ಮುಯ್ಯಿ: ಇದು ಅಕ್ಕರೆಯ ಉಡುಗೊರೆ!

– ಹರ‍್ಶಿತ್ ಮಂಜುನಾತ್.

wedding-ideas-1st-to-30th-wedding-anniversary-gifts-by-year-southern-wedding-anniversary-gifts-by-year-accelerating-conditioning-from-the-martial-relationship

ಸಂಪ್ರದಾಯವನ್ನು ಒಂದು ಆಚರಣೆಯಲ್ಲಿನ ಕಟ್ಟಲೆ ಎನ್ನಬಹುದು. ಏಕೆಂದರೆ ಇದು ಆಯಾ ವರ್‍ಗಗಳ ಮಂದಿಯ ನಂಬಿಕೆ, ಮನೋಬಾವ, ಪರಿಸರ, ಆಹಾರ ಕ್ರಮ, ಬದುಕಿನ ರೀತಿ-ನೀತಿಗನುಗುಣವಾಗಿ ನಿಯಮಾನುಸಾರದಿಂದ ನಡೆಯುತ್ತದೆ. ಇಂತಹ ಸಂಪ್ರದಾಯಗಳು ಒಂದು ನಿರ್‍ದಿಶ್ಟವಾದ ನಿಯಮದಂತೆ ಬದುಕನ್ನು ರೂಪಿಸಿಕೊಳ್ಳಲು ನೆರವಾಂತಹ ಬಹಳಶ್ಟು ಉದಾಹರಣೆಗಳು ಕಣ್ಣ ಮುಂದಿವೆ. ಹೀಗಿರುವಾಗ ಕಾಲ ಕಾಲಕ್ಕೆ ತಕ್ಕಂತೆ ಬದುಕು ನಡೆಸುವ ಪರಿಸರ, ನಾಗರಿಕತೆ ಮತ್ತು ಜೀವನ ಕ್ರಮಗಳ ಮಾರ್‍ಪಾಟುಗಳಿಗೆ ಸರಿಯಾಗಿ ಮಂದಿ ಸಹಜವಾಗಿಯೇ ಒಗ್ಗಿಕೊಳ್ಳ ಬಯಸುತ್ತಾರೆ. ಹಾಗಾಗಿ ಮಂದಿ ಸಂಪ್ರದಾಯಗಳಲ್ಲಿಯೂ ತುಸು ಮಾರ್‍ಪಾಟನ್ನು ಮಾಡಿಕೊಳ್ಳ ಬಯಸುವುದು ತಪ್ಪೇನಿಲ್ಲ ಎಂಬುವುದು ಒಂದು ಹಂತದಲ್ಲಿ ಸರಿಯೆನಿಸುತ್ತದೆ. ಮಾತ್ರವಲ್ಲದೆ ಕಲವೊಮ್ಮೆ ಇದು ಸ್ವಾಬಾವಿಕ ಮತ್ತು ಅವಶ್ಯಕವೆಂದೂ ಕಾಣುತ್ತದೆ.

ಅಶ್ಟಕ್ಕೂ ಈ ಸಂಪ್ರದಾಯಗಳೆಲ್ಲಾ ಮಂದಿಯಿಂದ ಹುಟ್ಟಿಕೊಂಡಿದ್ದೇ ಹೊರತು ದೇವರು ಕಟ್ಟಿಕೊಟ್ಟ ಕಟ್ಟಲೆ ಏನಲ್ಲವಲ್ಲ. ಹಾಗಿದ್ದ ಮೇಲೆ ಹೊತ್ತಿಗೆ ಅನುಗುಣವಾಗಿ ಬದಲಾವಣೆ ತರುವಲ್ಲಿ ತಪ್ಪೇನಿಲ್ಲವಲ್ಲ ಎಂಬುವ ಯೋಚನೆಗಳೂ, ಮಾತುಗಳೂ ಹುಟ್ಟುವುದುಂಟು. ಇದನ್ನು ನಾವು ಅಲ್ಲಗಳೆಯುವಂತಿಲ್ಲ. ಏಕೆಂದರೆ ಸಂಪ್ರದಾಯವೆಂಬುವುದು ಮಂದಿಯ ನಂಬಿಕೆಗೆ ಬಿಟ್ಟ ವಿಚಾರ. ನಂಬಿಕೆಯು ಮಂದಿಯ ವಿವೇಚನೆ ಮತ್ತು ನಿಯಂತ್ರಣಕ್ಕೆ ಒಳಪಟ್ಟ ವಿಚಾರ. ಈ ಕಾರಣಕ್ಕೋ ಏನೋ, ಇಂದಿನ ಸಮಾಜಕ್ಕೆ ಇಂತಹ ಸಂಪ್ರದಾಯಗಳು ಸರಿಯಾದುದ್ದೇ? ಎಂಬ ಚರ್‍ಚೆಗಳು ಮತ್ತು ಗೊಂದಲಗಳು ಮಂದಿಯಲ್ಲಿದೆ. ಸಂಪ್ರದಾಯದ ಕುರಿತ ಇಂತಹ ಗೊಂದಲಗಳಿಂದಲೋ ಏನೋ ಈಗ ನಮ್ಮಲ್ಲಾಗಿರುವ ಸಂಪ್ರದಾಯದ ಹಲಬಗೆಯ ಬದಲಾವಣೆಗಳಿಗೆ ನಾವು ಸಾಕ್ಶಿಯಾಗಿದ್ದೇವೆ. ಅವುಗಳಲ್ಲೊಂದು ನಲ್ಕೂಟಗಳಲ್ಲಿ ಮುಯ್ಯಿ ಇಡುವ ಪದ್ದತಿ.

ಸಾಮಾನ್ಯವಾಗಿ ‘ಮುಯ್ಯಿಗೆ ಮುಯ್ಯಿ’ ಎಂಬ ಮಾತು ನಮ್ಮಲ್ಲಿ ಬಳಕೆಯಲ್ಲಿದೆ. ಹಾಗಾಗಿ ಮುಯ್ಯಿ ಎಂದಾಕ್ಶಣ ಸೇಡು ಎಂಬುವ ಹುರುಳು ಸಹಜವಾಗಿ ನಮ್ಮ ಮನದಲ್ಲಿ ಹುಟ್ಟುತ್ತದೆ. ಆದರೆ ‘ಮುಯ್ಯಿ’ ಪದದ ನಿಜವಾದ ಹುರುಳು ಅದಲ್ಲ. ಬದಲಿಗೆ ಹಳ್ಳಿ ಮಂದಿ ಬಳಸುವ ಅಚ್ಚಗನ್ನಡ ಪದವಾದ ‘ಮುಯ್ಯಿ’, ಒಂದು ನಲ್ಕೂಟದಲ್ಲಿ ಎಲ್ಲರ ಸಹಕಾರವೆಂಬ ರೀತಿಯಲ್ಲಿ ಪ್ರೀತಿಯಿಂದ ಕೊಡುವ ಉಡುಗೊರೆ. ಆದರೆ ಇದು ಹೆಚ್ಚಾಗಿ ಮದುವೆಯಲ್ಲಿ ಪ್ರಚಲಿತದಲ್ಲಿದ್ದು, ಮದುವೆಯ ಹೊತ್ತಿನಲ್ಲಿ ಗಂಡು- ಹೆಣ್ಣಿಗೆ ಹಣ, ಚಿನ್ನ ಅತವಾ ಇನ್ನಿತರ ವಸ್ತುಗಳ ರೂಪದಲ್ಲಿ ಕೊಡಲಾಗುತ್ತಿತ್ತು. ಮದುವೆಯಾದ ಹೊಸತರಲ್ಲಿ ಗಂಡು ಹೆಣ್ಣಿಗೆ ತಮ್ಮ ಸಂಸಾರಕ್ಕೆ ಬೇಕಾಗುವ ಏರ್‍ಪಾಡನ್ನು ಮಾಡಿಕೊಳ್ಳುವ ಸಲುವಾಗಿ, ಮಂದಿ ತಮ್ಮ ಸಿಹಿ ಹಾರಯ್ಕೆಯನ್ನು ತಿಳಿಸಿ ಕಯ್ಯಲ್ಲಾದಶ್ಟು ನೆರವನ್ನು ಮಾಡುವ ಸಲುವಾಗಿ ಮುಯ್ಯಿ ಎಂಬ ಸಂಪ್ರದಾಯ ಬೆಳಕಿಗೆ ಬಂತು.

ಹಿಂದೆ ಊರಿನ ನಾಯಕರ ಮನೆಯಲ್ಲಿ ಯಾವುದಾದರೂ ನಲ್ಕೂಟ ನಡೆದಾಗ, ಮಂದಿ ಕೊಟ್ಟ ಮುಯ್ಯನ್ನು ಬರೆದುಕೊಳ್ಳುವ ಕೆಲಸ ಊರಿನ ಕಲಿಕೆ ಮನೆಯ ಕಲಿಸುಗರದ್ದು. ಕಲಿಸುಗರು ಒಂದು ಹೂತ್ತಗೆಯನ್ನು ಇಟ್ಟುಕೊಂಡು, ಮಂದಿ ಕೊಡುವ ಹಣ, ವಸ್ತುಗಳನ್ನು ಹೊತ್ತುಗೆಯಲ್ಲಿ ಬರೆದು ಉಳಿದ ಮಂದಿಯ ಮುಂದೆ ಕೂಗಿ ಹೇಳಬೇಕು. ನಲ್ಕೂಟವು ಕೊನೆಗೊಂಡ ಬಳಿಕ ಮುಯ್ಯಿನ ಲೆಕ್ಕವನ್ನು ಕಲಿಸುಗರು ಮನೆಯವರಿಗೆ ಕೊಡುತ್ತಿದ್ದರು. ಈ ಕೆಲಸಕ್ಕಾಗಿ ಕಲಿಸುಗರಿಗೆ ಪ್ರತ್ಯೇಕವಾಗಿ ದುಡ್ಡು ಅತವಾ ಬೇರಿನ್ನಿತರ ರೂಪದ ಉಡುಗೊರೆಯನ್ನು ಕೊಡಲಾಗುತ್ತಿತ್ತು. ಇದು ಅಂದಿನ ಕಾಲದಲ್ಲಿ ಹೆಚ್ಚಿನ ಹಳ್ಳಿಗಳಲ್ಲಿದ್ದ ನಿಯಮ. ಹಾಗಾಗಿ ಈ ನಿಯಮವನ್ನು ಕಲಿಸುಗರು ಮೀರುವ ಹಾಗಿಲ್ಲ.

ಅಂತೆಯೇ ಊರಿನ ನಾಯಕರನ್ನು ಹೊರತುಪಡಿಸಿ ನಲ್ಕೂಟಗಳು ಇತರರ ಮನೆಯಲ್ಲಾದರೆ, ಗಂಡು-ಹೆಣ್ಣಿನ ಹಿಂದೆ ಕುಳಿತು ಅವರ ನೆಂಟರು ಮುಯ್ಯಿ ಮಾಡುತ್ತಿದ್ದ ವಸ್ತುಗಳನ್ನು ಪಟ್ಟಿ ಮಾಡುವ ಕೆಲಸ ಮಾಡುತ್ತಿದ್ದರು. ಬಳಿಕ ಮುಯ್ಯಿಗೆ ಸಂಬಂದಿಸಿದ ವಿವರಗಳನ್ನು ಬರೆದಿಟ್ಟುಕೊಂಡು ಮನೆಯ ಯಜಮಾನನಿಗೆ ಕೊಡಬೇಕಿತ್ತು. ಹಾಗೆಯೇ ಮುಯ್ಯಿ ಮಾಡಿದವರ ಮನೆಗಳಲ್ಲಿ ನಲ್ಕೂಟಗಳು ನಡೆದಾಗ ತಾನೂ ಸಹ ಪ್ರೀತಿಯಿಂದ ಮುಯ್ಯಿ ಮಾಡಿ ರುಣ ಮುಕ್ತನಾಗುತ್ತಿದ್ದ. ಈ ನಡೆ-ನುಡಿ ಹಾಗೆಯೇ ಮುಂದುವರೆಯುತ್ತಿತ್ತು.

ಆಗಲೇ ಹೇಳಿದಂತೆ, ಮಂದಿಯ ಬಯಕೆಯಂತೆ ಕಾಲ ಬದಲಾದ ಹಾಗೆ ಮಂದಿ ಮತ್ತು ಮಂದಿಯ ಆಚಣೆಗಳಲ್ಲಿಯೂ ಬದಲಾವಣೆ ಬರತೊಡಗಿದವು. ಹಿಂದೆ ಉಕ್ಕಿನ ಪಾತ್ರೆಗಳು ಕಾಲಿಟ್ಟ ಹೊಸದರಲ್ಲಿ ಮಂದಿ ಉಕ್ಕಿನ ತಟ್ಟೆ, ತಂಬಿಗೆ, ಲೋಟ ಮುಂತಾದವುಗಳನ್ನು ಕೊಡಲು ಶುರುವಿಟ್ಟರು. ಇದೂ ಮುಂದುವರೆದು, ಪರನಾಡ ಜೀವನ ಕ್ರಮವನ್ನು ನಮ್ಮ ನಾಡಲ್ಲಿಯೂ ಅನುಸರಿಸುವ ಗೋಜಿಗೆ ಮಂದಿ ಒಗ್ಗಿಕೊಳ್ಳುತ್ತಿದ್ದಂತೆ ಹೂಗುಚ್ಚ, ಬಂಡಿಗಳು(Vehicles), ಮಿಂಚೂಟಿಗಳು (Electronic appliances) ಸೇರಿದಂತೆ ಇನ್ನಿತರ ವಸ್ತುಗಳು ಮುಯ್ಯಿ ಮೂಲಕ ಬರತೊಡಗಿದವು. ಅಂತೆಯೇ ಕಾಲಕ್ಕೆ ತಕ್ಕಂತೆ ಗುಣಮಟ್ಟದ ಜೀವನ ಕ್ರಮವನ್ನು ಬಯಸುತ್ತಿದ್ದ ಮಂದಿ, ಮುಂದೆ ಮುಯ್ಯಿ ಮಾಡುವುದನ್ನೂ ಒಂದು ಹೊಸ ಮಜಲಿನತ್ತ ಕೊಂಡೊಯ್ಯಲೂ ಶುರುವಿಟ್ಟರು. ಮಂದಿಯ ಬದಲಾವಣೆಗಳ ಬಯಕೆ, ಒಣ ಪ್ರತಿಶ್ಟೆಯೇ ಮುಯ್ಯಿ ವಿಶಯದಲ್ಲಿ ಮನಸ್ತಾಪಗಳು ಹುಟ್ಟಲು ಕಾರಣವಾಗಿರಬಹುದೆಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ.

“ನಾನು ಆತನಿಗೆ ಕೊಟ್ಟ ಮುಯ್ಯಿ ಎಂತ್ತದ್ದು, ಅವನು ನನಗೆ ಎಂತ್ತ ಮುಯ್ಯಿ ಕೊಟ್ಟಿದ್ದಾನೆ” ಎಂದು ಹೀಯಾಳಿಸುವಂತಹ ಪ್ರವ್ರುತ್ತಿ ಮಂದಿಯಲ್ಲಿ ಅಲ್ಲಲ್ಲಿ ಬೆಳೆಯತೊಡಗಿತು. ಸಂಪ್ರದಾಯದ ಹಣೆಪಟ್ಟಿಯಿಟ್ಟುಕೊಂಡು ಹುಟ್ಟಿದ ಇಂತಹ ಒಂದು ಆಚರಣೆಯಲ್ಲಿ, ಪ್ರೀತಿ, ಆದರ್‍ಶದ ಜಾಗವನ್ನು ಅಸೂಹೆ, ತಿರಸ್ಕಾರಗಳು ಅಲ್ಲಲ್ಲಿ ಆಕ್ರಮಿಸಿಕೊಂಡವು. ಇದೆಲ್ಲಿಯವರೆಗೆ ಬೆಳೆಯಿತೆಂದರೆ, “ಆತ ನನ್ನ ಮಗನ ಮದುವೆಯಲ್ಲಿ ಮುಯ್ಯಿ ಕೊಟ್ಟಿದ್ದಾನೆ. ನಾನು ಆತನ ಮಗನ ಮದುವೆಯಲ್ಲಿ ಆ ಮುಯ್ಯನ್ನು ತೀರಿಸಿ ಬಿಡುತ್ತೇನೆ. ನನಗೇಕೆ ಆತನ ರುಣ” ಎಂದು ಅಳೆಯುವ ಮನೋಬಾವವನ್ನು ಬೆಳೆಸಿಕೊಳ್ಳುವ ಮಟ್ಟಿಗೆ. ಅಲ್ಲಿಗೆ ಕೊಡು ಮತ್ತು ತೀರಿಸು ಎಂಬೆರಡು ಪದಗಳು ಮುಯ್ಯಿ ಎಂಬ ಪದಕ್ಕೆ ಒಂದು ಹೊಸ ಆಯಾಮವನ್ನು ಒದಗಿಸಿತು. ಇಂತಹ ಮೂದಲಿಸುವ ಮನೋಬಾವದಿಂದ ದೂರವಿರುವುದಕ್ಕೋ ಏನೋ, ಉಳ್ಳವರು ತಮ್ಮ ನಲ್ಕೂಟದ ಪತ್ರಿಕೆಗಳಲ್ಲಿ “ಹಾರಯ್ಕೆಯೇ ಉಡುಗೊರೆ, ನಲ್ಕೂಟಕ್ಕೆ ಬೇಟಿಯೇ ಉಡುಗೊರೆ” ಎಂದೆಲ್ಲ ಅಚ್ಚೊತ್ತಿಸ ತೊಡಗಿದ್ದು.

“ನಿನಗೆ ಮಾಡಿದ ಅವಮಾನಕ್ಕೆ ನೀನು ಉತ್ತರಿಸಲೇ ಬೇಕು. ಮುಯ್ಯಿಗೆ ಮುಯ್ಯಿ ತೀರಿಸಲೇಬೇಕು”. ಇಂತಹ ಬಳಕೆಗಳು ಪದದ ಹುರುಳನ್ನೇ ಬದಲಿಸ ತೊಡಗಿದವು. ಪ್ರೀತಿಯಿಂದ ಇಡುತ್ತಿದ್ದ ಮುಯ್ಯಿ ಈಗ ಸೇಡಿನ ಮುಯ್ಯಾಗಿ ಬದಲಾಗಿದೆ. ‘ಮುಯ್ಯಿ ಮಾಡುವುದು’ ಹೋಗಿ ಈಗ ‘ಮುಯ್ಯಿ ತೀರಿಸಿಕೊಳ್ಳುವುದು’ ಎಂದು ಮರುರೂಪ ಪಡೆದಿದೆ. ಪ್ರೀತಿಯ ಸಂಕೇತವಾದ ಮುಯ್ಯಿ ಎಂಬ ಪದ ಸೇಡು ಎಂಬ ಕೆಟ್ಟ ಹುರುಳನ್ನು ಪಡೆಯಲು ಮಂದಿಯ ನಡುವಣ ಒಡೆದ ಮನಸ್ಸುಗಳ ಒಡಕು ಯೋಚನೆಗಳೇ ಮೂಲವಾಗಿರಬಹುದು. ಸರಿಯಾದ ಯೋಚನೆಯಿಲ್ಲದೆ ನಾವು ಪರಿಸ್ತಿತಿಗೆ ಯೋಗ್ಯವಲ್ಲದ ಪದಗಳನ್ನು ಬಳಸಿದಾಗ, ಪದವು ಹೇಗೆ ಹುರುಳು ಕಳೆದುಕೊಳ್ಳುತ್ತದೆ ಎಂಬುದಕ್ಕೆ ‘ಮುಯ್ಯಿ’ ಒಂದು ಉದಾಹರಣೆ.

 

(ಚಿತ್ರಸೆಲೆ: londondowntown.ca)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: