ಆರ‍್ಯರು, ಬ್ರಿಟಿಶರು ಮತ್ತು ಅವರ ದಾರಿಗಳು

 ಬರತ್ ಕುಮಾರ್.

ಆರ‍್ಯರು

chanakya-the-great-omshivam.wordpress.comಎಲ್ಲರಿಗೂ ಗೊತ್ತಿರುವಂತೆ ಆರ‍್ಯರ ಮುಕ್ಯ ಗುರುತು ವೇದಗಳು ಇಲ್ಲವೆ ವಯ್ದಿಕ ದರ‍್ಮ. ತಾನಾಗಿಯೇ, ತಮ್ಮ ದರ‍್ಮದ ಬಗ್ಗೆ ಅರ‍್ಯರಿಗೆ ಇನ್ನಿಲ್ಲದ ಹೆಮ್ಮೆ ಮತ್ತು ಕಾಳಜಿ ಇತ್ತು. ವೇದಗಳು ಮತ್ತು ವಯ್ದಿಕ ದರ‍್ಮಾಚರಣೆಗಳನ್ನು ಪಾಲಿಸುವುದಲ್ಲದೇ ಅದನ್ನು ಮುಂದಿನ ತಲೆಮಾರಿಗೆ ತಲುಪಿಸುವುದು ಅವರ ಬದುಕಿನ ಮುಕ್ಯ ಗುರಿಯಾಗಿತ್ತು. ವೇದ ಪಾಟಗಳನ್ನು ಮತ್ತು ವಯ್ದಿಕ ದರ‍್ಮವನ್ನು ರಕ್ಶಿಸುವುದೇ ಅವರ ಮುಕ್ಯ ಕೆಲಸವಾಗಿತ್ತು.

ಇಂತಹ ರಕ್ಶಿಸುವ ಮತ್ತು ಮುಂದಿನ ತಲೆಮಾರಿನವರಿಗೆ ಯಾವುದೇ ಬದಲಾವಣೆಯಿಲ್ಲದೆ ತಲುಪಿಸುವ ಕೆಲಸ ಒಂದು ದೊಡ್ಡ ಸಮಾಜದ ಮಟ್ಟದಲ್ಲಿ ಮಾಡುವುದು ಯಾವಾಗಲೂ ಸವಾಲಿನ ಕೆಲಸವೇ ಸರಿ. ಹಾಗಾಗಿಯೇ ಅವರಿಗೆ ’ಆಳ್ವಿಕೆ’(ರಾಜಕೀಯ)ಯ ಅವಶ್ಯಕತೆ ಉಂಟಾಯಿತು. ವಯ್ದಿಕರು ತಮ್ಮನ್ನು ತಾವು ಆಳ್ವಿಕೆಯಲ್ಲಿ ತೊಡಗಿಸಿಕೊಳ್ಳದಿದ್ದರೆ ಮುಂದೆ ಗಂಡಾಂತರ ಎದುರಾಗುವ ಚಿಂತೆ ಯಾವಾಗಲೂ ಅವರನ್ನು ಕಾಡುತ್ತಿತ್ತು. ಇದನ್ನು ಚೆನ್ನಾಗಿ ಅರಿಯಲು ಚಾಣಕ್ಯ(ವಿಶ್ಣು ಗುಪ್ತ)ನ ಕತೆಯನ್ನು ನೋಡಬಹುದು.

ಇದರಲ್ಲಿ ಒಬ್ಬ ಸಾಮಾನ್ಯ ಹಾರುವ ಒಂದು ದೊಡ್ಡ ಸಾಮ್ರಾಜ್ಯವನ್ನು ಕಟ್ಟುವ ಒತ್ತಡವಾದರೂ ಏನಿತ್ತು? ದನನಂದನ ಮೇಲಿನ ಸೇಡು ಇಶ್ಟೆಲ್ಲದ್ದಕ್ಕೆ ಕಾರಣವಾಯಿತು ಎಂಬುದನ್ನು ನಂಬಲಾಗುವುದಿಲ್ಲ. ಅಲ್ಲದೇ ಚಾಣಕ್ಯನು ತಾನೇ ವೇದಪಾರಂಗತನಾಗಿದ್ದರಿಂದ ಅವನ ಒಳವೊತ್ತಡಗಳು ವೇದ ಮತ್ತು ವಯ್ದಿಕ ದರ‍್ಮವನ್ನು ಉಳಿಸಿ ಬೆಳೆಸುವುದೇ ಆಗಿತ್ತು. ಅದಕ್ಕಾಗಿಯೇ ಮೂಲತಹ ವೇದ ಪಂಡಿತನಾದ ಒಬ್ಬ ಹಾರುವ, ಹೀಗೆ ಆಳ್ವಿಕೆ ಮತ್ತು ಹಣಕಾಸುಗಳ (ಅರ‍್ತಶಾಸ್ತ್ರ) ಬಗ್ಗೆ ಏಕೆ ತಲೆಕೆಡಿಸಕೊಳ್ಳಬೇಕಾಗಿತ್ತು ಎಂಬುದು ಇಲ್ಲಿ ಕೇಳ್ವಿ.

ಚಾಣಕ್ಯನ ಮುಕ್ಯ ಗುರಿ ವೇದ ಮತ್ತು ವಯ್ದಿಕ ದರ‍್ಮವನ್ನು ಗಟ್ಟಿಗೊಳಿಸುವುದೇ ಆಗಿತ್ತು ಎಂದರೆ ತಪ್ಪಾಗಲಾರದು. ಇದಲ್ಲದೆ ದನನಂದ ಮತ್ತು ನಂದ ವಂಶಜರು ಶೂದ್ರಕುಲಕ್ಕೆ ಸೇರಿದವರಾಗಿದ್ದರಿಂದ ಅವರ ಹುಟ್ಟಡಗಿಸುವುದು ವಯ್ದಿಕತನವನ್ನು ಎತ್ತಿಹಿಡಿಯುವುದೇ ಆಗಿತ್ತು. ಇದಕ್ಕಾಗಿ ಆಳ್ವಿಕೆಗೆ ಇಳಿಯದೇ ಬೇರೆ ದಾರಿಯಿರಲಿಲ್ಲ. ಅದಕ್ಕಾಗಿ ಚಂದ್ರಗುಪ್ತ(ಕ್ಶತ್ರಿಯ)ನೊಡನೆ ಸೇರಿಕೊಂಡು ಚಾಣಕ್ಯ ಆಳ್ವಿಕೆಗೆ(Politics) ಇಳಿದು ಆಮೇಲೆ ಆಳ್ವಿಕೆಯನ್ನು ಗಟ್ಟಿಗೊಳಿಸಲು ಮಾರಾಟಗಾರರ(ವಯ್ಶ್ಯರ) ನೆರವು ಪಡೆಯಬೇಕಾಯಿತು. ಅಂದರೆ ಆಳ್ವಿಕೆಯು ನಡೆದುಕೊಂಡು ಹೋಗಲು ಮಾರಾಟಗಾರರ ಒತ್ತಾಸೆ ಬೇಕಾಯಿತು. ಹಾಗಾಗಿ ಮಾರಾಟಕ್ಕೆ(ಮಾರಾಳಿಗಳಿಗೆ) ಅನುವು ಮಾಡಿಕೊಡಲು ಆಳ್ವಿಕೆಯವರು ಕೆಲವೊಮ್ಮೆ ಕಾದಾಟಕ್ಕೂ ಇಳಿಯಬೇಕಾಯಿತು.

ಮುಂದೆ, ಕಳಿಂಗರಾಜನು ಮಾರಾಟದ ದಾರಿಗಳಿಗೆ ತಡೆ ಒಡ್ಡಿದ್ದರಿಂದ ಆರ‍್ಯರ ಅರಸ ಅಶೋಕನು ಕಳಿಂಗ(ಒರಿಸ್ಸಾ)ದ ಮೇಲೆ ದಂಡೆತ್ತಿ ಹೋಗಬೇಕಾಯಿತು. ಹಾಗಾಗಿ, ಆಳ್ವಿಕೆ ಮತ್ತು ಮಾರಾಟ ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡು ಆಳ್ವಿಕೆಯಲ್ಲಿ ಮಾರಾಟಗಾರರ ಕಯ್ವಾಡ ಮತ್ತು ಮಾರಾಟದಲ್ಲಿ ಆಳ್ವಿಕೆಯವರ ಕಯ್ವಾಡ ಕಂಡುಬರತೊಡಗಿತು. ದರ‍್ಮವನ್ನು ರಕ್ಶಿಸಲು ಆಳ್ವಿಕೆಯನ್ನು, ಆಳ್ವಿಕೆಯನ್ನು ನಡೆಸಿಕೊಂಡು ಹೋಗಲು ಮಾರಾಟದ ಇಲ್ಲವೆ ಮಾರಾಟಗಾರರ ಆಸರೆ ಬೇಕಾಯಿತು. ಮೊಟಕಾಗಿ ಆರ‍್ಯರ ದಾರಿಯನ್ನು ಹೀಗೆ ಬಣ್ಣಿಸಬಹುದು:-

  ದರ‍್ಮ(Religion) —> ಆಳ್ವಿಕೆ (Politics) —> ಮಾರಾಟ(Commerce)

ಬ್ರಿಟಿಶರು

Coat_of_arms_of_the_East_India_Companyಬ್ರಿಟಿಶರು (ಮತ್ತು ಇನ್ನಿತರ ಯೂರೋಪಿಯನ್ನರು) ಮುಕ್ಯವಾಗಿ ಮಾರಾಟದ ಆಸಕ್ತಿ(Commercial Interest)ಯಿಂದ ಅಂದರೆ ಇಂಡಿಯಾದಲ್ಲಿ ದೊರೆಯುವ/ಬೆಳೆಯುವ ಸಾಂಬಾರ ಪದಾರ‍್ತಗಳನ್ನು ಕೊಂಡುಕೊಳ್ಳುವುದಕ್ಕೋಸ್ಕರ ಬಂದರು. ಅದಕ್ಕಾಗಿಯೇ ಈಸ್ಟ್ ಇಂಡಿಯಾ ಕಂಪನಿ ಎಂಬ ಮಾರಾಟ ಸಂಸ್ತೆಯನ್ನು ಹುಟ್ಟುಹಾಕಿದರು. ಆಮೇಲೆ ಈ ಕಂಪನಿಯ ಮೂಲಕ ಇಂಡಿಯಾದಲ್ಲೆಲ್ಲಾ ನಡೆಯುವ ಮಾರಾಟದ ಮೇಲೆ ತಮ್ಮ ಹಿಡಿತ ಸಾದಿಸಿದರು. ಆದರೆ ಬರೀ ಮಾರಾಟದ ಚವ್ಕಟ್ಟಿನಲ್ಲಿಯೇ ಇದ್ದುದರಿಂದ ಅವರಿಗೆ ಮಾರಾಟಕ್ಕೆ ಇಲ್ಲವೆ ಅದರಿಂದ ಬರುವ ಗಳಿಕೆಗೆ ಅಲ್ಲಲ್ಲಿ ತಡೆಯುಂಟಾಯಿತು. ಆದ್ದರಿಂದ ಅನಿವಾರ‍್ಯವಾಗಿ ಅವರು ’ಆಳ್ವಿಕೆ’ಗೆ(Politics) ಇಳಿಯಲೇ ಬೇಕಾಯಿತು.

ಆಳ್ವಿಕೆಗೆ ಇಳಿದಿದ್ದರಿಂದ ಹಲವು ಕಾನೂನು ಮತ್ತು ಕಟ್ಟುಪಾಡುಗಳನ್ನು ಜಾರಿಗೆ ತಂದು ತಮ್ಮ ಕಂಪನಿಗೆ ಇನ್ನಶ್ಟು ಗಳಿಕೆ ಬರುವಂತೆ ನೋಡಿಕೊಳ್ಳಲು ಸಾದ್ಯವಾಯಿತು. ಅಂದರೆ ಮಾರಾಟದ ನೆಲೆಯಿಂದ ಶುರು ಮಾಡಿದ ಬ್ರಿಟಿಶರು ಆಳ್ವಿಕೆಯ ನೆಲೆಗೆ ಬಂದರು. ಆಳ್ವಿಕೆಗೆ ನೆಲೆಗೆ ಬಂದ ಮೇಲೆ ಅವರಿಗೆ ಹೆಚ್ಚು ವಿರೋದಗಳು ತಲೆದೋರಲು ಶುರುವಾಯಿತು. ’ಬ್ರಿಟಿಶರೆ ಇಂಡಿಯ ಬಿಟ್ಟು ತೊಲಗಿ’ ಎಂಬ ಮಟ್ಟಕ್ಕೆ ಚಳುವಳಿಗಳು ನಡೆದವು. ತಮ್ಮ ಮಾರಾಟ ಮತ್ತು ಆಳ್ವಿಕೆಯನ್ನು ಉಳಿಸಿಕೊಳ್ಳಲು ಕೊನೆಗೆ ಅವರು ಕ್ರಿಶ್ಚಿಯನ್ ದರ‍್ಮದ ಮೊರೆ ಹೋಗಬೇಕಾಯಿತು. ಇದಕ್ಕಾಗಿ ಹಲವು ಕ್ರಿಶ್ಚಿಯನ್ ಪಾದ್ರಿಗಳನ್ನು ಇಂಡಿಯಾಗಿ ಕಳುಹಿಸಿ ಅವರನ್ನು ಹಲವು ಕೂಡಣಕ್ಕೆ ಒಳಿತಾಗುವ ಕೆಲಸಗಳಲ್ಲಿ ತೊಡಗಿಸಲಾಯಿತು. ಇದು ಎಶ್ಟರ ಮಟ್ಟಿಗೆ ನೆರವಾಯಿತು ಎನ್ನುವುದು ಬೇರೆ ಕೇಳ್ವಿ. ಮೊಟಕಾಗಿ ಬ್ರಿಟಿಶರ ದಾರಿಯನ್ನು ಹೀಗೆ ಬಣ್ಣಿಸಬಹುದು:-

ಮಾರಾಟ(Commerce)  —> ಆಳ್ವಿಕೆ (Politics) —>  ದರ‍್ಮ(Religion)

ತೀರಮೆಗಳು

1. ಆರ‍್ಯರು ಮತ್ತು ಬ್ರಿಟಿಶರು- ಈ ಇಬ್ಬರು ಬೇರೆ ಬೇರೆ ದಾರಿಗಳಿಂದ ಬೇರೆ ಕಾಲಗಟ್ಟದಲ್ಲಿ ಇಂಡಿಯಾದ ಮೂಲನಿವಾಸಿಗಳ ಮೇಲೆ ಮತ್ತು ಅವರ ಚಿಂತನೆಯ ಮೇಲೆ ಹಿಡಿತ ಸಾದಿಸಿದರು; ಅಂದರೆ ದ್ರಾವಿಡರ ಇಲ್ಲವೆ ಆಸ್ಟ್ರಿಕರ ಮೇಲೆ ಹಿಡಿತ ಸಾದಿಸಿದರು.

2. ಬ್ರಿಟಿಶರು ಸರಕು-ಮಾರಾಟ ಅಂತ ಹೇಳಿಕೊಂಡು ಇಂಡಿಯಾದವರ ಮೇಲೆ ಹಿಡಿತ ಸಾದಿಸಿದರು; ಆದರೆ ಆರ‍್ಯರು ತಮ್ಮ ದರ‍್ಮದ ಮೇಲ್ಮೆಯ ತಳಹದಿಯ ಮೇಲೆ ಮೂಲನಿವಾಸಿಗಳ ಮೇಲೆ ಹಿಡಿತ ಸಾದಿಸಿದರು. ಅಂದರೆ ಬ್ರಿಟಿಶರು ಲವ್ಕಿಕ ಆಸೆಗಳಿಗೋಸ್ಕರ ಇಂಡಿಯಾವನ್ನು ಆಳಿದರು. ಆರ‍್ಯರು ತಮ್ಮ ದರ‍್ಮದ ಮೇಲ್ಮೆಯನ್ನು(ಅವರ ಪ್ರಕಾರ) ಎತ್ತಿಹಿಡಿಯಲು ಆಳ್ವಿಕೆಗೆ ಬಂದರು. ಬ್ರಿಟಿಶರು ಮತ್ತು ಆರ‍್ಯರ ದಾರಿಗಳು ಹೇಗೆ ಬೇರೆ ಬೇರೆಯಾಗಿದೆಯಲ್ಲದೆ ಒಂದಕ್ಕೊಂದು ವಿರುದ್ದ ದಿಕ್ಕಿನಲ್ಲಿದೆ. ಈ ವಿರೋದವೇ ಮುಂದೆ ಬ್ರಿಟಿಶರ ಮತ್ತು ಆರ‍್ಯರ ನಡುವೆ ತಿಕ್ಕಾಟಕ್ಕೆ ಎಡೆ ಮಾಡಿಕೊಟ್ಟಿತೆನ್ನಬಹುದು.

3. “ಊರಿಗೆ ಬಂದವನು ನೀರಿಗೆ ಬರದೇ ಇರುತ್ತಾಳೆಯೇ?” ಎಂಬ ಗಾದೆಯಂತೆಯೇ ಆಳ್ವಿಕೆಗೆ ಬಂದವರು ಮಾರಾಟಕ್ಕೆ ಬರದೇ ಇರುತ್ತಾರೆಯೇ? ಆಳ್ವಿಕೆ ಮತ್ತು ಮಾರಾಟ ಒಂದೇ ನಾಣ್ಯದ ಎರಡು ಮುಕಗಳಿದ್ದಂತೆ ಎಂಬುದು ಇದರಿಂದ ಮನದಟ್ಟಾಗುವುದು.

4. ಆದರೆ ದ್ರಾವಿಡರು ಈ ಎರಡೂ ಅಂದರೆ ಆಳ್ವಿಕೆ ಮತ್ತು ಮಾರಾಟಕ್ಕೆ ಅಶ್ಟು ತಲೆಮೆ ಕೊಡಲಿಲ್ಲ ಎಂದು ಹೇಳಬಹುದು. ಅವರು ತಮ್ಮ ಬುಡಕಟ್ಟಿನ ಬದುಕಿಗೆ ಹೆಚ್ಚು ಒತ್ತು ಕೊಟ್ಟು ’ಎಲೆ ಮರೆಯ ಕಾಯಿ’ಯ ಹಾಗೆ ಬದುಕು ಸಾಗಿಸಿದರು. ದ್ರಾವಿಡ ಅರಸರು ಕೂಡ ಬೆಳಕಿಗೆ ಬಂದಿದ್ದು ಆರ‍್ಯರ ಸಂಪರ್ಕಕ್ಕೆ ಬಂದ ಮೇಲೆ ಎಂಬುದನ್ನು ನಾವು ಇಲ್ಲಿ ಗಮನಿಸಬಹುದು.

5. ಹೆಚ್ಚೆಣಿಕೆಯಲ್ಲಿ ದ್ರಾವಿಡರು ತಮ್ಮನ್ನು ತಾವು ಆಳ್ವಿಕೆ ಇಲ್ಲವೆ ಮಾರಾಟಕ್ಕೆ ಒಗ್ಗಿಸಿಕೊಳ್ಳದಿದ್ದರಿಂದ ಈ ಮಾರಾಟ ಮತ್ತು ಆಳ್ವಿಕೆಯೆಂಬ ಪಯ್ಪೋಟಿಯಲ್ಲಿ ಅವರು ಬಲು ಹಿಂದೆಯೇ ಉಳಿಯಬೇಕಾಯಿತು.

(ತಿಟ್ಟಸೆಲೆಗಳು: omshivam.wordpress.com, wikipedia)

ಇವುಗಳನ್ನೂ ನೋಡಿ

1 ಅನಿಸಿಕೆ

  1. ಬರತ್,
    ಚಾಣಾಕ್ಯ ಒಬ್ಬ ಹಾರುವ ಮತ್ತು ವಯ್ದಿಕ ಅನ್ನುವುದು ದಿಟವೇ? ನನಗನ್ನಿಸಿದ ಹಾಗೆ ಹಾಗೆ ಹೇಳಲು ಬಲವಾದ ಸಾಕ್ಶಿ ಇಲ್ಲ. ಇತಿಯಾಸದ ಚಾಣಾಕ್ಯ ಮತ್ತು ಕತೆಗಳ ಚಾಣಾಕ್ಯ ಬೇರೆ ಬೇರೆ. ಇತಿಯಾಸದ ಚಾಣಾಕ್ಯನ (ಕವ್ಟಿಲ್ಯ/ ಬಗ್ಗೆ ಅಶ್ಟು ವಿವರಗಳೇ ಇಲ್ಲ. ಕತೆಯ ಚಾಣಾಕ್ಯನ ಬಗ್ಗೆ ಮೂರ್ನಾಲ್ಕು ಬಗೆಯ ವಿವರಗಳಿವೆ. ಅವೆಲ್ಲವೂ ಮವ್ರಿಯರ ಕಾಲಕ್ಕಿಂತ (322 BCE-185 BCE) ಬಹಳ ಬಹಳ ನಂತರ ಬಂದ ಗುಪ್ತರ ಕಾಲದಲ್ಲಿ (320 CE-550 CE) ಇಲ್ಲಾ ಗುಪ್ತರ ನಂತರದ ಕಾಲದಲ್ಲಿ ರಚನೆಯಾದಂತವು. ಜಯ್ನರದೇ ಒಂದು ವಿವರ, ಕಾಶ್ಮೀರಿಗಳದ್ದೇ ಒಂದು, ಪಾಲಿಗಳದ್ದೇ ಒಂದು ವಿವರಗಳಿವೆ. ಇಂದು ಬಾರತದಲ್ಲಿ ವಯ್ದಿಕರ ಪ್ರಾಬಲ್ಯಕ್ಕಿಂತ ಜಯ್ನರ ಪ್ರಾಬಲ್ಯ ಹೆಚ್ಚಿದ್ದಿದ್ದರೆ ನಾವೆಲ್ಲಾ ಚಾಣಾಕ್ಯನ ಬೇರೆಯದೇ ಬಗೆಯ ಕತೆಗಳನ್ನ ಮತ್ತು ವಿವರಗಳನ್ನ ಕೇಳಿಕೊಂಡು ಬೆಳೆದಿರುತ್ತಿದ್ದೆವು! ಚಂದ್ರಗುಪ್ತ ಮವ್ರಿಯ ತಾನೇ ಜಯ್ನನಾಗಿದ್ದ! ಬಾರತದಲ್ಲಿ ಸಿಕ್ಕಿರುವ ಅತಿ ಹಳೆಯ ತಾಳೆಗರಿಗಳು ಮತ್ತು ಪಳಯುಳಿಕೆಗಳು ಬುದ್ದರವು ಮತ್ತು ಜಯ್ನರವು. ಬುದ್ದರು ಮತ್ತು ಜಯ್ನರು ಕೂಡ ಅರ್ಯರೇ. ಅದು ಬೇರೆ ಮಾತು. ಅಲೆಗ್ಸಾಂಡರ್ ನಂತರ ಬಾರತವನ್ನ ಇಂಡೋ-ಗ್ರೀಕರೂ ಆಳಿದ್ದರು. ಅವರಿಂದ ಬಾರತೀಯರು ವ್ರುತ್ತಿಪರ ಸೇನೆ ಮತ್ತು ದೊಡ್ಡ ಸಾಮ್ರಾಜ್ಯ ಕಟ್ಟುವುದನ್ನು ಮತ್ತು ಇತಿಯಾಸವನ್ನು ಬರೆದಿಡುವುದನ್ನು ಕಲಿತಿರಬಹುದು.

ಅನಿಸಿಕೆ ಬರೆಯಿರಿ: