ಚುಟುಗಳು: ನಾವರಿಯಬೇಕಿರುವ ಕನ್ನಡದ ಅರಸರು

ಕಿರಣ್ ಮಲೆನಾಡು.

Chutu2

ನಮಗೆ ತಿಳಿದಿರುವ ಕರ‍್ನಾಟಕದ ಹಳಮೆಯಲ್ಲಿ ಕನ್ನಡ ಹಾಗು ಕನ್ನಡಿಗರ ಕೇಂದ್ರಿತವಾಗಿ ಕಟ್ಟಲ್ಪಟ್ಟ ಮೊದಲ ಆಳ್ವಿಕೆ ಎಂದರೆ ಕದಂಬರ ಆಳ್ವಿಕೆ. ಆದರೆ ಕನ್ನಡಿಗರ ಪರವಾದ ಈ ದೊಡ್ಡ ಆಳ್ವಿಕೆ ಹುಟ್ಟಲು ಹಲವಾರು ವರುಶಗಳ ಹೋರಾಟ ನಡೆದಿತ್ತು. ಕನ್ನಡ ಹಾಗು ಕನ್ನಡಿಗರ ಕೇಂದ್ರಿತವಾಗಿ ಒಂದು ದೊಡ್ಡ ಆಳ್ವಿಕೆಯನ್ನು ಕಟ್ಟಲು ಹಲವಾರು ಚಿಕ್ಕ-ಪುಟ್ಟ ಅರಸರು ತಮ್ಮ ಪ್ರಯತ್ನವನ್ನು ಕದಂಬರಿಗಿಂತ ಮೊದಲು ನಡೆಸಿದ್ದರು, ಇಂತಹ ಹಲವಾರು ಪ್ರಯತ್ನಗಳ ನಡೆದು ಬಳಿಕ ಅದರಲ್ಲಿ ಮೊದಲ ಗೆಲುವನ್ನು ಸಾದಿಸಿದ್ದು ಕದಂಬರ ಮಯೂರಶರ‍್ಮ. ಹೀಗೆ ಕದಂಬರರಿಗಿಂತ ಮೊದಲು ಇದ್ದ ಕನ್ನಡದ ಅರಸು ಮನೆತನಗಳಲ್ಲಿ ‘ಚುಟು‘ ಅರಸು ಮನೆತನವೂ ಒಂದು, ಇವರ ಕುರಿತು ಕೊಂಚ ಅರಿಯೋಣ ಬನ್ನಿ.

ಚುಟುಗಳು ಕದಂಬರಿಗಿಂತ ಹಿಂದೆ ಮುನ್ನೂರು ವರ‍್ಶಗಳವರೆಗೆ ಪಡುವಣ ಕರ‍್ನಾಟಕವನ್ನು ಆಳಿದ್ದರು. ಚುಟು ಸಂತತಿತಿಯು ಕದಂಬರಂತೆ ದೊಡ್ಡ ಪ್ರಮಾಣದ ಅರಸುಮನೆತನವಾಗದೆ ಇದ್ದರು ಬನವಾಸಿಯನ್ನು ಕೇಂದ್ರವಾಗಿರಿಸಿಕೊಂಡು ಆಳಿದರು. ಇವರು ಶಾತವಾಹನರ ಸಾಮಂತ ದೊರೆಗಳಾಗಿದ್ದರು ಎಂದು ಹಳಮೆ ಹೇಳುತ್ತದೆ. ಚುಟುಗಳ ಬಗ್ಗೆ ಹಳಮೆಯಲ್ಲಿ ಹೆಚ್ಚು ವಿಶಯಗಳು ಅಚ್ಚಾಗಿಲ್ಲ.

Chutu1ಬಡಗಣ ಕರ‍್ನಾಟಕದಲ್ಲಿ ಚುಟುಗಳಿಗೆ ಸೇರಿದ ಹಲವಾರು ಲೋಹದಿಂದ ಮಾಡಿದ ದುಡ್ಡುಗಟ್ಟಿಗಳು(ನಾಣ್ಯಗಳು) ಪತ್ತೆಯಾಗಿವೆ. ಈ ದುಡ್ಡುಗಟ್ಟಿಗಳು ಸರಿಸುಮಾರು ಕ್ರಿ.ಶ. 125-345 ರ ಚುಟು ಅರಸು ಮೂಲನಂದನ ಹೊತ್ತಿನದ್ದಾಗಿದೆ. ಇದರಲ್ಲೊಂದು ದುಡ್ಡುಗಟ್ಟಿಯ ಎದುರಿನಬಾಗದಲ್ಲಿ ಕಮಾನಿನಾಕಾರದ ಬೆಟ್ಟದ ತಿಟ್ಟವು ಮತ್ತು ಪಕ್ಕದಲ್ಲಿ ನದಿಯ ರೀತಿಯಲ್ಲಿ ಕೆತ್ತಿಸಲಾಗಿದೆ ಅದೇ ರೀತಿಯಲ್ಲಿ ಈ ಗಟ್ಟಿಯ ಹಿಂಬಾಗದಲ್ಲಿ ಬೇಲಿಯೊಳಗೆ ಮರ ಮತ್ತು ಮೂರು ಮುತ್ತುಗಳ ತಿಟ್ಟವಿದೆ.
ಚುಟುಗಳು ಬನವಾಸಿಯನ್ನು ನಡುವಾಗಿರಿಸಿಕೊಂಡು ಕುಂತಲವನ್ನು ಆಳಿದರು ಎಂದು ಹಳಮೆಯಲ್ಲಿ ಒಂದು ಸಂಗತಿ ಇದೆ. ಚುಟುಗಳ ಬಗ್ಗೆ ಬನವಾಸಿಯಲ್ಲಿ ಸಿಕ್ಕ ಕೆಲವು ಪ್ರಾಕ್ರುತ-ಬ್ರಾಹ್ಮೀ ಲೋಹದ ಗಟ್ಟಿಗಳು, ಕಲ್ದುಡ್ಡುಗಳು ಮತ್ತು ಕಲ್ಬರಹಗಳು ಅಲ್ಪ-ಸ್ವಲ್ಪ ವಿಶಯಗಳನ್ನು ಹೇಳುತ್ತದೆ. ಅದೇ ರೀತಿಯಲ್ಲಿ ಚುಟುಗಳು ಕನ್ನಡ ಮತ್ತು ಕರ‍್ನಾಟಕ ಮೂಲದವರು ಎಂಬುವುದರ ಬಗ್ಗೆಯೂ ಹಲವು ಸಂಗತಿಗಳಿವೆ.

ಚುಟು ಅರಸರುಗಳು:

Chutu

ಬನವಾಸಿಯಲ್ಲಿ ಸಿಕ್ಕ ಒಂದು ಕಲ್ಬರಹದಲ್ಲಿ  ಚುಟುಕುಲಾನಂದನ ಮಗಳಾದ ಅರಸಿ ಶಿವಸ್ಕಂದ ನಾಗಶ್ರಿಯ ಬಗ್ಗೆ ಹೇಳಲಾಗಿದೆ. ಮತ್ತೊಂದು ಕಲ್ಬರಹದಲ್ಲಿ ಯಾತವಿ ಎಂಬ ಹಳ್ಳಿಯನ್ನು ಬ್ರಾಹ್ಮಣರಿಗೆ ಕೊಡುಗೆಯಾಗಿ ಕೊಟ್ಟಿದ್ದನ್ನು ಹೇಳಲಾಗಿದೆ ಹಾಗು ಇದರಲ್ಲಿ ಕೊಳ, ಕೈತೋಟ ಮತ್ತು ನಾಗರಕಲ್ಲಿನ ವಿಶಯಗಳಿವೆ. ಹಲವು ನಾಗರಕಲ್ಲುಗಳನ್ನು ಈಗಲೂ ಮದುಕೇಶ್ವರ ದೇವಸ್ತಾನದ ಹತ್ತಿರ ಕಾಣಬಹುದಾಗಿದೆ. ಈ ಕಲ್ಬರಹವನ್ನು ಶಿಕಾರಿಪುರದ ಹತ್ತಿರದ ಮಲವಳ್ಳಿಯಲ್ಲಿ ಕಂಡುಹಿಡಿಯಲಾಯಿತು. ಕಲ್ಬರಹ ಮತ್ತು ದುಡ್ಡುಗಟ್ಟಿ ಮೂಲಕವಾಗಿ ಚುಟುಕುಲಾನಂದ, ಮೂಲನಂದ, ಶಿವಾನಂದ ಇವರು ಚುಟು ಅರಸರುಗಳು ಎಂದು ಹಳಮೆಯರಿಗರು ತಿಳಿಸಿದ್ದಾರೆ.

ಚುಟುಗಳ ಹೊತ್ತಿಗೆ ಸೇರಿದ ಹಲವಾರು ದುಡ್ಡುಗಟ್ಟಿಗಳನ್ನು ಕರ‍್ನಾಟಕದ ಹಲವೆಡೆಯಲ್ಲಿ ಕಂಡುಹಿಡಿಯಲಾಯಿತು. ಇದರಲ್ಲಿ 1886ರ ಹೊತ್ತಿನಲ್ಲಿ ಮೆರ‍್ವಿನ್ ಸ್ಮಿತ್ ಎಂಬ ಹಳಮೆಯರಿಗರಿಂದ ಚಿತ್ರದುರ‍್ಗದಲ್ಲಿ, ಜನರಲ್ ಪಿಯರ‍್ಸ್ ಎಂಬ ಹಳಮೆಯರಿಗರಿಂದ ಕಾರವಾರದಲ್ಲಿ ಹಾಗು 1947ರ ಹೊತ್ತಿನಲ್ಲಿ ಮೊಟಿಮಾರ್ ವೀಲರ್ ಎಂಬುವವರಿಂದ ಚಂದ್ರಗುತ್ತಿ ಮತ್ತು ಬನವಾಸಿಯಲ್ಲಿ ಚುಟುಗಳಿಗೆ ಸೇರಿದ ದುಡ್ಡುಗಟ್ಟಿಯನ್ನು ಕಂಡುಹಿಡಿಯಲಾಯಿತು. ಇವುಗಳ ಅಡ್ಡಳತೆ ಒಂದರಿಂದ ಒಂದು-ಕಾಲು ಇಂಚಿನಸ್ಟಿದೆ. ಇವುಗಳ ತೂಕ 13-16 ಗ್ರಾಂ ಗಳಶ್ಟಿದೆ.

ಮಳವಳ್ಳಿಯ ಕಲ್ಲೇಶ್ವರ ಗುಡಿಯ ಹತ್ತಿರದಲ್ಲಿ ಆರುಮುಕದ ಕಲ್ಲುಕಂಬದ ಕಲ್ಬರಹದಲ್ಲಿ ಚುಟುಕುಲಾನಂದನ ಬಗ್ಗೆ ಹೇಳಲಾಗಿದೆ. ಹಾಗು ಕೆಲವು ಕಲ್ಬರಹಗಳಲ್ಲಿ ಅರಸರುಗಳ ಗೋತ್ರದ ಬಗ್ಗೆ ಹೇಳಲಾಗಿದೆ. ತಾಳಗುಂದದ ಕಂಬದ ಕಲ್ಬರಹದಲ್ಲಿ ಚುಟುಗಳು ಶಾತವಾಹನರ ಸಾಮಂತ ಅರಸರಾಗಿದ್ದರು, ಅವರೊಡನೆ ಮದುವೆಯ ನಂಟನ್ನು ಬೆಳಸುತ್ತಿದ್ದರು ಮತ್ತು ಶಾತವಾಹನರ ಶಾತಕರ‍್ಣಿ ಎಂಬ ಬಿರುದುಗಳನ್ನೂ ಚುಟುಗಳು ದತ್ತು ಪಡೆದರೆಂದು ಹೇಳಲಾಗಿದೆ. ಈ ರೀತಿಯಾಗಿ ಚುಟುಗಳು ಚುಟುಕು-ಚುಟುಕಾಗಿ ಕರ‍್ನಾಟಕದಲ್ಲಿ ತಮ್ಮ ಚಾಪನ್ನು ಮೂಡಿಸಿದ್ದಾರೆ. ಅದೇ ರೀತಿಯಲ್ಲಿ ಚುಟುಕಾಗಿರುವ ಚುಟುಗಳ ಹಳಮೆಯ ಬಗ್ಗೆ ಹೆಚ್ಚಿನ ಅರಕೆ ಆಗಬೇಕಿದೆ.

(ಮಾಹಿತಿ ಮತ್ತು ಚಿತ್ರ ಸೆಲೆ: wikipedia, ancientcoinsofindia)

ನಿಮಗೆ ಹಿಡಿಸಬಹುದಾದ ಬರಹಗಳು

1 Response

ಅನಿಸಿಕೆ ಬರೆಯಿರಿ:

Enable Notifications OK No thanks