ಕಾರು ಏರಿದ ಗೂಗಲ್ ಮತ್ತು ಆಪಲ್

ಜಯತೀರ‍್ತ ನಾಡಗವ್ಡ.

google vs apple

ಮಿಂಬಲೆ, ಎಣ್ಣುಕ, ಮಡಿಲೆಣ್ಣುಕ ಮತ್ತು ಚೂಟಿಯುಲಿಗಳ ಮೂಲಕ ನಮ್ಮ ಬದುಕಿನ ಬಾಗವಾಗಿ ಬಹುಪಾಲು ನಮ್ಮನ್ನು ಹಿಡಿದಿಟ್ಟಿರುವ ಗೂಗಲ್ ಮತ್ತು ಆಪಲ್ ಕೂಟಗಳು ಇದೀಗ ತಮ್ಮ ಪಯ್ಪೋಟಿಯನ್ನು ಕಾರುಗಳ ಜಗತ್ತಿಗೆ ಹರಡಿಕೊಂಡಿವೆ. ದಿನೇ ದಿನೇ ಹೊಸ ಚಳಕ (tech), ಬಳಕಗಳನ್ನು(apps) ಹುಟ್ಟುಹಾಕಿ ನಮ್ಮ ಕೆಲಸವನ್ನು ಹಗುರ ಮಾಡುತ್ತಿರುವ ಗೂಗಲ್ ನ ಅಂಡ್ರಾಯ್ಡ್ (Android) ಮತ್ತು ಆಪಲ್ ನ ಆಯ್ ಒಎಸ್ (iOS)ಗಳು ನಮ್ಮ ಕಾರಿಗೆ ಲಗ್ಗೆ ಇಟ್ಟಿವೆ.

ಇದೇ ಮಾರ‍್ಚಿನಲ್ಲಿ ನಡೆದ ಜಿನೆವಾ ತೋರ‍್ಪಿನಲ್ಲಿ (show) ಸ್ವೀಡನ್ ನಾಡಿನ ವೋಲ್ವೋದವರ ಕಾರೊಂದಕ್ಕೆ ಆಪಲ್ ತನ್ನ ಹೊಸ ಚಳಕ ಕಾರ್-ಪ್ಲೇ (Car-Play) ಅಳವಡಿಸಿ ಎಲ್ಲರ ಗಮನ ತಮ್ಮತ್ತ ಸೆಳೆಯುವಂತೆ ಮಾಡಿದ್ದು ಹಳೆಯ ಸುದ್ದಿ. ಇದಕ್ಕೆ ಸಡ್ಡು ಹೊಡೆಯಲು ಇದೀಗ ಗೂಗಲ್ ಕೂಟದವರು ಅಂಡ್ರಾಯ್ಡ್ ಆದಾರಿತ “ಅಂಡ್ರಾಯ್ಡ್ ಆಟೋ” ಎಂಬ ಹೊಸ ಚಳಕವೊಂದನ್ನು ಮಾರುಕಟ್ಟೆಯಲ್ಲಿ ಹೊರತಂದಿದೆ. ಹೆಚ್ಚು-ಕಡಿಮೆ ಕಾರ್-ಪ್ಲೇ ತರಹವೇ ಕೆಲಸಮಾಡುವ ಅಂಡ್ರಾಯ್ಡ್ ಆಟೋ (Android Auto) ಹಲವು ಕಾರುಬಂಡಿ ತಯಾರಕರಿಗೆ ನೆಮ್ಮದಿ ತಂದಿದೆ.

ಈ ಹೊಸ ಚಳಕದ ಮೂಲಕ ನೀವು ನಿಮ್ಮ ಕಾರುಬಂಡಿ ಓಡಿಸುತ್ತಲೇ ನೆಮ್ಮದಿಯಿಂದ ಚೂಟಿಯುಲಿಯನ್ನು ಹಿಡಿತದಲ್ಲಿಡಲು ಸಾದ್ಯ. ನಿಮ್ಮ ಚೂಟಿಯುಲಿಯನ್ನು ಕಾರಿಗೆ ಜೋಡಿಸಿದರೆ ಸಾಕು ಕಾರಿನ ತೋರುಮಣೆಯೇ (dash board) ನಿಮ್ಮ ಚೂಟಿಯುಲಿಯ ತೆರೆಯಾಗಿ ಮಾರ‍್ಪಾಟುಗೊಳ್ಳುತ್ತದೆ. ಕಾರಿನ ತೋರುಮಣೆಯ ಮೂಲಕವೇ ನೀವು ಕರೆಮಾಡಿ, ಕಿರು-ಓಲೆ ಕಳುಹಿಸಿ, ನೀವು ತೆರಳಬೇಕಿರುವ ದಾರಿ-ದಿಕ್ಕು ತಿಳಿದುಕೊಳ್ಳಿ, ನಿಮ್ಮ ನೆಚ್ಚಿನ ಹಾಡು ಕೇಳುತ್ತ ಹಾಯಾಗಿ ಸಾಗಬಹುದು.

android-auto-1

ಕಳೆದ ಕೆಲವು ವರುಶಗಳಿಂದ ಹಲವಾರು ಕಾರು ತಯಾರಕ ಕೂಟಗಳು ಎದುರಿಸುತ್ತಿದ್ದ ಸಮಸ್ಯೆಗೆ ಈ ಹೊಸ ಚಳಕಗಳು ಕೊನೆಹಾಡಿವೆ. ಈ ಹಿಂದೆ ಕಾರು ತಯಾರಕರು ತಾವು ತಯಾರಿಸಿದ ಸಾಪ್ಟ್‍ವೇರ್ ಮೂಲಕ ವಿವಿದ ಚೂಟಿಯುಲಿಗಳೊಂದಿಗೆ ಒಡನುಡಿಯುವಾಗ (interface) ಹಲವು ತೊಂದರೆಗಳು ಉಂಟಾಗುತ್ತಿದ್ದವು. ಅದಲ್ಲದೇ ಇದು ಸರಿಹೋಗದೇ ಇದ್ದಾಗ ಕಾರುಕೊಂಡವರು ತಯಾರಕರ ನೆರವು ತಾಣಗಳಿಗೆ(service center) ಬೇಟಿಕೊಟ್ಟು, ಸರಿಯಾದ ಮಾಹಿತಿ ಸಿಗದೇ ಕಿರಿಕಿರಿಗೆ ಒಳಗಾಗುತ್ತಿದ್ದರು. ಗೂಗಲ್ ಅಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್-ಪ್ಲೇ ಇಂತ ಎಲ್ಲ ಸಮಸ್ಯೆಗಳಿಂದ ಹೊರತಾಗಿವೆ. ಬಹುಪಾಲು ಜನರು ತಾವು ಬಳಸುವ ಚೂಟಿಯುಲಿಯಂತೆ ಕಾರಿನಲ್ಲೂ ಅವುಗಳನ್ನು ಬಳಸುವಶ್ಟು ಸುಲಬವಾಗಲಿವೆ.

ಈ ಚಳಕಗಳು ಇದೀಗ ಎರಡು ರೀತಿಯಲ್ಲಿ ಕಾರುಕೊಳ್ಳುಗರಿಗೆ ನೆರವು ನೀಡಲಿವೆ.

1. ಕಾರ್-ಪ್ಲೇ ಮತ್ತು ಅಂಡ್ರಾಯ್ಡ್ ಆಟೋ ಇವುಗಳು ಇದೀಗ ವೋಲ್ವೊ ಮಾತ್ರವಲ್ಲದೇ ಪೋರ‍್ಡ್, ಮಾಜ್ದಾ, ಮರ‍್ಸಿಡಿಸ್, ಹ್ಯುಂಡಾಯ್, ಅವ್ಡಿ, ಹೋಂಡಾ, ಪೋಕ್ಸ್ ವ್ಯಾಗನ್, ನಿಸ್ಸಾನ್, ಬಿ.ಎಂ.ಡಬ್ಲ್ಯೂ, ಜಿಎಮ್ ನಂತ ಜಗತ್ತಿನ ಎಲ್ಲ ಕಾರುಗಳೊಂದಿಗೆ ಸುಲಬವಾಗಿ ಕೆಲಸಮಾಡುತ್ತವೆ.

2. ತಮ್ಮ ಚೂಟಿಯುಲಿಯಲ್ಲಿರುವ ಹೊಮ್ಮಿಕೆ ಏರ‍್ಪಾಟನ್ನೇ (Operating System) ಬಳಸುವುದರಿಂದ ಬಹುಪಾಲುಕೊಳ್ಳುಗರಿಗೆ ಇದು ಹೆಚ್ಚು ಅನುಕೂಲ.
ಇಶ್ಟೇ ಅಲ್ಲದೇ ಗೂಗಲ್‍ನವರ ಅಂಡ್ರಾಯ್ಡ್ ಜಗತ್ತಿನ ಹಲವು ಅಗ್ಗದ ಬೆಲೆಯ ಚೂಟಿಯುಲಿಗಳಲ್ಲಿನ ಹೊಮ್ಮಿಕೆ ಏರ‍್ಪಾಟಾಗಿರುವುದರಿಂದ, ಚೂಟಿಯುಲಿ ಬಳಕೆದಾರರಿಗೆ ಇದು ಸಂತಸ ತಂದಿದೆ.

ಚೂಟಿಯುಲಿ, ಎಣ್ಣುಕಗಳ ಜಗತ್ತಿನಲ್ಲಿ ಪರಸ್ಪರ ಬಿರುಸಿನ ಪಯ್ಪೋಟಿ ನಡೆಸಿರುವ ಗೂಗಲ್ ಮತ್ತು ಆಪಲ್ ಕೂಟಗಳು ಕಾರು ಕಯ್ಗಾರಿಕೆಯಲ್ಲೂ ಕಯ್ ಹಾಕಿದ್ದು ಮುಂದೆ ಹಲವು ಹೊಸತುಗಳಿಗೆ ದಾರಿ ಮಾಡಲಿರುವುದಂತು ದಿಟ.

(ತಿಟ್ಟಸೆಲೆ: mashable.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: