ಪದಗುಟ್ಟು – ಅವಲಕ್ಕಿ

– ಬರತ್ ಕುಮಾರ್.

ನಾವು ದಿನಾಲು ಹಲವಾರು ಅಣ್ಣೆಗನ್ನಡ ಪದಗಳನ್ನು ನಮಗೆ ಅರಿವಿಲ್ಲದೆಯೇ ಸರಿಯಾಗಿ ಬಳಸುತ್ತಿರುತ್ತೇವೆ. ಆದರೆ ದಿಟವಾಗಲೂ ಆ ಪದಗಳ ಹುರುಳು ಏನೆಂದು ಮತ್ತು ಆ ಪದಗಳ ಬೇರು ಇಲ್ಲವೆ ಒಡೆತ ನಮಗೆ ಗೊತ್ತಿರುವುದಿಲ್ಲ. ಅಂದರೆ ಅರಿವಿಗೆ ಎಟಕದ ರೂಪದಲ್ಲಿ ಆ ಪದಗಳ ಒಳರಚನೆ ಆಗಿರುತ್ತದೆ. ಅಂತಹ ಪದಗಳಲ್ಲಿ ಅಡಗಿರುವ ಗುಟ್ಟನ್ನು ಇಲ್ಲಿ ರಟ್ಟು ಮಾಡಿ ಅರಿವಿಗೆ ಎಟಕುವ ತೆರದಲ್ಲಿ ತೆರೆದಿಡಲಾಗಿದೆ. ಇದರಿಂದ ನಮ್ಮ ಪದದರಿಮೆ ಹೆಚ್ಚಿ ನಮ್ಮ ಪದಕಸುವನ್ನು ಇನ್ನು ಚೆನ್ನಾಗಿ ಕನ್ನಡ ಬರಹಗಳಲ್ಲಿ ದುಡಿಸಿಕೊಳ್ಳಬಹುದಲ್ಲದೆ ಕನ್ನಡ ’ಪದಬರ’ವನ್ನು ಹೋಗಲಾಡಿಸಬಹುದು ಎಂಬುದನ್ನ ತೋರಿಸಿಕೊಡುವುದೇ ಈ ಪದಗುಟ್ಟು ಸರಣಿಯ ಗುರಿ.

{ಇಲ್ಲಿ ಬಿಚ್ಚಿಡಲಾಗುವ ಗುಟ್ಟುಗಳೇ ಸರಿಯೆಂದು, ಮಿಕ್ಕ ಗುಟ್ಟು ಇರಲಾರದು ಎಂದು ನಾನು ವಾದಿಸುತ್ತಿಲ್ಲ. ಒಂದು ಪದಕ್ಕೆ ಇರಬಹುದಾದ ಹಲವು ಗುಟ್ಟುಗಳಲ್ಲಿ ಒಂದನ್ನು ಇಲ್ಲವೆ ಒಂದಕ್ಕಿಂತ ಹೆಚ್ಚು ಗುಟ್ಟುಗಳನ್ನು ಈ ಬರಹಗಳಲ್ಲಿ ದೂಸರಿನೊಡನೆ(with reasoning) ತೋರಿಸಿಕೊಡಲಾಗಿದೆ. ಹಾಗಾಗಿ ಬೇರೆಯವರಿಂದ ಇನ್ನು ಹೆಚ್ಚು ಗುಟ್ಟುಗಳು ಹೊರಬಂದರೆ ಒಳ್ಳೆಯದೇ ಎಂಬುದು ನನ್ನ ನಿಲುವು.}

ಅವಲಕ್ಕಿ

avalakki_flattened_rice

ಅವಲಕ್ಕಿಯಿಂದ ಮಾಡಲಾಗುವ ತಿಂಡಿಗಳು ಹಲವಿವೆ. ಅವಲಕ್ಕಿ ಉಪ್ಪಿಟ್ಟು, ಅವಲಕ್ಕಿ ಪಾಯಸ, ಅವಲಕ್ಕಿ ಕಾರ ಅಲ್ಲದೆ ಹಲವು ಕುರುಕ್ ತಿಂಡಿಗಳಲ್ಲು ಅವಲಕ್ಕಿಯನ್ನು ಬಳಸಲಾಗುತ್ತದೆ. ಅವಲಕ್ಕಿಯಲ್ಲಿ ಗಟ್ಟಿ ಅವಲಕ್ಕಿ ಮತ್ತು ತೆಳು ಅವಲಕ್ಕಿ(ಪೇಪರ್ ಅವಲಕ್ಕಿ) ಎಂಬ ಎರಡು ಬಗೆಯಿದೆ. ಹಾಗಾದರೆ ಅವಲಕ್ಕಿ ಎಂದರೇನು?

ಅವಲಕ್ಕಿ = ಅವಲ್+ಅಕ್ಕಿ = ಬಡಿದ ಅಕ್ಕಿ, ಕುಟ್ಟಿದ ಅಕ್ಕಿ, ಅಮುಕಿದ ಅಕ್ಕಿ ಎಂಬ ಹುರುಳನ್ನು ನೋಡಬಹುದು.
ಅವಲ್, ಅವಲ್-ಅಕ್ಕಿ aval pound, beat; n. pounding, beating in a mortar; (also aval-akki) rice bruised and crushed [DED 2391]

ಅಮರ್(ಅಮರ್ದು ಎಂದು ಹಳೆಗನ್ನಡದಲ್ಲಿ ಬಳಕೆಯಲ್ಲಿದೆ), ಅಮುಗು, ಅವುಗು, ಅಮುಕು, ಅಮಿಕು, ಅವುಕು, ಅವುಂಕು. Ka. amar to seize firmly, embrace; amugu, avugu to yield to pressure (as the surface of a ripe fruit or tumour); amuku, amiku, avuku, avuṅku to press or hold firmly, squeeze, trouble; avuṅku pressing or holding firmly; [DED 169]

ಈ ಅವಲ್ ಎಂಬುದೇ ‘ಅಮರ್’/ಅವುಂಕು ಎಂಬ ಪದದಿಂದ ಬಂದಿರಬಹುದು ಯಾಕಂದರೆ ಕನ್ನಡದಲ್ಲಿ
ಮ -> ವ ಆಗುವ, ರ್ -> ಲ್ ಆಗುವ  ಕೆಲವು ಎತ್ತುಗೆಗಳನ್ನು ಕೊಡಬಹುದು.

ಅಮುಕು => ಅವುಕು
ಪುಂಡರೀಕ => ಪುಂಡಲೀಕ

ಹಾಗಾಗಿ ಅಮರ್ => ಅವರ್ => ಅವಲ್ ಆಗಿರುವುದನ್ನು ನಾವು ಮನಗಾಣಬಹುದು.
ಒಟ್ಟಿನಲ್ಲಿ ಅವಲಕ್ಕಿ ಅಂದರೆ  ಒತ್ತಿದ ಅಕ್ಕಿ, ಬಡಿದ ಅಕ್ಕಿ, ಅಮುಕಿದ ಅಕ್ಕಿ ಎಂದು ಸುಳುವಾಗಿ ಅರಿತುಕೊಳ್ಳಬಹುದು.

(DED: Dravidian Etymological Dictionary, ದ್ರಾವಿಡ ನುಡಿಗಳ ಬೇರು ಪದಗಳ ಪದನೆರಕೆ)

(ತಿಟ್ಟಸೆಲೆ: en.wikipedia.org)

 

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: