್ಯಿಂದ ಬಿಡುಗಡೆ ಮಾಡುವುದೇ ಆಗಿದೆ ಎಂದು ಶಿಂಜೋ ಅಬೆ ಅವರ ಸರಕಾರ ಹೇಳುತ್ತಿದೆ. ಅಲ್ಲಿಯೂ, ಈ ಬದಲಾವಣೆಗಳು ದೊಡ್ಡ ಚರ‍್ಚೆಗೆ ಎಡೆಮಾಡಿಕೊಟ್ಟಿವೆ.

ತಯ್ವಾನಿನಲ್ಲಿಯೂ ಹಳಮೆಯನ್ನು ಕಲಿಸುವ ಬಗೆ ಬದಲಾಗಬೇಕು ಎಂಬ ಚರ‍್ಚೆಗಳು ಎದ್ದಿವೆ. ಜಪಾನೀಯರು ತಯ್ವಾನನ್ನು ಕೆಲಕಾಲ ತಮ್ಮ ವಸಾಹತನ್ನಾಗಿ ಮಾಡಿಕೊಂಡಿದ್ದರು. ಜಪಾನೀಯರ ಆಳ್ವಿಕೆಯಲ್ಲಿದ್ದ ಕಾಲವನ್ನು “ಜಪಾನೀ ಆಳ್ವಿಕೆ” ಎಂದು ಪಾಟಗಳಲ್ಲಿ ಕರೆಯುವ ಬದಲಾಗಿ “ಜಪಾನೀ ವಸಾಹತು ಆಳ್ವಿಕೆ” ಎಂದು ಕರೆಯಬೇಕೆಂದು ತಯ್ವಾನು ಸರಕಾರ ಹೇಳಿದೆ.

ತಯ್ವಾನಿನಲ್ಲಿರುವ ಹಲವರು 1949ರಲ್ಲಿ ಚೀನಾದಲ್ಲಿ ಕಮ್ಯುನಿಸ್ಟರ ಆಳ್ವಿಕೆಯಿಂದ ತಪ್ಪಿಸಿಕೊಂಡು ಓಡಿಬಂದವರು. ಅವರ ಹಳಮೆ ಮತ್ತು ಚೀನಾದ ಹಳಮೆ ಒಂದೇ ಆಗಿರುವುದರಿಂದ, ಚೀನಾದ ಹಳಮೆಯನ್ನು ಶಾಲೆಗಳಲ್ಲಿ ಕಲಿಸಬೇಕು ಎಂಬ ಒತ್ತಾಯ ತಯ್ವಾನಿನಲ್ಲಿ ಮೂಡಿದೆ. ಈ ಬದಲಾವಣೆಗಳನ್ನು ಎದುರಿಸುತ್ತಿರುವ ಹಲವರು, ತಯ್ವಾನಿನ ಮೂಲಜನರ ಬಗ್ಗೆ ಮತ್ತು ಅವರ ನಡೆ-ನುಡಿಯ (culture) ಬಗ್ಗೆ ಪಾಟಗಳಲ್ಲಿ ಸೇರಿಸಬೇಕು ಎಂಬ ವಾದ ಮುಂದಿಡುತ್ತಿರುವರು.

ಚೀನಾದಲ್ಲಿ ದೇಶಪ್ರೇಮವನ್ನು ಹುಟ್ಟುಹಾಕುವ ಮತ್ತು ಹೊರನಾಡಿನವರ ಬಗ್ಗೆ ಅಪನಂಬಿಕೆ ಹುಟ್ಟುಹಾಕುವಂತಹ ಪಟ್ಯಕ್ರಮವನ್ನು ಮುನ್ನೆಲೆಗೆ ತರಲಾಗುತ್ತಿದೆಯಂತೆ. ದೇಶಪ್ರೇಮ ಮತ್ತು ದೇಶದ ಬಗೆಗಿನ ಬದ್ದತೆಯನ್ನೇ ದೊಡ್ಡದಾಗಿ ಬಿಂಬಿಸುವ ಪಟ್ಯಕ್ರಮಗಳಿಂದ ಉಂಟಾಗುವ ಅಪಾಯಗಳ ಬಗ್ಗೆಯೂ ಚೀನಾದ ತಿಳಿದವರು ದನಿಯೆತ್ತಿದ್ದಾರೆ. ಶಾಲೆಗಳಲ್ಲಿ ಓದುವ ಮಕ್ಕಳಿಗೆ “ತೋಳದ ಹಾಲು ಉಣಿಸಲಾಗುತ್ತಿದೆ” ಎಂದು ತಿಳಿದವರು ಬಣ್ಣಿಸುತ್ತಿದ್ದಾರೆ.

ಪಟ್ಯಕ್ರಮದಿಂದ ಕೂಡಣದ ಮೇಲೆ ಉಂಟಾಗುವ ಪರಿಣಾಮ:
ಮುಂದಿನ ದಿನಗಳ ಕೂಡಣವನ್ನು (society) ಇಂದಿನ ಶಾಲೆಗಳಲ್ಲಿ ಕಟ್ಟಲಾಗುತ್ತದೆ ಎಂಬುದು ದಿಟ. ಇದನ್ನರಿತವರು, ಪಟ್ಯಕ್ರಮಗಳಲ್ಲಿ ಸೇರಿಸಲಾಗುವ ಪಾಟಗಳಿಂದ ಮುಂದಿನ ದಿನಗಳಲ್ಲಿ ಕೂಡಣ ಹೊರಳುವ ದಿಕ್ಕು ನಿರ‍್ದಾರವಾಗುತ್ತದೆ ಎಂಬುದನ್ನೂ ಅರಿತಿರುತ್ತಾರೆ. ಹಾಗಾಗಿಯೇ, ಒಂದು ನಾಡಿನಲ್ಲಿ ಕಲಿಸಲಾಗುವ ಪಾಟಗಳ ಬಗ್ಗೆ ಅಕ್ಕ-ಪಕ್ಕದ ನಾಡುಗಳವರು ಕಣ್ಣಿಟ್ಟಿರುತ್ತಾರೆ. ತಮಗೆ ತೊಂದರೆ ಉಂಟಾಗುತ್ತದೆ ಎಂದು ಕಂಡುಬಂದರೆ, ಪಕ್ಕದ ನಾಡಿನವರ ಜೊತೆಯಲ್ಲಿ ಚರ‍್ಚೆಗೆ ಇಳಿದು ತಮ್ಮ ಅಂಜಿಕೆಗಳನ್ನು ತೋರ‍್ಪಡಿಸುವುದೂ ಉಂಟು. ತೆಂಕಣ ಕೊರಿಯಾ ಮತ್ತು ಜಪಾನು 2002 ರಲ್ಲಿ ಒಟ್ಟಾಗಿ ತಮ್ಮ ತಮ್ಮ ಪಟ್ಯಕ್ರಮಗಳ ಬಗ್ಗೆ ಚರ‍್ಚಿಸಿದವಂತೆ. ಚೀನಾ ಮತ್ತು ಜಪಾನು 2006 ರಲ್ಲಿ ಒಟ್ಟಾಗಿ ತಮ್ಮ ಪಟ್ಯಕ್ರಮಗಳ ಬಗ್ಗೆ ಚರ‍್ಚಿಸಿದವಂತೆ. ಮುಂದಿನ ವರುಶಗಳಲ್ಲೂ ತಮ್ಮ ತಮ್ಮ ನಾಡುಗಳ ನಡುವಣ ನಂಟು ಹದಗೆಡದಂತೆ ಮುನ್ನಡೆಯಬೇಕು ಎಂಬುದೂ ಹೀಗೆ ಒಟ್ಟಾಗಿ ಸೇರಿ ಚರ‍್ಚಿಸುವುದರ ಹಿಂದಿರುವ ಆಲೋಚನೆ.

ನಮ್ಮಲ್ಲಿನ ಪಟ್ಯಕ್ರಮದ ಬಗ್ಗೆ ಚರ‍್ಚೆ:
ಈಗಿನ ಬಿಜೆಪಿ ಸರಕಾರ ತರಬೇಕೆಂದುಕೊಂಡಿರುವ ಪಟ್ಯಕ್ರಮದ ಬದಲಾವಣೆಗಳ ಬಗ್ಗೆಯೂ ಚರ‍್ಚೆ ನಡೆಯುತ್ತಿದೆ. ಆದರೆ ಈ ಚರ‍್ಚೆಗಳು ಸೆಕ್ಯುಲರಿಸಂ ಸುತ್ತಲ ಮಾತ್ರ ಕಚ್ಚಿಕೊಂಡಿದೆ. ಪಟ್ಯಕ್ರಮಗಳ ಬಗೆಗಿನ ಚರ‍್ಚೆ ಇದೊಂದು ವಿಶಯಕ್ಕೆ ಮಾತ್ರ ಕಚ್ಚಿಕೊಳ್ಳುವುದು ಸಾಕಾಗೊಲ್ಲ. ಹಲನುಡಿಗಳ, ಹಲಬಗೆಯ ಜನರ ತವರೂರಾದ ಇಂಡಿಯಾದಲ್ಲಿ ಒಂದೇ ಬಗೆಯ ಹಳಮೆ ಮಾತ್ರ ಕಲಿಸಬೇಕೇ ಎಂಬುದೇ ಚರ‍್ಚೆಯಾಗಬೇಕಿದೆ.

ಇಂಡಿಯಾದ ಹಳಮೆಯನ್ನು ಪಾಟಗಳಲ್ಲಿ ಸೇರಿಸಲಾಗುವುದು ಎಂಬ ಮಾತನ್ನು “ಇಂಡಿಯಾದ ಯಾವ ಬಾಗದ ಹಳಮೆ?” ಎಂದು ಕೇಳುತ್ತಾ ಚರ‍್ಚೆಗೆ ಹಾದಿ ಹಾಕಬೇಕಿದೆ. ಉದಾಹರಣೆಗೆ, ಇವತ್ತಿನ ಸಿ.ಬಿ.ಎಸ್.ಇ ಪಟ್ಯಕ್ರಮದಲ್ಲಿ ಕರ‍್ನಾಟಕದ ಹಳಮೆಯ ಬಗ್ಗೆ 2-3 ಪುಟಗಳಲ್ಲಿ ರಾಜ ಮನೆತನಗಳ ಬಗ್ಗೆ ಹೇಳಿ ಮುಗಿಸಿಬಿಡಲಾಗಿದೆ. ಕರ‍್ನಾಟಕವಲ್ಲದೇ ಬೇರೆ ಬೇರೆ ಕಡೆಗಳಲ್ಲಿ ಆಡಳಿತ ನಡೆಸಿದ ರಾಜಮನೆತನಗಳ ಬಗ್ಗೆ ವಿವರವಾಗಿ ತಿಳಿಸಲಾಗಿದೆ. “ಒಂದು ಜನಾಂಗವನ್ನು ಅಡಿಯಾಳಾಗಿಸಬೇಕೆಂದರೆ, ಅವರ ಹಳಮೆಯನ್ನು ಇಲ್ಲವಾಗಿಸು” ಎಂಬ ಮಾತನ್ನೇ ಪಾಲಿಸಿಕೊಂಡು ಸಿ.ಬಿ.ಎಸ್.ಇ ಪಟ್ಯಕ್ರಮ ಬರೆಯಲಾಗಿದೆಯೇನೋ ಎಂಬ ಗುಮಾನಿ ಮೂಡುವಂತೆ ಕರ‍್ನಾಟಕದ ಹಳಮೆಯನ್ನು ಬರೆಯಲಾಗಿದೆ.

ಕರ‍್ನಾಟಕದಲ್ಲಿ ಕಲಿಸಲಾಗುವ ಸಿ.ಬಿ.ಎಸ್.ಇ ಪಟ್ಯಕ್ರಮದಲ್ಲಿ ಏನೇನು ಬದಲಾವಣೆಗಳು ಬೇಕು ಎಂಬ ಬಗ್ಗೆ ಕರ‍್ನಾಟಕ ಸರಕಾರವು ಸಿ.ಬಿ.ಎಸ್.ಇ ಜೊತೆ ಚರ‍್ಚಿಸುವ ಒಂದು ವೇದಿಕೆಯೇ ಇಲ್ಲವೆನಿಸುತ್ತದೆ. ಸಿ.ಬಿ.ಎಸ್.ಇ ಪಟ್ಯಕ್ರಮದಲ್ಲಿ ತಾನು ತರಬೇಕೆಂದಿರುವ ಬದಲಾವಣೆಗಳ ಕುರಿತು ಒಕ್ಕೂಟ ಸರಕಾರವು ರಾಜ್ಯ ಸರಕಾರಗಳ ಜೊತೆ ಚರ‍್ಚಿಸಿದುದರ ಬಗ್ಗೆಯೂ ಏನೂ ಸುದ್ದಿಯಿಲ್ಲ. ಪಾಟಗಳ ಬಗೆಗಿನ ಚರ‍್ಚೆಯನ್ನು ಸೆಕ್ಯುಲರಿಸಂ ಸುತ್ತ ಮಾತ್ರ ಕಟ್ಟಿಹಾಕಿ, ಮುಕ್ಯವಾಗಿ ನಡೆಯಬೇಕಾದ ಇನ್ನೊಂದು ಚರ‍್ಚೆಯನ್ನು ನಡೆಸದೆಯೇ ಪಾಟಗಳನ್ನು ಬರೆದರೆ, ಇಂಡಿಯಾದ ಹಲವಾರು ಜನಾಂಗಗಳು ಮುಂದಿನ ದಿನಗಳಲ್ಲಿ ಗಂಡಾಂತರ ಎದುರಿಸಬೇಕಾಗುತ್ತದೆ. ಕನ್ನಡಿಗರೂ ಸೇರಿದಂತ ಇಂಡಿಯಾದ ಹಲವಾರು ಜನಾಂಗಗಳು ಪಟ್ಯಕ್ರಮದಲ್ಲಿ ಕಲಿಸಲಾಗುವ ಹಳಮೆಯ ಬಗ್ಗೆ ತಾವಾಗೇ ಚರ‍್ಚೆ ಹುಟ್ಟುಹಾಕದೇ ಬೇರೆ ದಾರಿಯಿಲ್ಲ.

 

(ಮಾಹಿತಿ ಸೆಲೆdeccanchronicle.com, economist.com)

(ಚಿತ್ರ ಸೆಲೆ: maharaja-express)

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications OK No thanks