ನಮ್ಮ ಗಣಪನ ಹಬ್ಬ

ಜಯತೀರ‍್ತ ನಾಡಗವ್ಡ.

Jpeg

ಹಬ್ಬಗಳೆಂದರೆ ನಮಗೆಲ್ಲರಿಗೂ ಅಚ್ಚುಮೆಚ್ಚು. ಅದರಲ್ಲೂ ಹುಡುಗರ ಒಲವಿನ ಹಬ್ಬ ಎಂದು ಕರೆಯಲ್ಪಡುವ ಗಣಪನ ಹಬ್ಬ ಬಂತೆಂದರೆ ನನಗಂತೂ ಎಲ್ಲಿಲ್ಲದ ಹುರುಪು. ಇದೇ ಹುರುಪಿನಿಂದ ನಾವು ಮನೆಯಲ್ಲಿ ಎಲ್ಲರೂ ಸೇರಿ ಆಚರಿಸುವ ಹಬ್ಬಗಳಲ್ಲಿ ಗಣಪನ ಹಬ್ಬವೂ ಒಂದು. ನಮ್ಮ ಮನೆಯಲ್ಲಿ, ನಾನು ಹುಟ್ಟುವ ಮುಂಚಿನಿಂದಲೂ ಅಂದರೆ ಸುಮಾರು 25-30 ವರುಶಕ್ಕೂ ಹಿಂದಿನಿಂದ ಗಣಪನ ಮೂರ‍್ತಿಯನ್ನು ತಂದು 5 ದಿನಗಳವರೆಗೆ ಕೂರಿಸಿ ಸಂಬ್ರಮ ಸಡಗರದಿಂದ ಆಚರಿಸುತ್ತ ಬರಲಾಗುತ್ತಿದೆ.

ನನಗೆ ಗೊತ್ತಿರುವಂತೆ ಕಳೆದ ಹತ್ತಾರು ವರುಶಗಳಿಂದ ಗಣಪನ ಹಬ್ಬಕ್ಕೆ ಮನೆಯಲ್ಲಿ ಉಸ್ತುವಾರಿ ನನ್ನದೇ. ಗಣಪನ ಕೂರಿಸಲು ಸರಿಯಾದ ಸ್ತಳದ ಆಯ್ಕೆ, ಸ್ತಳದ ಸುತ್ತೆಲ್ಲ ನಾನಾ ರೀತಿಯ ಬಣ್ಣ ಬಣ್ಣದ ಹತ್ತಾರು ಚಿತ್ತಾರದಿಂದ ಸಿಂಗರಿಸುವಿಕೆ ಇಂತಹ ಎಲ್ಲ ಕೆಲಸಗಳಿಗೆ ನಾನೇ ಮುಂದಾಳು. ಪ್ರತಿ ವರುಶ ಯಾವ ಬಣ್ಣದ ಗಣಪನ ಮೂರ‍್ತಿಯನ್ನು ತರಬೇಕು,ಗಣಪ ಉಟ್ಟಿರುವ ಪಂಚೆಯ ಬಣ್ಣ ಎಂತದ್ದಿರಬೇಕು ಎಂಬುದರ ಬಗ್ಗೆ 2-3 ವಾರ ಮೊದಲೇ ಮನೆಯಲ್ಲಿ ಅಮ್ಮ, ಅಪ್ಪ ಮತ್ತು ಅಕ್ಕಂದಿರೊಂದಿಗೆ ಮಾತುಕತೆ ನಡೆಯುತ್ತಿದ್ದವು. ಗಣಪನ ಹಬ್ಬಕ್ಕೂ ಒಂದು ವಾರ ಮುನ್ನವೇ ಗಣಪನ ಮೂರ‍್ತಿ ಕಾಯ್ದಿರಿಸಿ ಮುಂಗಡ ಹಣ ಕೊಡುವುದು ನಮ್ಮ ವಾಡಿಕೆ.

ಗಣಪನ ಕೂಡಿಸುವ ಮಂಟಪದ ಸುತ್ತ ಬಣ್ಣದ ಹಾಳೆಗಳಿಂದ ಮಾಡಿದ ಬಗೆ ಬಗೆ ತೋರಣಗಳು, ಹಿಂದುಗಡೆ ಇಡಲು ಹಲಬಗೆಯಬಣ್ಣದ ಹಾಳೆಯ ಗಾಲಿ ಇವು ಪ್ರತಿ ವರುಶ ಹೊಸದಾಗಿ ತಂದು ಸಿಂಗರಿಸುತ್ತೇವೆ. ಗಣಪನಿಗೆ ತೊಡಿಸಲು ಮುತ್ತಿನ ಸರಗಳು ಪ್ರತಿವರುಶ ಬೇರೆಯದ್ದೇ ಆಗಿರಬೇಕು. ಮಂಟಪದ ಸುತ್ತು ಮಿಂಚಿನ ಪುಟಾಣಿ ದೀಪಗಳ ಮಾಲೆ ಇವುಗಳು ನಾವು ಸಿಂಗರಿಸಲು ಬಳಸುವ ಪ್ರಮುಕ ವಸ್ತುಗಳು. ಗೆಳೆಯರ,ನೆರೆಹೊರೆ ಮನೆಯಲ್ಲಿ ಗಣಪನ ಸಿಂಗಾರ ಹೇಗೆ ಮಾಡಲಾಗಿದೆ ಅದರೊಂದಿಗೆ ನಮ್ಮ ಗಣಪನ ಸಿಂಗಾರದ ಪಯ್ಪೋಟಿಗಳು ನಡೆದ್ದದ್ದುಂಟು.ಬೆಳೆದು ದೊಡ್ಡವರಾದಂತೆ ಈ ಪಯ್ಪೋಟಿ ಕಡಿಮೆಗೊಂಡರೂ ಗಣಪನ ಹಬ್ಬಕ್ಕೆ ಮಾಡುವ ಸಿಂಗಾರ ಮಾಡುವ ಹುಮ್ಮಸ್ಸು ಎಂದಿನಂತೆಯೇ ಉಳಿದುಕೊಂಡು ಬಂದಿದೆ.

ನಾನು ಚಿಕ್ಕವನಿದ್ದಾಗಿನಿಂದ ಅಪ್ಪನೊಂದಿಗೆ ಹೋಗಿ ಗಣಪನ ಮೂರ‍್ತಿಯನ್ನು ಮನೆಗೆ ತರುತ್ತಿದ್ದೆವು. ಜಳಕ ಮಾಡಿ ಹೊಸ ಬಟ್ಟೆ ಉಟ್ಟು ಹಣೆಗೆ ಕುಂಕುಮ ಹಚ್ಚಿಕೊಂಡು ಹೋಗುವುದು ಮೊದಲಿನಿಂದಲೂ ನಡೆದು ಬಂದ ಸಂಪ್ರದಾಯ. ಅಪ್ಪ ಗಣಪನ ಮೂರ‍್ತಿಯನ್ನು ಕಯ್ಯಲ್ಲಿ ಹಿಡಿದುಕೊಂಡಿದ್ದರೆ ನಾನು ಗಣಪನಿಗೆ ಜಯ್ಕಾರ ಹಾಕುತ್ತ,ಪಟಾಕಿ ಸಿಡಿಸುತ್ತ ಮನೆಗೆ ಬರುತ್ತಿದ್ದೆ.ಗಣಪನ ಹಬ್ಬವೆಂದರೆ ಪಟಾಕಿಯ ಸಿಡಿಸುವ ವಿಶೇಶ ಹುಚ್ಚು ನನಗೆ. ನೆರೆಮನೆಯ ಹುಡುಗರು ಸಿಡಿಸುವ ಪಟಾಕಿಗಿಂತ ನನ್ನದೇ ಹೆಚ್ಚಿರಬೇಕು,ಪಟಾಕಿಯ ಸದ್ದಿಗೆ ಓಣಿಯ ಹುಡುಗರೆಲ್ಲ ನಮ್ಮ ಮನೆಯತ್ತ ತಿರುಗಿನೋಡಬೇಕು ಎಂಬ ಹುಚ್ಚುಗಳು ಇದೀಗ ನೆನಪಿಸಿಕೊಂಡರೆ ನಾವು ಮನೆ ಮಂದಿಯೆಲ್ಲ ನಗೆಗಡಲಲ್ಲಿ ತೇಲುವಂತೆ ಮಾಡುತ್ತದೆ.

ಒಂದೆಡೆ ಸಾಮಾಜಿಕ ಕಳಕಳಿ ಮತ್ತೊಂದೆಡೆ ದುಂದುವೆಚ್ಚ ತಡೆಯಲು ಇದೀಗ ಹಬ್ಬ ಪಟಾಕಿ ಹೊಡೆಯುವುದನ್ನು ಕಳೆದ 3-4 ವರುಶಗಳಿಂದ ನಿಲ್ಲಿಸಿದ್ದೇನೆ. ನಮ್ಮ ಮನೆಯ ಪುರೋಹಿತರು ಬಂದು ಗಣೇಶನ ಪೂಜೆ ಮಾಡಿಸಿ ಹೋಗುತ್ತಾರೆ. ಕಶ್ಟ ಕಳೆಯುವ ಇಶ್ಟದ ದೇವರು ಗಣೇಶನ ಎಡೆಗೆಂದು ಬಗೆಬಗೆಯ ಹಣ್ಣುಗಳು,ಅಮ್ಮ ಮಾಡಿದ ಗಣಪನ ಮುದ್ದಿನ ಸಿಹಿ ತಿಂಡಿ ಮೋದಕ,ಕಡುಬುಗಳು ಅಣಿಗೊಂಡಿರುತ್ತವೆ. ಈ ಪ್ರಸಾದಕ್ಕೆ ಸಂಬಂದಿಸಿದಂತೆ ನಮ್ಮ ಮನೆಯಲ್ಲಿ ಇನ್ನೊಂದು ವಿಶೇಶ ಸಂಪ್ರದಾಯ,ಮೊದಲ ನಾಲ್ಕು ದಿನಗಳವರೆಗೂ ಗಣೇಶನಿಗೆ ಎಡೆ ತೋರಿಸಿದ ಪ್ರಸಾದವನ್ನು ಗಂಡುಮಕ್ಕಳು ತಿನ್ನುವಂತಿಲ್ಲ. ಗಣೇಶನನ್ನು ಕಳಿಸುವ ಕೊನೆಯ ಅಯ್ದನೇಯ ದಿನ ಮಾತ್ರ ಗಂಡುಮಕ್ಕಳಿಗೆ ಗಣೇಶನ ಪ್ರಸಾದ ಸಿಗುತ್ತದೆ.

ನಾನು ಕೆಲಸಕ್ಕೆ ಸೇರಿ ಬೆಂಗಳೂರಿಗೆ ಬಂದಾಗ ಗಣಪನ ಹಬ್ಬಕ್ಕೆ 2-3 ದಿನ ರಜೆ ಪಡೆದುಕೊಂಡು ವಿಜಾಪುರಕ್ಕೆ ತೆರಳುತ್ತಿದ್ದೆ. ನನ್ನ ಬರುವಿಕೆಗೆ ಅಕ್ಕ,ಅಪ್ಪ-ಅಮ್ಮ ಕಾಯುತ್ತಿದ್ದರು. ನನ್ನೊಂದಿಗೆ ಕದಲುಲಿ ಮೂಲಕವೇ ಮಾತುಕತೆ ನಡೆಸಿ ಗಣಪತಿಯ ಮೂರ‍್ತಿಯೊಂದನ್ನು ಆಯ್ಕೆ ಮಾಡಿ ಕಾಯ್ದಿರಿಸಲಾಗಿರುತ್ತಿತ್ತು. ಅಪ್ಪ ಇಲ್ಲವೇ ಅಕ್ಕಂದಿರ ಜೊತೆಗೂಡಿಕೊಂಡು ಗಣಪನನ್ನು ತರುತ್ತಿದ್ದೆ. ಕೆಲಸಕ್ಕೆ ಸೇರಿದಾಗಿನಿಂದ, ನನ್ನ ಕಡೆಯಿಂದ ಗಣಪ ಹಬ್ಬಕ್ಕೆ ವಿಶೇಶ ಮುಂಗಡ ಪತ್ರ (ಬಜೆಟ್) ಸಿದ್ದವಾಗಿರುತ್ತಿತ್ತು. ಅದರಲ್ಲೂ ಗಣಪನನ್ನು ಸಿಂಗರಿಸಲು ಹೂವುಗಳನ್ನು ಬಳಸುವುದೆಂದರೆ ನನಗೆ ಬಹಳವೇ ಇಶ್ಟ.ಬೆಂಗಳೂರಿನಲ್ಲಿ ಸಿಗುವ ಹಲ ಬಗೆಯ ಸೇವಂತಿಗೆ,ಮಲ್ಲಿಗೆ,ಸಂಪಿಗೆ,ಬಣ್ಣ ಬಣ್ಣದ ಗುಲಾಬಿ ಹೂವುಗಳನ್ನು ಊರಿಗೆ ಕೊಂಡೊಯ್ದು ಗಣಪನ ಮುಡಿಗೇರಿಸುತ್ತಿದ್ದೆ. ಇದೀಗ ಕಳೆದೆರಡು ವರುಶಗಳಿಂದ ಪುಣೆಯಲ್ಲಿ ಗಣಪನ ಹಬ್ಬ ಆಚರಿಸುತ್ತಿರುವೆ. ಹಬ್ಬದ ವಿದಿವಿದಾನಗಳು ಅದೇ ತೆರನಾಗಿದ್ದರೂ ಪುಣೆಯಲ್ಲಿ ಹಲಬಗೆಯ ಅಂದದ ಹೂವುಗಳು ಸಿಗುವುದಿಲ್ಲವೆಂಬ ಕೊರಗು ನಮಗೆ.

ಇನ್ನೂ ನಮ್ಮ ವಿಜಾಪುರದ ಬೀದಿಗಳಲ್ಲೂ ಗಣಪನನ್ನು ಕೂಡಿಸಿ ಸಂಬ್ರಮದಿಂದ ಹಬ್ಬ ಮಾಡುತ್ತಾರೆ. ಹಲವು ಓಣಿ-ಬೀದಿಗಳಲ್ಲಿ ಸಡಗರ ಕಳೆಕಟ್ಟಿರುತ್ತದೆ.ನಾಮುಂದು ತಾಮುಂದು ಎಂದು ವಿಶೇಶ ಆಕಾರದ ದೊಡ್ಡದಾದ ಗಣಪಗಳು ಬೀದಿಗಳಲ್ಲಿ ಕಾಣಸಿಗುತ್ತವೆ.ಚಿಕ್ಕವನಿದ್ದಾಗಲಂತೂ ಕೆಲವು ಓಣಿಗಳ ಗಣಪನ ಕೂಡಿಸುವ ಸಮಿತಿಯವರ ನಡುವೆ ಬಲವಾದ ಪಯ್ಪೋಟಿ ನೋಡಿರುವೆ. ನಗರದ ಪ್ರಮುಕ ಇಂಡಿ ರಸ್ತೆ,ಸಿದ್ದೇಶ್ವರ ದೇವಸ್ತಾನ,ಜೋರಾಪುರ ಪೇಟೆ,ಗಣಪತಿ ಚವ್ಕ ಸಮಿತಿಗಳಂತೂ ಪ್ರತಿಬಾರಿ ವಿಶೇಶ ವಸ್ತುಗಳಿಂದಾದ ಗಣಪನನ್ನು ತಯಾರಿಸಿ ಮಂದಿಯ ಮನಸೆಳೆಯುತ್ತಿದ್ದರು.

ಅಡಿಕೆಯಿಂದ ಮಾಡಿದ ಗಣಪ,ಇಂಡಿ ರಸ್ತೆಯ ತೆಂಗಿನಕಾಯಿಯಿಂದ ಮಾಡಿದ ಗಣಪತಿಯ ಮೂರ‍್ತಿಗಳು ಇನ್ನೂ ನೆನಪಿನಿಂದ ಮಾಸಿಲ್ಲ. ಆಗ ಬೀದಿ ಬೀದಿ ಅಲೆದು ಪ್ರಸಾದ ತಿಂದು ನಲಿಯುವುದೇ ಒಂದು ಹಬ್ಬ. ದಿನಗಳೆದಂತೆ ಈ ಸಡಗರ ಅಡಗಿದೆ. ಜೋರಾಗಿ ಕರ‍್ಕಶ ಹಾಡು ಹಚ್ಚಿ ಕಿವಿಗಡಚಿಕ್ಕುವಂತೆ ಕುಣಿದು ಕುಪ್ಪಳಿಸುವುದು ಇಂದಿನ ಹಲವು ಗಣಪನ ಸಮಿತಿಗಳಿಗೆ ಹಬ್ಬವಾಗಿದೆ.ಮೊದಲಿನ ಹಬ್ಬದ ಕಳೆಯನ್ನು ಈಗ ನೋಡಲು ಸಿಗುತ್ತಿಲ್ಲ. ಇದು ಬೇಸರದ ಸಂಗತಿ ಕೂಡ.

ಅದೇನೆ ಇರಲಿ ಎಲ್ಲ ಬಕ್ತರ ಆಸೆ ಈಡೇರಿಸಿ ಎಲ್ಲರ ಒಲವಿನ ದೇವ ಗಣಪನೇ ನಿನಗಿದೊ ವಂದನೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.