ನಮ್ಮ ನಡುವೆಯೇ ಇರುವ ಬರಹಗಾರ

– ರತೀಶ ರತ್ನಾಕರ.

Tejaswi (1)ಒಬ್ಬರು ಚೆನ್ನಾಗಿ ಬರೆಯುತ್ತಿದ್ದರೆ ಅವರನ್ನು ಒಳ್ಳೆಯ ಬರಹಗಾರ ಎನ್ನಬಹುದು, ಬೇಸಾಯ ಮಾಡುತ್ತಿದ್ದರೆ ಕ್ರುಶಿಕ, ಚಿತ್ರ ಬಿಡಿಸುತ್ತಿದ್ದರೆ ಚಿತ್ರಕಾರ, ಚಿಂತನೆಗಳನ್ನು ನಡೆಸುತ್ತಿದ್ದರೆ ಚಿಂತಕ. ಹೀಗೆ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚಿನ ವಿಶಯಗಳಲ್ಲಿ ಎತ್ತಿದ ಕೈ ಆಗಿದ್ದರೆ ಆತನನ್ನು ಬಹುಮುಕ ಪ್ರತಿಬೆ ಎಂದು ಕೂಡ ಕರೆಯಬಹುದು. ಆದರೆ, ಒಬ್ಬನೇ ವ್ಯಕ್ತಿ ಒಳ್ಳೆಯ ಬರಹಗಾರ, ಚಿತ್ರಕಾರ, ಸಂಗೀತಗಾರ, ಚಿಂತಕ, ಅರಿಗ, ಸಾಹಸಿ, ಪರಿಸರ ಪ್ರೇಮಿ, ಹೋರಾಟಗಾರ ಮತ್ತು ನೇಸರನ ಅಡಿಯಲ್ಲಿ ಬರುವ ಯಾವ ವಿಶಯದ ಮೇಲೆ ಬೇಕಾದರು ತೂಕವಾದ ಮಾತುಗಳನ್ನಾಡಬಲ್ಲ ಅಳವನ್ನು ಹೊಂದಿರುವವರಿಗೆ ಏನೆಂದು ಕರೆಯಬಹುದು? ಹೌದು, ಅವರನ್ನು ‘ಪೂರ‍್ಣಚಂದ್ರ ತೇಜಸ್ವಿ’ ಎಂದೇ ಕರೆಯಬೇಕು. ಸಿರಿಗನ್ನಡದಲ್ಲಾಗಲಿ, ಇನ್ನಾವುದೇ ನುಡಿಯಲ್ಲಾಗಲಿ ಈ ವ್ಯಕ್ತಿಯನ್ನು ಬಣ್ಣಿಸಲು ಬೇಕಾಗುವ ಒಂದೇ ಪದ ಸಿಗುವುದಿಲ್ಲ ಎಂಬುದು ನನ್ನ ಅನಿಸಿಕೆ.

ತೇಜಸ್ವಿ ಎಂದೊಡನೆ ಅವರು ನಮ್ಮ ನೆರೆಮನೆಯವರೇನೋ ಎಂಬಂತೆ ಅನಿಸುತ್ತದೆ. ಅವರು ಬದುಕಿದ್ದೂ ಹಾಗೆಯೇ, ತೀರಾ ಸಾಮಾನ್ಯ ಊರಿನಲ್ಲಿ, ಸಾಮಾನ್ಯ ಮಂದಿಯ ನಡುವೆ ಬದುಕಿದ ಅಸಾಮಾನ್ಯ ಹುಟ್ಟಳವು ಅವರು. ನನಗೆ ತಿಳಿದ ಮಟ್ಟಿಗೆ ಜಗತ್ತನ್ನಾಗಲಿ, ಪರಿಸರವನ್ನಾಗಲಿ ಅರಿಯಲು ತೇಜಸ್ವಿಯವರು ನಾಡು-ಹೆರನಾಡುಗಳನ್ನು ಹೆಚ್ಚಾಗಿ ಸುತ್ತಲಿಲ್ಲ. ಮಲೆನಾಡಿನ ಮೂಡಿಗೆರೆಯ ಮಗ್ಗುಲಲ್ಲಿ, ಹಸಿರಿನ ತಪ್ಪಲಲ್ಲಿ, ಎಂದಿನ ಮಂದಿಯ ನಡುವೆ ಬದುಕಿ, ಆ ಅನುಬವಗಳನ್ನೇ ತನ್ನ ಚಿಂತನೆಗೆ ಒರೆ ಹಚ್ಚಿ ಅರಿದಾದ ಬರಹಗಳನ್ನು, ಹೊಸ ವಿಚಾರಗಳನ್ನು ನಮ್ಮ ಮುಂದೆ ಇಟ್ಟವರು. ತಮ್ಮ ಅನುಬವಗಳನ್ನು ಬರಹದ ಮೂಲಕ ಇಲ್ಲವೇ ಚಿತ್ರಗಳ ಮೂಲಕ ಸುಂದರ ಕಲೆಯಾಗಿಸುವ ಚಳಕ ತೇಜಸ್ವಿಯರಿಗೆ ಒಲಿದಿತ್ತು.

ಬದುಕು ಮತ್ತು ಬಣ್ಣಗಳನ್ನು ತೋರಿಸಲು ತೇಜಸ್ವಿಯವರು ದೊಡ್ಡ ದೊಡ್ಡ ಪಾತ್ರಗಳನ್ನು ಕಟ್ಟಲಿಲ್ಲ. ಬದಲಾಗಿ ತನ್ನ ಸಾಮಾನ್ಯ ಬದುಕಿನಲ್ಲಿ ಎದುರಾಗುತ್ತಿದ್ದ ವ್ಯಕ್ತಿ ಹಾಗು ವ್ಯಕ್ತಿತ್ವಗಳನ್ನೇ ಪಾತ್ರವಾಗಿಸಿ ಅವರ ಮೂಲಕವೇ ಬದುಕಿನ ಪಾಟಗಳನ್ನು ಹೇಳಿಸಿದ್ದು ಅವರಿಗಿದ್ದ ತಾಕತ್ತು ಮತ್ತು ಜಾಣ್ಮೆ. ಬಿರಿಯಾನಿ ಕರಿಯಪ್ಪ, ಕಾಳಪ್ಪ, ಯಂಗ್ಟ, ಮಂದಣ್ಣ ಹೀಗೆ ಎಲ್ಲವೂ ಸಾಮಾನ್ಯ ಪಾತ್ರಗಳಂತೆ ಕಣ್ಣಿಗೆ ಕಂಡರೂ ಬದುಕಿನ ಬಹುದೊಡ್ಡ ದಿಟಗಳು, ಗುಟ್ಟುಗಳು ಈ ಪಾತ್ರಗಳಿಂದ ಹೊರಬರುತ್ತಿತ್ತು. ಇನ್ನು, ಪರಿಸರದ ಮೇಲಿನ ಇವರ ಕಾಳಜಿ ಹಾಗು ಬಣ್ಣನೆಗೆ ತೇಜಸ್ವಿಗೆ ತೇಜಸ್ವಿಯೇ ಸಾಟಿ. ಮನೆಯ ಮುಂದೆ ಬೆಳೆಸಿದ್ದ ಗುಲಾಬಿ ಗಿಡದ, ಎರೆಡು ಕಾಂಡಗಳ ನಡುವೆ ಹರಡಿಕೊಂಡಿದ್ದ, ಚಿಕ್ಕ ಜೇಡರ ಬಲೆಯಲ್ಲಿಯೂ ಕೂಡ ಒಂದು ಬದುಕಿದೆ ಎಂದು ನೋಡುತ್ತ, ಆ ಬದುಕಿನ ಹಲತನವನ್ನು ಬಿಡಿಸಿಡುತ್ತಿದ್ದರು.

ತೇಜಸ್ವಿಯವರ ಬಹುದೊಡ್ಡ ತಾಕತ್ತು ಎಂದರೆ ಅರಿಮೆ ಎನಿಸುತ್ತದೆ. ಅವರು ಬರೆಯುತ್ತಿದ್ದು ಕತೆಗಳಲ್ಲ, ಕಾದಂಬರಿಗಳಲ್ಲ, ಅರಿಮೆಯ ಪಾಟಗಳಲ್ಲ, ಪ್ರವಾಸಿ ಕತನಗಳಲ್ಲ, ಪರಿಸರದ ಕತೆಗಳೂ ಅಲ್ಲ. ಅವು ಬದುಕಿನ ಪಾಟಗಳಂತೆ, ಅರಿವಿನ ಮೂಟೆಗಳಂತೆ. ಒಂದು ಬರಹವನ್ನು, ಇದು ಅರಿಮೆಯ ಬರಹ, ಇದು ಪ್ರವಾಸಿ ಬರಹ, ಇದು ಕತೆ ಎಂದು ವಿಂಗಡಿಸುವುದು ಅವರಿಗೆ ಹಿಡಿಸುತ್ತಿರಲಿಲ್ಲ ಎನಿಸುತ್ತದೆ. ಅವರ ಕೆಲವು ವಿಮರ‍್ಶೆಗಳಲ್ಲಿ ತಿಳಿಸಿದಂತೆ, ಬರಹಗಳಲ್ಲಿ ಎರಡೇ ಬಗೆ ಒಂದು ಪದ್ಯ ಇನ್ನೊಂದು ಗದ್ಯ. ಹೀಗೆ, ಅರಿಮೆಯ ವಿಶಯಗಳನ್ನು ನಮ್ಮ ಎಂದಿನ ಆಗು ಹೋಗುಗಳಲ್ಲಿ ನಡೆಯುವ ಗಟನೆಗಳ ಮೂಲಕ, ಕತೆಗಳ ರೂಪದಲ್ಲಿ ನಮ್ಮ ಮುಂದೆ ಇಟ್ಟು, ಕನ್ನಡಿಗರಿಗೆ ಅರಿಮೆಯನ್ನು ಆಸಕ್ತಿಕರವಾದ ವಿಶಯವಾಗಿ ಮಾಡಿದ ಹೆಗ್ಗಳಿಕೆ ತೇಜಸ್ವಿಯವರಿಗೆ ಸಲ್ಲಬೇಕು.

ಇನ್ನು ಮೂಡಿಗೆರೆ ಊರಿನಿಂದಲೇ ನಾಡಪರ ಕಾಳಜಿ, ಚಿಂತನೆ, ದೇಶದ ಸ್ವರೂಪದ ಬಗೆಗಿನ ಅನಿಸಿಕೆಗಳು ಹೊರಬರುತ್ತಿದ್ದವು. ಇವು ಯಾವುದಕ್ಕೆ ಹೋಲಿಸಿದರೂ ಕಡಿಮೆಯಿಲ್ಲ ಎಂಬಂತೆ ಹರಿದು ಬರುತ್ತಿತ್ತು. ರೈತ ಸಂಗಟನೆ, ಪರಿಸರ ಚಳುವಳಿ, ಕನ್ನಡಪರ ಚಳುವಳಿಗೂ ಕೈ ಜೋಡಿಸಿದವರು. ಕಂಪ್ಯೂಟರ್ ನ ಬಳಕೆ ಹೆಚ್ಚಿತ್ತಿದ್ದಂತೆ ಜಾಗತೀಕರಣದ ಸವಾಲುಗಳನ್ನು ಎದುರು ನೋಡಿದ ತೇಜಸ್ವಿಯವರು ಅದನ್ನು ಎದುರಿಸಲು ಕನ್ನಡವೂ ಕೂಡ ಕಂಪ್ಯೂಟರ್ ನಲ್ಲಿ ಹೆಚ್ಚು ಹೆಚ್ಚು ಬಳಕೆಯಾಗಬೇಕು ಎಂದು ಕರೆಕೊಟ್ಟವರು. ಇಂದು ಕನ್ನಡಿಗರಿಗೆ ಕನ್ನಡ ಯುನಿಕೋಡ್ ಪಾಂಟ್ ಗಳು ಬಿಟ್ಟಿಯಾಗಿ ದೊರೆಯುವಲ್ಲಿ ತೇಜಸ್ವಿಯವರ ಪರಿಶ್ರಮವೂ ಇದೆ. ಇಂದಿನ ಎಳೆಯ ಬಿಣಿಗೆಯರಿಗರನ್ನು ಕೂರಿಸಿಕೊಂಡು ಕನ್ನಡ ತಂತ್ರಾಂಶಗಳನ್ನು ಹೊರತರುವಲ್ಲಿ ಅವರೂ ಶ್ರಮಿಸಿದ್ದಾರೆ.

ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಹಾಗೆ ಹಲವು ಕಡೆ ತಮ್ಮನ್ನು ತಾವು ತೊಡಗಿಸಿಕೊಂಡವರು ಇವರು. ಬದುಕಿನ ಆಗುಹೋಗುಗಳನ್ನು ತೀರ ಹತ್ತಿರದಿಂದ ಹಾಗು ತೀರಾ ಸಾಮಾನ್ಯ ಮಂದಿಯಲ್ಲಿ ಕಾಣುತ್ತಿದ್ದ ಬಗೆ ಅಚ್ಚರಿ ಹುಟ್ಟಿಸುತ್ತದೆ. ಪ್ರತಿಯೊಂದನ್ನು ಕುತೂಹಲದಿಂದ ಕಂಡು ಅದನ್ನರಿಯಲು ಹಲುಬುವ ಮಗುವಿನಂತಹ ಮನಸ್ಸು ಎಂದೇ ಹೇಳಬಹುದು. ಇವರ ಬರಹದಲ್ಲಿ ಹೆಚ್ಚು ಮಲೆನಾಡಿನ ಬದುಕನ್ನು ಕಂಡಿರುವೆ. ಮಲೆನಾಡಿನಲ್ಲೇ ಹುಟ್ಟಿಬೆಳೆದ ನನಗೆ, ಈ ಬರಹಗಳನ್ನು ಓದುವಾಗ ನನ್ನ ಅಕ್ಕ-ಪಕ್ಕದ ಇಲ್ಲವೇ ಮನೆಯವರೇ ಕಲವು ಪಾತ್ರಾದಾರಿಗಳೇನೋ ಎನಿಸುತ್ತದೆ. ಕೆಲವೊಮ್ಮೆ, ಆ ಪಾತ್ರಗಳ ನಡುವೆ ನಾನೂ ಓಡಾಡಿಕೊಂಡಿರುವೆ ಎನ್ನುವಶ್ಟು ಹತ್ತಿರವೆನಿಸುತ್ತದೆ.

ಒಂದು ದೊಡ್ಡ ಮೆಚ್ಚುಗೆ ಎಂದರೆ ಇವರ ಬರಹಗಳಲ್ಲಿ ಬರುವ ಅಚ್ಚರಿ ತರಿಸುವಂತಹ ಸೆಕ್ಯೂಲರ್ ಪರಿಸರ ಹಾಗು ಪಾತ್ರಗಳು. ಅವರ ಬರಹದಲ್ಲಿ ಬೇರೆ ಬೇರೆ ಜಾತಿಗಳ ಮತ್ತು ದರ‍್ಮಗಳ ಪಾತ್ರಗಳು ಬರುವುವು. ಆ ಪಾತ್ರಗಳೆಲ್ಲಾ ಎಂದಿಗೂ ತಮ್ಮ ಜಾತಿ ಇಲ್ಲವೇ ದರ‍್ಮವನ್ನು ಕಡಾಕಂಡಿತವಾಗಿ ಬಿಟ್ಟುಬಿಡುವುದಿಲ್ಲ. ಆದರೆ ಅದನ್ನು ಮೀರಿ, ಜಾತಿ ದರ‍್ಮಗಳ ಬೇರ‍್ಮೆಗಳ ಕುರಿತು ಹೆಚ್ಚು ತಲೆಕೆಡಿಸಿಕೊಳ್ಳದೇ, ಬದುಕುವ ಕಲೆಯನ್ನು ಹೊಂದಿರುತ್ತವೆ. ನಾವು ನೋಡುವ ಕೂಡಣವೂ ಕೂಡ ಹೆಚ್ಚುಕಡಿಮೆ ಹೀಗೆಯೇ, ತಮ್ಮ ಜಾತಿಯನ್ನು ಇಲ್ಲವೇ ದರ‍್ಮವನ್ನು ಯಾವಾಗಲು ನೆನಪಿಸಿಕೊಳ್ಳುತ್ತಾ ಬದುಕು ನಡೆಸುವ ಮಂದಿ ತೀರಾ ಕಡಿಮೆ. ಅವುಗಳನ್ನೆಲ್ಲಾ ಮೀರಿ ನಮ್ಮ ಎಂದಿನ ಬದುಕು ನಡೆಯುತ್ತಿರುತ್ತದೆ. ಇಂತಹ ಬದುಕಿನ ದಿಟಗಳನ್ನು ತೇಜಸ್ವಿಯ ಪಾತ್ರಗಳಲ್ಲಿ ಕಾಣಬಹುದು.

ಮುಗಿಸುವ ಮುನ್ನ, ತೇಜಸ್ವಿಯವರ ಬಗ್ಗೆ ಬರೆಯ ಹೊರಟರೆ ಅದು ಮುಗಿಯದ ಗದ್ಯ ಎನಿಸುತ್ತದೆ. ನನಗೆ ಇಂದಿಗೂ ಕಾಡುವ ನೋವು ಎಂದರೆ, ನಾನು ಹುಟ್ಟಿ ಬೆಳೆದ ಮಲೆನಾಡಿನ ಮನೆಯಿಂದ ಕೇವಲ ಮೂವತ್ತು ಕಿಲೋಮೀಟರ್ ದೂರದಲ್ಲೇ ತೇಜಸ್ವಿ ಎಂಬ ಹಿರಿಯ ಹುರುಪು, ಮಂದಿಯ ನಡುವೆ ಹೊಂದಿಕೊಂಡು ಓಡಾಡುತ್ತಿತ್ತು, ಆದರೆ ಒಮ್ಮೆಯೂ ಆ ಅರಿವಿನ ಮರವನ್ನು ಕಣ್ಣಾರೆ ನೋಡಲಿಲ್ಲವಲ್ಲ ಎಂಬ ನೋವು. ಅದಕ್ಕೆ ಕಾರಣ ಅವರ ಮೈ ಈ ನೆಲದಿಂದ ಮರೆಯಾದ ಮೇಲೆ ನಾನವರ ಬರಹ ಓದಿದ್ದು, ಬೆರಗಾಗಿದ್ದು. ಮತ್ತು ಇಂತಹ ದೊಡ್ಡ ಅರಿವಿನ ಕಡಲೊಂದು ನಮ್ಮ ಊರಿನ ಪಕ್ಕದಲ್ಲೇ ಹರಿಯುತ್ತಿದೆ ಎಂದು ಅರಿವಾಗಿದ್ದು. ನಾ ತೇಜಸ್ವಿಯವರನ್ನು ಕಂಡದ್ದು ಅವರ ಬರಹದಿಂದಲೇ ಹೊರತು ಒಡನಾಟದಿಂದಲ್ಲ. ಆದರೂ ಯಾವ ಒಡನಾಟದ ಗೆಳತನಕ್ಕಿಂತಲೂ ಕಡಿಮೆಯಾಗದಂತೆ ನನಗೆ ಅವರು ಹತ್ತಿರವಾಗಿದ್ದಾರೆ. ಅದೇ ಅವರ ಶಕ್ತಿ. ಎಂದಿಗೂ ನಾನವರ ಹುಟ್ಟುಹಬ್ಬವನ್ನು ನೆನೆಯಬಲ್ಲೆ ಹೊರತು ಅವರು ನಮ್ಮೊಡನೆ ಇಲ್ಲ ಎಂಬುದನ್ನು ನಂಬಲಾರೆ. ತೇಜಸ್ವಿಯೇ ಹೇಳುವಂತೆ “ಬರಹಗಾರ ಸಾಹಿತಿಯಾದರೆ ಅವನು ಸತ್ತಂತೆ”. ತೇಜಸ್ವಿ ಎಂದಿಗೂ ನಮ್ಮ ನಡುವೇಯೇ ಇರುವ ಬರಹಗಾರ.

(ಚಿತ್ರ ಸೆಲೆ: wikipedia)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: