ಓಡುತಿಟ್ಟ ಕಲೆಯೂ ಹವ್ದು, ಸರಕೂ ಹವ್ದು

– ಬರತ್ ಕುಮಾರ್.

theatre2
ಯಾವುದೇ ಓಡುತಿಟ್ಟ ( movie ) ಮಾಡಬೇಕಾದವರು ಈ ಬೇರುಮಟ್ಟದ ಗೊಂದಲವನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ಓಡುತಿಟ್ಟವು ಎಶ್ಟರ ಮಟ್ಟಿಗೆ ಒಂದು ಕಲೆಯೋ ಅಶ್ಟರ ಮಟ್ಟಿಗೆ ಅದು ಮಾರಬಲ್ಲ ಇಲ್ಲವೆ ಮಾರಬೇಕಾದ ಸರಕು ಕೂಡ ಹವ್ದು. ಕೆಲವರು ಓಡುತಿಟ್ಟ “ಒಂದು ಕಲೆ ಮಾತ್ರ” ಎಂದು ಬಗೆದು ಈ ಗೊಂದಲವನ್ನೇ ಇಲ್ಲವಾಗಿಸಲು ಮೊಗಸಿದರೂ, ಅದು ಮತ್ತೆ ಮತ್ತೆ ಮಯ್ಕೊಡವಿ ಇಲ್ಲ ‘ನಾನು ಸರಕು ಕೂಡ’ ಎಂದು ಸಾರಿ ಸಾರಿ ಹೇಳುತ್ತದೆ. ಇನ್ನು ಕೆಲವರು, ಹೇಗೆ ನಾವು ಒಂದು ಹೊತ್ತಿಗೆಯನ್ನು ಓದುತ್ತೇವೆಯೋ ಹಾಗೆಯೇ ಓಡುತಿಟ್ಟವನ್ನು ನೋಡಬೇಕು ಎಂದು ಹೇಳುತ್ತಾರೆ. ಆದರೆ ಒಂದು ಹೊತ್ತಿಗೆಗೂ ಮತ್ತು ಓಡುತಿಟ್ಟಕ್ಕೂ ಎರಡು ಅರಿದಾದ ಬೇರೆತನಗಳಿವೆ:-

• ಹೊತ್ತಿಗೆಯನ್ನು ಓದುವಾಗ ಓದುಗನಿಗೆ ತನ್ನ ಕಲ್ಪನೆಯ ಅಳವನ್ನು ಬಳಸಿ ಹಲವು ಬಗೆಗಳಲ್ಲಿ ಮತ್ತು ಹಲವು ಹೊಲುಬುಗಳ ನೆರವಿನಿಂದ ಅದನ್ನು ಇಲ್ಲವೆ ಅದರಲ್ಲಿರುವ ವಿಶಯವನ್ನು ತನ್ನದಾಗಿಸಿಕೊಳ್ಳಬಹುದು, ಆದರೆ ಓಡುತಿಟ್ಟ ನೋಡುವ ನೋಡುಗನು ತನ್ನ ’ಕಲ್ಪನೆಯ’ ಅಳವನ್ನು ಬಿಟ್ಟುಕೊಟ್ಟು ನಿರ‍್ದೇಶಕನ ಕಣ್ಣಿನ ಮೂಲಕ ಓಡುತಿಟ್ಟವನ್ನು ಅರ‍್ತ ಮಾಡಿಕೊಳ್ಳಬೇಕಾಗುತ್ತದೆ.

• ಹೊತ್ತಿಗೆ ಬರೆಯುವುದು ಇಲ್ಲವೆ ಚಿತ್ರಕಲೆ ಬಿಡಿಸುವುದು- ಇವೆಲ್ಲವೂ ಒಬ್ಬರೇ ತಮ್ಮಶ್ಟಕ್ಕೆ ತಾವೇ ಮಾಡಿಕೊಳ್ಳಬಹುದಾದ, ಮಾಡಬೇಕಾದ ರಚನಾತ್ಮಕ ಕೆಲಸಗಳು. ಇದರಲ್ಲಿ ಒಬ್ಬ ವ್ಯಕ್ತಿಯಲ್ಲದೇ ಹತ್ತು ಹಲವು ಬಗೆಯ ಕೆಲಸ ಮಾಡುವ ಮಂದಿ ಬೇಕಾಗಿರುವುದಿಲ್ಲ. ಆದರೆ ಓಡುತಿಟ್ಟವನ್ನು ಮಾಡಲು ಹಣ ಹೂಡುವವನು, ತಿಟ್ಟ ತೆಗೆಯುವವನು, ನಟಿಸುವವನು – ಹೀಗೆ ಹಲವು ಮಂದಿ ಕೂಡಿ ದುಡಿಯಬೇಕಾಗುತ್ತದೆ.

ಹಾಗಾಗಿ ಹೊತ್ತಿಗೆ ಮತ್ತು ಓಡುತಿಟ್ಟ ಉಂಟಾಗುವ ಬಗೆಯಲ್ಲೇ ಬೇರ‍್ಮೆ ಇದೆ.       theatre3

ಓಡುತಿಟ್ಟದಂತಹ ಕಲೆಗೆ ಒಂದು ಮಾರುಕಟ್ಟೆ ಇದೆ. ಇದನ್ನು ನಂಬಿಕೊಂಡು ಹಲವು ಮಂದಿ ತಮ್ಮ ಬದುಕನ್ನು ಸಾಗಿಸುತ್ತಿದ್ದಾರೆ. ಇಂತಹ ಒಂದು ಪಾಡಿರುವಾಗ ಓಡುತಿಟ್ಟಕ್ಕೆ ಅತಿಯಾದ ಕಲೆಯ ಬಲೆಯನ್ನು ಬಿಗಿಯಲಾಗುವುದಿಲ್ಲ. ಓಡುತಿಟ್ಟದಂತಹ ಕಲೆಯು, ತಾನು ಉಳಿಯಲು ಮತ್ತು ಬೆಳೆಯಲು ತಾನಾಗಿಯೇ ಸರಕಿನ ಗುಣಗಳನ್ನು ಪಡೆದುಕೊಳ್ಳುತ್ತದೆ. ಹಾಗಾಗಿ, ದಿಟವಾಗಲೂ ಓಡುತಿಟ್ಟ ಎಂಬುದು ಕಲೆ ಮತ್ತು ಸರಕು ಎಂಬ ಎರಡು ತುದಿಗಳ ನಡುವೆ ತೂಗಾಡುತ್ತಿರುವ ತೂಗುಗುಂಡಿನ ಹಾಗೆ ಇರಬೇಕಾಗುತ್ತದೆ. ಕೆಲವೊಮ್ಮೆ ಕಲೆಯ ಕಡೆಗೆ ವಾಲಬಹುದು, ಇನ್ನು ಕೆಲವೊಮ್ಮೆ ಸರಕಿನ ಕಡೆಗೆ ವಾಲಬಹುದು.

ಹಾಗಾದರೆ ಓಡುತಿಟ್ಟ ಮಾಡುವವರು ಈ ಗೊಂದಲವನ್ನು ಹೇಗೆ ಬಗೆಹರಿಸಿಕೊಳ್ಳಬೇಕು?

ಮೊದಲನೆಯದಾಗಿ, ಈ ಬೇರುಮಟ್ಟದ ಕಲೆ-ಸರಕಿನ ಗೊಂದಲವಿದೆ ಎಂಬುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಎರಡನೆಯದಾಗಿ, ಹಾಗೆ ಒಪ್ಪಿಕೊಂಡಾಗ ಈ ಗೊಂದಲವನ್ನು ಹೇಗೆ ಸರಿದೂಗಿಸಬಹುದೆಂಬುದರ ಬಗ್ಗೆ ಚಿಂತನೆ ಮಾಡಬಹುದು. ಅಂದರೆ ಕೆಲವರು ಕಲೆಯ ಕಡೆಗೆ ವಾಲುವ ಓಡುತಿಟ್ಟಗಳನ್ನು ಮಾಡಿದರೆ ಇನ್ನು ಕೆಲವರು ಸರಕಿನ ಕಡೆಗೆ ವಾಲುವ ಓಡುತಿಟ್ಟಗಳನ್ನು ಮಾಡಬಹುದು. ಇದಲ್ಲದೆ ಮೂರನೆ ಬಗೆಯವರು ಇವೆರಡರ ಹದವಾದ ಬೆರಕೆಯ ಓಡುತಿಟ್ಟವನ್ನು ಮಾಡಬಹುದು. ಈ ಮೂರು ಬಗೆಯ ಓಡುತಿಟ್ಟಗಳೂ ಜೀವಂತವಾಗಿದ್ದಶ್ಟು ಅದು ಓಡುತಿಟ್ಟಕ್ಕೇ ಒಳ್ಳೆಯದು. ಇದರಿಂದ ಓಡುತಿಟ್ಟದ ಹಲವು ಸಾದ್ಯತೆಗಳು ತೆರೆದುಕೊಳ್ಳುತ್ತವೆ. ಇದಲ್ಲದೆ ಓಡುತಿಟ್ಟವು ನಿಂತ ನೀರಾಗದೆ ಹಲವು ಹೊಳಹುಗಳಿಗೆ ದಾರಿ ಮಾಡಿಕೊಡುತ್ತದೆ.

ಈ ಕಲೆ-ಸರಕಿನ ಗೊಂದಲ ದಿಟವಾಗಲೂ ಹಣಕಾಸಿನರಿಗರು ತೋರಿಸಿರುವ ಬಳಕೆಬೆಲೆ ( use value ) ಮತ್ತು ಮಾರುಬೆಲೆ ( exchange value )ಗೆ ಇರುವ ತಿಕ್ಕಾಟದಿಂದ ಉಂಟಾದ ಗೊಂದಲವಾಗಿದೆ. ಯಾವುದೇ ವಸ್ತುವಿನ ಬಳಕೆಬೆಲೆಯನ್ನು ತೀರ‍್ಮಾನಿಸುವುದು ಕಶ್ಟದ ಕೆಲಸ ಯಾಕಂದರೆ ಅದನ್ನು ಬಳಸುವ ಬಗೆಗೆ ಮಿತಿಯೇ ಇರುವುದಿಲ್ಲ ಆದರೆ ಅದನ್ನು ಬೇರೊಬ್ಬರಿಗೆ ಮಾರುವಾಗ ಅದಕ್ಕೊಂದು ಬೆಲೆಯನ್ನು ನಿಗದಿ ಮಾಡಬೇಕಾದ ಒತ್ತಡ-ಒತ್ತಾಯ ಉಂಟಾಗುತ್ತದೆ. ಆಗ ಬಳಕೆಬೆಲೆ ಮತ್ತು ಮಾರುಬೆಲೆಯನ್ನು ಸರಿದೂಗಿಸುವ ಒಂದು ದಾರಿಯನ್ನು ಕಂಡುಕೊಳ್ಳಬೇಕಾಗುತ್ತದೆ. ಅಂತಹ ದಾರಿ ಯಾವಾಗಲೂ ನೂರಕ್ಕೆ ನೂರರಶ್ಟು ಸರಿ ಎಂದು ಹೇಳಲು ಯಾವ ಅಳತೆಗೋಲಿಲ್ಲ. ಈ ದಾರಿಯೇ ಹೊಸಗಾಲದ ಮಾರುಕಟ್ಟೆ ಎಂಬ ಏರ‍್ಪಾಟಿನ ಹೆಗ್ಗಳಿಕೆಯೂ ಹವ್ದು ಮತ್ತು ಕೊರತೆಯೂ ಹವ್ದು.

(ಚಿತ್ರ ಸೆಲೆ: livemint.com, boston.com )

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.