’ಮಂದಿ ಬೆಳವಣಿಗೆ’ಯಲ್ಲಿ ಕರ‍್ನಾಟಕವೆಲ್ಲಿ?

ಅನ್ನದಾನೇಶ ಶಿ. ಸಂಕದಾಳ.

human-development-index-1-728

 

ವಿಶ್ವಸಂಸ್ತೆಯು ಪ್ರತೀ ವರುಶ ಮಂದಿ ಬೆಳವಣಿಗೆ ತೋರುಕ (ಮಂ.ಬೆ.ತೋ – Human Development Index )ದ ಬಗ್ಗೆ ವರದಿಯನ್ನು ಹೊರತರುವಂತೆ, 2013 ವರುಶದ ವರದಿಯನ್ನೂ ಹೊರತಂದಿದೆ. 187 ದೇಶಗಳಲ್ಲಿನ ಮಂ.ಬೆ.ತೋ ವರದಿಯ ಮೇರೆಗೆ ಪಟ್ಟಿಯೊಂದನ್ನು ವಿಶ್ವಸಂಸ್ತೆ ಬಿಡುಗಡೆ ಮಾಡಿದ್ದು, ಬಾರತ 135ನೆ ಸ್ತಾನದಲ್ಲಿದೆ ಎಂದು ತಿಳಿದುಬಂದಿದೆ. ಕೆಲ ಕಾರಣಗಳಿಂದ ಬಡಗಣ ಕೊರಿಯಾ, ಮಾರ್‍ಶಲ್ ಅಯ್ಲ್ಯಾಂಡ್, ಸಾನ್ ಮಾರಿನೋ, ಸೊಮಾಲಿಯ, ತೆಂಕಣ ಸುಡಾನ್ ಮತ್ತು ಟೂವಾಲೂ ದೇಶಗಳನ್ನು ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಹೇಳಲಾಗಿದೆ.

ಏನಿದು ಮಂದಿ ಬೆಳವಣಿಗೆ ತೋರುಕ?:

ಮಂ.ಬೆ.ತೋ ಎಂಬುದು, ಒಂದು ನಾಡು ತನ್ನ ಸಾಮಾಜಿಕ ಮತ್ತು ಹಣಕಾಸಿನ ವಲಯದಲ್ಲಿ ತೋರುವ ಒಟ್ಟಾರೆ ಏಳಿಗೆಯನ್ನು ಅಂಕಿಅಂಶ ಬಳಸಿ ಅಳೆದು ತೋರುವ ಸಾದನವಾಗಿದೆ. ಹಣಕಾಸು ಅರಿಗರಾದ ಪಾಕಿಸ್ತಾನದ ಮಹಬೂಬ್ ಉಲ್ ಹಕ್ ಮತ್ತು ಬಾರತದ ಅಮರ‍್ತ್ಯ್ ಸೇನ್ 1990ರಲ್ಲಿ, ನಾಡಿನ ಮಂದಿಯ ಬೆಳವಣಿಗೆಯನ್ನು ತಿಳಿಸುವ ಈ ಬಗೆಯನ್ನು ಹುಟ್ಟುಹಾಕಿದರು. ಒಂದು ನಾಡಿನ ಮಂದಿಯ ಓದುಬರಹದರಿವು (literacy), ಬದುಕಬಹುದಿಕೆ(life expectancy) ಮತ್ತು ಮಂದಿಯ ಹುಟ್ಟುವಳಿ(income) – ಎಂಬ ತೋರುಕಗಳನ್ನು ಬಳಸಿ ಮಂ.ಬೆ.ತೋ ವನ್ನು ಪಡೆಯಬಹುದಾಗಿದೆ ಎಂದು ಹಕ್ ಮತ್ತು ಸೇನ್ ತೋರಿಸಿಕೊಟ್ಟರು.

ಒಂದು ನಾಡಿನಲ್ಲಿ ಹುಟ್ಟುವ ಹುಟ್ಟುವಳಿಯೊಂದನ್ನೇ ಬಳಸಿ ಆ ನಾಡಿನ ಏಳಿಗೆಯನ್ನು ಅಳೆಯದೇ, ಆ ನಾಡಿನ ಮಂದಿಯ ಬದುಕಿನ ಮಟ್ಟವನ್ನೂ ಬಳಸಿ ನಾಡಿನ ಏಳಿಗೆಯನ್ನು ಒರೆಗೆ ಹಚ್ಚುವುದು ಹೆಚ್ಚು ಸರಿ ಎಂಬುದು ಈ ಅರಿಗರ ಅನಿಸಿಕೆ. ಯಾಕೆಂದರೆ ಒಂದು ನಾಡಿನ ಏಳಿಗೆಯು, ಆ ನಾಡಿನ ಮಂದಿಯ ಏಳಿಗೆಯಲ್ಲಿ ಅಡಗಿದೆ. ಏಳಿಗೆಯನ್ನು ತಿಳಿಯಲು ಮಂದಿಯ ಬದುಕಿನ ಮಟ್ಟವನ್ನೂ ಅಳತೆಗೋಲಾಗಿಸಿದರೆ, ಆ ದಿಕ್ಕಿನೆಡೆ ಸರಕಾರದ ಗಮನ ಹರಿದು ಬದುಕಿನ ಮಟ್ಟ ಮೇಲೆರಿಸುವಂತ ಹಮ್ಮುಗೆಗಳು ಹೊರಹೊಮ್ಮುವುವು, ಆ ಮೂಲಕ ಮಂದಿಯ ಏಳಿಗೆಯೂ ಆಗುವುದು ಎಂಬ ಎಣಿಕೆ ಅವರದು. ಆ ನಿಟ್ಟಿನಲ್ಲಿ ಎಲ್ಲಾ ನಾಡುಗಳನ್ನು ಹೋಲಿಸಿ ತೋರುವ ಪಟ್ಟಿಯು, ನಾಡುಗಳಿಗೆ ತಮ್ಮ ತಪ್ಪು ನಡೆಗಳನ್ನು ಸರಿಪಡಿಸಿಕೊಂಡು ಅತವಾ ಸರಿಯಾದ ನಡೆಯನ್ನು ಮುಂದುವರಿಸಿಕೊಂಡು, ಮಂದಿಯ ಬದುಕನ್ನು ಉತ್ತಮಗೊಳಿಸಲು ಹುರಿದುಂಬಿಸುವುದು ಎಂದು ತಿಳಿಯಲು ಹೆಚ್ಚು ಹೊತ್ತು ಹಿಡಿಯುವುದಿಲ್ಲ.

ವಿಶ್ವಸಂಸ್ತೆಯ ಮಂ.ಬೆ.ತೋ ಪಟ್ಟಿ ಮತ್ತು ಕರ್‍ನಾಟಕ:

ಮೇಲೆ ತಿಳಿಸಿದಂತೆ, ವಿಶ್ವಸಂಸ್ತೆಯು ತನ್ನ ಸದಸ್ಯ ದೇಶಗಳಲ್ಲಿನ ಮಂದಿ ಬೆಳವಣಿಗೆ ಬಗ್ಗೆ ಪ್ರತೀ ವರುಶ ಕಣ್ಣಾಯಿಸುತ್ತಿರುತ್ತದೆ(survey) ಮತ್ತು ಅದರ ಬಗ್ಗೆ ವರದಿಯನ್ನೂ ಹೊರತರುತ್ತಿರುತ್ತದೆ. ಈ ವರದಿಯನ್ನು ನೋಡಿದಾಗ ಕುತೂಹಲಕಾರಿ ವಿಶಯಗಳು ತಿಳಿಯುವುದಲ್ಲದೆ ಕೆಲವು ಸರಿಯಾದ ಕೇಳ್ವಿಗಳನ್ನು ಕೇಳುವ ಹಾಗೆ ಮಾಡುತ್ತದೆ. 2013 ರ ಮಂ.ಬೆ.ತೋ ಪಟ್ಟಿಯಲ್ಲಿ ಮೊದಲನೇ ಸ್ತಾನದಲ್ಲಿ ನಾರ್‍ವೆ ದೇಶವಿದ್ದು ಎರಡನೇ ಸ್ತಾನದಲ್ಲಿ ಆಸ್ಟ್ರೇಲಿಯ ಇದೆ. ಮೂರರಲ್ಲಿ ಸ್ವಿಜರ್ ಲ್ಯಾಂಡ್ ಮತ್ತು ಇಪ್ಪತ್ತರಲ್ಲಿ ಪ್ರಾನ್ಸ್ ಇದೆ. ಮಂ.ಬೆ.ತೋ ನೇರವಾಗಿ ಮಂದಿಯ ಬೆಳವಣಿಗೆಗೆ ಸಂಬಂದಿಸಿರುವುದರಿಂದ, ಈ ನಾಡುಗಳ ಮಂದಿಯೆಣಿಕೆ (population) ಬಗ್ಗೆ ತಿಳಿಯುವುದು ಮುಕ್ಯವಾಗುತ್ತದೆ ಎಂಬುವುದರಲ್ಲಿ ಯಾವುದೇ ಗೊಂದಲವಿರುವುದಿಲ್ಲ .

ಮಂದಿಯೆಣಿಕೆಯ ಮಾಹಿತಿ:

mandienike

135ನೆ ಸ್ತಾನದಲ್ಲಿರೋ ಬಾರತದ ಮಂದಿಯೆಣಿಕೆ 125 ಕೋಟಿಯ ಹತ್ತಿರವಿದ್ದು, ಎಲ್ಲಾ ಮಂದಿಗೆ ಸೇರಿ ‘ಒಂದು’ ಮಂ.ಬೆ.ತೋ ವು ವಿಶ್ವಸಂಸ್ತೆಯ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಆದರೆ ಬಾರತದ ಪರವಾಗಿ ಕಾಣಿಸಿಕೊಂಡ ಒಟ್ಟಾರೆ ಮಂ.ಬೆ.ತೋ, ಬಾರತದ ಮಂದಿಯ ಬದುಕಿನ ಬಗ್ಗೆ, ಅವರ ಬೆಳವಣಿಗೆ ಬಗ್ಗೆ ಸರಿಯಾದ ಮಾಹಿತಿ ಒದಗಿಸುವುದಿಲ್ಲ ಎಂದು ಹೇಳಬಹುದು. ಕಾರಣ, ಬಾರತವು ಹಲವಾರು ನುಡಿಗಳ ಆದಾರದ ಮೇಲೆ ಮಾಡಲಾಗಿರುವ ರಾಜ್ಯಗಳ ಒಕ್ಕೂಟವಾಗಿದ್ದು, ಆಯಾ ರಾಜ್ಯಗಳು ಕಯ್ಗೊಂಡ ಹಮ್ಮುಗೆಗಳ ಮೇಲೆ ಆಯಾ ರಾಜ್ಯದ ಮಂದಿಯ ಬೆಳವಣಿಗೆ ನಿಂತಿರುತ್ತದೆ. ಇಡೀ ಬಾರತಕ್ಕೆ ಒಂದೇ ಮಂ.ಬೆ.ತೋ ಎನ್ನುವುದು, ಎಲ್ಲಾ ನುಡಿಯಾಡುವವರ ಬದುಕಿನ ಮಟ್ಟವು ಒಂದೇ ಎಂದು ತೋರಿಸಿದಂತಾಗುತ್ತದೆ. ಇದು ಸರಿಯಲ್ಲ ಎನ್ನುವುದು ನೇರವಾಗಿ ತಿಳಿಯುವುದು ಒಂದು ಕಡೆ ಆದರೆ, ಹೆಚ್ಚು ಕಡಿಮೆ ಕರ್‍ನಾಟಕದಶ್ಟೇ ಮಂದಿ ಹೊಂದಿರುವ ಪ್ರಾನ್ಸ್ ನಾಡು ಅತವಾ ಲಕ್ಶದಶ್ಟೇ ಮಂದಿ ಹೊಂದಿರುವ ನಾಡುಗಳು, ತಮ್ಮ ಬೆಳವಣಿಗೆಯನ್ನು ವಿಶ್ವಮಟ್ಟದಲ್ಲಿ ಒರೆಗೆ ಹಚ್ಚಬಹುದಾದರೆ, ಕರ್‍ನಾಟಕಕ್ಕೆ ಯಾಕಾಗಬಾರದು? ಎನ್ನುವ ಕೇಳ್ವಿ ಹುಟ್ಟುವುದು ಮತ್ತೊಂದು ಕಡೆ!

ಕರ್‍ನಾಟಕದ ಬೆಳವಣಿಗೆಯನ್ನು ವಿಶ್ವಮಟ್ಟದಲ್ಲಿ ತೂಗಿದರೆ – ಕರ್‍ನಾಟಕದಲ್ಲಿನ ಯಾವ ಹಮ್ಮುಗೆಗಳು ಸರಿಯಾಗಿವೆ, ಯಾವುದು ಸರಿ ಇಲ್ಲ, ಯಾವುದನ್ನು ಮುಂದುವರೆಸಬೇಕು, ಯಾವುದನ್ನು ಬಿಡಬೇಕು ಎಂಬುದು ತಿಳಿಯುತ್ತದಲ್ವೇ? ಅದು ಕರ್‍ನಾಟಕವನ್ನು ಸರಿಯಾದ ದಿಕ್ಕಿನಲ್ಲಿ ನಡೆಸಲು ಸಹಾಯ ಮಾಡುತ್ತದಲ್ವೇ? ಕರ್‍ನಾಟಕದ ಮಂದಿಯ ಬೆಳವಣಿಗೆಯನ್ನು ವಿಶ್ವಮಟ್ಟಕ್ಕೆ ಏರಿಸಲು ಅನುವು ಮಾಡಿಕೊಡುತ್ತದಲ್ವೇ? ಎಂಬ ಸರಿಯಾದ ಕೇಳ್ವಿಗಳು ತಲೆಯಲ್ಲಿ ಹುಳ ಬಿಟ್ಟರೆ, ಅದಕ್ಕೆ ಮಾರ್‍ನುಡಿಯು(answer) – ಕರ್‍ನಾಟಕವಶ್ಟೇ ಅಲ್ಲದೇ, ಬಾರತದ ಎಲ್ಲಾ ರಾಜ್ಯಗಳಲ್ಲಿನ ಮಂದಿಯ ಬೆಳವಣಿಗೆಯು, ವಿಶ್ವಮಟ್ಟದಲ್ಲಿ ಹೋಲಿಸಿಕೊಂಡು, ವಿಶ್ವಮಟ್ಟದಲ್ಲಿ ‘ರ್‍ಯಾಂಕ್’ ಪಡೆಯುವಂತಿರಲಿ ಎಂಬುದಾಗಿದೆ. ಏನಂತೀರಿ?

( ಮಾಹಿತಿ ಸೆಲೆ : hdr.undp.org, wiki-humandevelopmentindex, wiki-countriesbyHDIeconomictimes.com, worldometers.info )

( ಚಿತ್ರ ಸೆಲೆ : slideshare.net )

ನಿಮಗೆ ಹಿಡಿಸಬಹುದಾದ ಬರಹಗಳು

2 Responses

  1. Mahesh Bhat says:

    ಫ್ರಾನ್ಸ್ ಗಿಂತಲೂ ಚಿಕ್ಕದಾದ ಲಕ್ಸೆಂಬರ್ಗ್ ಮೊದಲಾದವುಗಳನ್ನು ನೋಡಿದರೆ, ನಮ್ಮ ಉತ್ತರ ಕನ್ನಡ ಜಿಲ್ಲೆಯನ್ನೂ ವಿಶ್ವ ಮಟ್ಟದಲ್ಲಿ ಮಂ.ಬೆ.ತೋ ದಲ್ಲಿ ಒರೆಗೆ ಹಚ್ಚಬಹುದಾಗಿತ್ತು ಎಂದೆನ್ನಿಸುತ್ತದೆ. ಏನಂತೀರಿ ?

  2. ನಿಜ ಮಹೇಶ್ ಬಟ್, ಆದರೆ ಬಾರತದಲ್ಲಿ ಎಲ್ಲವೂ ಕೇಂದ್ರಸರ್‍ಕಾರದ ಕಯ್ಯಲ್ಲಿದ್ದು ಆಡಳಿತವು ಹೆಚ್ಚು ಕೇಂದ್ರೀಕ್ರುತವಾಗಿದೆ. ನಿಜವಾದ ಒಕ್ಕೂಟ ಏರ್‍ಪಾಡಿನತ್ತ ನಡೆಯಲು ಮೊದಲ ಹೆಜ್ಜೆಯಾಗಿ ರಾಜ್ಯಗಳಿಗೆ ಅದಿಕಾರ ಸಿಗಬೇಕಿದೆ. ರಾಜ್ಯದ ಮಟ್ಟದಲ್ಲಿ ಮಂ.ಬೆ.ತೋ ವನ್ನು ಕಲೆಹಾಕಿ, ಅದು ಸರಿಯಾದ ಮಾಹಿತಿ ನೀಡುತ್ತಿಲ್ಲ ಅಂತ ಅನಿಸಿದರೆ ಮುಂದಿನ ಹೆಜ್ಜೆಯಾಗಿ ಜಿಲ್ಲಾಮಟ್ಟದಲ್ಲಿ ಅಳೆಯುವ ಕೆಲಸ ಮಾಡಬಹುದು.

ಅನಿಸಿಕೆ ಬರೆಯಿರಿ:

%d bloggers like this: