ಹನಿಯೊಂದು ಜಾರಿದೆ…

ಸುನಿತಾ ಹಿರೇಮಟ

kere-angala

ಮುಂಗಾರು ಒಮ್ಮೆ ಎಲ್ಲ ಕೆರೆಗಳನ್ನು ತುಂಬಿ ತುಳುಕಿಸಿದರೆ ನನ್ನ ಕಣ್ಣ ಹನಿನೀರು ನಗಬಲ್ಲದೆ… ಎಂದು.

“ತರಿಕೆರೆ ಏರಿ ಮೇಲೆ ಮೂರು ಕರಿ “ಕುರಿ” ಮರಿ ಮೇಯಿತಿತ್ತು” ಅಂತ ಮನಸು ಹುಚ್ಚು ಕುದುರೆ ಹಾಗೆ ಕುಣಿಯುತ್ತದೆ

“ಮೂಡಲು ಕುಣಿಗಲು ಕೆರೆ ನೋಡೋರ್ ಗೊಂದಯ್ಬೋಗ
ಮೂಡಿs ಬರ್‍ತಾನೆ ಚಂದಿರsಮಾ | ತಾನಂದನೋ” ಅಂತ ಗುನುಗುನಿಸುತ್ತಿದೆ.

ಬೆಳಗು ಹರಿದು ಹೊತ್ತು ನೆತ್ತಿ ಮೇಲೆ ಏರುವ ಮೊದಲೊ ಹೊತ್ತು ಮುಳುಗುವ ಮೊದಲೊ ಸೊಂಟದಲ್ಲೊಂದು ತಲೆಯ ಮೇಲೊಂದು ಕೊಡ ಹೊತ್ತಚೆಲುವೆಯರು. ಆ ಹೆಂಗೆಳೆಯರ ಗುಂಪು ಕಲರವ …

ಕಡಿವಾಣವಿರಲ್ಲಿಲ್ಲ ಮನಸ್ಸಿನ ಬಾವನೆಗಳಿಗೆ
ಈ ಎಲ್ಲ ಬಾವನೆಗಳಾಚೆಗಿನ್ನೊಂದು ಚಿತ್ರ ಮೂಡಿತ್ತು. ಅದೆ “ನನ್ನ ಕೆರೆ”. ಈಗ ಇದೆಯೆ?

ಹಾಗೆ ನೋಡಿದರೆ ಎಲ್ಲ ಮನಸಿಗೂ ಎಲ್ಲ ಊರುಗಳಿಗೂ ಒಂದಲ್ಲ ಒಂದು ಕೆರೆಯ ಸಂಬಂದ ಇರಲಿಕ್ಕೇ ಬೇಕು… ನನಗೂ ಇದೆ ಆದರೆ ಎಲ್ಲಿ ?
ಹುಡುಕಿದರೆ ಅದು ಇತಿಹಾಸದ ಪುಟಗಳಲ್ಲಿ…

ಹಾಗೆಯೆ ನೆನಪಿನಾಳಕ್ಕೆ ಜಾರಿದರೆ ಸಿಕ್ಕಿದ್ದು ಸುಂದರ ಸುಮದುರ ಚಿತ್ರಣ. ರಾಜಮಾತೆಯರು ತಮ್ಮ ಮಕ್ಕಳ ಕಿವಿಯಲ್ಲಿ ‘ಕೆರೆ ಕಟ್ಟಿಸು, ಕಾಡು ಬೆಳೆಸು’… ಅಂತ ಹೇಳುತ್ತಿದ್ದರಂತೆ. ‘ಕೆರೆಯಂ ಕಟ್ಟಿಸು, ಬಾವಿಯಂ ಸವೆಸು, ದೇವಾಗಾರಮಂ ಮಾಡಿಸ… ಇದು ಶಾಸನ ಒಂದರ ಪದ್ಯ. ವಿಜಯನಗರಪ್ರವ್ಡ ಪ್ರತಾಪದೇವರಾಯನ ಕಾಲದಲ್ಲಿ, ಅವನ ಮಂತ್ರಿಯಾಗಿದ್ದ ಲಕ್ಶೀದರಾಮಾತ್ಯನು ಮಹಾಗಣಪತಿಯನ್ನು ಸ್ತಾಪಿಸಿ, ಅದಕ್ಕೆ ದತ್ತಿಯನ್ನು ಬಿಟ್ಟ ಸಂಗತಿಯನ್ನು ಹೇಳುವ ಶಾಸನವಿದು. ಲಕ್ಶೀದರನು ಚಿಕ್ಕವನಾಗಿದ್ದಾಗ, ಅವನ ತಾಯಿಯು ತನ್ನ ಎದೆಹಾಲನ್ನು ಕುಡಿಸುತ್ತಾ, ಅವನು ಸಮಾಜಕ್ಕೆ ಎಂತೆಂತಹ ಒಳ್ಳೆಯ ಕೆಲಸಗಳನ್ನು ಮಾಡಬೇಕು ಎಂಬ ಸದ್ವಿಚಾರಗಳನ್ನೂ ಕುಡಿಸಿದಳು. ಈ ಶಾಸನದ ಮೊದಲ ಮಾತನ್ನು ನೋಡಿ. ಕೆರೆಗಳನ್ನು ಕಟ್ಟಿಸು, ಬಾವಿಯನ್ನು ತೆಗೆಸು… ನಾಲ್ಕು ಜನರಿಗೆ ಉಪಕಾರವನ್ನು ಮಾಡು ಎಂದಿರುವಳು ಆ ತಾಯಿ.

ಜನಪದದಿಂದ ಹಿಡಿದು ರಾಜರು ಹಾಗು ಜನ ಸಾಮಾನ್ಯರು ಕಟ್ಟಿಸಿದ ಕೆರೆಗಳ ಮಾಹಿತಿ ಸಿಗುತ್ತದೆ ಇತಿಹಾಸದಲ್ಲಿ.ಶತಮಾನಗಳ ಹಿಂದೆ ಕನ್ನಡ ನಾಡು ಕಟ್ಟಿದ ರಾಜರುಗಳು ನಿರ‍್ಮಿಸಿದ ಕೆರೆಗಳು ನೂರಾರು. ರಾಜ್ಯ ಕಟ್ಟಿದ ಗುರುತಿಗಾಗಿ ಕೆರೆಗಳನ್ನು ನಿರ‍್ಮಿಸಿದ್ದ ನಮ್ಮ ಹೊಯ್ಸಳ, ವಿಜಯನಗರ, ಗಂಗ, ಚಾಲುಕ್ಯ, ಚೋಳ, ರಾಶ್ಟ್ರಕೂಟ, ಕದಂಬ, ಯಾದವ ಅರಸರು ಮಹಾನರಲ್ಲವೆ?

ಊರಿನಲ್ಲಿ ಯಾವುದೆ ದಾರ‍್ಮಿಕ ಕಾರ‍್ಯ ನಡೆದರೂ ಮೊದಲ ಪೂಜೆಯನ್ನು ಕೆರೆಗೆ ಸಲ್ಲಿಸಲಾಗುತ್ತಿತ್ತು. ಕೆರೆ ಅಂದ್ರೆ ಬರಿ ನೀರು ನಿಲ್ಲುವ ಜಾಗವಾಗಿರಲ್ಲಿಲ್ಲ, ಇಡೀ ಊರಿನ ಜೀವಾಳವಾಗಿರುತಿತ್ತು. ಕೆರೆ-ಕಟ್ಟೆಯ ವಿಸ್ತಾರ ನೋಡಿ ಊರಿನ ವಯ್ಬೋಗ ಅಳೆಯುವ ಕಾಲವದು. ಆಯಾ ಊರಿನ ಉಗ್ರಾಣದಂತಿದ್ದ ಕೆರೆ, ಮಡು, ಬಾವಿಗಳು ಅಲ್ಲಿನ ಆರ‍್ತಿಕತೆ ಮತ್ತು ಸಾಮಾಜಿಕತೆಯನ್ನು ಬಿಂಬಿಸುತ್ತಿದ್ದವು. ಜಲನಿದಿಯ ಕೆರೆಕಟ್ಟೆಗಳಿಗೆ ಇಟ್ಟಿರುವ ಹೆಸರೇ ರುಣಬಾರ ಅತವಾ ದಯ್ವತ್ವವನ್ನು ಸಂಕೇತಿಸುತ್ತಾ ಬಂದಿದೆ.

ಕೆರೆ ಕಟ್ಟುವ ತಂತ್ರಜ್ನಾನ ಮತ್ತು ಸ್ತಳ ಆಯ್ಕೆ ಕುರಿತಂತೆ ಸಿಕ್ಕಿರುವ ಶಾಸನಗಳಲ್ಲಿ ಕೆರೆ ನಿರ‍್ಮಾಣ ಮಾಡುವಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು, ಉತ್ತಮ ಮಣ್ಣು ಕೂಡಿರುವಂತಹ ಪ್ರದೇಶವನ್ನು ಕೆರೆ ಕಟ್ಟುವುದಕ್ಕಾಗಿ ಆಯ್ಕೆ ಮಾಡಿಕೊಳ್ಳುವ ಪದ್ದತಿ, ನದಿ ನೀರಿನ ಅಂಗಳ ಅತವಾ ನದಿ ಮೂಲದಿಂದ ಕಾಯ್ದುಕೊಳ್ಳುವ ಅಂತರ, ಬೆಟ್ಟಗುಡ್ದಗಳ ಸಾಲುಗಳಲ್ಲಿ, ಕಣಿವೆಗಳಲ್ಲಿ ಕೆರೆ ಕಟ್ಟುವ ಪದ್ದತಿ, ಒಕ್ಕಲು ಅತವಾ ಪಲವತ್ತಾದ ನೆಲದ ಆಯ್ಕೆ. ಆಳ ವಿಸ್ತೀರ‍್ಣ ಅನುಗುಣವಾಗಿ. ಕಲ್ಲು ಗಣಿಗಳ ಅತವಾ ಕಲ್ಲಿನ ಹಾಸುಗಳಿರುವಲ್ಲಿ ಕೆರೆ ಕಟ್ಟುವಿಕೆ ಹೀಗೆ ಹಲವಾರು ಮಾಹಿತಿಗಳಿವೆ. ಕೆರೆಗಳನ್ನು ನಿರ‍್ಮಿಸಲು ಕಲ್ಲು, ಕಲ್ಲಿನ ತೂಬು, ಇಟ್ಟಿಗೆ, ಸುಣ್ಣ, ಗಾರೆ ಮುಂತಾದ ಸಾಮಗ್ರಿಗಳನ್ನು ಬಳಸುತ್ತಿದ್ದರು. ಯಾವುದೇ ಹಂತದಲ್ಲೂ ಕೆರೆಯ ನೀರು ಸೋರಿಕೆಯಾಗದಂತೆ ಜಾಗ್ರತೆ ವಹಿಸುವುದು, ಕೆರೆ ದಂಡೆ ಗಟ್ಟಿಯಾಗಿರಬೇಕು, ಕೆರೆಯನ್ನು ಅಂಕುಡೊಂಕಾಗಿ ನಿರ‍್ಮಿಸಬೇಕು. ಯಾವುದೇ ಸಮಯದಲ್ಲೂ ನೀರಿನ ಒತ್ತಡ ಅದಿಕಗೊಂಡರೆ ದಂಡೆ ಒಡೆದ ಒಂದು ಬಾಗದಲ್ಲಿ ಮಾತ್ರ ನೀರು ಹಂಚಿಕೆಯಾಗಬೆಕು ಇವೆಲ್ಲವು ಹಿಂದಿನ ಕಾಲದವರಿಗೆ ಇದ್ದ ಪ್ರಕ್ರುತಿಯ ಆಳ ಹಾಗು ತಂತ್ರಜ್ನಾನದ ಮೇಲೆ ಬೆಳಕು ಚೆಲ್ಲುತ್ತದೆ ಇತಿಹಾಸ.

ಇತಿಹಾಸದ ಪುಟಗಳನ್ನು ತಿರುವಿದಾಗ ಸಿಗುವುದು ಬಹುತೇಕ ರಾಜರು ನೀರಿನ ನಿರ‍್ವಹಣೆಗೆ ಆದ್ಯತೆ ನೀಡಿದ್ದರು ಎಂಬುದು. ವಿಜಯನಗರದ ಅರಸು ಕ್ರುಶ್ಣದೇವರಾಯನ ಕಾಲದಲ್ಲೂ ನೀರಾವರಿಗೆ ಆದ್ಯತೆ ನೀಡಲಾಗಿತ್ತು. ಕೆರೆಗಳನ್ನು, ನೀರಾವರಿ ಕಾಲುವೆಗಳನ್ನು ನಿರ‍್ಮಿಸಿದಾಗ ದರ‍್ಮ ಮತ್ತು ಅರ‍್ತ ಹೆಚ್ಚುತ್ತದೆ ಎನ್ನುವುದು ರಾಜನ ಅಬಿಮತ. ಆತನ ಸಾಮ್ರಾಜ್ಯದಲ್ಲಿ ಕೆರೆಗಳು ಬಹಳಿದ್ದವು. ನೀರಿನ ಕೊರತೆ ಎಂಬುದೇ ಇರಲಿಲ್ಲ. ವಿಜಯನಗರ ಸಾಮ್ರಾಜ್ಯದ ಬೀದಿ ಬದಿಯಲ್ಲಿ ಚಿನ್ನ, ವಜ್ರ, ವೈಡೂರ‍್ಯ ಮಾರಲಾಗುತ್ತಿತ್ತು ಎನ್ನುವುದು ಇತಿಹಾಸ. ಆದರೆ ಅದರ ಕೀಲಿ ಇದ್ದದ್ದು ನೀರಿನಲ್ಲಿ ಎನ್ನುವುದು ಮಾತ್ರ ನಮಗೆ ಹೊಳೆಯುತ್ತಲೆ ಇಲ್ಲ…

ಕೆರೆ ಮರೆತರೆ… ಕೆರೆ ಕಳೆದರೆ… ಈಗ ನಾವು ಇತಿಹಾಸವನ್ನು ಮರೆತಿದ್ದೇವೆ ಹಿಂದಿನವರು ಕಟ್ಟಿದ ಬಹುತೇಕ ಕೆರೆಗಳನ್ನು ಕಳೆದ್ದಿದ್ದೆವೆ ಅವುಗಳಲ್ಲಿ ನಾವು ಉಳಿಸಿಕೊಂಡಿರುವುದು ಕೆಲವೇ ಕೆಲವು. ಕೆರೆಯನ್ನು ಹುಡುಕಲು ಈಗಿನ ಆದುನಿಕ ಜಗತ್ತಿನಲ್ಲಿ, ಮುಂದುವರಿದ ತಂತ್ರಜ್ನಾನದ ಯುಗದಲ್ಲು ಕಶ್ಟಪಡಬೇಕೆ? ಹವ್ದು ಎನ್ನುತ್ತದೆ ಇಂದಿನ ಪರಿಸ್ತಿತಿ. ಈಗಿನ ಪರಿಸ್ತಿತಿ ಬೀಕರವಾಗಿದೆ. ನಗರೀಕರಣ ಹೆಚ್ಚಾದಂತೆ ಅದಕ್ಕೆ ಮೊದಲು ಬಲಿಯಾಗಿದ್ದೇ ಕೆರೆಗಳು. ಕೆರೆಗಳೆಂದರೆ ಬಹುಮಹಡಿ ಮನೆಯಂಗಳಾಗಿವೆ, ತ್ಯಾಜ್ಯದ ಗುಂಡಿಗಳಾಗಿವೆ. ಚರಂಡಿ ನೀರು ಸಂಗ್ರಹಾಗಾರವಾಗಿದೆ. ಕೆಲವಶ್ಟು ಕೆರೆಗಳ ಹೂಳು ತುಂಬಿಕೊಂಡು ಕ್ರಿಕೆಟ್ ಆಟದ ಮಯ್ದಾನವಾಗಿದೆ. ಕೆರೆಗಳನ್ನು ನಮಗೆ ಬೇಕಾದಂತೆ ಕಟ್ಟಲು ಸಾದ್ಯವಿಲ್ಲ. ಅದಕ್ಕೆ ಬಹಳ ಜಾಣ್ಮೆಬೇಕು. ಆದುನಿಕ ಪ್ರಪಂಚದ ಕಾಮಗಾರಿಯಿಂದ ಕೆರೆಗಳು ಮರೆಯಾಗುತ್ತಿದೆ. ಇರುವಶ್ಟು ಕೆರೆಗಳನ್ನು ಬಲಿ ಕೊಡುವ ಬದಲು ಅದನ್ನು ಜೋಪಾನವಾಗಿ ಉಳಿಸಿ ಬೆಳೆಸಬೇಕು.

’ಕೆರೆ ಕಟ್ಟಿಸು, ಕಾಡು ಬೆಳೆಸು’ಅಂತ ಹೇಳುವಲ್ಲಿ ಈಗ ‘ಕೆರೆಯಂ ಕರಗಿಸು, ಕೆರೆಯಂ ಕಬಳಿಸು, ಕೆರೆಯಂ ಸದ್ದಿಲ್ಲದೆ ಮುಚ್ಚಿಸು, ಕೆರೆಯಂ ಹೇಳಹೆಸರಿಲ್ಲದಾಗಿಸು’ ಎಂದೆಲ್ಲ ಬರೆಯುವಂತಹ ದುಸ್ತಿತಿ ಒದಗಿದೆ. ಹಿರಿಯರು ಹೇಳುವ ಹಾಗೆ ಹತ್ತು ಬಾವಿಗಳಿಗೆ ಒಂದು ಕೆರೆ ಸಮವಂತೆ. ಕೆರೆಯ ಉಳುವಿಗೆ ಮೊದಲು ನಮ್ಮೊಳಗಿನ ಕರೆಗೆ ಓಗೊಡೋಣ ಕೆರೆಗಳನ್ನ ಉಳಿಸೊಣ. ಏನೇ ಆದರೂ ಮನಸ್ಸು ಮತ್ತೆ ಮತ್ತೆ ಹಾಡುತಿದೆ ದೂರದಲ್ಲೆಲ್ಲೊ ಮೂಡುವ ಮಿಂಚಿನಂತೆ ಆಸೆಯ ಸೆರೆಯಂತೆ…

ಮಾಯದಂತ ಮಳೆ ಬಂತಣ್ಣ ಮದುಗಾದ ಕೆರೆಗೆ

(ಚಿತ್ರ: ganadhalu.wordpress.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: